ರಾಕ್‌ಲೈನ್ ವೆಂಕಟೇಶ್ ತುಂಬಾ ಶ್ರದ್ಧಾವಂತ ನಿರ್ಮಾಪಕ. ಸಿನಿಮಾ ಕಥೆ ಏನು ಎಂದು ಅವರು ಎರಡು ಪುಟಗಳಲ್ಲಿ ಅಚ್ಚುಕಟ್ಟಾಗಿ ಬರೆದುಕೊಟ್ಟಿದ್ದು ನನಗೆ ಈಗಲೂ ಕಣ್ಣಿಗೆ ಕಟ್ಟಿದಹಾಗಿದೆ. ‘ಸುಂದರೆ ವಸುಂಧರೆ’ ಹಾಡು ಅದ್ಭುತವಾಗಿ ಮೂಡಿಬರಲು ಕೂಡ ಅವರೇ ಕಾರಣ. ನನ್ನನ್ನು ಹಾಗೂ ಹಂಸಲೇಖ ಅವರನ್ನು ರುಬ್ಬಿ ರುಬ್ಬಿ ಆ ಹಾಡನ್ನು ಅವರು ಹೊರತೆಗೆಸಿದ್ದರು. ನಿರ್ದೇಶಕರ ಪಾಲಿಗೆ ರಾಕ್‌ಲೈನ್ ನಿರ್ಮಾಣದ ಸಿನಿಮಾ ಮಾಡುವುದು ಒಂದು ‘ದೇವರ ವರ’.
ಕುಲುಮನಾಲಿಗೆ ಹೊರಡಲು ನಾವು ಸಿದ್ಧರಾಗುತ್ತಿದ್ದಾಗ ಅವರು ನನ್ನ ಸಹಾಯಕ ನಿರ್ದೇಶಕರನ್ನೆಲ್ಲಾ ಕರೆಸಿದರು. ‘ಏನೇನು ಪರಿಕರಗಳು, ವಸ್ತುಗಳು ಬೇಕೋ ಎಲ್ಲವನ್ನೂ ಪಟ್ಟಿ ಮಾಡಿ ಕೊಡಿ’ ಎಂದು ಕೇಳಿದರು. ನಾವು ಅವನ್ನೆಲ್ಲಾ ಮ್ಯಾನೇಜ್ ಮಾಡುತ್ತೇವೆ ಎಂದು ನಾನು ಹೇಳಿದರೂ ಅವರು ಕೇಳದೆ, ತಾವೇ ಪಟ್ಟಿಯನ್ನು ಪಡೆದುಕೊಂಡರು. ಯಾವ ವಸ್ತುವಿಗೂ ಕೊರತೆ ಆಗಕೂಡದು ಎಂದು ಎಚ್ಚರ ವಹಿಸಿದರು.
ಕುಲುಮನಾಲಿಗೆ ಒಂದು ಲಾರಿ ಲೋಡ್ ವಸ್ತುಗಳನ್ನು ಕಳುಹಿಸಿಕೊಟ್ಟರು. ಕೆಲವು ನಿರ್ಮಾಪಕರು ಕೇಳಿದ್ದನ್ನು ಒದಗಿಸದೆ, ಈಗ ಬರುತ್ತದೆ ಆಗ ಬರುತ್ತದೆ ಎಂದು ಸುಳ್ಳು ಹೇಳಿಕೊಂಡು ಹೇಗೋ ಸಿನಿಮಾ ಮಾಡಿಸುತ್ತಾರೆ. ಅಂಥವರ ಕೈಗೆ ಸಿಲುಕುವ ನಿರ್ದೇಶಕರ ಕಥೆ ದೇವರಿಗೇ ಪ್ರೀತಿ. ಪುಣ್ಯಕ್ಕೆ ನನಗೆ ಅಂಥ ಅನುಭವ ಆಗಲಿಲ್ಲ. ನನ್ನ ಸುಮಾರು ಶೇ 95ರಷ್ಟು ಸಿನಿಮಾಗಳ ನಿರ್ಮಾಪಕ ನಾನೇ ಆಗಿದ್ದೆ. ನನಗೆ ಸಿಕ್ಕ ಬೇರೆ ನಿರ್ಮಾಪಕರು ಕೂಡ ಸಜ್ಜನರೇ. ಅದರಲ್ಲೂ ರಾಕ್‌ಲೈನ್ ಅವರ ಶಿಸ್ತು, ಶ್ರದ್ಧೆಗೆ ಸಾಟಿಯಾಗುವ ನಿರ್ಮಾಪಕರು ಅತಿ ವಿರಳ. ಅದಕ್ಕೇ ಅವರು ಭಾರತದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿ ಬೆಳೆದಿರುವುದು.
‘ಹಿಮಪಾತ’ ಸಿನಿಮಾಗೆ ಅದ್ದೂರಿ ಮುಹೂರ್ತ ಮಾಡಬೇಕು ಎಂದು ರಾಕ್‌ಲೈನ್ ನಿರ್ಧರಿಸಿದರು. ರಾಜ್‌ಕುಮಾರ್, ಚಿರಂಜೀವಿ ಇಬ್ಬರನ್ನೂ ಅತಿಥಿಗಳಾಗಿ ಕರೆಸಬೇಕು ಎಂದು ಅವರಿಗೆ ಆಸೆ. ನಾನು, ಅವರು ಹೈದರಾಬಾದ್‌ಗೆ ಹೋದೆವು. ಚಿರಂಜೀವಿ ನನಗೆ ಬಹಳ ಹಿಂದಿನಿಂದ ಪರಿಚಿತರು. ‘ಅಂತ’ ಸಿನಿಮಾ ತೆಲುಗಿಗೆ ಆದಲ್ಲಿ ಅವರೇ ನಾಯಕರಾಗಬೇಕು ಎಂದು ನಾನು ಬಯಸಿದ್ದೆ. ಆಮೇಲೆ ಕೃಷ್ಣ ನಾಯಕರಾಗಿ ಆ ಸಿನಿಮಾ ಬಂದಿತು. ಅದನ್ನು ನಿರ್ದೇಶಿಸುವಂತೆ ನನಗೆ ಆಹ್ವಾನ ಬಂದಿತ್ತಾದರೂ, ಚಿರಂಜೀವಿ ನಾಯಕನಾದರೆ ಮಾತ್ರ ನಿರ್ದೇಶಿಸುವುದಾಗಿ ಪಟ್ಟು ಹಿಡಿದಿದ್ದೆ. ಈ ವಿಷಯ ಚಿರಂಜೀವಿಗೂ ಗೊತ್ತಿತ್ತು. ಅಲ್ಲಿಂದ ನಮ್ಮ ಸ್ನೇಹ ಗಟ್ಟಿಗೊಂಡಿತ್ತು. ಆಮೇಲೆ ಅವರಿಗೆ ಎರಡು ಮೂರು ಕಥೆಗಳನ್ನು ಹೇಳಿದ್ದೆನಾದರೂ ಸಿನಿಮಾ ಮಾಡುವ ಅವಕಾಶ ಒದಗಿಬರಲಿಲ್ಲ. ನಾವು ಹೋಗಿ ಕರೆದ ತಕ್ಷಣ ಅವರು ಮುಹೂರ್ತಕ್ಕೆ ಬರಲು ಒಪ್ಪಿಕೊಂಡರು.
ರಾಜ್‌ಕುಮಾರ್ ಅವರಂತೂ ಒಂದೇ ಮಾತಿಗೆ ಒಪ್ಪಿಕೊಂಡರು. ನಾವು ಸಿನಿಮಾ ರಂಗದ ಸಮಸ್ಯೆಗಳ ಕುರಿತು ಚರ್ಚಿಸಲು ಆಗಾಗ ಅವರ ಮನೆಗೆ ಹೋಗುತ್ತಿದ್ದೆವು. ಅವರು ನಮ್ಮನ್ನೆಲ್ಲಾ ಅಗಲಿ ಹೋದ ಕೆಲವು ದಿನಗಳ ಮುಂಚೆಯಷ್ಟೆ ನಾನು, ರಾಕ್‌ಲೈನ್ ಅವರ ಮನೆಗೆ ಹೋಗಿದ್ದೆವು. ಆಗ ನಾಟಿಕೋಳಿ ಸಾರು, ಮುದ್ದೆಯ ಊಟ ಹಾಕಿಸಿ ಪ್ರೀತಿಯಿಂದ ಮಾತನಾಡಿದ್ದರು. ಬಹಳ ಹೊತ್ತು ಬಿಗಿಯಾಗಿ ಅಪ್ಪಿಕೊಂಡರು. ತಮಗಿಷ್ಟವಾದವರನ್ನು ಅವರು ಬಿಗಿಯಾಗಿ ಅಪ್ಪಿಕೊಂಡು ಮಗುವಿನಂತೆ ಆಗಿಬಿಡುತ್ತಿದ್ದರು. ಅಂಥ ಅಪ್ಪುಗೆಯನ್ನು ಅವರು ‘ಆತ್ಮಮಿಲನ’ ಎಂದು ಕರೆಯುತ್ತಿದ್ದರು. ಆ ಮಾತನ್ನು ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
‘ಹಿಮಪಾತ’ ಸಿನಿಮಾ ಮುಹೂರ್ತಕ್ಕೆ ರಾಜ್‌ಕುಮಾರ್, ಚಿರಂಜೀವಿ ಅತಿಥಿಗಳು. ಕಂಠೀರವ ಸ್ಟುಡಿಯೊದಲ್ಲಿ ತಾರಾಮೇಳ. ಇಬ್ಬರು ಘಟಾನುಘಟಿ ಅತಿಥಿಗಳಲ್ಲದೆ ವಿಷ್ಣುವರ್ಧನ್, ಸುಹಾಸಿನಿ, ಜಯಪ್ರದ ಎಲ್ಲರೂ ಕಣ್ಣುಕೋರೈಸಿದವರೇ. ಸುದ್ದಿಮಿತ್ರರಿಗೆ ಆ ದಿನ ಹಬ್ಬ. ಆ ಮುಹೂರ್ತದ ಸಂಭ್ರಮದ ಹಲವು ಫೋಟೊಗಳು ರಾರಾಜಿಸಿದವು.
ನನ್ನ ಬಳಿ ಇದ್ದ ಒಂದು ಫೋಟೊವನ್ನು ದೊಡ್ಡದಾಗಿ ಮಾಡಿಸಿ, ಫ್ರೇಮ್ ಹಾಕಿಸಿ ಇಟ್ಟುಕೊಂಡಿದ್ದೇನೆ. ಅದರಲ್ಲಿ ರಾಜ್, ಚಿರಂಜೀವಿ, ನಾನು, ವಿಷ್ಣು ಇದ್ದೇವೆ. ಆ ಫೋಟೊ ನೋಡಿದರೆ ರಾಜ್, ವಿಷ್ಣು ನೆನಪು ಒತ್ತಿಕೊಂಡು ಬಂದು, ನೋವಾಗುತ್ತದೆ. ಜೀವನದಲ್ಲಿ ನಮಗೆ ತುಂಬಾ ಹತ್ತಿರವಿದ್ದವರೂ ಎಷ್ಟು ಬೇಗ ದೂರವಾಗಿಬಿಡುತ್ತಾರೆ ಎಂಬ ದುಃಖ ಅದು.
ವಿಷ್ಣು ಅಭಿನಯದಲ್ಲಿ ‘ತೆರೆಯೋ ಮಂಜಿನ ತೆರೆಯಾ’ ಹಾಡನ್ನು ಚಿತ್ರೀಕರಿಸಿಕೊಂಡು ನಾವು ಕುಲುಮನಾಲಿಗೆ ಹೊರಟೆವು. ಅಲ್ಲಿಯೂ ವಿಮಾನಗಳ ಸಮಸ್ಯೆ. ಚಿಕ್ಕ ಚಿಕ್ಕ ವಿಮಾನಗಳಷ್ಟೇ ಅಲ್ಲಿಗೆ ಹೋಗುತ್ತಿದ್ದುದು. ಬೇಕಾದ ಪರಿಕರ, ವಸ್ತುಗಳನ್ನು ರಸ್ತೆಯ ಮೂಲಕವೇ ಅಲ್ಲಿಗೆ ತಲುಪಿಸಿದ್ದೆವು. 125 ಜನರ ದೊಡ್ಡ ಯೂನಿಟ್. ರಾಕ್‌ಲೈನ್ ವೆಂಕಟೇಶ್ ಅವರ ಶಿಷ್ಯರ ದಂಡೇ ರಾತ್ರಿ-ಹಗಲು ಕೆಲಸ ಮಾಡಿ, ನಮ್ಮ ಅಗತ್ಯಗಳನ್ನು ಪೂರೈಸಿತ್ತು.
ರಾಕ್‌ಲೈನ್ ಅವರ ಪಟ್ಟ ಶಿಷ್ಯ ಸುಧಾಕರ ಹಾಗೂ ಪ್ರಕಾಶ ನಮ್ಮ ಜೊತೆಯಲ್ಲಿ ಇದ್ದು, ಬೇಕಾದುದೆಲ್ಲವನ್ನೂ ಒದಗಿಸಿಕೊಟ್ಟರು. ಸುಧಾಕರ ಅವರನ್ನು ಹಿಟ್ಲರ್ ಅಂತ ಪ್ರೀತಿಯಿಂದ ಕರೆಯುತ್ತಾ ಇದ್ದೆವು. ತಾಕೀತು ಮಾಡಿ ಕೆಲಸ ತೆಗೆಸಬಲ್ಲ ಜಾಣ್ಮೆ ಅವರಿಗಿತ್ತು. ಬೆಂಗಳೂರಿನಿಂದಲೇ ಅಡುಗೆ ಭಟ್ಟರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆವು. ಹೊರಗೆ ಎಲ್ಲಾದರೂ ಚಿತ್ರೀಕರಣವಾದರೆ ವಿಷ್ಣುವಿಗೆ ಆಗಾಗ ಮಾಂಸಾಹಾರದ ಊಟ ಬೇಕಾಗುತ್ತಿತ್ತು. ಎಲ್ಲರ ಕೋಣೆಗೆ ಊಟದ ಕ್ಯಾರಿಯರ್ ಸಿದ್ಧಪಡಿಸಿ ಸುಧಾಕರ್ ಹೊತ್ತು ಹೊತ್ತಿಗೆ ಸರಿಯಾಗಿ ತಲುಪಿಸುತ್ತಿದ್ದರು.
ಪ್ರತಿ ಕ್ಯಾರಿಯರ್ ಮೇಲೂ ಅದು ಯಾರಯಾರದ್ದು ಎಂದು ಹೆಸರು ಬರೆದು ಚೀಟಿ ಅಂಟಿಸಿರುತ್ತಿದ್ದರು. ಒಂದು ರೀತಿ ಮಿಲಿಟರಿ ಪದ್ಧತಿ. ಎಲ್ಲರೂ ಬೇಗ ಮಲಗಿ, ಬೆಳಿಗ್ಗೆ ನಾಲ್ಕು ಗಂಟೆಗೆ ಏಳಬೇಕು ಎಂದು ಸುಧಾಕರ್ ತಮ್ಮದೇ ಧಾಟಿಯಲ್ಲಿ ಹೇಳುತ್ತಿದ್ದರು. ಯಾರಾದರೂ ಮಿಸುಕಾಡಿದರೆ ಸುಧಾಕರ್ ತಮ್ಮದೇ ಸಂಸ್ಕೃತ ಭಾಷೆಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರ ನಿಷ್ಠುರ ಧೋರಣೆ ಕೆಲವರಿಗೆ ಹಿಡಿಸುತ್ತಾ ಇರಲಿಲ್ಲ. ಆದರೆ ಅವರ ಸ್ವಾಮಿನಿಷ್ಠೆ ಎಂಥದು ಎನ್ನುವುದನ್ನು ನಾನು ಬಲ್ಲೆ. ಹೃದಯದಿಂದ ಅವರು ಒಳ್ಳೆಯವರು.
ರೋಹ್ತಾಂಗ್ ಪಾಸ್‌ನಲ್ಲಿ ಮೊದಲ ದಿನದ ಚಿತ್ರೀಕರಣ ನಿಗದಿಯಾಗಿತ್ತು. ಕುಲುಮನಾಲಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿ ಇದ್ದ ಜಾಗ ಅದು. ಆ ಮಾರ್ಗದಲ್ಲಿ ಕಾರು ಜಾರಿದರೆ ಪ್ರಪಾತಕ್ಕೆ ಬಿದ್ದಂತೆ ಆಗುತ್ತಿತ್ತು. ವಿಷ್ಣು ಅಂತೂ ‘ನಮ್ಮನ್ನು ಸ್ವರ್ಗಕ್ಕೆ ಕಳುಹಿಸಲು ಕರೆದುಕೊಂಡು ಬಂದಿದ್ದೀಯಾ?’ ಎಂದು ಕೋಪದಿಂದ ಕೇಳಿದ್ದ. ಆ ದಿನ ಬರೀ ಹಿಮಪಾತದ ದೃಶ್ಯಗಳ ಚಿತ್ರೀಕರಣ. ಕೆಲವು ಬುಲೆಟ್‌ಗಳಿಂದ ಅವನ ಮೇಲೆ ಮಂಜನ್ನು ಸಿಡಿಸಿ, ಆ ದೃಶ್ಯಗಳನ್ನು ಹಿಮಪಾತದಂತೆ ತೋರಿಸುವ ಯೋಜನೆ ರೂಪಿಸಿಕೊಂಡಿದ್ದೆವು.
ಇಂಗ್ಲಿಷ್ ಸಿನಿಮಾದ ಹಿಮಪಾತದ ಕೆಲವು ದೃಶ್ಯಗಳನ್ನು ಡ್ಯೂಪ್ ಮಾಡಿ ತರಿಸಿದ್ದೆವು. ಆ ಶಾಟ್‌ಗಳಿಗೆ ತಂತ್ರಜ್ಞಾನದಿಂದ ಹೊಂದಾಣಿಕೆ ಮಾಡಿ, ಇನ್ನಷ್ಟು ಶಾಟ್‌ಗಳನ್ನು ಚಿತ್ರೀಕರಿಸುವುದು ನಮ್ಮ ಉದ್ದೇಶವಾಗಿತ್ತು. ಜಯಪ್ರದ, ಸುಹಾಸಿನಿ ಬಂದಿರಲಿಲ್ಲ. ವಿಷ್ಣು ಒಬ್ಬನಿಂದಲೇ ಕೆಲಸ ತೆಗೆಸಬೇಕಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಹಿಮಪಾತದಲ್ಲಿ ಬೀಳುವ ದೃಶ್ಯಗಳನ್ನು ಚಿತ್ರೀಕರಿಸಬೇಕು ಎಂದು ತೀರ್ಮಾನಿಸಿದ್ದೆವು.
‘ಡ್ಯೂಪ್’ ಇಲ್ಲದೆ ಅಭಿನಯಿಸಲು ಅವನು ಸಿದ್ಧನಾಗಿದ್ದ. ಮೊದಲೇ ನನಗೆ ‘ಟಾರ್ಚರ್ ಡೈರೆಕ್ಟರ್’ ಎಂದು ಹೆಸರು ಕೊಟ್ಟಿದ್ದ ಅವನು, ನನ್ನ ಸಹಾಯಕ ನಿರ್ದೇಶಕರನ್ನೆಲ್ಲಾ ಬಾಯಿಗೆ ಬಂದಹಾಗೆ ಬೈದ. ಅವರೆಲ್ಲಾ ಅವನನ್ನು ಪುಸಲಾಯಿಸಿ ಕೆಲಸ ಮಾಡಿಸುವುದು ಹೇಗೆ ಎಂದು ಅರಿತಿದ್ದರು.
ರೋಹ್ತಾಂಗ್ ಪಾಸ್ ಪ್ರಪಂಚದ ಅತಿ ಎತ್ತರದ ರಸ್ತೆ ಇರುವ ಜಾಗ. ಬೇಗ ಕೆಲಸ ಮುಗಿದರೆ ಸಾಕು ಎಂಬ ಒತ್ತಡದಲ್ಲಿ ನಾನು ಸಮಯ ಎಷ್ಟೆಂದು ನೋಡಿರಲಿಲ್ಲ. ‘ಅದೇನು ಬೇಕೋ ಎಲ್ಲವನ್ನೂ ಇವತ್ತೇ ಶೂಟ್ ಮಾಡಿಕೋ. ಮತ್ತೆ ಇಲ್ಲಿಗೆ ಕರೆದುಕೊಂಡು ಬಂದು ಗೋಳು ತಿನ್ನಬೇಡ’ ಎಂದು ವಿಷ್ಣು ಕೋಪದಲ್ಲಿ ಹೇಳಿಬಿಟ್ಟಿದ್ದ. ಅವನ ಮುಖದಲ್ಲಿ ಮಾತ್ರ ಕೋಪ ಇರುತ್ತಿತ್ತು. ಹೃದಯವಂತೂ ಮೃದು.
ಚಿತ್ರೀಕರಣ ನಡೆಯುವ ಪ್ರದೇಶಕ್ಕೆ ರಾಕ್‌ಲೈನ್ ವೆಂಕಟೇಶ್ ಕೂಡ ಬಂದಿದ್ದರು. ನಾವು ಎತ್ತರದ ಜಾಗದಲ್ಲಿ ಇದ್ದೆವು. ಅವರು ಕೆಳಗೆ ಇದ್ದರು. ಕೆಲಸದಲ್ಲಿ ನಿರತರಾಗಿದ್ದ ನಾವು, ಸ್ವಲ್ಪ ಹೊತ್ತಿನ ನಂತರ ಅವರಿದ್ದ ಕಡೆ ಕಣ್ಣಾಡಿಸಿದರೆ ಕಾಣಲೇ ಇಲ್ಲ. ಹಿಮ ಕವಿದು ಅವರು ಎಲ್ಲೋ ಮರೆಯಾಗಿದ್ದರು. ಇನ್ನೆರಡು ಶಾಟ್‌ಗಳ ಚಿತ್ರೀಕರಣ ಬಾಕಿ ಇತ್ತು. ರಾಕ್‌ಲೈನ್ ಬಂದವರೇ ಕೋಪದಿಂದ ಕುದಿಯುತ್ತಿದ್ದರು.
‘ಶೂಟಿಂಗ್ ಪ್ಯಾಕಪ್ ಮಾಡಿ. ಇಲ್ಲಿ ಮನುಷ್ಯ ಇರೋದಕ್ಕೆ ಆಗೋದಿಲ್ಲ. ಹಿಮದಲ್ಲಿ ಜನ ಮರೆಯಾಗಿಬಿಡುತ್ತಾರೆ. ನಾನೂ ಕಳೆದುಹೋಗಿದ್ದೆ’ ಎಂದು ಆತಂಕದಲ್ಲಿ ಹೇಳಿದರು. ಕೊನೆಗೂ ಕೆಲಸ ಮುಗಿಸಿ, ಪ್ಯಾಕಪ್ ಹೇಳಿ ಹೊರಟೆ. ಎಲ್ಲರೂ ಕಾರ್‌ನ ಹತ್ತಿರ ಬರುವವರೆಗೆ ನಮಗೆ ಜೀವದಲ್ಲಿ ಜೀವ ಇರಲಿಲ್ಲ.
ಮತ್ತೆ 50 ಕಿ.ಮೀ. ಪ್ರಯಾಣ. ಆ ಹಾದಿಯಲ್ಲಿ ಕಾರು ಜಾರಿ ಹಿಮದ ನಡುವೆ ಸಿಲುಕಿಕೊಳ್ಳುವುದು ಸಹಜ ಎನ್ನುವಂತೆ ಅನೇಕರು ಮಾತನಾಡುತ್ತಿದ್ದರು. ನಾವು ಹೋಗುತ್ತಿದ್ದ ಕಾರಿನ ಡ್ರೈವರ್ ಅಂತೂ ಯಾರೋ ಹದಿನೈದು ಜನ ಅಂಥ ಅಪಘಾತದಲ್ಲಿ ಸತ್ತ ಘಟನೆಯನ್ನೇ ಪದೇಪದೇ ಹೇಳಿ, ನಮ್ಮ ಭಯವನ್ನು ಹೆಚ್ಚಿಸುತ್ತಿದ್ದ. ನಾನು, ವಿಷ್ಣು ಬೇರೆ ಏನನ್ನಾದರೂ ಮಾತನಾಡುವಂತೆ ಅವನಿಗೆ ತಾಕೀತು ಮಾಡಿದೆವು. ಕುಲುಮನಾಲಿ ತಲುಪಿದ ಮೇಲೆ ನಾವೆಲ್ಲಾ ನೆಮ್ಮದಿಯ ನಿಟ್ಟುಸಿರಿಟ್ಟೆವು.
ನಾವು ತಲುಪುವ ಹೊತ್ತಿಗೆ ಜಯಪ್ರದ ಬಂದಿದ್ದರು. ಅವರನ್ನು ಸ್ವಾಗತಿಸಿ, ಕುಶಲೋಪರಿ ಮಾತನಾಡಿದೆವು. ಜಯಪ್ರದ ಜೊತೆಗೆ ಅವರ ಅಕ್ಕ ಕೂಡ ಬಂದಿದ್ದರು. ಅವರು ತುಂಬಾ ಸುಂದರವಾಗಿದ್ದರು. ವಿಷ್ಣು ಅವರನ್ನು ತಮಾಷೆಯಾಗಿ ಮಾತನಾಡಿಸುತ್ತಿದ್ದ. ಜಯಪ್ರದ ಅವರಿಗೆ ರೋಹ್ತಾಂಗ್ ಪಾಸ್ ಅನುಭವವನ್ನು ಹೇಳಿ, ನನ್ನನ್ನು ‘ಟಾರ್ಚರ್ ಡೈರೆಕ್ಟರ್’ ಎಂದು ತನ್ನದೇ ಶೈಲಿಯಲ್ಲಿ ಹೊಸದಾಗಿ ಪರಿಚಯ ಮಾಡಿಕೊಟ್ಟ.
‘ನಾಳೆ ಅಲ್ಲಿ ನಿಮ್ಮ ಶೂಟಿಂಗ್’ ಎಂದು ಜಯಪ್ರದಗೆ ತಮಾಷೆ ಮಾಡಿದ. ಅವರ ಅಕ್ಕನ ಬಳಿಗೆ ಹೋಗಿ ‘ಹೈದರಾಬಾದ್‌ನಿಂದ ತಿನ್ನಲು ಏನೇನು ತಂದಿದ್ದೀರಾ?’ ಎಂದು ಕೇಳಿದ. ಗೋಂಗುರ ಇತ್ಯಾದಿ ಖಾರದ ಪುಡಿಗಳನ್ನು ಅವರು ತಂದಿದ್ದರು. ಸುಧಾಕರ ತಂದುಕೊಡುತ್ತಿದ್ದ ಡಬ್ಬಿಯನ್ನು ಡೈನಿಂಗ್ ಹಾಲ್‌ಗೆ ತೆಗೆದುಕೊಂಡು ಹೋಗಿ, ಆ ಖಾರದ ಪುಡಿಗಳನ್ನು ನೆಂಚಿಕೊಂಡು ನಾವು ತಿನ್ನುತ್ತಿದ್ದೆವು. ರಾತ್ರಿ ಕಷ್ಟ-ಸುಖ ಮಾತನಾಡಿ ಬೆಳಿಗ್ಗೆ ಚಿತ್ರೀಕರಣಕ್ಕೆ ಸಿದ್ಧವಾಗುತ್ತಾ ಇದ್ದೆವು. ವಿಷ್ಣು ರೂಮ್‌ನಲ್ಲೇ ನಾನು ಮಲಗುತ್ತಾ ಇದ್ದುದು. ನಾಲ್ಕು ಗಂಟೆಗೆ ಎದ್ದು ನನ್ನ ರೂಮ್‌ಗೆ ಹೋಗಿ ಸಿದ್ಧನಾಗುತ್ತಿದ್ದೆ.
ಮರುದಿನ ರೋಹ್ತಾಂಗ್ ಪಾಸ್‌ನಲ್ಲಿ ಹಾಡಿನ ಚಿತ್ರೀಕರಣ. ‘ಗೌರಿಶಂಕರ ... ಶಿವನಿಗೂ ಪಾರ್ವತಿಗೂ’ ಹಾಡಿನ ಚಿತ್ರೀಕರಣವನ್ನು ಸಂಜೆಯವರೆಗೆ ಮಾಡಿಕೊಂಡು ಮತ್ತೆ ರೂಮ್ ತಲುಪಿದೆವು. ಅಲ್ಲಿ ಹೋಟೆಲ್‌ನ ಮ್ಯಾನೇಜರ್ ಆಯುರ್ವೇದದ ವಿಶೇಷ ಸೋಮರಸ ಸಿಗುತ್ತದೆ ಎಂದು ಹೇಳಿದ. ಹಿಮಾಚಲಪ್ರದೇಶದಲ್ಲಿ ತಯಾರಿಸುವ ಗಿಡಮೂಲಿಕೆಗಳ ಆ ಸೋಮರಸ ಬೇರೆ ಎಲ್ಲೂ ಸಿಗುವುದಿಲ್ಲ ಎಂದಾಗ ನಮಗೆ ಕುತೂಹಲ ಹೆಚ್ಚಾಯಿತು. ಅದರ ರುಚಿ ಹೇಗಿರಬಹುದು ನೋಡಿಯೇಬಿಡೋಣ ಎಂದುಕೊಂಡು ತರಿಸಿದೆವು. ಆ ಹರ್ಬಲ್ ಬಿಯರ್ ಬಹಳ ರುಚಿಯಾಗಿತ್ತು. ಒಂದು ಟಿನ್ ಅನ್ನು ಜಯಪ್ರದ ಅವರ ಅಕ್ಕನಿಗೂ ತರಿಸಿ ಕೊಟ್ಟೆವು. ಮಾತಿನ ಮಧ್ಯೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ರಾತ್ರಿ 11.30 ಗಂಟೆ ಆಯಿತು. ಮರುದಿನ ಸುಹಾಸಿನಿ ಬರುತ್ತಾರೆ. ಆಗ ಫುಲ್ ಯೂನಿಟ್ ಇರುತ್ತದೆ ಎಂದು ನಾವು ಮಾತಾಡಿಕೊಂಡೆವು.
ಜಯಪ್ರದ ಅವರ ಅಕ್ಕ ಹಾಗೂ ಜಯಪ್ರದ ಮಲಗಲು ಹೋದರು. ನಾವು ಕೂಡ ಮಲಗಲು ಸಿದ್ಧರಾಗುತ್ತಿದ್ದೆವು. ಆಗ ಯಾರೋ ರೂಮ್‌ನ ಕದ ತಟ್ಟಿದ ಹಾಗಾಯಿತು. ಬಾಗಿಲು ತೆರೆದು ನೋಡಿದರೆ ಸುಧಾಕರ. ‘ಸಾರ್ ಮದ್ರಾಸ್‌ನಲ್ಲಿ ಮಣಿರತ್ನಂ ಅವರ ಮನೆಗೆ ಬಾಂಬ್ ಬಿದ್ದಿದೆಯಂತೆ’ ಎಂದ. ನಾವು ನಿಂತಿದ್ದ ನೆಲವೇ ಕಂಪಿಸಿದ ಹಾಗಾಯಿತು.
ಮುಂದಿನ ವಾರ: ಮತ್ತೆ ಮೂರು ಬಾಂಬ್ ಸಿಡಿಸಿದ ಸುಹಾಸಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.