ಸೌದಿ ಅರೇಬಿಯಾದ ಅಲ್-ಆಹ್ಸಾ ಪ್ರಾಂತ್ಯದಲ್ಲಿ ಚೀನಾದ ಕಂಪನಿಯೊಂದು ಜಗತ್ತಿನ ಮೊದಲ ಎ.ಐ. (ಕೃತಕ ಬುದ್ಧಿಮತ್ತೆ) ಡಾಕ್ಟರ್ ಕ್ಲಿನಿಕ್ ಒಂದನ್ನು ಪ್ರಾಯೋಗಿಕವಾಗಿ ಶುರು ಮಾಡಿದೆ. ಇಲ್ಲಿಗೆ ಬರುವ ರೋಗಿಗಳ ಮೊದಲ ಹಂತದ ತಪಾಸಣೆಯನ್ನು ಪೂರ್ತಿಯಾಗಿ ಒಬ್ಬ ಎ.ಐ. ವೈದ್ಯ ನಿಭಾಯಿಸಿ, ರೋಗಿಗೆ ನೀಡಬೇಕಾದ ಚಿಕಿತ್ಸೆಯ ಯೋಜನೆಯನ್ನು ಸಿದ್ಧಪಡಿಸುತ್ತದೆ. ಅದನ್ನು ಮನುಷ್ಯ ವೈದ್ಯರೊಬ್ಬರು ಪರಿಶೀಲಿಸಿ ರೋಗಿಗೆ ನೀಡುತ್ತಾರೆ. ಸದ್ಯಕ್ಕೆ ಉಸಿರಾಟಕ್ಕೆ ಸಂಬಂಧಿಸಿದ ಮೂವತ್ತು ಕಾಯಿಲೆಗಳಿಗೆ ಈ ಎ.ಐ. ವೈದ್ಯನ ಸೇವೆ ಸೀಮಿತವಾಗಿದೆ. ಈ ಪ್ರಯೋಗದ ದತ್ತಾಂಶವನ್ನು ಸೌದಿ ಸರ್ಕಾರಕ್ಕೆ ನೀಡಿ ಮುಂದಿನ ಹದಿನೆಂಟು ತಿಂಗಳಲ್ಲಿ ಇದಕ್ಕೆ ಪೂರ್ಣಪ್ರಮಾಣದ ಅನುಮತಿ ಪಡೆಯುವ ಉದ್ದೇಶ ಈ ಸಂಸ್ಥೆಯದ್ದಾಗಿದೆ. ಸೌದಿ ಪ್ರಾಂತ್ಯದ ಭಾಷೆ, ಸಾಂಸ್ಕೃತಿಕ ಒಲವು, ಸ್ಥಳೀಯರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯ ಕೋಶವನ್ನು ಇದರ ತರಬೇತಿಗೆ ಬಳಸಿರುವುದರಿಂದ ಇದು ಅಲ್ಲಿನ ಒಬ್ಬ ಸ್ಥಳೀಯ ವೈದ್ಯನಂತೆಯೇ ಕೆಲಸ ನಿರ್ವಹಿಸಲಿದೆ ಎನ್ನಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಮೆರಿಕದ ಫ್ಲಾರಿಡಾದಲ್ಲಿ 14ರ ಹರೆಯದ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡದ್ದು ದೊಡ್ಡ ಸುದ್ದಿಯಾಯಿತು. ಕ್ಯಾರೆಕ್ಟರ್.ಎಐ ಅನ್ನುವ ಸಂಸ್ಥೆ ಹೊರತಂದಿದ್ದ ಎ.ಐ. ಚಾಟ್ ಬಾಟ್ (ಬಗೆ ಬಗೆಯ ಮನುಷ್ಯ ಪಾತ್ರಗಳ ರೂಪದಲ್ಲಿ ಹರಟೆ ಹೊಡೆಯುವ ಎ.ಐ) ಒಂದರ ಜೊತೆಗೆ ಅತೀ ಹೆಚ್ಚು ಕಾಲ ಕಳೆಯುತ್ತಿದ್ದ ಈ ಹುಡುಗ, ಕ್ರಮೇಣ ಕುಟುಂಬ ಮತ್ತು ಗೆಳೆಯರೊಡಗಿನ ಒಡನಾಟವನ್ನೇ ಕಡಿಮೆ ಮಾಡಿಕೊಂಡು ಈ ಚಾಟ್ ಬಾಟಿನ ಪ್ರೇರಣೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ಈ ಸಂಸ್ಥೆಯ ವಿರುದ್ಧ ಕಾನೂನು ಹೋರಾಟಕ್ಕಿಳಿದ ಪ್ರಕರಣ ಇದಾಗಿತ್ತು.
ಜಗದ ಎರಡು ಮೂಲೆಯಲ್ಲಿನ ಈ ಪ್ರಕರಣಗಳು ಎರಡು ವಿರುದ್ಧ ನೆಲೆಯ ಪ್ರಕರಣಗಳಲ್ಲ. ಅವೆರಡೂ ಒಂದೇ ವಾಸ್ತವದ ಎರಡು ಮುಖಗಳು ಮತ್ತು ಎ.ಐ. ಅನ್ನುವ ಶಕ್ತಿಶಾಲಿ ಮಾಯಾವಿಯ ದುರ್ಬಳಕೆಗೆ ಅಂಕೆ ಹಾಕದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತೊಂದರೆಗಳನ್ನು ಇಡೀ ಮನುಕುಲವೇ ಎದುರಿಸಬೇಕಾಗಬಹುದು ಅನ್ನುವ ಎಚ್ಚರಿಕೆಯ ಗಂಟೆಯೂ ಹೌದು. ಈ ಬೆಳವಣಿಗೆಗೆ ಜಗತ್ತು ಮೂಕವಾಗಿ ಇರಲು ಸಾಧ್ಯವಿಲ್ಲ. ದಿನಗಳೆದಂತೆ ದೈತ್ಯ ಸ್ವರೂಪದ ಶಕ್ತಿಯನ್ನು ಪಡೆಯುತ್ತಿರುವ ಈ ತಂತ್ರಜ್ಞಾನವನ್ನು ಮನುಕುಲದ ಒಳಿತಿನ ಸಾಧನವಾಗಿಸುವ ಕೆಲಸ ತಾನೇ ತಾನಾಗಿಯೋ ಇಲ್ಲವೇ ಲಾಭಕ್ಕಾಗಿ ನಡೆಯುವ ಕೆಲವೇ ದೈತ್ಯ ಕಂಪನಿಗಳಿಂದಲೊ ಆಗುತ್ತದೆ ಎಂದು ಎದುರು ನೋಡಲಾಗುವುದಿಲ್ಲ. ಈ ತಂತ್ರಜ್ಞಾನದ ಸಾಧ್ಯತೆಗಳನ್ನು ಕುಗ್ಗಿಸದೆ, ಇದರ ಅತಿರೇಕಗಳನ್ನು ನಿಯಂತ್ರಿಸುವ ಹೆಜ್ಜೆಗಳನ್ನು ಸರ್ಕಾರಗಳು ಕೈಗೊಳ್ಳುವುದು ಈ ಹೊತ್ತಿನ ತುರ್ತು. ಅತ್ಯಂತ ವಿಕೇಂದ್ರೀಕೃತವಾದ ರೂಪದಲ್ಲಿ ವಿಕಾಸವಾಗುತ್ತಿರುವ ಈ ತಂತ್ರಜ್ಞಾನದ ನಿಯಂತ್ರಣ ಯಾವುದೇ ಒಂದು ದೇಶದ ಕೈಯಲ್ಲಿ ಆಗುವಂಥದ್ದಲ್ಲ. ಹೀಗಾಗಿ ಒಂದು ಜಾಗತಿಕ ಸಹಕಾರವನ್ನು ಈ ದಿಸೆಯಲ್ಲಿ ರೂಪಿಸುವ ಸವಾಲೂ ಇಲ್ಲಿದೆ.
ಎ.ಐ. ತಂತ್ರಜ್ಞಾನದ ಜಗತ್ತಿನಲ್ಲಿ ಆರು ತಿಂಗಳು ನೂರು ವರ್ಷಕ್ಕೆ ಸಮ ಅನ್ನುವ ವೇಗದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದ ದೈತ್ಯರಾದ ಗೂಗಲ್, ಮೈಕ್ರೊಸಾಫ್ಟ್‌ನಂತಹ ಕಂಪನಿಗಳು ಈ ಅಲೆಯಲ್ಲಿ ಈಜಿ ದಾಟಲು ಒದ್ದಾಡುತ್ತಿವೆ. ಸಾವಿರಾರು ಸ್ಟಾರ್ಟ್‌ಅಪ್‍ಗಳು ಈ ತಂತ್ರಜ್ಞಾನದ ಮೇಲೆ ಹೊಸ ಬಗೆಯ ವ್ಯಾಪಾರ ಕಟ್ಟುತ್ತಿವೆ ಎಂದು ಕಂಡರೂ ಒಟ್ಟಂದದಲ್ಲಿ ನೋಡಿದರೆ ಕೆಲವೇ ದೇಶಗಳ, ಕೆಲವು ಸಂಸ್ಥೆಗಳು ಮಾತ್ರ ಈ ತಂತ್ರಜ್ಞಾನದ ಮೇಲೆ ಹಂತ ಹಂತವಾಗಿ ಬಿಗಿ ಹಿಡಿತ ಸಾಧಿಸುತ್ತಿವೆ ಎಂಬುದನ್ನು ಗಮನಿಸಬಹುದು. ಲಾಭವನ್ನೇ ಗುರಿಯಾಗಿಸಿಕೊಂಡ ಇಂತಹ ಸಂಸ್ಥೆಗಳು ಈ ತಂತ್ರಜ್ಞಾನದ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವಂತೆ ಆದಾಗ ಸಹಜವಾಗಿಯೇ ಎ.ಐ. ಅನ್ನು ಲೋಕಕಲ್ಯಾಣಕ್ಕೆ ಬಳಸುವಂತಾಗಬೇಕು ಅನ್ನುವ ಆಶಯಗಳಿಗೆ ಹಿನ್ನಡೆಯಾಗುತ್ತದೆ. ಅಷ್ಟೇ ಅಲ್ಲದೆ, ಮೂರನೆಯ ಜಗತ್ತಿನ ದೇಶಗಳು ಈ ತಂತ್ರಜ್ಞಾನದ ಮೇಲೆ ಯಾವುದೇ ಹಿಡಿತ ಹೊಂದಲಾಗದೆ, ಏನಿದ್ದರೂ ಬರೀ ಮಾರುಕಟ್ಟೆಯಾಗಿ ಉಳಿಯುವ ಅಪಾಯವೂ ಇದೆ.
ಇಂದು ಮನುಕುಲ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆಗಳಾದ ಎಲ್ಲರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಸಿಗದ ಸ್ಥಿತಿಯನ್ನು ದೊಡ್ಡ ಮಟ್ಟದಲ್ಲಿ ಸುಧಾರಿಸುವ ಸಾಮರ್ಥ್ಯ ಈ ತಂತ್ರಜ್ಞಾನಕ್ಕಿದೆ. ಆದರೆ ಅದೇ ಸಮಯಕ್ಕೆ ಒಂದಿಡೀ ತಲೆಮಾರಿನ ಮಕ್ಕಳನ್ನು ಗ್ಯಾಜೆಟ್‍ಗಳ ದಾಸರಾಗಿಸಿ ಲಾಭ ಮಾಡಿಕೊಂಡ ಸಿಲಿಕಾನ್ ವ್ಯಾಲಿಯ ದಿಗ್ಗಜರು ಈ ಹೊಸ ತಂತ್ರಜ್ಞಾನವನ್ನೂ ತಮ್ಮ ತಂತ್ರಜ್ಞಾನಶಾಹಿ ಸಾಮ್ರಾಜ್ಯದ ವಿಸ್ತರಣೆಗೆ ಬಳಸಿಕೊಳ್ಳುವುದಿಲ್ಲ ಎಂದು ನಂಬಲು ಯಾವ ಕಾರಣಗಳೂ ಇಲ್ಲ. ಹೀಗಾಗಿ ಎ.ಐ. ತಂತ್ರಜ್ಞಾನವನ್ನು ನಿಯಂತ್ರಿಸುವ ಮಾರ್ಗಗಳೇನು ಅನ್ನುವ ಕುರಿತು ಚಿಂತಕರ ಚಾವಡಿಯಲ್ಲಿ ಹೆಚ್ಚಿನ ಚರ್ಚೆಗಳು ಈಗ ನಡೆಯುತ್ತಿವೆ. ವಿಶ್ವಸಂಸ್ಥೆಯ ನಾಯಕತ್ವದಲ್ಲಿ ‘ಅಂತರರಾಷ್ಟ್ರೀಯ ಮಾಹಿತಿ ಆಧಾರಿತ ವ್ಯವಸ್ಥೆ’ (ಐ.ಡಿ.ಎ) ಅನ್ನುವ ಸಮಿತಿಯನ್ನು ರಚಿಸಿ ಅದರಡಿ ಎ.ಐ. ತಂತ್ರಜ್ಞಾನದ ಬೆಳವಣಿಗೆ ಸುರಕ್ಷಿತವಾಗಿ, ಸುಭದ್ರವಾಗಿ, ಶಾಂತಿಯುತವಾಗಿ ಮತ್ತು ಸುಸ್ಥಿರವಾಗಿಯೂ ಇರುವಂತೆ ನೋಡಿಕೊಳ್ಳಬೇಕು ಮತ್ತು ಮಾನವಹಕ್ಕುಗಳನ್ನು ಎತ್ತಿ ಹಿಡಿಯುವಂತಿರಬೇಕು ಎಂಬುದು ಸ್ವಿಟ್ಜರ್ಲೆಂಡ್‌ನ ಅಧ್ಯಾಪಕ ಪೀಟರ್ ಕರ್ಶ್ಲೇಗರ್ ಅವರ ವಾದ.
ಎ.ಐ. ಮೇಲೆ ಯಾವುದೇ ನಿಯಂತ್ರಣದ ಆಲೋಚನೆ ಆವಿಷ್ಕಾರ ವಿರೋಧಿಯಾಗಿರುತ್ತದೆ ಅನ್ನುವ ವಾದವನ್ನು ಅವರು ತಳ್ಳಿಹಾಕುತ್ತಾರೆ. ವಿಮಾನಯಾನ ಶುರುವಾದ ಹೊಸತಿನಲ್ಲಿ ಅದರಲ್ಲಿ ಪಯಣಿಸಲು ಜನರು ಹೆದರುತ್ತಿದ್ದರು, ಆದರೆ ಸೂಕ್ತವಾದ, ಜಾಗತಿಕ ಸಹಕಾರದ ನೆಲೆಯಲ್ಲಿ ರೂಪಿಸಲಾದ ಕಟ್ಟುನಿಟ್ಟಿನ ನೀತಿಗಳಿಂದ ಇಂದು ಎಲ್ಲರೂ ಚಿಂತೆಯಿಲ್ಲದ ವಿಮಾನ ಪ್ರಯಾಣ ಮಾಡುತ್ತಾರೆ. ಈ ಕುರಿತ ಬಿಗಿಯಾದ ನೀತಿ– ನಿಯಮಗಳು ಈ ಕ್ಷೇತ್ರದಲ್ಲಿ ಆವಿಷ್ಕಾರಕ್ಕೆ ಯಾವ ತಡೆಯನ್ನೂ ಒಡ್ಡಿಲ್ಲ ಎಂದು ಅವರು ವಾದಿಸುತ್ತಾರೆ. ಅಣ್ವಸ್ತ್ರ ಪ್ರಸರಣದ ತಡೆಗೆ ಎರಡನೆಯ ಮಹಾಯುದ್ಧದ ನಂತರ ವಿಶ್ವಸಂಸ್ಥೆಯಡಿ ಅಸ್ತಿತ್ವಕ್ಕೆ ಬಂದ ಅಂತರರಾಷ್ಟ್ರೀಯ ಅಣು ಶಕ್ತಿ ಸಮಿತಿ ಮತ್ತೊಂದು ಅಣುಸಮರ ನಡೆಯದಂತೆ ನೋಡಿಕೊಂಡಿರುವಂತೆ ಎ.ಐ. ಕುರಿತ ಸಮಿತಿಯೂ ಈ ತಂತ್ರಜ್ಞಾನವನ್ನು ಮನುಕುಲದ ಒಳಿತಿಗೆ ಬಳಸುವಂತೆ ನಿರ್ದೇಶಿಸಬಲ್ಲದು ಅನ್ನುವುದು ಅವರ ವಾದ.
ಯಾವ ತಂತ್ರಜ್ಞಾನವೇ ಇರಲಿ, ಅದಕ್ಕೊಂದು ಉತ್ತರದಾಯಿತ್ವದ ಬುನಾದಿಯಿಲ್ಲದಿದ್ದರೆ ಅಂತಹ ತಂತ್ರಜ್ಞಾನ ಅದೆಷ್ಟೇ ಶಕ್ತಿಯುತವಾಗಿದ್ದರೂ ಮನುಕುಲದ ಎಂತಹ ದೊಡ್ಡ ಸಮಸ್ಯೆ ಬಗೆಹರಿಸುವ ಶಕ್ತಿ ಹೊಂದಿದ್ದರೂ ಅದನ್ನು ಕುರುಡಾಗಿ ನಂಬುವುದು ದಡ್ಡತನವಾದೀತು. ಇಂದು ಜಾಗತೀಕರಣದ ರೂಪ ಬದಲಾಗುತ್ತಿದೆ. ಮೂರು ದಶಕಗಳ ಕಾಲ ಮುಕ್ತವಾಗಿ ಬಂಡವಾಳ ಮತ್ತು ಕಾರ್ಮಿಕರ ಚಲನೆಯನ್ನು ಜಾಗತೀಕರಣ ಸಾಧ್ಯವಾಗಿಸಿತ್ತು. ಕೋವಿಡ್ ನಂತರದ ದಿನಗಳಲ್ಲಿ ಇದಕ್ಕೆ ವಿರುದ್ಧವಾದ ಚಲನೆ ಶುರುವಾಗಿತ್ತು. ಈಗ ಅದಕ್ಕೆ ಇನ್ನಷ್ಟು ವೇಗ ಬಂದಿದೆ. ಜಾಗತೀಕರಣದ ಅತ್ಯಂತ ದೊಡ್ಡ ಲಾಭದಾರನಾಗಿದ್ದ ಅಮೆರಿಕವೇ ಇಂದು ಒಳಮುಖಿಯಾಗಿ ಜಾಗತೀಕರಣದ ಸ್ವರೂಪ ಬದಲಿಸಲು ಹೊರಟಿದೆ. ಇತ್ತೀಚೆಗಿನ ಸುಂಕ ಸಮರ, ಭಾರತ-ಪಾಕಿಸ್ತಾನದ ಬಿಕ್ಕಟ್ಟಿನಲ್ಲಿ ದಿನಕ್ಕೊಂದು ಮಾತನಾಡುತ್ತ ಅಮೆರಿಕ ನಡೆದುಕೊಂಡ ರೀತಿ, ಜಾಗತಿಕ ಸಹಕಾರದ ಸಂಸ್ಥೆಗಳೆಲ್ಲವೂ ಬಲಹೀನಗೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ ಎ.ಐ. ಅಷ್ಟೇ ಅಲ್ಲ, ಯಾವುದೇ ವಿಷಯದಲ್ಲಿ ಜಾಗತಿಕ ಸಹಕಾರವನ್ನು ಸಾಧ್ಯವಾಗಿಸುವುದು ಈಗ ಹೆಚ್ಚಿನ ಸವಾಲಿನ ವಿಷಯ.
ಹಿಂದೆ ಶೀತಲ ಸಮರದ ಸಮಯದಲ್ಲಿ ಇಡೀ ಜಗತ್ತು ಅಮೆರಿಕ ಮತ್ತು ಸೋವಿಯತ್ ರಷ್ಯಾದ ನಡುವೆ ಹಂಚಿಹೋಗುವಂತಿದ್ದ ಕಾಲದಲ್ಲಿ ಅಲಿಪ್ತ ನೀತಿಯ ಮೂಲಕ ಮೂರನೆಯ ದಾರಿಯೊಂದನ್ನು ತೋರಿಸಿದ್ದ ಭಾರತ ಈಗ ಅಮೆರಿಕ-ಚೀನಾದ ನಡುವಿನ ಕಾಲ್ಚೆಂಡಿನಾಟದಂತಿರುವ ಈ ವಿಷಯದಲ್ಲಿ ಮುಂದಾಳತ್ವ ವಹಿಸುವುದು ಸೂಕ್ತವೆನಿಸುತ್ತದೆ.
ಎ.ಐ. ತಂತ್ರಜ್ಞಾನದ ಪ್ರಗತಿಯಲ್ಲಿ ಭಾರತೀಯರ ಕೊಡುಗೆ ದೊಡ್ಡ ಮಟ್ಟದಲ್ಲಿರುವುದರಿಂದ ಇದಕ್ಕೆ ಬೇಕಾದ ತಿಳಿವಿನ ಬುನಾದಿಯೂ ಭಾರತಕ್ಕಿದೆ. ಇದನ್ನು ಸಾಧ್ಯವಾಗಿಸಿದ್ದೇ ಆದರೆ ಭಾರತ ನಿಜಕ್ಕೂ ಈ ವಿಷಯದಲ್ಲಿ ವಿಶ್ವಗುರು ಅನ್ನಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.