ADVERTISEMENT

ನಿವೇಶನ: ಮಧ್ಯವರ್ತಿ ಮಾರಾಟ ತಂತ್ರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST
ನಿವೇಶನ: ಮಧ್ಯವರ್ತಿ ಮಾರಾಟ ತಂತ್ರ
ನಿವೇಶನ: ಮಧ್ಯವರ್ತಿ ಮಾರಾಟ ತಂತ್ರ   

ಈ ಭಾನುವಾರ ಬಂದ್ಬಿಡಿ. ಸೈಟ್ ನೋಡುವಿರಂತೆ. ಆ ಪಾರ್ಟಿಗೂ ಬರೋಕೆ ಹೇಳ್ತೀನಿ' ಅಂತ ದಲ್ಲಾಳಿ ಧರ್ಮಣ್ಣ ಫೋನ್ ಮಾಡಿದ್ರು.

ಅವರ ಕರೆಯಂತೆ ಹೇಳಿದ ಸ್ಥಳಕ್ಕೆ ಅಪ್ಪನೊಂದಿಗೆ ಹೋದೆ.  ಧರ್ಮಣ್ಣ, ಖಾಲಿ ಇದ್ದ ಒಂದೆರಡು ನಿವೇಶನ ತೋರಿಸಿದರು.

`ಇದು 30x40 ಅಳತೆ ಉದ್ದಗಲ ನಿವೇಶನ. ಚದರಡಿಗೆ ರೂ2300. ಆ ಕಡೆಯದು ರಸ್ತೆ ಬದಿ ಸೈಟು, ಇದರಷ್ಟೇ ಅಳತೆ. ಆದರೆ ಚದರಡಿಗೆ ರೂ100 ಜಾಸ್ತಿ. ಆ ಕಾರ್ನರ್ ಸೈಟ್ ಇದೆಯಲ್ಲ ಅದು ಐದಾರು ಅಡಿ ಹೆಚ್ಚಿದೆ. ಚದರಡಿಗೆ ರೂ2750 ಆಗುತ್ತೆ. ಈಗಾಗಲೇ ನಾಲ್ಕೈದು ಜನ ನೋಡಿ ಹೋಗಿದ್ದಾರೆ. ಅವರೆಲ್ಲ ಬೇಡಾ ಅಂತ ಬಿಟ್ಟರೆ ನೀವು ನೋಡಬಹುದು' ಎಂದು ದಿನಸಿ ಪಟ್ಟಿ ಓದುವ ಹಾಗೆ ಸೈಟ್‌ಗಳ ಬೆಲೆ, ಅಳತೆಯನ್ನು ಪಟಪಟಾ ಅಂತ ಹೇಳಿದರು.

`ಅದು ಸರಿ ಧರ್ಮಣ್ಣ, ಸೈಟ್ ಮಾಲೀಕರೆಲ್ಲಿ?' ಎಂಬ ಪ್ರಶ್ನೆಗೆ, `ನಿಮಗ್ಯಾಕೆ ಸರ್. ಕೂತು ಮಾತಾಡಿ ಕಡಿಮೆ ಮಾಡಿಸೋಣ. ಮೊದಲು ನಿಮಗೆ ಇಷ್ಟವಾಗುವ ಸೈಟ್ ಯಾವುದು ಅಂತ ಫೈನಲೈಸ್ ಮಾಡಿ. ಆ ಮೇಲೆ ಅವರನ್ನು ಕರೆಸಿ ಮಾತಾಡಿ ಸೆಟಲ್ ಮಾಡೋಣ' ಅಂದ್ರು ಧರ್ಮಣ್ಣ.

ಕೈಯಲ್ಲಿ ಊರಿನ ಮನೆ-ನಿವೇಶನ ಮಾರಾಟ ಮಾಡಿದ ಹಣವೇನೂ ಇತ್ತು. ಇಲ್ಲಿ ನಿವೇಶನ ಆಯ್ಕೆ ಮಾಡಿದರೆ, ಬೇಗ ಖರೀದಿ ಮಾಡಿ ಮನೆ ಕಟ್ಟಿಬಿಡಬಹುದು. ದಿನೇ ದಿನೇ ಕಟ್ಟಡ ಸಾಮಗ್ರಿ ಬೆಲೆಗಳು ಏರುತ್ತಲೇ ಇವೆ. ಯಾವುದೇ ವಿವಾದಗಳಿಲ್ಲದೇ ಕ್ಲಿಯರ್ ಟೈಟಲ್ ಇರುವ ಸೈಟ್ ಸಿಗುತ್ತಿರಬೇಕಾದರೆ ಖರೀದಿಗೆ ಏಕೆ ಮೀನ-ಮೇಷ ಏಣಿಸಬೇಕು? ಅಂತ ಯೋಚಿಸಿದೆ.

ಧರ್ಮಣ್ಣನ ಕೈಯಲ್ಲಿದ್ದ ಆ ಹೊಸ ಬಡಾವಣೆಯ ನಕ್ಷೆ ನೋಡಿ `ಆ ಕೊನೆಯ ನಿವೇಶನವೇ ಇರಲಿ. ಅದರ ಮಾಲೀಕರನ್ನು ಕರೆಸಿಬಿಡಿ ಮಾತಾಡೋಣ' ಎಂದೆ.

ನನ್ನ ಮಾತು ಮುಗಿಯುವುದರೊಳಗೇ ಖರೀದಿಸುವ ನಿರ್ಧರಿಸಿದ ನಿವೇಶನದ ಎಲ್ಲ ದಾಖಲೆಗಳ ಜೆರಾಕ್ಸ್ ಪ್ರತಿ ನನ್ನ ಕೈಯಲ್ಲಟ್ಟರು. ಎಲ್ಲ ದಾಖಲೆಗಳನ್ನು ನಾನೊಮ್ಮೆ ತಿರುವಿ ಹಾಕಿದೆ. ಆ ಕಂದಾಯದ ಭಾಷೆಗಳು ಯಾವನಿಗೆ ಅರ್ಥವಾಗಬೇಕು. ಆದರೂ ಗೊತ್ತಾಗುವ ಅಂಶಗಳನ್ನು ಓದುತ್ತಿದ್ದೆ.

`ಅದೇನ್ ಓದ್ತೀರಿ ಬಿಡಿ ಸರ್. ನಮಗೆ-ನಿಮಗೆ ಏನ್ ಅರ್ಥವಾಗ್ತದೆ. ಯಾವುದಾದರೂ ಬ್ಯಾಂಕ್‌ನ ಲೀಗಲ್ ಅಡ್ವೈಸರ್‌ಗೆ ತೋರಿಸಿ. ಎ-ಟು ಜೆಡ್ ಎಲ್ಲ ಹೇಳಿಬಿಡ್ತಾರೆ'... ಧರ್ಮಣ್ಣನ ಜತೆಗಾರ ಉಚಿತ ಸಲಹೆ ಕೊಟ್ಟರು. ಅದೂ ಸರಿ ಎನ್ನಿಸಿತು.

ಹೇಗೂ ಮನೆ ಕಟ್ಟೋದಕ್ಕೆ ಬ್ಯಾಂಕ್‌ನಲ್ಲಿ ಸಾಲ ತಗೋಬೇಕು. ಅದೇ ಬ್ಯಾಂಕ್‌ನ ಲೀಗಲ್ ಅಡ್ವೈಸರ್‌ಗೆ ನಿವೇಶನದ ಪತ್ರಗಳನ್ನು ಕೊಟ್ಟು ಪರಿಶೀಲಿಸಿ ಖಾತರಿಪಡಿಸಿಕೊಳ್ಳೋಣ. ಅವರು ಓ.ಕೆ ಅಂದರೆ ಖರೀದಿ ಮಾಡಿದರಾಯ್ತು ಅಂತ ದಾಖಲೆಗಳನ್ನೆಲ್ಲ ತೆಗೆದುಕೊಂಡು ಸೋಮವಾರವೇ ಬ್ಯಾಂಕ್ ಮ್ಯಾನೇಜರ್ ಸಂಪರ್ಕಿಸಿದೆ. ಅವರಿಂದ ಕಾನೂನು ಸಲಹೆಗಾರರ ದೂರವಾಣಿ ಸಂಖ್ಯೆ ಪಡೆದು ಸಂಪರ್ಕಿಸಿ ಸಂಜೆಗೆ ನಿವೇಶನದ ದಾಖಲೆಗಳನ್ನೆಲ್ಲ ಅವರ ಕೈಗೆ ಕೊಟ್ಟಿದ್ದೂ ಆಯ್ತು.

`ಮೂರು ದಿನ ಬಿಟ್ಟು ಬನ್ನಿ. ಎಲ್ಲ ನೋಡಿ ರೆಡಿ ಮಾಡಿರ್ತೀನಿ ಅಂದರು' ಲೀಗಲ್ ಅಡ್ವೈಸರ್ ಶ್ರೀನಿವಾಸ ರೆಡ್ಡಿ.

ದಿನ 3 ಆಯ್ತು, 4 ಆಯ್ತು.. ಸಾವಿರ ರೂಪಾಯಿ ಮುಂಗಡ ಹಣ ಪಡೆದ ರೆಡ್ಡಿಗಾರು ಪತ್ತೆಯೇ ಇಲ್ಲ. ಕೊನೆಗೆ ಐದನೇ ದಿನ ಫೋನ್ ಮಾಡಿದ್ರು. `ದಾಖಲೆಗಳೆಲ್ಲ ಸರಿ ಇವೆ. ಆದರೆ ಎನ್‌ಕಂಬರೆನ್ಸ್ ಸರ್ಟಿಫಿಕೆಟ್ ಹೊಸದಾಗಿ ತಗೊಳ್ಳಿ. ಉಳಿದಂತೆ ಏನೂ ಸಮಸ್ಯೆ ಇ;;' ಅಂತ ಗ್ರೀನ್ ಸಿಗ್ನಲ್ ಕೊಟ್ರು ರೆಡ್ಡಿ ಸಾಹೇಬ್ರು.

ಈ ಎಲ್ಲ ಪ್ರಕ್ರಿಯೆ ಮುಗಿದ ಮೇಲೆ ಜ. 20ಕ್ಕೆ ನಿವೇಶನ ಖರೀದಿ ಮಾಡೋಣ ಅಂತ ದಿನ ನಿಗದಿ ಮಾಡಿದೆ. ಸಬ್‌ರಿಜಿಸ್ಟ್ರಾರ್ ಕಚೇರಿಗೆ ನಿವೇಶನದ ಮಾಲೀಕರನ್ನು ಧರ್ಮಣ್ಣ ಕರೆದುಕೊಂಡು ಬರಬೇಕೆಂದು ಮಾತೂ ಆಯ್ತು. ಆದರೆ ಮಾಲೀಕರನ್ನು ಒಮ್ಮೆಯಾದರೂ ನೋಡಬೇಕು. ಅವರೊಟ್ಟಿಗೆ ಮಾತನಾಡಿ, ನಿಮಗೆ ನಿವೇಶನ ಮಾರುವ ಇಚ್ಚೆ ಇದೆಯೊ ಇಲ್ಲವೊ? ಅಂತ ಕೇಳ್ಬೇಕು ಎಂದು ಧರ್ಮಣ್ಣನ ಎದುರು ಬೇಡಿಕೆ ಇಟ್ಟೆ.

`ಅದರ ಬಗ್ಗೆ ತಲೆ ಕೆಡಿಸ್ಕೋಬೇಡಿ ಸರ್. ಅವರು ನಿಮ್ಮವರೇ. ಬಹಳ ಸೈಲೆಂಟ್ ಜನ. ಧರ್ಮಣ್ಣ, ನೀವೇ ಸೈಟ್ ಮಾರಿಸಿಕೊಡಿ ಅಂತ ಎಲ್ಲವನ್ನೂ  ನನ್ನ ಮೇಲೇ ಬಿಟ್ಟಿದ್ದಾರೆ. ನಿಮಗೆ ಏನೂ ತೊಂದರೆ ಆಗದ ಹಾಗೆ ವ್ಯವಸ್ಥೆ ಮಾಡ್ತೀನಿ' ಅಂತ ಧರ್ಮಣ್ಣ ಸಮಜಾಯಿಷಿ ನೀಡಿದರು.

ಆತ ಏನೇ ಹೇಳಿದರೂ, ಬೆಂಗಳೂರು ಆಸುಪಾಸಿನಲ್ಲಿ ಸೈಟು ಖರೀದಿಯ ಹಗರಣಗಳು, ಒಂದೇ ಸೈಟನ್ನು ನಾಲ್ಕೈದು ಮಂದಿಗೆ ಮಾರಿದ ಉದಾಹರಣೆ, ಜತೆಗೆ ಸೈಟು ಮಾರುತ್ತೇವೆಂದು ಅಡ್ವಾನ್ಸ್ಡ್ ಪಡೆದು ನಂತರ ಮಾತು ಬದಲಾಯಿಸಿದ ಸಾಕಷ್ಟು ನಿದರ್ಶನಗಳು ಪದೇಪದೇ ನೆನಪಾಗಿ ನನ್ನನ್ನು ಕಾಡುತ್ತಿದ್ದವು. ಹಾಗಾಗಿ, `ನಿವೇಶನ ಖರೀದಿಗೆ ಮುನ್ನ ಒಮ್ಮೆ ಮಾಲೀಕರನ್ನು ಭೇಟಿಯಾಗಲೇ ಬೇಕು. ಅವರ ಬಳಿ ಸೈಟ್ ಮಾರಾಟಕ್ಕೆ ಒಪ್ಪಿಗೆ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು' ಎಂದು ಹಠ ಹಿಡಿದೆ.

`ಸರಿ, ಮಾಡ್ಸೋಣ ಬಿಡಿ' ಅಂತ ಧರ್ಮಣ್ಣ ಸಮಾಧಾನಪಡಿಸಿ ಜಾಗ ಖಾಲಿ ಮಾಡಿದರು.

ನಿವೇಶನ ಖರೀದಿ ದಿನ ಹತ್ತಿರ ಬಂದೇ ಬಿಡ್ತು. ಆದರೆ 18ರ ರಾತ್ರಿಯಾದ್ರೂ ಮಾಲೀಕರನ್ನು ಧರ್ಮಣ್ಣ ಭೇಟಿ ಮಾಡಿಸಲೇ ಇಲ್ಲ.

ಎಲ್ಲಾದ್ರೂ ಹಾಳಾಗ್ಲಿ, ನಮಗೇನು? ದಾಖಲೆ ಸರಿ ಇದ್ದು ನಿವೇಶನ ಖರೀದಿ ಪ್ರಕ್ರಿಯೆ ಮುಗಿದು ನನ್ನ ಹೆಸರಿಗೆ ಖಾತೆಯಾದರೆ ಸಾಕು. ನಂತರ ತಾನೇ ಹಣ ಕೊಡೋದು ಅಂದುಕೊಂಡು, `ನಾಳೆ ಬೆಳಿಗ್ಗೆ 9.30ಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹಣದ ಸಮೇತ ಬಂದುಬಿಡ್ತೇವೆ. ನೀವು ಅವರನ್ನು ಕರೆದುಕೊಂಡು ಬನ್ನಿ' ಅಂತ ಧರ್ಮಣ್ಣನಿಗೆ ತಿಳಿಸಿದೆ.

ಜನವರಿ 19ರ ಬೆಳಿಗ್ಗೆ ಧರ್ಮಣ್ಣನ ಮೊಬೈಲ್‌ಗೆ ಫೋನ್ ಮಾಡಿದರೆ, ಅವರು `ನಾಟ್ ರೀಚಬಲ್'
ಸಂಜೆ ಹೊತ್ತಿಗೆ ಅವರೇ ಕರೆ ಮಾಡಿ, `ನಾಳೆ ನಿವೇಶನದ ಮಾಲೀಕರು ತುರ್ತಾಗಿ ಊರಿಗೆ ಹೊರಟಿದ್ದಾರೆ. ಯಾವುದೋ ಕಾರ್ಯಕ್ರಮವಂತೆ. ಹೋಗಲೇಬೇಕಂತೆ. ನಿವೇಶನ ಖರೀದಿ ಮುಂದಿನವಾರ ಇಟ್ಕೊಳ್ಳೋಣ' ಅಂತ ಹೇಳಿದರು.

ಮಾಲೀಕರ ಭೇಟಿಯಾಗದೇ ಅನುಮಾನದಲ್ಲೇ ಹೆಜ್ಜೆ ಇಡುತ್ತಿದ್ದ ನನಗೆ ಈ ಮಾತು ಬರಸಿಡಿಲು ಬಡಿದಂತಾಗಿತ್ತು. ಏಕೆಂದರೆ ಆ ವೇಳೆಗಾಗಲೇ ರೂ5 ಲಕ್ಷ ಮುಂಗಡ ಕೊಟ್ಟಾಗಿತ್ತು.

`ಮುಗಿಯಿತು ನಮ್ ಕಥೆ. ಸೈಟೂ ಬೇಡ, ಏನೂ ಬೇಡ. ನಮ್ಮ ಅಡ್ವಾನ್ಸ್ ಹಣ ವಾಪಸ್ ಸಿಕ್ಕಿದರೆ ಸಾಕು' ಅಂತ ದೇವರಲ್ಲಿ ಹರಕೆ ಹೊತ್ತೆ.

ಮನಸ್ಸು ತಡೆಯಲಿಲ್ಲ. ನನಗೆ ಕೊಟ್ಟಿದ್ದ ನಿವೇಶನದ ದಾಖಲೆಗಳಲ್ಲಿದ್ದ  ವಿಳಾಸದ ಬೆನ್ನುಹತ್ತಿ ಜ.19ರ ಮಧ್ಯಾಹ್ನ ಆಟೊ ಹಿಡಿದು ಹೊರಟೆ. ಒಂದೆರಡು ಗಂಟೆ ಸತತ ಪ್ರಯತ್ನದಿಂದ ಮನೆ ವಿಳಾಸ ಸಿಕ್ಕಿತು. ಅದು ನಿವೇಶನ ಮಾಲೀಕರ ಮೂಲ ನಿವಾಸ. ಆದರೆ ಅವರು ಮನೆ ಬಿಟ್ಟು ಐದು ವರ್ಷವಾಗಿತ್ತು. ಮನೆ ಪಕ್ಕದಲ್ಲಿದ್ದವರು ಈ ಮಾಹಿತಿ ಕೊಟ್ಟರು.

ಮನಸ್ಸು ತಡೆಯದೇ, ಪಕ್ಕದ ಮನೆಯವರನ್ನೇ ಅವರ ಇಡೀ ಕುಟುಂಬದ ಚರಿತ್ರೆ ಕೇಳಿದೆ. ನಾವು ಖರೀದಿಸಲು ನಿರ್ಧರಿಸಿದ ನಿವೇಶನವಿದ್ದ ಪ್ರದೇಶದಲ್ಲೇ ಸದ್ಯ ಮಾಲೀಕರೂ ವಾಸವಿರುವ ಮಾಹಿತಿ ಸಿಕ್ಕಿತು.

ತಕ್ಷಣ ನಿವೇಶನದ ಸಮೀಪವಿದ್ದ ಸಂಬಂಧಿಕರಿಗೆ ಫೋನಾಯಿಸಿ, `ಈ ವಿಳಾಸದಲ್ಲಿರುವವರ ವಿಚಾರ ಖಚಿತಪಡಿಸಿಕೊಳ್ಳಿ' ಎಂದು ಮನವಿ ಮಾಡಿದೆ. ನನ್ನ ಕಷ್ಟ ತಿಳಿದ ಅವರು ರಾತ್ರೋ ರಾತ್ರಿ ವಿಳಾಸ ಪತ್ತೆ ಹಚ್ಚಿದರು. ಆ ಕುಟುಂಬ ವಾಸವಿರುವ ಜಾಗ, ನಿವೇಶನ ಮಾರಾಟ ಮಾಡುತ್ತಿರುವುದು.. ಎಲ್ಲವನ್ನೂ ಖಚಿತಪಡಿಸಿಕೊಂಡರು.

`ಸದ್ಯ ವ್ಯಕ್ತಿ, ಸೈಟು ದಾಖಲೆ ನಕಲಿ ಅಲ್ಲವಲ್ಲ' ಎಂದು ನಿಟ್ಟುಸಿರುಬಿಟ್ಟೆ. ನಿವೇಶನ ಖರೀದಿ ಯಾವಾತ್ತಾದರೂ ಆಗಲಿ, ಸರಿಯಾದ ದಾಖಲೆ ಸಿಕ್ಕಿದರೆ ಸಾಕು ಅಂತ ತೀರ್ಮಾನಿಸಿ ಒಂದು ವಾರ ಸುಮ್ಮನಿದ್ದುಬಿಟ್ಟೆ.

ಸೈಟ್ ಖರೀದಿಗೆ ನಿಗದಿಪಡಿಸಿದ ದಿನ ಬಂದಿತು. ದಲ್ಲಾಳಿ ಧರ್ಮಣ್ಣನ ಜತೆಗೆ ನಾವೆಲ್ಲ ಒಂದು ಗಂಟೆ ಮುಂಚಿತವಾಗಿಯೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇದ್ದೆವು. ಅದಕ್ಕೂ ಮುನ್ನ, ಸೈಟ್ ಮಾರಾಟಕ್ಕೆ ಬೇಕಾದ ದಾಖಲೆ ಪತ್ರಗಳೆಲ್ಲವನ್ನೂ ಸ್ಟಾಂಪ್‌ವೆಂಡರ್      ದಯಾನಂದ ಸಿದ್ಧಪಡಿಸಿದ್ದರು. ಸ್ಟಾಂಪ್ ಪೇಪರ್ ಶುಲ್ಕ, ನಿವೇಶನದ ಸರ್ಕಾರಿ ಬೆಲೆ, ಅದನ್ನು ಎರಡು ಡಿಡಿ ರೂಪದಲ್ಲಿ ತೆಗೆಸುವ ಕೆಲಸ.. ಎಲ್ಲವೂ ಅಪ್‌ಟು ಡೇಟ್ ಆಗಿತ್ತು.

ದಾಖಲೆಗಳನ್ನು ಹಿಡಿದ ಸ್ಟಾಂಪ್‌ವೆಂಡರ್ ದಯಾನಂದ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮಗಾಗಿ ಕಾಯುತ್ತಿದ್ದರು. ಆ ಭಾಗದಲ್ಲಿ ಧರ್ಮಣ್ಣ ಯಾವುದೇ ಸೈಟ್ ಮಾರಾಟ ಮಾಡಿಸಿದರೂ ಇದೇ ವ್ಯಕ್ತಿ ದಾಖಲೆಪತ್ರ ತಯಾರಿಸಿಕೊಡುತ್ತಾರೆ. ಇಷ್ಟು ಎಂದು ಹಣ ಕೊಟ್ಟರೆ ಸಾಕು. ಅದರಲ್ಲೇ ಸ್ಟ್ಯಾಂಪ್‌ಡ್ಯೂಟಿಯಿಂದ ಹಿಡಿದು, ಕಚೇರಿಯ ವಿವಿಧ ಹಂತಗಳಲ್ಲಿ ಕೊಡಬೇಕಾದ (ರಸೀತಿ ಇಲ್ಲದ) ಹಣವೂ ಅದಲ್ಲೇ ಸೇರಿರುತ್ತದೆ.

ಇಷ್ಟೆಲ್ಲ ಸಿದ್ಧವಾದರೂ ನಿವೇಶನದ ಮೂಲ ಮಾಲೀಕ ಪತ್ತೆ ಇಲ್ಲ. ಇದು ಆತಂಕ ದುಪ್ಪಟ್ಟುಗೊಳಿಸಿತು. ಮನಸ್ಸಿನಲ್ಲಿ ಗೊಂದಲ ಮುಂದುವರಿದಿದ್ದಾಗಲೇ ಸ್ಟ್ಯಾಂಪ್‌ವೆಂಡರ್ ದಯಾನಂದ್ `ಸರ್ ಬನ್ನಿ, ಆ ಕ್ಯಾಮೆರಾ ಮುಂದೆ ಕುಳಿತುಕೊಳ್ಳಿ' ಎಂದು ಹೇಳಿ ಫೋಟೋ ತೆಗೆಸಿದ್ದರು. ನಂತರ ಒಂದಷ್ಟು ಕಾಗದ ಪತ್ರಗಳಿಗೆ ಸಹಿ ಹಾಕಿಸಿದರು. ಅವು ಯಾವ ಪತ್ರವೋ, ಏತಕ್ಕೆ ಸಹಿ ಹಾಕಬೇಕೋ ಒಂದೂ ಅರ್ಥವಾಗಲಿಲ್ಲ. ಪ್ರಶ್ನಿಸಲು ಸಮಯವೂ ಇರಲಿಲ್ಲ. ನಂತರ ನಮ್ಮ ಕುಟುಂಬದವರನ್ನೆಲ್ಲ ಒಂದು ಕಡೆ ಕೂರಿಸಿದರು.

ದಯಾನಂದ, ಇನ್ನೊಂದು ಕುಟುಂಬದ ಸದಸ್ಯರನ್ನು ನಮ್ಮಂತೆಯೇ ಕ್ಯಾಮೆರಾ ಮುಂದೆ ಕೂರಿಸಿದರು, ಸ್ಟ್ಯಾಂಪ್‌ಪೇಪರ್‌ಗಳಿಗೆ ಸಹಿ ಹಾಕಿಸಿದರು. ನಂತರ ನಮ್ಮ ಪಕ್ಕದ ಸಾಲಿನಲ್ಲಿಯೇ ಕೂರಿಸಿದರು.

ಅವರಲ್ಲೊಬ್ಬರು `ನೀವು ಖರೀದಿಸುತ್ತಿರುವ ನಿವೇಶನದ ಮಾಲೀಕ ನಾನೆ. ನಿವೇಶನ ಒಳ್ಳೆಯ ಜಾಗದಲ್ಲಿದೆ. ನನಗೆ ಅದರಿಂದ ತುಂಬಾ ಒಳ್ಳೆಯದಾಗಿದೆ. ನಿಮಗೂ ಒಳ್ಳೆಯದಾಗುತ್ತೆ' ಎಂದು ನನ್ನ ಕೈ ಹಿಡಿದು ಹಾರೈಸಿದರು.

ನನಗೆ ದೊಡ್ಡ ಷಾಕ್. ಇನ್ನೊಂದೆಡೆ ಕಡೆಗೂ ನಿವೇಶನದ ಮಾಲೀಕರು ಸಿಕ್ಕಿದರಲ್ಲಿ ಎಂಬ ಖುಷಿ.

ನಿವೇಶನದ ಬೆಲೆ ಎಷ್ಟು? ಯಾವಾಗ ಖರೀದಿಸಿದ್ದಿರಿ? ಎಂದು ಕೇಳಬೇಕು ಎನ್ನವಷ್ಟರಲ್ಲಿ ಸ್ಟ್ಯಾಂಪ್‌ವೆಂಡರ್, ದಲ್ಲಾಳಿ ಎಲ್ಲರೂ ನಮ್ಮ ಬಳಿ ಬಂದು `ನೋಡಿ ಇವರೇ ನಿವೇಶನದ ಮಾಲೀಕರು. ನಿಮ್ಮ ಅನುಮಾನ ಬಗೆಹರೀತಲ್ಲ. ಸರಿ, ಹೋಗೋಣ ಇನ್ನು' ಅಂತ ನಮ್ಮ ಕೈಗೆ ನಿವೇಶನದ ದಾಖಲೆಗಳ ಮೂಲ ಪ್ರತಿಗಳನ್ನಿಟ್ಟು ನಮ್ಮನ್ನೆಲ್ಲ ಕರೆದುಕೊಂಡು ಹೊರಟೇಬಿಟ್ಟರು.

`ಅರೆ, ದಾಖಲೆ ಕೊಟ್ಟರು. ಹಣ ತೆಗೆದುಕೊಳ್ಳಲಿಲ್ಲವಲ್ಲ' ಎಂದು ನಾನು ಯೋಚಿಸುತ್ತಿದ್ದರೆ ಅದನ್ನು ಅರ್ಥ ಮಾಡಿಕೊಂಡ ನನ್ನ ಸಂಬಂಧಿಕರು, `ಚಿಂತೆ ಬಿಡಿ. ಅವರು ಇಲ್ಲಿಗೆ ಬರುವುದಕ್ಕೆ ಮುನ್ನವೇ ನಿಮ್ಮ ಸೈಟ್ ವ್ಯವಹಾರ ಕುದುರಿಸಿದ್ದರಲ್ಲ ದಲ್ಲಾಳಿ ಅವರಿಂದಲೇ ನಿವೇಶನದ ಹಣ ಮೂಲ ಮಾಲೀಕರಿಗೆ ಸಂದಾಯವಾಗಿದೆ. ಸ್ಟ್ಯಾಂಪ್‌ವೆಂಡರ್‌ಗೆ ಕೊಡುವ ಹಣ, ಯಾರ‌್ಯಾರಿಗೆ ಎಷ್ಟೆಷ್ಟು ಕಮಿಷನ್ ಬರಬೇಕೋ ಅದೆಲ್ಲ ಹಂಚಿಕೊಂಡಾಗಿದೆ' ಎಂದರು.

`ಹೌದು, ಇಷ್ಟೆಲ್ಲ ನಿಖರವಾಗಿ, ಪಾರದರ್ಶಕವಾಗಿ ನಿವೇಶನವನ್ನು ವ್ಯಾಪಾರ ಮಾಡಿಸಿದರೂ, ಆ ಮಾಲೀಕರನ್ನು ನಮಗೆ ಪರಿಚಯಿಸೋದಕ್ಕೇಕೆ ಹಿಂದೇಟು ಹಾಕಿದರು'? ಎಂದು ಸಂಬಂಧಿಕರನ್ನು ಪ್ರಶ್ನಿಸಿದೆ. ಆಗ ಅವರು ರಿಯಲ್ ಎಸ್ಟೇಟ್‌ನ ರಿಯಾಲಿಟಿ ಬಿಚ್ಚಿಟ್ಟರು...

`ನೀವು ಖರೀದಿಸಿದ ನಿವೇಶನವನ್ನು ಈ ಮೊದಲೇ ಈ ದಲ್ಲಾಳಿಗಳು ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಅಥವಾ ಆರು ತಿಂಗಳ ಅವಧಿಯ ಮಾರಾಟ ಕರಾರು ಪತ್ರ (ಸೇಲ್ ಅಗ್ರಿಮೆಂಟ್) ರೀತಿ ಖರೀದಿಸಿರುತ್ತಾರೆ. ನೀವು ರೂ24 ಲಕ್ಷ ಕೊಟ್ಟು ಸೈಟ್ ಖರೀದಿಸಿದರೆ, ದಲ್ಲಾಳಿ ತಂಡ ಅದೇ ಸೈಟನ್ನು ರೂ10-15 ಲಕ್ಷಕ್ಕೆ ಖರೀದಿಸಿರುತ್ತೆ.

ಸೈಟ್ ಮಾರಾಟ ಮಾಡಿಕೊಡಿ ಎಂದು ನಿವೇಶನದ ಮಾಲೀಕರು ಇವರಿಗೆ ಮಾರಾಟದ ಹಕ್ಕು ಕೊಟ್ಟಿರುತ್ತಾರೆ. ಒಂದು ಪಕ್ಷ ನಿಮಗೆ ಮಾಲೀಕರನ್ನು ಭೇಟಿ ಮಾಡಿಸಿ, ನಿವೇಶನದ ಮೂಲ ಬೆಲೆ ನಿಮಗೆ ಗೊತ್ತಾದರೆ, ನೀವು ದಲ್ಲಾಳಿಗಳು ಹೇಳಿದ ಬೆಲೆಗೆ ಖರೀದಿಸುವುದಿಲ್ಲ. ಹಾಗಾಗಿ ಮೂಲ ಮಾಲೀಕರು ಹಾಗೂ ಖರೀದಿದಾರರನ್ನು ರಿಜಿಸ್ಟೇಷನ್ ಹಂತದವರೆಗೂ ಭೇಟಿ ಮಾಡಿಸುವುದಿಲ್ಲ' ಎಂದರು.

ಅಬ್ಬಾ! ಒಂದು ನಿವೇಶನ ಮಾರಾಟಕ್ಕೆ ಇಷ್ಟೆಲ್ಲ ಒಳದಾರಿಗಳಿವೆಯೇ ಎಂದು ಆಶ್ಚರ್ಯವಾಯಿತು. ಮಧ್ಯವರ್ತಿ ಮಾರಾಟ ತಂತ್ರಕ್ಕೆ ಮರುಳಾಗಿ ನಿವೇಶನಕ್ಕೆ ವಾಸ್ತವ ದರಕ್ಕಿಂತ ಹೆಚ್ಚು ಹಣ ಕೊಟ್ಟಿದ್ದೆೀವೆ ಎನ್ನುವುದೂ ಮನದಟ್ಟಾಯಿತು. ಸ್ವಲ್ಪ ದಿನ ಸಂಕಟವೂ ಆಯಿತು.

ಹಣ ಹೆಚ್ಚು ಕೈಬಿಟ್ಟುಹೋಗಿದ್ದರೂ, ನಿವೇಶನದ ದಾಖಲೆಗಳಲ್ಲಾಗಲೀ, ತೆರಿಗೆ ಪಾವತಿ, ನೋಂದಣಿ ಮೊದಲಾದ ಪ್ರಕ್ರಿಯೆಗಳಲ್ಲಿ ಯಾವುದೇ ಮೋಸ ಆಗಿಲ್ಲ. ಎಲ್ಲ ದಾಖಲೆಗಳೂ `ಕ್ರಿಸ್ಟಲ್ ಕ್ಲಿಯರ್' ಎಂಬಷ್ಟು ಸ್ಪಷ್ಟವಾಗಿದ್ದವು.

ನಿವೇಶನದ ಖಾತೆ ಮಾಡಿಸಲು ಪಾಲಿಕೆ ಕಚೇರಿಗೆ ಹೋದಾಗ ಇವೆಲ್ಲವೂ ತಿಳಿದುಬಂದಿತು. ಎಲ್ಲ ಗೊಂದಲ, ಗೋಜಲು, ಮನದ ಬೇಗುದಿ ಎಲ್ಲ ದೂರವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.