
ನೀವು ಕೆಲ ನೆಂಟರಿಷ್ಟರ ಮನೆಗೋ ಅಥವಾ ಸ್ನೇಹಿತರ ಮನೆಗೋ ಹೋಗಿರುತ್ತೀರಿ. ಅವರು ಬಾಗಿಲು ತೆರೆದು ನಿಮ್ಮನ್ನು ಸ್ವಾಗತಿಸಿ ಸೊಳ್ಳೆ ಬರುತ್ತದೆ ಎಂದು ತಕ್ಷಣ ಬಾಗಿಲು ಹಾಕಿಬಿಡುತ್ತಾರೆ. ಮನೆಗೆ ದೊಡ್ಡ ದೊಡ್ಡ ಕಿಟಕಿಗಳಿದ್ದರೂ ಅದರ ಗಾಜಿನ ಬಾಗಿಲುಗಳೆಲ್ಲ ಮುಚ್ಚಿಕೊಂಡಿರುತ್ತವೆ. ನಿಮಗೆ ಒಳಗೆ ಕುಳಿತೊಡನೆ ಗಾಳಿ ಸ್ತಬ್ಧವಾದಂತಾಗಿ ಬಿಸಿಬಿಸಿಯಾದ ವಾತಾವರಣದಲ್ಲಿರುವ ಅನುಭವವಾಗತೊಡಗುತ್ತದೆ. ಸೆಖೆಯಾಗತೊಡಗಿ ಫ್ಯಾನ್ ಹಾಕಿದರೂ ಬಳಸಿದ ಗಾಳಿಯನ್ನೇ ಮತ್ತೆ ಸೇವಿಸಿದಂತಾಗಿ ಹಿಂಸೆಯಾಗತೊಡಗುತ್ತದೆ.
ಏಕೆ ಹೀಗಾಗುತ್ತದೆ? ಮನೆ ಕಟ್ಟುವಾಗ ಬಹು ಮುಖ್ಯವಾದ, ಗಾಳಿಯ ಸರಾಗ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿರುವುದಿಲ್ಲ. ಹೊರಗಿನಿಂದ ಮನೆಯೊಳಗೆ ಬಂದೊಡನೆ ತಂಪೆನಿಸುವ ಸುಮಧುರ ವಾತಾವರಣವಿದ್ದರೆ ಇಡೀ ದಿನ ಮನ ಆಹ್ಲಾದಕರವಾಗಿರುವುದು. ಇಂತಹ ವಾತಾವರಣಕ್ಕೆ ಮನೆಗೆ ನೀಲನಕ್ಷೆ ಸಿದ್ಧಪಡಿಸುವಾಗಲೇ ಗಾಳಿಯು ಒಂದು ಕಡೆಯಿಂದ ಮತ್ತೊಂದೆಡೆಗೆ ಹಾದು ಹೋಗುವಂತೆ ವಿನ್ಯಾಸ ಮಾಡಿರಬೇಕು.
ಹಾಗೂ ಕಿಟಕಿ ಚೌಕಟ್ಟಿಗೆ ಒಳಬದಿಯಿಂದ ಮೆಷ್ ಅಳವಡಿಸಿದ ಬಾಗಿಲುಗಳನ್ನು ಜೋಡಿಸಿಕೊಳ್ಳಬೇಕು. ಇದು ಸೊಳ್ಳೆಗಳು ಒಳಬರುವುದನ್ನು ತಡೆಯುತ್ತದೆ, ಅದೇ ವೇಳೆ ಗಾಳಿಯ ಒಳಪ್ರವೇಶಕ್ಕೂ ಅವಕಾಶ ಮಾಡಿಕೊಡುತ್ತದೆ. ಮನೆಯಲ್ಲಿ ಸದಾ ಹೊಸಗಾಳಿ ಬೀಸುತ್ತಿರುತ್ತದೆ.
ಹೆಚ್ಚಿನ ಜನ ಮನೆ ನಿರ್ಮಿಸುವಾಗ ಮನೆ ಚೆನ್ನಾಗಿ ಕಾಣಬೇಕೆನ್ನುವುದಕ್ಕೇ ಪ್ರಾಮುಖ್ಯತೆ ನೀಡುತ್ತಾರೆ. ಸಣ್ಣ ವಿಚಾರಗಳೆಂದು ಅತಿ ಮಹತ್ವದ ವ್ಯವಸ್ಥೆಗಳನ್ನು ಮರೆತುಬಿಡುತ್ತಾರೆ. ಮನೆ ಕಟ್ಟುವಾಗಲೇ ಕೆಲವೊಂದು ಸೂಕ್ಷ್ಮ ಸಂಗತಿಗಳನ್ನು ಮರೆಯದೇ ಸರಳ ರಚನೆಗಳನ್ನು ಮಾಡಿಕೊಂಡರೆ ಗಾಳಿ ಸಂಚಾರಕ್ಕೆ ಅನುಕೂಲವಾಗುವುದು.
ಕಿಡಕಿ ನಿರ್ಮಿಸುವಾಗ ಮರದ ಚೌಕಟ್ಟಿನ ಎರಡೂ ಬದಿಗೆ ಚಾನೆಲ್ ಮಾಡಿಸಬೇಕು. ಇದರಿಂದ ಹೊರಬದಿಗೆ ಗ್ಲಾಸ್ ಬಾಗಿಲು ಅಳವಡಿಸಿದರೆ, ಒಳಬದಿಗೆ ಮೆಶ್‌ನ ಬಾಗಿಲು ಜೋಡಿಸಲು ಅನುಕೂಲವಾಗುವುದು.
ಮೆಶ್ ಅಳವಡಿಸುವಾಗ ತುಕ್ಕು ಬಾರದಂತೆ ಉಕ್ಕಿನ ಅಥವಾ ನೈಲಾನ್ ಮೆಶ್ ಬಳಸಬೇಕು. ಮೆಶ್‌ಗೆ ಎಂದೇ ಕಿಟಕಿಗೆ ಬೇರೆ ಬಾಗಿಲು ಮಾಡಿ ಕೂಡ್ರಿಸುವುದರಿಂದ ನಿರ್ವಹಣೆ ಸುಲಭವಾಗುವುದು. ಇಲಿ, ಬೆಕ್ಕು, ಹಾವಿನ ಕಾಟಗಳಿಂದ ಮನೆ ಮುಕ್ತವಾಗಿರುವುದು.
ಹಜಾರ ಅಥವಾ ಕೊಠಡಿಗಳಿಗೆ ಕಿಟಕಿಗಳನ್ನು ಗಾಳಿ ಅಡ್ಡವಾಗಿ ಚಲಿಸುವಂತೆ(ಕ್ರಾಸ್ ವೆಂಟಿಲೇಶನ್) ಅಳವಡಿಸಬೇಕು.
ಒಂದೇ ಸ್ಲ್ಯಾಬ್‌ನ ಆರ್.ಸಿ.ಸಿ ಮನೆಯಾದಲ್ಲಿ ತಾರಸಿಗೆ ಬಿಸಿಲು ತಾಗದಂತೆ ಸಿಮೆಂಟ್ ಶೀಟ್ ಅಥವಾ ಹೆಂಚಿನ ಮುಚ್ಚಿಗೆ ಮಾಡಿಕೊಳ್ಳಬೇಕು. ಧಾರಾಕಾರ ಮಳೆಯಾಗುವ ಮಲೆನಾಡಿನಲ್ಲಂತೂ ಇದು ಅನಿವಾರ್ಯ.
ಅನುಕೂಲವಿದ್ದಲ್ಲಿ ಮನೆಯ ನಡುವೆ ಅಥವಾ ಮಹಡಿ ಏರುವ ಮೆಟ್ಟಿಲುಗಳ ಮೇಲಿರುವ ಸ್ಲ್ಯಾಬ್ ಮೇಲೆ ಚಿಮಣಿಯೊಂದನ್ನು ಅಥವಾ ಹಿಂದೆ ರೂಢಿಯಲ್ಲಿದ್ದಂತೆ ಗವಾಕ್ಷಿಗಳನ್ನು ನಿರ್ಮಿಸಿಕೊಂಡರೆ ಬಿಸಿಗಾಳಿ ಹೊರ ಹೋಗಲು ಅನುಕೂಲವಾಗುವುದು. ಕಿಟಕಿಯ ಮೆಶ್ ಮೂಲಕ ಒಳಬರುವ ಗಾಳಿ ಚಿಮಣಿ ಮೂಲಕ ಹೊರ ಹೋಗಿ, ಮನೆಯಿಡೀ ಹೊಸ ಗಾಳಿಯ ಚಲನೆ ಇರುತ್ತದೆ.
ಚಿಮಣಿ ನಿರ್ಮಿಸುವಾಗ ಗಾಳಿ ಮಳೆಗೆ ನೀರು ಒಳಬರದಂತೆ ಮುತುವರ್ಜಿ ವಹಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.