ವಿಶ್ಲೇಷಣೆ
ದೂರದಿಂದ ನೋಡಿದಾಗ ತೀರಾ ಸಾಮಾನ್ಯ ವ್ಯಕ್ತಿಯಂತೆ ಕಾಣಿಸುವ ಹಾವೇರಿಯ ಮಾಲತೇಶ ಅಂಗೂರ ಅವರ ಹತ್ತಿರ ಹೋದರೆ ಅವರ ಪರಿಸರ ಕಾಳಜಿಯ ಹಲವು ಕಿಟಕಿಗಳು ನಿಧಾನವಾಗಿ ತೆರೆದುಕೊಳ್ಳುತ್ತವೆ. ಕೊನೆಗೆ ಪರಿಸರ ಮಾಹಿತಿಗಳ ಬೆಟ್ಟ ಹತ್ತಿದ ಅನುಭವ ಉಂಟಾಗುತ್ತದೆ.
‘ರಾಜ್ಯದ ಎರಡನೇ ಅತಿ ದೊಡ್ಡ ಕೆರೆಯಾದ ಹಾವೇರಿಯ ಹೆಗ್ಗೆರೆಗೆ ದೂರದ ದೇಶಗಳಿಂದ ವಲಸೆ ಬರುವ ಅಪರೂಪದ ಪ್ರಾಣಿ-ಪಕ್ಷಿಗಳು ಬೇಟೆಗಾರರಿಗೆ ಬಲಿಯಾಗುತ್ತಿವೆ’ ಎಂಬ ಆತಂಕ ಅವರದು. ಹೋದ ವರ್ಷದ ಆಗಸ್ಟ್ 30ರಂದು ಹೆಗ್ಗೆರೆಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐತಿಹಾಸಿಕ ಕೆರೆಯನ್ನು ಪಕ್ಷಿಧಾಮವನ್ನಾಗಿ ಘೋಷಿಸಿ ಅಭಿವೃದ್ಧಿ ಮಾಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಮಾಲತೇಶ ವಿಷಾದಿಸುತ್ತಾರೆ.
ಶಿರಸಿ ಬಳಿಯ ಕಾನ್ಮನೆಯ ಶಿವಾನಂದ ಕಳವೆ ಅವರಿಗಿರುವ ಕೆರೆಕಟ್ಟೆಗಳ ಬಗೆಗಿನ ಜ್ಞಾನ ಮತ್ತು ಧ್ಯಾನ ಅಪರೂಪದ್ದು. ರಾಜ್ಯದ ಬಹುಪಾಲು ಭಾಗಗಳ ಜಲಸ್ಥಿತಿಯ ಅನುಭವಜನ್ಯ ಮಾಹಿತಿ, ಸಮಸ್ಯೆಗಳ ಸ್ವರೂಪ ಹಾಗೂ ಸರಳ ಪರಿಹಾರೋಪಾಯಗಳು ಅವರ ಬಳಿಯಿವೆ. ‘ಕೆರೆಯ ಹೂಳನ್ನು ತೆಗೆಯುವುದು ಸುಲಭ, ಆದರೆ ಜನರ ತಲೆಯ ಹೂಳನ್ನು ತೆಗೆಯುವ ಕೆಲಸವೂ ಆಗಬೇಕು’ ಎಂಬ ಅವರ ಮಾತಿನಲ್ಲಿ ಕಟು ವಾಸ್ತವದ ವಾಸನೆ ಹೊಮ್ಮುತ್ತದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟದಲ್ಲಿ ದಾಸದೊಡ್ಡಿಯ ಕಾಮೇಗೌಡರು ಕೈಯಾರೆ 16 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ಸಾವಿರಾರು ಗಿಡಗಳನ್ನು ಬೆಳೆಸಿದ್ದರು. ಅಂತರ್ಜಲ ಹೆಚ್ಚಳಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಲಿ ಎಂಬ ಉದಾತ್ತ ಆಶಯ ಹೊತ್ತಿದ್ದರು. ಕುರಿ ಕಾಯುತ್ತಲೇ ಕೈಗೊಂಡ ಪರಿಸರ ಕಾರ್ಯಕ್ಕಾಗಿ ಅವರು ‘ಕೆರೆ ಕಾಮೇಗೌಡರು’ ಎಂದೇ ಜನಮನದಲ್ಲಿ ಉಳಿದಿದ್ದಾರೆ.
ಹಾಗೆಯೇ ಸಾಗರ ತಾಲ್ಲೂಕಿನ ‘ಸ್ವಾನ್ ಅಂಡ್ ಮ್ಯಾನ್’ ಸಂಘಟನೆಯು ಸಮುದಾಯದ ಸಹಭಾಗಿತ್ವದಲ್ಲಿ ಮಾಡಿರುವ ಕೆರೆಗಳ ಪುನಶ್ಚೇತನ ಸಾಹಸಗಳು ಗಮನಾರ್ಹ. ಸಮುದಾಯ ಪಾಲ್ಗೊಳ್ಳುವಿಕೆ ತತ್ವ ಬಳಸಿ ಈ ತಂಡ ಇದುವರೆಗೆ ತಮ್ಮೂರು ಸುತ್ತಲಿನ ಐದು ಪುರಾತನ ಕೆರೆಗಳನ್ನು ‘ಹೂಳುಮುಕ್ತ’ ಮಾಡಿದೆ. ‘ಬರೀ ಉತ್ಸಾಹ, ಸಲಹೆ, ಸೂಚನೆಗಳು ಕೆರೆಯ ಹೂಳನ್ನು ಎತ್ತಲಾರವು!’ ಎಂಬುದು ತಂಡದ ಸದಸ್ಯರು ಅನುಭವದಿಂದ ಕಲಿತ ಎಚ್ಚರಿಕೆಯ ಪಾಠ.
ಹೀಗೆ ಕೆರೆಗಳ ಸಂರಕ್ಷಣೆಗಾಗಿ ಶ್ರಮ ವಹಿಸುವ ವ್ಯಕ್ತಿಗಳು, ಸಣ್ಣಪುಟ್ಟ ಗುಂಪುಗಳಿಗೆ ಸೇರಿದವರು ರಾಜ್ಯದ ಉದ್ದಗಲಕ್ಕೂ ಅಲ್ಲಲ್ಲಿ ಕಾಣಸಿಗುತ್ತಾರೆ. ಬೆಂಗಳೂರಿನ ಲಿಯೊ ಸಲ್ಡಾನ್ಹಾ ನೇತೃತ್ವದ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ 2008ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕೆರೆಗಳ ಸಂರಕ್ಷಣೆಗಾಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಲವು ತಿರುವುಗಳಿಗೆ ಕಾರಣವಾಗಿದೆ. 2012ರಲ್ಲಿ ಹೊರಬಂದ ಅಂತಿಮ ತೀರ್ಪಿನಲ್ಲಿ, ಕೇಂದ್ರೀಯವಾಗಿ ಅಧಿಕಾರಿಗಳ ಸಮಿತಿಯನ್ನು ರಚಿಸುವ ಮೂಲಕ ಕೆರೆಗಳ ನಿರ್ವಹಣೆ ಮತ್ತು ಪುನಶ್ಚೇತನವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಯಿತು.
ಕೆರೆಗಳ ಮೂಲ ಸ್ವರೂಪ ಮತ್ತು ಪುನಶ್ಚೇತನದ ಪರಿಕಲ್ಪನೆಯ ಗಂಧಗಾಳಿಯಿಲ್ಲದ ಅಧಿಕಾರಿವರ್ಗದ ದೌರ್ಬಲ್ಯದ ಪರಿಣಾಮವಾಗಿ ಅರ್ಜಿದಾರರ ಮತ್ತು ನ್ಯಾಯಾಲಯದ ಆಶಯಕ್ಕೆ ವ್ಯತಿರಿಕ್ತವಾಗಿ ಬಹಳಷ್ಟು ಕೆರೆಗಳು ನಾಶವಾದವು. ಮೇಲಾಗಿ 2012ರ ತೀರ್ಪಿನಲ್ಲಿ ನಗರ ಪ್ರದೇಶಗಳ 40,000 ಕೆರೆಗಳನ್ನು ಸೇರಿಸಲಾಗಿತ್ತು, ಗ್ರಾಮೀಣ ಕೆರೆಗಳನ್ನು ಹೊರಗಿಡಲಾಗಿತ್ತು. ಪರಿಣಾಮವಾಗಿ, ಗ್ರಾಮೀಣ ಪ್ರದೇಶಗಳಲ್ಲಿನ 10,000 ಕೆರೆಗಳು ಈಗ ಕಣ್ಮರೆಯಾಗಿವೆ. ಸಿಟಿಜನ್ಸ್ ಆ್ಯಕ್ಷನ್ ಗ್ರೂಪ್ ಮತ್ತು ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಸಂಘಟನೆಗಳ ಸತತ ಪ್ರಯತ್ನದ ಫಲವಾಗಿ ಹೈಕೋರ್ಟ್ 2012ರ ತನ್ನ ಆದೇಶವನ್ನು ಹಿಂಪಡೆದು ತಿದ್ದುಪಡಿ ಮಾಡಿದೆ.
ಹಿಂದಿನ ಕೇಂದ್ರೀಕೃತ ಸಮಿತಿಯ ಅದಕ್ಷತೆಯನ್ನು ಗಮನಿಸಿದ ನ್ಯಾಯಾಲಯವು 2021ರ ಜೂನ್ 15ರ ತಿದ್ದುಪಡಿ ಆದೇಶದಲ್ಲಿ ಹೊಸ ವಿಕೇಂದ್ರೀಕೃತ ಸಮಿತಿಗಳನ್ನು ರಚಿಸಲು ನಿರ್ದೇಶಿಸಿದೆ. ಆ ಪ್ರಕಾರ, ಸಮಿತಿಗಳ ಕಾರ್ಯವ್ಯಾಪ್ತಿಯು ಕೆರೆಗಳು ಮತ್ತು ಇತರ ಜೌಗು ಪ್ರದೇಶಗಳ ಸಮೀಕ್ಷೆ, ಪುನರ್ವಸತಿ, ಪುನರುಜ್ಜೀವನ ಮತ್ತು ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಜಲಮೂಲಗಳ ಅತಿಕ್ರಮಣವನ್ನು ತಡೆಗಟ್ಟುವುದೂ ಸೇರಿದೆ. ಈ ಕ್ರಮವು ಪರಿಣಾಮಕಾರಿಯಾಗಿ ಜಾರಿಯಾದರೆ ಸ್ಥಳೀಯ ನಾಗರಿಕರು ಕೆರೆಗಳ ಆಡಳಿತ ಮತ್ತು ನಿರ್ಧಾರಕ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ವಾಸ್ತವದಲ್ಲಿ ರಾಜ್ಯದ ಎಲ್ಲೆಡೆಯ ಕೆರೆಕೊಳ್ಳಗಳ ದೈನೇಸಿ ಸ್ಥಿತಿಯು ನಮ್ಮ ನಾಗರಿಕ ಪ್ರಜ್ಞೆಯ ಅಭಾವ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರದ ತಾಂಡವಕ್ಕೆ ದ್ಯೋತಕವಾಗಿದೆ.
ನಿಸರ್ಗ ಮತ್ತು ಜೀವಸಂಕುಲದ ಸುಸ್ಥಿರತೆಗೆ ಸವಾಲು ಎಸೆಯುವುದಕ್ಕೆ ಪಣ ತೊಟ್ಟು ನಿಂತಿರುವ ಸರ್ಕಾರಗಳ ದೋಷಯುಕ್ತ ಅಭಿವೃದ್ಧಿ ಮಾದರಿಗಳು ಮಾಡುತ್ತಿರುವ ಅನಾಹುತ ಒಂದೆರಡಲ್ಲ. ಪರಿಸರ ನಾಶಕ್ಕೆ ಕಾರಣವಾಗುವಂತಹ ಯೋಜನೆಗಳಿಗೆ ವಿರೋಧ ಪಕ್ಷದಲ್ಲಿದ್ದಾಗ ಪ್ರತಿರೋಧ ಒಡ್ಡುವ ರಾಜಕಾರಣಿಗಳು ಆಡಳಿತಕ್ಕೆ ಬರುವುದೇ ತಡ, ತದ್ವಿರುದ್ಧ ನಿಲುವು ತಳೆಯುವುದನ್ನು ನಿರಂತರ ಗಮನಿಸುತ್ತಿದ್ದೇವೆ. ಜಾಗತಿಕ ಹವಾಮಾನ ತುರ್ತು ಪರಿಸ್ಥಿತಿ ಮನೆ ಬಾಗಿಲು ತಲುಪಿರುವ ಅರಿವು ಇರಿಸಿಕೊಂಡು ಕೂಡ ಆಡಳಿತ ನಡೆಸುವವರು ಅಸಡ್ಡೆ ತಾಳಿದರೆ, ನಾಗರಿಕರು ಎನ್ನಿಸಿಕೊಂಡವರು ಹೋರಾಟದ ಹೊಣೆಯನ್ನು ಇನ್ಯಾರದೋ ಹೆಗಲಿಗೆ ಹೊರೆಸಿ ಗೊಣಗುವುದನ್ನು ಕಾಣಬಹುದು.
ಇಷ್ಟಾಗಿಯೂ ಪರಿಸರ ಕಾಳಜಿಯ ಚಟುವಟಿಕೆಗಳಲ್ಲಿ, ಹೋರಾಟಗಳಲ್ಲಿ ತೊಡಗಿಸಿಕೊಂಡ ಮನಸ್ಸುಗಳು ತಮ್ಮದೇ ಆದ ರೀತಿ ಮತ್ತು ಮಿತಿಯಲ್ಲಿ ತಮ್ಮ ಜೀವಿತದ ಕರ್ತವ್ಯವೆಂಬಂತೆ ಶ್ರಮಿಸುತ್ತಿರುವುದನ್ನು ಗುರುತಿಸಲು ಸಾಧ್ಯ. ಶಿವಮೊಗ್ಗದ ಶರಾವತಿ ನದಿ-ಕಣಿವೆ ಉಳಿಸಿ ಹೋರಾಟ, ಕೊಪ್ಪಳದಲ್ಲಿ ಚಾಲ್ತಿಯಲ್ಲಿರುವ ಬೃಹತ್ ಉದ್ಯಮಗಳ ವಿರೋಧಿ ಚಳವಳಿ, ಸಂಡೂರು ಭಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಒಡ್ಡುತ್ತಿರುವ ಪ್ರತಿರೋಧ, ಎತ್ತಿನಹೊಳೆ ಯೋಜನೆಯ ಅವೈಜ್ಞಾನಿಕತೆ ಬಗೆಗೆ ಅರಿವು ಮೂಡಿಸುವ ಕಾರ್ಯಕ್ರಮ, ಮೈಸೂರಿನಲ್ಲಿ ಪರಿಸರ ಗುಂಪುಗಳು ಮರಗಳ ಹನನದ ವಿರುದ್ಧ ರೂಪಿಸಿದ ಪ್ರತಿಭಟನೆ... ಹೀಗೆ ಅಲ್ಲಲ್ಲಿ ಪರಿಸರ ಕಾಳಜಿಯ ಕ್ಷೀಣದನಿಗಳು ಕೇಳಿಬರುತ್ತಿವೆ.
ಇಂತಹ ದನಿಗಳನ್ನು ಒಟ್ಟುಗೂಡಿಸಿ ರಾಜ್ಯಮಟ್ಟದಲ್ಲಿ ದೊಡ್ಡ ಗರ್ಜನೆಗೆ ನಾಂದಿ ಹಾಡುವ ಹಂಬಲದಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಸಮಾನಾಸಕ್ತರೆಲ್ಲಾ ಸೇರಿ ‘ಪರಿಸರಕ್ಕಾಗಿ ನಾವು’ ಸಂಘಟನೆಗೆ ಚಾಲನೆ ನೀಡಿರುವುದು ಭರವಸೆದಾಯಕವಾಗಿದೆ. ರಾಜ್ಯದ ವಿವಿಧ ಭಾಗಗಳ ನೈಜ ಪರಿಸರವಾದಿಗಳ ಸಂಗಮವಾಗಿದ್ದ ಈ ಸಭೆಯಲ್ಲಿ ಜಲತಜ್ಞ ರಾಜೇಂದ್ರ ಸಿಂಗ್, ಅ.ನ.ಯಲ್ಲಪ್ಪ ರೆಡ್ಡಿ, ಬಿ.ಆರ್.ಪಾಟೀಲ, ಮೋಟಮ್ಮ, ಸುರೇಶ ಹೆಬ್ಳೀಕರ್, ಕಪ್ಪತ್ತಗುಡ್ಡ ಮತ್ತು ನಿಡಸೋಸಿ ಸ್ವಾಮೀಜಿಗಳು ಭಾಗವಹಿಸಿದ್ದರು. ದಲಿತ, ರೈತ, ಕನ್ನಡದಂತಹ ಎಲ್ಲಾ ಜನಪರ ಚಳವಳಿಗಳು ಪರಿಸರ ಹೋರಾಟವನ್ನು ಒಳಗೊಳ್ಳುವ ಅಗತ್ಯವಿದೆ ಎಂಬ ಪ್ರತಿಪಾದನೆಯಲ್ಲಿ ತಥ್ಯವಿದೆ.
ಸಂಘಟನೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಅಪರೂಪದ ರಾಜಕಾರಣಿ ಎ.ಟಿ.ರಾಮಸ್ವಾಮಿ ಅವರು ತಾವು ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಇಂತಹ ಸಂಘಟನೆಗಳು ಪಕ್ಷ ರಾಜಕಾರಣದಿಂದ ದೂರ ಇರಬೇಕಾದುದು ಅಗತ್ಯವೂ ಹೌದು. ಇಲ್ಲಿಯವರೆಗೂ ಅವರು ಬಿಜೆಪಿ ಜತೆಗಿದ್ದರು. ಪಕ್ಷದ ಜೊತೆಗಿನ ಸಂಬಂಧದ ಕುರಿತು ಅವರು ಇನ್ನಷ್ಟು ಸ್ಪಷ್ಟತೆ ಒದಗಿಸಿದರೆ ಕೆಲವರಲ್ಲಿ ಉಳಿದಿರಬಹುದಾದ ಅನುಮಾನಗಳು ಸಂಪೂರ್ಣ ನಿವಾರಣೆಯಾಗುತ್ತವೆ.
ವೈರಾಗ್ಯ ಮತ್ತು ಹೋರಾಟವು ವ್ಯಕ್ತಿಯ ಒಳಗಿನಿಂದ ಹುಟ್ಟುವಂತಹ ಕ್ರಿಯೆಗಳು. ಹಾಗಾಗಿ, ಸಕಲಜೀವರಾಶಿಗೆ ಸೇರಿದ ಪರಿಸರವನ್ನು ಮಲಿನ ಮಾಡುವ ಐಷಾರಾಮಿ ಬದುಕಿನ ಬಗ್ಗೆ ವ್ಯಕ್ತಿಗತವಾಗಿ ವೈರಾಗ್ಯ ತಾಳುವುದು ಹಾಗೂ ಹವಾಮಾನ ತುರ್ತುಪರಿಸ್ಥಿತಿ ಎದುರಿಸಲು ಹೋರಾಟದ ಮನೋಭಾವ ಬೆಳೆಸಿಕೊಳ್ಳುವುದು ಕಾಲದ ಕರೆಯೇ ಆಗಿದೆ. ವ್ಯಕ್ತಿಗಳ ಅಂತರಂಗದಲ್ಲಿ ಮೂಡುವ ಇಂತಹ ಬೆಳಕು ಸಂಘಟಿತ ಸ್ವರೂಪದಲ್ಲಿ ಪ್ರಕಟವಾಗಲು ಹೆಚ್ಚು ಸಮಯವನ್ನೇನೂ ಬೇಡಲಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.