
‘ಗಾಂಧಿಯನ್ನು ಪ್ರಶ್ನಿಸಬಾರದೇ?’ ಎನ್ನುವ ಸಂಘ ಪರಿವಾರ ಮತ್ತು ಪರಿವಾರವಾದಿ ದೃಷ್ಟಿಕೋನದ ಗಾಂಧಿನಿಂದಕರ ಪ್ರಶ್ನೆಗೆ ಉತ್ತರ: ಈಗಷ್ಟೇ ಅಲ್ಲ, ಬದುಕಿದ್ದ ಕಾಲದಲ್ಲೂ ಗಾಂಧಿ ಪ್ರಶ್ನೆಗೊಳಗಾಗಿದ್ದರು. ಈಗಲೂ ಪ್ರಶ್ನೆಗೊಳಗಾಗುತ್ತಿದ್ದಾರೆ.
ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಗಾಂಧಿಯವರ ಜೊತೆಯಲ್ಲೇ ಇದ್ದ ಸರೋಜಿನಿ ನಾಯ್ಡು, ರಾಜಾಜಿ, ನೆಹರೂ ಕೂಡ ಪ್ರಶ್ನಿಸಿದ್ದರು. ವಿದೇಶೀಯರೂ ಪ್ರಶ್ನಿಸಿದ್ದರು. ಇವತ್ತಿಗೂ ಮಾರ್ಕ್ಸ್‌ವಾದಿಗಳು ಮತ್ತು ಅಂಬೇಡ್ಕರ್‌ವಾದಿಗಳು ಗಾಂಧಿಯವರನ್ನು ತಮ್ಮದೇ ಕಾರಣ, ದೃಷ್ಟಿಕೋನಗಳ ಆಧಾರದಲ್ಲಿ ಟೀಕಿಸುತ್ತಾರೆ. ಆದರೆ, ಇವರು ಯಾರೂ ಗಾಂಧಿ ನಿಂದಕರಲ್ಲ. ಸಂಘ ಪರಿವಾರದವರೆಲ್ಲರೂ ಹೇಳುವ ವಸ್ತುವನ್ನೇ ಆಧರಿಸಿ ಗಾಂಧಿಯವರನ್ನು ವಿರೋಧಿಸಿದ್ದು ಸಾವರ್ಕರ್ ಮತ್ತು ಹಿಂದೂ ಮಹಾಸಭಾ. ಅವರಲ್ಲೂ ವೈಚಾರಿಕ ಸ್ಪಷ್ಟತೆ ಇದೆ. ಅಸ್ಪಷ್ಟತೆಯನ್ನೇ ಗಾಂಧಿನಿಂದನೆಯ ಕಾಯಂ ವ್ಯವಸ್ಥೆಯಾಗಿ ಮಾಡಿಕೊಂಡಿರುವುದು ಪರಿವಾರ ಮತ್ತು ಪರಿವಾರದ ಬೆಂಬಲಿಗರು.
ಆರ್‌ಎಸ್‌ಎಸ್‌ನ ಹಿರಿಯ ಚಿಂತಕರ ಬಳಿ ಕೇಳಿದರೆ, ‘ನಮಗೆ ಗಾಂಧಿಯವರ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದೆ. ಆದರೆ, ಗಾಂಧಿಯವರ ಬಗ್ಗೆ ಗೌರವವಿದೆ’ ಎನ್ನುತ್ತಾರೆ. ಆದರೆ, ಗಾಂಧಿಯವರ ಮೇಲೆ ಭಿನ್ನಾಭಿಪ್ರಾಯ ಇರುವ ಕೆಲವು ವಿಷಯಗಳು ಯಾವುದು ಎಂದು ಹೇಳುವುದೇ ಇಲ್ಲ. ‘ಕೆಲವು’ ಅನ್ನುವುದು ಅಸ್ಪಷ್ಟ. ‘ನಾವು ಹಿಂಸೆಯನ್ನು ಒಪ್ಪುವುದಿಲ್ಲ. ಆದರೆ, ಕೆಲವೊಮ್ಮೆ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹಿಂಸೆ ನಡೆಯುವುದು ಸಹಜ’ ಎನ್ನುವ ನಿಲುವನ್ನು ತೆಗೆದುಕೊಳ್ಳುತ್ತಾರೆ. ‘ಹಿಂಸೆಯನ್ನು ಒಪ್ಪುವುದಿಲ್ಲ’ ಎಂದ ಮೇಲೆ ಹಿಂಸೆಯನ್ನು ವಿರೋಧಿಸಬೇಕಾಗುತ್ತದೆ. ಹಿಂಸೆಯನ್ನು ವಿರೋಧಿಸಿದಾಗಲೂ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹಿಂಸೆ ನಡೆದಾಗ ಅದನ್ನು ಸಹಜ ಎನ್ನಬಹುದು. ಆದರೆ, ಹಿಂಸೆಯನ್ನು ಒಪ್ಪುವುದಿಲ್ಲ ಎನ್ನುವವರು ಹಿಂಸೆಯನ್ನು ವಿರೋಧಿಸುತ್ತೇವೆ ಎನ್ನುವುದಿಲ್ಲ. ಆಗ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹಿಂಸೆ ನಡೆದಾಗ ಒಂದು ಶಕ್ತಿ ಬಣವಾಗಿ ಪರಿವಾರದ ನಿಲುವು ಏನು? ವಿರೋಧವೊ? ಸಮರ್ಥನೆಯೊ? ನಿಷ್ಕ್ರಿಯತೆಯೊ? ಸೈದ್ಧಾಂತಿಕ ಅಸ್ಪಷ್ಟತೆಯ ನಡುವೆಯೂ ಇಂತಹ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸಾರ್ವಜನಿಕ ತಟಸ್ಥ ಧೋರಣೆಯನ್ನು ಕಾಪಾಡಿಕೊಂಡರೆ, ಇತರ ಪರಿವಾರ ಸಂಘಟನೆಗಳು ಹಿಂಸೆಯನ್ನು ಸಮರ್ಥಿಸಿಕೊಂಡು ವರ್ತಿಸುತ್ತವೆ. ಆಗ ಆರ್‌ಎಸ್‌ಎಸ್‌ನ ಮೌನವು ‘ಮೌನ ಸಮ್ಮತಿ’ ಅರ್ಥ
ವನ್ನು ಕೊಡುತ್ತದೆ. ಅಂದಮೇಲೆ, ‘ಹಿಂಸೆಯನ್ನು ಒಪ್ಪುವುದಿಲ್ಲ’ ಎನ್ನುವ ನಿಲುವು ವಾಸ್ತವದಲ್ಲಿ ಬಿದ್ದು ಹೋಗುತ್ತದೆ. ಇದರ ಬದಲಿಗೆ ಸಾವರ್ಕರ್ ಅವರ ಹಾಗೆ ಉದ್ದೇಶ ಈಡೇರಿಕೆಗೆ ಹಿಂಸೆಯನ್ನು ಒಪ್ಪುತ್ತೇನೆ ಎಂದರೆ ವೈಚಾರಿಕ ಸ್ಪಷ್ಟತೆ ಇರುತ್ತದೆ.
‘ಗಾಂಧಿಯವರೂ ವಿಮರ್ಶೆಗೆ ಅರ್ಹರೇ’ ಎಂಬ ನಿಲುವು ಸಾರ್ವತ್ರಿಕ ಮಾನ್ಯತೆ ಇರುವಂತಹದ್ದಾಗಿದೆ. ಆದರೆ, ವಿಮರ್ಶೆ ‘ನಿಜವಾದದ್ದರ’ ಮೇಲಿರುತ್ತದೆಯೇ ಹೊರತು, ಸುಳ್ಳುಗಳನ್ನು ಸೃಷ್ಟಿಸಿ ಆ ಸುಳ್ಳುಗಳನ್ನು ಸತ್ಯವೆಂದು ಪ್ರತಿಪಾದಿಸಿ ವಿಮರ್ಶಿಸುವುದಾಗಿರುವುದಿಲ್ಲ. ಆದರೆ, ಪರಿವಾರ ಮತ್ತು ಪರಿವಾರದ ಬೆಂಬಲಿಗರನೇಕರು ಗಾಂಧಿಯವರ ಕುರಿತ ಸುಳ್ಳುಗಳನ್ನು ಸೃಷ್ಟಿಸಿ ಹಂಚಿಕೊಂಡು, ‘ಗಾಂಧಿಯನ್ನು ಪ್ರಶ್ನಿಸಬಾರದಾ?’ ಎನ್ನುವವರು. ಈ ಬಗ್ಗೆ ಆರ್‌ಎಸ್‌ಎಸ್‌ನ ಹಿರಿಯರು, ‘ಕೆಲವರು ಅಂತಹವರಿದ್ದಾರೆ. ಅಂತಹವರಿಗೆ ಎಷ್ಟೆಂದು ಹೇಳಬಹುದು. ಹೇಳಿ ಸರಿ ಮಾಡಲು ಆಗುವುದಿಲ್ಲ. ತಪ್ಪುಗಳನ್ನು ಸಮಾಜ ಪ್ರಶ್ನಿಸುತ್ತದೆ. ಸಮಾಜ ಪ್ರಶ್ನಿಸಿದಂತೆಲ್ಲ ತಪ್ಪು ಮಾಡುವವರು ಅಲ್ಲಲ್ಲೇ ತಮ್ಮನ್ನು ತಿದ್ದಿಕೊಳ್ಳುತ್ತಾ ಸರಿಹೋಗುತ್ತಾರೆ’ ಎಂಬ ಉತ್ತರ ಬರುತ್ತದೆ. ವೈಚಾರಿಕವಾಗಿ ಸಮಂಜಸವಾದ ಉತ್ತರವಿದು. ಆದರೆ ತಪ್ಪು ಮಾಡುವವರನ್ನು ತಿದ್ದಿ ಬುದ್ಧಿ ಹೇಳಿ ಸರಿ ಮಾಡಲು ಆಗುವುದಿಲ್ಲ ಎನ್ನುವುದರ ಅರ್ಥ, ತನ್ನ ನಿಲುವು ಇಂತಹದ್ದೇ ಆಗಿದೆ ಎಂದು ಸ್ಪಷ್ಟಪಡಿಸಲು ಆಗುವುದಿಲ್ಲ ಎಂದಲ್ಲ. ಗಾಂಧಿಯವರ ಮೇಲೆ ಸುಳ್ಳು ಸೃಷ್ಟಿಗಳು ನಡೆದಾಗ, ಸುಳ್ಳು ಸೃಷ್ಟಿಯನ್ನು ತಾನು ಒಪ್ಪುವುದಿಲ್ಲ ಎನ್ನುವ ಜವಾಬ್ದಾರಿ ಆರ್‌ಎಸ್‌ಎಸ್‌ಗೆ ಇರುತ್ತದೆ. ಅಥವಾ ಸುಳ್ಳು ಸೃಷ್ಟಿಯನ್ನು ಒಪ್ಪುತ್ತೇವೆ ಎಂದೂ ಹೇಳಬಹುದು. ಈ ವಿಷಯದಲ್ಲೂ ತಟಸ್ಥ ಧೋರಣೆ! ತಾಟಸ್ಥ್ಯ ಮೌನ ಸಮ್ಮತಿಯಲ್ಲವೇ?
‘ಗಾಂಧಿಯವರ ಕೆಲವು ವಿಷಯಗಳನ್ನು ಒಪ್ಪುವುದಿಲ್ಲ’ ಎನ್ನುವ ಹೇಳಿಕೆಯಲ್ಲಿ, ‘ಮುಸ್ಲಿಂ ಓಲೈಕೆ’ ವಿಷಯ ಬರುತ್ತದೆ. ಗಾಂಧಿಯವರು ಬಹು
ಸಂಖ್ಯಾತರ ಪರಮಾಧಿಕಾರವನ್ನು ಪ್ರತಿಪಾದಿಸಲಿಲ್ಲ ಎನ್ನುವುದು ನಿಜ. ಸಾವರ್ಕರ್ ಬಹುಸಂಖ್ಯಾತರ ಪರಮಾಧಿಕಾರ ಪ್ರತಿಪಾದಿಸಿದ್ದರೆಂಬುದೂ ನಿಜ. ಆದರೆ, ಗಾಂಧಿಯವರು ಮುಸ್ಲಿಂ ಓಲೈಕೆ ಮಾಡಿರಲಿಲ್ಲ. ಖಿಲಾಫತ್ ಚಳವಳಿಯ ವಿಫಲ ಪ್ರಯತ್ನದ ನಂತರ ಆ ಚಳವಳಿಯಲ್ಲಿ ಗಾಂಧಿಯವರೊಂದಿಗಿದ್ದ ಆಲಿ ಸಹೋದರರಿಗೆ ಕಹುಟಾ ಕೋಮುಗಲಭೆಯನ್ನು ನೀವೇ ಮಾಡಿಸಿದ್ದು ಎಂದು ಹೇಳಿದ ಗಾಂಧಿ, ಅವರಿಂದ ದೂರವಾಗುತ್ತಾರೆ. ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ಸಾವರ್ಕರ್ ಒಪ್ಪಿದಾಗಲೂ ಗಾಂಧಿ ಒಪ್ಪಲಿಲ್ಲ. ನೇರ ಕಾರ್ಯಾಚರಣೆಯಲ್ಲಿ ಮತಾಂಧರಿಂದ ಹತ್ಯೆಗಳು ನಡೆದಾಗ ಪೊಲೀಸರನ್ನು ನಿಷ್ಕ್ರಿಯಗೊಳಿಸಿದ್ದ ವೈಸರಾಯ್‌ರನ್ನು ಗಾಂಧಿ ತರಾಟೆಗೆ ತೆಗೆದುಕೊಂಡಿದ್ದರು. ಗಾಂಧಿ ಹತ್ಯೆ ನಡೆಯದೆ ಇದ್ದರೆ ಆಮೇಲಿನ 20 ದಿನಗಳಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಹಿಂಸೆಯನ್ನು ತಡೆಯಲು ಗಾಂಧಿ ಪಾಕಿಸ್ತಾನಕ್ಕೆ ಹೋಗುವವರಿದ್ದರು.
ಪರಿವಾರವಾದಿಗಳು ಗಾಂಧಿಯವರಿಂದ ಮುಸ್ಲಿಂ ಓಲೈಕೆ ಎನ್ನುವುದು ನಿರ್ದಿಷ್ಟ ಸಂದರ್ಭವನ್ನು ನಿಭಾಯಿಸಲು ಅವರಾಡಿದ ಮಾತುಗಳನ್ನು ಮಾತ್ರ. ಉದಾಹರಣೆಗೆ, ಮಾಪಿಳ್ಳೆ ದಂಗೆಯ ಬಗ್ಗೆ, ‘ಮಾಪಿಳ್ಳೆಗಳು ತಮ್ಮ ನಂಬಿಕೆಗನುಸಾರವಾಗಿ ನಡೆದುಕೊಂಡರು’ ಎಂದು ಗಾಂಧಿ ಹೇಳಿದ್ದರು. ಇದು ಆ ಸಂದರ್ಭದ ಹೇಳಿಕೆ. ಇದನ್ನಷ್ಟೇ ಗಮನಿಸಿದರೆ ಗಾಂಧಿ ಮುಸ್ಲಿಂ ಓಲೈಕೆ ಮಾಡಿದ್ದಾರೆ ಅನಿಸುತ್ತದೆ. ದಂಗೆಯ ನಂತರ, ‘ಮುಸ್ಲಿಮರು ಪುಂಡರು. ಹಿಂದೂಗಳು ಪುಕ್ಕಲರು’ ಎಂದೂ ಗಾಂಧಿ ಹೇಳಿದ್ದಾರೆ. ಇದೂ ಒಂದು ಸಂದರ್ಭದ ಹೇಳಿಕೆ. ತರಗತಿಯಲ್ಲಿ ಅಧ್ಯಾಪಕರು ವಿದ್ಯಾರ್ಥಿ ತಪ್ಪು ಮಾಡಿದಾಗ, ‘ಹೀಗೆ ಮಾಡಿದರೆ ನೀನು ಉದ್ಧಾರ ಆಗುವುದಿಲ್ಲ’ ಎಂದರೆ, ಆ ವಿದ್ಯಾರ್ಥಿ ಎಂದೂ ಉದ್ಧಾರ ಆಗಬಾರದು ಎನ್ನುವುದು ಅಧ್ಯಾಪಕರ ಧೋರಣೆಯಾಗಿದೆ ಎಂದರ್ಥವಲ್ಲ. ನಿರ್ದಿಷ್ಟ ಸಂದರ್ಭದ ಮಾತುಗಳು ಸೈದ್ಧಾಂತಿಕ ನಿಲುವು ಆಗಿರುವುದಿಲ್ಲ.
ಗಾಂಧಿ ಹಿಂದೂ ಓಲೈಕೆ ಮಾಡಿದ್ದಾರೆ ಎಂದೂ ವಾದಿಸಬಹುದು. ಸಾವರ್ಕರ್ ಒಪ್ಪದ, ಆದರೆ ಪರಿವಾರವಾದಿಗಳು ಪ್ರತಿಪಾದಿಸುವ ಗೋಹತ್ಯಾ ನಿಷೇಧವನ್ನು ಗಾಂಧಿ ಸೈದ್ಧಾಂತಿಕವಾಗಿಯೇ ಪ್ರತಿಪಾದಿಸುತ್ತಾರೆ. ಹಾಗಿದ್ದರೆ ಅವರು ಹಿಂದೂ ಓಲೈಕೆಯವರೇ?
‘ಅಹಿಂಸಾವಾದಿಯಾದ ನೀವು ಯುದ್ಧವನ್ನು ಬೋಧಿಸುವ ಭಗವದ್ಗೀತೆಯನ್ನು ಹೇಗೆ ಒಪ್ಪುತ್ತೀರಿ?’ ಎಂದು ಆಚಾರ್ಯ ರಜನೀಶ್ ಕೇಳಿದಾಗ, ‘ಭಗವದ್ಗೀತೆಯು ಪ್ರತ್ಯಕ್ಷ ಯುದ್ಧವನ್ನು ಹೇಳುವುದಿಲ್ಲ. ಅದು ಒಬ್ಬನೇ ಮನುಷ್ಯನ ಒಳಗಿನ ಅಂತರಂಗದ ಯುದ್ಧವನ್ನು ಹೇಳುತ್ತದೆ’ ಎಂದು ಉತ್ತರಿಸುತ್ತಾರೆ. ಗಾಂಧಿಯವರ ಉತ್ತರವನ್ನು ಸ್ವೀಕರಿಸುವುದು-ಬಿಡುವುದು ಬೇರೆ ಮಾತು. ಆದರೆ ಅವರು ಭಗವದ್ಗೀತೆಯನ್ನು ತಾಯಿ ಎಂದಿದ್ದಾರೆ, ಆದ್ದರಿಂದ ಅವರು ಹಿಂದೂ ಓಲೈಕೆ ಮಾಡುತ್ತಿದ್ದಾರೆ ಎಂದರೆ ಅದೆಷ್ಟು ಅರ್ಥಹೀನವೋ, ಸಾಂದರ್ಭಿಕ ಮಾತುಗಳನ್ನಿರಿಸಿಕೊಂಡು ಗಾಂಧಿ ಮುಸ್ಲಿಂ ಓಲೈಕೆ ಮಾಡಿದ್ದಾರೆ ಎನ್ನುವುದೂ ಅರ್ಥಹೀನ.
ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಡಲು ಗಾಂಧಿ ಉಪವಾಸ ಕೂತರು, ಅದು ಮುಸ್ಲಿಂ ಓಲೈಕೆ ಎನ್ನುವುದೊಂದು ತರ್ಕ. ಭಾರತದ ರಿಸರ್ವ್ ಬ್ಯಾಂಕ್‌ನಲ್ಲಿ ಭದ್ರತಾ ಠೇವಣಿಯಾಗಿ ಇದ್ದ ಹಣದಲ್ಲಿ ಪಾಕಿಸ್ತಾನ ವಿಭಜನೆಯಾದಾಗ ಅದರ ಪಾಲನ್ನು ಕೊಡಬೇಕು ಎನ್ನುವುದು ಭಾರತ ಸ್ವಾತಂತ್ರ್ಯ ಶಾಸನದೊಂದಿಗೆ ಸೇರಿದ ಕಾನೂನು. ಕೊಡಬೇಕಾದ್ದನ್ನು ಕೊಟ್ಟುಬಿಡಿ ಎನ್ನುವುದು ತತ್ವಗಳೇ ತಂತ್ರಗಳೂ ಆಗಿದ್ದ ಗಾಂಧಿಯವರ ಸೈದ್ಧಾಂತಿಕ ನಿಲುವೇ ಹೊರತು ಓಲೈಸುವ ಉದ್ದೇಶದ್ದಲ್ಲ. ಆದರೆ ಪರಿವಾರವಾದಿಗಳು ಅದು ಪಾಕಿಸ್ತಾನಕ್ಕೆ ಸಲ್ಲುವ ಕಾನೂನುರೀತ್ಯ ಧನವಾಗಿತ್ತು ಎಂಬುದನ್ನು ಜಾಣತನದಿಂದ ಮರೆಮಾಚಿಯೇ ಮಾತನಾಡುತ್ತಾರೆ.
ಪರಿವಾರವಾದಿಗಳ ಸಾಮಾನ್ಯ ಲಕ್ಷಣ, ಅವರದೇ ನಿಲುವನ್ನು ಅವರ ಕಡೆಯವರೇ ಉಲ್ಲಂಘಿಸಿದರೆ ಸಮರ್ಥಿಸಿಕೊಳ್ಳುವುದಾಗಿದೆ. ಭ್ರಷ್ಟಾಚಾರದ ವಿಷಯ ಬಂದ ತಕ್ಷಣ ಆಚೆಯವನು ಮಾಡಿಲ್ಲವೇ ಎಂಬ ಸಮರ್ಥನೆ. ಲೈಂಗಿಕ ಹಗರಣಗಳ ವಿಷಯ ಬಂದ ತಕ್ಷಣ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದು ನಡೆಯುತ್ತದೆ. ಇದೇ ಪರಿವಾರವಾದಿಗಳು ಮಹಿಳೆಯರ ವಸ್ತ್ರಗಳು ಹೇಗಿರ
ಬೇಕು ಎಂದು ಹೇಳುತ್ತಾರೆ ಮತ್ತು ಅದನ್ನು ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯೊಂದಿಗೆ ಜೋಡಿಸಿ ವಿವರಿಸುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ, ಲೈಂಗಿಕ ನೈತಿಕತೆ ಉಳಿಸಿಕೊಳ್ಳದವರನ್ನು ಒಪ್ಪಿಕೊಂಡೇ ಇತರರಿಗೆ ಸಂಸ್ಕೃತಿ, ನೈತಿಕತೆಯ ಪಾಠ ಮಾಡುವುದು ಅಪ್ರಾಮಾಣಿಕತೆ.
ಕುದ್ಮಲ್ ರಂಗರಾವ್ ಅವರನ್ನು ಗುರು ಎಂದು ಕರೆದವರು ಗಾಂಧಿ. ಕುದ್ಮಲ್ ರಂಗರಾಯರನ್ನು ತುಚ್ಛೀಕರಣ ಮಾಡಿದವರಿದ್ದರು. ಗಾಂಧಿಯವರ ಅನುಯಾಯಿ ಕಾರ್ನಾಡ್ ಸದಾಶಿವ ರಾಯರನ್ನೂ ತುಚ್ಛೀಕರಣ ಮಾಡಿದವರಿದ್ದರು. ಆ ತುಚ್ಛೀಕರಣದ ಪ್ರವೃತ್ತಿಯೇ ಪರಿವಾರವಾದಿಗಳಲ್ಲೂ ಇದೆ. ಇನ್ನೊಬ್ಬರನ್ನು ಹೀಯಾಳಿಸಿ ವೈಚಾರಿಕ ಅಪ್ರಾಮಾಣಿಕತೆಯನ್ನು ಮುಚ್ಚಿಡುವುದೇ ಪರಿವಾರವಾದದ ಸಿದ್ಧಾಂತ ಇರುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.