ADVERTISEMENT

ವಿಶ್ಲೇಷಣೆ: ಬ್ರೇಕ್‌ ಡಾನ್ಸ್‌ಗೆ ಭುವನದ ಬೆಡಗು

ಭಾರತವೂ ಸೇರಿದಂತೆ ಕೆಲವು ದೇಶಗಳ ಅಚ್ಚುಮೆಚ್ಚಿನ ಆಟ ಕ್ರಿಕೆಟ್‌ ಯಾಕೆ ಒಲಿಂಪಿಕ್ಸ್‌ನಲ್ಲಿ ಸೇರಿಲ್ಲ?

ಗಿರೀಶದೊಡ್ಡಮನಿ
Published 11 ಡಿಸೆಂಬರ್ 2020, 19:30 IST
Last Updated 11 ಡಿಸೆಂಬರ್ 2020, 19:30 IST
ಬ್ರೇಕ್ ಡಾನ್ಸ್
ಬ್ರೇಕ್ ಡಾನ್ಸ್   
""

ಆಫ್ರಿಕನ್ನರ ಕಾಲೊನಿಗಳಲ್ಲಿ ಹುಟ್ಟಿ, ಅಮೆರಿಕದ ಬೀದಿಗಳಲ್ಲಿ ಬೆಳೆದ ಬ್ರೇಕ್‌ ಡಾನ್ಸ್‌ಗೆ ಈಗ ಒಲಿಂಪಿಕ್ಸ್‌ ಎಂಬ ‘ಬೆಡಗಿನ ಭುವನ’ದಲ್ಲಿ ಬೆಳಗುವ ಅದೃಷ್ಟ ಒಲಿದುಬಂದಿದೆ.

2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ ಡಾನ್ಸ್ ಕ್ರೀಡೆಯಾಗಿ ಸೇರ್ಪಡೆಗೊಂಡಿದೆ. ರಬ್ಬರ್‌ ಪೈಪ್‌ನಂತೆ ಬಳುಕುವ ಶರೀರದ ಹುಡುಗ–ಹುಡುಗಿಯರಿಗೆ ಈ ನೃತ್ಯ ಸಲೀಸು. ಜಿಮ್ನಾಸ್ಟಿಕ್ಸ್‌ನ ಕೆಲವು ಅಂಶಗಳೂ ಇದರಲ್ಲಿ ಅಡಕವಾಗಿವೆ. ಆದ್ದರಿಂದಲೇ ಈಗ ಕ್ರೀಡೆಯ ಗೌರವ ಸಿಕ್ಕಿದೆ. ಆದರೆ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಯ (ಐಒಸಿ) ಈ ನಿರ್ಧಾರವು ಬಹಳಷ್ಟು ಅಚ್ಚರಿ ಮತ್ತು ಟೀಕೆಗೂ ಕಾರಣವಾಗಿದೆ. ‘ಒಲಿಂಪಿಕ್ ಕೂಟಕ್ಕೆ ಬ್ರೇಕ್ ಡಾನ್ಸ್ ಸೇರ್ಪಡೆ ಹಾಸ್ಯಾಸ್ಪದ’ ಎಂದು ಸ್ಕ್ವಾಷ್ ಕ್ರೀಡೆಯ ದಂತಕಥೆ ಮಿಚೆಲ್ ಮಾರ್ಟಿನ್ ಕಿಡಿ ಕಾರಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗಲು ಹಲವು ವರ್ಷಗಳಿಂದ ಸ್ಕ್ವಾಷ್‌ ಫೆಡರೇಷನ್ ಪ್ರಯತ್ನಿಸುತ್ತಿದೆ. ಆದರೆ ಅವಕಾಶ ಒಲಿದುಬಂದಿಲ್ಲ.

ಅಷ್ಟಕ್ಕೂ ಬ್ರೇಕ್‌ ಡಾನ್ಸ್ ಅನ್ನು ಕೂಟಕ್ಕೆ ಸೇರಿಸಬೇಕೆಂಬ ಆಗ್ರಹ ವ್ಯಾಪಕವಾಗೇನೂ ಇರಲಿಲ್ಲ. 2018ರಲ್ಲಿ ಯೂತ್ ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆದಿದ್ದರೂ ಹೆಚ್ಚಿನ ಪ್ರಚಾರ ಸಿಕ್ಕಿರಲಿಲ್ಲ. ಆದರೀಗ ನಗರಕೇಂದ್ರಿತ ಕ್ರೀಡೆಗಳನ್ನು ಉತ್ತೇಜಿಸಲು ಮತ್ತು ಯುವಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಬ್ರೇಕ್‌ ಡಾನ್ಸ್‌ ಸೇರ್ಪಡೆ ಮಾಡಲಾಗಿದೆ ಎಂದು ಐಒಸಿ ಹೇಳಿದೆ. ಈಗಾಗಲೇ ಡಾನ್ಸ್‌ ಮಾದರಿಯ ರಿದಮಿಕ್ ಜಿಮ್ನಾಸ್ಟಿಕ್ಸ್‌, ಆರ್ಟಿಸ್ಟಿಕ್ ಈಜು ಒಲಿಂಪಿಕ್ಸ್‌ನಲ್ಲಿವೆ.

ADVERTISEMENT

ಇದೆಲ್ಲದರ ನಡುವೆ, ಏಷ್ಯಾ ಖಂಡದಲ್ಲಿ ಭಾರತವೂ ಸೇರಿದಂತೆ ಕೆಲವು ದೇಶಗಳ ಅಚ್ಚುಮೆಚ್ಚಿನ ಆಟ ಕ್ರಿಕೆಟ್‌ಗೆ ಯಾಕೆ ಒಲಿಂಪಿಕ್ಸ್‌ನಲ್ಲಿ ಸೇರುವ ಅವಕಾಶ ಸಿಕ್ಕಿಲ್ಲವೆಂದು ಯಾವುದೇ ಕ್ರಿಕೆಟ್ ಸಂಸ್ಥೆ ಅಥವಾ ಕ್ರಿಕೆಟಿಗರು ಕೇಳಿದ್ದು ವರದಿಯಾಗಿಲ್ಲ!

2020ರಲ್ಲಿ ಜಗವನ್ನೇ ಪೀಡಿಸಿರುವ ಕೊರೊನಾ ವೈರಸ್‌ ಉಪಟಳದ ಕುರಿತು ಗೂಗಲ್‌ನಲ್ಲಿ ಶೋಧ ಮಾಡಿದವರ ಸಂಖ್ಯೆಗಿಂತ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಬಗ್ಗೆ ಹುಡುಕಾಡಿದವರು ಹೆಚ್ಚಿದ್ದಾರಂತೆ. ಕೊರೊನಾ ಕಾರಣಕ್ಕಾಗಿ ಈ ಬಾರಿಯ ಐಪಿಎಲ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆದಿತ್ತು. ಟೂರ್ನಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಜನ ಮುಗಿಬಿದ್ದಿದ್ದನ್ನು ಸ್ವತಃ ಗೂಗಲ್‌ ಬಹಿರಂಗಗೊಳಿಸಿದೆ. ಐಪಿಎಲ್ ಯಶಸ್ಸಿನ ಬೆನ್ನಲ್ಲೇ ಬೇರೆ ಬೇರೆ ದೇಶಗಳಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಮರುಜೀವ ಪಡೆದಿವೆ. ಇಷ್ಟೆಲ್ಲ ಜನಪ್ರಿಯತೆ ಇರುವ ಆಟವು ಇದುವರೆಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯದಿರಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಗ್ಲೆಂಡ್– ವೇಲ್ಸ್‌ ಕ್ರಿಕೆಟ್ ಸಂಸ್ಥೆಯ (ಇಸಿಬಿ) ಪಾತ್ರ ದೊಡ್ಡದು. ಅವುಗಳಿಗೆ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗಲು ಆಸಕ್ತಿಯಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ‌ (ಐಸಿಸಿ) ಮನಸ್ಸಿದ್ದರೂ ಬಿಸಿಸಿಐ ಬೆಂಬಲವಿಲ್ಲದೇ ಮುಂದುವರಿಯಲು ಸಾಧ್ಯವಿಲ್ಲವಲ್ಲ!

ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿಯಲು ಭಾರತ ಸರ್ಕಾರದಿಂದ ಅನುದಾನವನ್ನು ನಿರಾಕರಿಸುವ ಬಿಸಿಸಿಐ, ಐಒಸಿಯಲ್ಲಿರಲು ಒಪ್ಪುವುದಿಲ್ಲ. ಸ್ವಾಯತ್ತ ಮಂಡಳಿಯಾಗಿಯೇ ಮುಂದುವರಿಯುವುದು ಅದರ ಉದ್ದೇಶ. ಇದೇ ಕಾರಣಕ್ಕೆ ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯ ವಿಷಯ ಬಂದಾಗ ‘ಜಾಣ ನಿರ್ಲಕ್ಷ್ಯ’ ತೋರಿಸುತ್ತಿದೆ. ಮಂಡಳಿಯು ದೊಡ್ಡ ಮೊತ್ತದ ತೆರಿಗೆಯನ್ನು ಸರ್ಕಾರಕ್ಕೆ ತುಂಬುತ್ತಿರುವುದರಿಂದ ಕ್ರೀಡಾಂಗಣ, ಜಮೀನು, ಮೂಲಸೌಕರ್ಯ ಮತ್ತು ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆಯುವುದು ತನ್ನ ಹಕ್ಕು ಎಂದು ಪ್ರತಿಪಾದಿಸುತ್ತದೆ. ಒಟ್ಟಿನಲ್ಲಿ ಮಂಡಳಿಯು ಚಿನ್ನದ ಮೊಟ್ಟೆಯಿಡುವ ಕೋಳಿಯಂತಿರುವ ಕ್ರಿಕೆಟ್ ಮೇಲಿನ ‘ನಿಯಂತ್ರಣ’ ಬಿಟ್ಟುಕೊಟ್ಟು ‘ಕ್ರಿಕೆಟ್ ಇಂಡಿಯಾ’ ಆಗಲು ಸಿದ್ಧವಿಲ್ಲ.

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿತ್ತು. ಗ್ರೇಟ್ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್‌ ತಂಡಗಳಷ್ಟೇ ಆಡಿದ್ದವು. ಬ್ರಿಟನ್ ಚಿನ್ನದ ಪದಕ ಜಯಿಸಿತ್ತು. ಆನಂತರದ ಕೂಟಗಳಲ್ಲಿ ಕ್ರಿಕೆಟ್‌ ಸೇರ್ಪಡೆಯಾಗಿಲ್ಲ. ಟೆಸ್ಟ್ ಪಂದ್ಯಗಳು ಐದು ದಿನಗಳ ಆಟವಾಗಿದ್ದು ಕೂಡ ಒಂದು ಕಾರಣವಾಗಿತ್ತು. ಇಷ್ಟು ದೀರ್ಘ ಅವಧಿಯನ್ನು ಮೀಸಲಿಡುವುದು ಅಸಾಧ್ಯವಾದ ಮಾತಾಗಿತ್ತು. ಒಲಿಂಪಿಕ್ಸ್ ಅರ್ಹತೆಗೆ ಬೇಕಾದಷ್ಟು ಸಂಖ್ಯೆಯಲ್ಲಿ ಐಸಿಸಿಯ ನೋಂದಣಿ ಪಡೆದ ತಂಡಗಳು ಇರಲಿಲ್ಲ ಎನ್ನುವುದು ಇನ್ನೊಂದು ಕಾರಣ. ಆದರೆ ಈಗ ಟ್ವೆಂಟಿ–20 ಮಾದರಿಯೂ ಇದೆ, ತಂಡಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಕಾರಣಗಳಿಂದಾಗಿಯೇ 2017ರಲ್ಲಿ ಐಸಿಸಿ ಮುಖ್ಯಸ್ಥ ಡೇವ್ ರಿಚರ್ಡ್ಸ್‌ಸನ್, ‘ಒಲಿಂಪಿಕ್ ಪ್ರವೇಶಕ್ಕೆ ಕ್ರಿಕೆಟ್‌ಗೆ ಇದು ಸೂಕ್ತ ಸಮಯ’ ಎಂದಿದ್ದರು. ಅದೇ ಹೊತ್ತಿಗೆ ಬಿಸಿಸಿಐ ಕೂಡ ತನ್ನ ಧೋರಣೆಯನ್ನು ಬದಲಿಸಿಕೊಂಡಿದೆ ಎಂಬ ಸುದ್ದಿಯೂ ಇತ್ತು. ಇದೀಗ ಅಮೆರಿಕದಲ್ಲಿ ಕ್ರಿಕೆಟ್ ಚಟುವಟಿಕೆಗಳಿಗೆ ಐಸಿಸಿಯು ಉತ್ತೇಜನ ನೀಡುತ್ತಿರುವುದರ ಹಿಂದಿನ ಕಾರಣವೂ ಇದೇ ಆಗಿದೆ. 2028ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸಲು ಇದು ರಹದಾರಿಯಾಗುವ ನಿರೀಕ್ಷೆ ಇದೆ. ಆದರೆ ಅದಕ್ಕೆ ಇನ್ನೂ ಎಂಟು ವರ್ಷ ಕಾಯಬೇಕು.

ಯಾವುದೇ ಕ್ರೀಡಾಪಟುವಿನ ಅತ್ಯುನ್ನತ ಗುರಿ ಒಲಿಂಪಿಕ್ಸ್‌ನಲ್ಲಿ ಆಡುವುದಾಗಿರಬೇಕು. ಪದಕ ಜಯಿಸದಿದ್ದರೂ ಒಲಿಂಪಿಯನ್ ಎನಿಸಿಕೊಳ್ಳುವುದೇ ದೊಡ್ಡ ಗೌರವ ಎಂಬ ಭಾವನೆ ಇದೆ. ಆದರೆ ಭಾರತದ ಕ್ರಿಕೆಟಿಗರಲ್ಲಿ ಹೆಚ್ಚೆಂದರೆ ವಿಶ್ವಕಪ್ ಜಯಿಸುವ ಗುರಿ ಕೆಲವರಿಗೆ ಇರುತ್ತದೆ. ಆದರೆ ಇತ್ತೀಚಿನ ಪೀಳಿಗೆಯಲ್ಲಿ ಭಾರತ ತಂಡದಲ್ಲಿ ಆಡುವ ಮತ್ತು ಐಪಿಎಲ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಮನೋಭಾವ ಢಾಳಾಗಿ ಕಾಣುತ್ತಿದೆ. ಕ್ರಿಕೆಟ್‌ನಲ್ಲಿ ಉತ್ತಮವಾಗಿರುವ ಏಷ್ಯಾ ಖಂಡದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನಗಳಿಗೂ ಜಾಗತಿಕವಾಗಿ ಗುರುತಿಸಿಕೊಳ್ಳಲು ಒಲಿಂಪಿಕ್ಸ್‌ ಅರ್ಹತೆ ಪಡೆಯುವುದು ಅಗತ್ಯವಾಗಿದೆ.

ಕ್ರಿಕೆಟ್‌ನಿಂದ ದುಡ್ಡು ಗಳಿಸಬಹುದು. ಆದರೆ ವಿಶ್ವವೇದಿಕೆಯಲ್ಲಿ ನಿಂತು ಚಿನ್ನದ ಪದಕವನ್ನು ಕೊರಳಿಗೆ ಅಲಂಕರಿಸಿಕೊಂಡು ರಾಷ್ಟ್ರಗೀತೆಗೆ ಕಿವಿಯಾಗಿ, ತ್ರಿವರ್ಣಧ್ವಜಕ್ಕೆ ಸಲ್ಯೂಟ್ ಮಾಡುವ ಆತ್ಮತೃಪ್ತಿಯು ಅನುಭವಿಸಿದವರಿಗೆ ಮಾತ್ರ ಗೊತ್ತು. ಅಂತಹದ್ದೊಂದು ಕಿಡಿ ಕ್ರಿಕೆಟಿಗರ ಎದೆಯಲ್ಲಿ ಹೊತ್ತಿದರೆ ಕ್ರೀಡೆಯ ಉದ್ದೇಶ ಸಾರ್ಥಕವಾಗುತ್ತದೆ.

ಅದಿರಲಿ, ನಾಲ್ಕು ವರ್ಷಗಳ ನಂತರ ನಡೆಯುವ ಒಲಿಂಪಿಕ್ಸ್‌ನ ಬ್ರೇಕ್‌ ಡಾನ್ಸ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ ಗಳಿಸುವ ಸಾಮರ್ಥ್ಯ ಇದೆಯೇ ಎಂಬ ಚಿಂತನೆಯ ಅಗತ್ಯವೂ ಈಗ ಇದೆ. ಬ್ರೇಕ್ ಡಾನ್ಸ್ 1970ರಿಂದ ಈಚೆಗೆ ಅಮೆರಿಕ, ಯುರೋಪ್‌ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಯಿತು. ಅದರಲ್ಲೂ ಪಾಪ್ ಗಾಯಕ ಮೈಕಲ್ ಜಾಕ್ಸನ್‌ ಅವರಿಂದಾಗಿ ವಿಶ್ವದಾದ್ಯಂತ ಪಸರಿಸಿತು. ಭಾರತದ ಸಿನಿಮಾಗಳಲ್ಲಿ ಮಿಥುನ್ ಚಕ್ರವರ್ತಿ, ಗೋವಿಂದ ಅವರಿಂದ ಜನಪ್ರಿಯವಾಗಿದ್ದ ಡಿಸ್ಕೊ ಡಾನ್ಸ್‌ಗೆ ಸಡ್ಡು ಹೊಡೆದ ಬ್ರೇಕ್‌ ಡಾನ್ಸ್‌, ಶಾಲೆ–ಕಾಲೇಜುಗಳ ವೇದಿಕೆಗಳಲ್ಲಿಯೂ ಛಾಪು ಮೂಡಿಸಿತು. 90ರ ದಶಕದಲ್ಲಿ ತೆರೆಕಂಡ ‘ಕಾದಲನ್’ ತಮಿಳು ಚಿತ್ರದಲ್ಲಿ ಪ್ರಭುದೇವ ಡಾನ್ಸ್‌ನಿಂದಾಗಿ ಕಳೆದ 25 ವರ್ಷಗಳಲ್ಲಿ ಭಾರತದಲ್ಲಿಯೂ ನೆಲೆಯೂರಿದೆ. ಈಗಂತೂ ಟಿ.ವಿ. ವಾಹಿನಿಗಳ ರಿಯಾಲಿಟಿ ಷೋಗಳಲ್ಲಿ ತರಹೇವಾರಿ ಪಟ್ಟುಗಳನ್ನು ಪ್ರದರ್ಶಿಸುವ ಬ್ರೇಕ್‌ ಡಾನ್ಸ್‌ಗಳಿವೆ. ಈ ಪ್ರತಿಭೆಗಳನ್ನು ಬ್ರೇಕಿಂಗ್ ಕ್ರೀಡಾಪಟುಗಳನ್ನಾಗಿ ಪರಿವರ್ತಿಸಿ ಪದಕ ವಿಜೇತರನ್ನಾಗಿಸುವ ಯಾವುದೇ ಯೋಚನೆಯೂ ಇದುವರೆಗೆ ಯಾರಿಗೂ ಮೂಡಿರಲಿಕ್ಕಿಲ್ಲ. ಈಗ ಆ ಸಮಯ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.