ADVERTISEMENT

ವಿಶ್ಲೇಷಣೆ: ಎಸ್‌ಐಆರ್‌ ಲೋಪ– ಸಾಕ್ಷ್ಯ ಲಭ್ಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 23:49 IST
Last Updated 5 ಜನವರಿ 2026, 23:49 IST
<div class="paragraphs"><p>ವಿಶ್ಲೇಷಣೆ: ಎಸ್‌ಐಆರ್‌ ಲೋಪ– ಸಾಕ್ಷ್ಯ ಲಭ್ಯ</p></div>

ವಿಶ್ಲೇಷಣೆ: ಎಸ್‌ಐಆರ್‌ ಲೋಪ– ಸಾಕ್ಷ್ಯ ಲಭ್ಯ

   

ಯಾವುದೋ ಸಂಗತಿಯು ಯೋಜಿತವಲ್ಲದೆ ತನ್ನಿಂತಾನಾಗಿ ನಡೆದರೆ ಮತ್ತು ಎರಡು ಸಂಗತಿಗಳನ್ನು ನಮಗೆ ಹೋಲಿಸಲು ಅವಕಾಶ ಒದಗಿಸಿದರೆ ಅದನ್ನು ‘ಸಹಜ ಪ್ರಯೋಗ’ ಎಂದು ವಿಜ್ಞಾನಿಗಳು ಕರೆಯುತ್ತಾರೆ. ದಿಢೀರ್‌ ಲಾಕ್‌ಡೌನ್‌ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು– ಕಾರ್ಖಾನೆಗಳು ಮತ್ತು ವಾಹನಗಳು ನಿಂತುಬಿಟ್ಟಾಗ ನಮ್ಮ ಆಕಾಶ ಎಷ್ಟೊಂದು ನೀಲಿಯಾಗುತ್ತದೆ ಎಂಬುದನ್ನು ನೋಡುವ ಅವಕಾಶ ನಮಗೆ ಸಿಕ್ಕಿತು. ಈ  ರೀತಿಯದ್ದೊಂದು ತುಲನಾತ್ಮಕ ಅಧ್ಯಯನಕ್ಕಾಗಿ ನಾವು ಕೈಗಾರಿಕೆಗಳನ್ನು ನಿಲ್ಲಿಸಲಿಲ್ಲ. ಅದು ಅದಾಗಿಯೇ ಆಗಿಹೋಯಿತು.

ಇದೇ ರೀತಿಯ ಸಂಗತಿಯೊಂದು ಕೆಲ ದಿನಗಳ ಹಿಂದೆ ನಡೆಯಿತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಎರಡನೇ ಹಂತದಲ್ಲಿ ಎರಡು ಸಹಜ ಪ್ರಯೋಗಗಳು ಕಾಣಿಸಿಕೊಂಡವು. ಅವುಗಳಲ್ಲಿ ಒಂದನ್ನು ನಾವು ನಿರೀಕ್ಷಿಸಿದ್ದೆವು– ಅದು ಅಸ್ಸಾಂನಲ್ಲಿ ನಡೆದ ಅಸಹಜ ಪರಿಷ್ಕರಣೆ. ಅಸ್ಸಾಂನ ಮುಖ್ಯ ಚುನಾವಣಾಧಿಕಾರಿಯು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸುತ್ತಿದ್ದಂತೆಯೇ ‘ನೋಡಿ, ನಾವು ಅಂದುಕೊಂಡ ಹಾಗೆಯೇ ಆಗಿದೆ’ ಎಂಬುದು ನಮ್ಮ ನಡುವೆ ವಿನಿಮಯವಾದ ವಾಟ್ಸ್ಆ್ಯಪ್‌ ಸಂದೇಶವಾಗಿತ್ತು. ಎರಡನೆಯದು, ಯಾದೃಚ್ಛಿಕವಾಗಿ ಕಣ್ಣಿಗೆ ಬಿದ್ದದ್ದು– ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಸುದ್ದಿ. ಎಸ್‌ಐಆರ್‌ನ ವಿಧಾನದಲ್ಲಿಯೇ ಗಂಭೀರವಾದ ಲೋಪಗಳು ಇವೆ ಎಂಬುದರ ಕುರಿತು ಗಟ್ಟಿಯಾದ ವೈಜ್ಞಾನಿಕ ಪುರಾವೆಗಳನ್ನು ಈ ಎರಡು ಪ್ರಯೋಗಗಳು ನಮಗೆ ನೀಡುತ್ತವೆ ಅಥವಾ ವಾಸ್ತವದಲ್ಲಿ ಈ ಪುರಾವೆಯ ಸಮೀಪಕ್ಕೆ ಹೋಗಲು ಅವಕಾಶ ಒದಗಿಸುತ್ತವೆ. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಯೋಚನೆಯಲ್ಲಿ ಸಮಸ್ಯೆ ಇಲ್ಲ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಸಮಸ್ಯೆ ಏನೆಂದರೆ, ಎಸ್‌ಐಆರ್‌ನಲ್ಲಿ ಇರುವ ಹಿಂದೆಂದೂ ಕಂಡಿಲ್ಲದ ಮತ್ತು ಅನಗತ್ಯವಾದ ಎರಡು ಅಂಶಗಳು– ಕಡ್ಡಾಯವಾದ ಗಣತಿ ನಮೂನೆ ಭರ್ತಿ ಮತ್ತು ಪೌರತ್ವಕ್ಕೆ ಪುರಾವೆ ಸಲ್ಲಿಸಬೇಕಾದ ಅಗತ್ಯ. ಈ ಎರಡು ಅಂಶಗಳನ್ನು ಕೈಬಿಟ್ಟರೆ ಮತದಾರರ ಹೆಸರುಗಳ ಸಾಮೂಹಿಕ ಕೈಬಿಡುವಿಕೆ ಇಲ್ಲದೆಯೇ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತದೆ ಎಂಬುದನ್ನು ಈ ಎರಡು ಪ್ರಯೋಗಗಳು ತೋರಿಸುತ್ತವೆ.

ADVERTISEMENT

ಎಸ್‌ಐಆರ್‌ ಆರಂಭವಾದ ಬಿಹಾರದಿಂದಲೇ ನಮ್ಮ ಕಥೆ ಆರಂಭಿಸೋಣ. 65 ಲಕ್ಷ ಮತದಾರರ ಹೆಸರು ಕೈಬಿಟ್ಟು ಮತದಾರರ ಕರಡು ಪಟ್ಟಿ ಪ್ರಕಟವಾದಾಗಲೇ ಪ್ರತಿಯೊಬ್ಬರೂ ದಂಗಾಗಿದ್ದರು. ಕ್ರಮೇಣ, ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದಿಂದಾಗಿ ಹಾನಿಯ ಪ್ರಮಾಣ ಕಡಿಮೆಯಾಯಿತು ಮತ್ತು ಕೈಬಿಟ್ಟ ಮತದಾರರ ಸಂಖ್ಯೆ 44 ಲಕ್ಷಕ್ಕೆ ಇಳಿಯಿತು. ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಸಿದ್ಧಾಂತಗಳು ಇವೆ. ಬಿಹಾರದಲ್ಲಿ, ಒಂದಕ್ಕಿಂತ ಹೆಚ್ಚು ಮತಗಳಿರುವ ವಲಸಿಗರ ಸಂಖ್ಯೆ ದೊಡ್ಡದೇ ಇದೆ. ಬಹುಶಃ, ಬಿಹಾರದಲ್ಲಿನ ಆಡಳಿತಾತ್ಮಕ ಅದಕ್ಷತೆಯಿಂದಾದ ಅಸಡ್ಡೆಯಿಂದ ಹಲವು ಹೆಸರುಗಳು ಹೆಚ್ಚುವರಿಯಾಗಿ ಮೂಲ ಪಟ್ಟಿಗೆ ಸೇರಿರಬಹುದು. ಅಥವಾ ಹೊಸ ಎಸ್‌ಐಆರ್‌ ವಿಧಾನದ ಆರಂಭಿಕ ಸಮಸ್ಯೆಗಳು ಬಿಹಾರದಲ್ಲಿ ಕಾಣಿಸಿಕೊಂಡಿರಬಹುದು. ಎಚ್ಚರಿಕೆಯ ವಿಶ್ಲೇಷಣೆಯು ಈ ಪ್ರತಿಯೊಂದು ಸಿದ್ಧಾಂತವನ್ನೂ ಒಡೆದು ಹಾಕಬಹುದಿತ್ತು. ಆದರೆ, ಎಚ್ಚರಿಕೆಯಿಂದ ಪರಿಶೀಲಿಸುವ ಸಂಯಮವನ್ನು ಯಾರೂ ತೋರಲಿಲ್ಲ, ವಿಶೇಷವಾಗಿ ಬಿಹಾರ ಚುನಾವಣಾ ಫಲಿತಾಂಶದ ಬಳಿಕ ಅದು ಯಾರಿಗೂ ಬೇಡವಾಯಿತು. 

ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಿಕೆಯು ಬಿಹಾರಕ್ಕೆ ಸೀಮಿತವಲ್ಲ ಎಂಬುದು ಎರಡನೇ ಹಂತದಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಎಸ್‌ಐಆರ್‌ನಲ್ಲಿ ದೃಢಪಟ್ಟಿತು. ಈಗ ಈ ಪ್ರಕ್ರಿಯೆ ದೇಶದ ಅರ್ಧ ಭಾಗದಷ್ಟಕ್ಕೆ ವ್ಯಾಪಿಸಿದೆ. 6.56 ಕೋಟಿ ಮತದಾರರು ತಮ್ಮ ಹಕ್ಕು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಇದು ನಮ್ಮ ತಾತ್ಕಾಲಿಕ ಅಂದಾಜಾದ 6.28 ಕೋಟಿಗಿಂತ ಸ್ವಲ್ಪ ಹೆಚ್ಚೇ ಇದೆ. ಇನ್ನೂ 5.3 ಕೋಟಿ ಮತದಾರರ ಮೇಲೆಯೂ ಹಕ್ಕು ರದ್ದತಿಯ ಕತ್ತಿ ನೇತಾಡುತ್ತಿದ್ದು, (ಭಾರಿ ‘ಹೊಂದಾಣಿಕೆ’ ಬಳಿಕ ಉತ್ತರ ಪ್ರದೇಶದಲ್ಲಿ ಸುಮಾರು 3 ಕೋಟಿ ಮತದಾರರು) ಅವರೆಲ್ಲರೂ ನೋಟಿಸ್‌ ಪಡೆಯಲಿದ್ದಾರೆ.

ಎರಡನೇ ಹಂತದ ಪ್ರಕ್ರಿಯೆಯಲ್ಲಿ ತಲ್ಲಣಗೊಳಿಸುವಂತಹ ಹಲವು ಅಂಶಗಳು ಕಾಣಿಸಿವೆ. ಎಸ್‌ಐಆರ್‌ನಿಂದಾಗಿ ರದ್ದಾದ ಮತದಾರರ ಹೆಸರುಗಳಿಗೆ ವಲಸೆಯೊಂದಿಗೆ ಯಾವ ಸಂಬಂಧವೂ ಇಲ್ಲ ಎಂಬುದು ದೃಢಪಟ್ಟಿದೆ. ಒಳ ವಲಸೆಯ ರಾಜ್ಯಗಳಾದ ಗುಜರಾತ್‌ ಮತ್ತು ಗೋವಾದಂತಹ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಂತಹ ಹೊರ ವಲಸೆಯ ರಾಜ್ಯಗಳಲ್ಲಿಯೂ ಮತದಾರರ ಪಟ್ಟಿ ದೊಡ್ಡ ಪ್ರಮಾಣದಲ್ಲಿ ಕುಗ್ಗಿದೆ. ಗುಜರಾತ್‌ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹೆಸರು ಕೈಬಿಡುವಿಕೆಯಿಂದಾಗಿ ಮತದಾರರ ಪಟ್ಟಿಯು ಕುಗ್ಗಿದೆ (ವಯಸ್ಕರ ಸಂಖ್ಯೆಗೆ ಹೋಲಿಸಿದರೆ ಮತದಾರರ ಸಂಖ್ಯೆ ಕಡಿಮೆ). ಹಾಗೆಯೇ ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯು ಹಿಗ್ಗಿದೆ. ಎಸ್‌ಐಆರ್‌ನಿಂದಾಗಿ ಹೆಸರು ಕೈಬಿಡುವಿಕೆಯ ದೊಡ್ಡ ಹೊಡೆತ ಮಹಿಳೆಯರ ಮೇಲೆ ಬಿದ್ದಿದೆ. ಎಸ್‌ಐಆರ್‌ ನಡೆದ ಪ್ರತಿ ರಾಜ್ಯದಲ್ಲಿಯೂ ಲಿಂಗ ಅನುಪಾತ ಕುಸಿದಿದೆ.

ಇಲ್ಲೊಂದು ಪ್ರಶ್ನೆ ಉಂಟಾಗುತ್ತದೆ: ಭಿನ್ನ ವಿಧಾನವೊಂದನ್ನು ಅನುಸರಿಸಿದ್ದರೆ ಮತದಾರರ ಹೆಸರು ರದ್ದಾಗುತ್ತಿರಲಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಈ ಪ್ರಶ್ನೆಗೆ ಈತನಕ ನಮ್ಮಲ್ಲಿ ಉತ್ತರ ಇರಲಿಲ್ಲ. ಆದರೆ, ಅಸ್ಸಾಂನ ಸಹಜ ಪ್ರಯೋಗದಿಂದಾಗಿ ನಮಗೆ ಈಗ ಉತ್ತರ ಸಿಕ್ಕಿದೆ. 

ದೇಶದಾದ್ಯಂತ ಬಳಸಿದ ಎಸ್‌ಐಆರ್‌ ವಿಧಾನವನ್ನು ಕೈಬಿಟ್ಟ ಏಕೈಕ ರಾಜ್ಯ ಇದು ಮಾತ್ರ. ಇತರೆಡೆಯಲ್ಲಿ ನಡೆಸಿದ ಸಂದರ್ಭದಲ್ಲಿಯೇ ಇಲ್ಲಿಯೂ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಸರಳ ಮತ್ತು ತ್ರಾಸದಾಯಕವಾದ ಮನೆ ಮನೆ ಭೇಟಿ ಮೂಲಕ ಪರಿಶೀಲನೆ ನಡೆಸಲಾಗಿದೆ. ಇಲ್ಲಿ ಗಣತಿ ನಮೂನೆಗಳನ್ನು ಬಳಸಲಾಗಿಲ್ಲ ಮತ್ತು ಪೌರತ್ವವನ್ನು ಸಾಬೀತುಪಡಿಸಿ ಎಂದು ಕೇಳಲಾಗಿಲ್ಲ (ಪೌರತ್ವಕ್ಕೆ ಸಂಬಂಧಿಸಿ ಗಂಭೀರವಾದ ಸಮಸ್ಯೆ ಇರುವ ರಾಜ್ಯದಲ್ಲಿ ಈ ವಿಧಾನ ಅನುಸರಿಸಿರುವುದು ಅಚ್ಚರಿದಾಯಕವೇ). ಈ ರೀತಿಯಲ್ಲಿ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗವು ಖಚಿತವಾದ ನಿರ್ದೇಶನಗಳನ್ನು ನೀಡಿತ್ತು. 

ಫಲಿತಾಂಶ ಇಲ್ಲಿದೆ: 2.52 ಕೋಟಿ ಮತದಾರರ ಹೆಸರಿದ್ದ ಪಟ್ಟಿಯ ಪರಿಷ್ಕರಣೆಯನ್ನು ನಡೆಸಲಾಯಿತು. 10.56 ಲಕ್ಷ ಮತದಾರರ ಹೆಸರು ಕೈಬಿಡಲಾಯಿತು ಮತ್ತು 10.55 ಲಕ್ಷ ಮತದಾರರ ಹೆಸರು ಸೇರಿಸಲಾಗಿದೆ. ಹೀಗಾಗಿ, ಇತ್ತೀಚೆಗೆ ಪ್ರಕಟಿಸಲಾದ ಮತದಾರರ ಕರಡು ‍ಪಟ್ಟಿಯಲ್ಲಿರುವ ಮತದಾರರ ಸಂಖ್ಯೆ ನಿಖರವಾಗಿ 2.52 ಕೋಟಿ. ಶೇಕಡ ಸೊನ್ನೆಯಷ್ಟು ಹೆಸರು ಕೈಬಿಡುವಿಕೆ ದಾಖಲಾದ ಏಕೈಕ ರಾಜ್ಯ ಅಸ್ಸಾಂ ಮಾತ್ರ. ಇತರ ದೊಡ್ಡ ರಾಜ್ಯಗಳೊಂದಿಗೆ ಇದನ್ನು ಹೋಲಿಸಿ ನೋಡಿ– ಶೇ 8ರಿಂದ ಶೇ 19ರಷ್ಟು ಹೆಸರುಗಳನ್ನು ಕೈಬಿಡಲಾಗಿದೆ. ಹೊಣೆಗಾರಿಕೆಯನ್ನು ಮತದಾರರ ಮೇಲೆ ಹೇರದಿರುವುದು ಮತ್ತು ಪೌರತ್ವ ಸಾಬೀತುಪಡಿಸುವಂತೆ ಒತ್ತಾಯ ಇಲ್ಲದಿರುವುದರಿಂದ ಮತದಾರರು ಹಕ್ಕು ಕಳೆದುಕೊಂಡಿಲ್ಲ ಎಂಬುದು ಸ್ಪಷ್ಟ. 

ಇದು ಈಗಲೂ ಸಂದೇಹಕ್ಕೆ ಎಡೆ ಮಾಡಿ ಕೊಡುತ್ತದೆ: ನಾವು ಅಸಂಬದ್ಧ ಹೋಲಿಕೆಗಳನ್ನು ಮಾಡುತ್ತಿದ್ದೇವೆಯೇ? ಇದೇ ರಾಜ್ಯದಲ್ಲಿ ಒಂದೇ ಸಂದರ್ಭದಲ್ಲಿ ಎರಡು ವಿಧಾನ ಬಳಸಿದರೆ ಯಾವ ಫಲಿತಾಂಶ ಬರಬಹುದು?

ಈ ವಿಲಕ್ಷಣ ಸಹಜ ಪ್ರಯೋಗ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಚುನಾವಣಾ ಆಯೋಗವು ಉತ್ತರ ಪ್ರದೇಶದಲ್ಲಿ ಎಸ್‌ಐಆರ್‌ ನಡೆಸುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯ ಚುನಾವಣಾ ಆಯೋಗವು ಪಂಚಾಯಿತಿ ಚುನಾವಣೆಗಳಿಗಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿದೆ. ಎರಡು ಸಾಂವಿಧಾನಿಕ ಸಂಸ್ಥೆಗಳು ಉತ್ತರ ಪ್ರದೇಶದ ಅರ್ಹ ಮತದಾರರ ಪಟ್ಟಿಯನ್ನು ಏಕಕಾಲದಲ್ಲಿ ಪರಿಶೀಲನೆಗೆ ಒಳಪಡಿಸಿವೆ. ಒಂದೇ ವ್ಯತ್ಯಾಸ ಏನೆಂದರೆ, ರಾಜ್ಯ ಚುನಾವಣಾ ಆಯೋಗದ ಪರಿಷ್ಕರಣೆಗೆ ಗಣತಿ ನಮೂನೆ ಅಥವಾ ಪೌರತ್ವ ದಾಖಲೆ ಸಲ್ಲಿಕೆ ಅಗತ್ಯ ಇರಲಿಲ್ಲ. ರಾಜ್ಯ ಆಯೋಗವು ಡಿ. 5ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದೆ. 

ಈಗ ಈ ವ್ಯತ್ಯಾಸವನ್ನು ಗಮನಿಸಿ. 2025ರ ಡಿಸೆಂಬರ್‌ ಹೊತ್ತಿಗೆ ಉತ್ತರ ಪ್ರದೇಶದ ವಯಸ್ಕರ ಜನಸಂಖ್ಯೆ 16.1 ಕೋಟಿ. ಎಸ್‌ಐಆರ್‌ಗೆ ಮುಂಚೆ ಮತದಾರರ ಪಟ್ಟಿಯಲ್ಲಿದ್ದ ಹೆಸರುಗಳ ಸಂಖ್ಯೆ 15.4 ಕೋಟಿ. ಎಸ್‌ಐಆರ್‌ ನಂತರದಲ್ಲಿ ಅದು 12.6 ಕೋಟಿಗೆ ಕುಸಿದಿದೆ. ವಿಚಿತ್ರವೆಂದರೆ, ರಾಜ್ಯ ಆಯೋಗವು ನಡೆಸಿದ ಪರಿಷ್ಕರಣೆ ನಂತರದಲ್ಲಿ ಗ್ರಾಮೀಣ ಪ್ರದೇಶದ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಸಂಖ್ಯೆ 12.7 ಕೋಟಿ. ಚುನಾವಣಾ ಆಯೋಗ ಪರಿಷ್ಕರಿಸಿದ ಮತದಾರರ ಪೂರ್ಣ ಪಟ್ಟಿಯಲ್ಲಿರುವ ಹೆಸರುಗಳಿಗಿಂತ ಹೆಚ್ಚು. ಗ್ರಾಮೀಣ ಮತದಾರರ ಪಟ್ಟಿಗೆ 3.4 ಕೋಟಿ ನಗರ ಮತದಾರರನ್ನು ಸೇರಿಸಿದರೆ (ರಾಜ್ಯ ಆಯೋಗವು 2003ರಲ್ಲಿ ಪ್ರಕಟಿಸಿದ ಸಂಖ್ಯೆ) ಉತ್ತರ ಪ್ರದೇಶದ ಮತದಾರರ ಸಂಖ್ಯೆ 16.1 ಕೋಟಿಗೆ ಏರಿಕೆಯಾಗುತ್ತದೆ. ನಾವು ಇಲ್ಲಿ ಎರಡು ಭಿನ್ನ ವಿಧಾನಗಳನ್ನು ಅನುಸರಿಸಿದ್ದೇವೆ, ಮತದಾರರ ಸಂಖ್ಯೆಯಲ್ಲಿ ಬಹಳ ವ್ಯತ್ಯಾಸ ಕಂಡು ಬಂದಿದೆ. ಮತದಾರರ ಸಂಖ್ಯೆ ಎಸ್‌ಐಆರ್‌ ಪ್ರಕಾರ 12.6 ಕೋಟಿ ಆಗಿದ್ದರೆ, ಎಸ್‌ಐಆರ್‌ಯೇತರ ಪರಿಷ್ಕರಣೆ ಪ್ರಕಾರ 16.1 ಕೋಟಿ. ಇದು ಉತ್ತರ ಪ್ರದೇಶದ ಅಂದಾಜು ಜನಸಂಖ್ಯೆಯ ಸಂಖ್ಯೆಗೆ ಸಮಾನವಾಗಿದೆ.

ಇಲ್ಲಿ ನಾವು ಕಂಡುಕೊಳ್ಳಬಹುದಾದ ಒಂದೇ ಅಂಶ ಏನೆಂದರೆ, ಸಮಸ್ಯೆಗೆ ಎಸ್‌ಐಆರ್‌ ಕಾರಣ. ಈ ಸಹಜ ಪ್ರಯೋಗದ ಕುರಿತು ಸಮಾಜ ವಿಜ್ಞಾನಿಗಳು ಎಚ್ಚರಿಕೆಯಿಂದ ಪರಿಶೀಲನೆ ನಡೆಸಬೇಕು ಎಂದು ನಾವು ಕಾಯುತ್ತಿರಬೇಕಾದರೆ, ಎಸ್‌ಐಆರ್‌ನ ಕುರಿತು ನಮ್ಮ ಮೂಲಭೂತ ತೀರ್ಮಾನವು ನಮ್ಮನ್ನು ದಿಟ್ಟಿಸಿ ನೋಡುತ್ತಿದೆ: ಎಸ್‌ಐಆರ್‌ ಭಾರತದ ಮತದಾರರ ಮೇಲೆ ಛೂ ಬಿಡಲಾಗಿರುವ ಹಕ್ಕು ಕಬಳಿಸುವ ರಕ್ಕಸ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.