ADVERTISEMENT

ಚೀನಾ ಬೆಂಬಿಡದ ಟಿಯಾನನ್‌ಮೆನ್ ಭೂತ

ಪ್ರಜಾವಾಣಿ ವಿಶೇಷ
Published 7 ಜೂನ್ 2014, 19:30 IST
Last Updated 7 ಜೂನ್ 2014, 19:30 IST
ಟಿಯಾನನ್‌ಮೆನ್‌ ಚೌಕದಲ್ಲಿ ಪ್ರಜಾಸತ್ತೆ ಪರ ವಿದ್ಯಾರ್ಥಿಗಳು ನಡೆಸುತ್ತಿದ್ದ ಚಳವಳಿ ದಮನಿಸಲು ಸೇನಾ ಟ್ಯಾಂಕ್‌ಗಳಲ್ಲಿ ಸೈನಿಕರು ಬಂದಾಗ ಅವುಗಳನ್ನು ಎದುರಿಸಿ ನಿಂತ ಪ್ರತಿಭಟನಾಕಾರ 	(ಎಪಿ ಚಿತ್ರ)
ಟಿಯಾನನ್‌ಮೆನ್‌ ಚೌಕದಲ್ಲಿ ಪ್ರಜಾಸತ್ತೆ ಪರ ವಿದ್ಯಾರ್ಥಿಗಳು ನಡೆಸುತ್ತಿದ್ದ ಚಳವಳಿ ದಮನಿಸಲು ಸೇನಾ ಟ್ಯಾಂಕ್‌ಗಳಲ್ಲಿ ಸೈನಿಕರು ಬಂದಾಗ ಅವುಗಳನ್ನು ಎದುರಿಸಿ ನಿಂತ ಪ್ರತಿಭಟನಾಕಾರ (ಎಪಿ ಚಿತ್ರ)   

ಚೀನಾದಲ್ಲಿ ಪ್ರಜಾಸತ್ತೆಗೆ ಆಗ್ರಹಿಸಿದ ಯುವಜನರ ವಿರುದ್ಧ 1989ರ ಜೂನ್‌ 3 ಮತ್ತು 4ರಂದು ಟಿಯಾನನ್‌ಮೆನ್‌ ಚೌಕದಲ್ಲಿ ನರಮೇಧ ನಡೆಯಿತು. ಸತ್ತವರ ಅಧಿಕೃತ ಸಂಖ್ಯೆ 25 ವರ್ಷಗಳ ಬಳಿಕವೂ ಬಹಿರಂಗವಾಗಿಲ್ಲ. ಆ ರಕ್ತಸಿಕ್ತ ಅಧ್ಯಾಯವನ್ನು ವಿಶ್ವ ಎಂದೂ ಮರೆಯದು.

ಸುಮಾರು 25 ವರ್ಷಗಳ ಹಿಂದೆ   ಚೀನಾದ ರಾಜಧಾನಿ ಬೀಜಿಂಗ್‌ನ ಹೃದಯ ಭಾಗದಲ್ಲಿರುವ ಟಿಯಾನನ್‌ಮೆನ್‌ ಚೌಕದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಪರ ನಡೆಯುತ್ತಿದ್ದ ವಿದ್ಯಾರ್ಥಿಗಳ ಬೃಹತ್‌ ಚಳವಳಿ ಎರಡನೇ ತಿಂಗಳಿಗೆ ಕಾಲಿಟ್ಟಿತ್ತು.

ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತ ಸಾಗಿದ್ದ  ವಿದ್ಯಾರ್ಥಿ ಚಳವಳಿ ಚೀನಾದ ಕಮ್ಯುನಿಸ್ಟ್‌ ನಾಯಕರ ನಿದ್ದೆಗೆಡಿಸಿತ್ತು. ವಿದ್ಯಾರ್ಥಿಗಳ ಚಳವಳಿಯನ್ನು ಬಗ್ಗು ಬಡಿಯಲೇಬೇಕು ಎಂದು ಹಟಕ್ಕೆ ಬಿದ್ದ ನಾಯಕರು    ಸೇನೆಯ ಹಿರಿಯ ಅಧಿಕಾರಿಗಳಿಗೆ ಬುಲಾವ್‌ ನೀಡಿದರು. ಸೇನಾಬಲ ಪ್ರಯೋಗಿಸಿಯಾದರೂ ಸರಿ ವಿದ್ಯಾರ್ಥಿಗಳನ್ನು ಮಟ್ಟ ಹಾಕುವಂತೆ ಸೇನಾಧಿಕಾರಿಗಳಿಗೆ ಸೂಚಿಸಿದರು. ಆದರೆ, ಒಬ್ಬ ಖಡಕ್‌ ಸೇನಾಧಿಕಾರಿ ಮಾತ್ರ ತಿರುಗಿಬಿದ್ದ. 

ವಿದ್ಯಾರ್ಥಿಗಳ ಮೇಲೆ ಸೇನಾ ಕಾರ್ಯಾಚರಣೆ ಎಷ್ಟು ನ್ಯಾಯಯುತ ಎಂದು ಪ್ರಶ್ನಿಸಿದ ಆ ಅಧಿಕಾರಿ ಸರ್ಕಾರದ ಆದೇಶವನ್ನು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟ. ಚೀನಾ ಭೂಸೇನೆಯ ಬಲಾಢ್ಯವಾದ 38ನೇ ಗ್ರೂಪ್‌ನ ಮೇಜರ್‌ ಜನರಲ್‌ ಕ್ಸು ಕಿನ್‌ಕ್ಸಿಯಾನ್‌ ಆ ದಿಟ್ಟತನ ತೋರಿದ ಅಧಿಕಾರಿ.

‘ವಿದ್ಯಾರ್ಥಿಗಳು ನಡೆಸುತ್ತಿರುವ ಚಳವಳಿ ಸೇನೆಯ ಸಮಸ್ಯೆ ಅಲ್ಲ. ಅದು ರಾಜಕೀಯ ಸಮಸ್ಯೆ. ಸಂಧಾನದ ಮೂಲಕ ಸಮಸ್ಯೆ  ಬಗೆಹರಿಸಿಕೊಳ್ಳಿ. ಸೇನೆಯ ಬಲ ಪ್ರಯೋಗಿಸಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಡಿ’ ಎಂದು ಕ್ಸು ಸಲಹೆ ನೀಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಆತ,  ‘ಮುಂದೊಂದು ದಿನ ಇತಿಹಾಸದಲ್ಲಿ ಅಪರಾಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವ ಬದಲು ಶಿರಚ್ಛೇದಕ್ಕೆ ಒಪ್ಪಿಕೊಳ್ಳುವುದೇ ಒಳಿತು’ ಎಂದು ಸವಾಲು ಒಡ್ಡಿದ.

ಸಂಚಲನ ಸೃಷ್ಟಿಸಿದ ದಿಟ್ಟ ಅಧಿಕಾರಿ
ಕೆಲವೇ ಗಂಟೆಗಳಲ್ಲಿ ಕ್ಸು ಅವರನ್ನು ಬಂಧಿಸಲಾಯಿತು. ಸೇನಾ ದಂಗೆ  ಬಗ್ಗೆ ಪುಕಾರು ಹರಿದಾಡತೊಡಗಿದವು. ಒಟ್ಟಾರೆ ಒಂದೆಡೆ ವಿದ್ಯಾರ್ಥಿಗಳ ಚಳವಳಿ  ಹಾಗೂ ಮತ್ತೊಂದೆಡೆ ಮೇಜರ್‌ ಜನರಲ್‌ ಕ್ಸು ಒಡ್ಡಿದ ಸವಾಲು  ಚೀನಾದ ರಾಜಕೀಯ ಮತ್ತು ಸೇನಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದವು.

ಈ ಮಧ್ಯೆ 1989ರ ಜೂನ್‌ 3 ಮತ್ತು 4ರಂದು ಟಿಯಾನನ್‌ಮೆನ್‌ ಚೌಕದಲ್ಲಿ ಕರಾಳ ಘಟನೆಯೊಂದು ನಡೆದು ಹೋಯಿತು.
ಪ್ರತಿಭಟನಾ ನಿರತ ಸಾವಿರಾರು ವಿದ್ಯಾರ್ಥಿಗಳ ಮೇಲೆ ಸೇನೆ ಮುಗಿಬಿದ್ದಿತು. ಕಾರ್ಯಾಚರಣೆಯಲ್ಲಿ ನೂರಾರು ಜನರು ಬಲಿಯಾದರು. ನರಮೇಧದ ಹಿಂದಿನ ಯಾರಿಗೂ ತಿಳಿಯದ ಕೆಲವು ವಾಸ್ತವ ಸಂಗತಿಗಳನ್ನು  ಕೆಲವು ಮಾಜಿ ಯೋಧರು, ಸೇನಾ  ದಾಖಲೆಗಳು ಹಾಗೂ ಕಮ್ಯುನಿಸ್ಟ್‌  ಪಕ್ಷದ ಆಂತರಿಕ ವಲಯಗಳು ಇತ್ತೀಚೆಗೆ ಬಹಿರಂಗಗೊಳಿಸಿವೆ. ಈ ಘಟನೆಯ ನಂತರ ಹರಡಿದ್ದ ವದಂತಿಗಳನ್ನು ಅಲ್ಲಗಳೆ ಯುವ ಸಂಗತಿಗಳನ್ನು ಸೇನಾ ದಾಖಲೆಗಳು ಬಿಚ್ಚಿಟ್ಟಿವೆ.

ಸೇನಾ ಆಂತರಿಕ ಕಚ್ಚಾಟ ಸುಳ್ಳು
ಅಂದು ಚೀನಾ ಸೇನೆಯ ಕೆಲವು ಗುಂಪುಗಳು ಪರಸ್ಪರ ಘರ್ಷಣೆಗೆ ಇಳಿದಿದ್ದವು ಎಂಬ ಸುದ್ದಿ ಅಪ್ಪಟ ಸುಳ್ಳು. ಆದರೆ, ಮೇಜರ್‌ ಜನರಲ್‌ ಕ್ಸು ಸೇನಾಧಿಕಾರಿಗಳ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದು ಸತ್ಯ ಎಂಬ ವಿಷಯವನ್ನು ಈ ದಾಖಲೆಗಳು ಅನಾವರಣಗೊಳಿಸಿವೆ.
ವಿದ್ಯಾರ್ಥಿಗಳ ಚಳವಳಿ ಸದೆಬಡೆಯಲು ಚೀನಾ ರಾಜಕೀಯ ನಾಯಕರು ಸೇನಾ ಕಾರ್ಯಾಚರಣೆ ನಡೆಸಲು ಮುಂದಾದಾಗ ‘ರಾಜಕೀಯ ಸಂಘರ್ಷದಲ್ಲಿ ಸೇನೆಯನ್ನು ಅನವಶ್ಯವಾಗಿ ಎಳೆದು ತರಲಾಯಿತೇ? ‘ ಎಂಬ ಸಂದೇಹ ಸೇನಾಧಿಕಾರಿಗಳಲ್ಲಿ ಮೂಡಿತ್ತು ಎನ್ನಲಾಗಿದೆ. ಚೀನೀಯರಿಗೆ ದುಃಸ್ವಪ್ನವಾಗಿರುವ ರಕ್ತಸಿಕ್ತ ಹತ್ಯಾಕಾಂಡ ಘಟಿಸಿ ಕಾಲು ಶತಮಾನ ಕಳೆದಿದೆ. ಕರಾಳ ಘಟನೆಯನ್ನು ಚೀನಾದ ಇತಿಹಾಸದ ಪುಟಗಳಿಂದ ತೆಗೆದು ಹಾಕಲು ಚೀನಾ ಆಡಳಿತ ಇಂದಿನವರೆಗೂ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದೆ. ಇಂತಹ ಪ್ರಯತ್ನಗಳ ಹೊರತಾಗಿಯೂ 25 ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದ ಅನೇಕ ಕುತೂಹಲಕಾರಿ, ಹಾಗೂ ರಹಸ್ಯ ಸಂಗತಿಗಳು ಹೊರ ಬರುತ್ತಲೇ ಇವೆ.  ಈಗ ಹೊರಬರುತ್ತಿರುವ ವಾಸ್ತವ  ಘಟನೆಗಳು ಹತ್ಯಾಕಾಂಡದ ಕುರಿತು ಜನರಲ್ಲಿ ಬೇರೂರಿರುವ ಕಲ್ಪನೆ ಹಾಗೂ ನಂಬುಗೆಗಳನ್ನು ಅಳಿಸಿ ವಾಸ್ತವಾಂಶಗಳನ್ನು ತಿಳಿಸಲು ನೆರವಾಗುತ್ತಿವೆ.

ಸೇನೆಯಲ್ಲಿ ಗೊಂದಲ
ಅಂದು ಕಮ್ಯುನಿಸ್ಟ್‌ ಪಕ್ಷದ ಮುಖ್ಯಸ್ಥರಾಗಿದ್ದ  ಡೆಂಗ್‌ ಕ್ಸಿಯೊಪಿಂಗ್‌, ಸಂಕಷ್ಟ ಕಾಲದಲ್ಲಿ ಸೇನೆ ತೋರಿದ ವಿಧೇಯತೆ ಮತ್ತು ನಿಷ್ಠೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.  ಆದರೆ, ಸೇನೆ ಮಾತ್ರ ಭಾರಿ ಗೊಂದಲ ಮತ್ತು ತಳಮಳಕ್ಕೀಡಾಗಿತ್ತು. ಸರ್ಕಾರ ತನಗೆ ವಹಿಸಿದ್ದ  ಅಮಾನವೀಯ ಕಾರ್ಯ ಹಾಗೂ ದಾಳಿಯ ಬಗ್ಗೆ ಸೇನೆಗೆ ಒಳಗೊಳಗೆ ಭಾರಿ ವಿಷಾದವಿತ್ತು.  ‘ಪರಿಸ್ಥಿತಿ ಭಾರಿ ಗೊಂದಲಮಯ ವಾಗಿತ್ತು. ನಮಗೆ ವಹಿಸಿದ್ದ ಪೈಶಾಚಿಕ ಕೃತ್ಯದ ಹಿಂದಿನ ಉದ್ದೇಶದ ಅರಿವು ನಮಗಿರಲಿಲ್ಲ. ಅದನ್ನು ಗ್ರಹಿಸಲು ನಾವು ವಿಫಲರಾದೆವು. ನಮಗೆ ಅರಿವಿಲ್ಲದಂತೆಯೇ ದೊಡ್ಡ ನರಮೇಧವೊಂದಕ್ಕೆ ನಾವು ಸಜ್ಜಾಗಿದ್ದೆವು’ ಎಂದು ಪೀಪಲ್ಸ್‌ ಆರ್ಮ್ಡ್‌ ಪೊಲೀಸ್‌ನ ಕ್ಯಾಪ್ಟನ್‌ ಯಾಂಗ್‌ ಡಿನ್‌ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.

‘ಆ ಸಂದರ್ಭದಲ್ಲಿ ಹಿತೈಷಿಗಳು ಮತ್ತು ಶತ್ರುಗಳ ನಡುವೆ ವ್ಯತ್ಯಾಸ ಗುರುತಿಸುವುದೇ ಕಷ್ಟವಾಗಿತ್ತು. ನಾವು ಯಾರ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂಬ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಒಟ್ಟಾರೆ ಅಸ್ಪಷ್ಟ ಗುರಿಯ ಮೇಲೆ ದಾಳಿಗೆ ನಮ್ಮನ್ನು ಅಣಿಗೊಳಿಸಲಾಗಿತ್ತು’ ಎಂದು ಅವರು ತಳಮಳ ತೋಡಿಕೊಂಡಿದ್ದರು. ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯಕ್ಕೆ ದೊರೆತ ಸೇನಾ ಪುಸ್ತಕದಲ್ಲಿ ಯಾಂಗ್‌ ಅವರು ಈ ಷರಾ ಬರೆದಿದ್ದಾರೆ. ಈ ಷರಾ  ಚೀನಾ ಸೇನೆಯ ಅಂದಿನ ಮನಸ್ಥಿತಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ದಾಳಿಯ ವೇಳೆ ತಮಗೆ ವಹಿಸಿದ ಜವಾಬ್ದಾರಿ ಮತ್ತು ತಮ್ಮ ಪಾತ್ರದ ಬಗ್ಗೆ  ಬಾಯ್ಬಿಡಲು ಮುಂದಾಗಿದ್ದ  ಮಾಜಿ ಸೈನಿಕರು ಮತ್ತು ಅಧಿಕಾರಿಗಳನ್ನು ಸರ್ಕಾರ ಗದರಿಸಿ ಸುಮ್ಮನಿರಿಸಿತ್ತು. ಇದರಿಂದಾಗಿ ಚೀನಾದ ಹೊಸ ಇತಿಹಾಸದಲ್ಲಿ ನಡೆದ ಕರಾಳ ಘಟನೆಯ ಬಗ್ಗೆ ತಿಳಿದುಕೊಳ್ಳುವ ಅವಕಾಶದಿಂದ ಭವಿಷ್ಯದ ಜನಾಂಗ ವಂಚಿತವಾಯಿತು.

ಪಾಪಪ್ರಜ್ಞೆ
‘ವೈಯಕ್ತಿಕವಾಗಿ ನಾನೇನೂ ತಪ್ಪೆಸಗಿಲ್ಲ. ಆದರೆ, ಇಂತಹ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ನಂತರ ಇದೊಂದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂಬ ಭಾವನೆ ನನ್ನಲ್ಲಿ ಮೂಡಿದೆ’ ಎಂದು ಲೀ ಕ್ಸಿಯೊಮಿಂಗ್‌ ಎಂಬ ಯೋಧ ತನ್ನ ಪಾಪಪ್ರಜ್ಞೆ ತೋಡಿಕೊಂಡಿದ್ದಾನೆ.  ಕೆಲವು ಅಧಿಕಾರಿಗಳು ದಾಳಿಯ ನೇರ ಹೊಣೆ ಹೊತ್ತರೇ, ಇನ್ನೂ ಕೆಲವರು ‘ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡಿನ ಮಳೆಗೆರೆಯುವ ಅಗತ್ಯವೇ ಇರಲಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಚೀನಾದ ಪೀಪಲ್ಸ್‌ ಮಿಲಿಟರಿ ಜನರಿಗೆ ಸೇರಿದ್ದೇ ಹೊರತು, ನಾಗರಿಕರ ವಿರುದ್ಧ ಬಳಸಲು ಅಲ್ಲ. ಹೀಗಾಗಿ ಕೂಡಲೇ ಬೀಜಿಂಗ್‌ನಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳಿ’ ಎಂದು ಒತ್ತಾಯಿಸಿ ಏಳು  ಹಿರಿಯ ಸೇನಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಪ್ರಾಣ ಉಳಿಸಬಹುದಿತ್ತು...
‘ಅಂದು ಸೇನೆ ಮನಸ್ಸು ಮಾಡಿದ್ದರೆ ಹಲವರ ಪ್ರಾಣ ಉಳಿಸಬಹುದಿತ್ತು’ ಎನ್ನುವುದು ಸರ್ಕಾರ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ನಡುವೆ ಸಂಧಾನಕ್ಕೆ ಯತ್ನಿಸಿದ್ದ ಸಂಶೋಧಕ ಝಾಂಗ್‌ ಗಾಂಗ್‌ ಅಭಿಮತ. ವಿದ್ಯಾರ್ಥಿಗಳ ಪ್ರತಿಭಟನೆಯ ತೀವ್ರತೆಯನ್ನು ಕಣ್ಣಾರೆ ಕಂಡಿದ್ದ ಗಾಂಗ್‌, ವಿದ್ಯಾರ್ಥಿಗಳನ್ನು ಸದೆ ಬಡಿಯಲು ಸೇನೆಯನ್ನು ಕಳಿಸಿದರೆ ಖಂಡಿತ ರಕ್ತಪಾತವಾಗುತ್ತದೆ. ಇದರಿಂದ ಪೀಪಲ್ಸ್‌ ಲಿಬರೇಷನ್‌ ಆರ್ಮಿಗೆ  ಕೆಟ್ಟ ಹೆಸರು ಬರುತ್ತದೆ’ ಎಂದು ಎಚ್ಚರಿಸಿದ್ದರು.

ಬೀಜಿಂಗ್‌ ಪ್ರವೇಶಿಸಲು ಸ್ಪಷ್ಟವಾಗಿ ನಿರಾಕರಿಸಿದ ಮೇಜರ್‌ ಜನರಲ್‌ ಕ್ಸು ನೇತೃತ್ವದ 38ನೇ ತಂಡದ ಸೇನಾಧಿಕಾರಿಗಳು  ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಗಾಳಿ ಸುದ್ದಿಗಳು ಅಂದು ಸೇನಾ ವಲಯದಲ್ಲಿ ಹರಡಿದ್ದವು. ಇದಕ್ಕೆ ಪ್ರತಿಯಾಗಿ ‘ಕ್ಸು ಅವಿಧೇಯತೆ ಖಂಡಿಸಿದ  ಸೇನಾಧಿಕಾರಿಗಳು  ಸೇನೆಗೆ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ’ ಎಂಬ ಸುದ್ದಿಗಳನ್ನು ಹರಿಬಿಡಲಾಗಿತ್ತು.
ಮೇಜರ್‌ ಕ್ಸು ಒಬ್ಬರೇ ಅಲ್ಲ, ಕರ್ನಲ್‌ ವಾಂಗ್‌ ಡಾಂಗ್‌ ಕೂಡಾ ಸೇನಾ ಕಾನೂನು ಹೇರಲು ಭಾರಿ ವಿರೋಧ ವ್ಯಕ್ತಪಡಿಸಿದ್ದರು.

ನೂರು ಕಥೆ, ಸಾವಿರ ವ್ಯಾಖ್ಯಾನ
ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸೇನೆಯ ಆಂತರಿಕ ವಲಯದಲ್ಲಿ ನಡೆದ  ಬೆಳವಣಿಗೆ ಮತ್ತು ರಹಸ್ಯ ಚಟುವಟಿಕೆಗಳ ಬಗ್ಗೆ ಸೇನೆಯ ದಾಖಲೆಗಳು ವಿಭಿನ್ನ ಕಥೆಗಳನ್ನು ಹೇಳುತ್ತವೆ. ಅವುಗಳ ವಿಶ್ವಾಸಾರ್ಹತೆ ಇನ್ನೂ ಸಾಬೀತಾಗಿಲ್ಲ.  ಸೇನೆಯ ಹಿರಿಯ ಅಧಿಕಾರಿಗಳ ಜತೆ ನಿಕಟ ಸಂಪರ್ಕ ಹೊಂದಿದ ಝಾಂಗ್‌, ಕರ್ನಲ್‌ ವಾಂಗ್‌ ಡಾಂಗ್‌ ಜತೆ ನಡೆಸಿದ  ದೂರವಾಣಿ ಸಂಭಾಷಣೆ ವಿವರ ಹಾಗೂ ಕೆಲವು ಹೆಸರುಗಳನ್ನು ಬರೆದಿಟ್ಟುಕೊಂಡು ತಮ್ಮ ಗೆಳೆಯರಿಗೆ ನೀಡಿದ್ದರು. ಪ್ರಜಾಪ್ರಭುತ್ವ ಪರ ಚಳವಳಿಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ   ಗುಂಪಿನ ಮೇಲೆ ನಡೆದ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದ ಅನೇಕ ರಹಸ್ಯ ಮಾಹಿತಿಗಳು ಹೀಗೆ ಝಾಂಗ್‌ ಮಿತ್ರರಿಂದ ಬಹಿರಂಗಗೊಂಡು ಹರಿದಾಡುತ್ತಿವೆ. ಹೊಸ ವಿವಾದಗಳನ್ನು ಹುಟ್ಟು ಹಾಕುತ್ತಿವೆ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.