ವಿಶ್ಲೇಷಣೆ: ಸರ್ಕಾರಿ ಶಾಲೆ.. ಕಲಿಕೆಯ ಸೆಲೆ!
ಕ್ಯಾಂಪಸ್ ಸಂದರ್ಶನದ ವೇಳೆಯಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದ ವಿದ್ಯಾರ್ಥಿಯೊಬ್ಬ ಸಂದರ್ಶಕ ಸಮಿತಿ ಸದಸ್ಯರ ಮೇಲೆ ಕೂಗಾಡುತ್ತಿದ್ದ. ‘ಯಾಕೆ ಕೂಗಾಡುತ್ತಿದ್ದೀರಿ? ಏನಾಯಿತು?’ ಎಂದು ಪ್ರಾಂಶುಪಾಲರು ಕೇಳಿದರು. ‘ನೋಡಿ ಸರ್, ಇವರು ಕೇಳಿದ ಪ್ರಶ್ನೆಯೊಂದಕ್ಕೆ ನಾನು ಉತ್ತರಿಸಲಿಲ್ಲ. ಅದಕ್ಕೆ, ನೀವು ಕೋವಿಡ್ ಬ್ಯಾಚ್‌ನವರ ಅಂತ ಕೇಳಿ ಅವಮಾನಿಸುತ್ತಿದ್ದಾರೆ’ ಎಂದ.
ಕಂಪನಿಯವರು ‘ಸರ್, ನಾವೇನು ಸಂಕೀರ್ಣ ಪ್ರಶ್ನೆಯನ್ನು ಕೇಳಲಿಲ್ಲ, ತುಂಬಾ ಬೇಸಿಕ್ ಆದ ಮತ್ತು ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನೇ ಕೇಳಿದ್ದೆವು. ಆತನಿಂದ ಉತ್ತರ ಬರಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಲು ಹೇಳಿದೆವು. ಆದರೆ ಆತ ಅದಕ್ಕೆ ತಯಾರಿರಲಿಲ್ಲ. ನಮ್ಮ ಅನುಭವದಂತೆ, ಸಾಮಾನ್ಯವಾಗಿ ಕೋವಿಡ್‌ನ ದಿನಗಳಲ್ಲಿ ಪದವಿ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ತಮಗೆ ಉತ್ತರ ತಿಳಿಯದು ಎಂದು ಸುಮ್ಮನಾಗಿಬಿಡುತ್ತಾರೆ. ಕೋವಿಡ್-19 ಅವಧಿಯಲ್ಲಿ ಸರಿಯಾದ ತರಗತಿ ಪಾಠಗಳು ನಡೆಯದೆ ಕಲಿಕೆ ಸಾಧ್ಯವಾಗಿರಲಿಕ್ಕಿಲ್ಲ ಎಂಬ ಅರ್ಥದಲ್ಲಿ ಆ ಪ್ರಶ್ನೆ ಕೇಳಿದೆವೇ ವಿನಾ ಅವಮಾನಿಸುವ ಯಾವ ಉದ್ದೇಶವೂ ಇರಲಿಲ್ಲ’ ಎಂದರು.
‘ತರಗತಿ ಪಾಠಗಳು ನಡೆಯದಿದ್ದರೆ ನಮ್ಮದೇನು ತಪ್ಪು? ನಾವೇನು ಕಾಲೇಜು ನಡೆಸಬೇಡಿ ಅಂತ ಕೇಳಿಕೊಂಡಿದ್ದೆವಾ? ಗ್ರಾಮೀಣ ಪ್ರದೇಶದ ನಮ್ಮಂತಹವರಿಗೆ ಕಲಿಕೆಯ ಎಲ್ಲ ದಾರಿಗಳೂ ಮುಚ್ಚಿಹೋಗಿದ್ದವು. ಅದು ನಮ್ಮ ತಪ್ಪೇ?’ ಎಂದು ಮರುಪ್ರಶ್ನೆ ಮಾಡಿದ. ಅಭ್ಯರ್ಥಿಗೆ ಪ್ರಶ್ನೆಯ ಹಿಂದಿನ ತರ್ಕವನ್ನು ವಿವರಿಸಿ ‘ನಿಮ್ಮ ಸಿಟ್ಟು ಸಹಜ, ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಕೋವಿಡ್‌ನಿಂದ ಎಲ್ಲ ಹಂತದ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಇದಕ್ಕೆ ನೀವು ಹೊರತಲ್ಲ’ ಎಂದು ಪ್ರಾಂಶುಪಾಲರು ಸಮಾಧಾನ ಹೇಳಿದರು.
ಇದಾದ ಮರುವಾರವೇ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಶಿಕ್ಷಣದ ಸ್ಥಿತಿಗತಿ ಕುರಿತ ವಾರ್ಷಿಕ ವರದಿ (ಎಎಸ್ಇಆರ್) ಹೊರಬಂತು. ಅದರ ಪ್ರಕಾರ, ಕೋವಿಡ್ ದಿನಗಳಲ್ಲಿ ಕುಸಿದುಹೋಗಿದ್ದ ವಿದ್ಯಾರ್ಥಿಗಳ ಕಲಿಕಾ ಕ್ಷಮತೆಯಲ್ಲಿ ನಂತರದ ವರ್ಷಗಳಲ್ಲಿ ಏರುಗತಿ ಕಂಡುಬಂದಿದೆ. ಖುಷಿಯ ವಿಷಯವೆಂದರೆ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಎರಡು ಹೆಜ್ಜೆ ಮುಂದೆ ಇದ್ದಾರೆ! ಕಲಿಕೆಯ ವಿಷಯದಲ್ಲಿ ಕೋವಿಡ್‌ನ ಅಡ್ಡಪರಿಣಾಮಗಳನ್ನು ಎದುರಿಸುವಲ್ಲಿ ಖಾಸಗಿ ಶಾಲೆಯ ಮಕ್ಕಳಿಗಿಂತ ಸರ್ಕಾರಿ ಶಾಲೆಯ ಮಕ್ಕಳು ತುಸು ಹೆಚ್ಚೇ ಸಮರ್ಥರು. ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಯೂ ಪ್ರಗತಿಯಲ್ಲಿದ್ದು ಆತಂಕಪಡುವಂತಹದ್ದೇನೂ ಇಲ್ಲ ಎಂಬುದು ವರದಿಯ ಸಾರಾಂಶ.
ಸ್ವಯಂಸೇವಾ ಸಂಸ್ಥೆ ಪ್ರಥಮ್, ದೇಶದ 605 ಜಿಲ್ಲೆಗಳ 5 ವರ್ಷದಿಂದ 16 ವರ್ಷದೊಳಗಿನ ಸುಮಾರು ಆರೂವರೆ ಲಕ್ಷ ವಿದ್ಯಾರ್ಥಿಗಳ ಕಲಿಕಾ ಕ್ಷಮತೆ ಕುರಿತ ಸಮೀಕ್ಷೆ ನಡೆಸಿದೆ. ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಕಗಣಿತದ ಸಾಮಾನ್ಯ ಪ್ರಶ್ನೆಗಳನ್ನು ಬಿಡಿಸುವ, ಮೂರಂಕಿಯ ಸಂಖ್ಯೆಗಳನ್ನು ಭಾಗಿಸುವ ಮತ್ತು ಎರಡನೇ ತರಗತಿಯ ಪುಸ್ತಕಗಳಲ್ಲಿರುವ ಪ್ಯಾರಾಗ್ರಾಫ್‌ಗಳನ್ನು ಸರಾಗವಾಗಿ ಓದಲು ಬರುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗಿತ್ತು. ಈ ಮೂರೂ ವಿಭಾಗಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಕ್ಷಮತೆಯು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿದೆ. ಈ ವಿಷಯವು ಸರ್ಕಾರಿ ಶಾಲೆಗಳ ಶಿಕ್ಷಕ ಸಮುದಾಯದ ಮನೋಬಲವನ್ನು ಹೆಚ್ಚಿಸಿದೆ.
ಕರ್ನಾಟಕ, ಮಧ್ಯಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ ಎಂಬ ಅಂಶವು ವರದಿಯಲ್ಲಿ ಉಲ್ಲೇಖಗೊಂಡಿದೆ. ಈ ರಾಜ್ಯಗಳ ಖಾಸಗಿ ಶಾಲೆಯ ವಿದ್ಯಾರ್ಥಿಗಳ ಪ್ರಗತಿಯು ಸರ್ಕಾರಿ ಶಾಲೆಯ ಮಕ್ಕಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಇದೆ. ಛತ್ತೀಸ್‌ಗಢ ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಶಾಲೆ ಈ ಎರಡೂ ವಲಯಗಳಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಬಹುದೊಡ್ಡ ಅಚ್ಚರಿ ಎಂದರೆ, ಕೇರಳ ರಾಜ್ಯದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ!
2018ರಲ್ಲಿ, ಪಠ್ಯವನ್ನು ಓದಬಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪ್ರಮಾಣ ಶೇಕಡ 44.2ರಷ್ಟಿತ್ತು. 2022ರಲ್ಲಿ ಅದು ಶೇ 38.5ಕ್ಕೆ ಕುಸಿದಿತ್ತು. 2024ರಲ್ಲಿ ಅದರ ಪ್ರಮಾಣ ಶೇ 44.8ರಷ್ಟು ಆಗಿದೆ. ಅಂದರೆ ಕೋವಿಡ್ ದಿನಗಳಲ್ಲಿ ಇದ್ದುದಕ್ಕಿಂತ ಹೆಚ್ಚಾಗಿದೆ. ಮೂರಂಕಿಯ ಸಂಖ್ಯೆಗಳನ್ನು ಭಾಗಿಸುವ ಕ್ಷಮತೆಯ ವಿಷಯದಲ್ಲಿ 2018ರ ವೇಳೆಗೆ ಶೇ 22.7ರಷ್ಟಿದ್ದ ಪ್ರಮಾಣವು 2022ರ ವೇಳೆಗೆ ಅಲ್ಪ ಕುಸಿತ ಕಂಡು ಶೇ 21.6 ಆಗಿತ್ತು. ನಂತರ 2024ರ ವೇಳೆಗೆ ಶೇ 26.5 ತಲುಪಿದ್ದು, ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ.
ಕೋವಿಡ್‌ಗಿಂತ ಮುಂಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಕ್ಷಮತೆಯು ಶೇ 65.1ರಷ್ಟಿತ್ತು. ಕೋವಿಡ್ ದಿನಗಳಲ್ಲಿ ಈ ಪ್ರಮಾಣವು ಶೇ 8.3ರಷ್ಟು ಕುಸಿತ ಕಂಡು 2022ಕ್ಕೆ ಶೇ 56.8ಕ್ಕೆ ಇಳಿದಿತ್ತು. 2024ರ ವೇಳೆಗೆ ಶೇ 59.3 ತಲುಪಿದ್ದು ಏರಿಕೆ ಪ್ರಮಾಣ ಶೇ 2.5 ಮಾತ್ರ. ಅಂಕಗಣಿತದ ಸಮಸ್ಯೆಗಳನ್ನು ಬಿಡಿಸುವ ವಿಷಯದಲ್ಲಿ ವಿದ್ಯಾರ್ಥಿಗಳ ಸಾಧನೆಯು ಕೋವಿಡ್ ಪೂರ್ವ ದಿನಗಳಲ್ಲಿ ಇದ್ದುದಕ್ಕಿಂತ ಏರಿಕೆ ಕಂಡಿದೆ.
ಖಾಸಗಿ ಶಾಲೆಗಳು ಜಿಲ್ಲೆ, ಪಟ್ಟಣ ಪ್ರದೇಶ, ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳೆನ್ನದೆ, ಸರಿಯಾದ ಮೂಲ ಸೌಕರ್ಯಗಳು ಇಲ್ಲದಿದ್ದರೂ ಎಲ್ಲೆಂದರಲ್ಲಿ ಅಸ್ತಿತ್ವಕ್ಕೆ ಬರುತ್ತವೆ. ಆಧುನಿಕ ಕಲಿಕಾ ಸೌಲಭ್ಯ ಕಲ್ಪಿಸಿದ್ದೇವೆ, ಇಂಟರ್ನೆಟ್ ಆಧರಿತ ಶಿಕ್ಷಣ ನೀಡುತ್ತೇವೆ, ವೈಯಕ್ತಿಕ ಗಮನ ನೀಡುತ್ತೇವೆ ಎಂದೆಲ್ಲ ಹೇಳಿಕೊಂಡು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುತ್ತವೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿರುವ ಬಹುತೇಕ ಪೋಷಕರು ಹೆಚ್ಚಿನ ಶುಲ್ಕ ನೀಡಿ ಆ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಾರೆ.
ನುರಿತ ಅಧ್ಯಾಪಕರು, ಚಂದದ ಸಮವಸ್ತ್ರ, ಬಸ್ ಸೌಲಭ್ಯ, ಖ್ಯಾತ ಕ್ರೀಡಾಪಟುಗಳಿಂದ ಕ್ರೀಡಾ ತರಬೇತಿ... ಹೀಗೆ ಹತ್ತು ಹಲವು ಆಕರ್ಷಣೆಗಳೊಂದಿಗೆ ಪೋಷಕರನ್ನು ಸೆಳೆಯುವ ಖಾಸಗಿ ಶಾಲೆಗಳು, ಮಕ್ಕಳ ಕಲಿಕೆ ವೃದ್ಧಿಸುವಲ್ಲಿ ವಿಫಲವಾಗಿರುವುದು ಅಚ್ಚರಿಯ ಸಂಗತಿ ಎನಿಸಿದೆ. ಹಿಂದಿನ ಒಂದು ದಶಕದಲ್ಲಿ ಶೇಕಡ 80ರಷ್ಟು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಗ್ರಂಥಾಲಯ, ಬಳಕೆಯೋಗ್ಯ ಶೌಚಾಲಯ, ವಿದ್ಯುತ್ ಸಂಪರ್ಕ, ಆಟದ ಮೈದಾನಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಿವೆ. ಅಂಗವಿಕಲರಿಗೆ ಬೇಕಾದ ಏರಿಳಿಯುವ ಹಾದಿಗಳು (ರ್‍ಯಾಂಪ್) ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಹೆಚ್ಚಾಗಿವೆ ಎಂಬ ವಿಚಾರ ವರದಿಯಲ್ಲಿದೆ. ಹತ್ತು ವರ್ಷಗಳ ಹಿಂದೆ ಬರೀ ಶೇ 45ರಷ್ಟು ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಇತ್ತು. ಈಗ ಆ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ ಕಂಪ್ಯೂಟರ್, ಇಂಟರ್ನೆಟ್ ಮತ್ತು ಮಳೆನೀರು ಸಂಗ್ರಹದ ಅನುಕೂಲಗಳು ಬೇಕಾದ ಪ್ರಮಾಣದಲ್ಲಿ ಇಲ್ಲ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇನ್ನಷ್ಟು ನೆರವಾಗಲು ಹಿಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ತನ್ನ ಅಧೀನಕ್ಕೆ ಒಳಪಡುವ ಶಾಲೆಗಳಲ್ಲಿ ಐದು ಮತ್ತು ಎಂಟನೆಯ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ಪದ್ಧತಿಯನ್ನು ತೆಗೆದುಹಾಕಿದೆ. ಶಾಲಾ ವಿದ್ಯಾರ್ಥಿಗಳನ್ನು ಕಲಿಕೆಯಿಂದ ವಿಮುಖವಾಗಿಸುವ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವುದು ಅಪೇಕ್ಷಣೀಯವಲ್ಲ ಮತ್ತು ಸಂಪೂರ್ಣ ನಿಷೇಧ ಅಸಾಧ್ಯ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗಷ್ಟೇ ಹೇಳಿದೆ. ಎಎಸ್ಇಆರ್ ವರದಿಯ ಪ್ರಕಾರ, ದೇಶದ ಶೇಕಡ 57ರಷ್ಟು ಮಕ್ಕಳು ಮಾತ್ರ ಶಿಕ್ಷಣ ಸಂಬಂಧಿತ ವಿಷಯಗಳಿಗಾಗಿ ಮೊಬೈಲ್ ಫೋನ್ ಬಳಕೆ ಮಾಡುತ್ತಾರೆ. ಇವರೂ ಸೇರಿದಂತೆ ಒಟ್ಟಾರೆ ಶೇಕಡ 76ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ಕೋವಿಡ್– 19ರ ದಿನಗಳಲ್ಲಿ ಶಾಲೆ– ಕಾಲೇಜುಗಳನ್ನು ಪ್ರವೇಶಿಸಿದ ಡಿಜಿಟಲ್ ಮಾಧ್ಯಮ ಆಧಾರಿತ ಶಿಕ್ಷಣದಿಂದ ಕಲಿಕಾ ಪ್ರಗತಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಯುನೆಸ್ಕೊ ಹೇಳಿತ್ತು. ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಬೇಕು ಎಂದು ಎರಡು ವರ್ಷಗಳ ಹಿಂದೆಯೇ ಕಟ್ಟುನಿಟ್ಟಾಗಿ ತಿಳಿಸಿತ್ತು. ಇದಲ್ಲದೆ ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡಿದ ಸರ್ಕಾರಗಳು ಎಳೆಯರ ದತ್ತಾಂಶ ಕಾಪಾಡುವಲ್ಲಿ ವಿಫಲವಾಗಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದಿತ್ತು.
ಇರಲಿ, ಒಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ ಎಂದರೆ ನಮ್ಮ ಸರ್ಕಾರಿ ಶಾಲೆಗಳು ಚೆನ್ನಾಗಿವೆ ಎಂದರ್ಥ. ಆದರೂ ಇದು ಸಾಲದು. ಅರ್ಧಕ್ಕರ್ಧ ಸಂಖ್ಯೆಯ ವಿದ್ಯಾರ್ಥಿಗಳು ಕಲಿಕೆಯಲ್ಲಿ ಇನ್ನೂ ಹಿಂದುಳಿದಿದ್ದಾರೆ. ಅವರ ಕಲಿಕೆಗೂ ಆದ್ಯತೆ ದೊರಕಬೇಕು. ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುವ ಕಾರ್ಯವನ್ನು ಮೊದಲು ನಿಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.