ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕೂಲಂಕಷವಾಗಿ ಮಾರ್ಪಡಿಸುವ ದಿಸೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಇತ್ತೀಚಿನ ದಿನಗಳಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಹೊಸ ಉಪಕ್ರಮಗಳು ಸಾರ್ವಜನಿಕ ಚರ್ಚೆಗೆ ಗ್ರಾಸ ಒದಗಿಸಿವೆ. ಈ ಚರ್ಚೆಗಳನ್ನು ಗಮನಿಸಿದಾಗ, ‘ಯುಜಿಸಿ ನಿಜವಾಗಿಯೂ ಮಾಡಬೇಕಾಗಿರುವುದೇನು’ ಎಂಬ ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ 78 ವರ್ಷಗಳ ನಂತರವೂ ನಮ್ಮ ವಿಶ್ವವಿದ್ಯಾಲಯಗಳನ್ನು ಮೂಲತಃ ರೂಪಿಸಿದ ಪಾಶ್ಚಿಮಾತ್ಯ ಮಾದರಿಗೇ ನಾವು ಬದ್ಧರಾಗಿ ಮುಂದುವರಿಯಬೇಕೇ, ನಮ್ಮದೇ ದೇಸಿ ಮಾದರಿಯ ಐತಿಹಾಸಿಕ ಕಲಿಕಾ ವಿಧಾನಗಳಲ್ಲಿ ಬೇರೂರಿರುವ ಚೌಕಟ್ಟನ್ನು ಅಭಿವೃದ್ಧಿಪಡಿಸಬೇಕೇ ಅಥವಾ ಸ್ಥಳೀಯ ಹಾಗೂ ಜಾಗತಿಕ ಅಗತ್ಯಗಳನ್ನು ಪೂರೈಸುವ ಸಲುವಾಗಿ ಎರಡರಲ್ಲೂ ಉತ್ತಮವಾದದ್ದನ್ನು ಆಯ್ದು ಸಂಯೋಜಿಸುವ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಬೇಕೇ?
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪಾಶ್ಚಿಮಾತ್ಯ ಮಾದರಿಗಳು ವಿಶೇಷವಾಗಿ ಜ್ಞಾನಕ್ಕೆ ಕೊಡುಗೆ ನೀಡುವ ವಿಶಿಷ್ಟ ಸಂಶೋಧನೆಗೆ ಒತ್ತು ನೀಡುತ್ತವೆ. ಈ ವಿಧಾನವು ಸಾಮಾಜಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ನಡುವಿನ ಸಹಯೋಗವನ್ನು ಬೆಳೆಸುತ್ತದೆ. ಜೊತೆಗೆ, ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು, ನಾವೀನ್ಯ ಹೆಚ್ಚಿಸಲು ಮತ್ತು ಹೊಸ ಜ್ಞಾನವನ್ನು ಉತ್ಪಾದಿಸುವಲ್ಲಿ ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯ ವಿಶ್ವವಿದ್ಯಾಲಯಗಳು, ಉದ್ಯೋಗವನ್ನು ಖಾತರಿ ಗೊಳಿಸುವ ಮಾರ್ಗವೆಂದು ತಿಳಿದಿರುವ ಪದವಿ ಪ್ರದಾನವನ್ನು ಗುರಿಯಾಗಿ ಇಟ್ಟುಕೊಂಡಿವೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ದಾಖಲಿಸುವುದರ ಮೂಲಕ ಸಂಶೋಧನೆಯ ಸಾಧ್ಯತೆಯನ್ನು ಹಿಂದಕ್ಕೆ ಸರಿಸುತ್ತವೆ. ಇದರ ಪರಿಣಾಮವಾಗಿ, ಪಿಎಚ್.ಡಿ ಪದವಿಯನ್ನು ಸಮರ್ಪಕಗೊಳಿಸಲು ಯುಜಿಸಿ ಹಲವಾರು ವಿಧಿ ನಿಯಮಗಳನ್ನು ಜಾರಿಗೆ ತಂದಿದ್ದರೂ ಉನ್ನತ ಮಟ್ಟದ ಸಂಶೋಧನಾ ಸಂಸ್ಕೃತಿಯನ್ನು ಬೆಳೆಸುವುದು ನಮಗಿನ್ನೂ ಆರಂಭಿಕ ಹಂತದ ಪ್ರಯತ್ನವಾಗಿಯೇ ಉಳಿದಿದೆ.
ದೇಶದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ತನ್ನ ಬದ್ಧತೆಯನ್ನು ಯುಜಿಸಿ ಗಂಭೀರವಾಗಿ ಪರಿಗಣಿಸುವುದಾದರೆ, ಈ ಕುರಿತು ಶಿಕ್ಷಣ ತಜ್ಞರ ಶಿಫಾರಸುಗಳನ್ನು ಪರಿಶೀಲಿಸುವುದು ಸೂಕ್ತ. ಅಂತಹ ಕೆಲ ಪ್ರಮುಖ ಅವಲೋಕನಗಳು ಹೀಗಿವೆ: ಮೊದಲನೆಯದಾಗಿ, ಯಾವುದೇ ವಿಶ್ವವಿದ್ಯಾಲಯದ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಗತಿಯನ್ನು ಪೋಷಿಸಲು, ಶೈಕ್ಷಣಿಕ ಸ್ವಾತಂತ್ರ್ಯವನ್ನು ರಕ್ಷಿಸುವುದು ಬಹಳ ಮುಖ್ಯ. ಈ ಪಾರದರ್ಶಕತೆ ಎಂದರೆ, ಕುಲಪತಿ ಸೇರಿದಂತೆ ಆಡಳಿತಾಧಿಕಾರಿಗಳ ನೇಮಕಾತಿಯಲ್ಲಿ ಆರ್ಥಿಕ ಪ್ರಭಾವ ಯಾವುದೇ ಪಾತ್ರ ವಹಿಸದಂತೆ ಎಚ್ಚರ ವಹಿಸುವುದು. ಈ ಹುದ್ದೆಗಳನ್ನು ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ, ಆಡಳಿತಾತ್ಮಕ ಅನುಭವ ವನ್ನು ಆಧರಿಸಿ ಆಯ್ಕೆ ಮಾಡಬೇಕು. ನೇಮಕಾತಿಗಳು ಹಣದ ಪ್ರಭಾವದಿಂದ ನಡೆದರೆ, ಉನ್ನತ ಶಿಕ್ಷಣದಲ್ಲಿ ‘ಗುಣಮಟ್ಟ’ ಎಂಬ ಪರಿಕಲ್ಪನೆಯೇ ಅರ್ಥಹೀನ ಎನಿಸುತ್ತದೆ.
ಎರಡನೆಯದಾಗಿ, ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯ ಪ್ರಮುಖ ಸವಾಲೆಂದರೆ, ಅಧ್ಯಾಪಕರ ನೇಮಕಾತಿ ಮತ್ತು ಪಠ್ಯಕ್ರಮ ವಿನ್ಯಾಸದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ. ಇದು, ಶಿಕ್ಷಣ ವ್ಯವಸ್ಥೆಯನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಿದೆ. ವಿದ್ಯಾರ್ಥಿಗಳಿಗೆ ಏನನ್ನು ಕಲಿಸಬೇಕು ಮತ್ತು ಕಲಿಸಬಾರದು ಎಂಬುದನ್ನು ಅಧಿಕಾರ ಕೇಂದ್ರಗಳು ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ನಿರ್ದೇಶಿಸುತ್ತವೆ. ಆದ್ದರಿಂದ, ಅಧಿಕಾರಸ್ಥರು ಬದಲಾದಂತೆ ನಮ್ಮ ಪಠ್ಯಕ್ರಮಗಳು ಬದಲಾಗುತ್ತವೆ. ಅದೇ ಪ್ರಕಾರ, ಅಧ್ಯಾಪಕರ ನೇಮಕಾತಿ ಮತ್ತು ಬಡ್ತಿಗಳಲ್ಲಿಯೂ ಹಣ ಹಾಗೂ ಪ್ರಭಾವ ಬಳಕೆಯಾಗುವುದರ ಬಗ್ಗೆ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ.
ಮೂರನೆಯದಾದ ಅತ್ಯಂತ ನಿರ್ಣಾಯಕ ಅಂಶವೆಂದರೆ, ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ಇಲ್ಲದಿರುವುದು ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಹೆಚ್ಚಿನ ಪ್ರಮಾಣದ ಒತ್ತು ನೀಡಿರುವುದು. ಜ್ಞಾನಾರ್ಜನೆಯ ಆಸಕ್ತಿ ಮತ್ತು ಅದನ್ನು ಪಡೆಯಲು ಪರಿಶ್ರಮಪಡುವ ಮಾನಸಿಕ ಸಿದ್ಧತೆ ಇರುವವರಿಗೆ ಮಾತ್ರ ಉನ್ನತ ಶಿಕ್ಷಣವನ್ನು ಮೀಸಲಿಡಬೇಕು. ಇದಾಗಬೇಕೆಂದರೆ, ನಮ್ಮ ಶೈಕ್ಷಣಿಕ ಪದವಿಗಳು ಉದ್ಯೋಗಕ್ಕೆ ಕಡ್ಡಾಯ ಆಯ್ಕೆಯ ಮಾನದಂಡಗಳಾಗಿ ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಬೇಕು. ಶೈಕ್ಷಣಿಕ ಪದವಿಗಳನ್ನು ಉದ್ಯೋಗ ಅರ್ಹತೆಯೊಂದಿಗೆ ಸಮೀಕರಿಸುವ ಮನಃಸ್ಥಿತಿಯು ಸಂಶೋಧನೆಯನ್ನು ಗಮನಾರ್ಹವಾಗಿ ಮೂಲೆಗೆ ತಳ್ಳಿದೆ. ಇದರಿಂದಾಗಿ, ನಾವು ಸಂಶೋಧನೆಯನ್ನು ಒಂದು ಹೊಸ ಜ್ಞಾನವನ್ನು ಉತ್ಪಾದಿಸುವ ಗುರಿ ಹೊಂದಿರುವ, ಪರಿಶ್ರಮದ ಬೌದ್ಧಿಕ ಅನ್ವೇಷಣೆಯಾಗಿ ನೋಡುತ್ತಿಲ್ಲ. ಅದು ಇನ್ನೊಂದು ಪದವಿಯಾಗಿದೆ ಅಷ್ಟೇ.
ಬೋಧನಾ ಹುದ್ದೆಯ ಆಯ್ಕೆಗೆ ಪಿಎಚ್.ಡಿ ಪದವಿಯನ್ನು ಕಡ್ಡಾಯ ಮಾನದಂಡವನ್ನಾಗಿ ಮಾಡಿರುವುದರಿಂದ, ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ಗುಣಮಟ್ಟ ಗಮನಾರ್ಹವಾಗಿ ದುರ್ಬಲಗೊಂಡಿದೆ. ನಿಜವಾದ ಸಂಶೋಧನೆಯು ಒಂದು ಅರ್ಥಗರ್ಭಿತ ಮತ್ತು ಸ್ವಯಂಪ್ರೇರಿತ ಅನ್ವೇಷಣೆಯಾಗಿದೆ. ಅದಕ್ಕೆ ಪೂರ್ಣ ಸಮಯದ ಬದ್ಧತೆ, ಮಾರ್ಗಸೂಚಿಗಳ ಕಟ್ಟುನಿಟ್ಟಾದ ಪರಿಪಾಲನೆ, ಅಂತಿಮವಾಗಿ, ಆಯ್ಕೆ ಮಾಡಿದ ಕ್ಷೇತ್ರದ ಬಗ್ಗೆ ಹೊಸ ಒಳನೋಟಗಳನ್ನು ಹೊಂದುವುದು ಅಗತ್ಯವಾಗಿರುತ್ತದೆ. ಇದನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ ಮತ್ತು ಮಾಡುವ ಅಗತ್ಯವೂ ಇಲ್ಲ. ಹಾಗೆಯೇ ಸಂಶೋಧನೆ ಮಾಡದವರೂ ಉತ್ತಮ ಶಿಕ್ಷಕರಾಗಬಹುದು. ಅದೇ ರೀತಿ, ಇಂದು ಉನ್ನತ ಶಿಕ್ಷಣದಲ್ಲಿ ಶಿಕ್ಷಕರು ಅತ್ಯುತ್ತಮ ಸಂಬಳವನ್ನು ಪಡೆಯುತ್ತಾರೆ. ಬಹುಶಃ, ಅವರು ಮಾಡುವ ಕೆಲಸಕ್ಕಿಂತ ಸ್ವಲ್ಪ ಹೆಚ್ಚು ಎನ್ನಬಹುದು. ಆದರೆ, ಅವರ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ಕಠಿಣ ಮಾನದಂಡಗಳನ್ನು ಜಾರಿಗೆ ತರದೆ, ಬರೀ ಸಂಬಳವನ್ನು ಹೆಚ್ಚಿಸಿರುವುದರಿಂದ ಬೋಧನಾ ಸಮುದಾಯದಲ್ಲಿ ಆಲಸ್ಯದ ಮನೋಭಾವಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈ ಕುರಿತು ಶಿಕ್ಷಕರು ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಶಿಕ್ಷಕರ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಾಗಿ ಅವರ ಸಂಶೋಧನಾ ಪ್ರಕಟಣೆಗಳು ಮತ್ತು ಪ್ರಶಸ್ತಿಗಳ ಮೂಲಕ ಅಳೆಯಲಾಗುತ್ತದೆ. ಆದರೆ, ಇಂದು ಹಣ ಪಾವತಿಯ ಮೂಲಕ ಇದನ್ನು ಸಿದ್ಧಿಸಲು ಬಹಳಷ್ಟು ಮಾರ್ಗಗಳು ತೆರೆದುಕೊಂಡಿವೆ. ಉನ್ನತ ಶಿಕ್ಷಣದ ಶೈಕ್ಷಣಿಕ ಸಮಗ್ರತೆಯನ್ನು ಎತ್ತಿಹಿಡಿಯಲು, ಇಂತಹ ಸುಲಭ ಮಾರ್ಗಗಳನ್ನು ನಿರುತ್ಸಾಹಗೊಳಿಸಲು ಮತ್ತು ನಿಜವಾದ ವಿದ್ವತ್ಪೂರ್ಣ ಕೊಡುಗೆಗಳನ್ನು ಅಂಗೀಕರಿಸಲು ಯುಜಿಸಿ ಕಟ್ಟುನಿಟ್ಟಿನ ನೀತಿಗಳನ್ನು ಜಾರಿಗೆ ತರಬೇಕಾಗಿದೆ.
ವಿವಿಧ ಸಂಸ್ಥೆಗಳು ನಡೆಸುವ ವಿಶ್ವವಿದ್ಯಾಲಯ ಶ್ರೇಯಾಂಕಗಳ ಸತ್ಯಾಸತ್ಯತೆ ಹೆಚ್ಚಾಗಿ ಪ್ರಶ್ನಾರ್ಹವಾಗಿದೆ. ಉದಾಹರಣೆಗೆ, ನ್ಯಾಕ್ ಸದಸ್ಯರು ಶ್ರೇಯಾಂಕಕ್ಕಾಗಿ ಲಂಚ ಪಡೆದಿದ್ದಾರೆ ಎನ್ನಲಾದ ಇತ್ತೀಚಿನ ಹಗರಣವು ವ್ಯವಸ್ಥೆಯಲ್ಲಿನ ಗಂಭೀರ ದೋಷಗಳನ್ನು ಬಹಿರಂಗಪಡಿಸಿದೆ. ವಾಸ್ತವದಲ್ಲಿ, ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶ್ರೇಯಾಂಕ ಪಡೆಯಲು ದಾಖಲೆಗಳನ್ನು ಸೃಷ್ಟಿಸುತ್ತವೆ. ಇದನ್ನು ಗಮನದಲ್ಲಿಟ್ಟು, ಉನ್ನತ ಶಿಕ್ಷಣದ ಗುಣಮಟ್ಟ ವನ್ನು ಖಚಿತಪಡಿಸಿಕೊಳ್ಳಲು ಯುಜಿಸಿ ಪರ್ಯಾಯ ವಿಧಾನಗಳನ್ನು ಅನ್ವೇಷಿಸಬೇಕಾಗಿದೆ.
ಕೊನೆಯದಾಗಿ, ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಉತ್ಕೃಷ್ಟಗೊಳಿಸಲು ಯುಜಿಸಿ ಇನ್ನೂ ಹಲವಾರು ಪೂರಕ ಕ್ರಮಗಳನ್ನು ಜಾರಿಗೆ ತರುವುದನ್ನು ಪರಿಗಣಿಸಬೇಕು. ಇಲ್ಲಿ ಕೆಲವನ್ನು ಹೆಸರಿಸುವುದಾದರೆ, ಅಂತರಶಿಸ್ತೀಯ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಗೆ ಹೆಚ್ಚಿನ ಪ್ರಾಧಾನ್ಯ ನೀಡುವುದು, ಶಿಕ್ಷಕರ ನೇಮಕಾತಿ ಮತ್ತು ತರಬೇತಿಗೆ ಹೂಡಿಕೆ ಮಾಡುವ ಮೂಲಕ ಗುತ್ತಿಗೆ ಆಧಾರದ ಅಧ್ಯಾಪಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಸುತ್ತಲಿನ ಸಮುದಾಯದ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಹವಾಮಾನ ಬದಲಾವಣೆ ಯಂತಹ ಸವಾಲುಗಳನ್ನು ಎದುರಿಸಲು ವಿಶ್ವವಿದ್ಯಾಲಯಗಳಲ್ಲಿ ನೀತಿ ನಿರೂಪಕರೊಂದಿಗೆ ಸಮಾಲೋಚನೆ ಮಾಡುವ ವೇದಿಕೆಗಳನ್ನು ಸೃಷ್ಟಿಸುವುದು, ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ಕ್ಷೇತ್ರಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದು ಮತ್ತು ವಿಶ್ವವಿದ್ಯಾಲಯದ ಬೆಂಬಲದ ಮೂಲಕ ವಿದ್ಯಾರ್ಥಿಗಳ ನವೋದ್ಯಮ ಯೋಜನೆಗಳನ್ನು ಪ್ರೋತ್ಸಾಹಿಸುವಂತಹ ಕ್ರಮಗಳು ನಿರ್ಣಾಯಕವಾಗಿವೆ.
ಒಟ್ಟಿನಲ್ಲಿ, ಭಾರತದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ವನ್ನು ಉತ್ತಮಪಡಿಸಲು ಈ ಎಲ್ಲಾ ಉಪಕ್ರಮಗಳು ಯುಜಿಸಿಯ ಕಾರ್ಯತಂತ್ರದ ಭಾಗವಾಗುವುದು ಅತ್ಯಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.