ADVERTISEMENT

ಅನುಭವ ಮಂಟಪ| ಸಹಕಾರಿಗಳಲ್ಲಿ ಸಂತೋಷಕ್ಕಿಂತ ಆತಂಕವೇ ಹೆಚ್ಚು: ಎಚ್‌.ಕೆ ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 19:30 IST
Last Updated 21 ಜುಲೈ 2021, 19:30 IST
ಎಚ್‌.ಕೆ.ಪಾಟೀಲ, ಶಾಸಕ
ಎಚ್‌.ಕೆ.ಪಾಟೀಲ, ಶಾಸಕ   

ಕೃಷಿ ಇಲಾಖೆ ಜತೆಗಿದ್ದ ಸಹಕಾರ ಕ್ಷೇತ್ರವನ್ನು ಕೇಂದ್ರ ಸರ್ಕಾರ ಪ್ರತ್ಯೇಕಗೊಳಿಸಿ ಸಹಕಾರ ಸಚಿವಾಲಯ ಮಾಡಿರುವುದು ಉತ್ತಮ ಬೆಳವಣಿಗೆ. ಆದರೆ, ಹೊಸ ಸಚಿವಾಲಯ ರಾಜಕೀಯಕ್ಕಾಗಿ ಬಳಕೆ ಆಗಬಾರದು. ಸಹಕಾರ ಕ್ಷೇತ್ರವನ್ನು ವಾಣಿಜ್ಯ ಕ್ಷೇತ್ರವಾಗಿಸುವ ಪ್ರಯತ್ನಗಳು ಈ ಸಚಿವಾಲಯದಿಂದ ನಡೆಯಬಾರದು.

ರಾಷ್ಟ್ರದ ಏಳಿಗೆ ಹಾಗೂ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಸಹಕಾರ ಕ್ಷೇತ್ರ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾನಂತರ ಅಂದರೆ 1905ರಿಂದ, ಶತಮಾನಕ್ಕೂ ಹೆಚ್ಚುಕಾಲ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಕೃಷಿ ಪತ್ತಿನ ವ್ಯವಸ್ಥೆಯಲ್ಲಂತೂ ಸಹಕಾರ ಕ್ಷೇತ್ರ ಇತ್ತೀಚಿನ ದಿನಗಳವರೆಗೆ ತನ್ನದೇ ಆದ ವಿಶೇಷ ಛಾಪು ಮೂಡುವಂತೆ ಕೆಲಸ ಮಾಡಿದೆ.‌‌ ಆದರೆ, ಬಹಳ ಕಡಿಮೆ ಪ್ರಸಂಗಗಳಲ್ಲಿ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಹತ್ವ ಗಳಿಸಿತ್ತು.

ಸಹಕಾರ ಸಂಘಗಳ ರಚನೆ ನಮ್ಮ ಹಕ್ಕು ಆಗಿರುವುದು ಇತ್ತೀಚಿನ ದಿನಗಳಲ್ಲಿ ಮಾತ್ರ. ಯುಪಿಎ ಸರ್ಕಾರದಲ್ಲಿ ಮನಮೋಹನ್‌ ಸಿಂಗ್‌ ಪ್ರಧಾನಮಂತ್ರಿ ಆಗಿದ್ದಾಗ, ಶರದ್‌ ಪವಾರ್‌ ಕೃಷಿ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಮಾಡುವುದರ ಮೂಲಕ ಇದನ್ನು ಹಕ್ಕು ಮಾಡಲಾಯಿತು. ಈ ರೀತಿಯಾಗಿ ಸಹಕಾರ ಕ್ಷೇತ್ರ ಸಂವಿಧಾನದಲ್ಲಿ ತನ್ನ ಅಸ್ತಿತ್ವ ಕಂಡುಕೊಂಡಿರುವುದು ಒಂದು ಸಮಾಧಾನಕರ ಅಂಶ.

ADVERTISEMENT

97ನೇ ಸಂವಿಧಾನ ತಿದ್ದುಪಡಿಯನ್ನು ಸಹಕಾರ ಸಂಘಗಳ ಸ್ಥಾಪನೆಗಾಗಿ ಮಾತ್ರ ಮಾಡಲಿಲ್ಲ. ಅದರ ಜತೆಗೆ ಸಹಕಾರ ಸಂಸ್ಥೆಗಳನ್ನು, ಸಹಕಾರ ಕ್ಷೇತ್ರವನ್ನು ಪರಿಣಾಮಕಾರಿ ಹಾಗೂ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಕೆಲಸ ನಿರ್ವಹಣೆ ಮಾಡಲು ಅಗತ್ಯವಿರುವ ಹಲವಾರು ಮಹತ್ವದ ಅಂಶಗಳನ್ನು ತಿದ್ದುಪಡಿಯಲ್ಲಿ ಅಳವಡಿಸಲಾಗಿದೆ. ಸಂವಿಧಾನದ ಈ ಅಂಶಗಳನ್ನು ಗೌರವಿಸಿ, ಸಹಕಾರ ಸಚಿವಾಲಯ ಕಾರ್ಯನಿರ್ವಹಿಸಬೇಕು.

ಹಲವಾರು ವರ್ಷಗಳ ಹಿಂದೆ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾರಂಭಿಸಿದ ನ್ಯಾಷನಲ್‌ ಕೋ ಅಪರೇಟಿವ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ (ಎನ್‌ಸಿಡಿಸಿ) ಆಗಲಿ, ನಬಾರ್ಡ್‌ ಆಗಲೀ ತನ್ನ ಕಾರ್ಯವ್ಯಾಪ್ತಿ ವಿಸ್ತರಣೆ ಮಾಡಿಕೊಳ್ಳಲಿಲ್ಲ. ಸಹಕಾರ ಕ್ಷೇತ್ರದಲ್ಲಿ ಮಲ್ಟಿ ಸ್ಟೇಟ್‌ ಕೋ ಅಪರೇಟಿವ್‌ ಕಾಯ್ದೆ ಕೆಳಗೆ ಕೆಲಸ ಮಾಡುವ ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಸೇವೆ ಮಾಡುವ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರದ ಕಾನೂನಿನ ಅನ್ವಯ ಕೆಲಸ ಮಾಡುವ ರಾಜ್ಯ ಸಹಕಾರಿ ಸಂಸ್ಥೆಗಳಿವೆ.

ರಾಜ್ಯ ಸರ್ಕಾರದ ಕಾನೂನಿನ ಅಡಿಯಲ್ಲಿ ಕೆಲಸ ಮಾಡುವ ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ಸಚಿವಾಲಯ ಯಾವುದೇ ರೀತಿಯಿಂದ ಇಣಕಿ ಹಾಕುವುದಾಗಲೀ, ತನ್ನ ಕಾರ್ಯಕ್ಷೇತ್ರ ಉಲ್ಲಂಘಿಸಿ ಸಹಕಾರ ಸಂಘಗಳ ನಿರ್ವಹಣೆಯಲ್ಲಿ ಕೈ ಹಾಕುವುದಾಗಲೀ ಮಾಡಬಾರದು. ಒಂದು ವೇಳೆ ಕೇಂದ್ರ ಸಚಿವಾಲಯ ಆ ರೀತಿ ಕೆಲಸಕ್ಕೆ ಕೈ ಹಾಕಿದರೆ ಅದು ರಾಷ್ಟ್ರದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಮಾಡಿದಂತಾಗುತ್ತದೆ.

ಇತ್ತೀಚಿನ ಹಲವು ಬೆಳವಣಿಗೆಗಳಿಂದ ಅಂದರೆ, ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ತಿದ್ದುಪಡಿಯಿಂದ ಸಹಕಾರಿ ಬ್ಯಾಂಕ್‌ ಅಥವಾ ಸಂಸ್ಥೆಗಳ ಮೂಲ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಸಹಕಾರಿ ಸಂಸ್ಥೆಗಳನ್ನು ಕಾರ್ಪೊರೇಟ್‌ಗಳನ್ನಾಗಿ ಮಾರ್ಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸಹಕಾರಿ ಸಂಸ್ಥೆಗಳನ್ನು ಸೇವಾ ಸಂಸ್ಥೆಯಿಂದ ಬದಲಾಯಿಸಿ, ವಾಣಿಜ್ಯ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಹಾಗಾಗಿ, ಈ ಹೊಸ ಸಚಿವಾಲಯ ಸ್ಥಾಪನೆ ಸಹಕಾರಿಗಳಲ್ಲಿ ಸಂತೋಷಕ್ಕಿಂತ ಆತಂಕವನ್ನೇ ಮೂಡಿಸಿದೆ.

ಹೊಸ ಸಚಿವಾಲಯವನ್ನು ರಾಜಕೀಯ ಉದ್ದೇಶಗಳಿಗಾಗಿ ರಚನೆ ಮಾಡಲಾಗಿದೆ ಎಂಬ ಗಂಭೀರ ಅನಿಸಿಕೆಗಳು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಟೀಕೆ, ವಿಮರ್ಶೆ, ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಸಚಿವಾಲಯ ಸಹಕಾರಿ ತತ್ವಕ್ಕೆ ಧಕ್ಕೆ ಬರದಂತೆ, ರಾಜಕೀಯಕರಣಗೊಳಿಸದಂತೆ ಸಹಕಾರ ಚಳವಳಿಗೆ ಶಕ್ತಿ ತುಂಬುವ ಕೆಲಸ ಮಾಡಿದರೆ ಉತ್ತಮ.

ಲೇಖಕ: ಶಾಸಕ ಮತ್ತು ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.