
ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಸಾಧಾರಣ ಶಕ್ತಿ ಮತ್ತು ನಿಖರತೆಯ ಪ್ರದರ್ಶನದೊಡನೆ 2026ನೇ ವರ್ಷವನ್ನು ಆರಂಭಿಸುತ್ತಿದೆ. ಜನವರಿ 12ರಂದು, ಬೆಳಗ್ಗೆ 10:17ಕ್ಕೆ ಸರಿಯಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಶ್ರೀಹರಿಕೋಟಾದಿಂದ ಪಿಎಸ್ಎಲ್‌ವಿ-ಸಿ62 ರಾಕೆಟ್ ಅನ್ನು ಉಡಾವಣೆಗೊಳಿಸಲಿದೆ. ಹಾಗೆಂದು ಇದು ಇತರ ಸಾಮಾನ್ಯ ಉಡಾವಣೆಗಳ ಹಾಗೇ ಇನ್ನೊಂದು ಉಡಾವಣೆಯಲ್ಲ. ಇದು ಇಸ್ರೊದ 'ವರ್ಕ್ ಹಾರ್ಸ್' ಎಂದು ಅಡ್ಡ ಹೆಸರು ಸಂಪಾದಿಸಿರುವ, ಅತ್ಯಂತ ನಂಬಿಕಾರ್ಹವಾದ ಪಿಎಸ್ಎಲ್‌ವಿ ರಾಕೆಟ್‌ನ 64ನೇ ಹಾರಾಟವಾಗಿದೆ. ಈ ಬಾರಿ ರಾಕೆಟ್ ಒಂದು ಬೃಹತ್ತಾದ 'ಸೂಪರ್ ಐ' ಉಪಗ್ರಹವನ್ನು ಮತ್ತು 18 ಸಣ್ಣ ಗಾತ್ರದ 'ಹಿಚ್‌ಹ್ಯಾಕರ್' ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲಿದೆ.
ಈ ಯೋಜನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಪಿಎಸ್ಎಲ್‌ವಿ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಸಂಚರಿಸುವ ಒಂದು ಹೈಟೆಕ್ ಬಸ್ ಎಂದು ಯೋಚಿಸಿ. ಬಹುತೇಕ 15 ಮಹಡಿಗಳ ಕಟ್ಟಡದಷ್ಟು ದೊಡ್ಡದಾಗಿರುವ ಈ ರಾಕೆಟ್, ಒಂದು ವಿಶೇಷವಾದ 'ಡಿಎಲ್' ವಿನ್ಯಾಸವನ್ನು ಬಳಸುತ್ತದೆ. ಇದು ತನ್ನ ಬದಿಗಳಲ್ಲಿ ಎರಡು ಹೆಚ್ಚುವರಿ ಬೂಸ್ಟರ್‌ಗಳನ್ನು ಹೊಂದಿದ್ದು, ಅವು ರಾಕೆಟ್ ಹಾರಾಟಕ್ಕೆ ಬೇಕಾದ ಆರಂಭಿಕ ಶಕ್ತಿ ನೀಡುತ್ತವೆ. ಈ ರಾಕೆಟ್ ಅನ್ನು ನಿಜಕ್ಕೂ ವಿಶೇಷ ಮತ್ತು ತೀಕ್ಷ್ಣವಾಗಿಸುವುದು ಇದು ಹೊಂದಿರುವ ನಾಲ್ಕು ಹಂತಗಳ ಇಂಜಿನ್. ಇದು ಬೃಹತ್ ಪಟಾಕಿಯ ರೀತಿ ಅತ್ಯಂತ ಹೆಚ್ಚಿನ ಶಕ್ತಿ ಬಿಡುಗಡೆಗೊಳಿಸುವ ಘನ ಇಂಧನ ಇಂಜಿನ್ ಮತ್ತು ನಿಖರ ನಿಯಂತ್ರಣ ಒದಗಿಸುವ ದ್ರವ ಇಂಧನ ಇಂಜಿನ್‌ಗಳನ್ನು ಒಂದರ ನಂತರ ಒಂದರಂತೆ ಬಳಸುತ್ತದೆ.
ಪ್ರತಿಯೊಂದು ಹಂತವೂ ತನ್ನ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಪ್ರತ್ಯೇಕಗೊಂಡು ಕೆಳಬೀಳುತ್ತದೆ. ಇದರಿಂದಾಗಿ ರಾಕೆಟ್ ಹಗುರಗೊಂಡು, ಅತ್ಯಂತ ವೇಗವಾಗಿ ಸಾಗುತ್ತಾ, 525 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ತಲುಪುತ್ತದೆ. ಈ ಎತ್ತರದಲ್ಲಿ ಯಾವುದೇ ವಾಣಿಜ್ಯಿಕ ವಿಮಾನವೂ ಹಾರಾಡಲು ಸಾಧ್ಯವಿಲ್ಲ. ನೂತನ ಯೋಜನೆ ಪಿಎಸ್ಎಲ್‌ವಿ ರಾಕೆಟ್‌ನ ಪುನರಾರಂಭವಾಗಿದ್ದು, ಕಳೆದ ವರ್ಷದ ಸಣ್ಣ ಹಿನ್ನಡೆಯ ಬಳಿಕ ರಾಕೆಟ್ ಮರಳಿ ಕಾರ್ಯಾಚರಿಸುತ್ತಿದೆ.
ಈ ಬಾರಿಯ ಉಡಾವಣೆಯಲ್ಲಿ ಗಮನ ಸೆಳೆಯುವ ಅಂಶವೆಂದರೆ, ಅನ್ವೇಷ ಎನ್ನುವ ಹೆಸರಿನ (ಇಒಎಸ್-ಎನ್1 ಎನ್ನುವ ಹೆಸರೂ ಇದೆ) ಉಪಗ್ರಹ. ಈ ಉಪಗ್ರಹವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ನಮ್ಮ ಕಣ್ಣುಗಳು ಮತ್ತು ಫೋನ್ ಕ್ಯಾಮರಾಗಳು ಮೂಲ ಬಣ್ಣಗಳನ್ನು ಮಾತ್ರವೇ ಗಮನಿಸಬಲ್ಲವು. ಆದರೆ, ಅನ್ವೇಷ ಉಪಗ್ರಹ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ. ಅಂದರೆ, ಇದು 'ಬಚ್ಚಿಟ್ಟ' ಬಣ್ಣಗಳನ್ನೂ ಗುರುತಿಸಬಲ್ಲದಾಗಿದ್ದು, ಮಾನವರ ಕಣ್ಣಿಗೆ ಕಾಣದ ವಿವರಗಳನ್ನೂ ಕಲೆಹಾಕಬಲ್ಲದು.
ಗಡಿಗಳಲ್ಲಿ ಕಾವಲು ಕಾಯುತ್ತಾ, ದೇಶ ರಕ್ಷಣೆ ನಡೆಸುವ ಭಾರತೀಯ ಯೋಧರಿಗೆ ಇದೊಂದು ಪ್ರಾಣ ರಕ್ಷಕ ಉಪಗ್ರಹವಾಗಿದೆ. ಅನ್ವೇಷ ಉಪಗ್ರಹ ನೈಜವಾದ ಹಸಿರು ಬಣ್ಣದ ಕಾಡು ಮತ್ತು ಹಸಿರು ಬಣ್ಣದ ಹೊದಿಕೆಯಡಿ ಮುಚ್ಚಿಟ್ಟಿರುವ ಯುದ್ಧ ಟ್ಯಾಂಕ್‌ಗಳ ನಡುವಿನ ವ್ಯತ್ಯಾಸಗಳನ್ನು ಸುಲಭವಾಗಿ ಗುರುತಿಸಬಲ್ಲದು. ಇದು ಲಡಾಖ್ ಅಥವಾ ಕಾಶ್ಮೀರದ ಕಷ್ಟಕರ ಪ್ರದೇಶಗಳಲ್ಲಿ ನಿರ್ಮಿಸಿರುವ ನೂತನ ಬಂಕರ್‌ಗಳು, ರಸ್ತೆಗಳನ್ನು ತೀವ್ರ ಹವಾಮಾನ ಪರಿಸ್ಥಿತಿಗಳಲ್ಲೂ ಗುರುತಿಸಬಲ್ಲದು. ರಕ್ಷಣಾ ಉದ್ದೇಶವನ್ನೂ ಮೀರಿ, ಈ ಉಪಗ್ರಹ ನಮ್ಮ ಭೂಮಿಯ ಪಾಲಿಗೆ ವೈದ್ಯನಂತೆಯೂ ಕಾರ್ಯಾಚರಿಸಲಿದ್ದು, ಗಿಡಗಳು ಬಾಯಾರಿವೆಯೇ ಎಂದು ಅವು ಬಾಡುವ ಮುನ್ನವೇ ಗುರುತಿಸಬಲ್ಲವು. ಇದರೊಡನೆ, ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಿಂದಲೇ ಅಕ್ರಮ ಗಣಿಗಾರಿಕೆ ಮತ್ತು ಜಲ ಮಾಲಿನ್ಯವನ್ನು ಗುರುತಿಸಬಲ್ಲವು.
ಅನ್ವೇಷ ಉಪಗ್ರಹದ ಜೊತೆಗೆ, 18 ಸಣ್ಣ ಉಪಗ್ರಹಗಳೂ ಈ ಉಡಾವಣೆಯಲ್ಲಿ ಭಾಗಿಯಾಗಲಿವೆ. ಇವುಗಳು ಕೇವಲ ಸಣ್ಣ ಉಪಕರಣಗಳಷ್ಟೇ ಅಲ್ಲದೆ, ಕ್ರಾಂತಿಕಾರಿ ಆಲೋಚನೆಗಳಾಗಿವೆ. ಉದಾಹರಣೆಗೆ, ಬೆಂಗಳೂರು ಮೂಲದ ಸ್ಟಾರ್ಟಪ್ ಸಂಸ್ಥೆಯೊಂದು 'ಆಯುಲ್‌ಸ್ಯಾಟ್' ಅನ್ನು ಪರೀಕ್ಷಿಸುತ್ತಿದೆ. ಈ ಆಯುಲ್‌ಸ್ಯಾಟ್ ಬಾಹ್ಯಾಕಾಶದಲ್ಲಿನ ಪೆಟ್ರೋಲ್ ಪಂಪ್ ಆಗಿದೆ. ಈಗ, ಬಾಹ್ಯಾಕಾಶದಲ್ಲಿ ಯಾವುದಾದರೂ ಉಪಗ್ರಹದ ಇಂಧನ ಖಾಲಿಯಾದರೆ, ಅದು ನಿರುಪಯುಕ್ತ ಬಾಹ್ಯಾಕಾಶ ತ್ಯಾಜ್ಯವಾಗುತ್ತದೆ. ಆದರೆ, ಆಯುಲ್‌ಸ್ಯಾಟ್ ಅವುಗಳಿಗೆ ಹೇಗೆ ಇಂಧನ ಮರುಪೂರಣ ನಡೆಸಬಹುದು ಎನ್ನುವುದನ್ನು ಪರಿಶೀಲಿಸಲಿದ್ದು, ಇದು ಯಶಸ್ವಿಯಾದರೆ ಬಿಲಿಯನ್‌ಗಟ್ಟಲೆ ರೂಪಾಯಿ ಹಣವನ್ನು ಉಳಿಸಬಹುದು.
ಇನ್ನೊಂದು ಉಪಗ್ರಹವಾದ, ಹೈದರಾಬಾದ್ ಮೂಲದ ಎಂಒಐ-1 ತನ್ನದೇ ಆದ ಮೆದುಳನ್ನು ಹೊಂದಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಈ ಉಪಗ್ರಹ, ಕಾಡ್ಗಿಚ್ಚು, ಪ್ರವಾಹಗಳ ಚಿತ್ರವನ್ನು ಗುರುತಿಸಿ, ಮಾನವರು ಮಾಹಿತಿಗಳನ್ನು ಪರಿಶೀಲಿಸುವ ಮುನ್ನವೇ ಮುನ್ನೆಚ್ಚರಿಕೆ ನೀಡಿ, ಜನರನ್ನು ಜಾಗೃತಗೊಳಿಸುತ್ತದೆ. ಈ 'ಆಲೋಚಿಸುವ' ಶಕ್ತಿಯುಳ್ಳ ಉಪಗ್ರಹ ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ, ಸಾವಿರಾರು ಜನರ ಪ್ರಾಣ ರಕ್ಷಿಸಬಲ್ಲದು.
ಪ್ರಸ್ತುತ ಯೋಜನೆ ಜಗತ್ತನ್ನೇ ಒಗ್ಗೂಡಿಸುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಾವು ಅಮೆರಿಕ, ಯುಎಇ, ಸ್ಪೇನ್, ಮತ್ತು ಮಾರಿಷಸ್‌ಗಳ ಉಪಗ್ರಹಗಳ ಉಡಾವಣೆ ನಡೆಸಲಿದ್ದೇವೆ. ಈ ಉಪಗ್ರಹಗಳ ಸಾಲಿನಲ್ಲಿ ಅತ್ಯಂತ ವಿಶೇಷವೆನಿಸುವ ಇನ್ನೊಂದು ಪೇಲೋಡ್ ಎಂದರೆ, ಬ್ರೆಜಿಲ್‌ನ ಆರ್ಬಿಟಲ್ ಟೆಂಪಲ್. ಈ ಸಣ್ಣ ಉಪಗ್ರಹ ಮೃತಪಟ್ಟಿರುವ ವ್ಯಕ್ತಿಗಳ ಹೆಸರನ್ನು ಹೊಂದಿದ್ದು, ಅವರ ನೆನಪುಗಳು ಭೂಮಿಯ ಸುತ್ತಲೂ, ನಕ್ಷತ್ರಗಳ ಸಾಲಿನಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಪರಿಭ್ರಮಣೆ ನಡೆಸಲಿವೆ. ಇದು ಬಾಹ್ಯಾಕಾಶ ಕೇವಲ ತಣ್ಣನೆಯ ಲೋಹಗಳು ಮತ್ತು ಗಣಿತದ ಜಾಗವಲ್ಲ, ಬದಲಿಗೆ ಮಾನವರ ಹೃದಯ, ಮನಸ್ಸುಗಳಿಗೂ ಅಲ್ಲಿ ಜಾಗವಿದೆ ಎನ್ನುವುದನ್ನು ತೋರಿಸುತ್ತದೆ.
ಈ ಯೋಜನೆ ಒಂದು ಹೊಸ ಕಾಲಘಟ್ಟಕ್ಕೆ ಹಾದಿ ಮಾಡಿಕೊಡಲಿದ್ದು, ಭಾರತ ಕೇವಲ ಬಾಹ್ಯಾಕಾಶವನ್ನು ವೀಕ್ಷಿಸುತ್ತಾ ಇರುವ ಬದಲು, ನಾಯಕತ್ವವನ್ನು ವಹಿಸಲಿದೆ. ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನದ ಮೂಲಕ, ನಾವು ನಮ್ಮ ದೇಶದ ಎಲ್ಲ ಮಾಹಿತಿಗಳನ್ನು ನೈಜ ಸಮಯದಲ್ಲಿ ಕಲೆಹಾಕುವ ಡಿಜಿಟಲ್ ನಕ್ಷೆಯನ್ನು ರಚಿಸಲಿದ್ದೇವೆ. ಇದು ಬೃಹತ್ ಭೂ ಪ್ರದೇಶದಲ್ಲಿ ಒಣಗುತ್ತಿರುವ ಒಂದು ಸ್ಥಳವನ್ನು, ಅಥವಾ ಅತ್ಯಂದ ದಟ್ಟಣೆ ಹೊಂದಿರುವ ನಗರದಲ್ಲಿ ನಿರ್ಮಾಣವಾಗುವ ಒಂದು ಹೊಸ ಕಟ್ಟಡವನ್ನೂ ತಕ್ಷಣವೇ ಗುರುತಿಸಲು ನೆರವಾಗಲಿದೆ.
ಇದರೊಡನೆ, ಆಯುಲ್‌ಸ್ಯಾಟ್ ಉಪಗ್ರಹದ ಯಶಸ್ಸು ಭಾರತವನ್ನು ಉಪಗ್ರಹಗಳ 'ಜಾಗತಿಕ ಸರ್ವಿಸ್ ಸ್ಟೇಷನ್' ಆಗಿ ರೂಪಿಸಲಿದ್ದು, ಬಾಹ್ಯಾಕಾಶ ಸೇವೆಯ ಒಂದು ಹೊಸ ಉದ್ಯಮವನ್ನೇ ಸೃಷ್ಟಿಸಲಿದೆ. ಉಪಗ್ರಹಗಳನ್ನು ತ್ಯಜಿಸುವ ಬದಲು, ಅವುಗಳಿಗೆ ಇಂಧನ ಮರುಪೂರಣ ನಡೆಸಲು ಸಾಧ್ಯವಾದರೆ, ಬಾಹ್ಯಾಕಾಶ ಹೆಚ್ಚು ಸ್ವಚ್ಛವಾಗಿ, ಎಲ್ಲರಿಗೂ ಅಗ್ಗವಾಗಿ ಲಭಿಸುತ್ತದೆ. ಇದೇ ವೇಳೆ, ಎಂಒಐ-1 ರೀತಿಯ ಎಐ ಚಾಲಿತ ಉಪಗ್ರಹಗಳು ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಭೂ ಕೇಂದ್ರಗಳು ಎಚ್ಚರಿಕೆ ನೀಡುವ ಅವಶ್ಯಕತೆಯನ್ನು ನಿವಾರಿಸಲಿವೆ. ಆಗ ಉಪಗ್ರಹಗಳೇ ಬಾಹ್ಯಾಕಾಶದಿಂದ ಮೊದಲ ಪ್ರತಿಕ್ರಿಯೆ ನೀಡಲಿವೆ.
ಇಂತಹ ಸಾಧನೆಗಳ ಪರಿಣಾಮವಾಗಿ, ಮುಂದಿನ ದಶಕದಲ್ಲಿ ನಮಗೆ ರೋಬಾಟಿಕ್ಸ್, ಮಾಹಿತಿ ವಿಜ್ಞಾನ, ಮತ್ತು ಪರಿಸರ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾವಿರಾರು ತಜ್ಞರ ಅವಶ್ಯಕತೆ ಎದುರಾಗಲಿದೆ. ಮುಂದಿನ ತಲೆಮಾರಿನ 'ಚಿಂತಿಸುವ' ಉಪಗ್ರಹಗಳ ನಿರ್ವಹಣೆ ಆಗಿರಲಿ, ಅಥವಾ ಮುಂದಿನ ತಲೆಮಾರಿನ ಬಾಹ್ಯಾಕಾಶ ಯೋಜನೆಗಳ ನಿರ್ಮಾಣಕ್ಕಾಗಲಿ, ಅವಶ್ಯಕವಾದ ತಂತ್ರಜ್ಞಾನಗಳು ಪ್ರಗತಿ ಹೊಂದುತ್ತಲೇ ಇವೆ. ಈ ಬಾರಿಯ ಉಡಾವಣೆ ನಾಳೆಗೆ ಅವಶ್ಯಕವಾದ ತಂತ್ರಜ್ಞಾನಗಳನ್ನು ಸ್ವತಃ ಭಾರತವೇ ಇಂದು ನಿರ್ಮಿಸುತ್ತಿದೆ ಎನ್ನುವುದನ್ನು ಸಾಬೀತುಪಡಿಸಲಿದೆ. ಈ ಮೂಲಕ ವೈಜ್ಞಾನಿಕ ಕಥಾನಕದಂತೆ ಕಾಣುವುದನ್ನು ಭಾರತ ವಾಸ್ತವವಾಗಿ ಪರಿವರ್ತಿಸಲಿದೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.