ದೆಹಲಿ ವಿಧಾಸಭಾ ಚುನಾವಣೆಯಲ್ಲಿ ವಾಯು ಮಾಲಿನ್ಯವು ಒಂದು ವಿಷಯವೇ ಆಗಿಲ್ಲ ಏಕೆ? ಸಾಮಾನ್ಯವಾಗಿ ಕುತೂಹಲ ವ್ಯಕ್ತಪಡಿಸುವುದಕ್ಕಿಂತ ಕಳವಳವನ್ನು ತೋರಿಸಲು ಈ ಪ್ರಶ್ನೆಯನ್ನು ಕೇಳಲಾಗುತ್ತದೆ. ರಾಜಕೀಯ ಆರೋಪ–ಪ್ರತ್ಯಾರೋಪಗಳ ಹೊಂಜುವಿನಲ್ಲಿ ಈ ಪ್ರಶ್ನೆಯ ಉತ್ತರವು ಕಳೆದು ಹೋಗಿದೆ. ಎಲ್ಲಕ್ಕಿಂತ ಮುಖ್ಯವಾಗಿದ್ದ ಈ ಪ್ರಶ್ನೆಯ ಪ್ರಸ್ತಾಪವನ್ನೇ ಮಾಡದೆ ದೆಹಲಿ ಚುನಾವಣಾ ಪ್ರಚಾರವು ಮುಗಿದು ಹೋಗಿದೆ. ಗಂಭೀರ ಸಮಸ್ಯೆ ಎಂಬಂತೆ ನಾವಿದನ್ನು ನೋಡಬೇಕಿದೆ. ಹಾಗೆ ಮಾಡಿದಾಗ, ಇದು ನಮ್ಮನ್ನು ಪ್ರಜಾತಂತ್ರ ಸಿದ್ಧಾಂತದ ಕೇಂದ್ರಕ್ಕೇ ಕರೆದೊಯುತ್ತದೆ.
ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಅತ್ಯಂತ ನಿರ್ಣಾಯಕ ಅಲ್ಲದಿದ್ದರೂ ಅತ್ಯಂತ ದೊಡ್ಡ ವಿಚಾರವಾಗಿ ವಾಯು ಮಾಲಿನ್ಯ ಇರಬೇಕಿತ್ತು ಎಂದು ನಿರೀಕ್ಷಿಸಲು ಹಲವು ಉತ್ತಮ ಕಾರಣಗಳಿವೆ. ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸುರಕ್ಷಿತ ಎಂದು ಪರಿಗಣಿಸಿದ್ದಕ್ಕಿಂತ 20 ಪಟ್ಟು ಹೆಚ್ಚು ವಾಯು ಮಾಲಿನ್ಯವು ದೆಹಲಿಯಲ್ಲಿ ಇದೆ. ಲಾಹೋರ್‌ನ ನಂತರ ಜಗತ್ತಿನಲ್ಲಿಯೇ ಅತಿ ಹೆಚ್ಚು ವಾಯು ಮಾಲಿನ್ಯವು ರಾಷ್ಟ್ರ ರಾಜಧಾನಿಯಲ್ಲಿ ಇದೆ. ದೆಹಲಿಯಲ್ಲಿ ವಾಸಿಸುವ ಜನರು ವಾಯು ಮಾಲಿನ್ಯದಿಂದಾಗಿ ತಮ್ಮ ಆಯುಷ್ಯದಲ್ಲಿ ಎಂಟರಿಂದ 10 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕನಿಷ್ಠ ಅಂದಾಜು ಆಗಿರುವ 7.8 ವರ್ಷಗಳನ್ನೇ ಗಣನೆಗೆ ತೆಗೆದುಕೊಂಡರೂ ಈ ನಗರದಲ್ಲಿ ಮನುಷ್ಯನ ನೂರು ಕೋಟಿ ವರ್ಷಗಳಷ್ಟು ಆಯಸ್ಸು ನಷ್ಟವಾಗುತ್ತದೆ. ದೆಹಲಿಯ ಪೌರರು ತಾವು ಉಸಿರಾಡುತ್ತಿರುವ ಗಾಳಿಯ ಕುರಿತು ಪ್ರಶ್ನಿಸಲು ಮುಂದಾದರು ಎಂದು ಭಾವಿಸೋಣ; ಆಗ ಅವರು ವಾಯುಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರವನ್ನು ಆಳುವವರನ್ನು ಆಗ್ರಹಿಸಬಹುದು. ಚುನಾವಣೆಯನ್ನು ಒಂದು ಅವಕಾಶವಾಗಿ ಭಾವಿಸಿ ಆಳುವವರನ್ನು ಅವರು ಉತ್ತರದಾಯಿಗಳನ್ನಾಗಿ ಮಾಡಬಹುದು. ಹೀಗಾದಾಗ, ಪಕ್ಷಗಳು ಆಕರ್ಷಕ ಪರಿಹಾರಗಳನ್ನು ಜನರ ಮುಂದೆ ಪೈಪೋಟಿಯಲ್ಲಿ ಇರಿಸಬಹುದು; ಅತ್ಯುತ್ತಮ ಪರಿಹಾರಗಳನ್ನು ಮುಂದಿಡುವ ಪಕ್ಷವು ಗೆಲ್ಲುವ ಅವಕಾಶ ಹೆಚ್ಚಿರುತ್ತದೆ.
ಆದರೆ, ದೆಹಲಿಯಲ್ಲಿ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಅಂತಹುದೇನೂ ಘಟಿಸಿಲ್ಲ. ಈಗ ಇರುವ ಆರು ಯೋಜನೆಗಳ ಜೊತೆಗೆ ಇನ್ನು 15 ಗ್ಯಾರಂಟಿಗಳನ್ನು ಎಎಪಿ ದೆಹಲಿಯ ಮತದಾರರಿಗೆ ನೀಡುವುದಾಗಿ ಘೋಷಿಸಿದೆ. ಈ ದೀರ್ಘ ಪಟ್ಟಿಯಲ್ಲಿ ವಾಯು ಮಾಲಿನ್ಯದ ವಿಚಾರ ಇಲ್ಲ. ಮಾಲಿನ್ಯವನ್ನು ಮೂರನೇ ಒಂದರಷ್ಟು ಕಡಿಮೆ ಮಾಡಲಾಗುವುದು ಎಂಬ 2020ರ ಸಾಮಾನ್ಯೀಕೃತ ಭರವಸೆಯ ಸಪ್ಪೆ ಪುನರಾವರ್ತನೆಯೂ ಇಲ್ಲ. ಶುದ್ಧಗಾಳಿ ಇರಬೇಕು ಎನ್ನುವುದಕ್ಕಿಂತ ಪುನರಾಯ್ಕೆಯೇ ಹೆಚ್ಚು ಮಹತ್ವದ್ದು ಎಂದು ಈ ಪಕ್ಷ ಭಾವಿಸಿರುವುದು ವಿಷಾದನೀಯ. ಪಕ್ಷವು ಕುಸಿಯುತ್ತಿರುವ ತನ್ನ ಜನಪ್ರಿಯತೆಯನ್ನು ಮರಳಿ ಗಳಿಸುವುದರತ್ತಲೇ ಗಮನ ಕೇಂದ್ರೀಕರಿಸಿದೆ. ಮಾಲಿನ್ಯವನ್ನು ಅರ್ಧದಷ್ಟು ಕಡಿತ ಮಾಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಇದೆ. ಆದರೆ, ಹೆಚ್ಚು ಸ್ಪ್ರಿಂಕ್ಲರ್‌ಗಳು, ‘ವಾಯು’ ಉಪಕರಣಗಳ ಮೂಲಕ ಇದನ್ನು ಸಾಧಿಸಲಾಗುವುದು ಎಂಬುದಕ್ಕೆ ಅರ್ಥವೇ ಇಲ್ಲ. ಕಾಂಗ್ರೆಸ್ ಪಕ್ಷವು ಈ ಕುರಿತು ಇನ್ನೂ ಮಾತನಾಡಿಲ್ಲ. ಪ್ರಣಾಳಿಕೆಗಳಲ್ಲಿ ಬಿಡಿ, ವಾಯು ಮಾಲಿನ್ಯದ ವಿಚಾರವು ಎಲ್ಲಿಯೂ ಪ್ರಸ್ತಾಪವೇ ಆಗುತ್ತಿಲ್ಲ. ದಿನವೂ ನಡೆಯುತ್ತಿರುವ ರಾಜಕೀಯ ಚರ್ಚೆಯ ವಾದ ವಿವಾದಗಳಲ್ಲಿ ಯಮುನಾ ನದಿಯ ಮಾಲಿನ್ಯ ಪ್ರಸ್ತಾಪವಾದಷ್ಟು ಕೂಡ ವಾಯು ಮಾಲಿನ್ಯದ ಕುರಿತು ಯಾರೂ ಮಾತನಾಡುತ್ತಿಲ್ಲ.
ಬೇಡಿಕೆ ಮತ್ತು ಪೂರೈಕೆ ಸಮತೋಲನವಿಲ್ಲದಿದ್ದರೆ ‘ಮಾರುಕಟ್ಟೆ ವೈಫಲ್ಯ’ ಎಂದು ಅರ್ಥಶಾಸ್ತ್ರಜ್ಞರು ಹೇಳುವ ಪರಿಭಾಷೆಗೆ ರಾಜಕೀಯವಾಗಿ ಸಮಾನಾರ್ಥಕ ಸ್ಥಿತಿ ಇದು. ಎಎಪಿ ಅಧಿಕಾರ ಉಳಿಸಿಕೊಳ್ಳಲಿದೆಯೇ ಎಂಬುದು ಗೊತ್ತಿಲ್ಲ. ಆದರೆ, ಎಎಪಿಯ ಗೆಲವು ಅಥವಾ ಸೋಲಿಗೆ ದೆಹಲಿಯ ವಾಯುಮಾಲಿನ್ಯ ಕಾರಣ ಆಗದು ಎಂಬುದು ನಮಗೆ ತಿಳಿದಿದೆ.
ಮತದಾರರಿಗೆ ಏನು ಬೇಕಾಗಿದೆಯೋ ಅದನ್ನು ನೀಡಲು ಪ್ರಜಾತಂತ್ರಗಳು ವಿಫಲವಾಗುವುದಕ್ಕೆ ಇರುವ ಅತ್ಯಂತ ಸಾಮಾನ್ಯ ಕಾರಣಗಳು ಇಲ್ಲಿನ ಸಂದರ್ಭಕ್ಕೆ ಅನ್ವಯ ಆಗುವುದಿಲ್ಲ. ಅಸಮಾನತೆ ಕಣ್ಣಿಗೆ ಕಾಣಿಸದು, ಆದರೆ, ಮಾಲಿನ್ಯ ಎದ್ದು ಕಾಣಿಸುತ್ತಿದೆ. ಮಾಲಿನ್ಯದ ಪರಿಣಾಮಗಳು ಸಾಮಾನ್ಯ ಜನರ ಗ್ರಹಿಕೆಗೆ ನಿಲುಕುವಂತಿದೆ. ಪರಿಸರ ಪ್ರಜ್ಞೆಯು ಕರ್ನಾಟಕ ಅಥವಾ ಕೇರಳದಲ್ಲಿ ಇದ್ದಷ್ಟು ಗಾಢವಾಗಿ ಇಲ್ಲ ಎಂಬುದು ನಿಜ. ಆದರೆ, ದೇಶದ ಬಹುಪಾಲು ಭಾಗಗಳ ಜನರಿಗಿಂತ ಇಲ್ಲಿನ ಜನರಿಗೆ ಎಕ್ಯುಐ (ವಾಯು ಗುಣಮಟ್ಟ ಸೂಚ್ಯಂಕ) ಎಂದರೆ ಏನು ಎಂಬುದು ತಿಳಿದಿದೆ. ಒಂದು ವೇಳೆ ಅವರಿಗೆ ಗೊತ್ತಿಲ್ಲದೇ ಇದ್ದರೂ ಹೊಂಜು ಸಮಸ್ಯೆ ಅವರ ಕಣ್ಣೆದುರೇ ಇದೆ. ಅದಲ್ಲದೆ, ‘ರಾಷ್ಟ್ರೀಯ’ ಮಾಧ್ಯಮಗಳು ಈ ವಿಚಾರವನ್ನು ಸದಾ ಪ್ರಸ್ತಾಪಿಸುತ್ತಲೇ ಇರುತ್ತವೆ. ‘ಮಧ್ಯಮ ವರ್ಗ’ ಎಂದು ತಮ್ಮನ್ನು ಕರೆದುಕೊಳ್ಳಲು ಇಷ್ಟಪಡುವ ಭಾರತದ ಗಣ್ಯ ಸಮುದಾಯವು ಸಾಮಾನ್ಯ ಭಾರತೀಯರು ಅನುಭವಿಸುವ ತೊಂದರೆಗಳಿಂದ ತಮಗೆ ರಕ್ಷಣೆ ಪಡೆದುಕೊಂಡಿವೆ. ಆದರೆ, ಗಾಳಿ ಶುದ್ಧೀಕರಣ ಯಂತ್ರಗಳಿದ್ದರೂ ಪರ್ಯಾಯ ಗಾಳಿ ಪೂರೈಕೆ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿಯೇ, ಬಡತನ, ಶಿಕ್ಷಣ ಮತ್ತು ಆರೋಗ್ಯದಂತೆ ಅಲ್ಲದೆ ವಾಯುಮಾಲಿನ್ಯವು ಸುದ್ದಿವಾಹಿನಿಗಳಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಅದೂ ಅಲ್ಲದೆ, ವಾಯುಮಾಲಿನ್ಯವು ಎದ್ದುಕಾಣವು ಚಳಿಗಾಲದಲ್ಲಿಯೇ ಚುನಾವಣೆಯು ನಡೆಯುತ್ತಿದೆ. ವಾಯುಮಾಲಿನ್ಯದಂತಹ ಅಗೋಚರ ವಿಚಾರದ ಕುರಿತು ಜನರನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬೇಡಿಕೆಯು ಎಲ್ಲಿ ನಿಜವಾದ ಸಮಸ್ಯೆ ಇದೆಯೋ ಅದಕ್ಕೆ ಸಂಬಂಧಿಸಿ ಇಲ್ಲ.
ಪ್ರಜಾಪ್ರಭುತ್ವದಲ್ಲಿ ‘ಪೂರೈಕೆ’ಯ ವೈಫಲ್ಯಕ್ಕೆ ವಾಯುಮಾಲಿನ್ಯವು ಅತ್ಯುತ್ತಮ ಉದಾಹರಣೆಯಾಗಿದೆ. ಜನರ ನಿಜವಾದ ಅಗತ್ಯವೊಂದು ಬೇಡಿಕೆಯಾಗಿ ಪರಿವರ್ತನೆ ಆಗುತ್ತದೆ. ಈ ಬೇಡಿಕೆಯನ್ನು ಶಕ್ತಿಯುತವಾಗಿ ಮುಂದಿಡುವ ಕೆಲಸವೂ ಆಗಬಹುದು. ಹಾಗಿದ್ದರೂ ರಾಜಕೀಯ ಪಕ್ಷಗಳು ಇದಕ್ಕೆ ಸ್ಪಂದಿಸದೇ ಇರಬಹುದು. ಜನರ ಅಗತ್ಯಗಳು ಮತ್ತು ಬೇಡಿಕೆಗಳನ್ನು ಅತ್ಯುತ್ತಮವಾಗಿ ಮತ್ತು ಅತ್ಯಂತ ವಿಶ್ವಾಸಾರ್ಹವಾಗಿ ಪೂರೈಸಲು ರಾಜಕೀಯ ಪಕ್ಷಗಳ ಮಧ್ಯೆ ಪೈಪೋಟಿ ಏರ್ಪಟ್ಟಾಗ ಮಾತ್ರ ಅದು ಪರಿಣಾಮಕಾರಿಯಾದ ರಾಜಕೀಯ ವಿಚಾರವಾಗುತ್ತದೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಹೀಗೆ ಆಗುವುದಿಲ್ಲ. ಏಕೆಂದರೆ, ರಾಜಕೀಯ ಪಕ್ಷಗಳಲ್ಲಿ ಸಮಸ್ಯೆಗೆ ಪರಿಹಾರ ಇರುವುದಿಲ್ಲ ಅಥವಾ ಅವರಿಗೆ ಸಮಸ್ಯೆ ಪರಿಹರಿಸುವ ಮನಸ್ಸು ಇರುವುದಿಲ್ಲ. ಮುಂಚೂಣಿಯಲ್ಲಿರುವ ಸ್ಪರ್ಧಿಗಳು ಒಂದು ವಿಚಾರವನ್ನು ಸ್ಪರ್ಧೆಯಿಂದ ಹೊರಗೇ ಇರಿಸಲು ಪ್ರಯತ್ನಿಸಿದರೆ ಮತದಾರರ ಮುಂದೆ ಇರುವ ಆಯ್ಕೆಗಳು ಸೀಮಿತವಾಗುತ್ತವೆ. ಅವರು ಹೊಸದೊಂದು ಪಕ್ಷಕ್ಕೆ ಬೆಂಬಲ ನೀಡಬಹುದು ಎಂದು ತಾತ್ವಿಕವಾಗಿ ಹೇಳಬಹುದು. ಆದರೆ, ಅಂತಹ ಅವಕಾಶಗಳು ವಿರಳ. ಚುನಾವಣಾ ರಾಜಕಾರಣಕ್ಕೆ ಬರುವುದು ಸುಲಭದ ಕೆಲಸವಲ್ಲ.
ಇದು ದೆಹಲಿಯಲ್ಲಿರುವ ನಿಜವಾದ ಸಮಸ್ಯೆ. ದೆಹಲಿಯ ಮಾಲಿನ್ಯ ಸಮಸ್ಯೆಯು ಇನ್ನಷ್ಟು ತೀವ್ರಗೊಳ್ಳಲು ಎಎಪಿ ಮತ್ತು ಬಿಜೆಪಿ ನಡೆಗಳು ಕಾರಣ ಎಂದು ಹೇಳಬಹುದು. ಮಾಲಿನ್ಯವನ್ನು ಮೂರನೇ ಒಂದರಷ್ಟು ತಗ್ಗಿಸಲಾಗುವುದು ಎಂಬ ‘ಗ್ಯಾರಂಟಿ’ಯನ್ನು 2020ರ ಚುನಾವಣೆ ಸಂದರ್ಭದಲ್ಲಿ ಎಎಪಿ ನೀಡಿತ್ತು. ಆದರೆ, ಅದನ್ನು ಈಡೇರಿಸಲು ಮಾಡಿದ ಕೆಲಸ ಬಹಳ ಕಡಿಮೆ. ನಗರದಲ್ಲಿ ಎರಡು ಕೋಟಿ ಮರಗಳನ್ನು ಬೆಳೆಸಲಾಗುವುದು ಎಂಬ ಭರವಸೆಯನ್ನು ಎಎಪಿ ನೀಡಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಮರಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಬಿಜೆಪಿ ಕೂಡ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧಗಾಳಿ ಕಾರ್ಯಕ್ರಮವು ಗಾಳಿಯನ್ನು ಶುದ್ಧೀಕರಿಸುವಲ್ಲಿ ವಿಫಲವಾಗಿದೆ. ದೆಹಲಿ ಮಹಾನಗರಪಾಲಿಕೆಯು ಕೊಳಕು ಮತ್ತು ಭ್ರಷ್ಟಾಚಾರಕ್ಕೆ ಅನ್ವರ್ಥದಂತೆ ಇದೆ. ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಡೀಸೆಲ್ ಚಾಲಿತ ಬಸ್‌ಗಳನ್ನು ಸಿಎನ್‌ಜಿಯಾಗಿ ಪರಿವರ್ತಿಸಲಾಯಿತು. ದೆಹಲಿ ಸರ್ಕಾರವೊಂದು ಮಾಲಿನ್ಯ ತಡೆಗೆ ಏನಾದರೂ ಕ್ರಮ ಕೈಗೊಂಡಿದ್ದರೆ ಇದು ಮಾತ್ರ ಈ ಕಾರ್ಯಸೂಚಿಯನ್ನು ಈಗ ಯಾರೊಬ್ಬರೂ ಮುಂದಕ್ಕೆ ಒಯ್ಯುತ್ತಿಲ್ಲ. ಎಲ್ಲರೂ ರೈತರನ್ನು ದೂರುತ್ತಿದ್ದಾರೆ. ಆದರೆ, ಹೊಲಗಳಿಗೆ ಬೆಂಕಿ ಹಾಕುವುದನ್ನು ತಡೆಯಲು ರೈತರಿಗೆ ಸಮರ್ಪಕವಾದ ಪರಿಹಾರವನ್ನು ಯಾವ ಸರ್ಕಾರವೂ ನೀಡಿಲ್ಲ. ಕೈಗಾರಿಕೆ ಮತ್ತು ವಾಹನಗಳಿಂದ ಆಗುವ ಮಾಲಿನ್ಯವನ್ನು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷ ಗಂಭೀರವಾಗಿ ತೆಗೆದುಕೊಂಡಿಲ್ಲ. ಇದರಲ್ಲಿ ಸ್ಥಾಪಿತ ಹಿತಾಸಕ್ತಿಗಳು ಇವೆ. ಹಾಗಾಗಿ, ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಾಲಯ ಆದೇಶ ನೀಡುವವರೆಗೆ ಕಾಯುವುದೇ ಸುರಕ್ಷಿತ. ಅಥವಾ ರಸ್ತೆಗೆ ನೀರು ಚಿಮುಕಿಸುವುದು ಅಥವಾ ಹೊಂಜು ಗೋಪುರ ನಿರ್ಮಾಣದಂತಹ ವಿನೋದಗಳಲ್ಲಿ ಭಾಗಿಯಾಗಬಹುದು. ಜೊತೆಗೆ, ಶೀಶ್‌ಮಹಜಲ್ ಮತ್ತು ರೋಹಿಂಗ್ಯಾ ಕುರಿತ ಚರ್ಚೆಯನ್ನು ಮುಂದುವರಿಸಬಹುದು.
ವಾಯುಮಾಲಿನ್ಯ ಅಥವಾ ದೆಹಲಿಯ ಕುರಿತ ಪಾಠವಷ್ಟೇ ಅಲ್ಲ ಇದು. ಕೋವಿಡ್‌ನಿಂದಾದ ಸಾವುಗಳು, ಬಡತನ, ಕಳಪೆ ಗುಣಮಪಟ್ಟದ ಶಿಕ್ಷಣ ಅಥವಾ ಆರೋಗ್ಯ ಸೇವೆಯಂತಹ ವಿಚಾರಗಳು ಚುನಾವಣಾ ವಿಷಯ ಏಕೆ ಆಗುವುದಿಲ್ಲ ಎಂಬುದರ ಕುರಿತ ಪ್ರಜಾಪ್ರಭುತ್ವದ ಸಿದ್ಧಾಂತದ ಪಾಠವೂ ಹೌದು. ಚುನಾವಣಾ ಪ್ರಜಾತಂತ್ರದಲ್ಲಿ ಹಲವು ವಿಚಾರಗಳು ಹೊಂದಿಕೆಯಾದಾಗ ಮಾತ್ರ ಜನರ ಇಚ್ಛೆ ನೆರವೇರುತ್ತದೆ. ಆದರೆ, ಹಾಗೆ ಆಗುವುದು ಬಹಳ ವಿರಳ. ಈಗಿನ ಪ್ರಜಾಪ್ರಭುತ್ವದಲ್ಲಿ, ಮತದಾರರು ಮುಂದಿಟ್ಟ ವಿಚಾರಗಳಿಗೆ ರಾಜಕೀಯ ಪಕ್ಷಗಳು ಮತ್ತು ನಾಯಕರು ಸ್ಪಂದಿಸುವುದೇ ಇಲ್ಲ. ಪಕ್ಷಗಳು ಮುಂದಿಡುವ ವಿಚಾರಗಳಿಗೆ ಮತದಾರರು ಸ್ಪಂದಿಸುತ್ತಾರೆ. ತಮಗೆ ಮುಖ್ಯವಾಗಿರುವ ವಿಚಾರಗಳನ್ನು ಕೈಗೆತ್ತಿಕೊಳ್ಳುವಂತೆ ಪೌರರು ಒಟ್ಟಾಗಿ ಬಲವಂತ ಮಾಡದೇ ಇದ್ದರೆ ಚುನಾವಣಾ ವ್ಯವಸ್ಥೆಯಿಂದ ಅವರಿಗೆ ಯಾವುದೇ ಲಾಭ ಇಲ್ಲ. ಮತದಾರರು ಚೆದುರಿದ ಸಾರ್ವಭೌಮರಾಗಿದ್ದು, ತಮ್ಮ ಮುಂದೆ ಇರುವುದರಲ್ಲಿಯೇ ಅವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.