ಗಾಂಧೀಜಿಯ ಆರೋಗ್ಯ ಏರುಪೇರಾಗಿ, ವಿಶ್ರಾಂತಿಗೆಂದು ಬೆಂಗಳೂರಿನ ಬಳಿಯ ನಂದಿಬೆಟ್ಟಕ್ಕೆ ಬಂದಿದ್ದರು. ಆಗಲೂ ಅವರು ಚಟುವಟಿಕೆಯಿಂದ ಇದ್ದುದನ್ನು ಕಂಡವರೊಬ್ಬರು, ‘ಬಾಪೂ, ನೀವು ವಿಶ್ರಾಂತಿ
ತೆಗೆದುಕೊಳ್ಳಬೇಕು’ ಎಂದರು. ಅದಕ್ಕೆ ಗಾಂಧೀಜಿ ಉತ್ತರ: ‘ವಿಶ್ರಾಂತಿ ಎಂದರೇನು? ನನ್ನ ಪ್ರಕಾರ ವಿಶ್ರಾಂತಿ ಎಂದರೆ, ಒಂದು ಕೆಲಸದಿಂದ ಇನ್ನೊಂದಕ್ಕೆ ಹೋಗುವುದು. ನೀವು ನನಗೆ ಚರಕ ತರಿಸಿಕೊಡಿ. ನಾನು ಇನ್ನೂ ಆರಾಮಾಗಿರುತ್ತೇನೆ’.
‘ವಿಶ್ರಾಂತಿ’ ಎಂದರೆ ಏನೂ ಮಾಡದೆ ಸುಮ್ಮನಿರುವುದಲ್ಲ. ಬದಲಿಗೆ, ನಮ್ಮ ಇಡೀ ವ್ಯಕ್ತಿತ್ವ ಪೂರ್ಣವಾಗಿ ತೊಡಗುವ ಮತ್ತೊಂದು ಕೆಲಸದಲ್ಲಿ ತೊಡಗಿಕೊಳ್ಳುವುದು ಎಂಬ ಈ ಒಳನೋಟದಿಂದ ನಮ್ಮ ವಿಶ್ರಾಂತಿಯ ಕಲ್ಪನೆಯೇ ಬದಲಾಗಬಲ್ಲದು! ಚರಕಕ್ಕೂ ದೈಹಿಕ- ಮಾನಸಿಕ ಆರೋಗ್ಯಕ್ಕೂ ಇರುವ ನಂಟಿನ ಬಗ್ಗೆ ಗಾಂಧೀಜಿಗೆ ಗಾಢ ನಂಬಿಕೆಯಿತ್ತು. ಚರಕದಿಂದ ನೂಲಲು ಶುರು ಮಾಡಿದ ಮೊದಲ ದಿನವೇ ಕಾಯಿಲೆಯಿಂದ ಚೇತರಿಸಿಕೊಂಡಿದ್ದನ್ನು ಗಾಂಧೀಜಿ ಮರೆತಿರಲಿಲ್ಲ!
ಭಾರತದ ಹಳ್ಳಿಗಾಡಿನ ಆರ್ಥಿಕತೆ ಕುರಿತು ಯೋಚಿಸುತ್ತಿದ್ದಾಗ ಗಾಂಧೀಜಿ ಕಣ್ಣೆದುರು ಹಟಾತ್ತನೆ ಸುಳಿದ ಚರಕ, ಅವರ ಪಾಲಿಗೆ ಕೇವಲ ನೂಲು ತೆಗೆಯುವ ಸಾಧನವಾಗದೆ ಸದಾ ಅರ್ಥ ವಿಸ್ತರಿಸಿಕೊಳ್ಳುವ ಸಂಕೇತವಾಯಿತು. ಈಚಿನ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ನಿರ್ದಯ ನಿರ್ಧಾರದಿಂದಾಗಿ ನಗರದಿಂದ ನೂರಾರು ಮೈಲಿ ಹಳ್ಳಿಗಳಿಗೆ ನಡೆದು ಬರುತ್ತಿದ್ದ ಅಸಹಾಯಕ ಕಾರ್ಮಿಕರನ್ನು ಅನುಕಂಪದಿಂದ ನೋಡಿದವರಿಗೆ, ಗಾಂಧೀಜಿ ಯಾಕೆ ಹಳ್ಳಿಗರಿಗೆ ಎಟುಕಬಲ್ಲ ಉದ್ಯೋಗಗಳನ್ನು ರೂಪಿಸಲೆತ್ನಿಸಿದ್ದರು, ಹಳ್ಳಿಗಳನ್ನು ಮರಳಿ ಕಟ್ಟಬೇಕೆಂದು ಸದಾ ಯಾಕೆ ಹೇಳುತ್ತಿದ್ದರು ಎಂಬುದು ಹೊಳೆದಿರಬಹುದು.
ಒಮ್ಮೆ ಅರ್ಥಶಾಸ್ತ್ರಜ್ಞ ಜೆ.ಸಿ.ಕುಮಾರಪ್ಪನವರ ಜೊತೆ ಮಾತಾಡುತ್ತಾ, ಗ್ರಾಮೀಣ ಹೈಸ್ಕೂಲ್ ಮಕ್ಕಳಿಗೆ ಇತರ ವಿಷಯಗಳ ಜೊತೆಗೆ ಒಂದಾದರೂ ಕುಶಲಕಲೆ ಕಲಿಸುವ ಪಠ್ಯಕ್ರಮ ರೂಪಿಸಬೇಕೆಂದು ಗಾಂಧೀಜಿ ಕೇಳಿಕೊಂಡರು. ಅದು ಗ್ರಾಮೀಣ ನಿರುದ್ಯೋಗಕ್ಕೆ ಗಾಂಧೀಜಿ ಕಂಡುಕೊಂಡ ಒಂದು ಉತ್ತರವಾಗಿತ್ತು. ವರ್ಷದಲ್ಲಿ ಆರು ತಿಂಗಳು ಕೃಷಿ ಕೆಲಸದಿಂದ ಬಿಡುವಿರುವ ಹಳ್ಳಿಯ ಹೆಂಗಸರಿಗಂತೂ ಚರಕ ಆರ್ಥಿಕ ಸಂಗಾತಿ ಎಂದು ಗಾಂಧೀಜಿ ಹೇಳುತ್ತಿದ್ದುದು ಈ ಚಿಂತನೆಯ ಭಾಗವಾಗಿತ್ತು.
‘ನೀವೇಕೆ ಯಂತ್ರಗಳನ್ನು ವಿರೋಧಿಸುತ್ತೀರಿ’ ಎಂಬ ಪ್ರಶ್ನೆಗೆ ಗಾಂಧೀಜಿ ಉತ್ತರ: ‘ನಾನೆಲ್ಲಿ ಯಂತ್ರಗಳನ್ನು ವಿರೋಧಿಸುತ್ತೇನೆ? ಸಿಂಗರ್ ಹೊಲಿಗೆ ಯಂತ್ರವನ್ನು ನೋಡಿ! ಅದು ಎಷ್ಟು ಸುಂದರವಾಗಿದೆ!’ ಅಂದರೆ, ಚರಕದ ಬಗ್ಗೆ ಮಾತಾಡುವಾಗ ಗಾಂಧೀಜಿ ಒಟ್ಟಾರೆಯಾಗಿ ಜನರ ಕೈಗೆಟಕುವ ಯಂತ್ರದ ಕುರಿತು ಮಾತಾಡುತ್ತಿದ್ದರು. ಇವತ್ತಿಗೂ ಇಂಡಿಯಾದ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಟೈಲರಿಂಗ್ ಮಾಡುತ್ತಿರುವ ಲಕ್ಷಾಂತರ ಸ್ವಾವಲಂಬಿ ಹೆಣ್ಣುಮಕ್ಕಳು ತಮ್ಮ ಕೈಗೆಟಕಿರುವ ಈ ಯಂತ್ರದ ಆಸರೆಯಿಂದ ಘನತೆಯಿಂದ ಬಾಳುತ್ತಿದ್ದಾರೆ. ‘ಸ್ವರಾಜ್ ಎಂದರೆ ತನ್ನನ್ನು ತಾನು ಆಳಿಕೊಳ್ಳುವುದು’ ಎಂದ ಗಾಂಧೀಜಿಯ ಅರ್ಥ ಹೀಗೆ ನಿತ್ಯ ಬೆಳೆಯುತ್ತಿರುತ್ತದೆ.
ಗಾಂಧೀಜಿ, ಚರಕಕ್ಕೆ ಅಹಿಂಸೆಯ ವ್ಯಾಪಕಾರ್ಥವನ್ನು ಜೋಡಿಸಿದ ಬಗೆಗಳು ಕೂಡ ಕುತೂಹಲಕರವಾಗಿವೆ. ಹಿಂಸೆ, ಅಹಿಂಸೆಗಳ ಅರ್ಥಗಳನ್ನು ಸೀಮಿತ ನೆಲೆಗಳಾಚೆಗೆ ಕೊಂಡೊಯ್ಯುವ ಗಾಂಧೀಜಿಯ ಈ ಅನನ್ಯ ನೋಟವನ್ನು ಗಮನಿಸಿ: ‘ಒಂದು ಹೋಲಿಕೆ ಕೊಡುವೆ. ನೀವು ಯಾರಾದರೂ ದೊಡ್ಡವರ ಮನೆಗೆ ಭೇಟಿ ಕೊಟ್ಟು ನೋಡಿ- ಅವರ ನಡುಮನೆಗಳಲ್ಲೇ ಹುಲಿಯ ಚರ್ಮ, ಜಿಂಕೆಯ ಕೋಡು, ಕತ್ತಿ, ಕಠಾರಿ, ಬಂದೂಕು ಮುಂತಾದವನ್ನು ತೂಗು ಹಾಕಿರುತ್ತಾರೆ. ಶಿಮ್ಲಾದ ರಾಷ್ಷ್ರಪತಿ ನಿವಾಸದಲ್ಲಿ, ಇಟಲಿಯ ಮುಸೊಲಿನಿಯ ನಿವಾಸದಲ್ಲಿ ಆಯುಧಗಳಿಂದ ಗೋಡೆಗಳನ್ನು ಸಿಂಗರಿಸಿರುವುದನ್ನು ನೋಡಿರುವೆ. ಈ ಸ್ಥಳಗಳಿಗೆ ನಾನು ಭೇಟಿ ಕೊಟ್ಟಾಗ ‘ರೈಫಲ್ ಸೆಲ್ಯೂಟ್’ ಮೂಲಕ ನನ್ನನ್ನು ಸ್ವಾಗತಿಸಲಾಯಿತು! ಯಾರಿಗಾದರೂ ವಂದನೆ ಸಲ್ಲಿಸಲು ಬಂದೂಕಿನಂಥ ಆಯುಧ ಬಳಸುತ್ತಾರೆಯೇ? ಆದ್ದರಿಂದಲೇ ನಾವು ಚರಕವನ್ನು ಅಹಿಂಸೆಯ ಸಾಧನವನ್ನಾಗಿಸಬೇಕಿದೆ. ಮುಸೊಲಿನಿಯ ಬಂಗಲೆಯ ಗೋಡೆಗೆ ತೂಗುಹಾಕಿರುವ ಬಂದೂಕು ತನ್ನ ನೋಟಮಾತ್ರದಿಂದಲೇ ನೋಡುಗರಲ್ಲಿ ಹಿಂಸೆಯ ಭಾವನೆಯನ್ನು ಉಂಟುಮಾಡಿದಂತೆ, ಚರಕವೂ ತನ್ನ ಇರುವಿಕೆಯಿಂದಲೇ ಅಹಿಂಸೆಯ ಸಂದೇಶವನ್ನು ಸಾರುವಂತಾಗಬೇಕು’. ಹೀಗೆ ಚರಕದ ಅರ್ಥವು ವ್ಯಾಪಕ ಫಿಲಾಸಫಿಯಾಗಿ ಬೆಳೆಯುತ್ತಾ ಹೋಗುತ್ತದೆ. ಕಲಾವಿದ ವೆಂಕಟಪ್ಪನವರಿಗೆ ಗಾಂಧೀಜಿ ಮಾಡಿಕೊಂಡ ವಿನಂತಿಯೂ ಈ ಫಿಲಾಸಫಿಯ ಭಾಗವಾಗಿತ್ತು: ‘ಚರಕದ ಮಹತ್ವ ಏನೆಂಬುದನ್ನು ನೀವು ಚಿತ್ರಿಸಬಲ್ಲಿರಾದರೆ ನನಗೆ ಇನ್ನೂ ಸಂತೋಷವಾಗುತ್ತದೆ’.
ನಾಯಕತ್ವ ವಹಿಸಲು ಹಿಂಜರಿಯುತ್ತಲೇ ಶ್ರೇಷ್ಠ ಲೋಕನಾಯಕರಾಗಿ ರೂಪುಗೊಂಡ ಗಾಂಧೀಜಿಯ ನಾಯಕ-ವ್ಯಕ್ತಿತ್ವದ ಸಾತ್ವಿಕ ಪ್ರಭಾವ ಅದ್ಭುತವಾದುದು. ಗಾಂಧೀಜಿ ಹೇಳಿದರೆ ಏನು ಬೇಕಾದರೂ ಮಾಡಬಲ್ಲ ಸಾಮಾನ್ಯ ಜನ ಅವರ ಜೊತೆಗಿದ್ದರು. ಈ ಎಲ್ಲರೂ ಜೊತೆಗೂಡಿ ಮಾಡುತ್ತಿದ್ದ ಹಲಬಗೆಯ ಒಳ್ಳೆಯ ಕೆಲಸಗಳಿಂದ ಸುತ್ತಮುತ್ತ ಒಳಿತು, ಸನ್ನಡತೆ, ಸದ್ಭಾವನೆಗಳ ಸುಗಂಧ ಹಬ್ಬುತ್ತಿತ್ತು. ಒಳ್ಳೆಯ ನಾಯಕನಾಗಬೇಕೆಂಬ ಪ್ರಾಮಾಣಿಕ ಹಂಬಲವುಳ್ಳವರು ಗಾಂಧೀಜಿಯ ಈ ವ್ಯಕ್ತಿತ್ವವನ್ನು ಅರಿಯಬೇಕು. ಜೊತೆಗೆ, ಗಾಂಧೀಜಿ ಎಲ್ಲ ವಲಯಗಳಿಂದಲೂ ನಾಯಕತ್ವವನ್ನು ರೂಪಿಸಲೆತ್ನಿಸುತ್ತಿದ್ದರು. ಆಶ್ರಮಕ್ಕೆ ಚರಕವನ್ನು ಹುಡುಕಿ ತಂದ ಗಂಗಾಬೆನ್ ಅವರಿಂದ ಹಿಡಿದು ಎಲ್ಲ ಜಾತಿಗಳ ಲಕ್ಷಾಂತರ ಅನಾಮಿಕ ಪುರುಷರು, ಮಹಿಳೆಯರು ಗಾಂಧೀಜಿಯ ವ್ಯಕ್ತಿತ್ವದ ಚುಂಬಕ ಶಕ್ತಿಯಿಂದಾಗಿ ಸಾರ್ವಜನಿಕ ರಂಗಕ್ಕೆ ಬಂದರು. ಗಾಂಧೀಜಿ ಬರುವವರೆಗೆ ಇಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಮಹಿಳೆಯರು ಸಾರ್ವಜನಿಕ ಸೇವೆಗಾಗಲೀ ಸ್ವಾತಂತ್ರ್ಯ ಹೋರಾಟಕ್ಕಾಗಲೀ ಇಳಿದಿರಲಿಲ್ಲ. ಆಧುನಿಕ ಭಾರತದಲ್ಲಿ ಮಹಿಳೆಯರು ಎಲ್ಲ ರಂಗಗಳಿಗೂ ಪ್ರವೇಶಿಸಿದ ಮೊತ್ತ ಮೊದಲ ಚಾರಿತ್ರಿಕ ಸನ್ನಿವೇಶ ಗಾಂಧೀಜಿಯ ಪ್ರಭಾವದಿಂದಲೂ ಸೃಷ್ಟಿಯಾಯಿತು.
ತಮ್ಮ ಬದುಕಿನ ಬಹುಕಾಲ ಬರವಣಿಗೆಯಲ್ಲಿ ತೊಡಗಿದ್ದ ಲೇಖಕ ಗಾಂಧೀಜಿ ಇವತ್ತಿಗೂ ನಮಗೆಲ್ಲ ಆದರ್ಶ ಮಾದರಿಯಾಗಬಲ್ಲರು. ತಮ್ಮ ಆತ್ಮಕತೆಯನ್ನು ‘ಸತ್ಯದೊಂದಿಗೆ ಪ್ರಯೋಗ’ ಎಂದು ಕರೆದ ಗಾಂಧೀಜಿಗೆ ಮಾತು, ಬರವಣಿಗೆ, ನಡೆಗಳೂ ಸತ್ಯದೊಂದಿಗೆ ನಿತ್ಯಪ್ರಯೋಗವೇ ಆಗಿದ್ದವು.
ಲೇಖಕ, ಲೇಖಕಿಯರು, ಮೇಷ್ಟ್ರುಗಳು, ಪತ್ರಕರ್ತರು ಗಾಂಧಿಯವರ ಬರಹಗಾರ ವ್ಯಕ್ತಿತ್ವದಿಂದ ನಿತ್ಯ ಕಲಿಯುವುದು ಬಹಳಷ್ಟಿದೆ. ತಾವು ಸಂಪಾದಿಸುತ್ತಿದ್ದ ‘ಇಂಡಿಯನ್ ಒಪೀನಿಯನ್’ ಕುರಿತು ಒಮ್ಮೆ ಗಾಂಧೀಜಿ ಬರೆದ ಮಾತು: ‘ಯೋಚಿಸದೆ, ವಿಚಾರ ಮಾಡದೆ ಇರುವ ಮಾತನ್ನಾಗಲೀ ಉದ್ದೇಶಪೂರ್ವಕವಾದ ಅತಿಶಯೋಕ್ತಿಯನ್ನಾಗಲೀ ಇಲ್ಲಿ ಬರೆದುದು ನಮಗೆ ನೆನಪಿಲ್ಲ... ಹತೋಟಿಯಿಲ್ಲದ ನೀರಿನ ಪ್ರವಾಹ ಹಳ್ಳಿಗಳನ್ನೆಲ್ಲ ಮುಳುಗಿಸಿ ಪೈರನ್ನು ನಾಶ ಮಾಡುವಂತೆ, ಹಿಡಿತವಿಲ್ಲದ ಲೇಖನಿಯೂ ನಾಶದ ಸಾಧನವಾಗುತ್ತದೆ... ಅಂಕುಶ ನಮ್ಮೊಳಗಿನಿಂದ ಬಂದಾಗ ಮಾತ್ರ ಅರ್ಥ ಪೂರ್ಣವಾಗಿರಬಲ್ಲದು’.
ರಾಮಭಕ್ತರಿರಲಿ, ವೈಚಾರಿಕರು ಕೂಡ ಸರಿಯಾಗಿ ಗ್ರಹಿಸದಿರುವ ಗಾಂಧೀಜಿಯ ‘ರಾಮರಾಜ್ಯ’ದ ವಿಶಿಷ್ಟ ವ್ಯಾಖ್ಯಾನವನ್ನು ಅವರ ಮಾತುಗಳಲ್ಲೇ ಕೇಳಿ: ‘ನಾನು ಹೇಳುತ್ತಿರುವ ರಾಮರಾಜ್ಯ ಈಗಲೂ ಸಾಧ್ಯ. ರಾಮನ ಗುಂಪಿಗೆ ಸೇರಿದ ಜನ ಈಗಲೂ ನಮ್ಮ ನಡುವೆ ಇದ್ದಾರೆ. ಆಧುನಿಕ ಕಾಲದಲ್ಲಿ ಖಲೀಫರು ಅದ್ಭುತ ಆಡಳಿತಗಾರರಾಗಿದ್ದರು. ಅಬೂಬಕರ್ ಮತ್ತು ಹಜರತ್ ಉಮರ್‌ಗಳು ಲಕ್ಷಾಂತರ ರೂಪಾಯಿಗಳ ತೆರಿಗೆ ಸಂಗ್ರಹಿಸುತ್ತಿದ್ದರು. ಸಾರ್ವಜನಿಕ ಉಪಯೋಗಕ್ಕಲ್ಲದೆ ಮತ್ತಾವುದಕ್ಕೂ ಒಂದೇ ಒಂದು ಕಾಸನ್ನೂ ಅವರು ಉಪಯೋಗಿಸುತ್ತಿರಲಿಲ್ಲ. ಖಾಸಗಿಯಾಗಿ ಅವರು ಫಕೀರರ ಬದುಕು ನಡೆಸುತ್ತಿದ್ದರು. ಜನರಿಗೆ ನ್ಯಾಯ ದೊರಕಿಸುವುದರತ್ತ ಸದಾ ಮುತುವರ್ಜಿ ವಹಿಸುತ್ತಿದ್ದರು. ಶತ್ರುವಿನ ಜೊತೆಯಲ್ಲಿ ಕೂಡ ನ್ಯಾಯದಿಂದ ನಡೆದುಕೊಳ್ಳಬೇಕೆಂಬುದು ಅವರ ತತ್ವವಾಗಿತ್ತು’.
ರಾಮನ ಹೆಸರಿನಲ್ಲಿ ನಡೆದ ಹಿಂಸಾರಾಜಕಾರಣವನ್ನು ಇಂದು ಸಂಭ್ರಮಿಸುತ್ತಿರುವವರು ಹಿಟ್ಲರ್ ಬಗ್ಗೆ ಗಾಂಧೀಜಿ ಹೇಳಿದ್ದನ್ನು ಕೇಳಿಸಿಕೊಂಡಿರಲಿಕ್ಕಿಲ್ಲ: ‘ಹಿಟ್ಲರ್ ಹರಿಸಿದ ಅಷ್ಟೆಲ್ಲ ರಕ್ತಕ್ಕೂ ಜಗತ್ತಿನ ನೈತಿಕ ಘನತೆಯನ್ನು ಒಂದು ಎಳ್ಳುಮೊನೆಯಷ್ಟಾದರೂ ಏರಿಸಲು ಆಗಿಲ್ಲ’. ಹಾಗೆಯೇ ರಾಮನ ಹೆಸರಲ್ಲಿ ಹರಿದಿರುವ ರಕ್ತಕ್ಕೂ ಈ ದೇಶದ ಘನತೆಯನ್ನು ಸೂಜಿಮೊನೆಯಷ್ಟಾದರೂ ಏರಿಸಲು ಸಾಧ್ಯವಾಗಿಲ್ಲ ಎಂಬ ಸತ್ಯ ಇಲ್ಲಿನ ಪ್ರಜ್ಞಾವಂತರಿಗಾದರೂ ಹೊಳೆದರೆ, ಗಾಂಧೀಜಿ ಕಾಲಕಾಲಕ್ಕೆ ಆಡಿದ ಮಾತುಗಳ ಹಿಂದಿರುವ ಆಳವಾದ ಚಿಂತನೆಯ
ಅರಿವಾಗಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.