ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಲುಷಿತ ನಗರವಾದ ದೆಹಲಿಯಲ್ಲಿ ಒಂದು ವರ್ಷದಿಂದ ಇದ್ದ ನನಗೆ, ಈಚೆಗೆ ತುಮಕೂರು ಜಿಲ್ಲೆಯ ಊರೊಂದರಲ್ಲಿ ಆಕಾಶ ನೋಡಿ ಆನಂದವಾಯಿತು. ಬರಲಿದ್ದ ಹುಣ್ಣಿಮೆಯ ಚಂದ್ರನ ಬೆಳಕು ಆವರಿಸಿತ್ತು. ಆ ಶುಭ್ರ ಆಗಸದಲ್ಲಿ ನಕ್ಷತ್ರಗಳು ಮತ್ತು ಗ್ರಹಗಳನ್ನು ಗುರುತಿಸಲು ಪ್ರಾರಂಭಿಸಿದೆ. ಚಲಿಸುತ್ತಿದ್ದ ಆಕಾಶಕಾಯಗಳನ್ನು ಕಂಡು, ಅವು ಕಕ್ಷೆಯಲ್ಲಿರುವ ಉಪಗ್ರಹಗಳು ಎಂದುಕೊಂಡೆ. ಅವನ್ನು ಗುರುತಿಸಲು ಮೊಬೈಲ್ ಫೋನ್‌ನಲ್ಲಿ ನನ್ನ ಸ್ಟೆಲ್ಲೇರಿಯಮ್ ಅಪ್ಲಿಕೇಷನ್ ಓಪನ್ ಮಾಡಿ, ಮೂರ್‍ನಾಲ್ಕು ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಗುರುತಿಸಿದೆ. ರಾಕೆಟ್ ಬಾಡಿ ಎಂದು ಗುರುತಿಸಲಾದ ಚಲಿಸುವ ವಸ್ತುವನ್ನು ಕಂಡು ಅಚ್ಚರಿಗೊಂಡೆ. ಇದು ಸುಮಾರು 800 ಕಿ.ಮೀ. ಎತ್ತರದಲ್ಲಿ ಪರಿಭ್ರಮಿಸುತ್ತಿದ್ದ ‘ಟೈಟಾನ್-4ಬಿ’ ರಾಕೆಟ್ಟಿನ ಅವಶೇಷ. ಅದನ್ನು ‘ಲ್ಯಾಕ್ರೋಸ್ 4’ ಎಂಬ ಉಪಗ್ರಹ ವನ್ನು ಲಾಂಚ್ ಮಾಡಲು ಉಪಯೋಗಿಸಲಾಗಿತ್ತು. ಇದು ನಾನು ನನ್ನ ಬರಿಗಣ್ಣಿನಲ್ಲಿ ಕಂಡ ಮೊದಲ ‘ಸ್ಪೇಸ್ ಡೆಬ್ರಿಸ್’ ಅಥವಾ ಬಾಹ್ಯಾಕಾಶ ತ್ಯಾಜ್ಯ.
ಏನಿದು ಬಾಹ್ಯಾಕಾಶ ತ್ಯಾಜ್ಯ? ಭೂಮಿಯ ಕಕ್ಷೆಯಲ್ಲಿ ಇರುವ ನಿಷ್ಕ್ರಿಯ ಉಪಗ್ರಹಗಳನ್ನು, ಬಾಹ್ಯಾಕಾಶದಲ್ಲಿ ರುವ ಮಾನವ ನಿರ್ಮಿತ ಅವಶೇಷಗಳನ್ನು ‘ಸ್ಪೇಸ್ ಡೆಬ್ರಿಸ್’ ಎನ್ನುತ್ತೇವೆ. ಅವು ಚುಕ್ಕೆ ಗಾತ್ರದಿಂದ ಹಿಡಿದು ಉಪಗ್ರಹ ಅಥವಾ ರಾಕೆಟ್‌ಗಳಿಗಿಂತ ದೊಡ್ಡದಾಗಿರಬಹುದು.
1957ರಲ್ಲಿ ಅಮೆರಿಕ, ರಷ್ಯಾ ನಡುವಿನ ಶೀತಲ ಸಮರದ ಪರಿಣಾಮವಾಗಿ ನಡೆದ ಸ್ಪುಟ್ನಿಕ್ ಉಡಾವಣೆಯು ಮಾನವನ ಬಾಹ್ಯಾಕಾಶ ಯಾತ್ರೆಯ ಮೊದಲ ಮೈಲಿಗಲ್ಲಾಗಿತ್ತು. ಇದು ನಿಧಾನವಾಗಿ ಮಾನವರ ದೈನಂದಿನ ಚಟುವಟಿಕೆಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರಾರಂಭಿಸಿತು. ಈಗ ನಮ್ಮ ಪ್ರವಾಸ, ಇಂಟರ್ನೆಟ್, ಬ್ಯಾಂಕಿಂಗ್‌ನಂತಹವುಗಳ ಜೊತೆಗೆ ರಾಷ್ಟ್ರೀಯ ಭದ್ರತೆ, ಹವಾಮಾನ ಮೇಲ್ವಿಚಾರಣೆ ಯಂತಹ ಕ್ಷೇತ್ರಗಳ ಅಭಿವೃದ್ಧಿಯು ಬಾಹ್ಯಾಕಾಶದಲ್ಲಿರುವ ಉಪಗ್ರಹಗಳನ್ನು ಅವಲಂಬಿಸಿದೆ.
ಆದರೆ ಸಕ್ರಿಯ ಅವಧಿಯ ನಂತರವೂ ಅಲ್ಲೇ ಉಳಿಯುವ ನಿಷ್ಕ್ರಿಯ ಉಪಗ್ರಹಗಳಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಮೊದಮೊದಲು ಕಾಳಜಿ ವಹಿಸಿರಲಿಲ್ಲ. ಅಂತಹ ಉಪಗ್ರಹಗಳನ್ನು
ಕಕ್ಷೆಯಿಂದ ತೆಗೆದುಹಾಕುವ ಯಾವುದೇ ಪ್ರಯತ್ನ ಅಥವಾ ಅದಕ್ಕಾಗಿ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿತ್ತು. ಏಕೆಂದರೆ, ಆಕಾಶ ತ್ಯಾಜ್ಯದ ಸಣ್ಣ ತುಣುಕು ಕೂಡ ಗಮನಾರ್ಹ ಆತಂಕ ಉಂಟು ಮಾಡಬಲ್ಲದು. ಇದಕ್ಕೆ ಕಾರಣ, ಅದರ ಚಲನೆಯ ವೇಗ. ಬಾಹ್ಯಾಕಾಶದಲ್ಲಿ ಈ ತ್ಯಾಜ್ಯಗಳು ಗಂಟೆಗೆ 25,200- 28,800 ಕಿ.ಮೀ.ನಷ್ಟು ವೇಗವಾಗಿ ಚಲಿಸಬಲ್ಲವು. ಇದು ಬುಲೆಟ್‌ನ ವೇಗಕ್ಕಿಂತ ಏಳು ಪಟ್ಟು ಹೆಚ್ಚು. ಒಂದು ಬಾಹ್ಯಾಕಾಶ ನೌಕೆ ಈ ತ್ಯಾಜ್ಯಗಳ ಕಡೆ ಚಲಿಸುತ್ತಿದ್ದರೆ, ಘರ್ಷಣೆಯ ಸಮಯದಲ್ಲಿ ಅವುಗಳ ವೇಗ ಇನ್ನೂ ಹೆಚ್ಚಬಹುದು. ಇದು ದುರಂತಕ್ಕೆ ಕಾರಣವಾಗಬಹುದು.
ಈ ತ್ಯಾಜ್ಯಗಳು ಇತರ ಬಾಹ್ಯಾಕಾಶ ವಸ್ತುಗಳೊಂದಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸುತ್ತದೆ. ಎರಡು ಅನಿಯಂತ್ರಿತ ತುಣುಕುಗಳು ಡಿಕ್ಕಿ ಹೊಡೆದರೆ, ಅದು ಸರಪಳಿ ಕ್ರಿಯೆಗೆ ಕಾರಣವಾಗುತ್ತದೆ, ಸಾವಿರಾರು ಸಣ್ಣ ತುಣುಕುಗಳನ್ನು ಉತ್ಪಾದಿಸುತ್ತದೆ. ಆದರೂ ಒಂದು ಸಂಭಾವ್ಯ ಘರ್ಷಣೆಯಲ್ಲಿ ಒಂದು ಸಕ್ರಿಯ ಉಪಗ್ರಹ ಹಾಗೂ ಮತ್ತೊಂದು ಗುರುತಿಸಬಲ್ಲ ವಸ್ತು ಭಾಗಿಯಾಗಿದ್ದರೆ, ನಿಯಂತ್ರಣ ಕ್ರಮಗಳ ಮೂಲಕ ಘರ್ಷಣೆಯನ್ನು ತಪ್ಪಿಸಬಹುದು. ಆದರೆ ಅತಿಚಿಕ್ಕ ತುಣುಕುಗಳಿದ್ದರೆ ಅವನ್ನು ಹುಡುಕುವುದು ಕಷ್ಟ. ಈ ತುಣುಕುಗಳು ಸಕ್ರಿಯ ಬಾಹ್ಯಾಕಾಶ ನೌಕೆಯನ್ನು ನಾಶ ಮಾಡಿ, ತ್ಯಾಜ್ಯದ ಪ್ರಮಾಣವನ್ನು ಹೆಚ್ಚಿಸುತ್ತವೆ. ತ್ಯಾಜ್ಯದ ಈ ಅನಿಯಂತ್ರಿತ ಸಂಗ್ರಹವು ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಿಗೆ ತೀವ್ರ ಅಡ್ಡಿ ಉಂಟುಮಾಡಬಹುದು, ಜಾಗತಿಕ ಉಪಗ್ರಹ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಬಹುದು.
ಕೆಲ ಬಗೆಯ ತ್ಯಾಜ್ಯಗಳು ಭೂಮಿಯ ಕೆಳಕಕ್ಷೆಯಲ್ಲಿ ಇದ್ದರೆ, ನಿಧಾನವಾಗಿ ಅಲ್ಲಿಂದ ಕೆಳಗಿಳಿಯಬಹುದು. ಹೀಗೆ ಇಳಿಯುವಾಗ ಮತ್ತೆ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ಭೂಮಿಯ ಮೇಲೆ ಅಥವಾ ಸಾಗರ
ದಲ್ಲಿ ಬೀಳಬಹುದು ಅಥವಾ ನಮ್ಮ ಮನೆಯ ಚಾವಣಿಯ ಮೇಲೂ ಬೀಳಬಹುದು. 2024ರ ಮಾರ್ಚ್ 8ರಂದು ಮಧ್ಯಾಹ್ನ, ಅಮೆರಿಕದ ಫ್ಲಾರಿಡಾದ ನೇಪಲ್‌ನಲ್ಲಿರುವ ಕಡಲತೀರದ ಮನೆಯೊಂದರ ಚಾವಣಿಯನ್ನು ಸೀಳಿ ವಸ್ತುವೊಂದು ಒಳಗೆ ಬಿತ್ತು. ಇದನ್ನು ಶೋಧಿಸಲು ನಾಸಾ ತಂಡವನ್ನು ಕರೆಯಲಾಯಿತು. ಇದು ಭೂಮಿಯನ್ನು ಪ್ರತಿ 90 ನಿಮಿಷಕ್ಕೆ ಒಂದು ಬಾರಿ ಸುತ್ತುವ ಅಂತರ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ (ಐಎಸ್ಎಸ್) 2021ರಲ್ಲಿ ಹೊರಹಾಕಲ್ಪಟ್ಟ ಒಂದು ಹಳೆಯ ಬ್ಯಾಟರಿ ಪ್ಯಾಲೆಟ್‌ನ ಭಾಗ ಎಂದು ಈ ಶೋಧನೆ ಹೇಳಿತು. ಇದರ ತೂಕ 0.7 ಕೆ.ಜಿ. ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಹೊರಹಾಕಲ್ಪಟ್ಟ ಮೊದಲ ವಸ್ತುವೇನಲ್ಲ. ಹಲವೊಮ್ಮೆ ಹೀಗೆ ತ್ಯಾಜ್ಯವಸ್ತುಗಳು ಹೊರಹಾಕಲ್ಪಡು ತ್ತವೆ. ಅನೇಕ ಸಲ ಇವು ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ, ಅಲ್ಲಿನ ತಾಪಮಾನದಲ್ಲಿನ ವ್ಯತ್ಯಾಸಕ್ಕೆ ಸಿಲುಕಿ ಸುಟ್ಟು ಹೋಗುತ್ತವೆ.
ಆತಂಕದ ಸಂಗತಿಯೆಂದರೆ, ತ್ಯಾಜ್ಯಗಳಿಂದ ಬಾಹ್ಯಾಕಾಶದಲ್ಲಿ ಯಾವುದೇ ಅನಾಹುತವಾದರೂ ಯಾವ ದೇಶದ ಬಾಹ್ಯಾಕಾಶ ಸಂಸ್ಥೆಯೂ ಇದರ ಹೊಣೆ ಹೊರುವುದಿಲ್ಲ. 2009ರ ಫೆಬ್ರುವರಿ 10ರಂದು ನಡೆದ ಎರಡು ಉಪಗ್ರಹಗಳ ನಡುವಿನ ಬಾಹ್ಯಾಕಾಶ ಘರ್ಷಣೆಯೇ ಮೊದಲ ಮತ್ತು ಅತಿದೊಡ್ಡ ಘರ್ಷಣೆ. ಈ ಪ್ರಕರಣದಲ್ಲಿ ಅಮೆರಿಕದ ಇರಿಡಿಯಮ್-33 ಮತ್ತು ರಷ್ಯಾದ ನಿಷ್ಕ್ರಿಯವಾಗಿದ್ದ ಕೊಸ್ಮೋಸ್-2251 ಮಿಲಿಟರಿ ಉಪಗ್ರಹ ಗಂಟೆಗೆ 42,120 ಕಿ.ಮೀ. ವೇಗದಲ್ಲಿ ಅಪ್ಪಳಿಸಿದವು. ಇದು ಸಾವಿರಾರು ಅವಶೇಷಗಳ ತುಣುಕುಗಳನ್ನು ಉತ್ಪಾದಿಸಿತು. ಈ ಘರ್ಷಣೆಯ ಹೊಣೆಯನ್ನು ಅಮೆರಿಕವಾಗಲೀ ರಷ್ಯಾವಾಗಲೀ ಹೊರಲಿಲ್ಲ. ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ಕಾನೂನುಗಳಲ್ಲಿರುವ ಸಮಸ್ಯೆಯನ್ನು ಸೂಚಿಸುತ್ತದೆ.
ಆ ಕಾಲದಲ್ಲಿ ಉಪಗ್ರಹ ನಿರ್ವಾಹಕರಿಗೆ ನಿಷ್ಕ್ರಿಯ ಉಪಗ್ರಹಗಳನ್ನು ವಿಂಗಡಿಸಲು ಯಾವುದೇ ಕಡ್ಡಾಯ ನಿಯಮಗಳಿರಲಿಲ್ಲ. ಆದ್ದರಿಂದ, 1995ರಿಂದ ‘ಕೊಸ್ಮೋಸ್-2251 ನಿಷ್ಕ್ರಿಯವಾಗಿದೆ, ತನ್ನ ನಿಯಂತ್ರಣ ಮೀರಿದೆ’ ಎಂದು ರಷ್ಯಾ ಸರ್ಕಾರ ಹೇಳಿತು. ಘರ್ಷಣೆಯನ್ನು ತಪ್ಪಿಸುವುದು ತನ್ನ ಜವಾಬ್ದಾರಿ
ಯಲ್ಲ ಎಂದು ವಾದಿಸಿತು. ಇಂಥ ಪ್ರಕರಣಗಳು ಹೆಚ್ಚಾದ ನಂತರ ನಿಯಂತ್ರಕ ಸಂಸ್ಥೆಗಳು ‘25 ವರ್ಷಗಳ ನಿಯಮ’ವನ್ನು ರೂಪಿಸಿದವು. ಭೂಮಿಯ ಕೆಳ ಕಕ್ಷೆಯಲ್ಲಿ ರುವ ಉಪಗ್ರಹಗಳ ಗುರಿ ಪೂರ್ಣಗೊಂಡ 25 ವರ್ಷಗಳ ಒಳಗೆ ಅವನ್ನು ಕಕ್ಷೆಯಿಂದ ತೆಗೆದುಹಾಕಬೇಕು ಅಥವಾ ಸುರಕ್ಷಿತ ಸ್ಮಶಾನ ಕಕ್ಷೆಗೆ ಸ್ಥಳಾಂತರಿಸಬೇಕು ಎಂದು ಈ ನಿಯಮ ಹೇಳುತ್ತದೆ.
2022ರಲ್ಲಿ, ಅಮೆರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (ಎಫ್‌ಸಿಸಿ) ಈ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿತು. ಅಮೆರಿಕದ ಪರವಾನಗಿ ಪಡೆದ ಉಪಗ್ರಹಗಳನ್ನು ಭೂಕಕ್ಷೆಯಿಂದ ಐದು ವರ್ಷಗಳ ಒಳಗೆ ತೆಗೆಯಬೇಕೆಂದು ಹೇಳಿತು. ಇಷ್ಟಾಗಿಯೂ ಬಾಹ್ಯಾಕಾಶ ನಿಯಮಗಳನ್ನು ಜಾರಿಗೊಳಿಸಲು ಸಮಗ್ರ ಅಂತರ
ರಾಷ್ಟ್ರೀಯ ಸಂಸ್ಥೆ ಇಲ್ಲ. ಯುನೈಟೆಡ್ ನೇಷನ್ಸ್ ಆಫೀಸ್ ಫಾರ್ ಔಟರ್ ಸ್ಪೇಸ್ ಅಫೇರ್ಸ್ (ಯುಎನ್‌ಒಒಎಸ್‌ಎ) ಮತ್ತು ಇಂಟರ್-ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋಆರ್ಡಿನೇಷನ್ ಕಮಿಟಿಯಂಥ (ಐಎಡಿಸಿ) ಸಂಸ್ಥೆಗಳು ನಿಗದಿಪಡಿಸಿದ ಮಾರ್ಗಸೂಚಿಗಳಿವೆ. ಆದರೆ ಅವುಗಳನ್ನು ಯಾವ ದೇಶವೂ ಪಾಲಿಸುತ್ತಿಲ್ಲ. ಹೆಚ್ಚುತ್ತಿರುವ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳನ್ನು ನಿಯಂತ್ರಿಸಲು, ಭೂಮಿಯ ಕೆಳಕಕ್ಷೆಯಲ್ಲಿ ಹೆಚ್ಚುತ್ತಿರುವ ಉಪಗ್ರಹಗಳ ದಟ್ಟಣೆ ತಗ್ಗಿಸಲು, ಬಾಹ್ಯಾಕಾಶ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಜಾಗತಿಕ ಮಟ್ಟದ ನಿಯಂತ್ರಣ ಪ್ರಾಧಿಕಾರದ ತುರ್ತು ಅಗತ್ಯವಿದೆ.
ಬಾಹ್ಯಾಕಾಶ ತ್ಯಾಜ್ಯಗಳನ್ನು ತಗ್ಗಿಸಲು ನಿಯಮಗಳನ್ನು ರೂಪಿಸಿದ್ದರೂ ಭವಿಷ್ಯದ ಅಪಘಾತಗಳನ್ನು ತಡೆಯಲು ಅವು ಸಾಲದು. ಸುಸ್ಥಿರ ಬಾಹ್ಯಾಕಾಶ ಪರಿಶೋಧನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭವಿಷ್ಯದ ಪೀಳಿಗೆಗೆ ಭೂಮಿಯ ಕಕ್ಷೆಯ ಪರಿಸರವನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾನೂನುಗಳ ಮುದ್ರೆ ಹೊತ್ತ ಹಾಗೂ ಜಾಗತಿಕವಾಗಿ ಜಾರಿಯಾಗಬಲ್ಲ ಕಾನೂನುಗಳ ಅನಿವಾರ್ಯ ಇಂದು ಹೆಚ್ಚಾಗಿದೆ.
ಲೇಖಕ: ಜಪಾನ್‌ನ ಒಸಾಕಾ ವಿಶ್ವವಿದ್ಯಾಲಯದಲ್ಲಿ ಸ್ಪೇಸ್ ರೊಬೋಟಿಕ್ಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.