‘ಶಾಂತಿಕಾಲದಲ್ಲಿ ಮಕ್ಕಳು ತಮ್ಮ ಅಪ್ಪಂದಿರ ಅಂತ್ಯಸಂಸ್ಕಾರ ನಡೆಸುತ್ತಾರೆ, ಯುದ್ಧದ ಸಂದರ್ಭದಲ್ಲಿ ಅಪ್ಪಂದಿರು ತಮ್ಮ ಮಕ್ಕಳ ಅಂತ್ಯಸಂಸ್ಕಾರ ನಡೆಸುತ್ತಾರೆ’ ಎಂದು ಗ್ರೀಕ್ ಇತಿಹಾಸಕಾರ ಹೆರೊಡೊಟಸ್ 2,000ಕ್ಕೂ ಹೆಚ್ಚು ವರ್ಷಗಳ ಹಿಂದೆ ಹೇಳಿದ್ದ. ಭಯೋತ್ಪಾದಕರು ಜನರನ್ನು ಕೊಂದಾಗ ಯಾರು ಯಾರ ಅಂತ್ಯಸಂಸ್ಕಾರ ನಡೆಸುತ್ತಾರೋ, ಯಾರಿಗೆ ಗೊತ್ತು?
ನನ್ನ ಮನಸ್ಸು 1971ರ ಬಾಂಗ್ಲಾ ಯುದ್ಧದ ನೆನಪುಗಳತ್ತ ಹೊರಳುತ್ತಿದೆ. ಸೇನೆಯಲ್ಲಿದ್ದ ನಾವು ಆಗ 20ರ ಹರೆಯದವರು. ಯುದ್ಧದ ಮಾತುಗಳು ಕೇಳಿಬರು ತ್ತಿದ್ದವು. ಪೂರ್ವ ಪಾಕಿಸ್ತಾನದಲ್ಲಿ ಮಿಲಿಟರಿ ಕಾನೂನು ಹೇರಲಾಗಿತ್ತು. ಶೇಖ್ ಮುಜೀಬುರ್ ರೆಹಮಾನ್ ಸೇರಿದಂತೆ ಹಲವರನ್ನು ಅಲ್ಲಿ ಬಂಧಿಸಲಾಗಿತ್ತು. ಅಲ್ಲಿಂದ ಭಾರತದತ್ತ ನುಗ್ಗಿ ಬರುತ್ತಿದ್ದ ನಿರಾಶ್ರಿತರನ್ನು ಶಿಬಿರಗಳಲ್ಲಿ ಇರಿಸಲಾಗಿತ್ತು. ನಿರಾಶ್ರಿತರು ಭಾರತದತ್ತ ಬರುವುದನ್ನು ತಡೆಯುವುದು ಸಾಧ್ಯವೇ ಇಲ್ಲದ ಪರಿಸ್ಥಿತಿ ಎದುರಾದಾಗ, ಅಲ್ಲಿನ ಜನರನ್ನು ಪಾಕಿಸ್ತಾನದ ಸೇನೆಯ ಹಿಡಿತದಿಂದ ಬಿಡುಗಡೆಗೊಳಿಸಲು ಭಾರತೀಯ ಸೇನೆಯು ಆಕ್ರಮಣ ನಡೆಸಬೇಕಾಯಿತು.
ಪಾಕಿಸ್ತಾನದ ಸೇನೆಯು ಅವಮಾನಕಾರಿ ಸೋಲು ಕಂಡಿತು. ಈ ಯುದ್ಧದಲ್ಲಿ ಪಾಕಿಸ್ತಾನದ 6,000 ಸೈನಿಕರು ಮೃತಪಟ್ಟರು, ಭಾರತದ 2,000 ಯೋಧರು ಇನ್ನಿಲ್ಲವಾದರು. ಗಡಿ ಪ್ರದೇಶಗಳಲ್ಲಿನ ನೂರಾರು ನಾಗರಿಕರು ಜೀವ ಕಳೆದುಕೊಂಡರು, ಸಹಸ್ರಾರು ಮಂದಿಯ ಜೀವನಾಧಾರ ನಾಶವಾಯಿತು.
ನನ್ನ ಬ್ಯಾಚ್‌ನ ಯುವಕ, ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರು ಪಶ್ಚಿಮದ ಗಡಿಯಲ್ಲಿ ಸುಟ್ಟುಹೋಗುತ್ತಿದ್ದ ತಮ್ಮ ಯುದ್ಧಟ್ಯಾಂಕ್‌ನಲ್ಲಿ ನಿಂತು, ಕೊನೆಯ ಉಸಿರಿರುವವರೆಗೂ ಧೈರ್ಯದಿಂದ ಹೋರಾಡಿ ಹುತಾತ್ಮ ರಾದರು. ಅವರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಪರಮವೀರ ಚಕ್ರ’ ನೀಡಿ ಗೌರವಿಸಲಾಯಿತು. ಅವರ ತಂದೆ ಬ್ರಿಗೇಡಿಯರ್ ಎಂ.ಎಲ್. ಖೇತ್ರಪಾಲ್ ಅವರೂ ಹಿಂದೆ ಯುದ್ಧದಲ್ಲಿ ಭಾಗಿಯಾಗಿದ್ದವರೇ. ದುಃಖತಪ್ತರಾಗಿ ತಮ್ಮ ಮಗನ ಅಂತಿಮಸಂಸ್ಕಾರ ನೆರವೇರಿಸಿದ ಅವರು ‘ದೇಶದ ರಕ್ಷಣೆಗಾಗಿ ಪ್ರಾಣ ಅರ್ಪಿಸಿದ ನನ್ನ ಮಗನ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿದ್ದರು.
ಖೇತ್ರಪಾಲ್ ಅವರು ತಮಗೆ 81 ವರ್ಷ ವಯಸ್ಸಾ ದಾಗ, ತಾವು ಜನಿಸಿದ್ದ ಪಾಕಿಸ್ತಾನದ ಸರಗೋಧಾಕ್ಕೆ ಭೇಟಿ ನೀಡಿದ್ದರು. ದೇಶ ವಿಭಜನೆಗೂ ಮೊದಲು ಅವರು ಜನಿಸಿದ್ದರು. ಅಲ್ಲಿ ಅವರಿಗೆ ತಮ್ಮ ಹಳೆಯ ದಿನಗಳೆಲ್ಲ ನೆನಪಾದವು. ಲಾಹೋರ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬ್ರಿಗೇಡಿಯರ್ ಖ್ವಾಜಾ ಮೊಹಮ್ಮದ್ ನಾಸೆರ್ ಬರಮಾಡಿಕೊಂಡರು. ಬ್ರಿಗೇಡಿಯರ್ ಖೇತ್ರಪಾಲ್ ಅವರಿಗೆ ಬ್ರಿಗೇಡಿಯರ್ ನಾಸೆರ್ ಅವರೇ ಆತಿಥ್ಯ ನೀಡಿ ದರು. ಖೇತ್ರಪಾಲ್ ಅವರು ನಾಸೆರ್ ಅವರ ಮನೆಯಲ್ಲಿ ಅವರ ಕುಟುಂಬದ ಜೊತೆ ಮೂರು ದಿನ ಇದ್ದರು.
ನಾಸೆರ್ ಮತ್ತು ಅವರ ಕುಟುಂಬದವರು ತಮಗೆ ತೋರಿದ ಗೌರವ ಕಂಡು ಖೇತ್ರಪಾಲ್ ಅವರು
ಭಾವಪರವಶರಾಗಿದ್ದರು. ಖೇತ್ರಪಾಲ್ ಅವರನ್ನು ಬಹಳ ವಿಶೇಷವಾದ ವ್ಯಕ್ತಿಯೆಂಬಂತೆ ಅಲ್ಲಿ ನೋಡಿಕೊಳ್ಳ
ಲಾಗಿತ್ತು. ಆದರೂ ತಮ್ಮ ನಡುವೆ ಏನೋ ಸರಿ ಇಲ್ಲ ಎಂದು ಖೇತ್ರಪಾಲ್ ಅವರಿಗೆ ಅನ್ನಿಸಿತು. ಖೇತ್ರಪಾಲ್ ಅವರು ವಾಪಸ್ಸಾಗಬೇಕಿದ್ದ ಹಿಂದಿನ ರಾತ್ರಿ ನಾಸೆರ್ ಅವರು ಬಹಳ ಪ್ರಯತ್ನಪೂರ್ವಕವಾಗಿ ಒಂದು ವಿಷಯ ಹೇಳಿದರು. ‘ಸರ್, ನಿಮಗೆ ನಾನು ವರ್ಷಗಳಿಂದ ಹೇಳುವುದೊಂದು ಇತ್ತು. ಆದರೆ ನಿಮ್ಮನ್ನು ಸಂಪರ್ಕಿಸು ವುದು ಹೇಗೆಂಬುದು ಗೊತ್ತಾಗಿರಲಿಲ್ಲ... ಈಗ ನಾವು ಆತ್ಮೀಯರಾಗಿಬಿಟ್ಟಿದ್ದೇವೆ. ಇದು ನನ್ನ ಕೆಲಸವನ್ನು ಇನ್ನಷ್ಟು ಕಠಿಣವಾಗಿಸಿದೆ. ಇದು, ಭಾರತದಲ್ಲಿ ರಾಷ್ಟ್ರೀಯ ಹೀರೊ ಆಗಿರುವ ನಿಮ್ಮ ಮಗನಿಗೆ ಸಂಬಂಧಿಸಿದ್ದು’ ಎಂದು ಮಾತು ಶುರುಮಾಡಿದರು.
‘ಆ ಕೆಟ್ಟ ದಿನ ನಿಮ್ಮ ಮಗ ಮತ್ತು ನಾನು ಸೈನಿಕರಾಗಿದ್ದೆವು. ಒಬ್ಬರಿಗೆ ಇನ್ನೊಬ್ಬರು ಗೊತ್ತಿರಲಿಲ್ಲ. ನಾವಿಬ್ಬರೂ ನಮ್ಮ ದೇಶದ ಗೌರವಕ್ಕಾಗಿ, ರಕ್ಷಣೆಗಾಗಿ ಹೋರಾಡುತ್ತಿದ್ದೆವು. ನಿಮ್ಮ ಮಗ ನನ್ನ ಕೈಯಲ್ಲಿ ಪ್ರಾಣಬಿಟ್ಟ ಎಂಬುದನ್ನು ಹೇಳಲು ವಿಷಾದವಾಗುತ್ತಿದೆ. ಅರುಣ್ ತೋರಿದ ಧೈರ್ಯ ಅಸಾಮಾನ್ಯವಾಗಿತ್ತು, ಅವರು ತಮ್ಮ ಟ್ಯಾಂಕ್ ಅನ್ನು ನಿರ್ಭೀತಿಯಿಂದ ಮುನ್ನುಗ್ಗಿಸಿದರು. ತಮ್ಮ ಜೀವದ ಬಗ್ಗೆ ಲೆಕ್ಕಿಸಲೇ ಇಲ್ಲ. ಕೊನೆಯಲ್ಲಿ ನಾವಿಬ್ಬರು ಮಾತ್ರವೇ ಉಳಿದುಕೊಂಡಿದ್ದೆವು. ಪರಸ್ಪರರನ್ನು ಗುರಿಯಾಗಿಸಿ ಇಬ್ಬರೂ ಏಕಕಾಲದಲ್ಲಿ ಗುಂಡು ಹಾರಿಸಿದೆವು. ನಾನು ಉಳಿಯಬೇಕು, ಅರುಣ್ ಸಾಯಬೇಕು ಎಂಬುದು ವಿಧಿಯ ತೀರ್ಮಾನವಾಗಿತ್ತು... ನಿಮ್ಮ ಮಗ ಮಾಡಿದ ಕೆಲಸಕ್ಕೆ ನನ್ನದೊಂದು ಸೆಲ್ಯೂಟ್, ನಿಮಗೂ ನನ್ನದೊಂದು ಸೆಲ್ಯೂಟ್... ಕೊನೆಯಲ್ಲಿ ಪರಿಗಣನೆಗೆ ಬರುವುದು ವ್ಯಕ್ತಿತ್ವ ಮತ್ತು ಮೌಲ್ಯ ಮಾತ್ರ’ ಎಂದು ನಾಸೆರ್ ಹೇಳಿದರು.
ಖೇತ್ರಪಾಲ್ ಮೌನಕ್ಕೆ ಜಾರಿದರು. ತಮ್ಮ ಪುತ್ರನ ಜೀವ ತೆಗೆದಿದ್ದ ಸೈನಿಕನ ಆತಿಥ್ಯ ಸ್ವೀಕರಿಸಿದ್ದು ಮಿಶ್ರ ಭಾವವನ್ನು ಸ್ಫುರಿಸಿತು. ಸೈನಿಕರಾಗಿದ್ದ ಖೇತ್ರಪಾಲ್ ತಮಗೆ ಆತಿಥ್ಯ ನೀಡಿದ ಧೀರ ಸೈನಿಕನನ್ನು ಮೆಚ್ಚಿಕೊಂಡರು. ನಾಸೆರ್ ನೇತೃತ್ವದ ಯುದ್ಧ ಟ್ಯಾಂಕ್‌ಗಳ ತಂಡವನ್ನು ಖೇತ್ರಪಾಲ್ ಅವರ ಪುತ್ರ ನಾಶಪಡಿಸಿದ್ದರು. ಅನುಕಂಪ ಎಂಬುದು ಎಲ್ಲೆಡೆಯೂ ಕಾಣುವಂಥದ್ದು, ಅದು ರಾಷ್ಟ್ರೀಯತೆಯನ್ನೂ
ಮೀರಿ ನಿಲ್ಲುತ್ತದೆ ಎಂಬುದನ್ನು, ಮನಸ್ಸಿಗೆ ನಾಟುವ ಈ ಪ್ರಸಂಗವು ಹೇಳುತ್ತದೆ.
ಪಾಕಿಸ್ತಾನದ ಜೊತೆ ಕದನ ವಿರಾಮಕ್ಕೆ ಭಾರತ ಒಪ್ಪಿದ್ದನ್ನು ಕೇಳಿ, ಮನೆಯ ಜಗುಲಿಗಳಲ್ಲಿ ಆರಾಮವಾಗಿ ಕುಳಿತಿದ್ದ ಯುದ್ಧದಾಹಿಗಳು ಉನ್ಮಾದಕ್ಕೆ ಬಿದ್ದವರಂತೆ ವರ್ತಿಸಿದ್ದರು. ಡೊನಾಲ್ಡ್ ಟ್ರಂಪ್ ಹೇಳಿದ್ದಕ್ಕಾಗಿ ಕದನ ವಿರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿದ್ದಾರೆ ಎಂದು ವಿರೋಧ ಪಕ್ಷಗಳ ಕೆಲವರು ಟೀಕಿಸಿದರು. ಮಧ್ಯಪ್ರದೇಶದ ಸಚಿವರೊಬ್ಬರು ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಕೆಳಮಟ್ಟದ ಮಾತು ಆಡಿ ತಮ್ಮ ಮಾನವನ್ನು ತಾವೇ ಕಳೆದುಕೊಂಡರು.
ಆರಾಮ ಕುರ್ಚಿಯಲ್ಲಿ ಕುಳಿತು ರಕ್ತಕ್ಕಾಗಿ ಹಾತೊರೆಯುವವರನ್ನು, ‘ಎಕ್ಸ್’ನಲ್ಲಿ ಸೇನಾನಿಗಳಂತೆ ವರ್ತಿಸುವವರನ್ನು ಉದ್ದೇಶಿಸಿ ಸೇನಾಪಡೆಯ ನಿವೃತ್ತ ಮುಖ್ಯಸ್ಥ ಎಂ.ಎಂ. ನರವಣೆ ಅವರು, ಯುದ್ಧವೆಂದರೆ ಬಾಲಿವುಡ್‌ನ ರೊಮ್ಯಾಂಟಿಕ್ ಸಿನಿಮಾ ಅಲ್ಲ ಎಂದು ಎಚ್ಚರಿಸಿದರು. ಸಶಸ್ತ್ರ ಪಡೆಯ ಸೈನಿಕನು ದೇಶವನ್ನು ರಕ್ಷಿಸಲು, ಆದೇಶ ಬಂದಾಗ ಆಕ್ರಮಣ ನಡೆಸಲು ಯಾವತ್ತಿಗೂ ಸಿದ್ಧನಾಗಿರುತ್ತಾನೆ. ಆದರೆ ಆತ ಯುದ್ಧವನ್ನು ಬಯಸುವುದಿಲ್ಲ. ಆತ ಶಾಂತಿಯ ಪರ. ನರವಣೆ ಹೇಳಿದಂತೆ, ರಾಜತಾಂತ್ರಿಕ ಮಾರ್ಗ ಮತ್ತು ಮಾತುಕತೆಯು ಮೊದಲ ಆಯ್ಕೆಯಾಗಿರಬೇಕು.
ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ಮತ್ತು ಭಯೋತ್ಪಾದನೆಗೆ ಭಾರತ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಪ್ರಶ್ನೆ ಇಂದಿಗೂ ಇದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಉತ್ತರಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಗೆ ಪ್ರಚೋದನೆ ನೀಡಿದರೆ, ಅದನ್ನು ಭಯೋತ್ಪಾದಕರಿಗೆ ಸಮನಾಗಿ ಕಾಣಲಾಗುತ್ತದೆ, ಪ್ರತೀಕಾರವು ತ್ವರಿತವಾಗಿ ಇರಲಿದೆ ಎಂದು ಹೇಳಿದ್ದಾರೆ.
ಆದರೆ ಈ ಉದ್ದೇಶ ಈಡೇರಬೇಕು ಎಂದಾದರೆ, ಭಾರತವು ಬಲಿಷ್ಠವಾದ ಮಿಲಿಟರಿಯನ್ನು ಕಟ್ಟಬೇಕಿದೆ. ಬಲಿಷ್ಠವಾದ ಅರ್ಥವ್ಯವಸ್ಥೆ ಇಲ್ಲದೆ ಭಾರತವು ಬಲಿಷ್ಠವಾದ ಮಿಲಿಟರಿಯನ್ನು ಕಟ್ಟಲು ಆಗದು. ಸಾಮಾಜಿಕ ಸೌಹಾರ್ದ ಇಲ್ಲದ ವಿನಾ ದೇಶದಲ್ಲಿ ಸಮೃದ್ಧಿ ಇರುವುದಿಲ್ಲ. ಧ್ರುವೀಕೃತ ಸಮಾಜದಲ್ಲಿ ಸಂಘರ್ಷ ನಿರಂತರವಾಗಿದ್ದರೆ ವಿದೇಶಿ ಹೂಡಿಕೆ ಹೊರಹೋಗುತ್ತದೆ, ಉದ್ದಿಮೆಗಳು ಬೆಳೆಯುವುದಿಲ್ಲ. ಯುವಕರಿಗೆ ನೌಕರಿ ಇದ್ದರೆ, ಅವರ ಮನಸ್ಸನ್ನು ಕೆಡಿಸಿ ಕೈಗೆ ಬಂದೂಕು ಕೊಡುವುದು ಸುಲಭವಲ್ಲ.
ಪಾಕಿಸ್ತಾನದ ಮಿಲಿಟರಿಯನ್ನು ನಿಶ್ಶಕ್ತಗೊಳಿಸಿದರೂ ಅಲ್ಲಿಂದ ನಡೆಯುವ ಭಯೋತ್ಪಾದನೆ ಸುಲಭಕ್ಕೆ ನಿಲ್ಲುವುದಿಲ್ಲ. ಐಎಸ್‌ಐ ಮೂಲಕ ಪಾಕಿಸ್ತಾನದ ಸೇನೆಯು ನಾಗರಿಕ ಸರ್ಕಾರವನ್ನು ನಿಯಂತ್ರಿಸುತ್ತದೆ, ಭಯೋತ್ಪಾದನೆಯನ್ನು ಪೋಷಿಸುತ್ತದೆ, ಇಸ್ಲಾಮಿಕ್ ಮೂಲಭೂತವಾದಿಗಳ ಜೊತೆ ನಿಕಟ ಸಂಪರ್ಕ ಹೊಂದಿದೆ. ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನದ ಸೇನೆಯಲ್ಲಿನ ಕೆಲವರಿಗೆ ಶಾಂತಿ ಬೇಕಿಲ್ಲ.
ಭಾರತವು ಗಟ್ಟಿತನ ಪ್ರದರ್ಶಿಸಬೇಕು, ಭಯೋತ್ಪಾದನೆ ಯನ್ನು ಎದುರಿಸಲು ಶಕ್ತಿಶಾಲಿಯಾದ ಗೂಢಚರ ಜಾಲ ವನ್ನು ಕಟ್ಟಬೇಕು. ಇದೇ ಹೊತ್ತಿನಲ್ಲಿ ಎಲ್ಲ ಧರ್ಮಗಳ ಮೂಲಭೂತವಾದಿಗಳನ್ನೂ ಏಕಾಂಗಿಯಾಗಿಸಬೇಕು. ಎಲ್ಲ ಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಕಾಣಬೇಕು. ಶಕ್ತಿಶಾಲಿಯಾದ ಮಿಲಿಟರಿಯನ್ನು ಕಟ್ಟುವುದು ಎಷ್ಟು ಮುಖ್ಯವೋ ಇದೂ ಅಷ್ಟೇ ಮುಖ್ಯ.
ಲೇಖಕ: ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.