ಗಂಡನನ್ನು ಹೆಂಡತಿ ಕೊಲ್ಲಿಸುವ ಅಥವಾ ಪ್ರೇಮಿಯನ್ನು ಪ್ರಿಯಕರ ಕೊಲ್ಲಿಸುವ ತೆರನಾದ ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿವೆ. ಇಂಥ ಪ್ರಕರಣಗಳಲ್ಲಿ ಲೈಂಗಿಕ ಶಿಸ್ತಿನ ಅಭಾವದ ನಾನಾ ರೂಪಗಳು ಕೆಲಸ ಮಾಡಿರುವುದು ಬಹುತೇಕ ಪ್ರಕರಣಗಳಲ್ಲಿ ಹತ್ಯೆಗೆ ಪ್ರಚೋದನೆ ಎನ್ನುವುದು ತನಿಖಾಧಿಕಾರಿಗಳ ವಿವರಣೆಯಾಗಿರುತ್ತದೆ. ಇಂಥ ಪ್ರಕರಣಗಳು ಇತರೆ ಹತ್ಯೆಗಳಿಗಿಂತ ಹೆಚ್ಚು ಕ್ರೂರವಾದದ್ದಾಗಿವೆ. ಇಷ್ಟಪಟ್ಟ ದೇಹವನ್ನು– ಪಾರಂಪರಿಕವಾಗಿ, ಸಾಮಾಜಿಕವಾಗಿ, ಶಾಸನಾತ್ಮಕವಾಗಿ ತಾನು ಉತ್ತರದಾಯಿಯಾಗಿರುವ ದೇಹವನ್ನು– ನಾಶಪಡಿಸುವುದಕ್ಕೆ ಬೇಕಾದ ಮನಃಸ್ಥಿತಿಯನ್ನು ತಂದುಕೊಳ್ಳುವುದು ಸುಲಭವಲ್ಲ.
ಸ್ವಹತ್ಯೆ ಅಥವಾ ಇನ್ನೊಬ್ಬರ ಹತ್ಯೆಯ ಹಿಂದಿರುವುದು ಸಮಸ್ಯೆಯ ಪರಿಹಾರಕ್ಕೆ ‘ಹತ್ಯೆ’ಯ ಹೊರತಾದ ಬೇರೆ ಯಾವ ಮಾರ್ಗವೂ ಇಲ್ಲ ಎಂಬ ಮನಃಸ್ಥಿತಿಯ ಪ್ರಚೋದನೆಯಾಗಿರುತ್ತದೆ. ಇಂಥ ಮನಃಸ್ಥಿತಿಯ ನಿರ್ಮಾಣದ ಹಿಂದೆ ಇರುವ ಒಂದು ಪ್ರಮುಖ ಕಾರಣ ಫ್ರೆಡ್ ಡಬ್ಲ್ಯು. ರಿಗ್ಸ್ ಹೇಳುವ, ‘ಪ್ರಿಸ್‌ಮ್ಯಾಟಿಕ್ ಸೊಸೈಟಿ’ಯ ಲಕ್ಷಣವಾಗಿದೆ. ಪ್ರಿಸ್‌ಮ್ಯಾಟಿಕ್ ಸೊಸೈಟಿಯಲ್ಲಿ ಬಹಿರಂಗದ ಕಾಣಿಸಿಕೊಳ್ಳುವಿಕೆಗಳು ಆಧುನಿಕವಾಗಿರುತ್ತವೆ; ಚಿಂತನೆಗಳು ಸಾಂಪ್ರದಾಯಿಕವಾಗಿರುತ್ತವೆ. ಭಾರತದ ಸಮಾಜದಲ್ಲಿ ಈ ಲಕ್ಷಣಗಳು ದಟ್ಟವಾಗಿವೆ. ಮದುವೆಯಂತಹ ವಿಷಯಗಳಲ್ಲಿ ಹೆತ್ತವರು ಮಕ್ಕಳ ಅಭಿಪ್ರಾಯವನ್ನು ಸ್ವೀಕರಿಸಲು ತಯಾರಿಲ್ಲದ ಸಮಾಜವಿದು. ತಾನು ಯಾರನ್ನು ಮದುವೆ ಆಗಬಯಸಿದ್ದೇನೆ ಎಂದು ಹೇಳಲಿಕ್ಕೇ ಅವಕಾಶ ಇಲ್ಲದ ಸ್ಥಿತಿಯು ಸಂಗಾತಿಯನ್ನು ಇಲ್ಲವಾಗಿಸುವುದಕ್ಕೆ ಪರೋಕ್ಷ ಪ್ರಚೋದನೆಯೂ ಆಗುತ್ತದೆ. ಲೈಂಗಿಕ ಪ್ರಚೋದನೆಗೆ ಪೂರಕವಾಗಿ ಕಾಣಿಸಿಕೊಳ್ಳುವುದರ ಬಗ್ಗೆಯಾಗಲಿ, ಲೈಂಗಿಕ ಸಂಕೇತಗಳನ್ನು ಪ್ರದರ್ಶಿಸುವುದಕ್ಕಾಗಲಿ ಸಮಾಜಕ್ಕೆ ಆಕ್ಷೇಪವಿಲ್ಲ. ಆದರೆ, ವೈಯಕ್ತಿಕ ಜೀವನದಲ್ಲಿ ಲೈಂಗಿಕ ಮಡಿವಂತಿಕೆಯನ್ನು ಬಯಸುತ್ತದೆ. ಈ ಪದ್ಧತಿ ಬದಲಾಗಬೇಕು.
ಭಾರತೀಯ ಕುಟುಂಬ ಜೀವನದ ಪರಿಕಲ್ಪನೆಗಳು ಶಿಸ್ತುಬದ್ಧವೂ ವ್ಯವಸ್ಥಿತವೂ ಆಗಿವೆ. ಚಿಂತನೆಯಲ್ಲಿನ ಮಡಿವಂತಿಕೆಯ ಅತಿರೇಕವೇ ಭಾರತೀಯ ಸಮಾಜದ ಸಮಸ್ಯೆಯಾಗಿದೆ. ಕಾಣಿಸಿಕೊಳ್ಳುವಲ್ಲಿ ಸಾಂಪ್ರದಾಯಿಕರಾಗಿಯೂ ಚಿಂತನೆಯಲ್ಲಿ ಆಧುನಿಕರಾಗಿಯೂ ಇರಬೇಕಾದುದು ಭಾರತದ ಅವಶ್ಯಕತೆಯಾಗಿದೆ. ಚಿಂತನೆಯಲ್ಲಿ ಆಧುನಿಕರಾಗಿದ್ದಾಗ ಆಧುನಿಕತೆ ಮತ್ತು ಆಧುನಿಕತೆಯ ವಿಕೃತಿಗಳ ನಡುವಿನ ವ್ಯತ್ಯಾಸದ ಸ್ಪಷ್ಟತೆ ಇರುತ್ತದೆ. ಪರಸ್ಪರ ವಿರುದ್ಧವಾಗಿ ಕಾಣಿಸುವ ಈ ಎರಡೂ ಸಂಗತಿಗಳು ಸಾಧ್ಯವಾಗುವುದು ಹೇಗೆ ಎಂಬ ಪ್ರಶ್ನೆ ಸಹಜ. ಆದರೆ, ಕುಟುಂಬ ಜೀವನದ ಶಿಸ್ತು ಅನುಕರಣೆಯಿಂದ ಬಾರದೆ ಅರಿವಿನಿಂದ ಬಂದಾಗ ಇವೆರಡೂ ಸಾಧ್ಯವಾಗುತ್ತವೆ. ಅರಿವು ನೇರವಾಗಿ ಶೈಕ್ಷಣಿಕ ವ್ಯವಸ್ಥೆಯನ್ನು ಮುಖ್ಯವಾಗಿ ಅವಲಂಬಿಸಿದೆ. ‘ಶಿಕ್ಷಣ’ ಎನ್ನುವಲ್ಲಿ ‘ಔಪಚಾರಿಕ’ ಮತ್ತು ‘ಅನೌಪಚಾರಿಕ’ ಶಿಕ್ಷಣಗಳೆರಡೂ ಸೇರಿಕೊಳ್ಳುತ್ತವೆ.
ಇತಿಹಾಸದುದ್ದಕ್ಕೂ ಲೈಂಗಿಕ ಸಂಬಂಧಗಳು ಸಾಮಾನ್ಯವಾಗಿ ಮೂರು ರೂಪದಲ್ಲಿವೆ. ಮೊದಲನೆಯದು, ಲೈಂಗಿಕತೆಯ ಕ್ರೌರ್ಯದ ರೂಪ. ಯುದ್ಧಗಳು ನಡೆದಾಗ ಆಕ್ರಮಣಕ್ಕೊಳಗಾದ ರಾಜ್ಯದಲ್ಲಿ ನಡೆಸಲಾಗುತ್ತಿದ್ದ ಲೈಂಗಿಕ ದೌರ್ಜನ್ಯಗಳು ಈ ರೂಪದವು. ಎರಡನೆಯದು, ಕೀಳು ಅಭಿರುಚಿಯ ರೂಪದಲ್ಲಿ ಲೈಂಗಿಕತೆ ಪ್ರಕಟವಾಗುತ್ತದೆ. ಇದನ್ನು ಕೆಲವರ ದೈನಂದಿನ ಮಾತುಗಾರಿಕೆಯಲ್ಲೂ ಗುರುತಿಸಬಹುದು. ಮೂರನೆಯದು, ಶೃಂಗಾರದ ರೂಪದಲ್ಲಿ ಪ್ರಕಟಗೊಳ್ಳುವ ಲೈಂಗಿಕತೆ. ಕ್ರೌರ್ಯದ ರೂಪದ ಲೈಂಗಿಕತೆಯು ದೌರ್ಜನ್ಯಗಳನ್ನು ಹೆಚ್ಚಿಸಿದರೆ, ಕೀಳು ಅಭಿರುಚಿಯ ರೂಪದ ಲೈಂಗಿಕತೆಯು ಮನುಷ್ಯರ ಅಭಿರುಚಿಯನ್ನೂ ಚಿಂತನೆಯನ್ನೂ ಕೆಡಿಸುತ್ತದೆ. ಹಾಗಾಗಿ, ನಾಗರಿಕ ವ್ಯವಸ್ಥೆ ಮೊದಲೆರಡನ್ನೂ ತಿರಸ್ಕರಿಸಿ, ಶೃಂಗಾರದ ರೂಪವನ್ನು ಸ್ವೀಕರಿಸಿದೆ. ಲೈಂಗಿಕತೆಯು ಶೃಂಗಾರದ ರೂಪದಲ್ಲಿ ಪ್ರಕಟವಾದಾಗ ಆಪ್ತವಾಗಿರುತ್ತದೆ ಮತ್ತು ಮನುಷ್ಯ ಸಂಬಂಧಗಳನ್ನು ಬಲಗೊಳಿಸುತ್ತದೆ. ಈ ಎಚ್ಚರ ಸಾಮಾಜಿಕ ನಡವಳಿಕೆಯಲ್ಲೂ ಶೈಕ್ಷಣಿಕ ನಿರೂಪಣೆಯಲ್ಲೂ ಕಂಡುಬರಬೇಕು.
ಲೈಂಗಿಕ ಹಿನ್ನೆಲೆಯಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಗಂಡು– ಹೆಣ್ಣಿನ ನಡುವಿನ ಸಂಬಂಧದ ಬಿಕ್ಕಟ್ಟಾಗಿಯೂ ಪರಿಗಣಿಸಬೇಕು. ಅಪರಾಧ ನಡೆಯದೇ ಇದ್ದಾಗಲೂ ಬಿಕ್ಕಟ್ಟುಗಳು ಇರುತ್ತವೆ. ಇಂತಹ ಎಲ್ಲ ಬಿಕ್ಕಟ್ಟುಗಳ ಮೂಲವೂ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಮರ್ಥ್ಯವಿಲ್ಲದ ಒಂದು ಸ್ಥಿತಿಯಾಗಿರುತ್ತದೆ.
ವ್ಯಕ್ತಿಗೆ ಸಮಸ್ಯೆ ಪರಿಹಾರದ ಸಾಮರ್ಥ್ಯವು ಜೀವನ ಅನುಭವ ಅಥವಾ ಕಲಿಕೆಯ ಅನುಭವಗಳಿಂದ ಬರುತ್ತದೆ. ಮೂರು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಬದಲಾಗಿರುವ ಆರ್ಥಿಕ– ಸಾಮಾಜಿಕ ಬದುಕು ಹೆಚ್ಚು ಸುಲಲಿತವಾಗಿದೆ. ಮಕ್ಕಳಲ್ಲಿ, ಯುವಜನರಲ್ಲಿ ಜೀವನದಿಂದಲೇ ಉಂಟಾಗುವ ಕಲಿಕಾ ಅನುಭವ ಕಡಿಮೆಯಾಗುತ್ತಾ ಹೋಗಿದೆ. ಮಗುವೊಂದರ ಶಾಲಾ ಸಿದ್ಧತೆ ಎಂದರೆ ತಂದೆ ಹಣ ಹೊಂದಿಸುವುದು, ಟಿಫನ್ ಬಾಕ್ಸ್ ಅನ್ನೂ ತಾಯಿಯೇ ತುಂಬಿ ವಸ್ತ್ರ ತೊಡಿಸಿ ಶಾಲೆಗೆ ತಲುಪಿಸುವುದಾಗಿರುತ್ತದೆ. ನಡೆದಾಡುವ ಅನುಭವವಿಲ್ಲ. ಪರಿಸರದ ಅನುಭವವಿಲ್ಲ. ಪ್ರಾಣಿಗಳ ಒಡನಾಟವೂ ಇಲ್ಲ. ಒಂದೇ ರೀತಿಯ ಕೌಟುಂಬಿಕ ನೆಲೆಯ ಕೆಲವೇ ಗೆಳೆಯರೊಂದಿಗೂ ಜಾಸ್ತಿ ಒಡನಾಟವಿಲ್ಲ. ಅಂದರೆ, ಅಂಕಗಳ ಒತ್ತಡ ಹೆಚ್ಚಾಗಿ, ಮಕ್ಕಳಿಗೆ ಪರಿಸರದಿಂದಲೇ ಅನುಭವ ಉಂಟಾಗಲು ಇರುವ ಅವಕಾಶಗಳು ಕಡಿಮೆಯಾಗಿವೆ.
ಬದುಕಿನಿಂದ ಗಳಿಕೆಯಾಗುವ ಅನುಭವಗಳು ಕಡಿಮೆಯಾದಾಗ ಕಲಿಕೆಯ ಮೂಲಕ ದೊರೆಯುವ ಅನುಭವಗಳು ಹೆಚ್ಚಾಗಬೇಕು. ಆಗ ಚಿಂತನೆಗಳು ಬೆಳೆಯುತ್ತವೆ. ಚಿಂತನೆಗಳು ಬೆಳೆದಾಗ ಒಂದು ಸನ್ನಿವೇಶವನ್ನು ಗ್ರಹಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಸನ್ನಿವೇಶವನ್ನು ಸಮಗ್ರವಾಗಿ ಗ್ರಹಿಸಬಲ್ಲವರಿಗೆ ಸಮಸ್ಯೆಯ ಪರಿಹಾರದ ಸಾಧ್ಯತೆಗಳೂ ಹೆಚ್ಚುತ್ತವೆ. ತಾನು ಆಯ್ಕೆ ಮಾಡಿಕೊಳ್ಳುವ ಸಮಸ್ಯೆ ಪರಿಹಾರದ ವಿಧಾನವು ಉಂಟು ಮಾಡಬಹುದಾದ ಅಪಾಯದ ಅರಿವು ಹೊಳೆಯುತ್ತದೆ. ಉದಾಹರಣೆಗೆ ಹೇಳುವುದಾದರೆ, ವೈಯಕ್ತಿಕ ಸಮಸ್ಯೆಗೆ ಸ್ವಹತ್ಯೆ ಪರಿಹಾರ ಎಂದು ಭಾವಿಸುವ ಕ್ರಮವೇ ತಪ್ಪು. ‘ಪರಿಹಾರ’ ಎಂಬ ಪರಿಕಲ್ಪನೆ ಬದುಕಿರುವಾಗ ಮಾತ್ರ ಅನ್ವಯಿಸುವುದು. ವ್ಯಕ್ತಿಯೇ ಇಲ್ಲದ ಮೇಲೆ ಪರಿಹಾರದ ಪರಿಕಲ್ಪನೆಯೇ ಇರುವುದಿಲ್ಲ ಎಂಬ ಅರಿವು ಸ್ವಹತ್ಯೆಯ ಮನಃಸ್ಥಿತಿಯನ್ನು ಬದಲಿಸಬಲ್ಲದು.
ಲೈಂಗಿಕ ಹಿನ್ನೆಲೆಯ ಹತ್ಯೆಯಂಥ ಯೋಜನೆಗಳಲ್ಲಿ ಲೈಂಗಿಕ ಕಾಮನೆಗಳ ತೀವ್ರ ಒತ್ತಡದ ಪ್ರಚೋದನೆಗಳ ಪಾತ್ರ ಹೆಚ್ಚಾಗಿರುತ್ತದೆ. ಆದರೆ, ವ್ಯಕ್ತಿಯ ಜೀವನದುದ್ದಕ್ಕೂ ಲೈಂಗಿಕ ಕಾಮನೆಗಳ ಒತ್ತಡ ಅದೇ ರೀತಿ ಇರುವುದಿಲ್ಲ. ಲೈಂಗಿಕ ಕಾಮನೆಗಳ ಒತ್ತಡ ಕಡಿಮೆಯಾದಂತೆಲ್ಲಾ ಕಾಡತೊಡಗುವ ಅಪರಾಧಿ ಪ್ರಜ್ಞೆ ತನ್ನನ್ನು ತಾನೇ ಕ್ಷಮಿಸಿಕೊಳ್ಳಲಾಗದ ಅಸಹನೀಯ ಬದುಕಾಗಿ ಮಾರ್ಪಡುವುದು ಒಂದು ಕಡೆಯದಾದರೆ, ಕಾನೂನು ವ್ಯವಸ್ಥೆ ದುರ್ಬಲವಲ್ಲ ಎಂಬ ಅರಿವು ಮತ್ತೊಂದೆಡೆ ಇರಬೇಕಾಗುತ್ತದೆ. ಎಲ್ಲವನ್ನೂ ಲಘುವಾಗಿ ತೆಗೆದುಕೊಳ್ಳುವ ಜೀವನಶೈಲಿಯು ತಾನು ಯೋಚಿಸಿದ ವಾಮಮಾರ್ಗಗಳನ್ನು ಪತ್ತೆ ಮಾಡುವ ಶಕ್ತಿ ಪೊಲೀಸ್ ವ್ಯವಸ್ಥೆಗಿದೆ ಎಂಬ ಅರಿವಿಲ್ಲದಂತೆ ಮಾಡುತ್ತದೆ. ಯಾರಲ್ಲಿ ಚಿಂತನೆಯ ಶಕ್ತಿ ಗಟ್ಟಿಯಾಗಿರುತ್ತದೆಯೋ ಅವರಿಗೆ ಈ ಎಲ್ಲ ಆಯಾಮಗಳೂ ಹೊಳೆಯುತ್ತವೆ. ಚಿಂತನೆಯನ್ನು ಬಲಪಡಿಸುವ ಜವಾಬ್ದಾರಿ ಶಿಕ್ಷಣದ್ದೇ ಆಗಿದೆ.
‘ಹಿಮಾಲಯ ಪರ್ವತದ ಉಪಯೋಗವೇನು?’ ಎಂದು ಕೇಳುವುದಕ್ಕೂ ‘ಹಿಮಾಲಯ ಪರ್ವತಗಳು ಇಲ್ಲದಿದ್ದರೆ ದೇಶದ ಸ್ಥಿತಿ ಹೇಗಿರುತ್ತಿತ್ತು?’ ಎಂದು ಕೇಳುವುದಕ್ಕೂ ವ್ಯತ್ಯಾಸವಿದೆ. ‘ಹಿಮಾಲಯ ಪರ್ವತದ ಉಪಯೋಗವೇನು?’ ಎಂದು ಕೇಳಿದಾಗ ವಿದ್ಯಾರ್ಥಿ ಪುಸ್ತಕ ನೋಡಿ ಉತ್ತರಿಸುತ್ತಾನೆ. ‘ಹಿಮಾಲಯ ಇಲ್ಲದೇ ಇದ್ದರೆ ದೇಶದ ಸ್ಥಿತಿ ಹೇಗಿರುತ್ತಿತ್ತು?’ ಎಂದು ಕೇಳಿದಾಗ ಹಿಮಾಲಯ ಇಲ್ಲದೇ ಇರುವ ಸನ್ನಿವೇಶವನ್ನು ಕಲ್ಪಿಸಿಕೊಂಡು ಉತ್ತರ ಕೊಡಬೇಕಾಗುತ್ತದೆ. ಆಗ ಸಿಗುವ ಉತ್ತರವೂ ಹಿಮಾಲಯ ಪರ್ವತದ ಉಪಯೋಗವನ್ನೇ ಹೇಳುತ್ತದೆ. ಆದರೆ, ಪ್ರಶ್ನೆಯನ್ನು ಭಿನ್ನವಾಗಿ ಕೇಳಿದಾಗ ಸನ್ನಿವೇಶದ ಗ್ರಹಿಕೆ– ಚಿಂತನೆಯ ಸಾಮರ್ಥ್ಯ ಹೆಚ್ಚಾಗುತ್ತದೆ. ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿ ಬಹುಮುಖಿ ಉತ್ತರಗಳನ್ನು ಬಯಸುವ ಶೈಕ್ಷಣಿಕ ಪ್ರಶ್ನೆಗಳಿಗೆ ಪ್ರಾಮುಖ್ಯ ಇದೆ.
ಚಿಂತನಾ ಸಾಮರ್ಥ್ಯದ ಹೆಚ್ಚಳಕ್ಕೂ ನೈತಿಕ ಶಿಕ್ಷಣಕ್ಕೂ ಸಂಬಂಧವಿದೆ. ಸಮಾಜ ಚೆನ್ನಾಗಿರಬೇಕಾದರೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಬೇಕು ಎನ್ನಲಾಗುತ್ತದೆ. ಆದರೆ, ನೈತಿಕತೆಯು ವಾಸ್ತವದಲ್ಲಿ ಸ್ಥಿರೀಕರಿಸಲಾದ ಸಿದ್ಧಾಂತವಾಗಿ ಅನ್ವಯವಾಗುವುದಿಲ್ಲ. ಬೇರೆ ಬೇರೆ ಸನ್ನಿವೇಶದಲ್ಲಿ ಅನುಸರಿಸಬೇಕಾದ ನೈತಿಕ ಮೌಲ್ಯಗಳು ಬೇರೆ ಬೇರೆಯಾಗಿಯೂ ಇರುತ್ತವೆ. ಯಾವ ಸನ್ನಿವೇಶದಲ್ಲಿ ಯಾವುದು ನೈತಿಕತೆಯಾಗಿರುತ್ತದೆ ಎಂದು ಅರ್ಥೈಸುವ ಸಾಮರ್ಥ್ಯ ಇರಬೇಕು. ಈ ರೀತಿ ಅರ್ಥೈಸುವ ಸಾಮರ್ಥ್ಯವು ಚಿಂತನೆಗಳು ಸಶಕ್ತವಾಗಿದ್ದಾಗಷ್ಟೇ ಸಾಧ್ಯವಾಗುತ್ತದೆ. ಇದೆಲ್ಲ ಆಗಬೇಕಾದರೆ, ಅಂಕ ಗಳಿಕೆಯೇ ಶಿಕ್ಷಣ ಎಂಬ ಕಲ್ಪನೆಯಿಂದ ಸಮಾಜ ಹೊರಬರಬೇಕು. ಪಠ್ಯಪುಸ್ತಕಗಳು, ಅಧ್ಯಾಪಕರ ಬೋಧನಾ ಪದ್ಧತಿಗಳು ಬದಲಾಗಬೇಕು. ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುವ ಪದ್ಧತಿಗಳೂ ಬದಲಾಗಬೇಕು. ಈ ಬಗ್ಗೆ ಗಂಭೀರವಾಗಿ ಕೆಲಸ ಮಾಡದೇ ಇದ್ದರೆ ಮುಂಬರುವ ಸಮಾಜ ಇನ್ನಷ್ಟು ಕ್ರೂರ ಜನರಿಂದ ತುಂಬಿಹೋಗುವ ಸಾಧ್ಯತೆ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.