ADVERTISEMENT

ಅಖಿಲೇಶ್ ಚಿಪ್ಪಳಿಯವರ ವಿಶ್ಲೇಷಣೆ: ವಿಷವರ್ತುಲದ ಒಳ‘ಶುಂಠಿ’

ಅಖಿಲೇಶ್ ಚಿಪ್ಪಳಿ
Published 7 ಜುಲೈ 2025, 23:30 IST
Last Updated 7 ಜುಲೈ 2025, 23:30 IST
<div class="paragraphs"><p>ಸಾಂದರ್ಭಿ ಚಿತ್ರ</p></div>

ಸಾಂದರ್ಭಿ ಚಿತ್ರ

   

ಮಲೆನಾಡಿನಲ್ಲಿ ಪಾರಂಪರಿಕವಾಗಿ ಭತ್ತ ಬೆಳೆಯುವ ಪ್ರದೇಶಗಳು ಅಡಿಕೆ ತೋಟಗಳಾಗಿ ಬದಲಾಗುವುದಕ್ಕೂ ಮುನ್ನ, ಆ ಪ್ರದೇಶದಲ್ಲಿ ಮುಂಗಾರಿನಲ್ಲಿ ಭತ್ತದ ಪೈರಿನ ನಾಟಿ ನಡೆಯುತ್ತಿತ್ತು. ಕೆರೆಯ ನೀರನ್ನು ಬಳಸಿ ಬೇಸಿಗೆಯಲ್ಲೂ ಕೊಂಚ ಪ್ರದೇಶದಲ್ಲಿ ಭತ್ತ ಬೆಳೆಯ ಲಾಗುತ್ತಿತ್ತು. ಒಂದಷ್ಟು ಜಾಗದಲ್ಲಿ ಮಣ್ಣಿನ ಏರಿ ನಿರ್ಮಿಸಿ ಒಂದಷ್ಟು ಸಾವಯವ ಶುಂಠಿ ಬೆಳೆಯು ತ್ತಿದ್ದುದು ಸಾಮಾನ್ಯವಾಗಿತ್ತು. ಶುಂಠಿಯಲ್ಲಿ ಮಿಶ್ರಬೆಳೆಯಾಗಿ ಹಸಿ ಮೆಣಸು, ಬದನೆ, ಟೊಮೆಟೊ ಬೆಳೆಯಲಾಗುತ್ತಿತ್ತು. ಮುಂದಿನ ಮುಂಗಾರಿಗೆ ಮುಂಚಿತವಾಗಿ ಶುಂಠಿಯ ಕೊಯ್ಲು ಮುಗಿದು, ಆ ಜಾಗ ಮತ್ತೆ ಭತ್ತ ಬೆಳೆಯಲು ಅನುವಾಗುತ್ತಿತ್ತು.

ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಶುಂಠಿಯ ಮೂಲ ಭಾರತ ಮತ್ತು ಚೀನಾ. ಪಶ್ಚಿಮಘಟ್ಟ ಹಾಗೂ ಭಾರತದ ಈಶಾನ್ಯ ಭಾಗದ ಗುಡ್ಡಗಾಡು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಶುಂಠಿಯ ಘಮ ದೂರದ ಜಾವಾದವರೆಗೂ ಪಸರಿಸಿತ್ತು. ಕೇರಳದ ಕರಾವಳಿ ಮೂಲಕ ಶುಂಠಿಯನ್ನು ಯೂರೋಪ್ ದೇಶಗಳಿಗೆ ಅರಬ್ಬರು ಮಾರುತ್ತಿದ್ದರು. 1498ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸರು ಶುಂಠಿಯನ್ನು ಏಕಜಾತಿ ಬೆಳೆಯನ್ನಾಗಿ ಬೆಳೆಯುವಂತೆ ಇಲ್ಲಿನ ಮಲಬಾರಿ ರೈತರಿಗೆ ಆಮಿಷವೊಡ್ಡಿದರು.

ADVERTISEMENT

ಮಲಬಾರಿ ರೈತರಿಗೆ ಶುಂಠಿಯನ್ನಷ್ಟೇ ಬೆಳೆಯುವ ಆಮಿಷ ಒಪ್ಪಿಗೆಯಾಗಲಿಲ್ಲ. ಆಗಿನ ರಾಜರು ಪೋರ್ಚುಗೀಸರನ್ನು ವ್ಯಾಪಾರದ ಸಲುವಾಗಿ ರಾಜ್ಯದೊಳಗೆ ರತ್ನಗಂಬಳಿ ಹಾಸಿ ಬರಮಾಡಿಕೊಂಡಿದ್ದರು. ಹೀಗಾಗಿ, ಪೋರ್ಚುಗೀಸರ ಆಸೆಗೆ ರಾಜರ ಆದೇಶವೂ ಜೊತೆಯಾಗಿ, ಏಕಜಾತಿಯ ಸಂಬಾರ ಪದಾರ್ಥವಾಗಿ ಶುಂಠಿಯನ್ನು ಬೆಳೆಯುವುದು ಮಲಬಾರಿಗಳಿಗೆ ಅನಿವಾರ್ಯವಾಯಿತು. ನಂತರದಲ್ಲಿ ಡಚ್ಚರು ಪೋರ್ಚುಗೀಸರನ್ನು ಓಡಿಸಿ, ಇಲ್ಲಿನ ಸಂಬಾರ ಪದಾರ್ಥಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಿದರು. 1608ರಲ್ಲಿ ಭಾರತಕ್ಕೆ ಬಂದು ಡಚ್ಚರ ಜಾಗವನ್ನು ಆಕ್ರಮಿಸಿದ ಈಸ್ಟ್ ಇಂಡಿಯಾ ಕಂಪನಿ, 250 ವರ್ಷಗಳ ಕಾಲ ಭಾರತದಲ್ಲಿ ಆಡಳಿತ ನಡೆಸಿದ್ದು ಈಗ ಇತಿಹಾಸ.

ಭತ್ತದ ಗದ್ದೆಗಳಲ್ಲಿ ಬೆಳೆಯುವ ಶುಂಠಿಗೆ ‘ಮಹಾಕಾಳಿ’ ಎಂಬ ರೋಗ ಶುರುವಾಗುವುದರೊಂದಿಗೆ ಶುಂಠಿ ಬೆಳೆ ಹೊಸತೊಂದು ಬದಲಾವಣೆಗೆ ತನ್ನನ್ನೊಡ್ಡಿಕೊಂಡಿತು. ಮೊದಲನೇ ವರ್ಷದಲ್ಲಿ ಚೆನ್ನಾಗಿ ಫಸಲು ನೀಡುವ ಗದ್ದೆಯೊಂದರಲ್ಲಿ, ಎರಡನೇ ವರ್ಷದ ಬೆಳೆಗೆ ಈ ರೋಗ ಬಾಧಿಸತೊಡಗಿತು. ಬಹು ಲಾಭದ ಬೆಳೆಯಾದ ಶುಂಠಿ ಕೃಷಿಯನ್ನು ಕೈಬಿಡಲು ರೈತರು ತಯಾರಿರಲಿಲ್ಲ. ಆವರೆಗೂ ಶುಂಠಿ ಬೆಳೆಯದಿರುವ ಗದ್ದೆಗಳನ್ನು ಹುಡುಕಿಕೊಂಡು ಹೊರಟರು. ನೀರು ಬಸಿದು ಹೋಗುವ ಗುಡ್ಡಗಳಲ್ಲಿ ಶುಂಠಿ ಬೆಳೆಯುವ ಪರಿಪಾಟ ಪ್ರಾರಂಭವಾಯಿತು. ಹಸಿರು ಕ್ರಾಂತಿಯ ನಂತರದಲ್ಲಿ ಭತ್ತದ ಬೆಳೆಗೆ ಬೀಳುವ ಬೆಂಕಿ ರೋಗವನ್ನು ಹತೋಟಿಯಲ್ಲಿ ಇಡಲು ಫಾಲಿಡಾಲ್ ಎಂಬ ಕೀಟನಾಶಕ ಬಳಕೆಗೆ ಬಂತು. ಜಾಗತೀಕರಣದ ನಂತರದಲ್ಲಿ ಕಾಫಿ ಬೆಳೆಗೆ ಉತ್ತಮ ಬೆಲೆ ಬಂತು. ಕೊಡಗಿನಲ್ಲಿ ಕಾಫಿ ಬೆಳೆಯ ವಿಸ್ತರಣೆ ಪ್ರಾರಂಭವಾಯಿತು. ಕೇರಳದ ಸಿರಿಯನ್ ಕ್ಯಾಥೋಲಿಕ್ ಜನರು ಮೀನು ಮಾರಲು ಕೊಡಗಿನವರೆಗೂ ಬರುತ್ತಿದ್ದರು. ಅವರು ಕಾಫಿ ತೋಟಗಳ ವಿಸ್ತರಣೆಗೆ ಕಾಡು ಕಡಿಯುವ ಕೆಲಸಕ್ಕೆ ಕೇರಳದವರನ್ನು ಕರೆ ತಂದರು.

ಕೇರಳದಿಂದ ಬಂದವರು ಕಾಡು ಸವರಿ, ಅಲ್ಲಿ ಶುಂಠಿ ಬೆಳೆಯುವುದರ ಜೊತೆಗೆ, ಕೊಡಗಿನವರಿಗೆ ಕಾಫಿ ಗಿಡಗಳನ್ನು ನಾಟಿ ಮಾಡಿಕೊಡುತ್ತಿದ್ದರು. ಹೀಗೆ, ಪ್ರತಿ ವರ್ಷ ಹೊಸ ಜಾಗಗಳಲ್ಲಿ ಶುಂಠಿ ತನ್ನ ಪಾರಮ್ಯ ಮೆರೆಯಿತು. ಜೊತೆಗೆ ವಿವಿಧ ಕಳೆಗಳನ್ನು ನಿವಾರಿಸಲು ಶುಂಠಿ ಬೆಳೆ ನಾಟಿ ಮಾಡುವುದಕ್ಕೂ ಮೊದಲು ಹಾಗೂ ಬೆಳೆ ಬಂದ ನಂತರದಲ್ಲಿ ಬೆಲೆ ಬರುವವರೆಗೂ ಕಾಯುವ ಸಮಯದಲ್ಲಿ ಶುಂಠಿ ಎಲೆಗಳ ಸಮೇತ ಬಾಕಿ ಕಳೆಗಳ ನಾಶ ಮಾಡಲು ಕಳೆನಾಶಕಗಳ ವ್ಯಾಪಕ ಬಳಕೆ ಪ್ರಾರಂಭವಾಯಿತು. ಶುಂಠಿಗೆ ಬರುವ ಸಂಭಾವ್ಯ ರೋಗಗಳನ್ನು ಹತೋಟಿಯಲ್ಲಿಡಲು ಅಮೆರಿಕ ಮತ್ತು ಯೂರೋಪ್‌ನ ದೇಶಗಳಲ್ಲಿ ನಿಷೇಧಗೊಂಡ ಕ್ಲೋರೋಫೈರಿಫಾಸ್, ಕಾರ್ಬೋಫ್ಯೂರಾನ್ ಅಂತಹ ಘೋರ ರಾಸಾಯನಿಕಗಳ ಅನಿಯಂತ್ರಿತ ಬಳಕೆ ಪ್ರಾರಂಭವಾಯಿತು. ಇದನ್ನು ಸಿಂಪಡಣೆ ಮಾಡುವ ಕೆಲಸಗಾರರು ಆರೋಗ್ಯದ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪ್ಯಾರಾಕ್ವಾಟ್ ಡೈ ಕ್ಲೋರೈಡ್‌ ಕಳೆನಾಶಕ ಸಿಂಪಡಣೆ ಮಾಡುವ ಸಮಯದಲ್ಲಿ ಕೆಲಸಗಾರರು ಮೃತಪಟ್ಟ ಉದಾಹರಣೆಗಳೂ ಇವೆ.

ಮೊದಲಿಗೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅಧಿಕ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿತ್ತು. ಪ್ರಸ್ತುತ, ಯಾದಗಿರಿ ಜಿಲ್ಲೆಯೊಂದನ್ನು ಹೊರತುಪಡಿಸಿ, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಶುಂಠಿಯನ್ನು ಹಣದ ಬೆಳೆಯಾಗಿ ಬೆಳೆಯಲಾಗುತ್ತಿದೆ. ಶುಂಠಿ ಬೆಳೆ ವಾಣಿಜ್ಯ ಬೆಳೆ ಆಗುವ ಮೊದಲು ಆರೋಗ್ಯಯುಕ್ತ ಶುಂಠಿ ಬೆಳೆಯುವುದರಲ್ಲಿ ಭಾರತ ಮೊದಲನೇ ಸ್ಥಾನದಲ್ಲಿತ್ತು. ಈಗಲೂ, ವಿಷಯುಕ್ತ ಶುಂಠಿ ಬೆಳೆಯುವುದರಲ್ಲೂ ಮೊದಲನೇ ಸ್ಥಾನದಲ್ಲಿದೆ. ತೋಟಗಾರಿಕೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಶುಂಠಿ ಬೆಳೆಯುವ ಪ್ರದೇಶ ಸುಮಾರು ಆರು ಸಾವಿರ ಹೆಕ್ಟೇರ್. ಅನಧಿಕೃತವಾಗಿ ಶುಂಠಿ ಬೆಳೆಯುತ್ತಿರುವ ಪ್ರದೇಶ 10ರಿಂದ 20 ಪಟ್ಟು ಹೆಚ್ಚಿದೆ ಎಂದು ಶುಂಠಿ ಕುರಿತು ಸಂಶೋಧನೆ ಮಾಡುತ್ತಿರುವ ಭರತ್ ಅನಂತನಾರಾಯಣ ಹೇಳುತ್ತಾರೆ.

ಕರ್ನಾಟಕದಲ್ಲಿ ಬೆಳೆಯಲಾಗುವ ಶುಂಠಿಯನ್ನು ಬಳಸುವವರು ಉತ್ತರ ಭಾರತೀಯರು. ಶುಂಠಿಯನ್ನು ವ್ಯಾಪಕವಾಗಿ ಬಳಸುವವರಿಗೆ, ಅದನ್ನು ಬೆಳೆಯುವ ಹಿಂದಿನ ಕರಾಳತೆಯ ಅರಿವಿಲ್ಲ. ವ್ಯಾಪಕವಾಗಿ ಶುಂಠಿ ಬೆಳೆಯುವ ರೈತರು ತಾವು ಬೆಳೆದ ವಿಷಯುಕ್ತ ಶುಂಠಿಯನ್ನು ತಾವೇ ಬಳಸುವುದಿಲ್ಲವೆಂಬುದೂ ಸತ್ಯ. ಈ ಹಿಂದೆ, ಪಂಜಾಬ್ ರಾಜ್ಯದ ಭಟಿಂಡಾದಲ್ಲಿ ವಿಪರೀತ ರಾಸಾಯನಿಕಗಳನ್ನು ಬಳಸಿದ್ದರಿಂದ, ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಯಿತು. ಅಲ್ಲಿ ಕ್ಯಾನ್ಸರ್‌ಗೆ ಸುಲಭ ಚಿಕಿತ್ಸೆ ಲಭ್ಯವಿಲ್ಲದ ಕಾರಣಕ್ಕೆ, ರಾಜಸ್ಥಾನದ ಬೀಕಾನೆರ್ ಕ್ಯಾನ್ಸರ್ ಆಸ್ಪತ್ರೆಗೆ ರೈಲಿನ ಮುಖಾಂತರ ರೋಗಿಗಳು ಸಂಚರಿಸುತ್ತಿದ್ದರು. ಆ ರೈಲನ್ನು ‘ಕ್ಯಾನ್ಸರ್ ರೈಲು’ ಎಂದೇ ಕರೆಯಲಾಗುತ್ತಿತ್ತು.

ಮಲೆನಾಡಿನಲ್ಲಿ ಶುಂಠಿ ಬೆಳೆಯಲು ಬಳಸುವ ಇಮಿಡಾಕ್ಲೋಪ್ರಿಡ್ ಎಂಬ ರಾಸಾಯನಿಕವನ್ನು ಇದೀಗ ಪಂಜಾಬ್ ರಾಜ್ಯದಲ್ಲಿ ನಿಷೇಧಿಸಲಾಗಿದೆ. 2014ರಿಂದ 2018ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 270 ರೈತರು– ಇಮಿಡಾಕ್ಲೋಪ್ರಿಡ್, ಮೊನೋಕ್ರೋಟೋಫಾಸ್, ಫಿಫ್ರೋನಿಲ್, ಸೈಪರ್ಮೆಥ್ರಿನ್, ಫ್ರೋಫೆಫೋನಾಸ್ ರಾಸಾಯನಿಕಗಳನ್ನು ಬಳಸಿದ್ದರಿಂದ ಮೃತಪಟ್ಟಿದ್ದು ದೃಢಗೊಂಡಿತ್ತು. ಆ ದುರಂತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ, ರೈತರ ಸಾವಿಗೆ ಕಾರಣವಾದ ರಾಸಾಯನಿಕಗಳ ಬಳಕೆಯನ್ನು ನಿಷೇಧಿಸಿದೆ.

ಯಾವುದೇ ಬೆಳೆಗೆ ರಾಸಾಯನಿಕಗಳನ್ನು ಸಿಂಪಡಣೆ ಮಾಡುವಾಗ ನಿರ್ದಿಷ್ಟ ಅನುಪಾತವನ್ನು ಅನುಸರಿಸಬೇಕಾಗುತ್ತದೆ. ಅಂದರೆ, ನೂರು ಲೀಟರ್ ನೀರಿಗೆ ಒಂದು ಮಿಲಿ ರಾಸಾಯನಿಕವನ್ನು ಹಾಕಬೇಕು ಎಂದಿಟ್ಟುಕೊಳ್ಳಿ. ಈ ತಿಳಿವಳಿಕೆ ವಿಷಕಾರಿ ರಾಸಾಯನಿಕಗಳನ್ನು ಮಾರುವವರಿಗೆ ಇರುವುದಿಲ್ಲ. ಜನರ ಜೀವಕ್ಕಿಂತಲೂ ತಮ್ಮ ದಾಸ್ತಾನು ಖಾಲಿ ಮಾಡಿಕೊಳ್ಳುವುದಕ್ಕೆ ಒತ್ತು ನೀಡುವ ಅವರು, ನೂರು ಲೀಟರ್ ನೀರಿಗೆ 50 ಮಿಲಿ ಹಾಕಿ ಎಂದು ರೈತರಿಗೆ ಸಲಹೆ ನೀಡುತ್ತಾರೆ. ರೋಗ ಬೇಗ ವಾಸಿ ಆಗುತ್ತದೆಂದು ರೈತ ನೂರು ಮಿಲಿ ರಾಸಾಯನಿಕ ಬೆರೆಸಿ ಸಿಂಪಡಣೆ ಮಾಡುತ್ತಾನೆ. ತಪ್ಪು ಲೆಕ್ಕಾಚಾರ, ಹೊಲದಲ್ಲಿ ದುಡಿಯುವ ಕೃಷಿ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ವಿಷಚಕ್ರ ದಿಂದಾಗಿ, ಶುಂಠಿ ಬೆಳೆದ ಪ್ರದೇಶದಲ್ಲಿ ಸೀಸ, ಕ್ರೋಮಿಯಂ, ನಿಕ್ಕಲ್, ಆರ್ಸೆನಿಕ್ ಮುಂತಾದ ಭಾರ ಲೋಹಗಳ ಪ್ರಮಾಣ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿರುವುದನ್ನು ಸಂಶೋಧಕರು ದಾಖಲು ಮಾಡಿದ್ದಾರೆ.

ಮುಂಗಾರಿನಲ್ಲಿ ಬೆಳೆಯುವ ಶುಂಠಿ ಬದುಗಳ ಪಕ್ಕದಲ್ಲಿ ಹೆಚ್ಚುವರಿ ನೀರು ಬಸಿದು ಹೋಗಲು ಚಿಕ್ಕ ಚಿಕ್ಕ ಕಾಲುವೆಗಳನ್ನು ನಿರ್ಮಿಸಲಾಗುತ್ತದೆ. ಇದರಿಂದಾಗಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುವ ಸಾವಯವ ಜೈವಿಕ ಪದಾರ್ಥಗಳು ಕೊಚ್ಚಿ ಹೋಗುತ್ತವೆ. ಹೀಗೆ, ಒಂದು ಹೆಕ್ಟೇರ್ ಪ್ರದೇಶದಿಂದ 16.4 ಟನ್‌ನಷ್ಟು ಸಾರದ ಮೇಲ್ಮಣ್ಣು ಕೊಚ್ಚಿ ಹೋಗುತ್ತದೆ. ಈ ಪ್ರಕ್ರಿಯೆಯಿಂದಾಗಿ ಮಣ್ಣಿನ ಉತ್ಪಾದಕ ಶಕ್ತಿ ಕ್ಷೀಣಿಸುತ್ತದೆ. ಭಾರತದಲ್ಲಿ ಪ್ರತಿ ವರ್ಷ ಸವಕಳಿಯಾಗುವ ಮಣ್ಣಿನ ಪ್ರಮಾಣ 74 ಮಿಲಿಯನ್ ಟನ್ ಮತ್ತು ಮಣ್ಣಿನ ಅನುತ್ಪಾದಕತೆಯಿಂದ ಸಂಭವಿಸುವ ಆರ್ಥಿಕ ನಷ್ಟ ₹89 ಸಾವಿರ ಕೋಟಿ. ಶುಂಠಿ ಬೆಳೆಯಲು ಜಮೀನನ್ನು 18 ತಿಂಗಳು ಕಾಲ ಗುತ್ತಿಗೆ ನೀಡುವ ರೈತ, ₹30 ಸಾವಿರದಿಂದ ₹60 ಸಾವಿರವನ್ನು ನೇರವಾಗಿ ಪಡೆಯುತ್ತಾನೆ. ಆದರೆ, ಮಣ್ಣಿನ ಸವಕಳಿಯಿಂದಾಗಿ ಉಂಟಾಗುವ ನಷ್ಟದ ಪ್ರಮಾಣ ಗಳಿಕೆಗಿಂತಲೂ ತುಂಬಾ ಹೆಚ್ಚಾಗಿರುತ್ತದೆ.

ನೆಲದಲ್ಲಿ ಬೆಳೆಯುವ ಶುಂಠಿಯಲ್ಲಿ ಮಣ್ಣಿನ ಅಂಶವಿರುತ್ತದೆ. ಉತ್ತರ ಭಾರತ ಹಾಗೂ ಬಾಂಗ್ಲಾ ದೇಶದಲ್ಲಿ ತೊಳೆದ ಶುಂಠಿಗೆ ಬೇಡಿಕೆ ಹೆಚ್ಚು. ಕೊಡಗು, ಮೈಸೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಶುಂಠಿ ತೊಳೆಯುವ ನೂರಾರು ಕೇಂದ್ರಗಳಿವೆ. ಉದಾಹರಣೆಗೆ, ಕಾವೇರಿ, ಕಬಿನಿ, ಹಾರಂಗಿ ಮತ್ತು ಹೇಮಾವತಿ ನದಿ ತಟಗಳಲ್ಲಿರುವ ಶುಂಠಿ ತೊಳೆಯುವ ಕೇಂದ್ರಗಳು, ನದಿಯ ಪಕ್ಕದಲ್ಲೇ ಕೊಳವೆ ಬಾವಿಗಳನ್ನು ಕೊರೆದು, ಆ ನೀರನ್ನು ಶುಂಠಿ ತೊಳೆಯಲು ಬಳಸುತ್ತಿವೆ.

2023ರಲ್ಲಿ 43,200 ಲೋಡು ತೊಳೆದ ಶುಂಠಿಯನ್ನು ಹೊರರಾಜ್ಯಗಳಿಗೆ ಕಳುಹಿಸಲಾಗಿತ್ತು.ಒಂದು ಲೋಡು ಶುಂಠಿ ತೊಳೆಯಲು 10 ಸಾವಿರ ಲೀಟರ್‌ಗೂ ಹೆಚ್ಚು ನೀರು ಬೇಕಾಗುತ್ತದೆ. ರಾಜಸ್ಥಾನವನ್ನು ಬಿಟ್ಟರೆ ಕರ್ನಾಟಕವು ಭಾರತದ ಎರಡನೇ ಬರಪೀಡಿತ ರಾಜ್ಯವಾಗಿದೆ. 2023ರಲ್ಲಿ 432 ಮಿಲಿಯನ್ ಲೀಟರ್ ಕುಡಿಯುವ ನೀರನ್ನು ಶುಂಠಿ ತೊಳೆಯಲು ಬಳಸಲಾಗಿದೆ ಎನ್ನುವುದು ಆತಂಕ ಉಂಟುಮಾಡುವ ವಿಷಯ. ಶುಂಠಿ ತೊಳೆದ ನೀರನ್ನು ಶುದ್ಧೀಕರಿಸದೇ ನದಿ ಪಾತ್ರಗಳಲ್ಲಿ ಬಿಡಲಾಗುತ್ತದೆ. ಇದರಿಂದಾಗಿ ನದಿಯ ನೀರು ವಿಷದ ಮಡುವಾಗುತ್ತದೆ, ತನ್ನ ಹರಿವಿನುದ್ದಕ್ಕೂ ವಿಷವನ್ನು ಕೊಂಡೊಯ್ಯುತ್ತದೆ. ಬೆಂಗಳೂರಿನವರು ಈ ನೀರನ್ನೇ ಕುಡಿಯುತ್ತಾರೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ.

ಅತಿಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಪರಾಗಸ್ಪರ್ಶಕ್ಕೆ ಕಾರಣವಾಗುವ ಜೀವಿಗಳು, ಕಶೇರುಕ ಅಕಶೇರುಕಗಳು, ಜಲಚರಗಳು, ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳು ನಾಶವಾಗುತ್ತವೆ. ಈ ಲೆಕ್ಕ ಎಲ್ಲಿಯೂ ಸಿಗುವುದಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದೊಂದು ದಿನ ಕರ್ನಾಟಕದಲ್ಲಿ ತಾಲ್ಲೂಕಿಗೊಂದು ಕ್ಯಾನ್ಸರ್ ಆಸ್ಪತ್ರೆ ತೆರೆಯುವ ಅನಿವಾರ್ಯತೆಯು ಸರ್ಕಾರಕ್ಕೆ ಬರಬಹುದು. ಈಗ ಹಳತಾಗಿರುವ ‘ಭಟಿಂಡಾ ಟು ಬೀಕಾನೆರ್ ಕ್ಯಾನ್ಸರ್ ರೈಲಿನ ಕಥೆ’ ಕರ್ನಾಟಕದಲ್ಲಿ ಹೊಸ ಹುಟ್ಟು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.