ADVERTISEMENT

ಪ್ರಜಾಪ್ರಭುತ್ವಕ್ಕೆ ಮೋಸ: ಢಾಕಾದಲ್ಲಿ ಐಎಸ್‌ಐ ಹೊಸ ದ್ರೋಹದ ಆಟ‌

ಗಿರೀಶ್ ಲಿಂಗಣ್ಣ
Published 29 ಡಿಸೆಂಬರ್ 2025, 13:32 IST
Last Updated 29 ಡಿಸೆಂಬರ್ 2025, 13:32 IST
<div class="paragraphs"><p>ಬಾಂಗ್ಲಾದೇಶದಲ್ಲಿ ಪ್ರತಿಭಟನೆ</p></div>

ಬಾಂಗ್ಲಾದೇಶದಲ್ಲಿ ಪ್ರತಿಭಟನೆ

   

ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ಒಂದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದ್ದು, ಇದು ಎಲ್ಲ ಭಾರತೀಯರ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ. ಭದ್ರತಾ ತಜ್ಞರು ನ್ಯಾಷನಲ್‌ ಆರ್ಮ್ಡ್‌ ರಿಸರ್ವ್‌ ಅಥವಾ ಎನ್‌ಎಆರ್‌ ಎನ್ನುವ ಒಂದು ಹೊಸದಾದ ಸಶಸ್ತ್ರ ಪಡೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಆಲೋಚಿಸುತ್ತಿದ್ದಾರೆ. ಈ ಪಡೆಯಲ್ಲಿ 8,000ಕ್ಕೂ ಹೆಚ್ಚಿನ ಯುವ ಜನರನ್ನು ಸೇರ್ಪಡೆಗೊಳಿಸಲು ಯೋಜಿಸಲಾಗಿದ್ದು, ಅವರೆಲ್ಲರಿಗೂ ತೀವ್ರವಾದಿ ಧಾರ್ಮಿಕ ಆಲೋಚನೆಗಳನ್ನು ಬೋಧಿಸಲಾಗುತ್ತದೆ. ಈ ಯೋಜನೆಯ ಉದ್ದೇಶ ಸ್ಪಷ್ಟವಾಗಿದೆ: ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ತನ್ನ ಪಾಡಿಗೆ ಕೆಲಸ ಮಾಡಲು ಬಿಡದೆ, ದೇಶವನ್ನು ಕಟ್ಟುನಿಟ್ಟಿನ ಧಾರ್ಮಿಕ ಕಾನೂನುಗಳಿಂದ ನಿಯಂತ್ರಿಸುವುದೇ ಇದರ ಗುರಿ!

ಇದನ್ನು ಸರಳವಾಗಿ ಅರ್ಥೈಸಿಕೊಳ್ಳೋಣ. ನಿಮ್ಮ ಶಾಲೆ ಅಥವಾ ಕಾಲೇಜು ಇದ್ದಕ್ಕಿದ್ದಂತೆ ತರಗತಿಯ ವಿದ್ಯಾರ್ಥಿ ಪ್ರತಿನಿಧಿಗಳ ಬದಲು, ಹೊರಗಡೆಯಿಂದ ಬಂದ ಒಂದಷ್ಟು ಜನರು ಎಲ್ಲವನ್ನೂ ನಿಯಂತ್ರಿಸುವಂತೆ ಮಾಡುವುದನ್ನು ಊಹಿಸಿಕೊಳ್ಳಿ. ಸಂಪೂರ್ಣ ಬಾಂಗ್ಲಾದೇಶದಲ್ಲಿ ವಾಸ್ತವವಾಗಿ ಇಂತಹದ್ದೇ ಒಂದು ಬೆಳವಣಿಗೆ ನಡೆಯುತ್ತಿರುವಂತೆ ಕಾಣುತ್ತಿದೆ! ಗುಪ್ತಚರ ವರದಿಗಳ ಪ್ರಕಾರ, ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಎರಡು ಪ್ರತ್ಯೇಕ ಪಡೆಗಳನ್ನು ನಿರ್ಮಿಸಲು ಬಯಸುತ್ತಿದೆ. ಅವುಗಳ ಪೈಕಿ ಒಂದು ಸಾಮಾನ್ಯ ಸೇನೆಯಂತೆ ಕಂಡರೆ, ಇನ್ನೊಂದು ಪಡೆ ಪೊಲೀಸರಂತೆ ಕಾರ್ಯಾಚರಿಸಲಿದೆ. ಈಗಾಗಲೇ ಪಾಕಿಸ್ತಾನದ ಇಂತಹ ಮೂಲಭೂತವಾದಿ ದೃಷ್ಟಿಕೋನಕ್ಕೆ ಬಾಂಗ್ಲಾದೇಶದೊಳಗೆ ಬೆಂಬಲ ನೀಡಬಲ್ಲ ಜನರನ್ನು ಅನ್ವೇಷಿಸಲು ಆರಂಭವಾಗಿದ್ದು, ಅವರನ್ನು ಭವಿಷ್ಯದಲ್ಲಿ ಪ್ರಮುಖ ಪಾತ್ರಗಳಿಗಾಗಿ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದೆ.

ADVERTISEMENT

ಇದೆಲ್ಲ ಯೋಜನೆಯ ಹಿಂದೆ ನಿಂತಿರುವುದು ಪಾಕಿಸ್ತಾನದ ಇಂಟರ್‌ ಸರ್ವಿಸಸ್‌ ಇಂಟಲಿಜೆನ್ಸ್‌, ಅಥವಾ ಐಎಸ್‌ಐ ಮತ್ತು ಪಾಕಿಸ್ತಾನದ ಸೇನೆ. ಅವರು ಈಗಾಗಲೇ ಇದಕ್ಕೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಲು ಮತ್ತು ಈ ಪಡೆಗಳಿಗೆ ನಾಯಕರನ್ನು ಆರಿಸಲು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಸೇನಾ ಮುಖ್ಯಸ್ಥ ವಾಕರ್‌ ಉಜ್‌ ಜ಼ಮಾನ್‌ ಸೇರಿದಂತೆ, ಬಾಂಗ್ಲಾದೇಶದ ಸೇನೆಯ ಬಹಳಷ್ಟು ಅಧಿಕಾರಿಗಳು ತಮ್ಮ ದೇಶ ಪ್ರಜಾಪ್ರಭುತ್ವ ದೇಶವಾಗಿಯೇ ಮುಂದುವರಿಯಬೇಕು ಎಂದು ಬಯಸುತ್ತಿದ್ದಾರೆ. ಅವರಿಗೆ ದೇಶವನ್ನು ಬಲ ಪ್ರಯೋಗದಿಂದ ಅಥವಾ ತೀವ್ರವಾದಿ ಧಾರ್ಮಿಕ ನಿಯಂತ್ರಣದಿಂದ ಆಳ್ವಿಕೆ ನಡೆಸಲು ಇಚ್ಛೆಯಿಲ್ಲ.

ಐಎಸ್‌ಐ ಇದನ್ನೇ ಬದಲಾಯಿಸುವ ಪ್ರಯತ್ನದಲ್ಲಿ ತೊಡಗಿದೆ. ಅದು ಬಾಂಗ್ಲಾದೇಶದ ಸೇನಾ ವ್ಯವಸ್ಥೆಯನ್ನೇ ಮರು ರೂಪಿಸಲು ಬಯಸುತ್ತಿದ್ದು, ಇದಕ್ಕಾಗಿ ಪಾಕಿಸ್ತಾನಕ್ಕೆ ನಿಷ್ಠರಾಗಿರುವ ಅಧಿಕಾರಿಗಳನ್ನು ಉನ್ನತ ಹುದ್ದೆಗೆ ನೇಮಿಸಲು ಆಲೋಚಿಸುತ್ತಿದೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಸಲುವಾಗಿ, ಪಾಕಿಸ್ತಾನಿಗಳು ಮಿಲಿಟರಿ ಸೇವೆಯಿಂದ ನಿವೃತ್ತರಾಗಿರುವ ಅಬ್ದುಲ್ಲಾಹಿಲ್‌ ಅಮಾನ್‌ ಅಜ್ಮಿ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಬ್ದುಲ್ಲಾಹಿಲ್‌ ಓರ್ವ ಅತ್ಯಂತ ಮೂಲಭೂತವಾದಿ ಮನಸ್ಥಿತಿಯ ವ್ಯಕ್ತಿಯಾಗಿದ್ದು, ಅವರು ಮೂಲಭೂತವಾದಿ ರಾಜಕೀಯ ಪಕ್ಷವಾದ ಜಮಾತ್‌ ಎ ಇಸ್ಲಾಮಿ ನಾಯಕ ಗೊಲಾಮ್‌ ಆಜಮ್‌ ಅವರ ಮಗನಾಗಿದ್ದಾರೆ. ಅಬ್ದುಲ್ಲಾಹಿಲ್‌ ಇತ್ತೀಚೆಗೆ ನಿಯಮಿತವಾಗಿ ಪಾಕಿಸ್ತಾನದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಆತನಿಗೆ ಸದ್ಯದಲ್ಲೇ ಬಾಂಗ್ಲಾದೇಶದ ಭದ್ರತಾ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಪಾತ್ರ ಸಿಗುವ ಸಾಧ್ಯತೆಗಳಿವೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿದ್ದು, ಬಹುಶಃ ಗೃಹ ಸಚಿವಾಲಯದ ಸಲಹೆಗಾರರಾಗಿ ಕೆಲಸ ಆರಂಭಿಸಬಹುದು. ಈ ಸಚಿವಾಲಯ ಬಾಂಗ್ಲಾದೇಶದ ಆಂತರಿಕ ಭದ್ರತೆಯನ್ನು ನಿಯಂತ್ರಿಸುತ್ತದೆ.

ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ, ಬಾಂಗ್ಲಾದೇಶ ಚುನಾವಣೆಗಳನ್ನು ನಡೆಸಿದ ಬಳಿಕ, ಈ ಸಲಹೆಗಾರ ಹುದ್ದೆ ಮುಕ್ತಾಯಗೊಳ್ಳಲಿದೆ. ಆದರೆ, ನಿಜವಾದ ಯೋಜನೆ ಜಾರಿಗೆ ಬರುವುದೇ ಆ ಬಳಿಕ. ಚುನಾವಣೆಗಳ ನಂತರ, ಆಜ್ಮಿ ಎನ್‌ಎಆರ್‌ ಮುಖ್ಯಸ್ಥರಾಗಿ ಅಧಿಕಾರ ವಹಿಸಲಿದ್ದು, ಇದು ಅವರಿಗೆ ಮೂಲಭೂತವಾದಿ ಸೇನಾ ಪಡೆಗಳ ಮೇಲೆ ಸಂಪೂರ್ಣ ನಿಯಂತ್ರಣ ನೀಡಲಿದೆ. ಮುಹಮ್ಮದ್‌ ಯೂನುಸ್‌ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಒಂದಷ್ಟು ಪಾಕಿಸ್ತಾನಿ ರಾಜತಾಂತ್ರಿಕರು ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ಆಗಾಗ್ಗೆ ತೆರಳಿ, ಅಲ್ಲಿ ಮಾತುಕತೆಗಳನ್ನು ನಡೆಸಿದ್ದಾರೆ. ಢಾಕಾದಲ್ಲಿನ ಅಧಿಕಾರಿಗಳು ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನ ಅಧಿಕಾರಿಗಳ ನಡುವೆ ಆಜ್ಮಿ ಸ್ವತಃ ಮುಖ್ಯ ಸಂಪರ್ಕ ಸೇತುವಾಗಿದ್ದಾರೆ ಎನ್ನಲಾಗಿದೆ.

ಈ ಸಭೆಗಳು ಬಹಳಷ್ಟು ಪಾಕಿಸ್ತಾನಿ ರಾಜತಾಂತ್ರಿಕರು ವಾಸವಾಗಿರುವ ಬನಾನಿ ಆಫೀಸರ್ಸ್‌ ಹೌಸಿಂಗ್‌ ಸ್ಕೀಮ್‌ ಪ್ರದೇಶದಲ್ಲಿ ನಡೆಯುತ್ತಿವೆ. ಡಿಸೆಂಬರ್‌ 23ರಂದು ನಡೆದ ಒಂದು ಸಭೆ ಭಾರತದ ಭದ್ರತಾ ಸಂಸ್ಥೆಗಳ ಗಮನ ಸೆಳೆದಿದೆ. ಆ ಸಭೆ ಆಜ್ಮಿ ಮತ್ತು ಪಾಕಿಸ್ತಾನದ ಉಪ ಹೈ ಕಮಿಷನರ್‌ ಆಗಿರುವ ಮೊಹಮ್ಮದ್‌ ವಾಸಿಂ ನಡುವೆ ನಡೆದಿತ್ತು. ಅಧಿಕಾರಿಗಳು ಇದು ಕೇವಲ ಸೌಹಾರ್ದಯುತ ರಾಜತಾಂತ್ರಿಕ ಮಾತುಕತೆಯಲ್ಲ. ಬದಲಿಗೆ, ಏನೋ ದೊಡ್ಡ ಹಂಚಿಕೆಯ ಕುರಿತು ನಡೆದ ಸಮಾಲೋಚನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಐಎಸ್‌ಐ ಅಧಿಕಾರಿಗಳು ಮತ್ತು ಢಾಕಾದ ರಾಜತಾಂತ್ರಿಕರ ನಡುವೆ ಹೆಚ್ಚು ಹೆಚ್ಚು ಸಭೆಗಳು ನಡೆಯುತ್ತಿರುವುದು ಫೆಬ್ರವರಿ 2026ರ ಚುನಾವಣೆಗೂ ಮುನ್ನ ಬಾಂಗ್ಲಾದೇಶವನ್ನು ಇನ್ನಷ್ಟು ಅಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿರಬಹುದು ಎಂದು ಗುಪ್ತಚರ ವರದಿಗಳು ಹೇಳುತ್ತವೆ. ಚುನಾವಣೆಯನ್ನು ತಡೆಯುವ ಪ್ರಯತ್ನಗಳು ವಿಫಲವಾಗಬಹುದು ಎಂದು ಅಧಿಕಾರಿಗಳು ಭಾವಿಸಿದ್ದು, ಚುನಾವಣೆ ನಡೆದರೂ, ಪಾಕಿಸ್ತಾನದ ದೊಡ್ಡ ಗುರಿಗಳು ಹೆಚ್ಚು ಆತಂಕಕ್ಕೆ ಕಾರಣವಾಗಿವೆ. ಪಾಕಿಸ್ತಾನದ ಆಡಳಿತ ನಡೆಯುತ್ತಿರುವ ರೀತಿಯಲ್ಲೇ ಬಾಂಗ್ಲಾದೇಶದ ಆಡಳಿತವೂ ನಡೆಯುಬೇಕು ಎನ್ನುವುದು ಪಾಕಿಸ್ತಾನದ ಬಯಕೆ. ಪಾಕಿಸ್ತಾನದಲ್ಲಿ ನಿಜವಾದ ಅಧಿಕಾರ ಸೇನೆಯ ಕೈಯಲ್ಲಿದೆಯೇ ಹೊರತು, ಚುನಾಯಿತ ಜನ ಪ್ರತಿನಿಧಿಗಳ ಕೈಯಲ್ಲಲ್ಲ.

ಪಾಕಿಸ್ತಾನದಲ್ಲಿ ಈಗ ಮೇಲ್ನೋಟಕ್ಕೆ ಚುನಾಯಿತ ಜನಪ್ರತಿನಿಧಿಗಳ ಸರ್ಕಾರ ಆಡಳಿತ ನಡೆಸುವಂತೆ ಕಂಡರೂ, ಪಾಕಿಸ್ತಾನದ ಎಲ್ಲ ಪ್ರಮುಖ ನಿರ್ಧಾರಗಳನ್ನು ಜನರಲ್‌ ಆಸಿಂ ಮುನೀರ್‌ ನೇತೃತ್ವದ ಸೇನೆ ಕೈಗೊಳ್ಳುತ್ತದೆಯೇ ಹೊರತು, ನಾಗರಿಕ ಸರ್ಕಾರ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಹೆಚ್ಚುತ್ತಿರುವ ವಿದೇಶೀ ಒತ್ತಡವನ್ನು, ಅದರಲ್ಲೂ ಅಮೆರಿಕದ ಒತ್ತಡವನ್ನು ಸಮಾಧಾನಗೊಳಿಸುವ ಸಲುವಾಗಿ ಮಾತ್ರ ಬಾಂಗ್ಲಾದೇಶ ಚುನಾವಣೆಗಳನ್ನು ನಡೆಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ, ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದರೂ, ಬಾಂಗ್ಲಾದೇಶದ ನೈಜ ನಿಯಂತ್ರಣ ಎನ್‌ಎಆರ್‌ ಮತ್ತು ಪಾಕಿಸ್ತಾನಕ್ಕೆ ನಿಷ್ಠರಾದ ಸೇನಾಧಿಕಾರಿಗಳ ಕೈಯಲ್ಲೇ ಇರಬೇಕೇ ಹೊರತು, ಜನರಿಂದ ಚುನಾಯಿತರಾದ ಜನ ಪ್ರತಿನಿಧಿಗಳ ಕೈಯಲ್ಲಲ್ಲ ಎನ್ನುವುದು ಪಾಕಿಸ್ತಾನದ ಲೆಕ್ಕಾಚಾರ.

ಪಾಕಿಸ್ತಾನದ ಹಂಚಿಕೆಯ ಪ್ರಕಾರ, ಕಾಲ ಕ್ರಮೇಣ ಎನ್‌ಎಆರ್‌ ಬಾಂಗ್ಲಾದೇಶದಲ್ಲಿ ಪೊಲೀಸರ ಬದಲಿಗೆ ಕಾರ್ಯಾಚರಿಸಲಿದೆ. ಇದೇ ವೇಳೆ, ಬಾಂಗ್ಲಾದೇಶದ ಸೇನೆಯೊಳಗಿರುವ ಪಾಕಿಸ್ತಾನ ನಿಷ್ಠ ಅಧಿಕಾರಿಗಳು ದೇಶ ಹೇಗೆ ಕಾರ್ಯಾಚರಿಸಬೇಕು ಎನ್ನುವುದನ್ನು ನಿಯಂತ್ರಿಸಲು ಪ್ರಯತ್ನಿಸಲಿದ್ದಾರೆ. ಈ ಮೂಲಕ ಬಾಂಗ್ಲಾದೇಶ ತನ್ನ ಜನರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯಾಚರಿಸುವ ಬದಲು, ಪಾಕಿಸ್ತಾನದ ಕೈಗೊಂಬೆಯಂತೆ ಕುಣಿಯುವ ಹಾಗಾಗುವ ಸಾಧ್ಯತೆಗಳಿವೆ. ಪಾಕಿಸ್ತಾನದ ಅಂತಿಮ ಗುರಿ ಬಾಂಗ್ಲಾದೇಶವನ್ನು ಸಂಪೂರ್ಣವಾಗಿ ಒಂದು ಮೂಲಭೂತವಾದಿ ದೇಶವನ್ನಾಗಿ ಮಾರ್ಪಡಿಸುವಂತೆ ತೋರುತ್ತಿದೆ. ಐಎಸ್‌ಐ ಬೆಂಬಲಿತ ಜಮಾತ್‌ ಎ ಇಸ್ಲಾಮಿಯಂತಹ ಗುಂಪುಗಳೂ ಈ ದೃಷ್ಟಿಕೋನಕ್ಕೆ ಬೆಂಬಲ ನೀಡಿದ್ದು, ಎನ್‌ಎಆರ್‌ ಜಾರಿಗೆ ಯಾಕೆ ಇಷ್ಟು ಅವಸರ ಮಾಡಲಾಗುತ್ತಿದೆ ಎನ್ನುವುದನ್ನು ವಿವರಿಸುತ್ತದೆ. ಈ ಪಡೆ ಅತ್ಯಂತ ಕಟ್ಟುನಿಟ್ಟಿನ ಧಾರ್ಮಿಕ ನಿಯಮಗಳನ್ನು ಬಾಂಗ್ಲಾದೇಶದಲ್ಲಿ ಜಾರಿಗೆ ತಂದು, ಜನರು ಹೇಗೆ ಬಾಳಬೇಕು, ಹೇಗೆ ವಸ್ತ್ರ ಧರಿಸಬೇಕು, ಮತ್ತು ಹೇಗೆ ವರ್ತಿಸಬೇಕು ಎನ್ನುವುದನ್ನೂ ನಿಯಂತ್ರಿಸಲು ಮುಂದಾಗುವ ಸಾಧ್ಯತೆಗಳು ಹೆಚ್ಚಿವೆ.

ಭಾರತಕ್ಕೂ ಈ ಬೆಳವಣಿಗೆ ಗಂಭೀರ ಸವಾಲುಗಳನ್ನೇ ಸೃಷ್ಟಿಸಲಿದೆ. ಬಾಂಗ್ಲಾದೇಶ ಭಾರತದೊಡನೆ ಸುದೀರ್ಘ ಗಡಿಯನ್ನು ಹಂಚಿಕೊಂಡಿದೆ. ಅಲ್ಲಿ ನಡೆಯುವ ಯಾವುದೇ ಬೆಳವಣಿಗೆಯಾದರೂ ನೇರವಾಗಿ ನಮ್ಮ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಮೂಲಭೂತವಾದಿ ಪಡೆಗಳು ನಮ್ಮ ನೆರೆಹೊರೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ, ಅದು ಭಾರತದಲ್ಲೂ ಇರುವ ಮೂಲಭೂತವಾದಿಗಳಿಗೆ ಪ್ರೋತ್ಸಾಹ ನೀಡಿದಂತಾಗಬಹುದು. ಇದರೊಡನೆ ಬಾಂಗ್ಲಾದೇಶದಲ್ಲಿ ಮೂಡುವ ಅಸ್ಥಿರತೆಯಿಂದ ಜನ ಅಲ್ಲಿಂದ ವಲಸೆ ಹೋಗಲಾರಂಭಿಸಿದರೆ, ಆಗ ಭಾರತಕ್ಕೆ ಮತ್ತೊಮ್ಮೆ ನಿರಾಶ್ರಿತರ ಸಮಸ್ಯೆ ಎದುರಾಗಲಿದೆ. ಇದು ಭಾರತದ ಪೂರ್ವ ಮತ್ತು ಪಶ್ಚಿಮ ಎರಡೂ ಗಡಿಗಳ ಮೇಲೆ ಪ್ರಭಾವ ಬೀರಲು ಪಾಕಿಸ್ತಾನಕ್ಕೆ ನೆರವಾಗಿ, ಅದಕ್ಕೆ ಕಾರ್ಯತಂತ್ರದ ಮೇಲುಗೈ ಲಭಿಸಲಿದೆ.

ಭಾರತದ ಮುಂದೆ ಈಗಿರುವ ಆಯ್ಕೆಗಳು ಸೀಮಿತವಾಗಿದ್ದರೂ, ಮಹತ್ವದ್ದಾಗಿವೆ. ಭಾರತ ಮೊದಲು ಬಾಂಗ್ಲಾದೇಶದಲ್ಲಿರುವ ರಾಜತಾಂತ್ರಿಕ ವ್ಯವಸ್ಥೆಯೊಡನೆ ನಮ್ಮ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸಬೇಕು. ಅಲ್ಲಿರುವ ಪ್ರಾಮಾಣಿಕ, ಪ್ರಜಾಪ್ರಭುತ್ವವಾದಿ ರಾಜತಾಂತ್ರಿಕ ಸಂಸ್ಥೆಗಳಿಗೆ ಬೆಂಬಲ ನೀಡಿ, ನಮ್ಮ ಗಡಿಯಾದ್ಯಂತ ಹೆಚ್ಚಿನ ಜಾಗರೂಕತೆ ವಹಿಸಬೇಕು. ಪಾಕಿಸ್ತಾನದ ಹಂಚಿಕೆಗಳನ್ನು ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಯಲುಗೊಳಿಸಿ, ಆಗ ಜಗತ್ತು ಬಾಂಗ್ಲಾದೇಶದ ಬೆಳವಣಿಗೆಯತ್ತ ಗಮನ ಹರಿಸುವಂತೆ ಮತ್ತು ಇಂತಹ ಅನಾಹುತಕಾರಿ ವಿದ್ಯಮಾನಗಳು ನಡೆಯದಂತೆ ತಡೆಯಲು ಮಧ್ಯಪ್ರವೇಶಿಸುವಂತೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಬಾಂಗ್ಲಾದೇಶದ ಜನರಿಗೆ ಅವರ ಒಳಿತಿನ ಕುರಿತು ಕಾಳಜಿ ಇಲ್ಲದ ಬಾಹ್ಯ ಶಕ್ತಿಗಳು ಅವರ ಮನಸ್ಸನ್ನು ಹಾಳು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವುದನ್ನು ಅರಿವು ಮೂಡಿಸಬೇಕು.

ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಭಾರತ ನೆರವಾಗಬೇಕಿದ್ದರೂ, ನೇರವಾಗಿ ಮಧ್ಯಪ್ರವೇಶಿಸುವುದನ್ನು ತಪ್ಪಿಸಬೇಕಾದ್ದರಿಂದ ಪರಿಸ್ಥಿತಿ ಈಗ ಸೂಕ್ಷ್ಮವಾಗಿದೆ. ನಮ್ಮ ಗುಪ್ತಚರ ಸಂಸ್ಥೆಗಳಿಗೆ ಮುಂದಿನ ದಿನಗಳು ಕಷ್ಟಕರವಾಗಿರುವಂತೆ ಕಾಣುತ್ತಿದೆ. ಆದರೆ, ನಮ್ಮ ನೆರೆಹೊರೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧವಾಗಿ ನಿಲ್ಲುವುದು ಕೇವಲ ಬಾಂಗ್ಲಾದೇಶಕ್ಕೆ ಸೀಮಿತವಾದ ನಡೆಯಲ್ಲ. ಅದು ನಮ್ಮ ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ ಮುಖ್ಯವಾಗಿದೆ. ಇಂದು ಢಾಕಾದಲ್ಲಿ ನಡೆಯುವ ಬೆಳವಣಿಗೆಗಳು ನಾಳೆ ದೆಹಲಿಯ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲು ಸಾಧ್ಯವಿಲ್ಲ.

-ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.