ADVERTISEMENT

ವಿಶ್ಲೇಷಣೆ: ಫ್ಲಾಷ್ ನ್ಯೂಸ್ ಕಾಲ!

ಫ್ಲಾಷ್‌ ನ್ಯೂಸ್‌ ಎನ್ನುವುದು ಸುದ್ದಿಗೆ ಮಾತ್ರ ಸಂಬಂಧಿಸಿದ್ದಲ್ಲ; ಅದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನೂ ಆವರಿಸಿಕೊಂಡಿರುವ ಸಾಂಕ್ರಾಮಿಕವಾಗಿದೆ.

ಚಂದ್ರಕಾಂತ ವಡ್ಡು
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
_
_   
ಫ್ಲಾಷ್‌ ನ್ಯೂಸ್‌ ಎನ್ನುವುದು ಸುದ್ದಿಗೆ ಮಾತ್ರ ಸಂಬಂಧಿಸಿದ್ದಲ್ಲ; ಅದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನೂ ಆವರಿಸಿಕೊಂಡಿರುವ ಸಾಂಕ್ರಾಮಿಕವಾಗಿದೆ. ಎಲ್ಲವನ್ನೂ ಚುಟುಕಾಗಿ, ಚುರುಕಾಗಿ ಹಾಗೂ ಶೀಘ್ರವಾಗಿ ತಲಪಿಸಬೇಕೆನ್ನುವ ಹಪಹಪಿ ‘ಸಾಮಾಜಿಕ ವಿವೇಕ’ವನ್ನು ಜಡಗೊಳಿಸುತ್ತಿದೆ.

ಇತ್ತೀಚೆಗೆ ಗೆಳೆಯರ ಮದುವೆ ಸಮಾರಂಭದಲ್ಲಿ ಹಿರಿಯ ರಾಜಕಾರಣಿಯೊಬ್ಬರು ಭೇಟಿ ಆಗಿದ್ದರು. ಸಹಜವಾಗಿ ಪತ್ರಿಕೆ ಮತ್ತು ಪತ್ರಕರ್ತರ ಕಡೆ ಮಾತು ಹೊರಳಿತು. ಸರ್ಕಾರದಲ್ಲಿ ಹಲವಾರು ಉನ್ನತ ಸ್ಥಾನಗಳನ್ನು ನಿರ್ವಹಿಸಿ, ಪತ್ರಕರ್ತರನ್ನು ನಿಭಾಯಿಸುವುದರಲ್ಲೂ ನಿಪುಣರಾದ ಆ ಅನುಭವಿ ನಾಯಕರು, ‘ಇದು ಫ್ಲಾಷ್ ನ್ಯೂಸ್ ಕಾಲ!’ ಎಂದು ತೀರಾ ಸಹಜ, ಸರಳ ದನಿಯಲ್ಲಿ ಉದ್ಗರಿಸಿದರು. ‘ಓದುಗರನ್ನು, ನೋಡುಗರನ್ನು ಚಿಂತನೆಗೆ ಹಚ್ಚುವ ಮಾಧ್ಯಮ ಯಾರಿಗೂ ಬೇಕಿಲ್ಲ, ದೀರ್ಘ–ಗಂಭೀರ ಲೇಖನಗಳನ್ನು ಯಾರೂ ಗಮನಿಸುವುದಿಲ್ಲ’ ಎಂಬುದು ಅವರ ಮಾತಿನ ತಾತ್ಪರ್ಯ. ಅವರ ಅಭಿಪ್ರಾಯವನ್ನು ಪೂರ್ತಿ ತಳ್ಳಿಹಾಕುವ ಅಥವಾ ಸಾರಾಸಗಟಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇದ್ದಂತಿರಲಿಲ್ಲ.

ರಾಜಕೀಯ ನಾಯಕರು ಉಸುರಿದ ‘ಫ್ಲಾಷ್ ನ್ಯೂಸ್’ ನುಡಿಗಟ್ಟಿನ ಅರ್ಥ ಮತ್ತು ಅನ್ವಯದ ವ್ಯಾಪ್ತಿ ‘ತಾಜಾ ಸುದ್ದಿ’ ಎಂಬುದಕ್ಕೆ ಸೀಮಿತವಾದಂತೆ ಕಾಣಿಸುವುದಿಲ್ಲ. ಸುದ್ದಿವಾಹಿನಿಗಳು ತಮ್ಮೊಳಗಿನ ಸ್ಪರ್ಧೆಯನ್ನು ನಿರ್ವಹಿಸಲು ಅಳವಡಿಸಿಕೊಂಡಿರುವ ‘ನಾವೇ ಮೊದಲು’ ಮಾದರಿಯ ತಂತ್ರಗಳು ಒಂದು ಅನುಕರಣೀಯ ಆದರ್ಶವಾಗಿ, ಸಂದರ್ಭದ ಅನಿವಾರ್ಯತೆಯಾಗಿ, ತಕ್ಷಣ ನಿಲುಕುವ ಗುರಿಯಾಗಿ, ತಲಪುವ ಮಾರ್ಗವಾಗಿ ವರ್ತಮಾನವನ್ನು ಆವರಿಸಿರುವ ವೈಚಿತ್ರ್ಯವನ್ನು ಅವರ ಮಾತು ಧ್ವನಿಸುತ್ತಿತ್ತು. ಎದುರಿಗಿರುವ ಕೇಳುಗರು, ನೋಡುಗರು, ಓದುಗರು ಅಥವಾ ಮತದಾರರ ‘ಅಗತ್ಯ’ ಅರಿಯುವ ಶ್ರಮದ ಬದಲು ಅವರ ತಕ್ಷಣದ ‘ಕಾಮನೆ’ ತೀರಿಸುವ ‘ಸುಗಮ ದಾರಿ’ ಎಂದರೆ ಎಲ್ಲರಿಗೂ ಇಷ್ಟ!

ಆದರೆ ಈ ವಿಷಯದಲ್ಲಿ ಸರಿ ಅಥವಾ ತಪ್ಪು ಎಂಬ ತೀರ್ಮಾನದ ಹಂತ ಮುಟ್ಟುವ ಮುನ್ನ ಬಹುಮುಖ್ಯ ತಾತ್ವಿಕ ಪ್ರಶ್ನೆಗೆ ನಮ್ಮೊಳಗೆ ಉತ್ತರ ಹುಡುಕಬೇಕಾಗುತ್ತದೆ. ಜನರು ಬಯಸುವುದನ್ನು ನೀಡುವುದು ಮತ್ತು ಜನರಿಗೆ ಅಗತ್ಯವಿರುವುದನ್ನು ಪರಿಗಣಿಸುವ ಎರಡು ವಿಧಗಳಲ್ಲಿ ಯಾವುದು ಸರಿಯಾದ ಕ್ರಮ? ಈ ಕುರಿತು ನಿರ್ಧಾರ ತಳೆಯುವುದರಲ್ಲಿಯೇ ವ್ಯಕ್ತಿ, ಸಂಸ್ಥೆ, ಸಂಘಟನೆ, ಮಾಧ್ಯಮ, ಪಕ್ಷ, ಸರ್ಕಾರದ ಉದ್ದೇಶ ಮತ್ತು ಧೋರಣೆ ನಿರ್ಣಯಿಸಲ್ಪಡುತ್ತದೆ.

ADVERTISEMENT

ಈ ಹಿನ್ನೆಲೆಯಲ್ಲಿ ‘ಇದು ಫ್ಲಾಷ್ ನ್ಯೂಸ್ ಕಾಲ!’ ಹೇಳಿಕೆಯನ್ನು ನಿರ್ವಚಿಸುವ ಅಗತ್ಯವಿದೆ. ಸಾಹಿತ್ಯ ಸೇರಿದಂತೆ ಬಹುಪಾಲು ಸಮಕಾಲೀನ ಮಾಧ್ಯಮಗಳ ವರ್ತನೆ ಹಾಗೂ ಸಾರ್ವಜನಿಕ ಆಗುಹೋಗುಗಳು ಶೀಘ್ರತೆಯ ವ್ಯಸನಕ್ಕೋ ಹಿತಾಸಕ್ತಿಯ ಮೋಹಕ್ಕೋ ಬಲಿಯಾಗಿರುವುದನ್ನು ಸೂಚಿಸುತ್ತಿವೆ. ತಾತ್ಕಾಲಿಕ ಆದರೂ ಪರವಾಗಿಲ್ಲ, ತಕ್ಷಣದ ಪರಿಣಾಮ ಮತ್ತು ಫಲಿತಾಂಶದ ನಿರೀಕ್ಷೆ ಎಲ್ಲಾ ಕ್ಷೇತ್ರಗಳ ಪಡಸಾಲೆ ಪ್ರವೇಶಿಸಿರುವುದನ್ನು ಕಾಣಬಹುದು. ಯಾವುದೂ ದೀರ್ಘ ಆಗಿರಕೂಡದು, ಶೀಘ್ರ ಕೈಗೂಡಬೇಕಷ್ಟೇ. ಹಾಗಾದರೆ ಅಲ್ಪಕಾಲೀನ ಸುಖವು ದೀರ್ಘಕಾಲೀನ ಒಳಿತನ್ನು ಅಪಹರಿಸುವ ವಿದ್ಯಮಾನಕ್ಕೆ ವರ್ತಮಾನ ಸಾಕ್ಷಿಯಾಗುತ್ತಿದೆಯೇ?

ಪ್ರಚಲಿತ ರಾಜಕಾರಣ ಈ ವಿಷಯದಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿರುವುದು ಎದ್ದು ಕಾಣುತ್ತದೆ. ‘ಇದು ಫ್ಲಾಷ್ ನ್ಯೂಸ್ ಕಾಲ!’ ಎಂಬ ರಾಜಕಾರಣಿಯ ಮಾಧ್ಯಮ ಉದ್ದೇಶಿಸಿದ ಪ್ರತಿಪಾದನೆ ಕೂಡ ಪ್ರಾಯಶಃ ರಾಜಕಾರಣದ ಅಂತರಂಗದ ಅನಾವರಣ ಅನ್ನಿಸಿದರೆ ಅಚ್ಚರಿಪಡಬೇಕಿಲ್ಲ. ಅಧಿಕಾರದ ಏಣಿಯನ್ನು ಅತಿ ಶೀಘ್ರದಲ್ಲೇ ಏರುವ ತೀವ್ರ ಹವಣಿಕೆಯಲ್ಲಿ ಅಡಗಿರುವುದು ಕೂಡ ಫ್ಲಾಷ್ ನ್ಯೂಸ್ ಮಾಧ್ಯಮಕ್ಕೆ ಸಂವಾದಿ ಎನ್ನಿಸುವ ನಡೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ರಾಜಕಾರಣದಲ್ಲಿ ಹಣ ಮತ್ತು ಅಧಿಕಾರ ಗಳಿಕೆಯ ಅವಸರವೇ ಮೇಲುಗೈ ಸಾಧಿಸಿದ ಸನ್ನಿವೇಶದಲ್ಲಿ ನಾವಿದ್ದೇವೆ; ಜನರ ವಿಶ್ವಾಸ ಗಳಿಸುವ ವಿಚಾರವನ್ನು ಬಹಳ ದೂರ ಬಿಟ್ಟು ಬಂದಾಗಿದೆ.  

ನಾವೀಗ ಫ್ಲಾಷ್ ನ್ಯೂಸ್ ಕಾಲದಲ್ಲಿ ಇರುವುದನ್ನು ಮನಗಾಣಿಸುವ ಹಲವಾರು ಬೆಳವಣಿಗೆಗಳು ನಮ್ಮೆದುರು ದಿನನಿತ್ಯ ಜರುಗುತ್ತಿವೆ. ದೂರದರ್ಶನ ಮತ್ತು ಮೊಬೈಲ್ ಪರದೆಗಳನ್ನು ನೋಡಿದರೆ ಸುದ್ದಿಗಳು ಪ್ರಸಾರವಾಗುವುದಿಲ್ಲ, ಸ್ಫೋಟಗೊಳ್ಳುತ್ತವೆ ಎಂಬುದು ಯಾರಿಗಾದರೂ ಮನವರಿಕೆಯಾಗುತ್ತದೆ. ಫ್ಲಾಷ್ ನ್ಯೂಸ್ ಪ್ರಭಾವವು ಮಾಧ್ಯಮಲೋಕ ಮೀರಿ ರಾಜಕೀಯರಂಗ, ಆಡಳಿತ, ಸಾಮಾಜಿಕ ನಡವಳಿಕೆ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ವಿಸ್ತರಿಸಿದೆ. ವೇಗವೇ ಮುಖ್ಯ ಎಂಬ ನಂಬಿಕೆಯ ಕತ್ತಲಲ್ಲಿ ಯಾವುದೇ ತಿಳಿವಳಿಕೆಯ ವಾಸ್ತವಿಕ ಆಳ, ನಿಖರತೆ ಹಾಗೂ ವಿಶ್ವಾಸಾರ್ಹತೆ ಮರೆಯಾಗುವುದು ಸಾಮಾನ್ಯ ಕ್ರಿಯೆಯಾಗಿದೆ. ಎಲ್ಲಕ್ಕಿಂತ ಅಪಾಯಕಾರಿ ಸಂಗತಿಯೆಂದರೆ, ತ್ವರಿತ ಮನೋಗತಿಯನ್ನು ನಾನಾ ಪ್ರಚೋದನೆಗಳು ಹಿಂಬಾಲಿಸುವುದು.

ಭಾರತೀಯ ಪ್ರಜಾಪ್ರಭುತ್ವದ ಸ್ವರೂಪವನ್ನು ಮರುರೂಪಿಸುವ ರೀತಿಯಲ್ಲಿ ಸಮಕಾಲೀನ ರಾಜಕೀಯವು ತ್ವರಿತ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ರಂಗಭೂಮಿಯಾಗಿದೆ. ರಾಜಕೀಯ ಪಕ್ಷಗಳ ನಡುವೆ ಈಗ ಸೈದ್ಧಾಂತಿಕ ಸೆಣೆಸಾಟದ ಬದಲಾಗಿ ವೈರಲ್ ಕ್ಲಿಪ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿಯ ಚಮತ್ಕಾರಿಕ ಪೋಸ್ಟುಗಳ ಪೈಪೋಟಿ ತಾರಕಕ್ಕೇರುವುದನ್ನು ಕಾಣಬಹುದು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯ ಸಂಧಾನ ಮಾತುಕತೆಯ ನೈಜ ವಿವರಗಳಿಗಿಂತ ಮೊದಲಿಗೇ ತಿಂಡಿ ತಿನ್ನುವ ಚಿತ್ರ ಫ್ಲಾಷ್ ಆಗುವುದು ಏನನ್ನು ತೋರಿಸುತ್ತದೆ? ಮೂಲ ವಿಷಯದ ದಿಕ್ಕು ತಪ್ಪಿಸುವ, ಗಾಂಭೀರ್ಯ ತಗ್ಗಿಸುವ ರಾಜಕಾರಣಿಗಳ ಜಾಣತನ ಹಾಗೂ ತಂತ್ರಗಾರಿಕೆಯು ಫ್ಲಾಷ್ ನ್ಯೂಸ್ ದಾಹದ ವೀಕ್ಷಕರು ಮತ್ತು ಮಾಧ್ಯಮಗಳನ್ನು ವಂಚಿಸುವಲ್ಲಿ ಯಶಸ್ವಿಯಾಗುತ್ತಿರುವುದು ಗಮನಾರ್ಹ ಸಂಗತಿ.

ಗಂಭೀರ ಸಂಶೋಧನೆ, ಮೌಲಿಕ ಸಾಹಿತ್ಯ ಹಾಗೂ ಗುಣಾತ್ಮಕ ಶೈಕ್ಷಣಿಕ ಚಟುವಟಿಕೆಗಳು ಕೂಡ ವೇಗದ ಗೀಳಿನ ವಾತಾವರಣದಲ್ಲಿ ಉಸಿರಾಡಲು ಹೆಣಗಾಡುತ್ತಿವೆ. ವರ್ಷಗಳ ಪಾಂಡಿತ್ಯವು ಸಂವೇದನಾಹೀನ ಸುದ್ದಿಯಲ್ಲಿ, ಸೂಕ್ಷ್ಮವಾದ ಸಾರ್ವಜನಿಕ ಭಾಷಣಗಳು ಆಳವಿಲ್ಲದ ಬೈನರಿಗಳಲ್ಲಿ ಕಳೆದುಹೋಗುತ್ತಿವೆ. ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ತಾರ್ಕಿಕತೆ, ವೈಚಾರಿಕತೆ ಮತ್ತು ಚರ್ಚೆಗೆ ಸ್ಥಳಾವಕಾಶ ಬೇಕು. ಶೀಘ್ರ ಸುದ್ದಿಯುಗದಲ್ಲಿ ಇವಾವುಗಳಿಗೂ ನೆಲೆ ಸಿಗುವುದಿಲ್ಲ. ತುರ್ತು–ತುಂತುರು ಸುದ್ದಿಗಳು ನಮ್ಮನ್ನು ಚುರುಕಾಗಿಸಿವೆ; ವಿವೇಕ ಮೂಡಿಸಿಲ್ಲ. ಅಬ್ಬರ ತರಿಸಿವೆ; ಪೂರ್ಣ ಮಾಹಿತಿ ಒದಗಿಸುತ್ತಿಲ್ಲ. ಸಂವಹನ ಸಾಧ್ಯತೆ ವೃದ್ಧಿಸಿದೆ; ಪರಸ್ಪರ ಅರ್ಥೈಸಿಕೊಳ್ಳುವಿಕೆ ಕುಗ್ಗಿಸಿದೆ.

ಹತ್ತಿಪ್ಪತ್ತು ಸೆಕೆಂಡುಗಳ ಎಡಿಟ್ ಮಾಡಿದ ವಿಡಿಯೊ ತುಣುಕುಗಳು ಸಮುದಾಯಗಳ ನಡುವಿನ ಸಂಘರ್ಷ ಅಥವಾ ಸೌಹಾರ್ದ ನಿರ್ಧರಿಸುವುದು ಫ್ಲಾಷ್ ನ್ಯೂಸ್ ಯುಗದ ಮತ್ತೊಂದು ವೈಶಿಷ್ಟ್ಯ ಮತ್ತು ಗಂಡಾಂತರ. ಅಧಿಕೃತ ಸ್ಪಷ್ಟೀಕರಣಗಳಿಗಿಂತ ವೇಗವಾಗಿ ವದಂತಿಗಳು ಪ್ರಯಾಣಿಸುತ್ತವೆ. ‘ನಕಲಿಯೇ ಮೊದಲು, ಸತ್ಯ ಆಮೇಲೆ’, ‘ಮೊದಲು ಪ್ರತಿಕ್ರಿಯೆ, ನಂತರ ಯೋಚನೆ’, ‘ತೀರ್ಪಿನ ನಂತರ ಸಾಕ್ಷ್ಯ–ಸಾಬೀತು’ ಎಂಬಂತಹ ಸೂತ್ರಗಳಿಗೆ ನಾಗರಿಕರೂ ಬದ್ಧರಾದರೆ ಇನ್ನೇನು ಘಟಿಸಲು ಸಾಧ್ಯ? ‘ಆರೋಪ ಸಾಬೀತಾಗುವವರೆಗೂ ನಿರಪರಾಧಿ’ ಎಂಬ ನ್ಯಾಯಿಕತತ್ತ್ವವು ‘ಫ್ಲಾಷ್ ನ್ಯೂಸ್ ಘೋಷಿಸುವವರೆಗೂ ಆರೋಪಿಯು ನಿರಪರಾಧಿ’ ಎಂಬ ತತ್ತ್ವಕ್ಕೆ ಸದ್ದಿಲ್ಲದೆ ಹಾದಿ ಮಾಡಿಕೊಡುತ್ತಿದೆ.

ಪಂಥಗಳ ನಡುವೆ ಜೋಕಾಲಿ ಆಡುವ ಪ್ರಕಾಶಕರೊಬ್ಬರು ಇತ್ತೀಚೆಗೆ, ‘ಎಡ–ಬಲ, ಹಿಂದೂ–ಮುಸ್ಲಿಂ ಯಾರಾದರೂ ಆಗಿರಲಿ, ಓದುಗರಿಗೆ ಬೇಕಾದ ಪುಸ್ತಕ ಕೊಡುವುದು ಪ್ರಕಾಶನದ ಜವಾಬ್ದಾರಿ ಅಷ್ಟೇ’ ಎಂದು ಹೇಳುವ ಮೂಲಕ ಬೇಡಿಕೆ–ಪೂರೈಕೆಯ ಬಂಡವಾಳಶಾಹಿ ಆರ್ಥಿಕ ತಾತ್ವಿಕತೆಯನ್ನು ಸಾಹಿತ್ಯ ವಲಯದಲ್ಲಿಯೂ ನುಸುಳಿಸಲು ಯತ್ನಿಸಿದರು.

‘ಪ್ರೇಕ್ಷಕರ ಅಪೇಕ್ಷೆಯ ಸಿನಿಮಾ ಕೊಡುವುದು, ರಂಜಿಸುವುದು ಮಾತ್ರ ನಮ್ಮ ಕೆಲಸ; ಅದರಲ್ಲಿ ಸೆಕ್ಸ್, ಹಿಂಸೆ, ಸಮಾಜಘಾತುಕತೆ ಏನಾದರೂ ಇರಲಿ’ ಎಂದು ಸಿನಿಮಾ ನಿರ್ದೇಶಕ/ನಿರ್ಮಾಪಕ ಸಮರ್ಥಿಸಿಕೊಂಡರೆ ಹೇಗೆ? ‘ಗ್ರಾಹಕ ಯಾರೇ ಆಗಿರಲಿ, ಅವನಿಗೆ ಬೇಕಾದ ವಸ್ತು ಗಾಂಜಾ, ಪಾನ್, ಡ್ರಗ್ಸ್, ಏನೇ ಇರಲಿ, ಅದನ್ನು ಪೂರೈಸುವುದು ವ್ಯಾಪಾರಿಯ ಜವಾಬ್ದಾರಿ’ ಎಂಬುದು ಎಷ್ಟು ಸರಿ? ಅಶ್ಲೀಲ ಸಾಹಿತ್ಯ ಓದುವವರನ್ನು ತಣಿಸುವುದೂ ಪ್ರಕಾಶಕರ ಜವಾಬ್ದಾರಿಯೇ? ಎಂಬ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ.

ಒಂದು ರೀತಿಯಲ್ಲಿ ನೋಡಿದರೆ ನಾವು ‘ಶೀಘ್ರ ಸುದ್ದಿಯುಗ’ದಲ್ಲಿ ವಾಸಿಸುತ್ತಿದ್ದೇವೆಯೇ ಎಂಬುದು ಪ್ರಶ್ನೆಯೇ ಅಲ್ಲ; ವಸ್ತುಸ್ಥಿತಿ. ನಿಜವಾದ ಸವಾಲು ಮತ್ತು ಸಮಸ್ಯೆ ಇರುವುದು ಈ ತ್ವರಿತ ಸಂಸ್ಕೃತಿಯೇ ನಮ್ಮ ಭಾವನೆ, ತಿಳಿವಳಿಕೆ ಹಾಗೂ ಪ್ರಜಾಪ್ರಭುತ್ವವನ್ನು ರೂಪಿಸುವುದಕ್ಕೆ ನಮ್ಮ ಪ್ರಜ್ಞಾಪೂರ್ವಕ ಸಮ್ಮತಿ ಇದೆಯೇ ಎಂಬುದರಲ್ಲಿ. ಈ ಸಂದರ್ಭದಲ್ಲಿ ಒಂದು ನಾಗರಿಕ ಸಮಾಜವಾಗಿ ನಾವು ಉತ್ತರ ಕಂಡುಕೊಳ್ಳಬೇಕಾದ ಮತ್ತೊಂದು ಉಪಪ್ರಶ್ನೆಯೆಂದರೆ, ನಾವು ಫ್ಲಾಷ್ ನ್ಯೂಸ್ ಕರುಣೆಯಲ್ಲಿಯೇ ಬದುಕು ಕಳೆಯಲು ಬಯಸುತ್ತೇವೆಯೇ ಎಂಬುದು.

ಬಯಕೆ ಏನೇ ಇದ್ದರೂ ನಾಗರಿಕರಿಗೆ ಅದನ್ನು ಕಾರ್ಯಗತಗೊಳಿಸುವ ಅವಕಾಶ ಇದೆಯೇ ಎಂಬ
ಸಾಪೇಕ್ಷ ಅನುಮಾನ ಮೂಡುವುದಂತೂ ನಿಜ. ಆದರೆ, ಚಿಂತನಶೀಲ ಪತ್ರಿಕೋದ್ಯಮ, ಸೈದ್ಧಾಂತಿಕ ರಾಜಕಾರಣ ಮತ್ತು ಹೊಣೆಯುಕ್ತ ಪೌರನಡತೆಯಿಂದ ಪ್ರಸಕ್ತ ಸನ್ನಿವೇಶಕ್ಕೆ ಹೊಸ ಭಾಷ್ಯ ಬರೆಯಬಹುದು. ಸುದ್ದಿಯ ಫ್ಲಾಷ್‌ಗೆ ಮುನ್ನ ಮಾಧ್ಯಮ ತನ್ನ ವಿವೇಚನಾಬುದ್ಧಿ ಬಳಸಿದರೆ, ವೀರ ಫಾರ್ವರ್ಡ್ ಯೋಧರು ಸಂದೇಶಗಳನ್ನು ಸಿಡಿಸುವಾಗ ತುಸು ಸಂಯಮ ವಹಿಸಿದರೆ, ನಟನಾಪ್ರವೀಣ ರಾಜಕಾರಣಿಗಳು ಬಣ್ಣ–ವೇ‍ಷ ಕಳಚಿ ಹೊರಬಂದರೆ ಒಂದಿಷ್ಟು ಸಂಚಲನೆ ಸಾಧ್ಯ. ಆದರೆ, ಈ ಆಶಯವನ್ನು ಫ್ಲಾಷ್ ನ್ಯೂಸ್ ರೂಪದಲ್ಲಿ ತಲಪಿಸುವುದು ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.