ಈ ಶತಮಾನದ ಕಾಲು ಭಾಗ ಕಳೆದಾಗಿದೆ. ಈ ಎರಡೂವರೆ ದಶಕ ಒಂದೆಡೆ, ತಡೆಯಿರದ ಜಾಗತೀಕರಣ, ವಲಸೆ ಮತ್ತು ವಿಜ್ಞಾನ- ತಂತ್ರಜ್ಞಾನದ ವಲಯದಲ್ಲಿ ಕ್ಷಿಪ್ರ ಪ್ರಗತಿಯನ್ನು ಕಂಡರೆ, ಇನ್ನೊಂದೆಡೆ, ಪ್ರಗತಿಯ ಇನ್ನೊಂದು ಮುಖವೆಂಬಂತೆ, ಪರಿಸರದಲ್ಲಿ ಅಪಾರ ಬದಲಾವಣೆಗಳು ಮತ್ತು ಅದರಿಂದಾಗಿ ಹೆಚ್ಚಿನ ಹವಾಮಾನ ವೈಪರೀತ್ಯಗಳನ್ನು ಕಾಣುವ ದಿನಗಳಿಗೆ ಸಾಕ್ಷಿಯಾಯಿತು.
ಒಂದೇ ಹೊತ್ತಿಗೆ ಮುಂದಿನ ದಿನಗಳ ಬಗ್ಗೆ ಅಪಾರ ಭರವಸೆ, ಮುಂದೇನು ಅನ್ನುವ ಚಿಂತೆ ಎರಡನ್ನೂ ಹುಟ್ಟಿಸಿದ ದಿನಗಳು ಇಲ್ಲಿದ್ದವು. ಈ ಶತಮಾನದ ಮುಂದಿನ ಇಪ್ಪತ್ತೈದು ವರ್ಷ ನಾಲ್ಕನೆಯ ಔದ್ಯಮಿಕ ಕ್ರಾಂತಿಯದ್ದು ಅನ್ನುವ ಚರ್ಚೆ ಈಗ ಹೆಚ್ಚೆಚ್ಚು ನಡೆಯುತ್ತಿದೆ. ಈ ಕ್ರಾಂತಿ ಹಿಂದಿನ ಮೂರು ಹಂತಗಳ ಕ್ರಾಂತಿಯ ಹೋಲಿಕೆಯಲ್ಲಿ ಹೇಗೆ ಬೇರೆಯಾದದ್ದು, ಇದು ಹೊತ್ತು ತರಬಹುದಾದ ಸಾಧ್ಯತೆಗಳು, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಆಯಾಮಗಳಲ್ಲಿ ತರಬಹುದಾದ ಬುಡಮೇಲು ಬದಲಾವಣೆಗಳು ಯಾವುವು ಅನ್ನುವುದು ಈಗ ಕಾವೇರಿದ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ.
ಔದ್ಯಮಿಕ ಕ್ರಾಂತಿಯ ಈ ಹಿಂದಿನ ಮೂರು ಹಂತಗಳು ಯಾವುವು ಎಂದು ಒಮ್ಮೆ ಚುಟುಕಾಗಿ ನೆನೆಯುವುದಾದರೆ, ಕಲ್ಲಿದ್ದಲು ಬಳಸಿ ಹಬೆಚಾಲಿತ ಯಂತ್ರಗಳು ಕಟ್ಟಿದ ಕಾರ್ಖಾನೆಗಳದ್ದು ಮೊದಲ ಹಂತವಾದರೆ, ವಿದ್ಯುತ್, ತೈಲ ಮತ್ತು ಗ್ಯಾಸ್ ಬಳಕೆಯಲ್ಲಿ ಕಂಡುಕೊಂಡ ಯಂತ್ರಾಧಾರಿತ ಸಾಮೂಹಿಕ ಉತ್ಪಾದನೆ ಮತ್ತು ಸಾರಿಗೆ ವ್ಯವಸ್ಥೆಯು ಎರಡನೆಯ ಹಂತವಾಗಿತ್ತು. ಮುಂದೆ ಅಣುಶಕ್ತಿ ಮತ್ತು ಎಲೆಕ್ಟ್ರಾನಿಕ್ಸ್ ಸುತ್ತಲಿನ ಡಿಜಿಟಲ್ ಆವಿಷ್ಕಾರಗಳು ತಂದ ಬದಲಾವಣೆಗಳು ಮೂರನೆಯ ಕ್ರಾಂತಿಗೆ ಕಾರಣವಾದರೆ, ಈಗ ಕೃತಕ ಬುದ್ಧಿಮತ್ತೆ, ಜೀನ್ ಎಡಿಟಿಂಗ್, ರೋಬಾಟಿಕ್ಸ್, ತ್ರಿ-ಡಿ ಪ್ರಿಂಟಿಂಗ್ ತರಹದ ಡಿಜಿಟಲ್ ಮತ್ತು ಜೈವಿಕ ತಂತ್ರಜ್ಞಾನದ ಹೆಗಲೇರಿ ಬರುತ್ತಿರುವ ಅಲೆಯೇ ನಾಲ್ಕನೆಯ ಔದ್ಯಮಿಕ ಕ್ರಾಂತಿ
ಎನ್ನಬಹುದು. ಇದು ಬರೀ ತಂತ್ರಜ್ಞಾನದ ದಾಪುಗಾಲು ಅನ್ನುವಂತಹ ಬದಲಾವಣೆಯಲ್ಲ, ಇದು ಮನುಕುಲ, ಮನುಕುಲದ ನಾಗರಿಕತೆಯನ್ನು ಮೂಲಭೂತವಾಗಿ ಹೊಸ ರೀತಿಯಲ್ಲಿ ರೂಪಿಸುವ ಶಕ್ತಿ ಹೊಂದಿದೆ.
ಈ ಹಿಂದಿನ ಕ್ರಾಂತಿಗಳು ಹಂತ ಹಂತವಾಗಿ, ಸಹಜವಾಗಿ ಉತ್ಪಾದನೆಯ ದಾರಿ ಮತ್ತು ಸಾಮರ್ಥ್ಯ
ಗಳನ್ನು ಬದಲಾಯಿಸುತ್ತಾ ಬಂದಿದ್ದರೆ, ನಾಲ್ಕನೆಯ ಅಲೆ ಭೌತಿಕ, ಡಿಜಿಟಲ್ ಮತ್ತು ಜೈವಿಕ ವಲಯಗಳ ನಡುವಿನ ಗೆರೆಯನ್ನೆಲ್ಲ ಅಳಿಸಿ ಬದುಕಿನ ಎಲ್ಲ ಹಂತಗಳಲ್ಲೂ ಅತ್ಯಂತ ಕ್ಷಿಪ್ರಗತಿಯಲ್ಲಿ ಹಿಂದೆಂದೂ ಕಂಡಿರದ ಬದಲಾವಣೆಗಳನ್ನು ತರುವತ್ತ ಅಡಿಯಿಟ್ಟಿದೆ. ಅತ್ಯಂತ ಬುದ್ಧಿವಂತ, ತನ್ನಷ್ಟಕ್ಕೆ ತಾನೇ ಕಲಿಯುವ, ತಿದ್ದಿಕೊಳ್ಳುವ, ಸುಧಾರಣೆಗೊಳ್ಳುವ ತಂತ್ರಜ್ಞಾನಾಧಾರಿತ ವ್ಯವಸ್ಥೆಗಳನ್ನು ಕಟ್ಟುತ್ತ, ಯಂತ್ರಗಳನ್ನು ನಿರ್ವಹಿಸುವ ಪಾತ್ರದಿಂದ ಮನುಷ್ಯನನ್ನು ಬಿಡುಗಡೆಗೊಳಿಸಿ, ಈ ಎಲ್ಲ ಹೊಸ ವ್ಯವಸ್ಥೆಗಳ ಸಹವರ್ತಿಗಳು ಇಲ್ಲವೇ ಮೇಲ್ವಿಚಾರಕರು ಎಂಬ ಹೊಸ ಪಾತ್ರದಲ್ಲಿ ಮನುಷ್ಯರನ್ನು ಕೂರಿಸುವ ಉದ್ದೇಶ ಈ ಕ್ರಾಂತಿಗಿದೆ.
ಉದಾಹರಣೆಗೆ, ವೈದ್ಯರ ಕೊರತೆ ಕಾಡುವ ನಮ್ಮ ಗ್ರಾಮೀಣ ಭಾಗಗಳಲ್ಲಿ ಎ.ಐ. ತಂತ್ರಜ್ಞಾನದ ಬಲದಿಂದ ಕಾಯಿಲೆ ಪತ್ತೆ, ರಿಮೋಟ್ ಸರ್ಜರಿ, ಟೆಲಿಮೆಡಿಸಿನ್‌ನಂತಹ ಅನುಕೂಲಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರುವುದು. ಕ್ರಿಸ್ಪರ್ ತರಹದ ಜೀನ್ ತಿದ್ದುವ ತಂತ್ರಜ್ಞಾನದ ಮೂಲಕ ವಂಶವಾಹಿಯಾಗಿ ಬರುವ ಹಲವು ಗುಣಪಡಿಸಲಾಗದ ಕಾಯಿಲೆಗಳನ್ನು ಸಲೀಸಾಗಿ ಗುಣಪಡಿಸಿ, ಮುಂದಿನ ಪೀಳಿಗೆಗೆ ಆ ಕಾಯಿಲೆಗಳು ಬರದಂತೆ ಮಾಡುವುದು, ಕೃಷಿ ರೋಬಾಟ್ಸ್ ಬಳಸಿ ಬಿತ್ತನೆಯಿಂದ ಕೊಯ್ಲಿನವರೆಗಿನ ಎಲ್ಲ ಹಂತಗಳಲ್ಲೂ ಕ್ಷಮತೆ ಹೆಚ್ಚಿಸಿ ಆಹಾರ ಭದ್ರತೆ ಸಾಧಿಸುವುದು, ದೊಡ್ಡ ಮಟ್ಟದ ತ್ರಿ.ಡಿ. ಮುದ್ರಣ ವ್ಯವಸ್ಥೆ ಬಳಸಿ ಕೈಗೆಟಕುವ ಬೆಲೆಯಲ್ಲಿ, ಕೆಲವೇ ದಿನಗಳಲ್ಲಿ ಮನೆ ಕಟ್ಟಿ ಸೂರಿಲ್ಲದವರಿಗೆ ಸುಲಭದಲ್ಲಿ ಸೂರು ಕಲ್ಪಿಸುವುದು, ಎ.ಐ. ಚಾಲಿತ ಚಾಲಕರಿಲ್ಲದ ಸಾರಿಗೆ ವ್ಯವಸ್ಥೆಯ ಮೂಲಕ ವರ್ಷವೂ ಅಪಘಾತಗಳಲ್ಲಿ ಸಂಭವಿಸುವ ಲಕ್ಷಾಂತರ ಸಾವು, ನೋವನ್ನು ತಪ್ಪಿಸಿ ಸುರಕ್ಷಿತ ಸಾರಿಗೆಯ ಏರ್ಪಾಡು ಕಲ್ಪಿಸುವುದು, ಅಂತರ್ಜಾಲ ಬಳಸಿ ಜ್ಞಾನದ ಸೃಷ್ಟಿ ಮತ್ತು ಪಸರಿಸುವಿಕೆಯನ್ನು ಪ್ರಜಾಸತ್ತಾತ್ಮಕವಾಗಿಸಿ, ಶಿಕ್ಷಣ ಮತ್ತು ಉದ್ಯಮದ ಲಾಭ ಪಡೆದು ಆರ್ಥಿಕವಾಗಿ ಬಲ ಹೊಂದಲು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು, ಬ್ಲಾಕ್‍ಚೇನ್ ತರಹದ ತಂತ್ರಜ್ಞಾನ ಬಳಸಿ ಆಡಳಿತದಲ್ಲಿ ಪಾರದರ್ಶಕತೆ ತಂದು ಸರ್ಕಾರಿ ಯಂತ್ರದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಹೀಗೆ ಈ ಕ್ರಾಂತಿಯ ಸಾಧ್ಯತೆಗಳನ್ನು ಪಟ್ಟಿ ಮಾಡುತ್ತಾ ಸಾಗಬಹುದು. ಇವುಗಳಲ್ಲಿ ಹಲವು ಈಗಾಗಲೇ ಸಾಧ್ಯವಾಗಿದ್ದರೆ ಇನ್ನು ಹಲವು ನಮ್ಮ ಜೀವಿತಾವಧಿಯಲ್ಲೇ ಸಾಧ್ಯವಾಗಲಿವೆ.
ತಡೆಯಿರದ ಪ್ರಗತಿ ಮತ್ತು ಕ್ಷಮತೆಯ ಭರವಸೆ ಈ ಕ್ರಾಂತಿಯ ‘ಬೆಳಕಿನ ಮುಖ’ವಾದರೆ, ಬೆನ್ನ ಹಿಂದಿನ ಕತ್ತಲಲ್ಲಿರುವ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸವಾಲುಗಳು ಮತ್ತು ಅವುಗಳ ಅಗಾಧತೆ ಇದರ ‘ಕತ್ತಲ ಮುಖ’ ಎನ್ನಬಹುದು. ಇದನ್ನು ಎದುರುಗೊಳ್ಳಲು, ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳು ಸಿದ್ಧವಾಗಿವೆಯೇ ಅನ್ನುವುದು ಈ ಹೊತ್ತಿನ ಪ್ರಶ್ನೆ.
ಕಾರ್ಖಾನೆಗಳಲ್ಲಿ ‘ತಪ್ಪು’ ಮಾಡುವ, ವಿಶ್ರಾಂತಿ ಬೇಡುವ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಬಯಸುವ ಮನುಷ್ಯರ ಜಾಗದಲ್ಲಿ ಒಂದೂ ತಪ್ಪು ಮಾಡದ, ದಿನದ 24 ಗಂಟೆಗಳೂ ಕೆಲಸ ಮಾಡುವ ರೋಬಾಟ್ಸ್ ಕಾರ್ಮಿಕರಾಗಿ ಬಂದಾಗ ಏನಾಗಬಹುದು? ಹೆಚ್ಚಿನ ಕ್ಷಮತೆ ಉದ್ಯಮಿಗಳಿಗೆ ಹೆಚ್ಚಿನ ಲಾಭ ತಂದುಕೊಟ್ಟರೆ ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು, ಇಲ್ಲವೇ ಕಡಿಮೆ ಸಂಬಳಕ್ಕೆ ಕೆಲಸ ಮಾಡ
ಬೇಕಾದ ಪರಿಸ್ಥಿತಿ ಎದುರಾಗಬಹುದು. ಇದು ಸಹಜವಾಗಿಯೇ ಈಗಾಗಲೇ ಇರುವ ಆರ್ಥಿಕ ತಾರತಮ್ಯವನ್ನು ಇನ್ನಷ್ಟು ಹೆಚ್ಚಿಸಬಹುದು. ಬದುಕಿನ ಎಲ್ಲ ಮಜಲುಗಳನ್ನು ತಂತ್ರಜ್ಞಾನದ ಮೂಲಕ ಜೋಡಿಸುವ ವ್ಯವಸ್ಥೆ ಒಂದು ಹೊಸ ‘ತಂತ್ರಜ್ಞಾನಶಾಹಿ’ ವ್ಯವಸ್ಥೆಗೆ ಕಾರಣವಾಗಬಹುದು. ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲವೇ ಕೆಲವು ಕಂಪನಿಗಳು ಕೋಟಿಗಟ್ಟಲೆ ಜನರ ಯೋಚನೆಯನ್ನು ನಿಯಂತ್ರಿಸುವ ಶಕ್ತಿ ಪಡೆದುಕೊಳ್ಳಬಹುದು. ಇದು ಸಮುದಾಯಕೇಂದ್ರಿತ ಸಮಾಜಗಳೆಲ್ಲವನ್ನೂ ಇನ್ನಷ್ಟು ವ್ಯಕ್ತಿಕೇಂದ್ರಿತ ಸಮಾಜಗಳನ್ನಾಗಿಸುವತ್ತ ನೂಕಬಹುದು. ಸರ್ವಾಧಿಕಾರಿ ಧೋರಣೆಯ ರಾಜಕಾರಣಿಗಳು ಈ ತಂತ್ರಜ್ಞಾನಶಾಹಿ ವ್ಯವಸ್ಥೆಯ ಜೊತೆ ಕೈಜೋಡಿಸಿ ನಾಗರಿಕರ ಹಕ್ಕುಗಳನ್ನು ಮೊಟಕುಗೊಳಿಸಿ, ಜಗತ್ತೆಲ್ಲವೂ ಇನ್ನೊಂದು ಚೀನಾದಂತಹ ಕಣ್ಗಾವಲಿನ ಸಮಾಜವಾಗಬಹುದು.
ಜೀನ್ ತಿದ್ದುವ ತಂತ್ರಜ್ಞಾನದ ಮೇಲೆ ಹಿಡಿತ ಹೊಂದಿರುವ ದೇಶಗಳು ಹಿಟ್ಲರ್ ಕಾಲದಲ್ಲಿದ್ದ ‘ಶ್ರೇಷ್ಠ ಮನುಷ್ಯನ ತಳಿ’ ರೂಪಿಸುವ, ಉಳಿದ ಬಗೆಯ ಜನರನ್ನು ಹೇಗಾದರೂ ಮಾಡಿ ಅಳಿಸುವ ಯೂಜೆನಿಕ್ಸ್ ತರಹದ ಯೋಜನೆಗಳನ್ನು ಮತ್ತೆ ಮುನ್ನೆಲೆಗೆ ತರಬಹುದು. ಎ.ಐ. ತರಹದ ತಂತ್ರಜ್ಞಾನದ ಮೇಲೆ ಏಕಸ್ವಾಮ್ಯ ಸಾಧಿಸಿದ ದೇಶಗಳು ಅದನ್ನು ರಕ್ಷಣೆ, ವ್ಯಾಪಾರದ ರೀತಿಯ ವಲಯಗಳಲ್ಲಿ ಆಯುಧದಂತೆ ಬಳಸಿ ದೇಶಗಳ ನಡುವಿನ ಅಧಿಕಾರದ ಅಸಮತೋಲನವು ಇನ್ನಷ್ಟು ಬಿಗಡಾಯಿಸುವಂತೆ ಮಾಡಬಹುದು. ಇದೆಲ್ಲ ಒಂದು ತೆರನಾದರೆ, ಜೀವನದ ಬಹುತೇಕ ಅಗತ್ಯಗಳನ್ನು ಯಂತ್ರಗಳ ಕೈಗೊಪ್ಪಿಸಿದರೆ, ಹುಟ್ಟಿಗೊಂದು ಕಾರಣ, ಬದುಕಿಗೊಂದು ಅರ್ಥ ಹುಡುಕುವ, ಎಂಟು ನೂರು ಕೋಟಿ ಮನುಷ್ಯರನ್ನು ಹೇಗೆ ಮತ್ತು ಯಾವುದರಲ್ಲಿ ತೊಡಗಿಸುವುದು ಅನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ಇದು ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಿಗೆ ಇನ್ನೂ ಸವಾಲಿನದ್ದಾಗಿರಲಿದೆ.
ಪ್ರತಿ ಔದ್ಯಮಿಕ ಕ್ರಾಂತಿಯೂ ಇಂತಹ ಪರ-ವಿರೋಧದ ಚರ್ಚೆಗಳ ಮೂಲಕ ಹಾದುಹೋಗಿದೆ. ಒಳಿತು-
ಕೆಡುಕುಗಳ ತೂಗುವಿಕೆಯಲ್ಲಿ ತಕ್ಕಡಿ ಒಳಿತಿನತ್ತ ಹೆಚ್ಚು ವಾಲುವಂತೆ ಈ ಹಿಂದಿನ ಎಲ್ಲ ಕ್ರಾಂತಿಗಳಲ್ಲೂ ಮನುಕುಲದ ಒಟ್ಟಾರೆ ತಿಳಿವಳಿಕೆ ಕೆಲಸ ಮಾಡಿದೆ. ಎರಡನೆಯ ವಿಶ್ವಯುದ್ಧದ ನಂತರ ಜಗತ್ತು ಬಹಳಷ್ಟು ಶಾಂತಿಯುತವಾಗಿದ್ದರೆ ಅದಕ್ಕೆ ಇಂತಹ ತಿಳಿವಳಿಕೆಯೇ ಕಾರಣ. ಹಲವೊಮ್ಮೆ ಅಂತಹ ತಿಳಿವಳಿಕೆ ವಿಶ್ವಯುದ್ಧದಂತಹ ವಿನಾಶದ ನಂತರವೇ ಬಂದಿದೆ. ನಾಲ್ಕನೆಯ ಔದ್ಯಮಿಕ ಕ್ರಾಂತಿ ಇಂತಹ ವಿಪರೀತದ ವಿನಾಶವನ್ನೇನೂ ತರದೆ ಮನುಕುಲದ ಪರ, ಜೀವಪರವಾಗಿರಲಿ ಎಂದು ಆಶಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.