
ವ್ಯಕ್ತಿತ್ವ ವಿಕಸನ ಕುರಿತು ತಮಾಷೆಯ ಪದ್ಯಗಳನ್ನು ಒಳಗೊಂಡ ಸಚಿತ್ರ ಪುಸ್ತಕ; ಮೈಥಿಲಿ ಎಂಬ ಹುಡುಗಿ ರಕ್ಕಸರೊಂದಿಗೆ ನಡೆಸುವ ಸಾಹಸಗಳ ಬಗೆಗಿನ ರೋಮಾಂಚಕಾರಿ ಚಿತ್ರಗಳ ಪುಸ್ತಕ; ಸೂರ್ಯನನ್ನು ಈಶಾನ್ಯ ಭಾಗದ ಮಹಿಳೆಯ ರೀತಿಯಲ್ಲಿ ಚಿತ್ರಿಸಿರುವ ಅದ್ಭುತ ಪುಸ್ತಕ; ಮಿಥ್ಯೆಗಳು, ಕಥೆಗಳು ಮತ್ತು ರೇಖಾಚಿತ್ರಗಳ ಮೂಲಕ ನದಿಗಳನ್ನು ಪರಿಚಯಿಸುವ ಕೃತಿ; ಆಧುನಿಕ ಭಾರತದ ಚಿತ್ರಕಾರನೊಬ್ಬನನ್ನು ಪರಿಚಯಿಸುವ ಬೆರಗು ಮೂಡಿಸುವ ಪುಸ್ತಕ.
ಎಲ್ಲ ವಯಸ್ಸಿನ ಮಕ್ಕಳಿಗೂ ಸೂಕ್ತವಾಗಬಹುದಾದ ಮತ್ತು ನಾವೀನ್ಯವುಳ್ಳ ಇಂತಹ ನೂರಾರು ಪುಸ್ತಕಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ (ಜನವರಿ 10ರಿಂದ 18ರವರೆಗೆ) ‘ನವದೆಹಲಿ ವಿಶ್ವ ಪುಸ್ತಕ ಮೇಳ’ದಲ್ಲಿ ಕಾಣಬಹುದಾಗಿತ್ತು. ವಸ್ತುಪ್ರದರ್ಶನದಲ್ಲಿ ಈ ಭಾಗವನ್ನು ಸಭಾಂಗಣ 6ರಲ್ಲಿ ಆಯೋಜಿಸಲಾಗಿತ್ತು. ಬಹಳ ಯೋಚಿಸಿಯೇ ಇಂತಹ ನಿರ್ಧಾರ ಕೈಗೊಳ್ಳಲಾಗಿತ್ತು. ಮಕ್ಕಳಿಗೆ ಬೇಕಾಗಿರುವಂತೆಯೇ ಮಕ್ಕಳ ಪುಸ್ತಕಗಳಿಗೂ ಪ್ರತ್ಯೇಕವಾದ ಸ್ಥಳದ ಅಗತ್ಯ ಇದೆ. ಅಲ್ಲಿ ಹೆಜ್ಜೆ ಹಾಕಿದರೆ, ಗಿಲೀಟು, ಥಳಕು, ಅಲಂಕೃತ ಮಳಿಗೆಗಳು, ದೊಡ್ಡ ದೊಡ್ಡ ಪ್ರಕಾಶಕರ ಮಳಿಗೆಗಳು ಎಲ್ಲವನ್ನೂ ಕಾಣಬಹುದಾಗಿತ್ತು. ಹೊಳೆಹೊಳೆಯುವ ಆಮದು ಪುಸ್ತಕಗಳು, ಜನಪ್ರಿಯ ಇಂಗ್ಲಿಷ್ ಕಾದಂಬರಿಗಳು, ಅವೇ ಪಂಚತಂತ್ರ ಮತ್ತು ಅಮರ ಚಿತ್ರಕತೆ ಪುಸ್ತಕಗಳು, ಬೇಸರ ಬರಿಸುವ ಚಟುವಟಿಕೆಗಳು ಮತ್ತು ರೇಖಾಚಿತ್ರಗಳ ಪುಸ್ತಕಗಳು, ಮಕ್ಕಳಿಗೆ ಅತ್ಯುತ್ತಮ ಶ್ರೇಣಿಯ ಭರವಸೆ ಕೊಡುವ ರಾಶಿ ರಾಶಿ ಶೈಕ್ಷಣಿಕ ಪುಸ್ತಕಗಳನ್ನು ಕಂಡು ಪುಸ್ತಕ ಪ್ರೇಮಿಗಳು ಗಲಿಬಿಲಿಗೊಳ್ಳುವ ಅಗತ್ಯ ಇಲ್ಲ.
ಶೈಕ್ಷಣಿಕ ಪುಸ್ತಕಗಳು ನಿರುಪಯುಕ್ತ ಅಲ್ಲ, ಆದರೆ, ಇವುಗಳನ್ನು ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. ಅದಕ್ಕಾಗಿ ನೀವು ಪುಸ್ತಕ ಮೇಳಗಳಿಗೆ ಹೋಗುವ ಅಗತ್ಯ ಇಲ್ಲ. ಹೊಸ ಮತ್ತು ಸೃಜನಶೀಲ ಕೃತಿಗಳನ್ನು ನೋಡುವ ಉದ್ದೇಶದಿಂದ ನೀವು ಅಲ್ಲಿಗೆ ಹೋಗಬಹುದು. ವಿಡಿಯೊಗಳು ಮತ್ತು ರೀಲ್ಸ್‌ಗಳಿಂದ ಸುತ್ತುವರಿದಿರುವ ಮಕ್ಕಳಲ್ಲಿ ಓದುವ, ಬರೆಯುವ ಮತ್ತು ಕಲಿಯುವ ಅಭಿರುಚಿ ಮೂಡಿಸಲು ಬೇಕಾದ ಪುಸ್ತಕ ಹುಡುಕಿಕೊಂಡು ಪುಸ್ತಕ ಮೇಳಗಳಿಗೆ ಹೋಗಬಹುದು. ನಿಮ್ಮ ಮಕ್ಕಳು ಬೆಳೆಯುತ್ತಿರುವ ಸಂದರ್ಭದ ಇತಿಹಾಸ, ಮಿಥ್ಯೆಗಳು, ಕಥೆಗಳು ಮತ್ತು ಈ ವಿಶಾಲ ಉಪಖಂಡದ ನಿಜ ಜೀವನದ ಕುರಿತು ಅರಿವು ಮೂಡಿಸಲು ಅಲ್ಲಿಗೆ ಹೋಗಬಹುದು. ಕೃತಕ ಬುದ್ಧಿಮತ್ತೆಯೊಂದಿಗೆ ಬದುಕುತ್ತಿರುವ ಮಕ್ಕಳಲ್ಲಿ ಕೌತುಕ ಮತ್ತು ಸೃಜನಶೀಲತೆಯನ್ನು ಉದ್ದೀಪನಗೊಳಿಸಲು ಅಲ್ಲಿಗೆ ಹೋಗಬಹುದು. ಅಂದರೆ, ಭಾರತದ ಮಕ್ಕಳಿಗಾಗಿ ಭಾರತೀಯ ಭಾಷೆಯೊಂದರಲ್ಲಿ ರಚನೆಯಾಗಿರುವ ಭಾರತೀಯ ಪುಸ್ತಕಗಳಿಗಾಗಿ ನೀವು ಪುಸ್ತಕ ಮೇಳಗಳಿಗೆ ಹೋಗಬಹುದು.
ನಿಮಗೆ ಬೇಕಾಗಿರುವುದು ಇವೇ ಆಗಿದ್ದರೆ ಇಲ್ಲಿ ಕೆಲವು ಒಳ್ಳೆಯ ಸುದ್ದಿಗಳಿವೆ. ಭಾರತದ ಮಕ್ಕಳ ಸಾಹಿತ್ಯವು ಪುನರುಜ್ಜೀವನಗೊಳ್ಳುತ್ತಿದೆ. ಈ ಪ್ರಕ್ರಿಯೆ ಭಾರತದ ಇಂಗ್ಲಿಷ್ ಪುಸ್ತಕಗಳಿಂದ ಆರಂಭವಾಯಿತು. ಹಿಂದಿಯಲ್ಲಿ ನಾನು ನೋಡಿರುವುದರ ಆಧಾರದಲ್ಲಿ ಹೇಳುವುದಾದರೆ, ಭಾರತದ ಇತರ ಭಾಷೆಗಳಿಗೂ ಮಕ್ಕಳ ಸಾಹಿತ್ಯ ಸುಗ್ಗಿ ಪಸರಿಸುತ್ತಿದೆ. ಮಕ್ಕಳು ಮತ್ತು ಯುವಜನರ ಸಾಹಿತ್ಯದ ಬರಹಗಾರ, ಚಿತ್ರಕಾರ, ಪ್ರಕಾಶಕ ಆಗುವುದು ಈಗ ಸಡಗರದ ಸಂಗತಿ.
ಟಾಟಾ ಟ್ರಸ್ಟ್‌ನ ‘ಪರಾಗ್’ ಮಳಿಗೆಯ ಮೂಲಕ ನೀವು ಆರಂಭಿಸಬಹುದು. ಕಳೆದ ಐದು ವರ್ಷಗಳಲ್ಲಿ ಈ ಟ್ರಸ್ಟ್ ಪ್ರತಿವರ್ಷವೂ ‘ಪರಾಗ್ ಗೌರವ ಪಟ್ಟಿ’ಯನ್ನು ಪ್ರಕಟಿಸುತ್ತದೆ: ಅಂದರೆ, ಮಕ್ಕಳು ಮತ್ತು ಯುವಜನರಿಗಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿರುವ ಅತ್ಯುತ್ತಮವಾದ ಪುಸ್ತಕಗಳ ಪಟ್ಟಿ. ಒಳ್ಳೆಯ ಸಂಗತಿ ಎಂದರೆ, ಈ ಟ್ರಸ್ಟ್ ಪುಸ್ತಕಗಳನ್ನು ಪ್ರಕಟಿಸುವುದಿಲ್ಲ; ಹಾಗಾಗಿ ಇತರ ಪ್ರಕಾಶಕರ ಜೊತೆಗೆ ಈ ಟ್ರಸ್ಟ್‌ಗೆ ಪೈಪೋಟಿ ಇಲ್ಲ. ವಿಶ್ವಾಸಾರ್ಹವಾದ ಆಯ್ಕೆ ಮಂಡಳಿಯು ನಿಮಗಾಗಿ ಪುಸ್ತಕಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. 2025ರ ಪರಾಗ್ ಗೌರವ ಪಟ್ಟಿ ಈಗ ಲಭ್ಯ ಇದೆ ಮತ್ತು ಸಾಧ್ಯವಿದ್ದರೆ ಕಳೆದ ಐದು ವರ್ಷಗಳ ಪಟ್ಟಿಯನ್ನೂ ಆಸಕ್ತರು ಗಮನಿಸಬಹುದು. ಆನ್‌ಲೈನ್‌ನಲ್ಲಿ (www.paragreads.in) ಇದು ಲಭ್ಯ. ವಯೋಮಾನ ಮತ್ತು ವಿಧಗಳ ಆಧಾರದಲ್ಲಿ 24 ಪ್ರಕಾಶಕರ 286 ಪುಸ್ತಕಗಳನ್ನು ಈವರೆಗೆ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಹಲವು ಪುಸ್ತಕಗಳು ಆಯಾ ಪ್ರಕಾಶಕರ ಮಳಿಗೆಗಳಲ್ಲಿ ಲಭ್ಯ ಇವೆ. ‘ಮುಸ್ಕಾನ್’ ಮತ್ತು ‘ತುಲಿಕಾ’ದಂತಹ ಪ್ರಕಾಶಕರ ಮಳಿಗೆಗಳು ಇಲ್ಲಿ ಇಲ್ಲ. ಈ ಪ್ರಕಾಶಕರಿಂದ ನೀವು ನೇರವಾಗಿ ಪುಸ್ತಕಗಳನ್ನು ಖರೀದಿ ಮಾಡಬಹುದು.
ಇಂಗ್ಲಿಷ್‌ನಲ್ಲಿ ಕೌತುಕಮಯ ಬೆಳವಣಿಗೆಗಳು ನಡೆಯುತ್ತಿವೆ. ಗ್ರುಫಲೊ ಖ್ಯಾತಿಯ ಜೂಲಿಯಾ ಡೊನಾಲ್ಡ್‌ಸನ್ ಮತ್ತು ಆಕ್ಸೆಲ್ ಶೆಫ್ಲರ್ ಅವರಂತಹ ಲೇಖಕ–ಚಿತ್ರಕಾರರು ನಮ್ಮಲ್ಲಿ ಇಲ್ಲ. ಆದರೆ, ಅಸುನಮ್ ಎಂಬ ಸಂಗೀತಪ್ರೇಮಿ ಕಾಲ್ಪನಿಕ ದೈತ್ಯ ಪ್ರಾಣಿಯ ಕಥೆ ಹೇಳುತ್ತಿರುವ ಸೆಲಾಮೆಂಡರ್ ಮತ್ತು ರಾಜೀವ್ ಐಪ್ ಅವರು ಈ ದಿಸೆಯಲ್ಲಿ ಸಾಗುತ್ತಿದ್ದಾರೆ. ಏಳು ವರ್ಷದವರೆಗಿನ ಮಕ್ಕಳಿಗಾಗಿ ‘ಪ್ರಥಮ್ ಬುಕ್ಸ್’ (ಪ್ರಥಮ್ ಬುಕ್ಸ್ ಪ್ರಕಟಣೆಗಳು ಕನ್ನಡದಲ್ಲೂ ಸಾಕಷ್ಟಿವೆ) ಮತ್ತು ‘ತುಲಿಕಾ ಬುಕ್ಸ್’ ಕೆಲವು ಒಳ್ಳೆಯ ಕೃತಿಗಳನ್ನು ಪ್ರಕಟಿಸಿವೆ. ಡಕ್‌ಬಿಲ್ ಮತ್ತು ಪಫಿನ್ ಕೂಡ ಉತ್ತಮವಾದ ಕೃತಿಗಳನ್ನು ಹೊರತಂದಿವೆ. ಹತ್ತು ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಹದಿಹರೆಯದವರಿಗಾಗಿ ಹಾರ್ಪರ್‌ಕಾಲಿನ್ಸ್, ಸ್ಪೀಕಿಂಗ್ ಟೈಗರ್, ತಾರಾ ಬುಕ್ಸ್ ಮತ್ತು ಕಲ್ಪವೃಕ್ಷ ಉತ್ತಮ ಪುಸ್ತಕಗಳನ್ನು ಪ್ರಕಟಿಸಿವೆ.
ಪ್ರಥಮ್ ಬುಕ್ಸ್‌ನವರು ತಮ್ಮ ಕೃತಿಗಳನ್ನು ಭಾರತದ ಇತರ ಭಾಷೆಗಳಿಗೂ ಅನುವಾದಿಸಿ ಪ್ರಕಟಿಸಿದ್ದಾರೆ. ಕರಡಿ ಟೇಲ್ಸ್, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಜೊತೆಗೂಡಿ ಭಾರತದ ವಿವಿಧ ಭಾಗಗಳ ನೈಜ ಕತೆಗಳ ಹೊಸ ಸರಣಿಯನ್ನು ಆರಂಭಿಸಿದೆ. ಗಣೇಶ್ ಪಾಯಿನ್ ಮತ್ತು ಎಸ್.ಎಚ್. ರಜಾ ಅವರೂ ಸೇರಿದಂತೆ ಭಾರತೀಯ ಕಲಾವಿದರ ಕುರಿತ ಮನೋಜ್ಞವಾದ ಕೃತಿಗಳನ್ನು ಆರ್ಟ್‌ಫಸ್ಟ್ ಪ್ರಕಟಿಸಿದೆ.
ನೀವು ನೋಡಿರದ ಎರಡು ಮಳಿಗಗಳ ಕುರಿತು ನಾನು ಹೇಳುತ್ತೇನೆ. ಈ ಮಳಿಗೆಗಳಲ್ಲಿ ಮಕ್ಕಳ ಅತ್ಯುತ್ತಮ ಹಿಂದಿ ಪುಸ್ತಕಗಳು ಇವೆ. ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ಚಿಲ್ಡ್ರನ್ಸ್ ಬುಕ್ ಟ್ರಸ್ಟ್‌ನ ಅಧಿಕೃತ ಮಳಿಗೆಗಳೂ ಇವೆ, ಇವರ ಹಳೆಯ ಪುಸ್ತಕಗಳು ಅಗ್ಗದ ದರದಲ್ಲಿ ಲಭ್ಯ ಇವೆ. ಮಕ್ಕಳ ಅತಿ ಹೆಚ್ಚು ಹಿಂದಿ ಪುಸ್ತಕಗಳನ್ನು ಪ್ರಥಮ್ ಬುಕ್ಸ್ ಪ್ರಕಟಿಸಿದೆ.
ಮಕ್ಕಳ ಹಿಂದಿ ಸಾಹಿತ್ಯದ ಸೃಜನಶೀಲತೆಯಲ್ಲಿ ಮುಂಚೂಣಿಯಲ್ಲಿ ಇರುವ ಏಕತಾರಾ ಟ್ರಸ್ಟ್ (ಇಂಪ್ರಿಂಟ್, ಜುಗ್ನೂ) ಪ್ರಕಟಣೆಗಳು ಗಮನಸೆಳೆಯುವಂತಿವೆ. ಗುಲ್ಜಾರ್ ಅವರು ಬರೆದಿರುವ ಸರಣಿಗಳು, ವಿನೋದ್ ಕುಮಾರ್ ಶುಕ್ಲಾ ಅವರ ಪುಸ್ತಕಗಳು ಮತ್ತು ಕೃಷ್ಣಕುಮಾರ್ ಅವರ ಇತ್ತೀಚಿನ ಕಿರು ಕಾದಂಬರಿ ಏಕತಾರಾ ಟ್ರಸ್ಟ್‌ನ ಸಂಗ್ರಹದಲ್ಲಿ ಲಭ್ಯ. ಪಾಕೆಟ್ ಪುಸ್ತಕಗಳು, ಬೃಹತ್ ಪುಸ್ತಕಗಳು, ಪದ್ಯದ ಕಾರ್ಡ್‌ಗಳು, ಪದರಹಿತ ಚಿತ್ರ ಪುಸ್ತಕಗಳು, ಸಣ್ಣ ಮಕ್ಕಳ ಪುಸ್ತಕಗಳು– ಹೀಗೆ ಯುವಜನರಿಗೆ ಬೇಕಾದ ಎಲ್ಲ ರೀತಿಯ ಸಾಹಿತ್ಯ ಇಲ್ಲಿ ಇದೆ. ಎಲೆನ್ ಶಾ ಅವರ ಚಿತ್ರಗಳಿರುವ ಗುಲ್ಜಾರ್ ಅವರ ಪುಸ್ತಕಗಳನ್ನೂ ನೀವು ನೋಡಬಹುದು. ಅಚ್ಚರಿ ಮೂಡಿಸುವ ಕವಿ ಸುಶಿಲ್ ಶುಕ್ಲಾ ಅವರ ಕೃತಿಗಳೂ ಇವೆ. ಗುನ್‌ಗುನ್ ಆರ್ಕೆಸ್ಟ್ರಾ ಚಿತ್ರಪುಸ್ತಕವು ನನ್ನ ಮನ ಗೆದ್ದಿತು. ಇವರ ನಿಯತಕಾಲಿಕಗಳ ಚಂದಾದಾರ ಆಗುವುದನ್ನು ಮರೆಯದಿರಿ. ಸಣ್ಣ ಮಕ್ಕಳಿಗಾಗಿ ಪ್ಲೂಟೊ ಮತ್ತು ಸ್ವಲ್ಪ ದೊಡ್ಡವರಿಗಾಗಿ ಸೈಕಲ್ ಇವೆ.
ಏಕತಾರಾ ಟ್ರಸ್ಟ್‌ನಿಂದ ಭೋಪಾಲ್‌ನ ಏಕಲವ್ಯದ ಕಡೆಗೆ ಹೆಜ್ಜೆ ಹಾಕಿ. ಯುಗಪ್ರವರ್ತಕ ಹೋಶಂಗಾಬಾದ್ ವಿಜ್ಞಾನ ಬೋಧನೆ ಕಾರ್ಯಕ್ರಮದಿಂದ ಆರಂಭಗೊಂಡ ಈ ಎನ್‌ಜಿಒ ತನ್ನ ವಿಜ್ಞಾನ ಶಿಕ್ಷಣದ ಗುರಿಯನ್ನು ಮೀರಿ ವಿಸ್ತಾರವಾಗಿ ಬೆಳೆದಿದೆ. ಶಿಕ್ಷಕರು ಮತ್ತು ಹೆತ್ತವರಿಗೆ ಪ್ರಯೋಜನವಾಗಬಹುದಾದ ಪುಸ್ತಕಗಳು, ವಿಜ್ಞಾನ ಟೂಲ್‌ಕಿಟ್‌ಗಳು, ಶಿಕ್ಷಣದ ಕುರಿತ ಪುಸ್ತಕಗಳು ಇಲ್ಲಿ ಇವೆ. ಲಖನೌದಲ್ಲಿ ಹಿಂದಿ ಶಾಲೆಗೆ ಹೋಗುವ ಪಂಜಾಬಿ ಉಚ್ಚಾರಣೆಯ ಲುಧಿಯಾನದ ಹುಡುಗನ ಹೃದಯಸ್ಪರ್ಶಿ ಕತೆ ವರುಣ್ ಗ್ರೋವರ್ ಅವರ ‘ಫುಟ್–ಬಾಲ್’. ಅವರ ನಿಯತಕಾಲಿಕ ಮಕ್ಕಳಿಗಾಗಿ ಚಕ್‌ಮಕ್ ಮತ್ತು ಶಿಕ್ಷಕರಿಗಾಗಿ ಸಂದರ್ಭ್‌ನ ಚಂದಾದಾರರಾಗಲು ನೀವು ಬಯಸಬಹುದು. ಭಾರತದ ಎಲ್ಲ ಭಾಗಗಳು ಮತ್ತು ಸಮುದಾಯಗಳ ಮಕ್ಕಳ ಸಾಂಸ್ಕೃತಿಕ ಜಗತ್ತನ್ನು ವಿಸ್ತರಿಸುವ ಕೆಲಸವನ್ನು ‘ಪಿಟಾರಾ’ ಸದಾ ಮಾಡುತ್ತಲೇ ಬಂದಿದೆ.
ದೆಹಲಿ ಪುಸ್ತಕ ಮೇಳ ಮಾತ್ರವಲ್ಲ, ಯಾವುದೇ ಪುಸ್ತಕ ಮೇಳಕ್ಕೆ ನೀವು ಮಕ್ಕಳನ್ನೂ ಕರೆದುಕೊಂಡು ಹೋದರೆ, ನಾನು ಕಂಡುಕೊಂಡದ್ದಕ್ಕಿಂತ ಹೆಚ್ಚಿನದನ್ನು ನೀವು ಕಾಣಬಹುದು. ಮಕ್ಕಳ ಪುಸ್ತಕಗಳಿರುವ ಸ್ಥಳವೆಂದರೆ ಕಲ್ಪನಾಶಕ್ತಿಯು ನಡೆಯಲು
ಕಲಿಯುವ ಜಾಗ. ಮನರಂಜನೆಯೊಂದಿಗೆ ಮನೋವಿಕಾಸವು ಸಾಧ್ಯವಾಗುವ ಜಾಗ. ಅಲ್ಲಿಗೆ ಹೋಗಲು ಹಿಂಜರಿಕೆ ಏಕೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.