ADVERTISEMENT

ವಿಶ್ಲೇಷಣೆ: ಬೆಳ್ಳಿ ಹೊಳಪಲ್ಲಿ ‘ಭೂಮಿ’ ಕ್ರಾಂತಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 23:30 IST
Last Updated 24 ಡಿಸೆಂಬರ್ 2025, 23:30 IST
ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
ಕುಮಾರ, ಜಿಲ್ಲಾಧಿಕಾರಿ, ಮಂಡ್ಯ   

ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆಗೆ ‘ಮಾತೃ ಇಲಾಖೆ’ಯ ಗೌರವ. ಕಂದಾಯ ಇಲಾಖೆಯ ಕಾರ್ಯವೈಖರಿ ಎಲ್ಲರ ಜೀವನಚಕ್ರವನ್ನೂ ಆವರಿಸಿಕೊಂಡಿದೆ; ಹುಟ್ಟಿನಿಂದ ಅಂತ್ಯದವರೆಗೆ ಒಂದಲ್ಲಾ ಒಂದು ಕಾರಣಕ್ಕೆ ನಾಗರಿಕರು ಕಂದಾಯ ಇಲಾಖೆಯ ಸಂಪರ್ಕಕ್ಕೆ ಬರಲೇಬೇಕಾಗುತ್ತದೆ. ‘ಭೂ’ ಆಡಳಿತ ಮತ್ತು ಭೂ ದಾಖಲೆಗಳಿಗೆ ಸಂಬಂಧಿಸಿದಂತೆಯೂ ಕಂದಾಯ ಇಲಾಖೆಯ ವ್ಯಾಪ್ತಿ ವಿಸ್ತಾರವಾಗಿದೆ. ಕೃಷಿ ಆಧಾರಿತ ಅರ್ಥವ್ಯವಸ್ಥೆಯಲ್ಲಿ ಭೂದಾಖಲೆಗಳ ಪಾತ್ರ ಮಹತ್ವದ್ದು. ದಾಖಲೆಗಳ ಸುರಕ್ಷತೆಯು ರೈತರ ಹಾಗೂ ಜನಸಾಮಾನ್ಯರ ಸ್ಥಿತಿಗತಿಗಳ ಸುರಕ್ಷತೆಯೂ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಭೂ ದಾಖಲೆಗಳ ನಿಖರತೆ, ಗುಣಮಟ್ಟ ಮತ್ತು ರಕ್ಷಣೆ, ಭೂ ಮಾಲೀಕನ ಹಕ್ಕಿನ ರಕ್ಷಣೆಯೂ ಹೌದು.

ಕರ್ನಾಟಕ ಆಡಳಿತ ವ್ಯವಸ್ಥೆಯ ಇತಿಹಾಸದಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲೇ ‘ಭೂಮಿ’ ಒಂದು ಕ್ರಾಂತಿಕಾರಕ ಸುಧಾರಣಾ ಯೋಜನೆ. ಆರಂಭದ ಪುಟ್ಟ ಹೆಜ್ಜೆ ಇಂದು ಮಹಾ ಜಿಗಿತವಾಗಿದೆ; ಕಂದಾಯ ಇಲಾಖೆಯ ಸಮಗ್ರ ಸುಧಾರಣೆಗೆ ತಲಕಾವೇರಿಯಾಗಿದೆ. ಈ ಯೋಜನೆ ಇದೀಗ ಇಪ್ಪತ್ತೈದು ವರ್ಷಗಳ ಹಾದಿಯನ್ನು ಕ್ರಮಿಸಿದ್ದು ಸಾಧನೆಯ ಸಾರ್ಥಕತೆಯ ಸಂತಸದಲ್ಲಿದೆ; ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಗಳಿಂದಾಗಿ ಕರ್ನಾಟಕವನ್ನು ಇಡೀ ದೇಶವೇ ಬೆರಗು ಗಣ್ಣುಗಳಿಂದ ತಿರುಗಿ ನೋಡುವಂತೆ ಮಾಡಿದೆ.

2000ನೇ ಇಸವಿ ‘ಭೂಮಿ’ ಯೋಜನೆಗೆ ಅಡಿಪಾಯ ಹಾಕಿದ ವರ್ಷ. ಪ್ರಾರಂಭದ ತಾಂತ್ರಿಕ ಸವಾಲುಗಳು ಹಾಗೂ ಬಿಕ್ಕಟ್ಟುಗಳನ್ನು ‘ಭೂಮಿ’ ಯೋಜನೆ ಮೆಟ್ಟಿ ನಿಂತಿದೆ. ಜನಮನವನ್ನು ಮುಟ್ಟಿದೆ. ಜೊತೆಗೆ, ತಂತ್ರಜ್ಞಾನ ಆಧಾರಿತ ಇತರೆ ಯೋಜನೆ ಗಳನ್ನು ಜಾರಿಗೊಳಿಸಲೂ ಭೂಮಿ ಯೋಜನೆ ಮೆಟ್ಟಿಲಾಗಿದೆ. ಮಾಹಿತಿ ತಂತ್ರಜ್ಞಾನ ಆಧಾರಿತ ಇನ್ನೂ ಹಲವು ಯೋಜನೆಗಳಿಗೆ ತೊಟ್ಟಿಲಾಗಿದೆ.

ADVERTISEMENT

‘ಭೂಮಿ’ ಯೋಜನೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಆಸರೆಯಾಗಿರುವ ಯೋಜನೆಯಾಗಿದ್ದು, ಕೈ ಬರಹದ ಎಲ್ಲಾ ಪಹಣಿಗಳನ್ನು ಗಣಕೀಕರಣಗೊಳಿಸಿ, ಸಂರಕ್ಷಿಸಿ, ಪಾರದರ್ಶಕವಾಗಿಸಿ, ರೈತರ ಅಂಗೈಗೆ ವಿಳಂಬವಿಲ್ಲದೆ ತಲಪುವಂತೆ ಮಾಡಿದೆ. ಇಪ್ಪತ್ತೈದು ವರ್ಷಗಳ ಹಿಂದೆ ರೈತರು ಪಹಣಿಗಳನ್ನು ಪಡೆಯಲು ಸಾಕಷ್ಟು ಪಡಿಪಾಟಲು ಅನುಭವಿಸುತ್ತಿದ್ದರು. ಅನಗತ್ಯ ವಿಳಂಬ, ಭ್ರಷ್ಟಾಚಾರ, ವೃಥಾ ಅಲೆದಾಟ, ಕಿರುಕುಳ, ಹಸ್ತಕ್ಷೇಪ ಹೀಗೆ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಗ್ರಾಮ ಲೆಕ್ಕಿಗರ ಹಿಂದೆ ಅಲೆದಾಡಿ ಪಹಣಿ ಪಡೆಯುವ ಸ್ಥಿತಿ ಇತ್ತು. ಇಂತಹ ಪರಿಸ್ಥಿತಿಗೆ ತಿಲಾಂಜಲಿ ಇಟ್ಟು, ರೈತರು ಮತ್ತು ಸಾರ್ವಜನಿಕರ ಸ್ನೇಹಿಯಾಗಿ ‘ಭೂಮಿ’ ವಿಕಸಿತಗೊಂಡಿದೆ.

ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಯಿತು. ಆರಂಭದಲ್ಲಿ ಯೋಜನೆಯನ್ನು ಸ್ವೀಕರಿಸುವ ಮನೋಭಾವ ಹಿಂಜರಿಕೆಯದಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಾಂಪ್ರದಾಯಿಕ ವ್ಯವಸ್ಥೆಯಿಂದ ಹೊರಬರಲಾಗದ ಹಾಗೂ ಹೊಸ ಬದಲಾವಣೆಗೆ ಒಗ್ಗಿಕೊಳ್ಳದ ಸ್ಥಿತಿ ಇತ್ತು. ಅಂದು ಸುಮಾರು 9000 ಗ್ರಾಮ ಲೆಕ್ಕಾಧಿಕಾರಿಗಳು, 800 ಕಂದಾಯ ನಿರೀಕ್ಷಕರು ಹಾಗೂ 1000 ಕಂಪ್ಯೂಟರ್‌ ಆಪರೇಟರ್‌ಗಳಿಗೆ ತರಬೇತಿ ನೀಡಲಾಯಿತು. ಪ್ರತಿ ತಾಲ್ಲೂಕಿನಲ್ಲಿ ‘ಭೂಮಿ ಕೇಂದ್ರ’ ತೆರೆಯುವ ಮೂಲಕ ರಾಜ್ಯದಲ್ಲಿ 204 ಭೂಮಿ ಕೇಂದ್ರಗಳು ತಲೆ ಎತ್ತಲು ಸಾಧ್ಯ ವಾಯಿತು. ಈ ಮೂಲಕ ಬದಲಾವಣೆಯ ಪರ್ವವನ್ನು ಆರಂಭಿಸಿ, 3.45 ಕೋಟಿ ರೈತರ ಅಂದಾಜು 2.5 ಕೋಟಿ ಕೈಬರಹದ ಪಹಣಿಗಳನ್ನು ಗಣಕೀಕರಣ ಗೊಳಿಸಿದ್ದು ಕ್ರಾಂತಿಕಾರಕ ಹೆಜ್ಜೆಯಾಗಿದೆ.

ಆರಂಭದಲ್ಲಿ ಈ ವ್ಯವಸ್ಥೆಯನ್ನು ಒಪ್ಪದಿದ್ದವರೂ ನಂತರದಲ್ಲಿ ಅಪ್ಪಿಕೊಳ್ಳುವಂತೆ ಮಾಡಿರುವುದು ಈ ಯೋಜನೆಯ ಹೆಚ್ಚುಗಾರಿಕೆಯಾಗಿದೆ; ಕೈಬರಹದ ‘ಆರ್‌ಟಿಸಿ’ಗಳನ್ನು ರದ್ದುಗೊಳಿಸಿ, ಗಣಕೀಕೃತ ‘ಆರ್‌ಟಿಸಿ’ಗಳನ್ನು ಮಾನ್ಯತೆಗೊಳಿಸಿದ್ದು ಕ್ರಾಂತಿಕಾರಕ ಚಾರಿತ್ರಿಕ ಬದಲಾವಣೆಯಾಗಿದೆ. ಕಳೆದ 25 ವರ್ಷ ಗಳಲ್ಲಿ ‘ಭೂಮಿ’ ಯೋಜನೆಯಡಿ ಸರಿಸುಮಾರು 39.81 ಕೋಟಿಗೂ ಹೆಚ್ಚು ಪಹಣಿಗಳನ್ನು ರೈತರಿಗೆ ವಿತರಿಸಿರುವುದು ಅಸಾಮಾನ್ಯ ಸಾಧನೆ. ಆರಂಭದಲ್ಲಿ ಕೈಬರಹದ ಪಹಣಿಗಳನ್ನು ಗಣಕೀಕೃತಗೊಳಿಸಿ ರೈತರಿಗೆ ತಲಪಿಸುವ ಉದ್ದೇಶದಿಂದ ಆರಂಭವಾದ ಯೋಜನೆ ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಳ್ಳುತ್ತಾ ಸಾಗಿ, ಪ್ರಸ್ತುತ ಹೆಮ್ಮರವಾಗಿ ನಿಂತಿದೆ.

ಇಂದು ‘ಭೂಮಿ’ ಯೋಜನೆ ಬರೀ ಗಣಕೀಕೃತ ಪಹಣಿಗಳನ್ನು ನೀಡುವುದಕ್ಕಷ್ಟೇ ಸೀಮಿತವಾಗದೆ, ಬಹುವಿಸ್ತಾರವಾದ ಆಯಾಮವನ್ನು ಪಡೆದು ಕೊಂಡಿದೆ. ಕಾವೇರಿ, ಮೋಜಣಿ, ನಾಡಕಚೇರಿ, 11ಇ ನಕ್ಷೆ, ಬ್ಯಾಂಕ್‍ ಸಾಲ ಯೋಜನೆ, ಭೂ ಸ್ವಾಧೀನ, ಪೋಡಿ, ದರಕಾಸು ಪೋಡಿ, ಹಕ್ಕು ಬದಲಾವಣೆ, ಆರ್‌ಟಿಸಿ ತಿದ್ದುಪಡಿ, ಬೆಳೆ ಸಮೀಕ್ಷೆ, ಬೆಳೆ ಸಂರಕ್ಷಣೆ, ಬೆಳೆ ಕಟಾವು ಪ್ರಯೋಗ, ಸೇವಾಸಿಂಧು ಸಂಯೋಜನೆ, ದಿಶಾಂಕ್, ಇ–ಕೋರ್ಟ್, ಕಂದಾಯ ನ್ಯಾಯಾಲಯಗಳು, ಗಂಗಾ ಕಲ್ಯಾಣ, ಇ–ಸ್ವತ್ತು, ಕೃಷಿ ಇಲಾಖೆಯ ಪಿ.ಎಂ. ಕಿಸಾನ್‍ ಹೀಗೆ ಹತ್ತು ಹಲವು ಕವಲುಗಳಾಗಿ ‘ಭೂಮಿ’ ಯೋಜನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

‘ಭೂಮಿ’ ಜಾರಿಗೆ ಬಂದ ಕೆಲವೇ ವರ್ಷಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಯಿತು. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು, ನಕಲಿ ಮತ್ತು ಮೋಸದ ನೋಂದಣಿಗೆ ತಿಲಾಂಜಲಿ ಇಡಲು ‘ಕಾವೇರಿ’ ತಂತ್ರಾಂಶವನ್ನು ‘ಭೂಮಿ’ ಯೋಜನೆಗೆ ಸಂಯೋಜನೆ ಮಾಡಲಾಯಿತು. ನೋಂದಣಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಲು ‘ಭೂಮಿ’ ಆಸರೆಯಾಗಿದೆ. ಭೂಮಿ ಮತ್ತು ಕಾವೇರಿ ಸಂಯೋಜನೆಯಡಿ ಇಂದು ಯಾವುದೇ ಕ್ರಯದ ವ್ಯವಹಾರಗಳು ಅತ್ಯಂತ ಪಾರದರ್ಶಕ, ಸುಲಲಿತ ಹಾಗೂ ವಿಳಂಬವಿಲ್ಲದೆ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ಭೂಮಿ ಮತ್ತು ಕಾವೇರಿ ಸಂಯೋಜನೆಯು ಅತ್ಯಂತ ಪರಿಣಾಮಕಾರಿ ಮತ್ತು ರೈತಸ್ನೇಹಿ ಕ್ರಮವಾಗಿ ಗುರುತಿಸಿಕೊಂಡಿದೆ.

ಯಾವುದೇ ಭೂಮಿಯನ್ನು ಕ್ರಯ, ವಿಭಾಗ, ಭೂ ಪರಿವರ್ತನೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆ, ಋಣಭಾರ ಮುಂತಾದ ರೂಪಗಳಲ್ಲಿ ವರ್ಗಾವಣೆ ಮಾಡುವ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಪದ್ಧತಿಗೆ ಅಂತ್ಯ ಹಾಡಿ, ಹಕ್ಕು ಬದಲಾವಣೆಯನ್ನು ಪಾರದರ್ಶಕವಾಗಿ ನಡೆಸಲು ‘ಭೂಮಿ’ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.  ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಹಕ್ಕು ಬದಲಾವಣೆ ಮಾಡಿ, ಹೆಸರುಗಳನ್ನು ಪಹಣಿಗಳಲ್ಲಿ ಅಡಕಗೊಳಿಸಿರುವುದು ಮಹತ್ವದ ಸುಧಾರಣೆಯಾಗಿದೆ.

2007ರಲ್ಲಿ ಮೋಜಣಿ ತಂತ್ರಾಂಶ ಅನುಷ್ಠಾನ ಗೊಳಿಸಲಾಯಿತು. ಮೋಜಣಿ ತಂತ್ರಾಂಶವನ್ನು ‘ಭೂಮಿ’ ಯೋಜನೆಗೆ ಸಂಯೋಜಿಸಿರುವುದು, ಕೆಲಸದಲ್ಲಿನ ಸ್ವೇಚ್ಛಾಚಾರ ಮತ್ತು ವಿಳಂಬಧೋರಣೆಗೆ ಪೂರ್ಣವಿರಾಮ ಹಾಕಿದೆ. ಈ ಮೂಲಕ, ಅಳತೆ ಕೆಲಸಗಳು ಹಾಗೂ ಸರ್ವೆ ಕಾರ್ಯಗಳನ್ನು ಪಾರದರ್ಶಕವಾಗಿ ನಿರ್ವಹಿಸಲು ಸಹಕಾರಿಯಾಗಿದೆ; ಸಾರ್ವಜನಿಕರು ಮತ್ತು ಆಡಳಿತ ವ್ಯವಸ್ಥೆಯ ನಡುವೆ ಇದ್ದ ಕಂದಕವನ್ನು ಕಡಿಮೆ ಮಾಡುವ ಮೂಲಕ ಗುಣಮಟ್ಟದ ಸೇವೆ ನೀಡಲಾಗುತ್ತಿದೆ.

ಕ್ರಯಕ್ಕೆ ಪಡೆಯುವ ಮತ್ತು ಕ್ರಯಕ್ಕೆ ನೀಡುವ ಇಬ್ಬರಿಗೂ ಗಡಿ ಗುರುತು ಮತ್ತು ವಿಸ್ತೀರ್ಣದ ನಿಖರತೆಯನ್ನು ತಿಳಿದುಕೊಂಡು, ನಂತರವೇ ಕ್ರಯದ ವ್ಯವಹಾರವನ್ನು ನಡೆಸಲು ಜಾರಿಗೆ ಬಂದ ‘11ಇ ನಕಾಶೆ’ (ಪರಿವರ್ತನೆಪೂರ್ವ ನಕಾಶೆ) ಸಹ ದೇಶದಲ್ಲಿಯೇ ಮೊದಲನೆಯದು ಎಂದರೆ ತಪ್ಪಿಲ್ಲ. ಇದರಿಂದ ಗಡಿವಿವಾದ, ಜಮೀನು ವಿವಾದಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಗಮನಿಸಬಹುದು.

ಭೂಮಿ ಯೋಜನೆಯಡಿಯಲ್ಲಿ ಪರಿಹಾರ ತಂತ್ರಾಂಶದ ಮೂಲಕ 2016ರಿಂದಲೂ ಬೆಳೆ ಪರಿಹಾರವನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. 2018ರಲ್ಲಿ ಸಾಲ ಮನ್ನಾ ಯೋಜನೆಯ ಸಂದರ್ಭದಲ್ಲಿ ಸುಮಾರು 20 ಲಕ್ಷ ರೈತರ ಸಾಲ ಮನ್ನಾ ಮಾಡಲು ‘ಭೂಮಿ’ ಸಹಕಾರಿಯಾಗಿರುತ್ತದೆ. ಕೃಷಿ ಇಲಾಖೆಯ ‘FRUITS’ ಮತ್ತು ಪಿ.ಎಂ. ಕಿಸಾನ್‍ ಯೋಜನೆಗೆ ಸಂಯೋಜನೆಗೊಳಿಸಿರುವುದರಿಂದ ರೈತರಿಗೆ ಸಿಗಬೇಕಾದ ಸವಲತ್ತುಗಳು ನೇರವಾಗಿ ದೊರಕುತ್ತಿವೆ. ಅಲ್ಲದೇ, ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಆಧಾರ್ ಸೀಡಿಂಗ್ ಮೂಲಕ ಸುಮಾರು 2.17 ಕೋಟಿ ರೈತರ ಪಹಣಿಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

‘ಭೂಮಿ’ಯ ಸಾಧನೆಯ ಹಾದಿಯಲ್ಲಿ ಗಣನೀಯ ಪ್ರಮಾಣದಲ್ಲಿ ಮಹತ್ತರ ಸುಧಾರಣೆಗಳು ಘಟಿಸಿವೆ. ಕಂದಾಯ ಇಲಾಖೆಯ ಸೇವೆಗಳನ್ನು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿ ನೀಡುವಲ್ಲಿ ಯಶಸ್ಸಿನ ಫಲ ಸಿಕ್ಕಿದೆ; ಗ್ರಾಮೀಣ ಜನತೆಯೊಡನೆ ಆಡಳಿತ ವ್ಯವಸ್ಥೆ ಒಗ್ಗೂಡಿಕೊಂಡು ಸಮನ್ವಯ ಸಾಧಿಸಿದೆ. ಭೂಮಿಗೂ ರೈತರಿಗೂ ಇರುವ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಆಸ್ತಿ ಹಾಗೂ ಭಾವನೆಗಳನ್ನು ಸುರಕ್ಷಿತವಾಗಿಡಲು ‘ಭೂಮಿ’ ಸಹಕಾರಿಯಾಗಿದೆ. ಈ ಯೋಜನೆಯಿಂದಾಗಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಆಗಿದೆ. ವಿವೇಚನಾಧಿಕಾರದ ದುರ್ಬಳಕೆಗೂ ಅವಕಾಶವಿಲ್ಲದಂತಾಗಿದೆ. ರೈತರು, ಭೂ ಮಾಲೀಕರು ಹಳ್ಳಿಯಿಂದ ತಾಲ್ಲೂಕು ಕೇಂದ್ರಗಳಿಗೆ, ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಸ್ಥಿತಿಯೂ ಇಲ್ಲದಂತಾಗಿ, ದಾಖಲೆಗಳಿಗಾಗಿ ಕಂಬ ಸುತ್ತುವುದು ತಪ್ಪಿದೆ.

‘ಭೂಮಿ’ ಯೋಜನೆ ಪ್ರತಿಸ್ಪಂದನೆಯ ಆಡಳಿತಕ್ಕೆ ವೇದಿಕೆ ಒದಗಿಸುವ ಮೂಲಕ ಇಡೀ ಆಡಳಿತ ವ್ಯವಸ್ಥೆಗೆ ಆಮೂಲಾಗ್ರ ಪರಿವರ್ತನೆ ತಂದುಕೊಟ್ಟಿದೆ ಹಾಗೂ ಸಾಂಪ್ರದಾಯಿಕ ವ್ಯವಸ್ಥೆಗೆ ಬದಲಾಗಿ ಹೊಸ ಹೊಸ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡು ಜನಮನ್ನಣೆಗೆ ಪಾತ್ರವಾಗಿದೆ. ಆರಂಭದ ಉದ್ದೇಶಿತ ಆಶಯಗಳಿಗಷ್ಟೇ ಸೀಮಿತ ಗೊಳ್ಳದೆ, ಹೊಸಹೊಸ ಸುಧಾರಣಾ ಕ್ರಮಗಳನ್ನು ತನ್ನೊಟ್ಟಿಗೆ ಸಮ್ಮಿಳಿತ ಗೊಳಿಸಿಕೊಂಡಿದೆ, ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ.


ಲೇಖಕ: ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲೆ

ಕುಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.