ADVERTISEMENT

ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ

ಸಮೀರ ಸಿ ದಾಮ್ಲೆ
Published 14 ಮೇ 2014, 19:30 IST
Last Updated 14 ಮೇ 2014, 19:30 IST
ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ
ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ   

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಬೇಕೇ ಬೇಡವೇ ಎಂಬುದು ಇಂದು ನಿನ್ನೆಯ ಚರ್ಚೆ­ಯಲ್ಲ. ಕೆಲವು ವರ್ಷಗಳಿಂದ ಹೊಗೆ­ಯಾಡು­ತ್ತಲೇ ಇತ್ತು. ಮೇ ೫ ರಂದು ಬಂದ ಸುಪ್ರೀಂ ಕೋರ್ಟಿನ ತೀರ್ಪಿನ ಪರಿಣಾಮ ಈ ಚರ್ಚೆಗೆ ಬೆಂಕಿ ಹತ್ತಿದಂತೆ ಆಗಿದೆ.

‘ಬ್ರಿಟಿಷ್ ಕಾಲದಿಂದ ಇಂದಿನವರೆಗೆ ಶಿಕ್ಷಣ ಹಾಗೂ ಶಿಕ್ಷಣ ಮಾಧ್ಯಮ ಹೇಗೆ ಬಂಡವಾಳ­ಶಾಹಿ­ಗಳ ಅಗತ್ಯಕ್ಕೆ ಅನುಕೂಲವಾಗುವ ಸೊತ್ತಾ­ಯಿತು’ ಹಾಗೂ ‘ಸರ್ಕಾರಿ ಕನ್ನಡ ಮಾಧ್ಯಮ ಶಾಲೆ­ಗಳನ್ನು ಹೇಗೆ ಬಲಪಡಿಸಬಹುದು’ –ಈ ಎರಡೂ ವಿಷಯಗಳು ಮೇ ೧೩ರ ‘ಪ್ರಜಾ­ವಾಣಿ’­ಯಲ್ಲಿ ಎರಡು ಪ್ರತ್ಯೇಕ ಲೇಖನಗಳಲ್ಲಿ ಚರ್ಚೆ­­ಯಾಗಿವೆ. ಆದರೆ ಇಂಗ್ಲಿಷ್ ಮಾಧ್ಯಮದ ಪ್ರತಿ­­ಪಾದನೆಯ ಮುಖ್ಯಕಾರಣ ಚರ್ಚೆಯಾ­ದದ್ದು ಕಡಿಮೆ. ಬಹುತೇಕ ಸಮರ್ಥಕರು ಕೊಡುವ ಕಾರಣಗಳೆಂದರೆ - ಹೆಚ್ಚಿನ ಅವಕಾಶ­ಗಳು, ಕೀಳರಿಮೆ ಹಾಗೂ ಅನುವಾದದ ಸಮಸ್ಯೆ­ಯಿಂದ ಕನ್ನಡದಲ್ಲಿ ಮಾಹಿತಿ ಲಭ್ಯವಿಲ್ಲ­ದಿರುವುದು.

ಅವಕಾಶಗಳು: ಹೆಚ್ಚಿನ ಪೋಷಕರು ಕೊಡುವ ಮುಖ್ಯ ಕಾರಣ ಹೆಚ್ಚಿನ ಅವಕಾಶಗಳು ಮತ್ತು ಜಾಗ­ತಿಕ ಅವಕಾಶ. ಸತ್ಯ, ನಿಮ್ಮ ಜ್ಞಾನ ಹೆಚ್ಚಿ­ದ್ದಷ್ಟು, ಹೆಚ್ಚು ಭಾಷೆ ಬಂದಷ್ಟು, ನಿಮ್ಮ ಸಂವಹನ ಸಾಮರ್ಥ್ಯ ಹೆಚ್ಚಾದಷ್ಟು ನಿಮ್ಮನ್ನು ನೀವು ಚೆನ್ನಾಗಿ ಮಾರ್ಕೆಟ್ ಮಾಡಿಕೊಳ್ಳ­ಬಹುದು; ಹಾಗಾಗಿ ನಿಮ್ಮ ಅವಕಾಶಗಳು ಹೆಚ್ಚು­ತ್ತವೆ. ಜರ್ಮನಿಯಲ್ಲಿ ಕಲಿಯಬೇಕಾದರೆ ಅಥವಾ ಕೆಲಸ ಸಿಗಬೇಕಾದರೆ ಜರ್ಮನ್ ಗೊತ್ತಿ­ರ­ಬೇಕು, ಜಪಾನಿನಲ್ಲಿ ಬದುಕಲು ಜಪಾನಿ ಭಾಷೆ ಕಲಿಯುವುದು ಅನಿವಾರ್ಯ, ಥಾಯ್ಲೆಂಡ್ ನಲ್ಲಿ ವ್ಯವಹಾರ ಮಾಡಲು ಥಾಯ್ ಭಾಷೆ ಅನುಕೂಲಕಾರಿ, ಕೊರಿಯಾದಲ್ಲಿ ಕೊರಿಯನ್, ಫ್ರಾನ್ಸ್ ನಲ್ಲಿ ಫ್ರೆಂಚ್ –ಹೀಗೆ ನಿಮಗೆಷ್ಟು ಹೆಚ್ಚು ಭಾಷೆ ಗೊತ್ತೋ ಅಷ್ಟು ಅವಕಾಶಗಳು ಜಾಸ್ತಿ. ಬಹುರಾಷ್ಟ್ರೀಯ  ಕಂಪೆನಿಗಳಲ್ಲಿ ಭಾಷಾನು­ವಾದ­ಕರು ಎಂಜಿನಿಯರ್ ಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಪರಿಣತ ಭಾಷಾನು­ವಾದ­ಕರಿಗೆ ‘ಶಬ್ದವೊಂದಕ್ಕಿಷ್ಟು’ ಎಂಬಂತೆ ಸಂಭಾ­ವನೆ ಕೊಡಬೇಕಾಗುತ್ತದೆ! ಹಾಗಾದರೆ ಜರ್ಮನ್ ಅಥವಾ ಜಪಾನಿ ಮಾಧ್ಯಮದ ಶಾಲೆ ತೆರೆ­ಯೋ­ಣವೇ? ಪರಿಹಾರ ಅದಲ್ಲ, ಕನಿಷ್ಠ ಒಂದು ವಿದೇಶಿ ಭಾಷೆಯನ್ನು ಸರಿಯಾಗಿ ಕಲಿ­ಯೋಣ! ಅದು ಇಂಗ್ಲಿಷೇ ಇರಬಹುದು, ಅದನ್ನು ಸರಿಯಾಗಿ ಕಲಿಯೋಣ.

ಇಂಗ್ಲಿಷ್ ಬರುತ್ತಿಲ್ಲವೆಂಬ ಕೀಳರಿಮೆ: ಅದೆಷ್ಟೋ ಹೆತ್ತವರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುವುದಕ್ಕೆ ಕೊಡುವ ಕಾರಣ ‘ನನಗೆ ಸರಿಯಾಗಿ ಇಂಗ್ಲಿಷ್ ಬರುತ್ತಿಲ್ಲ, ಹಾಗಾಗಿ ಅವಕಾಶಗಳನ್ನು ಕಳಕೊಂಡೆ’, ‘ಇಂಗ್ಲಿಷ್ ಬರದ ಕಾರಣ ನನಗೆ ಮುಜುಗರ­ವಾಗು­ತ್ತದೆ’, ‘ಎಂಜಿನಿಯರಿಂಗ್, ಮೆಡಿಕಲ್ ಸೇರಿದಾಗ ಮೊದಲ ಸೆಮಿಸ್ಟರ್ ಅಥವಾ ವರ್ಷ ತುಂಬಾ ಕಷ್ಟವಾಯಿತು’ ಇತ್ಯಾದಿ. ಒಂದಷ್ಟು ಜನ ಈ ಅನುಭವಗಳಿಂದ ಕೀಳರಿಮೆ ಬೆಳೆಸಿ­ಕೊಳ್ಳು­ತ್ತಾರೆ. ಇನ್ನು ಕೆಲವರು ಸ್ವಪ್ರಯತ್ನದಿಂದ ತಮ್ಮ ಇಂಗ್ಲಿಷ್ ಸಾಮರ್ಥ್ಯ ಬೆಳೆಸಿಕೊಂಡು ಇಂತಹ ಕೀಳರಿಮೆಯಿಂದ ಹೊರಬಂದಿರುತ್ತಾರೆ. (‘ಪ್ರಜಾವಾಣಿ’ಯಲ್ಲಿ ಕೆಲ ತಿಂಗಳ ಹಿಂದೆ ಬಂದ ‘ಮಗನೇ ಕ್ಷಮಿಸು’ ಎಂಬ ಲೇಖನದಲ್ಲಿ ಕೀಳರಿಮೆ ತುಂಬಿ ತುಳುಕುತ್ತಿತ್ತು). ಈ ಸಮಸ್ಯೆಗೆ ಕಾರಣ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವ ಸಾಮರ್ಥ್ಯ ಇರುವ ಶಿಕ್ಷಕರ ಕೊರತೆ. ಸ್ವಾಮೀ, ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವ­ವರು ಇಲ್ಲದಿರುವ ಸಮಸ್ಯೆ ನೀಗಿಸಲು ಭೌತ­ಶಾಸ್ತ್ರ, ರಸಾಯನಶಾಸ್ತ್ರ, ಸಮಾಜಶಾಸ್ತ್ರ ಎಲ್ಲ­ವನ್ನೂ ಇಂಗ್ಲಿಷ್ ನಲ್ಲಿ ಕಲಿಸುವುದು ಹೇಗೆ ಪರಿಹಾರವಾಗುತ್ತದೆ? ನೀವು ಲಕ್ಷ ರೂಪಾಯಿ ತೆತ್ತು ಕಳುಹಿಸುವ ಅದೆಷ್ಟೋ ಇಂಗ್ಲಿಷ್ ಶಾಲೆ­ಗಳೂ ಈ ಸಮಸ್ಯೆಯಿಂದ ಮುಕ್ತವಾಗಿಲ್ಲ. ಹಾಗಾಗಿ ಇಂದಿನ ಅವಶ್ಯಕತೆ, ಸಮರ್ಪಕವಾಗಿ (ವ್ಯಾಕ­ರ­ಣ­ವನ್ನೂ ಹಾಗೂ ಸಂವಹನವನ್ನೂ) ಇಂಗ್ಲಿಷ್ ಕಲಿಸಬಲ್ಲ ಶಿಕ್ಷಕರು.

ಕನ್ನಡ- ಇಂಗ್ಲಿಷ್ ಅನುವಾದ: ಮೂರೂವರೆ ವರ್ಷದ ನನ್ನ ಮಗಳಿಗೆ ಭೂಮಿಯ ಸುತ್ತುವಿ­ಕೆಯ ಬಗ್ಗೆ ವಿವರಿಸುವಾಗ ವಿಡಿಯೊ ತೋರಿಸೋ­ಣ­ವೆಂದು ಯೂಟ್ಯೂಬ್ ನಲ್ಲಿ ಹುಡುಕಿದೆ. ಒಂದೇ ಒಂದು ಕನ್ನಡ ವಿಡಿಯೊ ಇತ್ತು, ಅದೂ ಚೆನ್ನಾ­ಗಿ­ರಲಿಲ್ಲ. ಮಗಳು ಕನ್ನಡದಲ್ಲಿ ತೋರಿ­ಸೆಂದರೂ ಲಭ್ಯವಿಲ್ಲ. ನಮ್ಮಲ್ಲಿ ಇಂತಹ ಜ್ಞಾನ­ವನ್ನು ಕನ್ನಡಕ್ಕೆ ‘ಡಬ್ಬಿಂಗ್’ ಮಾಡುವುದಕ್ಕೆ ದೊಡ್ಡ ವಿರೋಧವಿದೆ; ಇನ್ನೊಂದೆಡೆ ಕನ್ನಡ ಸಾಯುತ್ತದೆಂಬ ಕೂಗಿದೆ. ಕನ್ನಡದ ಉಳಿವಿಗೆ ಬೇರೆ ಬೇರೆ ಭಾಷೆಗಳಲ್ಲಿರುವ ಉಪಯುಕ್ತ ಮಾಹಿತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಅಗತ್ಯ ಖಂಡಿತಾ ಇದೆ.

ಮೊನ್ನೆ ಗೆಳೆಯರೊಬ್ಬರು ಕನ್ನಡ ಪಠ್ಯಗಳಲ್ಲಿ­ರುವ ಅನುವಾದದ ಇನ್ನೊಂದು ಸಮಸ್ಯೆ ಹೇಳಿ­ದರು. ‘ರಬ್ಬರ್ ತಯಾರಿಯ ವಿಧಾನ’ವನ್ನು ಹೈಸ್ಕೂಲಿ­ನಲ್ಲಿ ವಲ್ಕನೀಕರಣ ಅಂತ ಕಲಿತಿದ್ದೆ, ಮುಂದೆ ಆ ಶಬ್ದ ಉಪಯೋಗಕ್ಕೇ ಬರಲಿಲ್ಲ ಹಾಗೂ ಅದನ್ನು ನೆನಪಿಡುವುದೂ ಒಂದು ಸಮಸ್ಯೆ. ಇಂತಹ ಹಲವು ಉದಾಹರಣೆ ಕನ್ನಡ ಮಾಧ್ಯ­­ಮದ ಪಠ್ಯಗಳಲ್ಲಿ ಕಾಣಸಿಗುತ್ತದೆ. ಈ ಸಮಸ್ಯೆ ಬರುವುದು ನಾವು ಪ್ರತಿಯೊಂದು ಹೊಸ ಅನ್ವೇ­ಷ­ಣೆಗೂ ಹೊಸ ವಿಷಯಕ್ಕೂ ಒಂದೊಂದು ಕನ್ನಡ ಶಬ್ದ ತಯಾರಿಸ ಹೊರಟಾಗ. ಉದಾಹರ­ಣೆಗೆ ಕಂಪ್ಯೂಟರ್ ಅನ್ನು ಗಣಕಯಂತ್ರ ಅಂತ ಕರೆಯುವುದಕ್ಕಿಂತ ಕಂಪ್ಯೂಟರ್ ಅನ್ನುವುದೇ ಸೂಕ್ತ. ಮೊಬೈಲ್ ಶಬ್ದಕ್ಕೆ ಒಂದು ಕನ್ನಡ ಶಬ್ದ ಹುಡುಕ­ಬೇಕಾದ ಅವಶ್ಯಕತೆಯಿಲ್ಲ. ಹೀಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಶಬ್ದಗಳನ್ನು ಎರವಲು ಪಡೆಯುವ ಪರಿಪಾಠವೂ ಇದೆ. ಇದರಲ್ಲಿ ಸಮಸ್ಯೆಯೇನೂ ಕಾಣುವುದಿಲ್ಲ.

ಮಾತೃಭಾಷೆಯ ಕಲಿಕೆ: ನನ್ನ ದೃಷ್ಟಿಯಲ್ಲಿ ಮಾತೃ­ಭಾಷೆ ಅನ್ನುವುದಕ್ಕಿಂತ ಪರಿಸರದ ಭಾಷೆ ಅನ್ನು­­ವುದು ಸೂಕ್ತ. ನಮ್ಮ ಮನೆಯಲ್ಲಿ, ನಮ್ಮ ಪರಿಸರದಲ್ಲಿ ನಿತ್ಯ ಬಳಕೆಯಲ್ಲಿರುವ ಭಾಷೆ­ಯಲ್ಲಿ ಯಾವುದೇ ವಿಷಯವನ್ನು ಗ್ರಹಿಸುವುದು ಹಾಗೂ ಮನನ ಮಾಡುವುದು ಸುಲಭ. ಅಷ್ಟೇ ಅಲ್ಲ ಗ್ರಹಿಕೆ ಸಂಪೂರ್ಣವಾಗಿ ಆಗಿರುತ್ತದೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ನಡೆಯುವ ಆಲೋ­­ಚನೆ­ಗಳು ವಿಮರ್ಶೆಗಳು ನಮ್ಮ ಪರಿಸರದ ಭಾಷೆ­ಯಲ್ಲೇ ನಡೆಯುತ್ತವೆ. ಹಾಗಾಗಿ ಪ್ರಾಥ­ಮಿಕ ಹಂತದ ಕಲಿಕೆಗೆ ಪರಿಸರದ ಭಾಷೆಯ ಅವಶ್ಯಕತೆಯಿದೆ.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಇನ್ನೊಂದು ಬದಲಾವಣೆ - ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಅಂಗನವಾಡಿ, ಕೆ.ಜಿ ತರ­ಗ­ತಿ­­ಯಿಂದ ಕಲಿಸುವ ಅವಶ್ಯಕತೆ. ಇಲ್ಲಿ ಬರೆಯು­ವುದಕ್ಕಿಂತ ಸಂವಹನಕ್ಕೆ ಪ್ರಾಶಸ್ತ್ಯ ಕೊಡ­ಬೇಕು ಹಾಗೂ ಶಬ್ದಭಂಡಾರ ಹೆಚ್ಚಿಸುವ ಕೆಲಸ ಮಾಡ­­ಬೇಕು. ಮನಃಶಾಸ್ತ್ರದ ಸಂಶೋಧನೆಗಳ ಪ್ರಕಾರ ಮೂರರಿಂದ ಆರು ವರುಷದ ಪ್ರಾಯ­ದಲ್ಲಿ ಮಕ್ಕಳು ಅತೀ ಹೆಚ್ಚು ಶಬ್ದಗಳನ್ನು ಕಲಿ­ಯುವ ಸಾಮರ್ಥ್ಯ ಹೊಂದಿರುತ್ತಾರೆ. ಮಕ್ಕಳ ಭಾಷಾ­­ಸಾಮರ್ಥ್ಯವನ್ನು ಬಲಪಡಿಸುವ ಕೆಲಸ ಶಿಕ್ಷ­ಣದ ಪ್ರಾರಂಭದೊಂದಿಗೇ ಆರಂಭ­ವಾಗಬೇಕು.

ಇದೆಲ್ಲದರ ಹೊರತಾಗಿ ನಮ್ಮ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಚರಿತ್ರೆಯಿಂದ ಕಲಿ­ಯು­ವುದು ಬಹಳಷ್ಟಿದೆ. ಕನ್ನಡ ಸಂಸ್ಕೃತಿಯ ಬಗ್ಗೆ, ಚರಿತ್ರೆಯ ಬಗ್ಗೆ ಕನ್ನಡಕ್ಕಿಂತ ಚೆನ್ನಾಗಿ ಯಾವ ಭಾಷೆಯಲ್ಲಿ ಓದಿ ತಿಳಿಯಲು ಸಾಧ್ಯ?

ಹಿರಿಯ ಸಾಹಿತಿಯೊಬ್ಬರು ಹೇಳಿದ ಮಾತೊಂದು ಸಮಂಜಸವೆನಿಸುತ್ತದೆ - ‘ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ’.

(ಲೇಖಕರು ಬ್ಯಾಂಕಾಕ್‌ನಲ್ಲಿರುವ ಜರ್ಮನಿ  ಕಂಪೆನಿಯೊಂದರ ಮಾರ್ಕೆಟಿಂಗ್‌ ಮ್ಯಾನೇಜರ್‌)

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT