
ಅಣೆಕಟ್ಟುಗಳಿಂದ ಅನನುಕೂಲಗಳೇ ಹೆಚ್ಚು ಎನ್ನುವ ನಂಬಿಕೆ ಬಲವಾಗುತ್ತಿದೆ. ಅಮೆರಿಕದಲ್ಲೀಗ ಅಣೆಕಟ್ಟುಗಳನ್ನು ತೆರವುಗೊಳಿಸುವ ಕಾರ್ಯ ಆಂದೋಲನದ ಸ್ವರೂಪ ಪಡೆದುಕೊಂಡಿದೆ. ನಮ್ಮಲ್ಲೋ ಹೊಸ ಅಣೆಟ್ಟುಗಳನ್ನು ಕಟ್ಟುವ ಉತ್ಸಾಹ. ಕಾಡನ್ನು ಮುಳುಗಿಸುವ ನಿರ್ಮಾಣಗಳಿಂದ ಬದುಕೂ ಮುಳುಗುತ್ತದೆ!
ಹೊಸ ಅಣೆಕಟ್ಟು ನಿರ್ಮಾಣ ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರ ಇತ್ತೀಚಿನ ಅಭಿಪ್ರಾಯ, ಅಣೆಕಟ್ಟು ನಿರ್ಮಾಣಕ್ಕಾಗಿ ಮುಳುಗಲಿರುವ ಅರಣ್ಯ ಪ್ರದೇಶ, ಕೃಷಿ ಜಮೀನು ಹಾಗೂ ಅರಣ್ಯೇತರ ಪ್ರದೇಶದ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಹೇಳಿಕೆಯಾಗಿದೆ.
ದೇಶದಲ್ಲಿ 6,500 ಅಣೆಕಟ್ಟುಗಳಿವೆ. ಇವುಗಳಿಂದ ಬರೀ 750 ಬಿಸಿಎಂ ನೀರನ್ನು ಸಂಗ್ರಹಿಸುತ್ತಿದ್ದೇವೆ. ಅಣೆಕಟ್ಟು ನಿರ್ಮಿಸಲು 25 ವರ್ಷಗಳು ಬೇಕಾಗುತ್ತದೆ. 25 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತದೆ. ನಮಗೆ ಅಷ್ಟೊಂದು ಸಮಯ ಮತ್ತು ಹಣ ಇದೆಯೇ ಎಂದು ಸಚಿವರು ಪ್ರಶ್ನಿಸಿದ್ದಾರೆ. ಇದೇ ಹೊತ್ತಿನಲ್ಲಿ, ಅಮೆರಿಕದಲ್ಲಿ ಅಣೆಕಟ್ಟುಗಳನ್ನು ಸಾಲು ಸಾಲಾಗಿ ತೆರವುಗೊಳಿಸುವ ಕೆಲಸ ಭರದಿಂದ ಸಾಗುತ್ತಿದೆ. ಅಲ್ಲಿ ಸಾವಿರಾರು ಅಣೆಕಟ್ಟುಗಳಿವೆ. 25 ವರ್ಷಗಳಷ್ಟು ಹಳೆಯದಾದ ಸುಮಾರು 2200 ಅಣೆಕಟ್ಟುಗಳನ್ನು ತೆರವುಗೊಳಿಸಿ, ನದಿಯನ್ನು ಮುಕ್ತವಾಗಿ ಹರಿಯಲು ಅನುವು ಮಾಡಿಕೊಡಲಾಗಿದೆ. ಅಣೆಕಟ್ಟುಗಳಿಂದ ಆಗುವ ಲಾಭಕ್ಕಿಂತ ಸ್ವಚ್ಛಂದವಾಗಿ ಹರಿಯುವ ನದಿಯಿಂದ ಹೆಚ್ಚು ಅನುಕೂಲವಿದೆ ಎಂಬುದನ್ನು ಅಲ್ಲಿನ ವಿಜ್ಞಾನಿಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. 2050ರ ಹೊತ್ತಿಗೆ 30 ಸಾವಿರ ಅಣೆಕಟ್ಟುಗಳನ್ನು ತೆರವುಗೊಳಿಸುವುದರ ಮೂಲಕ, 3 ಲಕ್ಷ ಮೈಲಿಗಳಷ್ಟು ನದಿ ಹರಿವನ್ನು ಮುಕ್ತವಾಗಿಸುವ ಯೋಜನೆಯನ್ನು ಅಮೆರಿಕದಲ್ಲಿ ರೂಪಿಸಲಾಗಿದೆ.
ನದಿ ಪಾತ್ರದಲ್ಲಿ ವಾಸಿಸುವ ಮೂಲ ನಿವಾಸಿಗಳಿಗೆ ಯಾವುದೇ ಅಣೆಕಟ್ಟು ಅನುಕೂಲ ತಂದ ಉದಾಹರಣೆಯಿಲ್ಲ. ಅರಣ್ಯ ನಾಶದ ಜೊತೆಗೆ ಕೃಷಿಭೂಮಿ, ಅರಣ್ಯೇತರ ಭೂಮಿಯೂ ಮುಳುಗಡೆಯಾಗುತ್ತದೆ. ಜಲಚರಗಳ ಜೀವನಚಕ್ರದಲ್ಲಿ ವ್ಯತ್ಯಯವಾಗುತ್ತದೆ. ಬದಲಾದ ಪರಿಸ್ಥಿತಿಯಲ್ಲಿ
ಅಣೆಕಟ್ಟುಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಈ ಅಣೆಕಟ್ಟುಗಳಿಗೆ ಸಂಬಂಧಿಸಿದಂತೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನೋಡೋಣ.
ಜಲವಿದ್ಯುತ್ ಯೋಜನೆಗಳನ್ನು ‘ಹಸಿರು ಇಂಧನ’ವೆಂದು ಸರ್ಕಾರಿ ಇಲಾಖೆಗಳು ಹೇಳುತ್ತವೆ. ಪಂಪ್ಡ್ ಸ್ಟೋರೇಜ್ ಪ್ಲಾಂಟ್‍ಗಳನ್ನೂ (ಪಿಎಸ್‌ಪಿ) ಹಸಿರು ಇಂಧನವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ 2 ಲಕ್ಷ ಮೆ.ವಾ. ವಿದ್ಯುತ್ ಅನ್ನು ಪಂಪ್ಡ್ ಸ್ಟೋರೇಜ್ ಪ್ಲಾಂಟ್‍ಗಳಿಂದ ಪಡೆಯಲು ಯೋಜನೆ ರೂಪಿಸುತ್ತಿದೆ. ಈಗಾಗಲೇ ಕರ್ನಾಟಕದ ಶರಾವತಿ ಪಿಎಸ್‍ಪಿ (2000 ಮೆ.ವಾ.), ಮಧ್ಯಪ್ರದೇಶದ ಎಂ.ಪಿ-30 ಪಿಎಸ್‍ಪಿ (19200 ಮೆ.ವಾ.), ಮಹಾರಾಷ್ಟ್ರದ ಬಿವ್‍ಪುರಿ ಪಿಎಸ್‍ಪಿ ಮತ್ತು ಬಾವಲಿ ಪಿಎಸ್‍ಪಿ (1000 ಮತ್ತು 1500 ಮೆ.ವಾ.), ಒಡಿಶಾದ ಇಂದ್ರಾವತಿ ಮೇಲ್ದಂಡೆ ಪಿಎಸ್‍ಪಿ (600 ಮೆ.ವಾ.) ಹಾಗೂ ಆಂಧ್ರಪ್ರದೇಶದ ಚಿತ್ರಾವತಿ ಪಿಎಸ್‍ಪಿ (500 ಮೆ.ವಾ.) – ಇವುಗಳಿಗೆ ವಿಸ್ತೃತ ಯೋಜನೆ ತಯಾರಾಗಿದ್ದು, ಕಾರ್ಯಾರಂಭದ ಪ್ರಯತ್ನ ನಡೆಯುತ್ತಿದೆ.
ಕರ್ನಾಟಕದಲ್ಲಿ ವರಾಹಿ, ಕಾಳಿ, ನೇತ್ರಾವತಿ, ಮಲಪ್ರಭಾ ಇತ್ಯಾದಿ ಭಾಗಗಳಲ್ಲಿ ಯೋಜನೆ ಸಾಧ್ಯತೆಗಳ ಕುರಿತು ರೂಪುರೇಷೆಗಳನ್ನು ಭರದಿಂದ ತಯಾರಿಸಲಾಗುತ್ತಿದೆ. ‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆಯಲ್ಲಿ ಹಾಲಿ ಇರುವ ಎರಡು ಅಣೆಕಟ್ಟುಗಳನ್ನೇ ಬಳಸಿಕೊಳ್ಳಲಾಗುತ್ತದೆ. ಆದರೂ, ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ 54 ಹೆಕ್ಟೇರ್ ಅರಣ್ಯ ನಾಶವಾಗಲಿದೆ. ಅದೇ ವರಾಹಿ ಪಿಎಸ್‍ಪಿ ಯೋಜನೆ ಜಾರಿ ಮಾಡಲು ಮತ್ತೊಂದು ಅಣೆಕಟ್ಟು ನಿರ್ಮಿಸಲಾಗುತ್ತದೆ. ಇದಕ್ಕೆ ಮೂಕಾಂಬಿಕಾ ಮತ್ತು ಸೋಮೇಶ್ವರ ಅಭಯಾರಣ್ಯಗಳ ಸುಮಾರು 500 ಎಕರೆ ಪ್ರದೇಶವನ್ನು ಬಳಸಲಾಗುತ್ತದೆ ಎನ್ನಲಾಗಿದೆ. 2 ಲಕ್ಷ ಮೆ.ವಾ. ವಿದ್ಯುತ್‍ಗಾಗಿ ದೇಶದಲ್ಲಿ ಇನ್ನೆಷ್ಟು ಅಣೆಕಟ್ಟುಗಳನ್ನು ಕಟ್ಟಲಾಗುವುದು ಎಂಬ ಸಮಗ್ರ ಮಾಹಿತಿ ಇನ್ನೂ ದೊರಕಿಲ್ಲ. ಸರಾಸರಿ ಒಂದು ಸಾವಿರ ಮೆ.ವಾ. ಸಾಮರ್ಥ್ಯದ ವಿದ್ಯುತ್‍ಗಾಗಿ ಹೊಸ ಅಣೆಕಟ್ಟುಗಳನ್ನು ನಿರ್ಮಿಸುವುದಾದಲ್ಲಿ, ಕನಿಷ್ಠ 200 ಅಣೆಕಟ್ಟುಗಳನ್ನು ಹೊಸದಾಗಿ ಕಟ್ಟಬೇಕಾಗುತ್ತದೆ.
ಅಭಯಾರಣ್ಯಗಳ ದಟ್ಟವಾದ ಕಾಡುಗಳನ್ನು ನಾಶ ಮಾಡಿ ಹಸಿರು ಇಂಧನ ಎಂದು ಕರೆಯಲಾಗುವ ಪಿಎಸ್‍ಪಿ ನಿರ್ಮಿಸುವುದು ಪರಿಸರಸ್ನೇಹಿ ಹೇಗಾಗುತ್ತದೆ? ಇಂಗಾಲವನ್ನು ಹೀರಿಕೊಳ್ಳುವ ಬಲಿತ ಮರಗಳನ್ನು ಹನನ ಮಾಡುವ ಕ್ರಿಯೆಯನ್ನು ಹಸಿರು ಯೋಜನೆ ಎಂದು ಕರೆಯುವುದು ಯಾವ ನೈತಿಕತೆ ಎಂಬುದು ತಜ್ಞರ ಪ್ರಶ್ನೆ. ಅಧ್ಯಯನವೊಂದರ ಪ್ರಕಾರ, ಶೂನ್ಯ ಇಂಗಾಲದ ಗುರಿ ತಲಪಲು ಪಳೆಯುಳಿಕೆ ಇಂಧನಗಳನ್ನು ಭೂಮಿಯಿಂದ ಎತ್ತುವುದನ್ನು ನಿಲ್ಲಿಸುವುದು ಬಹಳ ಮುಖ್ಯವಾಗಿದೆ. ಈಗಾಗಲೇ ಭೂಮಿ ತನ್ನ ಧಾರಣಾ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಯಂತ್ರ ಮತ್ತು ತಂತ್ರಜ್ಞಾನ ಕ್ಷೇತ್ರಗಳೂ ಹೆಚ್ಚು ವಿದ್ಯುತ್ ಬೇಡುತ್ತವೆ. ಈಗಂತೂ ಯಾಂತ್ರಿಕ ಬುದ್ಧಿಮತ್ತೆಯ (ಎಐ) ಕಾಲ. ಮನುಷ್ಯ ಮಾಡುವ ಕೆಲಸಗಳನ್ನು ಯಂತ್ರಗಳೇ ಮಾಡಲು ಹೊರಟಲ್ಲಿ, ವಿದ್ಯುತ್ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ಆದರೆ, ‘ಎಐ’ ಬಳಕೆಯಿಂದ ವಾತಾವರಣದಲ್ಲಿ ಇಂಗಾಲದ ಅಂಶ ಹೆಚ್ಚಬಹುದೇ ಹೊರತು, ಇಂಗಾಲ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವ ಕಾಡುಗಳ ಕೆಲಸವನ್ನು ‘ಎಐ’ ಮಾಡಲು ಸಾಧ್ಯವಿಲ್ಲ.
ಶಿವಮೊಗ್ಗ ಜಿಲ್ಲೆಯ ಸಾಗರದ ಸೈನ್ಸ್ ಫೋರಂನಲ್ಲಿ ಇತ್ತೀಚೆಗೆ ಭಾಷಣ ಸ್ಪರ್ಧೆಯೊಂದು ನಡೆಯಿತು. ವಿಷಯ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾಧಕ ಬಾಧಕಗಳು. ಭಾಗವಹಿಸಿದ ಹೆಚ್ಚಿನವರು ಯೋಜನೆಯ ಬಾಧಕಗಳ ಕುರಿತಾಗಿ ಮಾತನಾಡಿದರು. ಬಹುತೇಕ ಯುವಜನರಿಗೆ ಯೋಜನೆಗೆ ಇರುವ ಪರ್ಯಾಯಗಳ ಕುರಿತ ಮಾಹಿತಿಯ ಕೊರತೆಯಿತ್ತು. ಪಶ್ಚಿಮಘಟ್ಟಗಳ ಅಮೂಲ್ಯ ಕಾಡು, ಜೀವರಾಶಿಯನ್ನು ನಾಶ ಮಾಡುವ ಯೋಜನೆಗಳ ಬದಲಿಗೆ, ವೇಗವಾಗಿ ಮುನ್ನೆಲೆಗೆ ಬರುತ್ತಿರುವ ಬ್ಯಾಟರಿ ಶೇಖರಣಾ ವ್ಯವಸ್ಥೆಯಂಥ ಪರ್ಯಾಯಗಳನ್ನು ನಾವು ಗಮನಿಸಬೇಕು. ವಿದ್ಯುತ್ ಸಂಗ್ರಹ ಮಾಡಿಕೊಂಡು, ಅಗತ್ಯವಿರುವಾಗ ಬಳಕೆ ಮಾಡಲು ಶೇಖರಣಾ ವ್ಯವಸ್ಥೆ ಬೇಕು. ಅದು ಪಂಪ್ಡ್ ಸ್ಟೋರೇಜ್ ಆಗಬಹುದು ಅಥವಾ ಬ್ಯಾಟರಿ ಸ್ಟೋರೇಜ್ ಆಗಬಹುದು. ಈ ಎರಡಕ್ಕೂ ಹೋಲಿಕೆ ಮಾಡಿದರೆ, ಬ್ಯಾಟರಿ ಸ್ಟೋರೇಜ್ ವಿಧಾನವೇ ಅತ್ಯಂತ ಅಗ್ಗ, ಸುರಕ್ಷಿತ ಮತ್ತು ವಿದ್ಯುತ್ ಸೋರಿಕೆಯನ್ನು ಕಡಿಮೆ ಮಾಡುವ ವಿಧಾನ ಎನ್ನುವುದು ತಜ್ಞರ ಲೆಕ್ಕಾಚಾರ. ಭಾರತದ ಮಟ್ಟಿಗೆ ಹೇಳುವುದಾದರೆ, ಬ್ಯಾಟರಿ ಶೇಖರಣಾ ಘಟಕಕ್ಕೆ
ಶೇ 30ರಷ್ಟು ಆರ್ಥಿಕ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆ ಆಗಲಿದೆ.
2016–17 ದಕ್ಷಿಣ ಆಸ್ಟ್ರೇಲಿಯಾಕ್ಕೆ ತೀರಾ ಆಘಾತಕಾರಿಯಾಗಿದ್ದ ವರ್ಷ. ಭಾರೀ ಬಿರುಗಾಳಿಯಿಂದಾಗಿ ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿತ್ತು. ವಿದ್ಯುತ್ ಗ್ರಿಡ್ ಅಸ್ಥಿರತೆಯಿಂದಾಗಿ ಆರ್ಥಿಕವಾಗಿ ದೊಡ್ಡ ಮಟ್ಟದ ಹೊಡೆತ ಬಿದ್ದಿತ್ತು. ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ್ನು ಪರಿಚಯಿಸುವ ಇಲಾನ್ ಮಸ್ಕ್, ಆಸ್ಟ್ರೇಲಿಯಾದಲ್ಲಿ ನಡೆದ ವಿದ್ಯುತ್ ಗಂಡಾಂತರವನ್ನು ಗಂಭೀರವಾಗಿ ಪರಿಗಣಿಸಿದ. ‘ವಿದ್ಯುತ್ ಅಸ್ಥಿರತೆ ಸರಿಪಡಿಸಲು ನೂರು ದಿನಗಳಲ್ಲಿ 100 ಮೆ.ವಾ. ಸಾಮರ್ಥ್ಯದ ಬ್ಯಾಟರಿ ಶೇಖರಣಾ ಘಟಕವನ್ನು ಮಾಡಿಕೊಡುತ್ತೇವೆ. ಗಡುವು ಮೀರಿದರೆ, ನಮಗೆ ಚಿಕ್ಕಾಸೂ ನೀಡಬೇಕಾಗಿಲ್ಲ’ ಎಂದು ಹೇಳಿದ. ಮಸ್ಕ್ ಪ್ರಸ್ತಾವವನ್ನು ಆಸ್ಟ್ರೇಲಿಯಾ ಸರ್ಕಾರ ಒಪ್ಪಿಕೊಂಡಿತು. ‘ಟೆಸ್ಲಾ’ ಕಂಪನಿ ಬರೀ 63 ದಿನಗಳಲ್ಲಿ ವಿಶ್ವದ ಮಹಾ ಬ್ಯಾಟರಿಯನ್ನು ತಯಾರು ಮಾಡಿ, ಸರ್ಕಾರಕ್ಕೆ ವಹಿಸಿಕೊಟ್ಟಿತು. ಅದು ವಿಶ್ವದಲ್ಲಿ ಸಂಚಲನ ಸೃಷ್ಟಿ ಮಾಡಿತು. ಗ್ರಿಡ್ ಅಸ್ಥಿರತೆಯಿಂದ ಬಳಲುತ್ತಿದ್ದ ಆಸ್ಟ್ರೇಲಿಯಾ ಸರ್ಕಾರಕ್ಕೆ ಲಕ್ಷಾಂತರ ಡಾಲರ್ ಉಳಿತಾಯವಾಯಿತು.
ಆಸ್ಟ್ರೇಲಿಯಾದ ವಿದ್ಯುತ್ ಗ್ರಿಡ್ ವಿಶ್ವದಲ್ಲೇ ಅತ್ಯಂತ ಆಧುನಿಕ ಮತ್ತು ನವೀನ ಶಕ್ತಿಗೆ ಸೂಕ್ತವಾಗಿರುವ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆ ಗ್ರಿಡ್ ತಾಂತ್ರಿಕ ಸಾಧನೆಯಷ್ಟೇ ಅಲ್ಲ, ನವೀನ ಶಕ್ತಿಯ ಭವಿಷ್ಯಕ್ಕೆ ದಾರಿದೀಪವಾಗಿದೆ. ದೊಡ್ಡ ಪ್ರಮಾಣದ ಬ್ಯಾಟರಿ ಸಂಗ್ರಹಣಾ ಘಟಕಗಳು ಪವನಶಕ್ತಿ, ಸೌರಶಕ್ತಿ ಇತ್ಯಾದಿ ನವೀಕರಿಸಬಹುದಾದ ಇಂಧನವನ್ನು ವಿಶ್ವಾಸಾರ್ಹವಾಗಿ ಬಳಸುವ ದಾರಿಯನ್ನು ತೋರಿಸಿದವು. ಅಮೆರಿಕ, ಯುರೋಪ್, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಬೃಹತ್ ಬ್ಯಾಟರಿ ಸಂಗ್ರಹಣಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರಾರಂಭಿಸಿದವು. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಈ ಮಹಾಯೋಜನೆ ವಿಶ್ವದ ಪರಿಸರ ರಾಜಕೀಯ ಮತ್ತು ಭವಿಷ್ಯದ ಇಂಧನ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದೆ.
ಮಧ್ಯಪ್ರದೇಶದಲ್ಲಿ ಖಾಸಗಿ ಕಂಪನಿಯೊಂದು ₹2.70ಕ್ಕೆ ಒಂದು ಯೂನಿಟ್ ಸೌರ ಮತ್ತು ಬ್ಯಾಟರಿ ವಿದ್ಯುತ್ ಅನ್ನು ಸರ್ಕಾರಕ್ಕೆ ನೀಡಲು ಮುಂದಾಗಿದೆ. ಭಾರತದ ವಿದ್ಯುತ್ ಸಮಸ್ಯೆಗೆ ಈ ಪ್ರಸ್ತಾವ ಆಶಾದಾಯಕ ಬೆಳವಣಿಗೆಯಾಗಿದೆ.
ಮತ್ತೆ ಅಣೆಕಟ್ಟುಗಳ ವಿಷಯಕ್ಕೆ ಬರೋಣ. ಅರಣ್ಯ ಪ್ರದೇಶಗಳನ್ನು ಮುಳುಗಿಸಿ ಅಣೆಕಟ್ಟುಗಳನ್ನು ನಿರ್ಮಿಸುವುದು ನೀರಾವರಿಗಿರಲಿ ಅಥವಾ ವಿದ್ಯುತ್ ಉತ್ಪಾದನೆಗಿರಲಿ, ಈ ಹೊತ್ತಿನ ಜಾಗತಿಕ ಸಂಕಷ್ಟಗಳಿಗೆ ಪರಿಹಾರವಾಗಲಾರದು. ಕಾವೇರಿ ಅಭಯಾರಣ್ಯ ಪ್ರದೇಶದಲ್ಲಿ 11 ಸಾವಿರ ಎಕರೆ ವನ್ಯಜೀವಿ ನೆಲೆಯನ್ನು ಮುಳುಗಿಸಿ ಮೇಕೆದಾಟು ಅಣೆಕಟ್ಟು ನಿರ್ಮಿಸುವುದು ಮತ್ತಷ್ಟು ಪಾರಿಸರಿಕ ಸಮಸ್ಯೆಗಳಿಗೆ ಕಾರಣವಾಗಲಿದೆ. ಕಳೆದ ಐದು ವರ್ಷಗಳಲ್ಲಿ 99 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಪ್ರದೇಶಕ್ಕೆ ಬಳಸಲಾಗಿದೆ ಎಂದು ಕೇಂದ್ರ ಸಚಿವ ಕೀರ್ತಿವರ್ಧನ್ ಹೇಳಿರುವ ಮಾಹಿತಿಯನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿದೆ.