ADVERTISEMENT

ಅಕ್ಷರ ಕಲಿಯದಿದ್ದರೂ ಯಕ್ಷ ಒಲಿದ

ಗುರು ಬನ್ನಂಜೆ ಸಂಜೀವ ಸುವರ್ಣ
Published 23 ಮಾರ್ಚ್ 2013, 19:59 IST
Last Updated 23 ಮಾರ್ಚ್ 2013, 19:59 IST
ಚಿತ್ರ ಸೌಜನ್ಯ: ವಿಜಯನಾಥ ಶೆಣೈ
ಚಿತ್ರ ಸೌಜನ್ಯ: ವಿಜಯನಾಥ ಶೆಣೈ   

ಹಿಂದುಗಡೆ ಚಪ್ಪಟೆಯಾಗಿದ್ದು ರಸ್ತೆಯಲ್ಲಿ ರಾಜ ಮರ್ಜಿಯಲ್ಲಿ ಚಲಿಸುತ್ತಿದ್ದ ಕನಸಿನ ಪೆಟ್ಟಿಗೆಗಳಂತಿದ್ದ ಕಾರುಗಳನ್ನು ಮುಟ್ಟುವುದರಲ್ಲಿಯೇ ಮಜಾ ಅನುಭವಿಸುತ್ತಿದ್ದ ದಿನಗಳಲ್ಲಿ ಅದನ್ನು ಮನಸಾರೆ ಸವರಿ, ಉಜ್ಜಿ ಸಾಫ್‌ಗೊಳಿಸುವ ಅವಕಾಶ ಸಿಕ್ಕಿದರೆ ಯಾರು ಬೇಡವೆನ್ನುತ್ತಾರೆ! ಒಂದೂವರೆ ಕ್ಲಾಸ್ ಕಲಿತು ಶಾಲೆ ಬಿಟ್ಟು ಅಲ್ಲಲ್ಲಿ ಚಿಲ್ಲರೆ ಕೆಲಸ ಮಾಡುತ್ತ ಒಂದಾಣೆ ಸಂಪಾದಿಸುತ್ತಿದ್ದ ನನಗೆ ಈ ಕೆಲಸ ಬಾಲ್ಯದಾಟವೂ ಆಗಿ ಖುಷಿ ಕೊಟ್ಟಿತ್ತು. ಕಾರಿನ ಮುಚ್ಚಿದ ಕನ್ನಡಿಯೊಳಗೆ ಇಣುಕಿ ಅದರೊಳಗಿನ ಮೆತ್ತನೆ ಸೀಟುಗಳನ್ನು ಆಗಾಗ ನೋಡಿ ಆನಂದಿಸುತ್ತ ಅದರ ನುಣುಪಾದ ಮೈ ಮೇಲೆ ಕೈಯಾಡಿಸುತ್ತಲೇ ಎಷ್ಟೋ ದಿನ ರಾತ್ರಿಗಳು ಸರಿದುಹೋಗಿದ್ದವು. ಮೂಡನಿಡಂಬೂರು ದೇವದಾಸಿಯರ ಕೇರಿಯಲ್ಲಿ ಸಂಜೆಯಾಗುತ್ತಿದ್ದಂತೆ ಸಾಲು ಸಾಲು ಕಾರುಗಳು. ಡ್ರೈವರ್‌ಗಳು ಸುಖದ ಕ್ಷಣಗಳನ್ನು ಅರಸಿಕೊಂಡು ಅಲ್ಲಿಗೆ ಹೋಗಿಬರುವಷ್ಟರಲ್ಲಿ ಅವರ ಕಾರುಗಳು ನಾನು ಮತ್ತು ನನ್ನಂಥ ಹುಡುಗರ ಉತ್ಸಾಹದಿಂದಾಗಿ ಫಳಫಳ ಹೊಳೆಯುತ್ತಿದ್ದವು. ಒಂದಾಣೆ ಅಂಗೈಗೆ ಬಿದ್ದಾಗ ನಮ್ಮ ಕಣ್ಣುಗಳೂ ಹೊಳೆಯುತ್ತಿದ್ದವು.

ಅವರಿವರು ಕೊಟ್ಟ ಅಂಗಿ, ಚಡ್ಡಿಗಳು ಏಳೆಂಟು ವರ್ಷದ ನನ್ನ ಪುಟ್ಟ ದೇಹದ ಅಳತೆಗೆ ಹೊಂದುತ್ತಿರಲಿಲ್ಲ. ಅಂಗಿಯ ದಪ್ಪನೆಯ ಕೈಯನ್ನು ಮಡಚಿ ನಾನೇ ಹೊಲಿದು, ಚಡ್ಡಿಯ ಮೇಲೊಂದು ಹಗ್ಗವನ್ನು ಸೊಂಟದ ಸುತ್ತ ಸುತ್ತಿ ಕಟ್ಟಿ ಯಾವ ಕೆಲಸವನ್ನೂ ಮಾಡಬಲ್ಲೆನೆಂಬ ಉತ್ಸಾಹದಲ್ಲಿ ಹೊರಟು ನಿಲ್ಲುತ್ತಿದ್ದೆ. ಆಗಾಗ ಮೊಣಕೈಯಿಂದ ಕೆಳಗೆ ಜಾರಿ ಉಪದ್ರ ಕೊಡುತ್ತಿದ್ದ ಅಂಗಿಯನ್ನು ಬಿಚ್ಚಿ ಒಂದೆಡೆ ಇರಿಸಿ, ಚಡ್ಡಿಯನ್ನು ಮತ್ತೊಮ್ಮೆ ಬಿಗಿದು ಕಟ್ಟಿ, ಬಾಲ್ದಿಯೊಳಗೆ ನೀರು ತುಂಬಿ, ಅದರಲ್ಲಿ ಬಟ್ಟೆಯನ್ನು ಅದ್ದಿ ಯಾರದೋ ಕಾರಿನ ಮೈಯನ್ನು ಉಜ್ಜುತ್ತೇನೆ ಎಂಬಷ್ಟರಲ್ಲಿ...ದೂ...ರದಲ್ಲಿ ಏನೋ ಕೇಳಿಸಿದಂತಾಯಿತು.
ಹೌದು! ಯಕ್ಷಗಾನದ ಚೆಂಡೆ. ಇನ್ನೂ ಎಲ್ಲ ಕತ್ತಲಾಗಿಲ್ಲ. ಯಕ್ಷಗಾನ ಇಷ್ಟು ಹೊತ್ತಿಗೆ ಎಲ್ಲಿ ಶುರುವಾಗುತ್ತದೆ! ಮತ್ತೆ ಕಿವಿಯರಳಿಸಿದೆ. ಚೆಂಡೆಯ ದನಿಯೇ.
ಎಲ್ಲಿಂದ ಹೊಮ್ಮುತಿದೆ ಈ ನಾದ? ಮರುಸಂಜೆಯೇ ಆ ದನಿಯ ಮೂಲವನ್ನು ಹುಡುಕಿಕೊಂಡು ಹೊರಟೇಬಿಟ್ಟೆ.
***
ಹೊರಟದ್ದು ಲಂಡನ್‌ಗೆ ಎಂದು ಗೊತ್ತಿದ್ದರೂ ನನಗೇನೂ ಹಿಂಜರಿಕೆಯಿರಲಿಲ್ಲ. ಈ ಹಿಂದೆಯೂ ಅನೇಕ ಬಾರಿ ಗುರುಗಳಾದ ಕೋಟ ಶಿವರಾಮ ಕಾರಂತರೊಂದಿಗೆ, ಕು.ಶಿ. ಹರಿದಾಸ ಭಟ್ಟರೊಂದಿಗೆ, ಉಡುಪಿ `ಯಕ್ಷರಂಗ'ದ ಕಲಾವಿದರೊಂದಿಗೆ ಅನೇಕ ದೇಶಗಳಿಗೆ ಹೋಗಿಬಂದದ್ದಿದೆ. ಆದರೆ, ಈ ಸಲ ಹೊರಟಿರುವುದು ನಾನೊಬ್ಬನೇ. ಒಂಟಿ ಪಯಣಿಗ. ಲಂಡನ್‌ನಲ್ಲಿರುವ ಖ್ಯಾತ ನೃತ್ಯಕಲಾವಿದೆ ಶಾಂತಾ ಪಿ. ರಾವ್ ಲಂಡನ್‌ನ ಶಾಲೆಗಳಲ್ಲಿ ಯಕ್ಷಗಾನ ಕಲಿಸುವುದಕ್ಕಾಗಿ ಕಲಾವಿದರನ್ನು ಹುಡುಕುತ್ತಿದ್ದಾಗ ಲೇಖಕಿ ವೈದೇಹಿಯವರು ನನ್ನ ಹೆಸರನ್ನು ಸೂಚಿಸಿದ್ದರು. ಲಂಡನ್‌ಗೆ ಹೋಗಿ ಬರುವ ಅವಕಾಶ. ಬೇಡವೆನ್ನುವುದಾದರೂ ಹೇಗೆ? ಆದರೆ ಒಬ್ಬನೇ ಹೋಗಬೇಕಲ್ಲ! ಮುಖ್ಯ ಸಮಸ್ಯೆ ನನಗೆ ಓದು ಬರಹ ಬಾರದು. ಕಲಿತ ಒಂದೂವರೆ ಕ್ಲಾಸಿನ ವಿದ್ಯೆ ಲಂಡನ್ನಿನಲ್ಲಿ ಯಾವ ಉಪಯೋಗಕ್ಕೆ ಬಂದೀತು? ಅಂತೂ ಯಕ್ಷರಂಗದ ನಿರ್ದೇಶಕರಿಂದ ಎರಡು ತಿಂಗಳ ರಜೆ ಪಡೆದು ಲಂಡನ್‌ಗೆ ಪಯಣ ಬೆಳೆಸಲು ಉದ್ಯುಕ್ತನಾದೆ. ವಿದೇಶ ಪ್ರಯಾಣದ ಔಪಚಾರಿಕ ತಯಾರಿಯೆಲ್ಲವೂ ಆಯಿತು.

ನನ್ನ ಹೆಂಡತಿ ವೇದಾ ಬೆಂಗಳೂರು ವಿಮಾನ ನಿಲ್ದಾಣದವರೆಗೂ ನನ್ನನ್ನು ಬೀಳ್ಗೊಡಲು ಬಂದಿದ್ದಳು. ಅವಳತ್ತ ಕೈ ಬೀಸಿ ಏರ್‌ಪೋರ್ಟ್‌ನೊಳಗೆ ಯಾವ ಕ್ಷಣಕ್ಕೆ ಕಾಲಿಟ್ಟೆನೋ ಆ ಘಳಿಗೆಯಲ್ಲಿ ನಾನು ಏಕಾಕಿಯಾಗಿದ್ದೇನೆ ಅಂತ ಅನ್ನಿಸಿ ಸಣ್ಣಗೆ ಕಂಪಿಸಿದೆ. ನನ್ನ ಸುತ್ತಮುತ್ತ ನೂರಾರು ಮಂದಿ ಓಡಾಡುತ್ತಿದ್ದರೂ ನಾನು ಮಾತ್ರ ವಿಚಾರಣಾ ಕೌಂಟರ್‌ನ ಮುಂದೆ ಅನಾಥನಂತೆ ನಿಂತಿದ್ದೆ. `ಯಾವ ದೇಶಕ್ಕೆ ಪಯಣ ಹೊರಟ್ಟಿದ್ದೀರಿ? ಯಾಕೆ? ಯಾವ ಉದ್ದೇಶ? ಅಲ್ಲಿಯೇ ಇರುವವರೋ...?' ಎಂದೆಲ್ಲ ವಿವರಗಳನ್ನು ಬರೆದು ತುಂಬಿಸಲು ವಿಚಾರಣಾ ಕೌಂಟರಿನಲ್ಲಿದ್ದವರು ಒಂದು ಫಾರ್ಮ್ ಕೊಟ್ಟರು. ಅದರ ಮೇಲೊಮ್ಮೆ ಕಣ್ಣಾಡಿಸಿದೆ. ಎಲ್ಲವೂ ಇಂಗ್ಲಿಷ್‌ನಲ್ಲಿವೆ. ನನ್ನ ಮನೆಮಾತು ತುಳು. ಕನ್ನಡದಲ್ಲಿಯೇ ಸರಿಯಾಗಿ ಬರೆಯಲು ಬಾರದು. ಇನ್ನು ಇಂಗ್ಲಿಷ್‌ನ ಗಂಧಗಾಳಿಯಂತೂ ಇಲ್ಲವೇ ಇಲ್ಲ.

``ಏನಿದು?'' ಎಂದು ಏರ್‌ಪೋರ್ಟ್‌ನವರಲ್ಲಿ ವಿಚಾರಿಸಿದೆ.
ಅವರು ಇಂಗ್ಲಿಷ್‌ನಲ್ಲಿಯೇ ಏನೋ ಹೇಳಿದರು.

``ನನಗೆ ತುಳು ಮತ್ತು ಕನ್ನಡ ಮಾತ್ರ ಬರುತ್ತದೆ. ಇಂಗ್ಲಿಷ್ ಬರುವುದಿಲ್ಲ'' ಎಂದೆ ಕನ್ನಡದಲ್ಲಿ.
ಅಷ್ಟರಲ್ಲಿ ಕನ್ನಡ ಗೊತ್ತಿದ್ದವರೊಬ್ಬರು ಬಂದು ಅದರಲ್ಲಿ ಬರೆಯಬೇಕಾದ ವಿವರಗಳನ್ನು ಹೇಳಿದರು. ಆ ಫಾರ್ಮನ್ನು ಹಿಡಿದುಕೊಂಡು ಆಸನದಲ್ಲೊಮ್ಮೆ ಕುಳಿತು ಕಣ್ಣಾಡಿಸಿದೆ. ಕನ್ನಡದಲ್ಲಿ ಬರೆಯುವಂತಿಲ್ಲ. ಇಂಗ್ಲಿಷ್ ಗೊತ್ತಿಲ್ಲ!  ಮರಳಿ ವಿಚಾರಣಾ ಕೌಂಟರ್‌ಗೆ ಹೋಗಿ, ``ನೀವೇ ಬರೆದುಕೊಳ್ಳುತ್ತೀರಾ?'' ಎಂದೆ.

``ಇಲ್ಲ, ನಾವು ಬರೆಯುವಂತಿಲ್ಲ. ನೀವು ಯಾರಾದರೂ ಸಹ ಪ್ರಯಾಣಿಕರ ನೆರವು ಪಡೆದುಕೊಳ್ಳಿ'' ಎಂದರು ವಿಚಾರಣಾ ಕೌಂಟರ್‌ನಲ್ಲಿದ್ದವರು.
ನಾನು ಮೂರ‌್ನಾಲ್ಕು ಮಂದಿಯ ಬಳಿ ಹೋಗಿ ವಿನಂತಿಸಿ ಕನ್ನಡ ಬಲ್ಲವರೊಬ್ಬರನ್ನು ಗುರುತು ಹಿಡಿದು ನನ್ನ ವಿವರಗಳನ್ನು ಬರೆಯಲು ಕೇಳಿಕೊಂಡೆ. ಅವರು ಬರೆದುಕೊಟ್ಟರು. ಛೆ! ಇಂಗ್ಲಿಷ್ ಗೊತ್ತಿಲ್ಲದೆ ನನ್ನ ಸ್ಥಿತಿ ಎಂಥ ಹೀನಾಯವಾಗಿ ಹೋಯಿತು ಎಂದು ಯೋಚಿಸುತ್ತ ಏರ್‌ಪೋರ್ಟ್‌ನ ಮೂಲೆಯಲ್ಲಿ ನಿಂತುಬಿಟ್ಟಿದ್ದೆ. ನನಗರಿವಿಲ್ಲದಂತೆಯೇ ನನ್ನ ಕಣ್ಣು ಮಂಜಾಯಿತು.

ಕನ್ನಡ- ಇಂಗ್ಲಿಷ್‌ಗಳಲ್ಲಿ ವ್ಯವಹರಿಸುವ ಯಕ್ಷಗಾನ ಕಾರ್ಯಶಾಲೆ - ಪ್ರಾತ್ಯಕ್ಷಿಕೆಗಳಲ್ಲಿ ನಾನು ಭಾಗವಹಿಸುತ್ತಿರುವಾಗಲೂ ಇದೇ ಸ್ಥಿತಿಯನ್ನು ಅನುಭವಿಸಿದ್ದೇನೆ. ಕುಣಿದು ತೋರಿಸಬಲ್ಲೆ, ಆದರೆ ಕುಣಿಯುವುದನ್ನು ನುಡಿಗಳಲ್ಲಿ ಪರಿಣಾಮಕಾರಿಯಾಗಿ ವಿವರಿಸಲು ಅಸಮರ್ಥನಾಗುತ್ತಿದ್ದೆ. ಇದು ಇಡೀ ಯಕ್ಷಗಾನ ಕ್ಷೇತ್ರದ ದೊಡ್ಡ ಸಮಸ್ಯೆಯಂತೆ ನನಗೆ ಕಂಡಿದೆ. ಬರೆಯುವ ಹೆಚ್ಚಿನವರಿಗೆ ಕುಣಿಯಲು ಬರುವುದಿಲ್ಲ. ಕುಣಿಯಬಲ್ಲ ಕೆಲವರಿಗೆ ಬರೆಯಲು ತಿಳಿಯದು. ಪ್ರತಿಭಾವಂತ ಯಕ್ಷಗಾನ ಕಲಾವಿದರಿಗೆಲ್ಲ ಸರಿಯಾದ ವಿದ್ಯೆ ಸಿಗುತ್ತಿದ್ದರೆ ಅವರೂ ಕುಣಿದು, ನುಡಿದು, ಬರೆದು ವಿವರಿಸುತ್ತಿದ್ದರಲ್ಲವೆ? ಇನ್ನು ಮುಂದೆ ಕೆಲವರಿಗಾದರೂ ಶಾಲಾವಿದ್ಯೆಯೂ ಕಲಾವಿದ್ಯೆಯೂ ಜೊತೆಜೊತೆಯಾಗಿ ಸಿಗುವಂತಾಗಬೇಕು ಎಂಬ ಕನಸನ್ನು ಕಾಣುತ್ತಿದ್ದೆ...
ಅಷ್ಟರಲ್ಲಿ ಮೈಕ್‌ನಲ್ಲಿ ಲಂಡನ್‌ಗೆ ಹೊರಡುವ ವಿಮಾನ ಸಿದ್ಧವಾಗಿದೆ ಎಂದು ಕೂಗಿ ಹೇಳಿದರು.
ನಾನು ಉಳಿದ ಪ್ರಯಾಣಿಕರೊಂದಿಗೆ ವಿಮಾನದ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತತೊಡಗಿದೆ.
***
ಹತ್ತುವ ತೆಂಗಿನಮರ ಎಷ್ಟು ನೀಳವಾಗಿದ್ದರೂ ನನಗೆ ಭಯವಿರಲಿಲ್ಲ. ತೆಂಗಿನ ಮರ ಏರುವ ವಿದ್ಯೆ ಅಪ್ಪನಿಂದ ಬಂದದ್ದು. ಅವರಾದರೋ ದಪ್ಪ ಮೀಸೆಯ ಉದ್ದನೆಯ ಜುಟ್ಟಿನ ಉದ್ದಾಳಿನ ಮನುಷ್ಯ. ತೋಟದ ಮನೆಗಳಿಗೆ ಹೋಗಿ ತೆಂಗಿನಮರ ಹತ್ತಿ ಕಾಯಿಗಳನ್ನು ಕೊಯ್ದು ಕೊಡುವುದು ಅವರ ಮುಖ್ಯ ವೃತ್ತಿ. ನಾನು ಅವರು ಮರದ ಮೇಲಿನಿಂದ ಎಸೆಯುವ ಕಾಯಿಗಳನ್ನು ಒಟ್ಟೈಸಿ ನೆರವಾಗುತ್ತಿದ್ದೆ. ಏತದಲ್ಲಿ ನೀರು ಮೊಗೆದು ಕೊಡುವ, ಮಣ್ಣಿನ ಗೋಡೆ ಕಟ್ಟುವ ಕೌಶಲವೂ ಅವರಿಗೆ ಇತ್ತು. ನಾನು ಗೋಡೆ ಕಟ್ಟುವ ಕೆಲಸದಲ್ಲಿ ಮಣ್ಣನ್ನು ಹದಗೊಳಿಸಿ, ಸಿದ್ಧಗೊಳಿಸುವ ಹೆಲ್ಪರ್ ಆಗುತ್ತಿದ್ದೆ. ನನ್ನ ಏಳು ಅಥವಾ ಎಂಟನೆಯ ವಯಸ್ಸಿನಲ್ಲಿ ಅಪ್ಪ ತೀರಿಕೊಂಡರು.

ಉಡುಪಿ ಬಳಿಯ ಮೂಡನಿಡಂಬೂರಿನಲ್ಲಿ ಡಿಕ್ಲರೇಶನ್‌ನ ಮೂಲಕ ಸಿಕ್ಕಿದ ಹದಿನಾರು ಸೆಂಟ್ಸ್ ಜಾಗದಲ್ಲಿ ತೆಂಗಿನ ಮಡಲು ಹೊದಿಸಿದ ಗುಡಿಸಲಿನ ಬಾಗಿಲಲ್ಲಿ ನಿಂತುಕೊಂಡು ಅಮ್ಮ ಹೇಳಿದಳು, `ಶಾಲೆ ಸಾಕು ಮಗಾ, ಪುಸ್ತಕ ಅಂಗಿ ಚಡ್ಡಿಗೆ ದುಡ್ಡಿಲ್ಲ'. ಅಮ್ಮ ಹೊಲದ ಕೆಲಸಗಳಿಗೆ ಹೋಗಿ, ಅಲ್ಲಿ ಸಿಕ್ಕಿದ ಪಗಾರದಿಂದ ಹೊಟ್ಟೆ ಹೊರೆಯುವುದೇ ಕಷ್ಟವಾಗಿರುವಾಗ ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೂ ಹೇಗೆ? 

ಒಂದನೇ ಕ್ಲಾಸ್ ಪಾಸಾಗಿ ಎರಡನೇ ಕ್ಲಾಸ್‌ನಲ್ಲಿ ಇದ್ದದ್ದು ಹೆಚ್ಚು ಕಡಿಮೆ ಆರು ತಿಂಗಳು ಮಾತ್ರ. ಶಾಲೆ ಬಿಡುವಾಗ ಇನ್ನು ಓದುವ, ಬರೆಯುವ ಕಷ್ಟವಿಲ್ಲವೆಂದು ಸಂತೋಷವೇ ಆಗಿತ್ತು. ಅಕ್ಕ ಬೀಡಿ ಕಟ್ಟುತ್ತಿದ್ದಳು. ಮನೆಯಲ್ಲಿಯೇ ಕುಳಿತು ಬೀಡಿಗೆ ನೂಲು ಹಾಕುವ ಕೆಲಸ ಯಾಕೋ ಪ್ರಿಯವೆನ್ನಿಸಲಿಲ್ಲ. ಅವರಿವರ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಒಂದಾಣೆ ಎರಡಾಣೆ ಸಂಪಾದಿಸಿದರೆ ಅದೇ ದೊಡ್ಡ ಸಂಪತ್ತೆನ್ನಿಸುತ್ತಿತ್ತು. ಈ ಮಧ್ಯೆ ಉಡುಪಿಯ ಟೈಲರ್ ಒಬ್ಬರ ಬಳಿ ಸೇರಿಕೊಂಡೆ. ಅಂಗಿಗೆ ಗುಬ್ಬಿ (ಗುಂಡಿ) ಹಾಕುವ, ಅಂಚು ಹೊಲಿಯುವ ಕೆಲಸಕ್ಕೆ ವಾರಕ್ಕೆ ಎಂಟಾಣೆ ಕೊಡುತ್ತಿದ್ದರು. ಇಬ್ಬರು ಅಣ್ಣಂದಿರಲ್ಲಿ ಒಬ್ಬನಿಗೆ ಕಾರು ಡ್ರೈವಿಂಗ್ ಗೊತ್ತಿತ್ತು. ಅವನೇ ಕಾರು ತೊಳೆಯುವ ಕ್ಲೀನರ್ ಕೆಲಸಕ್ಕೆ ನನ್ನನ್ನು ಕರೆದೊಯ್ದೊಗ ಅದೊಂದು ಹೊಸ ಅವಕಾಶವಾಗಿ ತೆರೆದುಕೊಂಡಿತು.

ಕಾರುಗಳನ್ನು ತೊಳೆಯುತ್ತ, ಬಳಿಕ ದೇವದಾಸಿಯರ ಕೇರಿಗೆ ಹೋಗಿ ಅಲ್ಲಿಗೆ ಬರುವ ಅತಿಥಿಗಳು ತಿಂದು ಅಳಿದುಳಿದ ತಿಂಡಿಗಳನ್ನು ಸೇರಿಸಿ ನಾವು ಹುಡುಗರೂ ತಿನ್ನುತ್ತಿದ್ದೆವು. ಅಲ್ಲೊಬ್ಬರು ಮಹಿಳೆ ನನ್ನ ಮೇಲೆ ವಿಶೇಷ ಪ್ರೀತಿಯಿಟ್ಟು ಮಗನಂತೆ ನೋಡಿಕೊಂಡರು. (ನನಗೆ ಸಿಕ್ಕಿದ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬಂದ ಮೊತ್ತದ ಒಂದಂಶವನ್ನು ನಾನು ಅವರಿಗೆ ಕೊಟ್ಟು ಋಣವನ್ನು ತೀರಿಸಲು ಪ್ರಯತ್ನಿಸಿದೆ. ಆದರೆ, ಅದು ತೀರುವ ಋಣವಲ್ಲವೆಂದು ನನಗೆ ಯಾವತ್ತೂ ತಿಳಿದಿದೆ).

ನೆನಪು ಸರಿಯಾಗಿದ್ದರೆ ಇಸವಿ 1969.
ಹಾಗೊಮ್ಮೆ ಕಾರು ತೊಳೆಯುತ್ತಿರುವಾಗಲೇ ಚೆಂಡೆಯ ದನಿ ನನ್ನ ಕಿವಿಗೆ ಬಿದ್ದಿದ್ದು.
ಅದೊಂದು ದೊಡ್ಡವರ ಪೈಕಿಯ ಮನೆ. ಕೆಲವಾರು ಮಂದಿ ಅಲ್ಲಿ ಹೆಜ್ಜೆ ಹಾಕುತ್ತಿದ್ದರು. ಅಲ್ಲಿಯೇ ನಿಂತ ದೊಡ್ಡ ಮನುಷ್ಯರ ಮುಂದೆ ಧೈರ್ಯದಿಂದ ಕೇಳಿದೆ, `ನನಗೂ ಯಕ್ಷಗಾನ ಕಲಿಸಿಕೊಡುವಿರಾ?'
`ಖಂಡಿತ, ನಾಳೆಯಿಂದಲೇ'.

ನನ್ನ ಹಿನ್ನೆಲೆ ಏನನ್ನೂ ಕೇಳದೆ ಅವರು ಒಪ್ಪಿಗೆ ನೀಡಿದ್ದು ನನಗೆ ಅಚ್ಚರಿ ಮೂಡಿಸಿತ್ತು.
ಅವರು ಭಾಗವತ ಗುಂಡಿಬೈಲು ನಾರಾಯಣ ಶೆಟ್ಟರು. ನನ್ನ ಮೊದಲ ಗುರುಗಳು. ಆ ಕಾಲದ ಪ್ರಸಿದ್ಧ ಭಾಗವತರು. ಆಸುಪಾಸಿನ ಹುಡುಗರನ್ನು ಸೇರಿಸಿ ಯಕ್ಷಗಾನ ಹೇಳಿಕೊಡುತ್ತಿದ್ದರು. ಔದಾರ್ಯದಿಂದ ನನ್ನನ್ನು ಕೂಡ ಹುಡುಗರ ಸಾಲಿನಲ್ಲಿ ಸೇರಿಸಿಕೊಂಡರು.

ನಾನು ನಿಜವಾಗಿ ಬಯಲಾಟವನ್ನು ನೋಡಿದ್ದು ಸಂಚಾರಿ ಹೊಟೇಲು - ಅಂಗಡಿಗಳಿಗೆ ಸಹಾಯಕನಾಗಿ ಹೋಗುತ್ತಿದ್ದಾಗ. ಬಯಲಾಟ ನಡೆಯುವ ಸ್ಥಳಗಳಲ್ಲಿ ಕಡ್ಲೆ, ಬೀಡ, ಬೀಡಿ ಅಂಗಡಿಗಳಲ್ಲಿ ದುಡಿಯುತ್ತ ಬಿಡುವಾದಾಗ ರಂಗಸ್ಥಳದ ಕಡೆಗೆ ದೃಷ್ಟಿ ಹರಿಸುತ್ತಿದ್ದೆ. ಮಂದರ್ತಿ, ಮಾರಣಕಟ್ಟೆಗಳಂಥ ಮೇಳಗಳು ಮೆರೆಯುತ್ತಿದ್ದ ದಿನಗಳವು. ಆ ಮೇಳಗಳ ಕಲಾವಿದರಂತೆ ನಾನೂ ರಂಗಸ್ಥಳದಲ್ಲಿ ಕುಣಿಯಬೇಕೆಂಬ ಆಸೆಯೇನೋ ಇತ್ತು. ಆದರೆ, ಹಾಗೆ ಕನಸು ಕಾಣುವ ದಿನಗಳಲ್ಲ ಅವು.

ಆದರೆ, ಗುಂಡಿಬೈಲು ನಾರಾಯಣ ಶೆಟ್ಟರ ಮನೆಯಂಗಳ ನನ್ನೆದುರು ಭಾಗ್ಯದ ಬಾಗಿಲಾಗಿ ತೆರೆದುಕೊಂಡಿತು. ಅವರ ಮನೆಯಲ್ಲಿಯೇ ಹೊಲಗದ್ದೆಗಳಲ್ಲಿ ದುಡಿದು, ಸಂಜೆಯ ವೇಳೆಗೆ ಬಾವಿಕಟ್ಟೆಯ ಬಳಿ ಹೆಜ್ಜೆ ಹಾಕುವುದು. ನವರಾತ್ರಿಯ ವೇಳೆಗೆ ಪ್ರಸಿದ್ಧ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಸೇರೆಗಾರರನ್ನು ಕರೆಸಿ ನಾಟ್ಯಾಭ್ಯಾಸ ಮಾಡಿಸುತ್ತಿದ್ದರು. ಮಾರ್ಗೋಳಿಯವರು ನನ್ನ ಎರಡನೇ ಗುರುಗಳು. ಅವರು ಗುಂಡಿಬೈಲು ನಾರಾಯಣ ಶೆಟ್ಟರ ಮನೆಯ ಮಾಳಿಗೆಯಲ್ಲಿಯೇ ವಿರಮಿಸುತ್ತಿದ್ದರು. ಅವರದು ಅಪ್ಪಟ ಯಕ್ಷಗಾನದ ಶೈಲಿಯ ಸ್ತ್ರೀವೇಷ. ಅಪೂರ್ವವಾದ ಕಸೆ ಸ್ತ್ರೀವೇಷದ ಕೌಶಲಿ. ದೇವದಾಸಿ ನಾಟ್ಯವಿಲಾಸದ ಸೊಬಗು ಅವರ ಹೆಜ್ಜೆಗಳಲ್ಲಿ ಎದ್ದು ತೋರುತ್ತಿತ್ತು. ಜಾರುಗುಪ್ಪೆ, ಸಲಾಂ ಹೆಜ್ಜೆಗಳು ಮಾತ್ರವಲ್ಲದೆ, ಸ್ತ್ರೀವೇಷದ ಲಾಲಿತ್ಯಪೂರ್ಣ ಹೆಜ್ಜೆಗಾರಿಕೆಯ ಸೂಕ್ಷ್ಮವನ್ನು ಅವರಿಂದ ಕಲಿತುಕೊಂಡೆ.

ಮೇಳದ ತಿರುಗಾಟ ಆರಂಭವಾದಾಗ ಮಾರ್ಗೋಳಿಯವರು ತೆರಳಿದರು. ಆಗ ಬಡಗುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರ ಸಹೋದರ ಸಕ್ಕಟ್ಟು ಸೀತಾರಾಮ ಮಾಸ್ತರರು ಪಾಠ ಹೇಳಿಕೊಡಲಾರಂಭಿಸಿದರು. ಅವರು ನನ್ನ ಮೂರನೆಯ ಗುರುಗಳು. ಅವರು ಬಂದದ್ದು ಗುಂಡಿಬೈಲು ನಾರಾಯಣ ಶೆಟ್ಟರಿಗೆ ಮದ್ದಲೆವಾದಕರಾಗಿ. ಆದರೆ, ಆಮೇಲೆ ಅವರಲ್ಲಿ ಯಕ್ಷಗಾನದ ಕುರಿತ ಅಪಾರ ಜ್ಞಾನವಿದೆಯೆಂದು ತಿಳಿಯಿತು. ಪೂರ್ವರಂಗದ ಪದ್ಯಗಳು ಅವರಿಗೆ ಬಾಯಿಪಾಠವಿದ್ದವು. ಎಲ್ಲ ವಿಭಾಗಗಳಲ್ಲೂ ವಿಪುಲ ಅನುಭವವಿದ್ದವರಾಗಿದ್ದರು.

ಮನೆಯಂಗಳದಲ್ಲಿ ಅನೌಪಚಾರಿಕ ರೀತಿಯಲ್ಲಿ ತರಬೇತಿ ಮುಂದುವರಿದಿತ್ತು. ಒಮ್ಮೆ ಭಾಗವತ ಗುಂಡಿಬೈಲು ನಾರಾಯಣ ಶೆಟ್ಟರು ನನ್ನನ್ನು ಒಂದು ತಾಳಮದ್ದಲೆಯಲ್ಲಿ ಅರ್ಥ ಮಾತನಾಡುವಂತೆ ಸೂಚಿಸಿದರು. ನಾನಾದರೋ ಏನು ಮಾತನಾಡಬಲ್ಲೆ! ಓದಿದ ಅನುಭವವೇ ಇಲ್ಲ. ಅವರೇ ಅರ್ಥವನ್ನು ಬರೆದುಕೊಟ್ಟರು. ಪ್ರಸಂಗ : `ಭೀಷ್ಮ ವಿಜಯ'. ನನ್ನದು ಅಜಪುಚ್ಛ, ಗಜಪುಚ್ಛರ ಪಾತ್ರ. ಅರ್ಥ ಬರೆದ ಚೀಟಿಯನ್ನು ಜೇಬಿನಲ್ಲಿ ಇಟ್ಟುಕೊಂಡೆ.
ಮನೆಗೆ ಬಂದ ಮೇಲೆ ತೆರೆದು ಒಮ್ಮೆ ಕಣ್ಣಾಡಿಸಿದೆ.
ಅಕ್ಷರಗಳೇನೋ ಕಾಣಿಸುತ್ತಿದ್ದವು. ಆದರೆ, ಓದಲು ಬರುತ್ತಿರಲಿಲ್ಲ.

***
`ನನಗೆ ಓದಲು ಬರುವುದಿಲ್ಲ' ಎಂದು ಹೇಳಲೇಬೇಕಾಯಿತು. ಲಂಡನ್ ನಗರದಲ್ಲಿ ಶಾಲೆಯಿಂದ ಶಾಲೆಗೆ ಸುತ್ತುವುದೇನು ಸುಲಭವೇ. ನನ್ನಂತೆಯೇ ಭರತನಾಟ್ಯ ತರಬೇತಿಗೆಂದು ಅಲ್ಲಿಗೆ ಆಗಮಿಸಿದ ನವ್ಯಾ- ರಮ್ಯಾ ಸಹೋದರಿಯರು ನನ್ನನ್ನು ಕೀಳಾಗಿ ಕಾಣದೆ, ರೈಲನ್ನು ಗುರುತಿಸುವುದಕ್ಕಾಗಿ ಔಉಉಈಖ ಎಂದು ದೊಡ್ಡ ಅಕ್ಷರಗಳಲ್ಲಿ ನನ್ನ ಕೈಗೆ ಕೊಟ್ಟರು. ಲೀಡ್ಸ್ ಎಂಬ ಊರಿಗೆ ಹೋಗಿ ಅಲ್ಲಿನ ಶಾಲೆಗಳ ಮಕ್ಕಳಿಗೆ ನಾನು ಯಕ್ಷಗಾನ ಕಲಿಸಬೇಕೆಂದು ಒಪ್ಪಂದವಾಗಿತ್ತು. ಲಂಡನ್ನಿನ ರೈಲ್ವೆ ನಿಲ್ದಾಣದಲ್ಲಿ ನಾನು ಏಕಾಂಗಿಯಾಗಿ ನಿಂತುಕೊಂಡು ರೈಲುಗಳ ಹಣೆಯಲ್ಲಿ ಬರೆದಿರುವುದನ್ನೊಮ್ಮೆ ನನ್ನ ಕೈಯಲ್ಲಿರುವ ಚೀಟಿಯಲ್ಲಿ ಬರೆದ ಇಂಗ್ಲಿಷ್ ಅಕ್ಷರಗಳನ್ನೊಮ್ಮೆ ತಾಳೆ ನೋಡುತ್ತಿದ್ದೆ. ಒಂದು ರೈಲು ಬಂದೇ ಬಂದಿತು. ಅದರ ಹಣೆಯಲ್ಲಿ ನನ್ನ ಕೈಯಲ್ಲಿರುವ ಚೀಟಿಯಲ್ಲಿರುವಂತೆಯೇ ಬರೆದಿತ್ತು. ಹತ್ತಿದೆ ಆ ರೈಲನ್ನು.
ಬದುಕು ಕೂಡ ರೈಲಿನ ಹಾಗೆಯೇ ಅಂತ ನನಗೆ ಅನೇಕ ಬಾರಿ ಅನ್ನಿಸಿದ್ದಿದೆ. 

ಬಣ್ಣದ ವೇಷದ `ಗುರು'

ಯಕ್ಷಗಾನ ವಲಯದಲ್ಲಿ `ಗುರು' ಎಂಬ ಪೂರ್ವ ಪ್ರತ್ಯಯದೊಂದಿಗೇ ಗುರುತಿಸಲಾಗುವ ಬನ್ನಂಜೆ ಸಂಜೀವ ಸುವರ್ಣ ಅವರು ಬಡಗುತಿಟ್ಟು ಪ್ರಕಾರದ ಬಗ್ಗೆ ಗುರುತರ ಅನುಭವವನ್ನು ಹೊಂದಿರುವವರು. ಬಡಗುತಿಟ್ಟಿನೊಳಗಿರುವ ಹಾರಾಡಿ - ಮಟಪಾಡಿ ಶೈಲಿಗಳ ಅನನ್ಯತೆ, ಬಡಾಬಡಗಿನ ವಿಶಿಷ್ಟ ಲಾಸ್ಯ, ದೇವದಾಸಿ ಪರಂಪರೆಯ ಪ್ರಭಾವಕ್ಕೆ ಒಳಗಾಗಿರುವ ಯಕ್ಷಗಾನ ಸ್ತ್ರೀವೇಷದ ಲಾಲಿತ್ಯ, ಪಾರಂಪರಿಕ ಶೈಲಿಯ ಒಡ್ಡೋಲಗಗಳು, ಯುದ್ಧ ನೃತ್ಯಗಳು- ಇತ್ಯಾದಿಗಳನ್ನು `ಕುಣಿದು' ತೋರಿಸುವ ಸಾಮರ್ಥ್ಯವನ್ನು ಹೊಂದಿರುವ ಸಂಜೀವ ಸುವರ್ಣರು ತಾನು ಈ ಅನುಭವಗಳನ್ನು ಇಪ್ಪತ್ತೊಂದು ಮಂದಿ ಗುರುಗಳಿಂದ ಪಡೆದುಕೊಂಡೆ ಎಂದು ವಿನಯದಿಂದ ಹೇಳುತ್ತಾರೆ.

ADVERTISEMENT

ಬಾಲ್ಯದಲ್ಲಿ ಬಡತನವನ್ನು ಸಂಭ್ರಮಿಸುತ್ತಲೇ, ಸಾಮಾಜಿಕ ಕೀಳರಿಮೆಯನ್ನು ಮೀರಿ ನಿಂತು, ಹದಿನೆಂಟು ವರ್ಷಗಳ ಕಾಲ ಕೋಟ ಶಿವರಾಮ ಕಾರಂತರಿಗೆ ನಿಕಟವಾಗಿ, ಅವರ ಯಕ್ಷಗಾನ ಪ್ರಯೋಗದ ತಂಡದಲ್ಲಿದ್ದು, ಕೆಲವು ಕಾಲ ಬಿ.ವಿ. ಕಾರಂತರೊಂದಿಗೆ ಒಡನಾಡಿ, ಮಾಯಾರಾವ್ ಅವರೊಂದಿಗೆ ಕೊರಿಯೋಗ್ರಫಿ ಕಲಿತು, ಎರಡನೇ ತರಗತಿಯಷ್ಟೂ ಶಾಲಾ ಶಿಕ್ಷಣ ಪಡೆಯದಿದ್ದರೂ ಮೂವತ್ತಕ್ಕಿಂತಲೂ ಅಧಿಕ ದೇಶಗಳಲ್ಲಿ ಓಡಾಡಿ... ಹೀಗೆ ಸಂಜೀವ ಸುವರ್ಣರ ಬದುಕೊಂದು ಸೋಜಿಗದ ಕಥನ.

ಸಾಂಪ್ರದಾಯಿಕ ಯಕ್ಷಗಾನದ ಬಗ್ಗೆ ಖಚಿತ ಜ್ಞಾನ ಹೊಂದಿರುತ್ತಲೇ ಯಕ್ಷಗಾನದ ಹಳೆಯ ಸೊಬಗನ್ನು ಉಳಿಸಿಕೊಳ್ಳುವ ಬಗ್ಗೆ, ಹಾಗೆ ಉಳಿಸಿಕೊಳ್ಳುವಾಗಲೇ ಸಮಕಾಲೀನ ಧೋರಣೆಯಲ್ಲಿ ಕಲೆಯನ್ನು ಮರು ರೂಪಿಸುವ ಬಗ್ಗೆ ಮತ್ತು ಅದನ್ನು ಮುಕ್ತರಂಗಭೂಮಿ ಆಗಿಸುವ ಬಗ್ಗೆ ಈಗಲೂ ಕ್ರಿಯಾಶೀಲರಾಗಿದ್ದಾರೆ. ತನ್ನೊಳಗಿನ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಕಾರಣವಾದ ಉಡುಪಿಯ `ಯಕ್ಷಗಾನ ಕೇಂದ್ರ'ದಲ್ಲಿ ಪ್ರಸ್ತುತ ಪ್ರಾಚಾರ್ಯರಾಗಿರುವ ಬನ್ನಂಜೆ ಸಂಜೀವ ಸುವರ್ಣರು ಇನ್ನೇನು, ಒಂದು ವರ್ಷ ಕಳೆದರೆ, 60ರ ಹೊಸ್ತಿಲಲ್ಲಿರುತ್ತಾರೆ.
-ನಿರೂಪಣೆ: ಹರಿಣಿ.
(ಮುಂದುವರೆಯುತ್ತದೆ)......        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.