ADVERTISEMENT

ಉನ್ನತ ಶಿಕ್ಷಣ ಮತ್ತು ಪ್ರಪಾತ..! ದೀಪಕ್‌ ನಯ್ಯರ್‌ ಅವರ ವಿಶ್ಲೇಷಣೆ

ದೀಪಕ್‌ ನಯ್ಯರ್‌
Published 19 ಆಗಸ್ಟ್ 2025, 0:12 IST
Last Updated 19 ಆಗಸ್ಟ್ 2025, 0:12 IST
<div class="paragraphs"><p>ಉನ್ನತ ಶಿಕ್ಷಣ ಮತ್ತು ಪ್ರಪಾತ..! ದೀಪಕ್‌ ನಯ್ಯರ್‌ ಅವರ ವಿಶ್ಲೇಷಣೆ</p></div>

ಉನ್ನತ ಶಿಕ್ಷಣ ಮತ್ತು ಪ್ರಪಾತ..! ದೀಪಕ್‌ ನಯ್ಯರ್‌ ಅವರ ವಿಶ್ಲೇಷಣೆ

   

ಯುವಜನರಿಗೆ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬಲ್ಲ ದೊಡ್ಡ ವಿಶ್ವವಿದ್ಯಾಲಯಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ‘ಶ್ರೇಷ್ಠತೆಯ ದ್ವೀಪ’ಗಳ ರೂಪದಲ್ಲಿರುವ, ಮಾನ್ಯತೆ ಹೊಂದಿರುವ ಸಣ್ಣ ಸಣ್ಣ ಸಂಸ್ಥೆಗಳು ಕೆಲವರಿಗಷ್ಟೇ ಎಟಕುವಂತಿವೆ. ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆ ಇರುವಾಗ ದೇಶ ನೈಜ ಅಭಿವೃದ್ಧಿ ಸಾಧಿಸುವುದು ಸಾಧ್ಯವೆ?

––

ADVERTISEMENT

ಭಾರತದಲ್ಲಿ ಉನ್ನತ ಶಿಕ್ಷಣವು ಬಿಕ್ಕಟ್ಟಿನಿಂದ ಕೂಡಿದೆ ಮತ್ತು ಆ ಬಿಕ್ಕಟ್ಟು ತುಂಬಾ ಆಳವಾಗಿ ಬೇರೂರಿದೆ. ಶಾಲಾ ಶಿಕ್ಷಣವನ್ನು ಮುಗಿಸಿ ಬಂದವರಿಗೆ ಬೇಕಾದಷ್ಟು ಶೈಕ್ಷಣಿಕ ಅವಕಾಶಗಳು ನಮ್ಮಲ್ಲಿಲ್ಲ. ಇರುವ ಅವಕಾಶಗಳು ಕೂಡ ಅಷ್ಟೊಂದು ಉತ್ತಮವಾಗಿಲ್ಲ. ಹಾಗಾದರೆ, ಉನ್ನತ ಶಿಕ್ಷಣದಲ್ಲಿ ಅಲ್ಲಲ್ಲಿ ಕಾಣುವ ಶ್ರೇಷ್ಠತೆಗಳು ಹೇಗೆ ಸಾಧ್ಯವಾದವು? ಅಗಾಧವಾದ ಪ್ರತಿಭಾ ಸಂಗಮ ಹಾಗೂ ವ್ಯವಸ್ಥೆಯ ಮಿತಿಗಳಿಗೆ ಹೊಂದಿಕೊಂಡು ವಿಕಸನಗೊಳ್ಳುವ ಪ್ರಕ್ರಿಯೆಯ (Darwinian selection processes) ಫಲಶ್ರುತಿಗಳವು. ಸಾಧಾರಣ ಸಾಮರ್ಥ್ಯದವರಿಗೆ ಅಥವಾ ಸಾಮಾಜಿಕ ಅವಕಾಶಗಳಿಂದ ವಂಚಿತರಾದವರಿಗೆ ಉನ್ನತ ಶಿಕ್ಷಣ ವ್ಯವಸ್ಥೆಯು ನೀಡಿರುವುದು ತೃಣ ಮಾತ್ರದಷ್ಟು ಅಷ್ಟೆ.

ಭಾರತದಲ್ಲಿ ಉನ್ನತ ಶಿಕ್ಷಣವು ಎದುರಿಸುತ್ತಿರುವ ಸವಾಲು ಏನು ಎಂಬುದು ತೀರಾ ಸ್ಪಷ್ಟ: ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಶಿಕ್ಷಣವನ್ನು ಒದಗಿಸುವುದಕ್ಕಾಗಿ ಉನ್ನತ ಶಿಕ್ಷಣ ವ್ಯವಸ್ಥೆಯು ಬೃಹತ್‌ ಗಾತ್ರದಲ್ಲಿ ವಿಸ್ತರಣೆಯಾಗಬೇಕು. ಶಿಕ್ಷಣದ ಗುಣಮಟ್ಟವನ್ನು ಎತ್ತರಿಸಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಉನ್ನತ ಶಿಕ್ಷಣವು ಮುಖ್ಯವಾಗಿ ಪ್ರವೇಶಾತಿ ವಿಷಯದಲ್ಲಿ ಎಲ್ಲರನ್ನೂ ಒಳಗೊಳ್ಳುವುದು ಅಗತ್ಯವಾಗಿದೆ. ಅದಕ್ಕಾಗಿ, ಜಗತ್ತಿನ ಶ್ರೇಷ್ಠ ಮಾದರಿಗಳಿಗೆ ಸರಿಸಮಾನವಾಗಿ ತೂಗಬಲ್ಲ ಕೆಲವು ಸಂಸ್ಥೆಗಳು ನಮಗೆ ಬೇಕಿವೆ. ಆದರೆ, ಆ ಮಟ್ಟಿಗಿನ ಶ್ರೇಷ್ಠತೆ ಭಾರತದಲ್ಲಿಲ್ಲ. ಅಲ್ಲಿ ಇಲ್ಲಿ ಇರುವ ಶ್ರೇಷ್ಠತೆಯ ಪುಟ್ಟ ಪುಟ್ಟ ದ್ವೀಪಗಳು ಕೂಡ ಕ್ಷಿಪ್ರವಾಗಿ ಮರೆಯಾಗುತ್ತಿವೆ. ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲೂ (ಈ ಶ್ರೇಯಾಂಕ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ಫ್ಯಾಷನ್‌ ಆಗಿದೆ) ನಮ್ಮ ಸಾಧನೆ ಕಳಪೆಯಾಗಿದೆ. ಹೌದು, ಉನ್ನತ ಗುಣಮಟ್ಟದ ಗುರಿ ಹೊಂದಿದವರಿಗೆ ಇದೊಂದು ನಿರಾಶಾದಾಯಕ ಸಂಗತಿಯಾಗಿದೆ.

‘ವಿಶ್ವವಿದ್ಯಾಲಯಗಳ ಶ್ರೇಯಾಂಕ–2025’ ಪಟ್ಟಿಯು ಜಗತ್ತಿನ ಅಗ್ರ ನೂರು ವಿಶ್ವವಿದ್ಯಾಲಯಗಳು ಜಗತ್ತಿನ ಯಾವ ಯಾವ ಭೂಭಾಗದಲ್ಲಿವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಅಮೆರಿಕ (26), ಪಶ್ಚಿಮ ಯುರೋಪ್‌ನ ದೇಶಗಳು (18), ಇಂಗ್ಲೆಂಡ್‌ (16), ಆಸ್ಟ್ರೇಲಿಯಾ (8), ಹಾಂಗ್‌ಕಾಂಗ್‌ (6), ದಕ್ಷಿಣ ಕೊರಿಯಾ (5), ಜಪಾನ್‌ (4), ಚೀನಾ (4), ಸಿಂಗಪುರ (2), ಮಲೇಷ್ಯಾ (1) ಮತ್ತು ತೈವಾನ್‌ (1) –ಅಗ್ರ ನೂರು ವಿಶ್ವವಿದ್ಯಾಲಯಗಳನ್ನು ಹೊಂದಿದ ರಾಷ್ಟ್ರಗಳಾಗಿವೆ. ಆಸ್ಟ್ರೇಲಿಯಾವೂ ಸೇರಿದಂತೆ ಪಾಶ್ಚಿಮಾತ್ಯ ಜಗತ್ತಿನಲ್ಲಿ 72 ಮತ್ತು ಏಷ್ಯಾದಲ್ಲಿ 23 ಅಗ್ರ ಶ್ರೇಯಾಂಕದ ವಿಶ್ವವಿದ್ಯಾಲಯಗಳಿವೆ. ಭಾರತದ್ದು ಒಂದೂ ಇಲ್ಲ.

ಸಹಜವಾಗಿಯೇ, ಈ ಶ್ರೇಯಾಂಕಗಳು ಸಂಯೋಜಿತ ಸೂಚ್ಯಂಕ ಸಂಖ್ಯೆಗಳ ಎಲ್ಲಾ ಮಿತಿಗಳನ್ನು ಹೊಂದಿವೆ. ಏಕೆಂದರೆ, ಗುಣಾತ್ಮಕತೆಯ ಗುಣಲಕ್ಷಣಗಳನ್ನು ಹೀಗೆ ಅಂಕಗಳಲ್ಲಿ ಅಳೆಯುವುದು ಕಷ್ಟ. ವಿಭಿನ್ನ ಘಟಕಗಳಿಗೆ ನಿಗದಿಪಡಿಸಲಾದ ಮೌಲ್ಯದ ಪ್ರಮಾಣವು ಇಲ್ಲಿ ಫಲಿತಾಂಶವನ್ನು ರೂಪಿಸುತ್ತದೆ ಎಂಬುದನ್ನೂ ಒಪ್ಪಿಕೊಳ್ಳಬೇಕು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡ ಬಳಿಕವೂ, ನಮ್ಮ ವಿಶ್ವವಿದ್ಯಾಲಯಗಳು ಜಾಗತಿಕ ಮಾನದಂಡಗಳನ್ನು ತಲುಪುವಲ್ಲಿ ಮೈಲಿಗಳಷ್ಟು ದೂರ ಕ್ರಮಿಸಬೇಕಾಗಿದೆ ಎಂಬುದು ಸ್ಪಷ್ಟ.

ಐಐಟಿಗಳು, ಐಐಎಂಗಳು ಮತ್ತು ಐಐಎಸ್ಸಿಯಂತಹ ‘ಶ್ರೇಷ್ಠತೆಯ ದ್ವೀಪ’ಗಳಿಂದ ನಾವೇನೂ ಸಮಾಧಾನಪಡುವಂತಿಲ್ಲ. ಇದುವರೆಗೆ ಆಡಳಿತ ನಡೆಸಿದ ಸರ್ಕಾರಗಳೆಲ್ಲವೂ ಐಐಟಿಗಳು, ಐಐಎಂಗಳು ಮತ್ತು ಐಐಎಸ್ಸಿಯ (ಐಐಎಸ್‌ಇಆರ್‌ಗಳಾಗಿ) ಸಂಖ್ಯೆಯನ್ನು ಹೆಚ್ಚಿಸಲು ಒತ್ತು ನೀಡಿವೆ. ಅದರ ಪರಿಣಾಮ, ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಿದ್ದ ಸಂಸ್ಥೆಗಳ ಮೌಲ್ಯ ಕುಗ್ಗುವಂತಾಗಿದೆ. ಗುಣಮಟ್ಟದಲ್ಲೂ ಅಸಮಾನತೆ ಹೆಚ್ಚಾಗಿದೆ. ಯುವಜನರಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸಬಲ್ಲ ದೊಡ್ಡ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದ ಜೀವಾಳವೇ ಹೊರತು, ಮಾನ್ಯತೆ ಗಳಿಸಿದ ಸಣ್ಣ ಸಣ್ಣ ಸಂಸ್ಥೆಗಳಲ್ಲ.

ದುರದೃಷ್ಟವಶಾತ್‌, ಭಾರತವು ತನ್ನ ಕೆಲವು ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಿದ ಶ್ರೇಷ್ಠ ಸಾಧನೆಯನ್ನು ನಿಧಾನವಾಗಿ, ಆದರೆ ನಿಶ್ಚಿತವಾಗಿ ವ್ಯರ್ಥಗೊಳಿಸಲಾಗುತ್ತಿದೆ. ಮತ್ತೂ ದುಃಖದಾಯಕ ಸಂಗತಿಯೆಂದರೆ, ವಿಶ್ವವಿದ್ಯಾಲಯಗಳಲ್ಲಿ ಅಳಿದುಳಿದ ಶ್ರೇಷ್ಠತೆಯೂ ಹೆಚ್ಚುತ್ತಿರುವ ರಾಜಕೀಯ ಹಸ್ತಕ್ಷೇಪದಿಂದಾಗಿ ಕ್ರಮೇಣ ಮತ್ತಷ್ಟು ದುರ್ಬಲಗೊಳ್ಳುತ್ತಿದೆ. ಅಷ್ಟೇ ಅಲ್ಲ, ಅರ್ಥಹೀನ ಹಾಗೂ ಕಡಿಮೆ ಸಂಪನ್ಮೂಲ ವಿನಿಯೋಗವೂ ವಿಶ್ವವಿದ್ಯಾಲಯಗಳಲ್ಲಿನ ಗುಣಮಟ್ಟದಲ್ಲಿ ಸ್ಥಿರವಾದ ಹಿನ್ನಡೆಗೆ ಕಾರಣವಾಗಿದೆ. 

ದಶಕದ ಹಿಂದಿನ ಸನ್ನಿವೇಶಕ್ಕೆ ಹೋಲಿಸಿದರೆ ಈಗಿನ ಸ್ಥಿತಿ ಇನ್ನೂ ಕೆಟ್ಟದಾಗಿದೆ. ಭಾರತದಲ್ಲಿ ವಿಶ್ವವಿದ್ಯಾಲಯಗಳು ಅತ್ಯಂತ ವೇಗವಾಗಿ ಹದಗೆಡುತ್ತಿವೆ. ಅದೇ ಅಭಿವೃದ್ಧಿಶೀಲ ದೇಶಗಳಲ್ಲಿ ವಿಶೇಷವಾಗಿ ಏಷ್ಯಾ, ಅದರಲ್ಲೂ ಚೀನಾದಲ್ಲಿ ವಿಶ್ವವಿದ್ಯಾಲಯಗಳು ಗುಣಾತ್ಮಕವಾಗಿ ಪ್ರಗತಿಯನ್ನು ಸಾಧಿಸುತ್ತಿವೆ. ಭಾರತದಲ್ಲಿನ ಶೈಕ್ಷಣಿಕ ಕುಸಿತ ದೊಡ್ಡ ಅಪಾಯದ ಸಂಕೇತ. ಸರಿಪಡಿಸಿಕೊಳ್ಳುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಒಂದೊಮ್ಮೆ ನಾಯಕರಂತೆ ಬೀಗಿದ್ದ ನಾವು ಹಿಂದುಳಿದವರಾಗಿ ಪರಿವರ್ತಿತರಾಗುವ ಅಪಾಯವಿದೆ.

ಗುಣಮಟ್ಟದಲ್ಲಿ ವ್ಯತ್ಯಾಸಗಳಿದ್ದರೂ, ಖ್ಯಾತಿಯನ್ನು ಹೊಂದಿರುವ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಲ್ಲಿ ತೀವ್ರ ಸ್ಪರ್ಧೆ ಇದೆ. ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ಕೆಲವು ಅದೃಷ್ಟವಂತರು ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಲಭ್ಯವಿರುವ ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ. ಕಡಿಮೆ ಅದೃಷ್ಟವಂತರಾದ ಹೆಚ್ಚಿನವರು ಅಧಿಕ ಶುಲ್ಕ ತುಂಬಿ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುತ್ತಾರೆ. ಆದರೆ, ಕೆಲವು ಅಪವಾದಗಳನ್ನು ಹೊರತುಪಡಿಸಿ, ಇಂತಹ ಸಂಸ್ಥೆಗಳಲ್ಲಿ ಗುಣಮಟ್ಟ ಕಳಪೆಯಾಗಿರುತ್ತದೆ. ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ನಡುವೆ ಗುಣಮಟ್ಟದಲ್ಲಿ ಅಸಮಾನತೆ ಇರುವುದು ಸಾಮಾನ್ಯ. ಇಲ್ಲೂ ಎಲ್ಲಿಯೋ ಕೆಲವು ಅಪವಾದಗಳು ಇರಬಹುದು, ಅಷ್ಟೆ. ವಿಶೇಷ ಸವಲತ್ತು ಹೊಂದಿದ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಅವರನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಿ ಕೊಡುವಷ್ಟು ಶ್ರೀಮಂತ ಪೋಷಕರಿದ್ದಾರೆ.

ಕಳೆದ 25 ವರ್ಷಗಳಲ್ಲಿ, ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರಿಕೆಯಾಗಿದೆ. 2000ರಲ್ಲಿ 50 ಸಾವಿರದಷ್ಟಿದ್ದ ಈ ಸಂಖ್ಯೆ, 2010ರ ವೇಳೆಗೆ ಎರಡು ಲಕ್ಷಕ್ಕೆ ಏರಿಕೆಯಾಗಿತ್ತು. 2015ರಲ್ಲಿ 3.5 ಲಕ್ಷದಷ್ಟಿದ್ದರೆ, 2019ರಲ್ಲಿ 6 ಲಕ್ಷಕ್ಕೆ ಜಿಗಿದಿತ್ತು. ಬಳಿಕ ಕೋವಿಡ್‌ ಕಾರಣದಿಂದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾವಕಾಶವನ್ನು ಸ್ಥಗಿತಗೊಳಿಸಲಾಗಿತ್ತು. 2023ರಲ್ಲಿ 9 ಲಕ್ಷದಷ್ಟು ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಿದ್ದರು. ಆ ವರ್ಷದ ಅಂದಾಜಿನ ಪ್ರಕಾರ, ವಿದೇಶಗಳಿಗೆ ಹೋದ ವಿದ್ಯಾರ್ಥಿಗಳಲ್ಲಿ ಶೇ 30ರಷ್ಟು ಅಮೆರಿಕ, ಶೇ 25ರಷ್ಟು ಕೆನಡಾ, ಶೇ 20ರಷ್ಟು ಇಂಗ್ಲೆಂಡ್‌, ಶೇ 10ರಷ್ಟು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ತೆರಳಿದ್ದರು.

2023ರಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋದ ವಿದ್ಯಾರ್ಥಿಗಳ ಸರಾಸರಿ ತಲಾ ವೆಚ್ಚ 30 ಸಾವಿರ ಡಾಲರ್‌ (ಅಂದಾಜು ₹29 ಲಕ್ಷ) ಎಂದುಕೊಳ್ಳೋಣ. ಈ ಲೆಕ್ಕದಲ್ಲಿ, ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಮಾಡಿದ ವೆಚ್ಚ 270 ಕೋಟಿ ಡಾಲರ್‌ (₹2.36 ಲಕ್ಷ ಕೋಟಿ) ಆಗುತ್ತದೆ. ಅದು, 2023ರಲ್ಲಿ ಭಾರತವು ವಿದೇಶಿ ಪ್ರವಾಸಿಗರಿಂದ ಗಳಿಸಿದ ವರಮಾನಕ್ಕೆ ಸಮ. ಆದರೆ, ಶ್ರೀಮಂತ ರಾಷ್ಟ್ರಗಳಲ್ಲಿ ಶಿಕ್ಷಣದ ವಾರ್ಷಿಕ ವೆಚ್ಚ ಹಾಗೂ ಶುಲ್ಕದ ಪ್ರಮಾಣ ನಾವು ತೆಗೆದುಕೊಂಡ ಸರಾಸರಿಗಿಂತ ಹೆಚ್ಚಾಗಿದೆ. ಹೀಗಾಗಿ, ಭಾರತೀಯ ವಿದ್ಯಾರ್ಥಿಗಳು ಮಾಡುವ ವೆಚ್ಚದ ಪ್ರಮಾಣವೂ ಅಧಿಕವಾಗಿಯೇ ಇದೆ.

ವಿದೇಶಗಳಲ್ಲಿ ಮಾಡಲಾಗುತ್ತಿರುವ ಈ ವೆಚ್ಚದ ಮೊತ್ತವೇನಾದರೂ ಭಾರತದ ಉನ್ನತ ಶಿಕ್ಷಣಕ್ಕೆ ಒದಗಿಬಂದರೆ ಕೆಲವು ವಿಶ್ವವಿದ್ಯಾಲಯಗಳನ್ನಾದರೂ ಶ್ರೇಷ್ಠತೆಯತ್ತ ಕೊಂಡೊಯ್ಯಲು ಸಾಧ್ಯವಾದೀತು. ಇನ್ನೂ ಮುಖ್ಯವಾದ ಸಂಗತಿಯೆಂದರೆ, ವಿದೇಶಕ್ಕೆ ಹೋದ ಬಹುಪಾಲು ವಿದ್ಯಾರ್ಥಿಗಳು–ಹೆಚ್ಚು ಕಡಿಮೆ ಶೇ 75ರಷ್ಟು– ಶಿಕ್ಷಣ ಮುಗಿಸಿದ ಮೇಲೆ ಭಾರತಕ್ಕೆ ಹಿಂದಿರುಗುವುದೇ ಇಲ್ಲ. ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬರುತ್ತಿದ್ದ ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ನಮ್ಮ ಉನ್ನತ ಶಿಕ್ಷಣವು ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

ಒಂದೆಡೆ, ಶಿಕ್ಷಣವನ್ನು ಒಂದು ಉದ್ಯಮ ಎಂದು ಪರಿಭಾವಿಸುವ ಖಾಸಗಿ ವಲಯದಿಂದಲೇ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಭಾವನೆ ಇದೆ. ಆದರೆ, ಸ್ವಂತ ಹಣಕಾಸಿನ ವ್ಯವಸ್ಥೆ ಇಲ್ಲದೆ ಹಲವು ಖಾಸಗಿ ಸಂಸ್ಥೆಗಳು ಬಾಗಿಲು ಮುಚ್ಚುತ್ತಿವೆ. ಇಂತಹ ಖಾಸಗಿ ಸಂಸ್ಥೆಗಳ ಶಿಕ್ಷಣದ ಗುಣಮಟ್ಟವನ್ನು ಖಾತರಿಪಡಿಸುವ ನಿಯಂತ್ರಣ ವ್ಯವಸ್ಥೆಯೂ ನಮ್ಮಲ್ಲಿಲ್ಲ. ಹೀಗಾಗಿ, ಸದ್ಯದ ಬಿಕ್ಕಟ್ಟಿಗೆ ಖಾಸಗಿ ವಲಯ ಪರಿಹಾರವಾಗಲಾರದು. ಇನ್ನೊಂದೆಡೆ, ಖಾಸಗಿ ವಲಯ ಏನಾದರೂ ಜಾದೂ ಮಾಡುತ್ತದೆ ಎಂದು ನಂಬಿರುವ ಸರ್ಕಾರಗಳು, ಸರ್ಕಾರಿ ವಿಶ್ವವಿದ್ಯಾಲಯಗಳ ಮೇಲೆ ಹೊಂದಿರುವ ಹಿಡಿತ ಮಾತ್ರ ಹುಚ್ಚಾಟದಿಂದ ಕೂಡಿದೆ. ವಿಶ್ವವಿದ್ಯಾಲಯಗಳನ್ನು ಸಿದ್ಧಾಂತದ ಆಡುಂಬೊಲವನ್ನಾಗಿ, ಹಿಂಬಾಲಕರ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡು ಸ್ವಹಿತಾಸಕ್ತಿಗಾಗಿ ರಾಜಕೀಯ ಪ್ರಭಾವ ಬಳಸುವುದು ಹೆಚ್ಚಾಗಿದೆ. ಇದೊಂದು ದೊಡ್ಡ ಸಮಸ್ಯೆ.

ನಾವೀಗ ತಪ್ಪುಗಳನ್ನು ತಿದ್ದಿಕೊಳ್ಳದೆ ಹೋದರೆ ಯುವ ಭಾರತದ ಭವಿಷ್ಯವನ್ನು ಅಪಾಯದ ದವಡೆಗೆ ನೂಕುತ್ತೇವೆ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾವು ಹೊಂದಿರುವ ಆಕಾಂಕ್ಷೆಗಳನ್ನೂ ಹತ್ತಿಕ್ಕುತ್ತೇವೆ.

(ಲೇಖಕ: ಅರ್ಥಶಾಸ್ತ್ರಜ್ಞ, ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ, ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.