
ಭಾರತದ ಸಹಕಾರ ಚಳವಳಿ ಆರಂಭವಾಗಿ 118 ವರ್ಷಗಳು ಕಳೆದಿವೆ. ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿಸುತ್ತಾ ಬಂದಿದೆ. ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಮಹತ್ತರವಾದದು. ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಬಡವರ ಮಹಿಳೆಯರ ಅಧಾರ ಸ್ಥಂಭವಾಗಿದೆ.
ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಮ್ಮ ತನು, ಮನವನ್ನು ಸಮರ್ಪಿಸಿದ್ದಾರೆ. ಅಂತಹವರಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಹರಲಾಲ್ ನೆಹರೂ ಅವರು ಅಗ್ರ ಗಣ್ಯರೆನಿಸಿಕೊಂಡಿದ್ದಾರೆ. ಸಹಕಾರ ತತ್ವ, ಆಚರಣೆಯಲ್ಲಿ ನೆಹರೂ ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆ ಇತ್ತು. ಆದ್ದರಿಂದ ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ತತ್ವದ ಮೊರೆ ಹೋದರು. ರಾಷ್ಟ್ರದಲ್ಲಿ ಸಹಕಾರ ಚಳವಳಿ ಪ್ರಗತಿಪಥದಲ್ಲಿ ಸಾಗಲು ಕ್ರಮಗಳನ್ನು ಕೈಗೊಂಡರು. ಅವರ ದೂರದೃಷ್ಟಿಯ ಫಲದಿಂದ ಇಂದು ಸಹಕಾರ ಚಳವಳಿ ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ.
1952ರಲ್ಲಿ ಎಂ.ವಿ. ಕೃಷ್ಣಪ್ಪನವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ, ಲೋಕಸಭೆಯಲ್ಲಿ ಸಹಕಾರ ಕ್ಷೇತ್ರದ ಮಹತ್ವ, ದೇಶದ ರೈತರ ಸಮಸ್ಯೆಗಳು ಅವರ ಮೇಲಿನ ಶೋಷಣೆಗಳ ಕುರಿತು ಹಾಗೂ ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಪ್ರದೇಶದ ರೈತರ, ಮಹಿಳೆಯರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಸಾಧ್ಯವೆಂದು ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಕೃಷ್ಣಪ್ಪನವರ ಭಾಷಣವನ್ನು ಆಲಿಸಿದ ನೆಹರು ರವರು ಸಭೆ ಮುಗಿದ ತಕ್ಷಣ ಕೃಷ್ಣಪ್ಪರವರನ್ನು ತಮ್ಮ ಕಛೇರಿಗೆ ಕರೆಸಿ, ಸಹಕಾರ ಕ್ಷೇತ್ರದ ಬಗ್ಗೆ ಅವರಿಗಿರುವ ಜ್ಞಾನ, ಕಳಕಳಿ ತಿಳಿದು ಮರುದಿನವೇ ಅವರನ್ನು ಕೃಷಿ ಖಾತೆ ಸಚಿವರನ್ನಾಗಿ ನೇಮಕ ಮಾಡುತ್ತಾರೆ.
ನಂತರ ಎಂ.ವಿ. ಕೃಷ್ಣಪ್ಪನವರು ಹಾಲೆಂಡ್ ಮತ್ತು ನೆದರ್‌ಲೆಂಡ್ ದೇಶಗಳಿಗೆ ಅಧ್ಯಯನ ಪ್ರವಾಸ ಮಾಡಿ, ಅಲ್ಲಿರುವ ಹಸುಗಳನ್ನು ಭಾರತಕ್ಕೆ ತಂದು, ಭಾರತದಲ್ಲಿ ಹೈನುಗಾರಿಕೆಗೆ ಹೊಸ ಆಯಾಮವನ್ನು ದೊರಕಿಸಿ ಕೊಡುತ್ತಾರೆ. ಅದರ ಫಲವಾಗಿ 1965 ರಲ್ಲಿ ಕೆ.ಎಂ.ಎಫ್ ಸ್ಥಾಪನೆಯಾಯಿತು.
ಕೃಷ್ಣಪ್ಪನವರ ಸಹಕಾರ ಕ್ಷೇತ್ರದ ಪ್ರೇರಣೆಯಿಂದಾಗಿ ಜವಾಹರಲಾಲ್ ನೆಹರು ಪಂಚವಾರ್ಷಿಕ ಯೋಜನೆಗಳನ್ನು ಸಹಕಾರಿ ಕ್ಷೇತ್ರಕ್ಕೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಉತ್ತೇಜಿಸಿದರು . ನವೆಂಬರ್ 14 ಪಂಡಿತ್ ನೆಹರೂ ಅವರ ಹುಟ್ಟು ಹಬ್ಬವಾಗಿದೆ. ನೆಹರೂ ಅವರು ಸಹಕಾರ ಚಳವಳಿಯ ಬೆಳವಣಿಗೆಗೆ ನೀಡಿದ ಕೊಡುಗೆಯಿಂದ ಅವರ ಹುಟ್ಟುಹಬ್ಬದಂದು ಸಹಕಾರ ಸಪ್ತಾಹ ಆಚರಣೆ ಮಾಡಲಾಗುತ್ತಿದೆ.
ಪ್ರತಿವರ್ಷ ಭಾರತದಾದ್ಯಂತ ನವೆಂಬರ್ 14 ರಿಂದ 20ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ನಡೆದು ಬಂದಿದೆ. ಏಳು ದಿನಗಳ ಕಾಲ ಸಹಕಾರ ಕ್ಷೇತ್ರದಲ್ಲಿರುವವರೆಲ್ಲರೂ ಒಂದೆಡೆ ಸೇರಿ ಚಳವಳಿಯ ಸಾಧನೆ, ಪ್ರಗತಿಯ ಅವಲೋಕನ ನಡೆಸುತ್ತಾರೆ. ಸಾಧನೆ ಬಗ್ಗೆ ಹೆಮ್ಮೆ ಪಟ್ಟುಕೊಂಡು ಮುಂದಿನ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುತ್ತಾರೆ. ಹಾಗೆಯೇ, ವೈಫಲ್ಯಗಳಿದ್ದಲ್ಲಿ ಅದನ್ನು ಸರಿಪಡಿಸುವ ಬಗ್ಗೆಯೂ ಪರಸ್ಪರ ಸಮಾಲೋಚನೆಗಳು ನಡೆಯುತ್ತವೆ. ಹಿಂದಿನಿಂದಲೂ ನವೆಂಬರ್ 14 ರಿಂದ 20 ರವರೆಗೆ ರಾಜ್ಯದಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ನಡೆಯುತ್ತಿತ್ತು. ಸಪ್ತಾಹದ ಆಚರಣೆ ಬಹುತೇಕ ಪಟ್ಟಣ ಪ್ರದೇಶಗಳಲ್ಲಿ ವ್ಯವಸ್ಥೆಯಾಗುತ್ತಿತ್ತು, ಕೆಲವೇ ಜನರು ಪಾಲ್ಗೊಳ್ಳುತ್ತಿದ್ದರು. ಸಹಕಾರಿ ಕ್ಷೇತ್ರದ ಮಹತ್ವ ಪ್ರತಿಯೊಬ್ಬರೂ ತಿಳಿಯಬೇಕು.
ಸಹಕಾರ ಸಪ್ತಾಹಕ್ಕೆ ಹೆಚ್ಚಿನ ಮಹತ್ವ ಸಿಗಬೇಕು. ಸಾವಿರಾರು ಜನರು ಪಾಲ್ಗೊಳ್ಳಬೇಕು. ಸಪ್ತಾಹದ ವ್ಯವಸ್ಥೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗಬೇಕು. ಅದಕ್ಕೆ ಮೌಲ್ಯ ತುಂಬಬೇಕಾದರೆ ರಾಜ್ಯದ ಮುಖ್ಯಮಂತ್ರಿಯವರು ಸಪ್ತಾಹವನ್ನು ಉದ್ಘಾಟಿಸಬೇಕು ಎಂಬ ಕಲ್ಪನೆಗೆ ಸಾಕಾರ ರೂಪಕೊಟ್ಟರು. ಬೆಂಗಳೂರು ಜಿಲ್ಲೆ ರಾಮನಗರ ಸಮೀಪದ ಅಂಕನಹಳ್ಳಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡರು ಸಹಕಾರ ಸಪ್ತಾಹದ ಉದ್ಘಾಟನೆ ಮಾಡಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 14 ರಿಂದ 20ರವರೆಗೆ ಸಹಕಾರ ಸಪ್ತಾಹವನ್ನು ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾಜ್ಯದ ಮಾನ್ಯ ಮುಖ್ಯಮಂತ್ರಿಯವರೇ ಉದ್ಘಾಟಿಸುತ್ತಾ ಬಂದಿರುವುದರಿಂದ ಸಪ್ತಾಹದ ಮಹತ್ವ, ಉದ್ದೇಶ, ಭಾಗವಹಿಸುವಿಕೆ ಪ್ರತಿಯೊಬ್ಬ ಸಹಕಾರಿಗಳಿಗೂ ದೊರಕಿದಂತಾಗುತ್ತದೆ.
ಈ ಬಾರಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತಿದ್ದು ಸಪ್ತಾಹದ ಪ್ರಮುಖ ಧ್ಯೇಯ 'ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಘಗಳು' ಎಂಬುದಾಗಿದೆ. 7 ದಿನಗಳಲ್ಲಿ ದಿನವೂ ಒಂದೊಂದು ವಿಷಯದ ಬಗ್ಗೆ ಚರ್ಚೆ ಹಾಗೂ ಸಪ್ತಾಹದ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನವೆಂಬರ್ 14ರಂದು (ಇಂದು) 'ಕಾರ್ಯದಕ್ಷತೆ. ಉತ್ತರದಾಯಿತ್ತ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡಿಜಿಲೀಕರಣವನ್ನು ಪ್ರೋತ್ಸಾಹಿಸುವುದು' ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿದೆ.
2025ರ ನವೆಂಬರ್ 14ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಿ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ರೆ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ವಿತರಣೆ ಮಾಡದರು.
ನವೆಂಬರ್ 15ರಂದು ತ್ರಿಭುವನ ಸಹಕಾರ ವಿಶ್ವವಿದ್ಯಾಲಯ, ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ, ನವೆಂಬರ್ 16ರಂದು ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ, ನವೆಂಬರ್ 17ರಂದು ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಮತ್ತು ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ. ನವೆಂಬರ್ 18ರಂದು ಸಹಕಾರಿ ಉದ್ದಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲವರ್ಗದ ಸಬಲೀಕರಣ (ಕರಕುಶಲ, ಕೈಮಗ್ಗ, ಕಾರ್ಮಿಕ, ಮೀನುಗಾರಿಕೆ ಇತ್ಯಾದಿ), ನವೆಂಬರ್ 19ರಂದು ಪ್ರವಾಸೋದ್ಯಮ, ಆರೋಗ್ಯ, ಹಸಿರು ಇಂಧನ, ಪ್ಲಾಟ್ ಫಾರಂ, ಸಹಕಾರ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ ಎಂಬ ವಿಷಯದ ಬಗ್ಗೆ ಚರ್ಚಿಸಲಾಗುತ್ತದೆ. ನವೆಂಬರ್ 20 ರಂದು ಜಾಗತಿಕ ಸ್ಪರ್ಧಾತ್ಮತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಒಟ್ಟಾರೆ ಸಹಕಾರಿ ಸಪ್ತಾಹದ ಅವಧಿಯಲ್ಲಿ ಧ್ಯೇಯದ ಬಗ್ಗೆ ಸಮಾಲೋಚನೆಯನ್ನು ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗಿ ನಡೆಸುವುದರ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಲೇಖಕರು: ಸಹಕಾರ ಸಂಘಗಳ ಅಪರ ನಿಬಂಧಕರು,ಸಹಕಾರ ಸಂಘಗಳ ನಿಬಂಧಕರ ಕಛೇರಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.