ADVERTISEMENT

ಯೋಗೇಂದ್ರ ಯಾದವ್ ವಿಶ್ಲೇಷಣೆ | ಗಣರಾಜ್ಯ ದಿನ ವಿಧಿ–ವಿಧಾನ ಮೀರಲಿ

ಯೋಗೇಂದ್ರ ಯಾದವ್
Published 30 ಜನವರಿ 2025, 13:29 IST
Last Updated 30 ಜನವರಿ 2025, 13:29 IST
<div class="paragraphs"><p>ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌</p></div>

ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌

   

ಪಿಐಬಿ ಚಿತ್ರ

ಗಣರಾಜ್ಯ ದಿನ ನಾವು ಏನನ್ನು ಸಂಭ್ರಮಿಸುತ್ತಿದ್ದೇವೆ? ಇದು, ನನಗೆ ಅರ್ಥವಾಗಲು ಸುಮಾರು 50 ವರ್ಷಗಳು ಬೇಕಾದವು. ನಮ್ಮ ಪ್ರಧಾನಿಯವರಿಗೆ ಅದಕ್ಕಾಗಿ ನಾನು ಕೃತಜ್ಞತೆ ಅರ್ಪಿಸಲೇಬೇಕು. ಖಂಡಿತ, ‘ಮೋದಿ ಹೆ ತು ಮುಮ್ಕನ್‌ ಹೆ‘ (ಮೋದಿ ಇದ್ದರೆ ಎಲ್ಲವೂ ಆಗುತ್ತದೆ). 

ADVERTISEMENT

ಆಗಸ್ಟ್‌ 15ರಂದು ಏನನ್ನು ಸಂಭ್ರಮಿಸುತ್ತಿದ್ದೇವೆ ಎಂಬುದು ಬಾಲಕನಾಗಿದ್ದ ನನಗೆ ತಿಳಿದಿತ್ತು. ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ ದಿನ ಎಂಬುದನ್ನು ಗ್ರಹಿಸಿಕೊಳ್ಳುವುದು ಕಷ್ಟವಾಗಿರಲಿಲ್ಲ. ಜನವರಿ 26, ನಮ್ಮ ಮಟ್ಟಿಗೆ ಅದ್ದೂರಿ ಸಮಾರಂಭ. ಗಣರಾಜ್ಯ ದಿನ ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕ ವಿವರಣೆ ಕೇಳಿಕೊಂಡು  ಟ್ಯಾಬ್ಲೊ ಮೆರವಣಿಗೆಗೆ ನಮ್ಮ ಕಲ್ಪನೆಯ ಬಣ್ಣಗಳನ್ನು ತುಂಬುತ್ತಿದ್ದೆವು. ನಮ್ಮ ಪಟ್ಟಣದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಪೈಲ್ವಾನನೊಬ್ಬ ಲಾರಿಯೊಂದನ್ನು ಹಲ್ಲಿನಲ್ಲಿ ಕಚ್ಚಿ ಎಳೆಯುತ್ತಿದ್ದ. ಆದರೆ, ಆಗ ನಾವು ಆಚರಿಸುತ್ತಿದ್ದ ಗಣತಂತ್ರ ಎಂದರೆ ಏನೆಂಬುದು ಮಾತ್ರ ನಮಗೆ ಅರ್ಥ ಆಗಿರಲಿಲ್ಲ. ಸಂವಿಧಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಎಂದು ನಮಗೆ ಆಗ ಹೇಳಲಾಗಿತ್ತು. 

9ನೇ ತರಗತಿಯಲ್ಲಿ ನನಗೆ ಪೌರನೀತಿ ಕಲಿಸುತ್ತಿದ್ದ ಫತೇಹ್‌ ಚಂದ್‌ ಗೋಯಲ್‌, ಭಾರತದ ಸಂವಿಧಾನಕ್ಕೆ ಸಂಬಂಧಿಸಿ ವಿಕಿಪೀಡಿಯದಂತೆ. ರಾಜಕೀಯಶಾಸ್ತ್ರದಲ್ಲಿ ನನ್ನ ಕುಂದದ ಆಸಕ್ತಿಯ ಹಿಂದಿನ ಒಂದು ಕಾರಣ ಅವರೂ ಹೌದು. ನವೆಂಬರ್‌ 26 (ಆಗಿನ್ನೂ ಸಂವಿಧಾನ ದಿನ ಆಗಿರಲಿಲ್ಲ) ಮತ್ತು ನಾವು ಗಣರಾಜ್ಯವಾಗಿ ಬದಲಾದ ಜನವರಿ 26ರ ನಡುವಣ ವ್ಯತ್ಯಾಸವನ್ನು ಅವರು ವಿವರಿಸಿ ತಿಳಿಸಿದ್ದರು. ವಂಶಪರಂಪರೆಯ ಆಡಳಿತಗಾರನ ಆಳ್ವಿಕೆ ಇಲ್ಲದ ಯಾವುದೇ ದೇಶವು ಗಣರಾಜ್ಯವಾಗಿರುತ್ತದೆ ಎಂದು ಅವರು ನಮಗೆ ಹೇಳಿದ್ದರು. ಪ್ರಾಚೀನ ರಾಜಪ್ರಭುತ್ವವನ್ನೇ ಉಳಿಸಿಕೊಂಡಿರುವ ಬ್ರಿಟನ್‌ನಂತೆ ಅಲ್ಲದೆ ನಾವು ಗಣರಾಜ್ಯ ಮಾದರಿಯ ಸರ್ಕಾರವನ್ನು ಆಯ್ದುಕೊಂಡಿದ್ದೇವೆ. ಬ್ರಿಟನ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾವು ಸೋತಾಗಲೆಲ್ಲ, ನಾವು ಈ ವಿಚಾರದಲ್ಲಿ ಅವರಿಗಿಂತ ಮೇಲೆ ಇದ್ದೇವೆ ಎಂಬ ಭಾವನೆ ನನಗೆ ಬರುತ್ತಿತ್ತು. ಆದರೆ, ಆಗ ಹೆಚ್ಚಿನ ದೇಶಗಳು ಗಣರಾಜ್ಯವೇ ಆಗಿದ್ದವು. ಈಗಿನ ಕಾಲಘಟ್ಟದಲ್ಲಿ ದೇಶವೊಂದು ಗಣರಾಜ್ಯವಾಗಿ ಇರುವುದರಲ್ಲಿ ವಿಶೇಷವೇನು ಎಂದು ನಾನು ಗೋಯಲ್‌ ಅವರನ್ನು ಕೇಳಿದ್ದೆ. ದೊಡ್ಡವನಾದ ಮೇಲೆ ಅರ್ಥವಾಗುತ್ತದೆ ಎಂದು ಅವರು ಉತ್ತರಿಸಿದ್ದರು. 

ದೊಡ್ಡವನಾದ ಮೇಲೆಯೂ ನನಗೆ ಅದು ಅರ್ಥವಾಗಲಿಲ್ಲ. ಹರಿಶಂಕರ್‌ ಪಾರ್ಸಾಯಿ ಅವರ ‘ಥಿಥುರತ ಹುವ ಗಣತಂತ್ರ’ (ನಡುಗುತ್ತಿರುವ ಗಣತಂತ್ರ) ಎಂಬ ವಿಡಂಬನಾತ್ಮಕ ಕೃತಿಯನ್ನು ಒಮ್ಮೆ ನೀವು ಓದಿದರೆ ಜನವರಿ 26ರಂದು ಅದನ್ನು ನಿಮ್ಮ ತಲೆಯಿಂದ ತೆಗೆದುಹಾಕಲು ಸಾಧ್ಯವೇ ಇಲ್ಲ. ದೆಹಲಿಯಲ್ಲಿ ನಡೆಯುವ ಗಣರಾಜ್ಯ ದಿನ ಪಥಸಂಚಲನಕ್ಕೆ ಹೋಗಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಪಥಸಂಚಲನದ ಕುರಿತು ಆಕಾಶವಾಣಿಯಲ್ಲಿ ಪ್ರಸಾರವಾಗುವ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಮೊಳಗುವ ‘ಚಪ್ಪಾಳೆ ಸದ್ದು’ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ತಮ್ಮನ್ನು ಕಾಡಿತು ಎಂದು ಅವರು ಬರೆದಿದ್ದಾರೆ. ಏಕೆಂದರೆ, ದೆಹಲಿಯ ನಡುಗುವ ಚಳಿಯಲ್ಲಿ ಅಲ್ಲಿ ಸೇರಿದ್ದ ಅಷ್ಟೊಂದು ಜನರಲ್ಲಿ ಯಾರೊಬ್ಬರೂ ಚಪ್ಪಾಳೆ ತಟ್ಟುವುದಕ್ಕಾಗಿ ತಮ್ಮ ಕೈಯನ್ನು ಕೋಟು ಜೇಬಿನಿಂದ ಹೊರತೆಗೆಯಲೇ ಇಲ್ಲ. ತಮ್ಮನ್ನು ಬೆಚ್ಚಗಿಡಲು ಬೆಚ್ಚಗಿನ ಬಟ್ಟೆ ಇಲ್ಲದವರ ಕೈಗಳಿಂದಲೇ ಈ ಚಪ್ಪಾಳೆ ಬಂದಿರಬೇಕು ಎಂದು ಅವರು ಭಾವಿಸುತ್ತಾರೆ. ಅವರು ಬರೆದ ಅದ್ಭುತವಾದ ಸಾಲು ಹೀಗಿದೆ– ಅತ್ಯಂತ ಸ್ಪಷ್ಟವಾಗಿ, ನಡುಗುವ ಕೈಗಳ ಚಪ್ಪಾಳೆಯಲ್ಲಿಯೇ ಗಣರಾಜ್ಯವು ನಿಂತಿದೆ– ಈ ಸಾಲು ನನ್ನನ್ನು ಭಯಗ್ರಸ್ತನನ್ನಾಗಿ  ಮಾಡಿತ್ತು. ಇದು ಈಗಲೂ ನನ್ನನ್ನು ಬೆಚ್ಚಿ ಬೀಳಿಸುತ್ತದೆ.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಏರಿದ್ದು ಮತ್ತು ನಂತರದ ಒಂದು ದಶಕದಲ್ಲಿ ಅವರ ಪಯಣವು ಗಣರಾಜ್ಯದ ಪರಿಕಲ್ಪನೆಯನ್ನು ಮರುಶೋಧಿಸುವಂತೆ ನನ್ನನ್ನು ಮಾಡಿತು. ನಮ್ಮ ಸಂಸ್ಥೆಗಳು, ನಮ್ಮ ಸ್ವಾತಂತ್ರ್ಯ, ನಮ್ಮ ಧ್ವನಿ, ನಮ್ಮ ಸಮಚಿತ್ತ ಎಲ್ಲವನ್ನೂ ಕಳೆದುಕೊಳ್ಳಲು ಆರಂಭಿಸಿದ ಬಳಿಕ, ಈ ಎಲ್ಲ ನಷ್ಟಗಳನ್ನು ವಿವರಿಸುವ ಒಂದು ಪದವನ್ನು ಹುಡುಕಲು ಆರಂಭಿಸಿದೆ. ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನವನ್ನೂ ಕಳೆದುಕೊಂಡಿದ್ದೇವೆ ಎಂದು ನನಗೆ ಹೇಳಲಾಯಿತು. ಅದು ನಿಜ. ಆದರೆ, ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಾಂವಿಧಾನಿಕ ಪ್ರಜಾಸತ್ತೆಗೆ ಆಗಿರುವುದಕ್ಕಿಂತ ಈಗ ಆಗಿರುವ ಹಾನಿಯು ಹೆಚ್ಚು ಗಂಭೀರವಾದುದು. ಲಕ್ಷ್ಯ, ಸಾಮೂಹಿಕತೆ ಮತ್ತು ಭಾರತೀಯತೆಯಂತಹ ಭಾವಗಳು ಕೂಡ ಮರೆಯಾಗಿವೆ. ಈ ಗಹನವಾದ ನಷ್ಟವನ್ನು ನಾವು ಏನೆಂದು ಕರೆಯುವುದು?

ಗಣರಾಜ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಗಣರಾಜ್ಯ ಎಂದರೆ ಪ್ರಾಚೀನವಾದ ರಾಜಪ್ರಭುತ್ವದ ನಿರಾಕರಣೆ ಮಾತ್ರವಷ್ಟೇ ಅಲ್ಲ. ಇದು ಸ್ವೇಚ್ಛಾಚಾರದಿಂದ ಕೂಡಿದ ಎಲ್ಲ ರೀತಿಯ, ಅಂದರೆ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ– ಅಧಿಕಾರಗಳ ನಿರಾಕರಣೆ ಕೂಡ ಹೌದು. ಗಣರಾಜ್ಯವಾದಿಯು ಸರ್ವಾಧಿಕಾರಿಯಾಗಿ ಇರುವುದಿಲ್ಲ. ಗಣರಾಜ್ಯವಾದ ಎಂಬುದು ಯುರೋಪ್‌–ಅಟ್ಲಾಂಟಿಕ್‌ ಪ್ರದೇಶದ ಗಾಢವಾದ ರಾಜಕೀಯ ಮತ್ತು ಬೌದ್ಧಿಕ ಪರಂಪರೆ. ಇದು ಉದಾರವಾದಿ ಪ್ರಜಾಪ್ರಭುತ್ವಕ್ಕೆ ಪರ್ಯಾಯ. ಇದು ರಾಜಕೀಯ ಸ್ವಾತಂತ್ರ್ಯ, ಜನರ ಸಾರ್ವಭೌಮತ್ವ, ಸಮಾನ ಪೌರತ್ವ ಮತ್ತು ನಾಗರಿಕ ಮೌಲ್ಯಗಳೇ ಕೇಂದ್ರವಾದ ಪರಂಪರೆಯಾಗಿದೆ. ಗಣರಾಜ್ಯವಾದವು ನಮ್ಮ ಸ್ವಾತಂತ್ರ್ಯ ಚಳವಳಿಯ ಮುಖ್ಯ ಮೌಲ್ಯವನ್ನು ನೆನಪಿಸುತ್ತದೆ. ಅದೆಂದರೆ, ನಮ್ಮ ಜೀವನದ ಎಲ್ಲ ಆಯಾಮಗಳಲ್ಲಿಯೂ ಬೇಕಿರುವ ಸ್ವರಾಜ್ಯ ಮತ್ತು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ರಾಜಕೀಯ ತುಡಿತ. ಸಮಗ್ರವಾದ ಗಣರಾಜ್ಯವಾದವು ನಮ್ಮ ಸಂವಿಧಾನದ ಅಡಿಪಾಯವಾಗಿರುವ ತತ್ವವಾಗಿದೆ. ನಾವೊಂದು ಗಣರಾಜ್ಯ ಎಂಬ ವಿಚಾರದಲ್ಲಿ ನನ್ನ ಪೌರನೀತಿ ಮೇಷ್ಟರಿಗೆ ಏಕೆ ಅಷ್ಟೊಂದು ಹೆಮ್ಮೆ ಇತ್ತು ಎಂಬುದು ಈಗ ನನಗೆ ಅರ್ಥವಾಗುತ್ತದೆ. 

ಈ ಗ್ರಹಿಕೆ ಮೂಡಲು ನಾನು ಪಶ್ಚಿಮದ ರಾಜಕೀಯ ಸಿದ್ಧಾಂತಗಳನ್ನು ಅರ್ಥ ಮಾಡಿಕೊಳ್ಳಬೇಕಾಯಿತು. ಗಣರಾಜ್ಯವಾದ ಎಂಬುದು ಮರಳಿ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ಕ್ವೆಂಟಿನ್ ಸ್ಕಿನ್ನರ್‌ ಮತ್ತು ಜೆಜಿಎ ಪೊಕಾಕ್‌ ಅವರು ಈ ದಿಸೆಯಲ್ಲಿ ಗಂಭೀರವಾದ ಸಂಶೋಧನೆಗಳನ್ನು ನಡೆಸಿದ್ದಾರೆ. ಮ್ಯಾಕ್ಯವೆಲ್ಲಿಯಂತಹ ಚಿಂತಕರು ರಾಜಪ್ರಭುತ್ವವಾದಿಗಳಾಗಿ ಇರಲಿಲ್ಲ. ಬದಲಿಗೆ, ಅವರು ನಾಗರಿಕ ಗಣರಾಜ್ಯವಾದದ ಸಮೃದ್ಧ ಪರಂಪರೆಗೆ ಸೇರಿದವರು. ಅವರ ಚಿಂತನೆಗಳು ಪ್ರಭಾವಿಯಾದ ಉದಾರವಾದಿ ಪರಂಪರೆಗಿಂತ ಭಿನ್ನವಾಗಿದ್ದವು. ಇದರ ಮುಂದುವರಿದ ಭಾಗವಾಗಿ, ಫಿಲಿಪ್‌ ಪೆಟಿಟ್‌ ಅವರು ತಮ್ಮ ಕೃತಿ ‘ಎ ಥಿಯರಿ ಆಫ್‌ ಫ್ರೀಡಮ್‌ ಆ್ಯಂಡ್‌ ಗವರ್ನ್‌ಮೆಂಟ್‌’ನಲ್ಲಿ ಉದಾರವಾದ ಎಂದರೆ ಅಧಿಕಾರ ಕೇಂದ್ರೀಕರಣ ಇಲ್ಲದಿರುವುದು ಎಂದು ವ್ಯಾಖ್ಯಾನಿಸಿದ್ದಾರೆ. ಹೀಗೆ ಯೋಚನೆ ಮಾಡಿದರೆ, ನವ ಗಣರಾಜ್ಯವಾದ ಎಂಬುದು ಒಂದು ತಾತ್ವಿಕ ವಿಚಾರಧಾರೆಯಷ್ಟೇ ಅಲ್ಲ. ಜಗತ್ತಿನಾದ್ಯಂತ ಇರುವ ಸಮಾನತೆ, ಅಧಿಕಾರ ವಿರೋಧಿ ಹೋರಾಟಗಳ ಹಿಂದಿನ ಶಕ್ತಿ ಏನು ಎಂಬುದನ್ನು ಗ್ರಹಿಸುವುದಕ್ಕೆ ಆಧುನಿಕ ಪ್ರಜಾಪ್ರಭುತ್ವವಾದಿಗಳಿಗೆ ಇದು ಬಾಗಿಲು ತೆರೆಯುತ್ತದೆ. ‘ರ‍್ಯಾಡಿಕಲ್‌ ರಿಪಬ್ಲಿಕನಿಸಂ’ (ಸಂಪಾದಕರು: ಬ್ರೂನೊ ಲಿಪೋಲ್ಡ್‌,  ಕರ್ಮ ನಬುಲ್ಸಿ ಮತ್ತು ಸ್ಟುವರ್ಟ್‌ ವೈಟ್‌) ಕೃತಿಯು ನಮ್ಮ ಕಾಲದಲ್ಲಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜೀವನದ ನಡುವಣ ನಂಟನ್ನು ತೋರಿಸುತ್ತದೆ. 

ನಮ್ಮ ರಾಜಕೀಯ ಪರಂಪರೆಯು ಇದರೊಂದಿಗೆ ಯಾವ ರೀತಿಯ ನಂಟು ಹೊಂದಿದೆ? ಉತ್ತರಕ್ಕಾಗಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ಓದಬೇಕು. 20ನೇ ಶತಮಾನದ ಭಾರತದ ಏಕೈಕ ಪ್ರಜಾಪ್ರಭುತ್ವವಾದಿ ಚಿಂತಕ ಅವರು ಮಾತ್ರ ಎನ್ನಬಹುದು. ಪ್ರಜಾಪ್ರಭುತ್ವ ಕುರಿತ ಅವರ ಬರಹಗಳಲ್ಲಿ ಗಣರಾಜ್ಯವಾದದಿಂದ ಸಮಗ್ರ ಗಣರಾಜ್ಯವಾದದೆಡೆಗೆ ಆಗಿರುವ ಪಲ್ಲಟವನ್ನು ಗುರುತಿಸಬಹುದು (ಡಾ. ಅಂಬೇಡ್ಕರ್‌ ಆ್ಯಂಡ್‌ ಡೆಮಾಕ್ರಸಿ: ಆ್ಯನ್‌ ಆಂಥಾಲಜಿ, ಸಂಪಾದಕರು ಕ್ರಿಸ್ಟೋಪ್‌ ಜಾಫ್ರೆಲಾಟ್‌ ಮತ್ತು ನರೇಂದ್ರ ಕುಮಾರ್‌). ‘ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ರಕ್ತಪಾತವಿಲ್ಲದೆಯೇ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ರೀತಿ ಮತ್ತು ವಿಧಾನವನ್ನು ಅನುಸರಿಸುವುದೇ ಪ್ರಜಾಪ್ರಭುತ್ವಕ್ಕೆ ನನ್ನ ವ್ಯಾಖ್ಯಾನವಾಗಿದೆ’ ಎಂಬುದರಲ್ಲಿ ಇದು ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಅವರಿಗೆ ಪ್ರಜಾಪ್ರಭುತ್ವ ಎಂಬುದು ರಾಜಕೀಯ ವ್ಯವಸ್ಥೆ ಮಾತ್ರ ಆಗಿರಲಿಲ್ಲ. ನಿಜವಾದ ಪ್ರಜಾಪ್ರಭುತ್ವವು ಎಲ್ಲ ಪೌರರಲ್ಲಿ ಸಮುದಾಯ ಭಾವವನ್ನು ಹೊಂದಿರುವ ಶ್ರೇಣೀಕರಣ ಇಲ್ಲದ ಸಾಮಾಜಿಕ ವ್ಯವಸ್ಥೆ. ಅದಕ್ಕೆ ನಾಗರಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಆಧರಿಸಿದ ಮನೋಧೋರಣೆ ಇರಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಭ್ರಾತೃತ್ವ ಭಾವ ಇರಬೇಕು. ಯಾವುದೇ ಗೊಂದಲ ಮೂಡದಿರಲು ಅವರು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ: ‘ನನ್ನ ಚಿಂತನೆಗಳನ್ನು ನಾನು ಫ್ರೆಂಚ್‌ ಕ್ರಾಂತಿಯಿಂದ ತೆಗೆದುಕೊಂಡಿದ್ದೇನೆ ಎಂದು ಯಾರೂ ಭಾವಿಸಬಾರದು... ಈ ಚಿಂತನೆಗಳನ್ನು ನನ್ನ ಗುರು ಬುದ್ಧನಿಂದ ಪಡೆದಿದ್ದೇನೆ’. ಅಂಬೇಡ್ಕರ್‌ ಅವರ ಪ್ರಜಾಪ್ರಭುತ್ವ ತತ್ವಕ್ಕೆ ಸಮಗ್ರ ಗಣರಾಜ್ಯವಾದವು ಅತಿ ನಿಕಟವಾಗಿದೆ. ಹಾಗಾಗಿಯೇ, ಭಾರತೀಯ ರಿಪಬ್ಲಿಕನ್‌ ಪಾರ್ಟಿ ಎಂಬ ಹೆಸರಿನಲ್ಲಿ ಅವರು ಪಕ್ಷ ಕಟ್ಟಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ಗಣರಾಜ್ಯ ದಿನವು ಸರ್ಕಾರಿ ವಿಧಿ ವಿಧಾನಗಳಿಗೆ ಸೀಮಿತವಾಗದೆ ಗಣರಾಜ್ಯವಾದದ ಸ್ಫೂರ್ತಿಯನ್ನು ಪುಟಿದೇಳಿಸಬೇಕು. ವಿಡಂಬನಕಾರ ಪಾರ್ಸಾಯಿ ಅವರ  ಪ್ರಕಾರ, ಗಣರಾಜ್ಯ ದಿನದ ಸ್ತಬ್ಧಚಿತ್ರಗಳು ಆ ವರ್ಷ ದೇಶ ಹೇಗಿತ್ತು ಎಂಬುದನ್ನು ಬಿಂಬಿಸುವಂತಿರಬೇಕು. ಬರಪರಿಹಾರ ಹಗರಣ, ಭ್ರಷ್ಟಾಚಾರ ಹಗರಣಗಳು, ಗಲಭೆಗಳು, ದೌರ್ಜನ್ಯಗಳು ಎಲ್ಲವನ್ನೂ ಒಳಗೊಂಡಿರಬೇಕು. ಈ ರೀತಿಯಲ್ಲಿ ಯೋಚಿಸುವುದಾದರೆ, ಈ ವರ್ಷದ ಗಣರಾಜ್ಯ ದಿನದಂದು ಉತ್ತರ ಪ್ರದೇಶವು ಬುಲ್ಡೋಜರ್‌, ಮಹಾರಾಷ್ಟ್ರವು ದೊಡ್ಡದೊಂದು ವಾಷಿಂಗ್‌ ಮಷೀನ್‌, ಹರಿಯಾಣವು ಗುಂಪು ಹಲ್ಲೆಯ ದೃಶ್ಯ, ದೆಹಲಿಯು ಉಮರ್‌ ಖಾಲಿದ್‌ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಬಂಧನದಲ್ಲಿರುವ ಇತರರು ಸ್ತಬ್ಧಚಿತ್ರಗಳಾಗಬೇಕು. ಕೊನೆಯಲ್ಲಿ ದೊಡ್ಡದೊಂದ ಟಿ.ವಿ. ಪರದೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟದ ನ್ಯಾಯದೇವತೆಯ ಪ್ರತಿಮೆ ಇರಬೇಕು. ಗಣರಾಜ್ಯದಿಂದ ಗಣವನ್ನು ಬೇರ್ಪಡಿಸಿದ್ದೇವೆ ಎಂಬುದನ್ನು ತೋರಿಸುವ ಸ್ತಬ್ಧಚಿತ್ರವನ್ನೂ ಪ್ರದರ್ಶಿಸಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.