ADVERTISEMENT

ವಿಶ್ಲೇಷಣೆ | ಎಸ್‌ಐಆರ್‌: ಲೋಪಗಳ ಕೂಪ

ಯೋಗೇಂದ್ರ ಯಾದವ್
Published 16 ಅಕ್ಟೋಬರ್ 2025, 0:56 IST
Last Updated 16 ಅಕ್ಟೋಬರ್ 2025, 0:56 IST
.
.   

ಬಿಹಾರದ ಮತದಾರರ ಅಂತಿಮ ಪಟ್ಟಿಯೂ ಚುನಾವಣಾ ವೇಳಾಪಟ್ಟಿಯೂ ಜೊತೆ ಜೊತೆಗೆ ಪ್ರಕಟವಾಗಿವೆ. ಆ ರಾಜ್ಯದಲ್ಲಿ ನಡೆಸಲಾದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್‌ಐಆರ್‌) ಕುರಿತು ತತ್‌ಕ್ಷಣದ ಒಂದು ವಿಶ್ಲೇಷಣೆ ಇಲ್ಲಿದೆ. ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಸಂಬಂಧಿಸಿ ಜಾಗತಿಕವಾಗಿ ಮಾನ್ಯತೆ ಇರುವ ಮೂರು ಮಾನದಂಡಗಳಾದ ಪೂರ್ಣತೆ, ಸಮಾನತೆ ಮತ್ತು ನಿಖರತೆಯ ಆಧಾರದಲ್ಲಿ ಬಿಹಾರದ ಮತದಾರರ ಹೊಸ ಪಟ್ಟಿಯ ಗುಣಮಟ್ಟದ ವಿಶ್ಲೇಷಣೆಯನ್ನು ಇಲ್ಲಿ ನಡೆಸಿದ್ದೇವೆ. 

ಮತದಾರರ ಪಟ್ಟಿಯ ಗುಣಮಟ್ಟವನ್ನು ಅಳೆಯುವ ಮೊದಲ ಮಾನದಂಡ ಪೂರ್ಣತೆ; ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಅರ್ಹ ಮತದಾರರ ಪ್ರಮಾಣದ ಆಧಾರದಲ್ಲಿ ಪೂರ್ಣತೆಯನ್ನು ಅಳೆಯಲಾಗುತ್ತದೆ. ಬಿಹಾರದ ಮತದಾರರ ಕರಡು ಪಟ್ಟಿ ಪ್ರಕಟವಾದ ಬಳಿಕ ಮತದಾರರ ‍ಪಟ್ಟಿಯಲ್ಲಿ ಸ್ಥಾನ ಪಡೆದ ವಯಸ್ಕ ಮತದಾರರ ಪ್ರಮಾಣದ ಆಘಾತಕಾರಿ ಕುಸಿತವನ್ನು ನಾವು ದಾಖಲಿಸಿದ್ದೇವೆ (ದಿ ಮಿಸ್ಸಿಂಗ್‌ ವೋಟರ್ಸ್‌, ಇಂಡಿಯನ್‌ ಎಕ್ಸ್‌ಪ್ರೆಸ್‌ ಜುಲೈ 31). ಕುಸಿತದ ಪ್ರಮಾಣವು ಈ ಹಿಂದಿನ ಶೇ 97ಕ್ಕಿಂತ ಶೇ 88. ಮತದಾರರ ಅಂತಿಮ ಪಟ್ಟಿಯು ಒಂದು ಮಟ್ಟಿಗೆ ಸುಧಾರಣೆಗೊಂಡಿದೆ ಮತ್ತು ಮತದಾರರ ಪಟ್ಟಿ ಸೇರಿದ ವಯಸ್ಕರ ಪ್ರಮಾಣವು ಶೇ 90ಕ್ಕೆ ಏರಿದೆ. ಹಾಗಿದ್ದರೂ ಒಟ್ಟು ಚಿತ್ರಣದಲ್ಲಿ ದೊಡ್ಡ ಬದಲಾವಣೆ ಏನೂ ಇಲ್ಲ. ವಯಸ್ಕ ಮತದಾರರ ಅನುಪಾತವು ತೀವ್ರವಾಗಿ ಕುಸಿಯುವುದಕ್ಕೆ ಎಸ್‌ಐಆರ್‌ ಕಾರಣವಾಗಿದೆ. ಭಾರತ ಸರ್ಕಾರದ ಜನಸಂಖ್ಯೆ ಅಂದಾಜು ತಾಂತ್ರಿಕ ಸಮಿತಿಯ ಅಂದಾಜಿನ ಪ್ರಕಾರ, 2025ರ ಸೆಪ್ಟೆಂಬರ್‌ನಲ್ಲಿ ಬಿಹಾರದಲ್ಲಿ 8.22 ಕೋಟಿ ಮತದಾರರು ಇರಬೇಕಿತ್ತು. ಆದರೆ, ಅಂತಿಮ ಪಟ್ಟಿಯ ಪ್ರಕಾರ ಅಲ್ಲಿ ಇರುವ ಮತದಾರರ ಸಂಖ್ಯೆಯು 7.42 ಕೋಟಿ ಮಾತ್ರ. ಅಂದರೆ, ಸುಮಾರು 80 ಲಕ್ಷ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ. ಇದು ಸಂಭ್ರಮಿಸುವಂತಹ ವಿಚಾರವೇನೂ ಅಲ್ಲ. 

ಅಂತಿಮ ಪಟ್ಟಿಯ ಸಂಖ್ಯೆಯ ಕುರಿತು ತಪ್ಪಾದ ಒಂದು ನಿರಾಳಭಾವ ಇದೆ; ಅದಕ್ಕೆ ಮುಖ್ಯವಾದ ಕಾರಣ ಏನೆಂದರೆ, ಕರಡು ಪಟ್ಟಿಯಲ್ಲಿ ಕಡಿಮೆಯಾದ ಮತದಾರರ ಸಂಖ್ಯೆಯು ಕರಡು ಪಟ್ಟಿಯಿಂದ ಹೊರಗಿಡಲಾದ ಸಂಖ್ಯೆಗಿಂತ 65 ಲಕ್ಷದಷ್ಟು ಕಡಿಮೆ ಇದೆ. ಸುಮಾರು ಎರಡು ಕೋಟಿ ಹೆಸರು ಕೈಬಿಡಲಾಗುವುದು ಎಂಬ ಕಳವಳ ಹಿಂದೆ ಇತ್ತು. ಆದರೆ, ಈಗ ಕೈಬಿಡಲಾದ ಸಂಖ್ಯೆಯು ಅದಕ್ಕಿಂತ ಬಹಳ ಕಡಿಮೆ ಇದೆ ಎಂಬುದು ಹುಸಿ ಸಮಾಧಾನಕ್ಕೆ ಇನ್ನೊಂದು ಕಾರಣ. ಮತದಾರರ ಮತದಾನದ ಹಕ್ಕುಗಳನ್ನು ಈ ಪ್ರಮಾಣದಲ್ಲಿ ಕಸಿದುಕೊಳ್ಳಲಾಗಿಲ್ಲ ಎಂಬುದಕ್ಕೆ ಎಸ್‌ಐಆರ್‌ ಅಥವಾ ಚುನಾವಣಾ ಆಯೋಗವು ಕಾರಣ ಅಲ್ಲ. ಬದಲಿಗೆ ಸುಪ್ರೀಂ ಕೋರ್ಟ್‌ನಿಂದಾಗಿ ಇದು ಸಾಧ್ಯವಾಯಿತು. ನಿರಂತರವಾದ ನಿಗಾ ಇರಿಸಿದ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಬೇಕು. ಇದರಿಂದಾಗಿ ಹಾನಿ ಸರಿಪಡಿಸುವ ಕೆಲಸಕ್ಕೆ ಆಯೋಗವು ಮುಂದಾಯಿತು ಮತ್ತು ತನ್ನದೇ ಆದೇಶಗಳು ಮತ್ತು ಪ್ರಕ್ರಿಯೆಗಳನ್ನು ಕೈಬಿಟ್ಟಿತು. ಮೊದಲನೆಯದಾಗಿ, ದೊಡ್ಡ ಸಂಖ್ಯೆಯ ಗಣತಿ ನಮೂನೆಗಳನ್ನು (ಎನ್ಯುಮರೇಷನ್‌ ಫಾರಂ) ಮತಗಟ್ಟೆ ಅಧಿಕಾರಿಗಳು ಸಲ್ಲಿಕೆ ಮಾಡಿರಲಿಲ್ಲ ಮತ್ತು ಈ ವಂಚನೆಗೆ ಚುನಾವಣಾ ಆಯೋಗದ ಪ್ರೋತ್ಸಾಹ ಕೂಡ ಇತ್ತು ಎಂದು ಹೇಳಲಾಗಿತ್ತು. ಬಳಿಕ, ಹೀಗೆ ಸಂಗ್ರಹಿಸಲಾದ ಕನಿಷ್ಠ ಶೇ 20ರಷ್ಟು ನಮೂನೆಗಳನ್ನು ಸಲ್ಲಿಸಲಾಯಿತು. ಎರಡನೆಯದಾಗಿ, ಮಾಧ್ಯಮಗಳಲ್ಲಿ ವರದಿಯಾದಂತೆ, ಅಗತ್ಯ ದಾಖಲೆಪತ್ರಗಳು ಇಲ್ಲದ ಐದನೇ ಮೂರರಷ್ಟು ಸಂಭಾವ್ಯ ಮತದಾರರಿಗೆ ವಂಶಾವಳಿಯ ಮೂಲಕ ಅವಕಾಶ ನೀಡಲಾಯಿತು– ಅಂದರೆ, 2003ರ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಕುಟುಂಬದ ಯಾರಾದರೊಬ್ಬರನ್ನು ಗುರುತಿಸಿ, ಅದರ ಆಧಾರದಲ್ಲಿ ಹೆಸರು ನೋಂದಣಿ ಮಾಡುವುದು. ಅಂತಿಮವಾಗಿ, ಆಧಾರ್‌ ಸಂಖ್ಯೆಯನ್ನು ಪರಿಗಣಿಸುವಂತೆ ಸ್ವಲ್ಪ ವಿಳಂಬವಾಗಿಯಾದರೂ ಸುಪ್ರೀಂ ಕೋರ್ಟ್‌ ನೀಡಿದ ಆದೇಶದಿಂದಾಗಿ ಎಸ್‌ಐಆರ್‌ನ ಮತದಾನದ ಅರ್ಹತೆ ರದ್ದುಪಡಿಸುವ ಪ್ರವೃತ್ತಿಗೆ ಕಡಿವಾಣ ಬಿತ್ತು. 

ADVERTISEMENT

ಎರಡನೇ ಮಾನದಂಡವಾದ ‘ಸಮಾನತೆ’ಯು ಇನ್ನಷ್ಟು ಅಕ್ರಮಗಳಿಗೆ ಸಾಕ್ಷ್ಯ ಒದಗಿಸಿತು. ಸಮಾನತೆ ಎಂದರೆ ಎಲ್ಲ ಸಾಮಾಜಿಕ ಗುಂಪುಗಳಿಗೆ ಅದರ ಅರ್ಹ ಜನಸಂಖ್ಯೆಯ ಪ್ರಮಾಣದಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು. ಮಹಿಳೆಯರು ಮತ್ತು ಮುಸ್ಲಿಮರ ಪ್ರಾತಿನಿಧ್ಯವನ್ನು ಎಸ್‌ಐಆರ್‌ ಪ್ರತಿಕೂಲವಾಗಿ ಬಾಧಿಸಿದೆ ಎಂಬುದಕ್ಕೆ ನಮ್ಮಲ್ಲಿ ಪುರಾವೆಗಳು ಇವೆ. ಹಾಗಿದ್ದರೂ ದಲಿತರು ಮತ್ತು ಅಲ್ಪಸಂಖ್ಯಾತರಂತಹ ವಿವಿಧ ಶೋಷಿತ ಗುಂಪುಗಳ ಮೇಲೆ ಎಸ್‌ಐಆರ್‌ ಯಾವ ಪರಿಣಾಮ ಬೀರಿದೆ ಎಂಬುದರ ಕುರಿತು ಗಾಢವಾದ ವಿಶ್ಲೇಷಣೆಯ ಫಲಿತಾಂಶಕ್ಕೆ ನಾವು ಕಾಯಬೇಕಿದೆ. ಬಿಹಾರದ ಮಹಿಳಾ ಜನಸಂಖ್ಯೆಗೆ ಹೋಲಿಸಿದರೆ ಮತದಾರರ ಪಟ್ಟಿಯಲ್ಲಿ ಇರುವ ಮಹಿಳೆಯರ ಅನುಪಾತವು ಸದಾ ಕಡಿಮೆಯೇ ಇತ್ತು. ಆದರೆ, ಕೆಲವು ವರ್ಷಗಳಲ್ಲಿ ಈ ಅಂತರ ಕಡಿಮೆಯಾಗಿದೆ. 2021ರಲ್ಲಿ 21 ಲಕ್ಷ ಕಡಿಮೆ ಇದ್ದರೆ, ಈ ವರ್ಷ ಜನವರಿಯಲ್ಲಿ ಅದು 7 ಲಕ್ಷಕ್ಕೆ ಇಳಿದಿದೆ. ಆದರೆ, ಎಸ್‌ಐಆರ್‌ ಈ ಚಾರಿತ್ರಿಕ ಪ್ರವೃತ್ತಿಯನ್ನು ತಿರುವುಮುರುವಾಗಿಸಿದೆ. ಮಹಿಳಾ ಮತದಾರರ ಪ್ರಮಾಣವನ್ನು ಕಡಿಮೆಗೊಳಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾದ ಮಹಿಳೆಯರ ಸಂಖ್ಯೆಯು 16 ಲಕ್ಷಕ್ಕೆ ಏರಿಕೆಯಾಗಿದೆ. 

ಮುಸ್ಲಿಮರಿಗೆ ಸಂಬಂಧಿಸಿ ಈ ಪುರಾವೆಯು ಅಷ್ಟೊಂದು ಸ್ಪಷ್ಟವಾಗಿ ಇಲ್ಲ. ಏಕೆಂದರೆ, ಚುನಾವಣಾ ಆಯೋಗದ ದಾಖಲೆಯಲ್ಲಿ ಈ ಸಮುದಾಯವು ಅಧಿಕೃತ ವರ್ಗವಾಗಿ ಸೇರ್ಪಡೆ ಆಗಿಲ್ಲ. ಆದರೆ, ಹೆಸರು ಗುರುತಿಸುವಿಕೆ ಸಾಫ್ಟ್‌ವೇರ್‌ ನೀಡುವ ವಾಸ್ತವಾಂಶಗಳು ಆಘಾತಕಾರಿಯಾಗಿವೆ: ಮತದಾರರ ಕರಡು ಪಟ್ಟಿಯಿಂದ ಹೆಸರು ಕೈಬಿಡಲಾದ 65 ಲಕ್ಷ ಜನರಲ್ಲಿ ಮುಸ್ಲಿಮರ ಪ್ರಮಾಣವು ಶೇ 24.7ರಷ್ಟಿತ್ತು. ಅಂತಿಮ ಪಟ್ಟಿಯಿಂದ ಕೈಬಿಡಲಾದ 3.66 ಲಕ್ಷ ಜನರಲ್ಲಿ ಮುಸ್ಲಿಮರ ಪ್ರಮಾಣವು ಶೇ 33ರಷ್ಟಿದೆ. ಜನಗಣತಿಯ ಪ್ರಕಾರ ಮುಸ್ಲಿಮರ ಜನಸಂಖ್ಯಾ ಪ್ರಮಾಣವು ಶೇ 16.9. ಹಾಗಾಗಿ, ಆರು ಲಕ್ಷ ಮುಸ್ಲಿಮರನ್ನು ಕೈಬಿಡಲಾಗಿದೆ ಎಂದು ಇದನ್ನು ಅರ್ಥ ಮಾಡಿಕೊಳ್ಳಬಹುದು. 

ಮೂರನೇ ಮಾನದಂಡ ‘ನಿಖರತೆ’ಯ ವಿಚಾರದಲ್ಲಿ ಮತದಾರರ ಪಟ್ಟಿಯನ್ನು ಎಸ್‌ಐಆರ್‌ ಇನ್ನಷ್ಟು ಕೆಟ್ಟದಾಗಿಸಿದೆ. ಎಸ್‌ಐಆರ್ ಪೂರ್ವ ಮತ್ತು ಎಸ್‌ಐಆರ್‌ ನಂತರದ ಪಟ್ಟಿಗಳನ್ನು ಹೋಲಿಸಿ ನಿಖರತೆಯ ಅಂಕಗಳನ್ನು ಕಂಡುಕೊಳ್ಳಲು ಪೂರ್ಣಪ್ರಮಾಣದ ಪರಿಶೀಲನೆಯೊಂದರ ಅಗತ್ಯ ಇದೆ. ಆದರೆ, ಕೆಲವು ಅತ್ಯಂತ ಸಾಮಾನ್ಯ ಲೋಪಗಳ ಪ್ರಾಥಮಿಕ ವಿಶ್ಲೇಷಣೆ ನಡೆಸಿದಾಗ ಎಸ್‌ಐಆರ್‌ ಮೂಲಕ ಮತದಾರರ ಪಟ್ಟಿಯ ‘ಶುದ್ಧೀಕರಣ’ ಮಾಡಲಾಗಿದೆ ಎಂಬ ಚುನಾವಣಾ ಆಯೋಗದ ಹೇಳಿಕೊಳ್ಳುವಿಕೆಯನ್ನು ಒಪ್ಪುವುದು ಕಷ್ಟ. ಬಿಹಾರದ ಅಂತಿಮ ಮತದಾರರ ಪಟ್ಟಿಯಲ್ಲಿ 24 ಸಾವಿರ ಅರ್ಥಹೀನ ಹೆಸರುಗಳಿವೆ; 5.2 ಲಕ್ಷ ಹೆಸರುಗಳು ಪುನರಾವರ್ತನೆಗೊಂಡಿವೆ; ಆರು ಸಾವಿರಕ್ಕೂ ಹೆಚ್ಚು ಅಮೌಲಿಕ ಲಿಂಗತ್ವ ನಮೂದುಗಳಿವೆ (ಮಹಿಳೆ, ಪುರುಷ ಮತ್ತು ಲೈಂಗಿಕ ಅಲ್ಪಸಂಖ್ಯಾತ ವರ್ಗದಿಂದ ಹೊರಗಿನ ಉಲ್ಲೇಖಗಳು). 51 ಸಾವಿರಕ್ಕೂ ಹೆಚ್ಚು ಅಮೌಲಿಕ ಸಂಬಂಧಗಳಿವೆ (ತಾಯಿ, ತಂದೆ, ಗಂಡ ಇತ್ಯಾದಿ ಅಲ್ಲದೇ ಇರುವ ಸಂಬಂಧಗಳು); ಎರಡು ಲಕ್ಷಕ್ಕೂ ಹೆಚ್ಚು ಮನೆ ಸಂಖ್ಯೆಗಳು ನಮೂದಾಗಿಲ್ಲ ಅಥವಾ ಅಮೌಲಿಕವಾಗಿವೆ (ಮನೆ ಸಂಖ್ಯೆಯ ಕಾಲಂನಲ್ಲಿ 0 ಎಂಬ ನಮೂದು). ಇದು ಶುದ್ಧೀಕರಣದ ಮಾದರಿ ಅಲ್ಲವೇ ಅಲ್ಲ. ಬಿಹಾರದಲ್ಲಿ ಈಗ 10 ಅಥವಾ ಅದಕ್ಕೂ ಹೆಚ್ಚು ಮತದಾರರು ಇರುವ 24 ಲಕ್ಷಕ್ಕೂ ಹೆಚ್ಚು ಮನೆಗಳಿದ್ದು (ಚುನಾವಣಾ ಆಯೋಗವೇ ವ್ಯಾಖ್ಯಾನಿಸಿದಂತೆ ಇದು ಮೇಲ್ನೋಟಕ್ಕೆ ಸಂಶಯಾಸ್ಪದ) ಇಲ್ಲಿ ಒಟ್ಟು 3.2 ಕೋಟಿ ಮತದಾರರಿದ್ದಾರೆ. ಈ ಎಲ್ಲ ವಿಚಾರಗಳಲ್ಲಿ ಕೂಡ ಮತದಾರರ ಕರಡು ಪಟ್ಟಿಗಿಂತ ಅಂತಿಮ ಪಟ್ಟಿ ಇನ್ನೂ ಕೆಟ್ಟದಾಗಿದೆ. 

ಬಿಜೆಪಿ ಮುಖಂಡರು ಪದೇ ಪದೇ ಹೇಳಿಕೊಂಡಂತೆ ಮತ್ತು ಆಯೋಗವು ಅನುಮೋದಿಸಿದಂತೆ ವಿದೇಶಿಯರು ಅದರಲ್ಲಿಯೂ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾ ಸಮುದಾಯದವರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯು ಏನಾಗಿದೆ? ಕುತೂಹಲಕರವೆಂದರೆ, ಆಯೋಗವು ಎಸ್‌ಐಆರ್‌ ಕುರಿತು ನಿತ್ಯವೂ ನೀಡುತ್ತಿದ್ದ ಬುಲೆಟಿನ್‌ನಲ್ಲಿ ಹೆಸರು ತೆಗೆದುಹಾಕಲು ವಿವಿಧ ಕಾರಣಗಳನ್ನು ನೀಡಲಾಗಿದೆ. ಆದರೆ ಎಲ್ಲಿಯೂ ಮನೆಮನೆ ಪರಿಶೀಲನೆಯ ವೇಳೆ ಪತ್ತೆಯಾದ ವಿದೇಶಿಯರ ಸಂಖ್ಯೆಯ ಉಲ್ಲೇಖವೇ ಇರಲಿಲ್ಲ. ಈ ಕಾರಣವನ್ನು ಮುಂದಿಟ್ಟು ಬಿಜೆಪಿ ಒಬ್ಬನೇ ಒಬ್ಬ ಮತದಾರನಿಗೆ ಆಕ್ಷೇಪ ಎತ್ತಿ ದೂರು ಸಲ್ಲಿಸಿಲ್ಲ. ಬಿಹಾರ ಮುಖ್ಯ ಚುನಾವಣಾಧಿಕಾರಿಯವರ ವೆಬ್‌ಸೈಟ್‌ನಲ್ಲಿ ಕರಡು ಮತದಾರರ ಪಟ್ಟಿಗೆ 2.4 ಲಕ್ಷ ಆಕ್ಷೇಪಗಳು ಸಲ್ಲಿಕೆಯಾಗಿವೆ ಎಂಬ ಮಾಹಿತಿ ಇದೆ. ಅವುಗಳ ‍ಪೈಕಿ 1,087 ಪ್ರಕರಣಗಳು (ಶೇ 0.015) ಮಾತ್ರ ಭಾರತದ ಪ್ರಜೆ ಅಲ್ಲ ಎಂಬ ಕಾರಣವನ್ನು ಹೊಂದಿವೆ. ಇವುಗಳಲ್ಲಿ ಬಹುಪಾಲು ಪ್ರಕರಣಗಳು ಸಂದೇಹಾಸ್ಪದವಾಗಿವೆ (ಇವುಗಳಲ್ಲಿ 779 ಪ್ರಕರಣಗಳು ಸ್ವಯಂ ಆಕ್ಷೇಪಗಳಾಗಿವೆ; ವ್ಯಕ್ತಿಯೇ ತಾನು ವಿದೇಶಿ ಎಂದು ಹೇಳಿಕೊಂಡ ಪ್ರಕರಣಗಳು) ಅಥವಾ ನೇಪಾಳಿಯರು (ಇವುಗಳಲ್ಲಿ 226 ಹೆಸರುಗಳು ಮಾತ್ರ ಮುಸ್ಲಿಮರದ್ದಾಗಿವೆ). ಅದೇನೇ ಇದ್ದರೂ ಆಯೋಗವು 390 ಆಕ್ಷೇಪಗಳಿಗೆ ಮಾತ್ರ ಮನ್ನಣೆ ನೀಡಿದ್ದು (ಅವುಗಳಲ್ಲಿ 87 ಮಂದಿ ಮುಸ್ಲಿಮರು) ಅವರ ಹೆಸರನ್ನು ತೆಗೆದುಹಾಕಲಾಗಿದೆ. ತೆಗೆದುಹಾಕಲಾದ ವಿದೇಶಿಯರ ಹೆಸರುಗಳ ಕುರಿತು ಮಾಹಿತಿ ಬಹಿರಂಗಪಡಿಸಲು ಆಯೋಗವು ಉತ್ಸುಕವಾಗಿಲ್ಲ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. 

ಮತದಾರರ ನೋಂದಣಿಯ ಗುಣಮಟ್ಟದ ಮಾನದಂಡಗಳಿಗೆ ಇನ್ನೂ ಎರಡು ಪ್ರಕ್ರಿಯೆ ಆಧಾರಿತ ಮಾನದಂಡಗಳನ್ನು ನಾವು ಸೇರಿಸಬಹುದು. ಅವುಗಳೆಂದರೆ, ಪಾರದರ್ಶಕತೆ ಮತ್ತು ನ್ಯಾಯಸಮ್ಮತಿ. ಈ ಎರಡು ಮಾನದಂಡಗಳ ವಿಚಾರದಲ್ಲಿ ಎಸ್‌ಐಆರ್‌ನ ಪೂರ್ಣ ಪರಿಶೀಲನೆಯವರೆಗೆ ಕಾಯಬೇಕಾದ ಅಗತ್ಯ ಇಲ್ಲ. ಬೇಸರದ ಸಂಗತಿ ಎಂದರೆ, ಇಡೀ ಪ್ರಕ್ರಿಯೆಯು ಎಲ್ಲಿಯೂ ಪಾರದರ್ಶಕವಾಗಿಯಾಗಲಿ ನ್ಯಾಯಯುತವಾಗಿಯಾಗಲಿ ಇರಲಿಲ್ಲ. ಸಮಗ್ರ ಪರಿಷ್ಕರಣೆಗಾಗಿ 2003ರಲ್ಲಿ ಹೊರಡಿಸಲಾದ ಆದೇಶವನ್ನು ಆಯೋಗವು ಬಹಿರಂಗಪಡಿಸಲಿಲ್ಲ ಅಥವಾ ಅದರ ಪ್ರತಿಗಾಗಿ ಆರ್‌ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಸ್ಪಂದಿಸಲೂ ಇಲ್ಲ; ಪ್ರಮಾಣೀಕೃತ ಮಾದರಿಯಲ್ಲಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿಲ್ಲ. ಮಾಹಿತಿ ಬಹಿರಂಗಪಡಿಸುವಿಕೆ ಕಡ್ಡಾಯವೇ ಆಗಿದ್ದರೂ ಆಯೋಗವು ತನ್ನದೇ ನಿಯಮಗಳು, ಪೂರ್ವನಿದರ್ಶನಗಳು ಮತ್ತು ಸ್ವತಃ ತಯಾರಿಸಿದ ಕೈಪಿಡಿಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘಿಸುತ್ತಲೇ ಹೋಗಿದೆ. ಆಯೋಗವು ಮಾಡಬೇಕಾದ್ದು ಅಥವಾ ಮಾಡುತ್ತಿದ್ದುದರ ತದ್ವಿರುದ್ಧವಾದುದನ್ನೇ ಮಾಡಲಾಗಿದೆ– ಕಡ್ಡಾಯವಾಗಿ ಬಹಿರಂಗಪಡಿಸಬೇಕಾದುದು ಅಥವಾ ಬಹಿರಂಗಪಡಿಸುವಂತೆ ಆದೇಶ ಆಗಿರುವುದನ್ನು ಸೇರಿಸಿ ಪ್ರತಿಯೊಂದು ಮಾಹಿತಿಯನ್ನೂ ಆಯೋಗವು ತಡೆಹಿಡಿದಿದೆ. ಪೂರ್ವ ಸಮಾಲೋಚನೆಯ ಕೊರತೆ, ಅನುಷ್ಠಾನದ ತರಾತುರಿ, ಎಲ್ಲ ನಿರ್ಧಾರಗಳ ಸುತ್ತ ಇದ್ದ ಗೌಪ್ಯತೆ, ವಿರೋಧ ಪಕ್ಷಗಳ ನಾಯಕರಿಗೆ ಸಂಬಂಧಿಸಿ ಆಯೋಗ ತೋರಿದ ಸಂಘರ್ಷಾತ್ಮಕ ನಿಲುವು ಎಲ್ಲವೂ ಆಯೋಗವು ತಟಸ್ಥ ಅಂಪೈರ್‌ ಅಲ್ಲ ಎಂಬ ಭಾವನೆ ಮೂಡುವುದಕ್ಕೆ ಕೊಡುಗೆ ನೀಡಿವೆ.  

ಜಗತ್ತಿನ ದಕ್ಷಿಣ ಭಾಗದಾದ್ಯಂತ ಚುನಾವಣಾ ಆಯೋಗಗಳಿಗೆ ಮಾದರಿಯಾಗಿದ್ದ, ದೇಶದೊಳಗೆ ಭಾರಿ ವಿಶ್ವಾಸಕ್ಕೆ ಪಾತ್ರವಾಗಿದ್ದ ಆಯೋಗವನ್ನು ಗಣನೆಗೆ ತೆಗೆದುಕೊಂಡರೆರ ಈಗಿನ ಈ ಮಧ್ಯಂತರ ಪರಿಶೋಧನೆಯು ಬೇಸರ ಉಂಟು ಮಾಡುವಂತಿದೆ; ಈಗಿನ ಪ್ರಯೋಗದಿಂದ ಪಾಠಗಳನ್ನು ಕಲಿಯದೆ ಈ ಪ್ರಯೋಗವನ್ನು ಬಿಹಾರದ ಹೊರಗೆ ವಿಸ್ತರಿಸುವ ಪ್ರಯತ್ನವು ಸಾಮೂಹಿಕವಾಗಿ ಮತದಾರರ ಹಕ್ಕು ಕಸಿಯುವ ಪ್ರಕ್ರಿಯೆಯಾಗಬಹುದು. ಏನಿಲ್ಲವೆಂದರೂ ಚುನಾವಣೆಯಲ್ಲಿ ಜನರಿಗೆ ಇರುವ ವಿಶ್ವಾಸವು ನಷ್ಟವಾಗಬಹುದು ಮತ್ತು ಭಾರತದ ಚುನಾವಣಾ ಪ್ರಜಾಪ್ರಭುತ್ವದ ಕುಸಿತವು ತ್ವರಿತಗೊಳ್ಳಬಹುದು. 

ರಾಹುಲ್‌ ಶಾಸ್ತ್ರಿ ಮತ್ತು ಯೋಗೇಂದ್ರ ಯಾದವ್‌ ಅವರು ಭಾರತ್‌ ಜೋಡೊ ಅಭಿಯಾನದ ರಾಷ್ಟ್ರೀಯ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಯೋಗೇಂದ್ರ ಅವರು ಎಸ್‌ಐಆರ್‌ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭಾರತ್‌ ಜೋಡೊ ಅಭಿಯಾನದ ದತ್ತಾಂಶ ವಿಭಾಗವು ಸಾಂಖ್ಯಿಕ ವಿಶ್ಲೇಷಣೆ ನಡೆಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.