ADVERTISEMENT

‘ಅಧಿಕಾರಕ್ಕಾಗಿ ಸಾಬ್ರು– ಸಾಬ್ರು ಹೊಡೆದಾಡ್ತೀವಿ!’

ಡಿ.ಬಿ, ನಾಗರಾಜ
Published 18 ನವೆಂಬರ್ 2018, 5:28 IST
Last Updated 18 ನವೆಂಬರ್ 2018, 5:28 IST
   

ವಿಜಯಪುರ: ‘ಮುಸ್ಲಿಂ ನಾಯಕರಾಗಲು ಸಾಬ್ರು– ಸಾಬ್ರು ಹೊಡೆದಾಡಿದ್ವಿ. ಈ ಹಿಂದೆಯೂ ಇದು ನಡೆದಿತ್ತು. ಈಗಲೂ ನಡೀತಿದೆ. ನಾನು, ಜಾಫರ್ ಷರೀಫ್‌ ಇಬ್ರೂ ಸಾಬ್ರು. ಆದ್ರೂ ಅಧಿಕಾರಕ್ಕಾಗಿ ಸಾಬ್ರು– ಸಾಬ್ರೇ ಬಡಿದಾಡಿದ್ವೀ..!’

ವಿಜಯಪುರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಟಿಪ್ಪು ಜಯಂತಿ ಆಚರಣೆ ವಿವಾದ ಕುರಿತಂತೆ ಮಾತನಾಡುವ ಸಂದರ್ಭ ಸಿಡಿಸಿದ ನಗೆಬಾಂಬ್‌ ಇದು.

‘ಟಿಪ್ಪು ಸುಲ್ತಾನ್‌ ಮತಾಂಧನಲ್ಲ. ಅವನೊಬ್ಬ ಹುತಾತ್ಮ. ಬ್ರಿಟಿಷರ ವಿರುದ್ಧ ಹೋರಾಡಿದವ. ತನ್ನ ಮಕ್ಕಳನ್ನು ರಾಜ್ಯಕ್ಕಾಗಿ ಒತ್ತೆ ಇಟ್ಟವ. ‘ಟಿಪ್ಪು ಮತಾಂಧ’ ಎಂಬುದು ಬಿಜೆಪಿಯವರು ವೋಟಿನಾಸೆಗಾಗಿ ಹೇಳುವ ಸರಣಿ ಸುಳ್ಳು’.

ADVERTISEMENT

‘ಟಿಪ್ಪು ಕೊಡಗಿನ ರಾಜರು, ಚಿತ್ರದುರ್ಗದ ಪಾಳೇಗಾರರ ವಿರುದ್ಧವಷ್ಟೇ ಹೊಡೆದಾಡಿಲ್ಲ. ಇತಿಹಾಸವನ್ನು ಮತ್ತೊಮ್ಮೆ ಸರಿಯಾಗಿ ಓದಿನೋಡಿ. ಹೈದರಾಬಾದ್‌ನ ನಿಜಾಮರ ವಿರುದ್ಧವೂ ಯುದ್ಧ ಮಾಡಿದ್ದ. ನಿಜಾಮರು ಸಾಬ್ರೇ. ಆದ್ರೂ ರಾಜ್ಯ ವಿಸ್ತರಣೆಗಾಗಿ ಸಾಬ್ರ ವಿರುದ್ಧವೇ ಯುದ್ಧ ಸಾರಿದ್ದ. ಆಗಲೂ ಹಲವರು ಸತ್ತಿದ್ದರು’.

‘ಇದು ಬಿಜೆಪಿಗರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದ್ರೂ ವೋಟಿನ ರಾಜಕಾರಣ ಮಾಡ್ತಾವ್ರೆ. ಈ ಹಿಂದೆಯೂ ಸಾಬ್ರು– ಸಾಬ್ರು ಗುದ್ದಾಡಿದ್ದರು. ಯುದ್ಧ ಮಾಡಿದ್ದರು. ಈಗಲೂ ಸಾಬ್ರ ನಡುವೆಯೇ ಅಧಿಕಾರಕ್ಕಾಗಿ ಜಗಳ ನಡೆಯುತ್ತಿದೆ’ ಎಂದು ಇಬ್ರಾಹಿಂ ಮತ್ತೊಮ್ಮೆ ಚಟಾಕಿ ಹಾರಿಸುತ್ತಿದ್ದಂತೆ ಗೋಷ್ಠಿಯಲ್ಲಿದ್ದವರು ನಗೆಗಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.