ಭಾರತ ಸದ್ಯದಲ್ಲೇ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಈ ವರ್ಷದ ಅಂತ್ಯಕ್ಕೆ ಜಪಾನನ್ನು ಹಿಂದಿಕ್ಕಿ ಮುಂದೆ ಹೋಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಅಂದಾಜು ಮಾಡಿದೆ. ಐಎಂಎಫ್ ಪ್ರಕಾರ, ಭಾರತದ ಜಿಡಿಪಿ ಗಾತ್ರವು ₹357.49 ಲಕ್ಷ ಕೋಟಿ ಆಗಲಿದೆ. ಜಪಾನಿನ ಜಿಡಿಪಿ ಗಾತ್ರ ₹357.40 ಲಕ್ಷ ಕೋಟಿ ಇರುತ್ತದೆ. ಹಾಗಾಗಿ, ಭಾರತವು ಜಪಾನಿಗಿಂತ ₹9,000 ಕೋಟಿಯಷ್ಟು ಹೆಚ್ಚು ಶ್ರೀಮಂತವಾಗುತ್ತದೆ. ಇದು ಖಂಡಿತಾ ಸಾಧ್ಯ. ಯಾಕೆಂದರೆ, ಭಾರತದ ಜಿಡಿಪಿ ಶೇ 6ರಷ್ಟು ವೇಗದಲ್ಲಿ ಬೆಳೆಯುತ್ತಿದ್ದರೆ, ಜಪಾನಿನ ಆರ್ಥಿಕತೆ ಬೆಳೆಯುತ್ತಿರುವುದು ಕೇವಲ ಶೇ 0.6ರಷ್ಟು ವೇಗದಲ್ಲಿ. ಹಾಗಾಗಿ, ಇಂದಲ್ಲ ನಾಳೆ ನಾವು ಜಪಾನನ್ನು ಹಿಂದೆ ಹಾಕುತ್ತೇವೆ. ಅಷ್ಟೇ ಅಲ್ಲ, ಜರ್ಮನಿಗಿಂತಲೂ ಮುಂದೆ ಹೋಗುತ್ತೇವೆ.
ಇದು ಸಂಭ್ರಮಿಸಬೇಕಾದ ಸಂಗತಿಯೇ, ಒಂದು ದಶಕದ ಹಿಂದೆ ಹನ್ನೊಂದನೆಯ ಸ್ಥಾನದಲ್ಲಿದ್ದ ನಾವು ನಾಲ್ಕನೇ ಸ್ಥಾನಕ್ಕೆ ಬರುತ್ತಿರುವುದು ದೊಡ್ಡ ಸಂಗತಿಯೇ? ಆದರೆ, ಎಚ್ಚರವೂ ಆಗತ್ಯ. ಯಾಕೆಂದರೆ, ಜಿಡಿಪಿ ದೇಶದ ಆರ್ಥಿಕತೆಯ ಒಂದು ಮುಖವಷ್ಟೆ.
ಒಂದು ದೇಶದ ಆರ್ಥಿಕತೆಯನ್ನು ವಿವರಿಸುವುದು ಕಷ್ಟ. ವಿಭಿನ್ನ ಆರ್ಥಿಕತೆಗಳನ್ನು ಹೋಲಿಸುವುದು ಸರಳವಾದ ಕೆಲಸವಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಜಗತ್ತು ಜಿಡಿಪಿಗೆ ಹೆಚ್ಚು ಹೆಚ್ಚು ಆತುಕೊಳ್ಳುತ್ತಿದ್ದು, ಅದು ಆರ್ಥಿಕತೆಯನ್ನು ಅಳೆಯುವ ಏಕೈಕ ಮಾಪಕವಾಗಿಬಿಟ್ಟಿದೆ. ಅದೇ ನಮ್ಮ ಗ್ರಹಿಕೆ, ನಡೆ, ಯೋಚನೆ ಎಲ್ಲವನ್ನೂ ನಿರ್ಧರಿಸುತ್ತಿದೆ.
ಜಿಡಿಪಿ, ಭೌಗೋಳಿಕ ಪ್ರದೇಶವೊಂದರಲ್ಲಿ ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಒಟ್ಟು ಸರಕು ಹಾಗೂ ಸೇವೆಗಳ ಮೊತ್ತ. ದೇಶದ ಅಭಿವೃದ್ಧಿಯನ್ನು ಗ್ರಹಿಸಲು ಬೇರೆ ವಿಧಾನಗಳೂ ಇವೆ. ಉದಾಹರಣೆಗೆ, ‘ಮಾನವ ಅಭಿವೃದ್ಧಿ ಸೂಚ್ಯಂಕ’ ಇದೆ. ಜನರ ಶಿಕ್ಷಣ, ತಲಾ ಆದಾಯ, ಪೌಷ್ಟಿಕತೆ, ಜೀವಿತಾವಧಿ ಇತ್ಯಾದಿ ಗಮನಿಸಿ ಅದನ್ನು ಅಂದಾಜು ಮಾಡಲಾಗುತ್ತದೆ. ಅದರಲ್ಲಿ ನಾವು 130ನೇ ಸ್ಥಾನದಲ್ಲಿದ್ದೇವೆ. ಜಿಡಿಪಿ ಸುಧಾರಿಸಿದರೆ ಬಡತನ, ಅಪೌಷ್ಟಿಕತೆ, ನಿರಕ್ಷರತೆ, ನಿರುದ್ಯೋಗ ಇವೆಲ್ಲಾ ಹೋಗಿಬಿಡುತ್ತದೆನ್ನುವ ನಂಬಿಕೆ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ಆದರೆ, ಜಿಡಿಪಿ ಹೆಚ್ಚಿದರೆ ಇವೆಲ್ಲಾ ಅದರಷ್ಟಕ್ಕೆ ಆಗಿಬಿಡುವುದಿಲ್ಲ. ಸರ್ಕಾರ ಅದಕ್ಕಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದನ್ನು ಅಮರ್ತ್ಯ ಸೇನ್ ಅವರ ಅಧ್ಯಯನ ತೋರಿಸಿದೆ.
ಸೇನ್ ಹೇಳುವಂತೆ, ಅಭಿವೃದ್ಧಿಯ ಉದ್ದೇಶ ಜನರ ಜೀವನಮಟ್ಟವನ್ನು ಸುಧಾರಿಸುವುದು ಎನ್ನುವುದಾದರೆ, ಅದಕ್ಕಾಗಿಯೇ ನೇರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಒಳ್ಳೆಯದು. ಸೇನ್ ಅವರು ಅಭಿವೃದ್ಧಿಯನ್ನು ನಿರ್ಜೀವ ವಸ್ತುಗಳ ಅಭಿವೃದ್ಧಿಯಾಗಿ ನೋಡುವುದಿಲ್ಲ. ಜನರ ಸ್ವಾತಂತ್ರ್ಯ ಹಾಗೂ ಸಾಮರ್ಥ್ಯದ ಹೆಚ್ಚಳವನ್ನಾಗಿ ನೋಡುತ್ತಾರೆ.
ದೇಶ ಶ್ರೀಮಂತವಾದರೆ ಪ್ರಜೆಗಳೂ ಶ್ರೀಮಂತರಾಗಬೇಕಾಗಿಲ್ಲ. ಸಂಪತ್ತು ಕೆಲವರ ಬಳಿಯಲ್ಲೇ ಸೇರಿಕೊಳ್ಳುತ್ತಾ ಹೋಗಬಹುದು. ಬಹುತೇಕ ದೇಶಗಳಲ್ಲಿ ಆಗಿರುವುದೇ ಇದು. ಭಾರತದಲ್ಲಿ 2022ರಲ್ಲಿ ಒಟ್ಟಾರೆ ಸಂಪತ್ತಿನ ಶೇ 40ರಷ್ಟು ಭಾಗ ಕೇವಲ ಶೇ 1ರಷ್ಟು ಶ್ರೀಮಂತರ ಬಳಿಯಿತ್ತು. ಕೆಳಗಿನ ಶೇ 50ರಷ್ಟು ಜನ ಬರೀ ಶೇ 3ರಷ್ಟು ಸಂಪತ್ತನ್ನು ಹಂಚಿಕೊಂಡು ಬದುಕುತ್ತಿದ್ದರು. ಹಾಗಾಗಿಯೇ 80 ಕೋಟಿ ಜನರಿಗೆ ಪುಕ್ಕಟೆಯಾಗಿ ಆಹಾರಧಾನ್ಯ ಕೊಡುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ದೇಶ ಶ್ರೀಮಂತವಾಗುತ್ತಿದೆ ಅಂದರೆ ದೇಶದ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ!
ಸಂಪತ್ತು ಕೇಂದ್ರೀಕರಣವಾಗುತ್ತಿದ್ದಂತೆ ರಾಜಕೀಯ ಹಾಗೂ ಆರ್ಥಿಕ ಅಧಿಕಾರವೂ ಕೇಂದ್ರೀಕರಣಗೊಳ್ಳುತ್ತಾ ಹೋಗುತ್ತದೆ. ಪ್ರಜಾಸತ್ತೆ ಹಾಗೂ ಸಿರಿವಂತಿಕೆಯ ಕೇಂದ್ರೀಕರಣ– ಎರಡೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಅಸಮಾನತೆ ತೀವ್ರವಾದಷ್ಟೂ ಜನಸಾಮಾನ್ಯರ ದನಿ ಹೆಚ್ಚು ಕಡೆಗಣನೆಗೆ ಒಳಗಾಗುತ್ತದೆ. ಜಿಡಿಪಿ ಹೆಚ್ಚಳವನ್ನು ಸಂಭ್ರಮಿಸುತ್ತಾ ನಾವು ನಿರಂಕುಶ ಆಳ್ವಿಕೆಯನ್ನು ಮೆಚ್ಚಿಕೊಳ್ಳುತ್ತಿರುತ್ತೇವೆ. ಬೆಳವಣಿಗೆಯನ್ನು ತೀವ್ರಗೊಳಿಸಬೇಕೆನ್ನುವ ಆತುರದಲ್ಲಿ ನೈಸರ್ಗಿಕ ಸಂಪತ್ತನ್ನೂ ನಾಶ ಮಾಡುತ್ತಿರುತ್ತೇವೆ. ಮುಂದಿನ ತಲೆಮಾರಿನವರ ಬದುಕನ್ನೂ ಕಸಿದುಕೊಳ್ಳುತ್ತಿರುತ್ತೇವೆ.
ಇಷ್ಟಕ್ಕೂ ಐಎಂಎಫ್‌ನ ಲೆಕ್ಕಾಚಾರ ಸರಿಯಿರಬೇಕೆಂದೇನೂ ಇಲ್ಲ. ಲೆಕ್ಕಾಚಾರಕ್ಕೆ ಐಎಂಎಫ್ ಕೂಡ ಸರ್ಕಾರದ ಅಂಕಿಅಂಶಗಳನ್ನೇ ಬಳಸಿಕೊಳ್ಳುತ್ತಿದೆ. ಸರ್ಕಾರದ ಲೆಕ್ಕಾಚಾರದಲ್ಲಿ ಸಮಸ್ಯೆಗಳಿವೆ. ಉದಾಹರಣೆಗೆ, ಅಸಂಘಟಿತ ಕ್ಷೇತ್ರದ ಉತ್ಪಾದನೆ ಕುರಿತು ನಮ್ಮಲ್ಲಿ ನಿಖರವಾದ ಮಾಹಿತಿಯಿಲ್ಲ. ಸಂಘಟಿತ ಕ್ಷೇತ್ರದ ಮಾಹಿತಿಯನ್ನಾಧರಿಸಿ ಅದನ್ನು ಅಂದಾಜು ಮಾಡಲಾಗುತ್ತಿದೆ. ಕೆಲ ವರ್ಷಗಳಿಂದ ಅಸಂಘಟಿತ ಕ್ಷೇತ್ರ ತೀವ್ರ ಬಿಕ್ಕಟ್ಟಿನಲ್ಲಿದೆ. ಅದನ್ನು ಸಂಘಟಿತ ಕ್ಷೇತ್ರದ ಸಮಕ್ಕೆ ಯೋಚಿಸುವುದು ಕಷ್ಟ. ಜೊತೆಗೆ, ಈ ಜಿಡಿಪಿ ಸಂಖ್ಯೆಯೂ ಅಂತಿಮವಲ್ಲ. ಹೆಚ್ಚಿನ ಮಾಹಿತಿ ಸಿಕ್ಕಂತೆಲ್ಲಾ ಇದನ್ನು ಪರಿಷ್ಕರಿಸಲಾಗುತ್ತದೆ. ಹಿಂದೆಯೂ ಹೀಗೆ ಆಗಿದೆ.
2019–20ರಲ್ಲಿ, ಆರಂಭದಲ್ಲಿ ಜಿಡಿಪಿಯ ಬೆಳವಣಿಗೆಯು ಶೇ 5.1ರಷ್ಟು ಇರುತ್ತದೆ ಎಂಬ ಅಂದಾಜು ಇತ್ತು. ಅಂತಿಮವಾಗಿ ಬೆಳವಣಿಗೆಯು ಶೇ 3.9ರಷ್ಟು ಎಂದು ಪ್ರಕಟಿಸಲಾಯಿತು. ಜೊತೆಗೆ, ಸ್ವತಃ ಐಎಂಎಫ್ ಗುರುತಿಸಿರುವಂತೆ ಟ್ರಂಪ್ ನೀತಿಯಿಂದಾಗಿ ಇಂದು ಜಗತ್ತಿನ ಆರ್ಥಿಕತೆಯಲ್ಲಿ ತೀವ್ರ ಅನಿಶ್ಚಿತತೆ ಇದೆ. ಅದೂ ಜಿಡಿಪಿಯನ್ನು ಪ್ರಭಾವಿಸುತ್ತದೆ. ಮತ್ತೂ ಒಂದು ಸಮಸ್ಯೆಯಿದೆ. ಆರ್ಥಿಕತೆಗಳನ್ನು ಹೋಲಿಸುವುದಕ್ಕಾಗಿ ಜಿಡಿಪಿಯನ್ನು ಡಾಲರಿಗೆ ಪರಿವರ್ತಿಸಲಾಗುತ್ತದೆ. ಅದಕ್ಕೆ ವಿನಿಮಯ ದರವನ್ನು ಬಳಸಿಕೊಳ್ಳಲಾಗುತ್ತದೆ. ವಿದೇಶಿ ವಿನಿಮಯ ದರದಲ್ಲಿ ಏರುಪೇರಾದರೆ ಜಿಡಿಪಿಯ ಅಂದಾಜು ಏರುಪೇರಾಗುತ್ತದೆ. ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿದು, ಜಪಾನಿನ ಯೆನ್ ಮೌಲ್ಯ ಹೆಚ್ಚಿದರೆ ಜಪಾನ್ ಮೇಲೇರಬಹುದು.
ಒಂದು ಪಕ್ಷ ನಾವು ಜಪಾನನ್ನು ಹಿಂದೆ ಹಾಕಿದರೂ ಸರಾಸರಿ ಭಾರತೀಯ ಜಪಾನೀಯರಿಗಿಂತಲೂ ಹಿಂದಿರುತ್ತಾನೆ. ಜಪಾನಿನ ಜಿಡಿಪಿಯನ್ನು ಅಲ್ಲಿಯ 12.30 ಕೋಟಿ ಜನರಿಗೆ ಹಂಚಿದರೆ, ಪ್ರತಿಯೊಬ್ಬನಿಗೆ 33,900 ಡಾಲರ್ ಸಿಗುತ್ತದೆ. ಭಾರತೀಯ ತಲಾ ಆದಾಯ ಕೇವಲ 2,880 ಡಾಲರ್. ಅಂದರೆ, ನಾವು ಜಪಾನಿಯರಿಗಿಂತ 12 ಪಟ್ಟು ಬಡವರಾಗಿಯೇ ಇರುತ್ತೇವೆ. 200 ದೇಶಗಳ ತಲಾ ಆದಾಯದ ಪಟ್ಟಿಯಲ್ಲಿ ಭಾರತ 130ನೇ ಸ್ಥಾನದಲ್ಲಿದೆ. ಜಪಾನ್ ನಮಗಿಂತ ಜನಸಂಖ್ಯೆಯಲ್ಲಿ, ಭೌಗೋಳಿಕ ವಿಸ್ತಾರದಲ್ಲಿ ತುಂಬಾ ಪುಟ್ಟ ರಾಷ್ಟ್ರ. ಅಲ್ಲಿನ ನೈಸರ್ಗಿಕ ಸಂಪತ್ತೂ ನಮ್ಮಷ್ಟಿಲ್ಲ. ಆದರೆ, ಅದು ನಮ್ಮಷ್ಟೇ ಶ್ರೀಮಂತವಾಗಿದೆ. ತಂತ್ರಜ್ಞಾನದಂತಹ ಹಲವು ಕ್ಷೇತ್ರಗಳಲ್ಲಿ ನಮಗಿಂತ ಮುಂದಿದೆ. ಹಾಗಾಗಿ ಆರ್ಥಿಕತೆಗಳ ಹೋಲಿಕೆ ಸಂಕೀರ್ಣವಾದ ವಿಷಯ.
ಆರ್ಥಿಕತೆ ಬೆಳೆದಂತೆ ಜನರ ಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ ಎನ್ನುವ ನಂಬಿಕೆಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ಇದು ಬೆಳವಣಿಗೆಯ ಮಾದರಿಯನ್ನು ಗಮನಿಸುವುದಿಲ್ಲ. ಕೃಷಿ, ಸಣ್ಣ ಉದ್ದಿಮೆಯಂತಹ ಮಾನವ ಸಂಪನ್ಮೂಲ ಬೇಡುವ ಕ್ಷೇತ್ರಗಳಲ್ಲಿ ಬೆಳವಣಿಗೆಯಾದರೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ, ಹೆಚ್ಚು ಬಂಡವಾಳ ಬೇಡುವ ಬೃಹತ್ ಉದ್ದಿಮೆಗಳು ಅಷ್ಟಾಗಿ ಉದ್ಯೋಗವನ್ನು ಸೃಷ್ಟಿಸುವುದಿಲ್ಲ. ನಮ್ಮಲ್ಲಿ ಇಂದು ಬೆಳವಣಿಗೆಯನ್ನು ತಂತ್ರಜ್ಞಾನ, ಹಣಕಾಸು ವಲಯ ಹಾಗೂ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ನಿರ್ದೇಶಿಸುತ್ತಿವೆ. ಇವೆಲ್ಲಾ ಬಂಡವಾಳಕೇಂದ್ರಿತ ಉದ್ದಿಮೆಗಳು. ನಮ್ಮ ಜಿಡಿಪಿಯ ಶೇ 50ಕ್ಕೂ ಹೆಚ್ಚು ಇವುಗಳಿಂದಲೇ ಬರುತ್ತಿರುವುದು. ಆದರೆ ಇವು ಸೃಷ್ಟಿಸುತ್ತಿರುವ ಉದ್ಯೋಗ ಶೇ 30ರಷ್ಟು ಕೂಡ ಇಲ್ಲ. ಬಹುತೇಕ ಜನ ತೊಡಗಿರುವುದು ಕೃಷಿ ಹಾಗೂ ಅಸಂಘಟಿತ ಕ್ಷೇತ್ರದಲ್ಲಿ. ಆದರೆ ಜಿಡಿಪಿಗೆ ಅವುಗಳ ಕೊಡುಗೆ ಕಡಿಮೆ.
ಜಾನ್ ಸ್ಟುವರ್ಟ್ ಮಿಲ್ ಬಹಳ ಹಿಂದೆಯೇ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಿಂತ ಅದನ್ನು ವಿತರಿಸುವುದು ನಮ್ಮ ಆದ್ಯತೆಯ ವಿಷಯವಾಗಬೇಕು ಎಂದಿದ್ದ. ಬೆಳವಣಿಗೆಯ ದೃಷ್ಟಿಯಿಂದಲೂ ಅದು ಮುಖ್ಯ. ಸಂಪತ್ತು ಕೆಲವರಲ್ಲೇ ಕೇಂದ್ರೀಕೃತವಾದರೆ, ಬಹುಸಂಖ್ಯಾತರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಸ್ವಾಭಾವಿಕವಾಗಿಯೇ ಬೇಡಿಕೆ ಕುಸಿಯುತ್ತದೆ. ಉತ್ಪಾದಿತ ವಸ್ತುಗಳು ಮಾರಾಟವಾಗದೆ ಉಳಿದುಕೊಂಡರೆ ಉತ್ಪಾದನೆಯೂ ಕಮ್ಮಿಯಾಗುತ್ತದೆ. ಅಂತಿಮವಾಗಿ ಬೆಳವಣಿಗೆ ಕುಸಿಯುತ್ತದೆ. ವಿದೇಶಿ ಸರಕುಗಳ ಮೇಲೆ ಸುಂಕ ಹಾಕುವ ಟ್ರಂಪ್ ಹಾದಿಗೆ ಜಗತ್ತು ಆತುಕೊಂಡರೆ ರಫ್ತಿಗೂ ತೊಂದರೆಯಾಗುತ್ತದೆ. ಬಿಕ್ಕಟ್ಟು ಇನ್ನಷ್ಟು ತೀವ್ರವಾಗುತ್ತದೆ.
ಅಭಿವೃದ್ಧಿ ಅನ್ನುವುದು ದೇಶಗಳ ನಡುವಿನ ಸ್ಪರ್ಧೆಯಲ್ಲ. ನಮ್ಮ ಆಂತರಿಕ ಅವಶ್ಯಕತೆಗೆ ತಕ್ಕಂತೆ ನಡೆಯಬೇಕಾದ ಪ್ರಕ್ರಿಯೆ. ಜನಸಾಮಾನ್ಯರ ಒಳಿತು ಅಭಿವೃದ್ಧಿಯ ಕೇಂದ್ರವಾಗಬೇಕು. ಶಿಕ್ಷಣ, ಆರೋಗ್ಯ, ತೆರಿಗೆ, ಹೀಗೆ ಎಲ್ಲವನ್ನೂ ಅದರ ಸುತ್ತಲೇ ಯೋಜಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.