ADVERTISEMENT

ವಿಶ್ಲೇಷಣೆ | ‘ಚಂದಾ’ ಯೋಜನೆ: ಸಂಶೋಧನೆಗೆ ಬಲ?

ಎಚ್.ಕೆ.ಶರತ್
Published 6 ಜನವರಿ 2025, 23:42 IST
Last Updated 6 ಜನವರಿ 2025, 23:42 IST
   

ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ
ಸಂಬಂಧಿಸಿದ ಸುಮಾರು 13,000 ಸಂಶೋಧನಾ ಪತ್ರಿಕೆಗಳ ವಿದ್ಯುನ್ಮಾನ ಪ್ರತಿಗಳನ್ನು (ಇ-ಕಾಪಿ) ಲಭ್ಯವಾಗಿಸುವ ಗುರಿ ಹೊಂದಿರುವ ‘ಒಂದು ದೇಶ ಒಂದು ಚಂದಾ’ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಇತ್ತೀಚೆಗೆ ದೊರೆತಿದೆ. 2025ರಿಂದ 2027ರವರೆಗೆ ಈ ಯೋಜನೆಯ ಸಲುವಾಗಿ ಒಕ್ಕೂಟ ಸರ್ಕಾರವು ₹6,000 ಕೋಟಿ ವಿನಿಯೋಗಿಸಲಿದೆ. 30 ಅಂತರ ರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು ಹೊರತರುತ್ತಿರುವ ಸಂಶೋಧನಾ ಪತ್ರಿಕೆಗಳು ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಕಾರ್ಯನಿರ್ವಹಿಸು ತ್ತಿರುವ ದೇಶದ 6,300ಕ್ಕೂ ಹೆಚ್ಚು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿನ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಲಭ್ಯವಾಗಲಿವೆ.

ಮಾಹಿತಿ ಮತ್ತು ಗ್ರಂಥಾಲಯ ಜಾಲದ (inflibnet) ಮೂಲಕ ಇದು ಅನುಷ್ಠಾನಕ್ಕೆ ಬರಲಿದೆ. ಸರ್ಕಾರಿ ಸ್ವಾಮ್ಯದ ಹಲವು ಶಿಕ್ಷಣ ಸಂಸ್ಥೆಗಳಲ್ಲಿನ ಸಂಶೋಧನಾರ್ಥಿಗಳಿಗೆ ಹೆಚ್ಚೆಚ್ಚು ಸಂಶೋಧನಾ ಪ್ರಬಂಧಗಳನ್ನು ಪರಾಮರ್ಶಿಸುವ ಅವಕಾಶ ಇದರಿಂದ ದೊರೆಯಲಿದೆ.

ಇದು ದೇಶದ ಉನ್ನತ ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಹೆಚ್ಚು ಆರ್ಥಿಕ ಸಂಪನ್ಮೂಲಗಳನ್ನು
ಹೊಂದಿರುವ ಬೆರಳೆಣಿಕೆಯಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಹೆಚ್ಚಿನ ಸಂಶೋಧನಾ ಪತ್ರಿಕೆಗಳನ್ನು ಪಡೆಯುವ ಅವಕಾಶವಿದೆ. ಉತ್ತಮ ಉದ್ದೇಶ ಮತ್ತು ಗುರಿ ಹೊಂದಿರುವ ಈ ಉಪಕ್ರಮವು ಸಂಶೋಧನಾ ಪತ್ರಿಕೆಗಳನ್ನು ಹೊರತರುತ್ತಿರುವ ಕೆಲ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳ ಧೋರಣೆ ಕುರಿತೂ ಚರ್ಚೆ ಏರ್ಪಡಲು ಕಾರಣವಾಗಿದೆ.

ADVERTISEMENT

ಸಂಶೋಧನಾ ಪತ್ರಿಕೆಗಳ ಪ್ರಕಟಣಾ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಕೆಲವು ಪ್ರಕಾಶನ ಸಂಸ್ಥೆಗಳು, ಲಾಭಕ್ಕಾಗಿ ಅನುಸರಿಸುತ್ತಿರುವ ಧೋರಣೆಯಿಂದಾಗಿ ಒಟ್ಟಾರೆ ಸಂಶೋಧನಾ ಕ್ಷೇತ್ರ ಮತ್ತು ಜ್ಞಾನವನ್ನು ಎಲ್ಲರಿಗೂ ಮುಕ್ತವಾಗಿಸುವ ಆಶಯಕ್ಕೆ ಪೆಟ್ಟು ಬೀಳುತ್ತಿದೆ ಎನ್ನುವ ಅಸಮಾಧಾನವೂ ಇದೆ. ಇದಕ್ಕೆ ಪರ್ಯಾಯವಾಗಿ, ಸಂಶೋಧನಾ ಪತ್ರಿಕೆಗಳನ್ನು ಉಚಿತವಾಗಿ ಎಲ್ಲರಿಗೂ ಲಭ್ಯವಾಗಿಸುವ ‘ಮುಕ್ತ ಲಭ್ಯತೆ’ (ಓಪನ್‌ ಆ್ಯಕ್ಸೆಸ್‌) ಮಾದರಿಗೆ ಜಾಗತಿಕ ಸಂಶೋಧನಾ ವಲಯದಲ್ಲಿ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತಿದೆ. ಇಲ್ಲಿ, ಸಂಶೋಧನಾ ಪ್ರಬಂಧಗಳನ್ನು ಯಾರು ಬೇಕಾದರೂ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಓದಬಹುದು. ಆದರೆ, ಈ ಪತ್ರಿಕೆಗಳು ಸಂಶೋಧನಾ ಲೇಖನವೊಂದರ ಪ್ರಕಟಣೆಗೆ ತಗಲುವ ವೆಚ್ಚವನ್ನು ಆಯಾ ಲೇಖಕರಿಂದಲೇ ಪಡೆಯುತ್ತವೆ.

ಸಂಶೋಧನಾ ಪತ್ರಿಕೆಗಳ ಮುದ್ರಿತ ಆವೃತ್ತಿ ಇಂದು ಬಹುತೇಕ ಅಪ್ರಸ್ತುತವೇ ಆಗಿದೆ. ವಿದ್ಯುನ್ಮಾನ ಆವೃತ್ತಿಗಳ ಬಳಕೆ ಹೆಚ್ಚಿದೆ. ಸಂಶೋಧನಾ ಲೇಖನಗಳ ಬರವಣಿಗೆ, ಪರಾಮರ್ಶೆ ಮತ್ತು ಉಲ್ಲೇಖ ಪ್ರಕ್ರಿಯೆಗಳನ್ನು ಸರಳಗೊಳಿಸುವ ತಾಂತ್ರಿಕ ಹತಾರಗಳ ಬಳಕೆಯೂ ವ್ಯಾಪಕವಾಗಿದೆ. ಜಾಗತಿಕ ಸಂಶೋಧನಾ ವಲಯದಲ್ಲಿ ಅತಿ ಹೆಚ್ಚು ಬಳಕೆಗೆ ಒಳಪಟ್ಟ ಮತ್ತು ಸಂಶೋಧನಾ ಜ್ಞಾನವನ್ನು ನಿಜವಾದ ಅರ್ಥದಲ್ಲಿ ಎಲ್ಲರಿಗೂ ಮುಕ್ತ ಗೊಳಿಸುವಲ್ಲಿ ಯಶಸ್ಸು ಕಂಡಿದ್ದ ‘ಸೈ-ಹಬ್’ (sci-hub) ಯೋಜನೆಯು 2021ರ ನಂತರ ಕಾನೂನಾತ್ಮಕ ಕುಣಿಕೆಗೆ ಸಿಲುಕಿ ತನ್ನ ಪ್ರಸ್ತುತತೆ ಕಳೆದುಕೊಳ್ಳುತ್ತಿದೆ. ‘ಒಂದು ದೇಶ ಒಂದು ಚಂದಾ’ದಂತಹ ಉಪಕ್ರಮಗಳ ಅನುಪಸ್ಥಿತಿಯಲ್ಲಿ ಬಹುತೇಕ ಪಾವತಿಸಿ ಓದಬೇಕಿದ್ದ ಸಂಶೋಧನಾ ಪತ್ರಿಕೆಗಳನ್ನು ‘ಸೈ-ಹಬ್’ ಸುಲಭವಾಗಿ ಲಭ್ಯವಾಗಿಸುತ್ತಿತ್ತು. ಆದರೆ, 2021ರ ನಂತರ ಪ್ರಕಟವಾದ, ಪಾವತಿಸಿ ಓದಬೇಕಾದ ಸಂಶೋಧನಾ ಪ್ರಬಂಧಗಳನ್ನು ಇಂದು ‘ಸೈ-ಹಬ್’ ನೆರವಿನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಸದ್ಯದ ಮಟ್ಟಿಗೆ ‘ಒಂದು ದೇಶ ಒಂದು ಚಂದಾ’ ದೇಶದಲ್ಲಿನ ಸಂಶೋಧನಾ ಚಟುವಟಿಕೆ ಗಳನ್ನು ಉತ್ತೇಜಿಸಲು ನೆರವಾಗಬಲ್ಲ ಉಪಕ್ರಮ.

2013ರಿಂದ 2020ರವರೆಗೂ ಸಕ್ರಿಯವಾಗಿದ್ದ ‘ಸೈ-ಹಬ್’ ವಿವಾದಾತ್ಮಕ ಯೋಜನೆಯು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಬಹುಪಾಲು ಸಂಶೋಧನಾ ಲೇಖನಗಳನ್ನು ಉಚಿತವಾಗಿ ಲಭ್ಯವಾಗಿಸುತ್ತಿತ್ತು. ಕಾಪಿರೈಟ್ ಉಲ್ಲಂಘನೆಯ ಕಾರಣ ಮಂದಿಟ್ಟುಕೊಂಡು ಪ್ರಕಾಶನ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದ ರಿಂದ, 2021ರಿಂದ ‘ಸೈ-ಹಬ್’ ಸಂಪನ್ಮೂಲಕ್ಕೆ ಹೊಸ ಲೇಖನಗಳನ್ನು ಸೇರಿಸಲಾಗುತ್ತಿಲ್ಲ. ಕಾಪಿರೈಟ್ ಉಲ್ಲಂಘನೆ ಯನ್ನು ಗಣನೆಗೆ ತೆಗೆದುಕೊಳ್ಳದೆ ಸಂಶೋಧನಾ ಜ್ಞಾನವನ್ನು ಎಲ್ಲರಿಗೂ ಉಚಿತವಾಗಿ ಲಭ್ಯವಾಗಿಸುವ ‘ಸೈ-ಹಬ್’ನಂತಹ ಯೋಜನೆ ನಿಂತ ನೀರಾದ ಮೇಲೆ, ಚಂದಾ ಮಾಡಿಸದೆ ಸಂಶೋಧನಾ ಪತ್ರಿಕೆಗಳನ್ನು ಪಡೆಯುವ ದಾರಿ ಬಂದ್ ಆಯಿತು. ‘ಸೈ-ಹಬ್’ ಸಂಗ್ರಹದಲ್ಲಿ ಇಂದಿಗೂ 8.83 ಕೋಟಿ ಸಂಶೋಧನಾ ಲೇಖನಗಳು ಮತ್ತು ಪುಸ್ತಕಗಳ ವಿದ್ಯುನ್ಮಾನ ಪ್ರತಿಗಳು ಉಚಿತವಾಗಿ ಲಭ್ಯವಾಗುತ್ತಿವೆ.

ಇಂದು ‘ಒಂದು ದೇಶ ಒಂದು ಚಂದಾ’ದಂತಹ ಉಪಕ್ರಮವು ದೇಶದ ಸಂಶೋಧನಾ ವಲಯದಲ್ಲಿ ಹೊಸ ಆಶಾಭಾವ ಮೂಡಿಸಲು ‘ಸೈ-ಹಬ್’ ಸಕ್ರಿಯವಾಗಿ ಇಲ್ಲದಿರುವುದು ಕೂಡ ಒಂದು ಪ್ರಮುಖ ಕಾರಣ. ‘ಸೈ-ಹಬ್’ ಮೂಲಕ ಅತಿ ಹೆಚ್ಚು ಲೇಖನಗಳನ್ನು ಡೌನ್‌ಲೋಡ್ ಮಾಡಿಕೊಂಡ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಚೀನಾ ಮತ್ತು ಅಮೆರಿಕ ಮೊದಲ ಎರಡು ಸ್ಥಾನಗಳಲ್ಲಿವೆ. ಇದು ‘ಸೈ-ಹಬ್’ ಭಾರತದ ಸಂಶೋಧನಾ ವಲಯದಲ್ಲಿ ಯಾವ ಪರಿ ಜನಪ್ರಿಯವಾಗಿತ್ತು ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಭಾರತದಲ್ಲಿ ‘ಸೈ-ಹಬ್’ ಬಳಕೆದಾರರ ಸಂಖ್ಯೆ ಹೆಚ್ಚಳವನ್ನು ಗಮನಿಸಿ ಎಚ್ಚೆತ್ತುಕೊಂಡ ಪ್ರಕಾಶನ ಸಂಸ್ಥೆಗಳು, ಅದರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿ ಯೋಜನೆಯ ನಾಗಾಲೋಟಕ್ಕೆ ತಡೆ ಒಡ್ಡಿದವು.

ವ್ಯವಸ್ಥಿತ ರೀತಿಯಲ್ಲಿ ನಡೆಸುವ ಸಂಶೋಧನೆಗಳಿಗೆ ಸಂಶೋಧನಾ ಪರಾಮರ್ಶೆ ಭದ್ರ ಬುನಾದಿ ಒದಗಿಸುತ್ತದೆ. ವಿಸ್ತಾರವಾಗಿ ಸಂಶೋಧನಾ ಪರಾಮರ್ಶೆ ನಡೆಸಲು ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾದ, ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಬಂಧಗಳನ್ನು ಓದಿ, ಅರ್ಥೈಸಿಕೊಂಡು, ತಮ್ಮ ಸಂಶೋಧನೆಗೆ ಪೂರಕವಾಗಬಲ್ಲ ಸಂಗತಿಗಳನ್ನು ವ್ಯವಸ್ಥಿತ ರೀತಿಯಲ್ಲಿ ದಾಖಲಿಸಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಗುಣಮಟ್ಟದ ಪತ್ರಿಕೆಗಳಿಗೆ ಚಂದಾ ಹೊಂದಿಲ್ಲದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆ ಕೈಗೊಳ್ಳುತ್ತಿರುವವರಿಗೆ, ತಮಗೆ ಅಗತ್ಯವಿರುವ ಪ್ರಬಂಧಗಳನ್ನು ಸಂಗ್ರಹಿಸುವುದೇ ಸವಾಲಿನ ಕೆಲಸ. ‘ಒಂದು ದೇಶ ಒಂದು ಚಂದಾ’ ಯೋಜನೆ ಇಂತಹ ತೊಡಕುಗಳನ್ನು ನಿವಾರಿಸುವ ಆಶಾಭಾವ ಮೂಡಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ನಿರ್ಣಯಿಸಲು ಆಯಾ ಸಂಸ್ಥೆಗಳಲ್ಲಿ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿರುವವರು ಎಷ್ಟು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಎನ್ನುವುದು ಮುಖ್ಯ ಮಾನದಂಡವಾಗಿದೆ. ಹೀಗಾಗಿ, ಸಂಶೋಧನಾ ಲೇಖನಗಳ ಪ್ರಕಟಣೆ ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಹೆಚ್ಚೆಚ್ಚು ಪ್ರಕಟಿಸಿದಂತೆಲ್ಲ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಹೀಗಾಗಿ, ಪ್ರಕಟಣೆ ವೇಳೆ ಅನುಸರಿಸಬೇಕಾದ ನೈತಿಕ ಮೌಲ್ಯಗಳನ್ನೆಲ್ಲ ಗಾಳಿಗೆ ತೂರಿ ಗುರಿ ಮುಟ್ಟುವ ಕಸರತ್ತು ಕೂಡ ದೇಶದ ಶೈಕ್ಷಣಿಕ ವಲಯದಲ್ಲಿ ಚಾಲ್ತಿಯಲ್ಲಿದೆ. ‘ಒಂದು ದೇಶ ಒಂದು ಚಂದಾ’ದಂತಹ ಉಪಕ್ರಮ ಹೆಚ್ಚೆಚ್ಚು ಪ್ರಕಟಿಸುವ ಉಮೇದಿಗೆ ಬಿದ್ದಿರುವವರ ಪಾಲಿಗೂ ವರದಾನವಾಗಲಿದೆ.

ಈ ಉಪಕ್ರಮವು ಸದ್ಯ ವಿಕೇಂದ್ರೀಕೃತ ಮಾದರಿಯಲ್ಲಿ ಅಸ್ತಿತ್ವದಲ್ಲಿರುವ ಆಯಾ ಶಿಕ್ಷಣ ಸಂಸ್ಥೆಯ ಅಗತ್ಯಕ್ಕೆ ಅನು ಗುಣವಾಗಿ ಸಂಶೋಧನಾ ಪತ್ರಿಕೆಗಳಿಗೆ ಚಂದಾ ಮಾಡಿಸುವ ಆಯ್ಕೆಯನ್ನು ಕಸಿದುಕೊಳ್ಳುವ ಅಪಾಯವೂ ಇದೆ. ಸಂಶೋಧನಾ ಕೇಂದ್ರವೊಂದಕ್ಕೆ ಅಗತ್ಯವಿರುವ ಪತ್ರಿಕೆಗಳು ‘ಒಂದು ದೇಶ ಒಂದು ಚಂದಾ’ ವ್ಯಾಪ್ತಿಗೆ ಒಳಪಡದಿದ್ದರೆ ತನ್ನಲ್ಲಿರುವ ಸಂಪನ್ಮೂಲ ಬಳಸಿಯೇ ಅಂತಹ ಪತ್ರಿಕೆಗಳನ್ನು
ಖರೀದಿಸುವ ಸಂದರ್ಭ ಎದುರಾಗಲಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸಂಶೋಧನಾ ವಲಯವನ್ನು ಆವರಿಸಿರುವ ತಪ್ಪು ಆದ್ಯತೆಗಳನ್ನು ಸರಿಪಡಿಸುವ ದಿಸೆಯಲ್ಲಿ ಕೂಡ ಒಕ್ಕೂಟ ಸರ್ಕಾರ ಚಿಂತಿಸುವ ಜರೂರತ್ತಿದೆ. ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿದೆ. ಸಂಶೋಧನೆಗಳ ಮೂಲಕ ಹೊರಹೊಮ್ಮುವ ತಿಳಿವಳಿಕೆಯನ್ನು ಪ್ರಾಯೋಗಿಕ ವಾಗಿಯೂ ಅನುಷ್ಠಾನಯೋಗ್ಯ ಆಗಿಸುವಲ್ಲಿ ಇರುವ ತೊಡಕುಗಳನ್ನು ಗುರುತಿಸಿ, ಅವುಗಳ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲದೇಹೋದಲ್ಲಿ, ಸಂಶೋಧನಾ ಚಟುವಟಿಕೆ ಮತ್ತು ಪ್ರಕಟಣೆ ಪ್ರಮಾಣದಲ್ಲಿ ಏರುಗತಿ ಕಂಡುಬಂದರೂ ಅದರಿಂದ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಾಗದು.

ಲೇಖಕ: ಸಹಾಯಕ ಪ್ರಾಧ್ಯಾಪಕ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.