ಮನ್ಸುಖ್ ಮಾಂಡವೀಯ
ಭಾರತ 2047ಕ್ಕೆ ತನ್ನ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಸಮೀಪಿಸುತ್ತಿರುವಂತೆಯೇ, ನಮ್ಮ ಯುವಜನತೆ ವಿಕಸಿತ ಭಾರತ ನಿರ್ಮಾಣದ ನಮ್ಮ ಅಭಿಯಾನದ ಮುಂಚೂಣಿಯಲ್ಲಿ ನಿಂತಿದ್ದಾರೆ. ಗೌರವಾನ್ವಿತ ಪ್ರಧಾನಮಂತ್ರಿ ಅವರ ಯಾವುದೇ ರಾಜಕೀಯ ಹಿನ್ನೆಲೆಯಿರದ ಒಂದು ಲಕ್ಷ ಯುವಜನತೆಯನ್ನು ರಾಜಕೀಯದಲ್ಲಿ ತೊಡಗಿಸಬೇಕೆಂಬ ಸ್ಪಷ್ಟ ಕರೆಯಿಂದ ಯುವಜನ ಪ್ರೇರಿತರಾಗುವ ಮೂಲಕ ನಾವು ರಾಷ್ಟ್ರೀಯ ಯುವ ಉತ್ಸವವನ್ನು ಮರು ವಿನ್ಯಾಸಗೊಳಿಸಿ ಅದಕ್ಕೆ 'ವಿಕಸಿತ ಭಾರತ ಯುವ ನಾಯಕರ ಸಂವಾದ 2025' ಎಂಬ ಅದ್ಭುತ ಕಾರ್ಯಕ್ರಮ ರೂಪಿಸಿದ್ದೇವೆ. ಈ ಸಂವಾದ ಕೇವಲ ಒಂದು ಕಾರ್ಯಕ್ರಮವಲ್ಲ, ಇದೊಂದು ಚಳವಳಿ ಹಾಗೂ ಭಾರತದ ದೂರದೃಷ್ಟಿಯಾದ 'ವಿಕಸಿತ ಭಾರತ'ಕ್ಕೆ ಅನುಗುಣವಾಗಿ ಹೊಂದಿಕೊಳ್ಳುವ ಯುವಶಕ್ತಿ, ನಾಯಕತ್ವ ಮತ್ತು ಕಾರ್ಯರೂಪಗೊಳಿಸುವಂತಹ ಚಿಂತನೆಗಳ ಅದ್ಧೂರಿ ಆಚರಣೆಯಾಗಲಿದೆ.
ರಾಷ್ಟ್ರೀಯ ಯುವ ಉತ್ಸವದ ಪುನರ್ ಕಲ್ಪನೆ
ಎರಡು ದಶಕಗಳಿಗೂ ಅಧಿಕ ಕಾಲ, ರಾಷ್ಟ್ರೀಯ ಯುವ ಉತ್ಸವವು ಸಾಂಸ್ಕೃತಿಕ ವಿನಿಮಯ ಮತ್ತು ಯುವ ಶಕ್ತಿಯ ಸಂಕೇತವಾಗಿದೆ. ಆದರೆ ಈ ವರ್ಷ ನಾವು ವಿಭಿನ್ನವಾಗಿ ಯೋಚಿಸಲು ಧೈರ್ಯ ಮಾಡಿದೆವು. 2024ರ ನವೆಂಬರ್ 18ರಂದು ನಾವು ಉತ್ಸವದ ಕ್ರಾಂತಿಕಾರಿ ರೂಪಾಂತರವನ್ನು ಘೋಷಿಸಿದ್ದೇವೆ, ನಾಯಕತ್ವ, ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣವನ್ನು ಅದರ ಮೂಲದಲ್ಲಿ ಸೇರಿಸಿದ್ದೇವೆ.
ಈ ಪುನರ್ ವಿಮರ್ಶೆಯ ಕೇಂದ್ರಬಿಂದು ವಿಕಸಿತ ಭಾರತ ಚಾಲೆಂಜ್, ಇದು ಭಾರತದ ಪ್ರಕಾಶಮಾನ ಮನಸ್ಸುಗಳನ್ನು ಗುರುತಿಸಲು ಮತ್ತು ಪೋಷಿಸಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ಮೂರು ಹಂತದ ಸ್ಪರ್ಧೆಯಾಗಿದೆ. ಈ ಸವಾಲು ಅರ್ಹತೆ, ಒಳಗೊಳ್ಳುವಿಕೆ ಮತ್ತು ಪಾರದರ್ಶಕತೆಯಲ್ಲಿ ಬೇರೂರಿದೆ. ಭೌಗೋಳಿಕತೆ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಪ್ರತಿಯೊಬ್ಬ ಯುವ ಭಾರತೀಯನಿಗೂ ಕೊಡುಗೆ ನೀಡಲು ಸಮಾನ ಅವಕಾಶವಿದೆ ಎಂಬುದನ್ನು ಇದು ಖಾತ್ರಿಪಡಿಸುತ್ತದೆ.
ಮೊದಲ ಹಂತದ ವಿಕಸಿತ ಭಾರತ ರಸಪ್ರಶ್ನೆಯಲ್ಲಿ ದೇಶಾದ್ಯಂತ ಸುಮಾರು 3 ಮಿಲಿಯನ್ ಯುವಕರು ಭಾಗವಹಿಸಿದ್ದರು. 12 ಭಾಷೆಗಳಲ್ಲಿ ನಡೆಸಲಾದ ಇದು ಕಳೆದ ದಶಕಗಳಲ್ಲಿ ಭಾರತದ ಪ್ರಗತಿಯ ಬಗ್ಗೆ ಅವರ ಜ್ಞಾನವನ್ನು ಪರೀಕ್ಷಿಸಿತು ಹಾಗೂ ಒಳಗೊಳ್ಳುವಿಕೆ ಮತ್ತು ಲಭ್ಯತೆಯನ್ನು ಖಾತ್ರಿಪಡಿಸಿತು.
ಎರಡನೇ ಹಂತವಾದ ವಿಕಸಿತ ಭಾರತ ಪ್ರಬಂಧ ಸ್ಪರ್ಧೆಯು ಭಾಗವಹಿಸುವವರು ಜ್ವಲಂತ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಲು ಪ್ರೋತ್ಸಾಹಿಸಿತು. ಅಭಿವೃದ್ಧಿಗಾಗಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು, ಸುಸ್ಥಿರತೆಯನ್ನು ಅಳವಡಿಸಿಕೊಳ್ಳುವುದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡುವಂತಹ ಹತ್ತು ವಿಷಯಾಧಾರಿತ ಕ್ಷೇತ್ರಗಳನ್ನು ಅನ್ವೇಷಿಸುವ ಎರಡು ಲಕ್ಷಕ್ಕೂ ಅಧಿಕ ಪ್ರಬಂಧಗಳನ್ನು ಸಲ್ಲಿಸಲಾಯಿತು. ತಜ್ಞರ ಸಮಿತಿಗಳಿಂದ ಮೌಲ್ಯಮಾಪನ ಮಾಡಲ್ಪಟ್ಟ ಈ ಪ್ರಬಂಧಗಳು ನಮ್ಮ ಯುವಕರ ಸೃಜನಶೀಲತೆ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸ್ವಂತಿಕೆಯ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸಿದವು.
ಅಂತಿಮ ಹಂತದ ವಿಕಸಿತ ಭಾರತ ವಿಷನ್ ಡೆಕ್ ಸ್ಪರ್ಧೆಯು, ಉನ್ನತ ಸ್ಪರ್ಧಿಗಳನ್ನು ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗಳಾಗಿ ಮಾಡಿತು. ಇಲ್ಲಿ ಯುವ ನಾಯಕರು, ವಿಷಯ ತಜ್ಞರು ಮತ್ತು ನಾಯಕತ್ವ ಮಾಡರೇಟರ್‌ಗಳ ಸಮಿತಿಗಳಿಗೆ ನವೀನ ವಿಚಾರಗಳನ್ನು ಪ್ರಸ್ತುತಪಡಿಸಿದರು. ಈ ಹಂತವು ಯುವ ಭಾರತೀಯರು ಸ್ಥಳೀಯವಾಗಿ ಕಾರ್ಯನಿರ್ವಹಿಸುವಾಗ ಜಾಗತಿಕವಾಗಿ ಯೋಚಿಸುತ್ತಾರೆನ್ನುವ ಸಾಮರ್ಥ್ಯವನ್ನು ಪ್ರದರ್ಶಿಸಿತು ಮತ್ತು ಜನಸಾಮಾನ್ಯರ ದೂರದೃಷ್ಟಿಗಳು ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಒತ್ತಿ ಹೇಳಿತು.
ಈ ಹಂತಗಳ ಮೂಲಕದ ಪ್ರಯಾಣವು ಸ್ಥಿತಿಸ್ಥಾಪಕತ್ವ ಮತ್ತು ದೃಢಸಂಕಲ್ಪದ ಸ್ಪೂರ್ತಿದಾಯಕ ಕಥೆಗಳಿಂದ ಗುರುತಿಸಲ್ಪಟ್ಟಿದೆ. ಈಶಾನ್ಯದ ಬೆಟ್ಟಗಳಿಂದ ಹಿಡಿದು ರಾಜಸ್ಥಾನ ಮತ್ತು ಗುಜರಾತ್‌ನ ಹಳ್ಳಿಗಳವರೆಗೆ ಮತ್ತು ತಮಿಳುನಾಡಿನ ಕರಾವಳಿ ಪಟ್ಟಣಗಳವರೆಗೆ, ಯುವ ನಾಯಕರು ಸಾಮಾಜಿಕ ಅಡೆತಡೆಗಳು, ಸಾಗಣೆ ಸವಾಲುಗಳು ಮತ್ತು ವೈಯಕ್ತಿಕ ಕಷ್ಟಗಳನ್ನು ನಿವಾರಿಸಿಕೊಂಡು ವಿಕಸಿತ ಭಾರತ - ಒಂದು ಭಾರತಕ್ಕಾಗಿ ತಮ್ಮ ದೂರದೃಷ್ಟಿಗಳನ್ನು ಪ್ರಸ್ತುತಪಡಿಸುವುದನ್ನು ನಾವು ಕಂಡಿದ್ದೇವೆ.
ಭವ್ಯ ಸಂವಾದ: ಐತಿಹಾಸಿಕ ಜನ ಭಾಗಿದಾರಿ
2025ರ ಜನವರಿ 10ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಅಧಿಕೃತವಾಗಿ ಆರಂಭವಾದ ವಿಕಸಿತ ಭಾರತ ಯುವನಾಯಕರ ಸಂವಾದದಲ್ಲಿ ಒಟ್ಟಾರೆ ಸುಮಾರು 3 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದು, ಇದೊಂದು ಐತಿಹಾಸಿಕ ಒಗ್ಗೂಡುವಿಕೆಯಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಚಾಂಪಿಯನ್‌ಶಿಪ್‌ಗಳ ಅಗ್ರ 500 ತಂಡಗಳನ್ನು ಪ್ರತಿನಿಧಿಸುವ ವಿಕಸಿತ ಭಾರತ ಚಾಲೆಂಜ್ ಮಾರ್ಗದಿಂದ 1,500 ಭಾಗವಹಿಸುವವರು, ರಾಜ್ಯ ಮಟ್ಟದ ಯುವ ಉತ್ಸವಗಳಿಂದ ಆಯ್ಕೆಯಾದ ಪ್ರದರ್ಶನಗಳ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಮಾರ್ಗದಿಂದ 1,000 ಭಾಗವಹಿಸುವವರು ಮತ್ತು 500 ಪಾತ್ ಬ್ರೇಕರ್‌ಗಳು, ವಿಷಯಾಧಾರಿತ ಟ್ರ್ಯಾಕ್‌ಗಳಲ್ಲಿ ಕೊಡುಗೆಗಳು ನೀಡುವಂತಹ ತಮ್ಮ ಮಹತ್ವದ ಕೊಡುಗೆ ನೀಡಲು ಆಯ್ಕೆಯಾದ ಟ್ರೈಲ್‌ಬ್ಲೇಜರ್‌ಗಳು ಸೇರಿದ್ದಾರೆ.
ಸಂವಾದದಲ್ಲಿ ಭಾಗವಹಿಸುವವರು ಸಾಂಸ್ಕೃತಿಕ ಮತ್ತು ವಿಷಯಾಧಾರಿತ ಪ್ರಸ್ತುತಿಗಳು, ಸ್ಪರ್ಧೆಗಳು ಮತ್ತು ಪ್ರಧಾನಮಂತ್ರಿ ಸಂಗ್ರಹಾಲಯ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕದಂತಹ ಪ್ರತಿಷ್ಠಿತ ತಾಣಗಳ ಭೇಟಿ ಹಾಗೂ ವಿಹಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿವಿಧ ಕೇಂದ್ರ ಸಚಿವರು ಮತ್ತು ಸಂಸತ್ ಸದಸ್ಯರೊಂದಿಗೆ ವಿಶೇಷ ಭೋಜನಕೂಟವು ಅನೌಪಚಾರಿಕ ಸಂವಾದಕ್ಕೆ ಅಪರೂಪದ ವೇದಿಕೆ ಒದಗಿಸುತ್ತದೆ, ಇದು ನೀತಿ ನಿರೂಪಣಾ ಒಳನೋಟಗಳೊಂದಿಗೆ ಯುವಕರ ಆಕಾಂಕ್ಷೆಗಳನ್ನು ಬೆಸೆಯುತ್ತದೆ.
ಜನವರಿ 11 ರಂದು ರಾಷ್ಟ್ರೀಯ ಐಕಾನ್‌ಗಳು, ಚಿಂತನಾ ನಾಯಕರು ಮತ್ತು ನಾವೀನ್ಯಕಾರರನ್ನು ಒಳಗೊಂಡ ಭವ್ಯವಾದ ಉದ್ಘಾಟನಾ ಗೋಷ್ಠಿಯೊಂದಿಗೆ ಸಂವಾದವು ವೇಗ ಪಡೆಯುತ್ತದೆ. ಈ ಉನ್ನತ ಮಟ್ಟದ ಚರ್ಚೆಯು, ಮಾರ್ಗದರ್ಶಕರು ಮತ್ತು ವಿಷಯ ತಜ್ಞರ ನೇತೃತ್ವದಲ್ಲಿ ಹತ್ತು ನಿರ್ಣಾಯಕ ಮಾರ್ಗಗಳಲ್ಲಿ ವಿಷಯಾಧಾರಿತ ಚರ್ಚೆಗಳಿಗೆ ವೇದಿಕೆಯನ್ನು ಸನ್ನದ್ಧಗೊಳಿಸುತ್ತದೆ.
ಭಾರತದ ಕಲಾತ್ಮಕ ಪರಂಪರೆಯನ್ನು ಪ್ರದರ್ಶಿಸುವ ಮತ್ತು ನಮ್ಮ ಯುವಕರ ಅಪರಿಮಿತ ಸಾಮರ್ಥ್ಯವನ್ನು ಸಂಕೇತಿಸುವ 'ವಿಕಸಿತ ಭಾರತ ಕಲರ್ಸ್' ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಸಂಜೆ ಜೀವ ತುಂಬಲಾಗುವುದು. ಈ ದಿನವು ಬೌದ್ಧಿಕ ಪ್ರಚೋದನೆ ಮತ್ತು ಸಾಂಸ್ಕೃತಿಕ ಆಚರಣೆಯ ನಡುವೆ ಪರಿಪೂರ್ಣ ಸಮತೋಲನವನ್ನು ಸಾಧಿಸುತ್ತದೆ, ಭಾಗವಹಿಸುವವರು ದೊಡ್ಡ ಕನಸು ಕಾಣಲು ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಉತ್ತೇಜನ ನೀಡುತ್ತದೆ.
ರಾಷ್ಟ್ರೀಯ ಯುವ ದಿನ: ವಿಕಸಿತ ಭಾರತದ ದೂರದೃಷ್ಟಿ
ಅಂತಿಮ ದಿನವಾದ ಜನವರಿ 12 ಅನ್ನು ಸ್ವಾಮಿ ವಿವೇಕಾನಂದ ಜಯಂತಿ ಗೌರವಾರ್ಥವಾಗಿ ಹಾಗೂ ಯುವಶಕ್ತಿಯನ್ನು ಸಬಲೀಕರಣಗೊಳಿಸುವ ಅವರ ವೈಭವವನ್ನು ಮುಂದುವರಿಸಲು ರಾಷ್ಟ್ರೀಯ ಯುವ ದಿನ ಆಚರಿಸಲಾಗುವುದು, ಆ ಮೂಲಕ ಪ್ರತಿಯೊಬ್ಬ ಭಾಗಿದಾರರ ಪ್ರತಿಕ್ಷಣವನ್ನೂ ವ್ಯಾಖ್ಯಾನಿಸಲಾಗುವುದು. ವಿಷಯಾಧಾರಿತ ಟ್ರ್ಯಾಕ್‌ಗಳಿಂದ ಆಯ್ಕೆ ಮಾಡಿದ ಹತ್ತು ಪ್ರಮುಖ ವಿಚಾರಗಳನ್ನು ನೇರವಾಗಿ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪ್ರಸ್ತುತಪಡಿಸಲಾಗುವುದು, ಇದು ನವೀನ ಮನಸ್ಸುಗಳು ಪ್ರಕಾಶಿಸಲು ಸ್ಪೂರ್ತಿದಾಯಕ ವೇದಿಕೆಯನ್ನು ಒದಗಿಸುತ್ತದೆ.
ಈ ಸಂವಾದವು ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಯುವಕರನ್ನು ಒಳಗೊಳ್ಳುವ ಭಾರತದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಆನಂತರ ಭಾಗವಹಿಸುವವರಿಗೆ ಗೌರವಾನ್ವಿತ ಪ್ರಧಾನಮಂತ್ರಿ ಮತ್ತು ಇತರ ಗಣ್ಯ ನಾಯಕರೊಂದಿಗೆ ಊಟದ ಸಮಯದಲ್ಲಿ ಸಂವಾದ ನಡೆಸುವ ಅವಕಾಶ ದೊರೆಯುತ್ತದೆ, ಅರ್ಥಪೂರ್ಣ ಸಂಭಾಷಣೆಗಳನ್ನು ಬೆಳೆಸುತ್ತದೆ ಮತ್ತು ಅವರಿಗೆ ಎಂದಿಗೂ ಮರೆಯಲಾಗದ ನೆನಪುಗಳು ಮತ್ತು ಸಬಲೀಕರಣದ ಭಾವನೆಯನ್ನು ನೀಡುತ್ತದೆ.
ಆ ದಿನ ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಮಹಾ ಸಮಗ್ರ ಗೋಷ್ಠಿಯೂ ನಡೆಯಲಿದೆ. ಈ ಗೋಷ್ಠಿಯು ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವಲ್ಲಿ ಭಾರತದ ಯುವಕರ ಪರಿವರ್ತನಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಹಾಗೂ ಭಾಗವಹಿಸುವವರನ್ನು ಬದಲಾವಣೆಗೆ ವೇಗವರ್ಧಕರಾಗಿ ಕಾರ್ಯನಿರ್ವಹಿಸಲು ಸಬಲೀಕರಣಗೊಳಿಸುತ್ತದೆ ಮತ್ತು ಪ್ರೇರೇಪಿಸುತ್ತದೆ.
ವಿಕಸಿತ ಭಾರತ ಯುವ ನಾಯಕರ ಸಂವಾದವು ಅದರ ಪ್ರಮಾಣ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಪರಿಣಾಮ ಎದ್ದು ಕಾಣುತ್ತದೆ. ಪಾರದರ್ಶಕ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಕಾರ್ಯಸಾಧ್ಯವಾದ ವಿಚಾರಗಳ ಮೇಲಿನ ಗಮನದವರೆಗೆ, ಈ ಉಪಕ್ರಮವು ಯುವ ಸಬಲೀಕರಣಕ್ಕೆ ನಮ್ಮ ಸರ್ಕಾರದ ಬದ್ಧತೆಯನ್ನು ಉದಾಹರಿಸುತ್ತದೆ. ನವೀನ ಆಲೋಚನೆಗಳಿಗೆ ವೇದಿಕೆಯನ್ನು ಒದಗಿಸುವ ಮೂಲಕ ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಾಷ್ಟ್ರೀಯ ಮತ್ತು ಜಾಗತಿಕ ಐಕಾನ್‌ಗಳೊಂದಿಗೆ ನೇರ ಸಂವಾದಕ್ಕೆ ಅವಕಾಶವನ್ನು ಒದಗಿಸುವ ಮೂಲಕ, ಈ ಸಂವಾದವು ಆಡಳಿತದಲ್ಲಿ ಯುವಜನರ ಭಾಗವಹಿಸುವಿಕೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತದೆ.
ಲೇಖಕರು: ಡಾ.ಮನ್ಸುಖ್ ಮಾಂಡವೀಯ (ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.