
‘ತುಕಾ ಮ್ಹಣೆ ಬೊಲೆ ಕಬೀರ್’ ಇದೆಂಥ ಕಾರ್ಯಕ್ರಮ ಎಂದು ಹುಬ್ಬೇರಿಸಿದ್ದು ನಿಜ. ವಾರಾಣಾಸಿಯ ಕಬೀರರು ಬದುಕಿನ ರೀತಿಯನ್ನು ಹೇಳುತ್ತಲೇ ದೇವರನ್ನು ಮೆಚ್ಚಿಸುವ ಕ್ರಮ ಪ್ರಚಾರ ಮಾಡಿದವರು. ಸಂತ ತುಕಾರಾಮರು ತಮ್ಮ ಆರಾಧ್ಯ ದೈವ ಪಂಢರಪುರದ ವಿಟ್ಠಲನನ್ನು ವಿಠೋಬಾ ಎಂದು ಕರೆಯುತ್ತ, ಸಂಪೂರ್ಣ ಶರಣಾಗತಿಯೇ ಭಕ್ತಿಮಾರ್ಗ ಎಂದು ಪ್ರಚುರ ಪಡಿಸಿದರು.
ಇವರಿಬ್ಬರನ್ನು ಒಂದೇ ವೇದಿಕೆ ಮೇಲೆ ತುಕಾ ಮ್ಹಣೆ ಅಂದ್ರೆ ತುಕಾರಾಮಾರು ಹೇಳ್ತಾರೆ... ಎಂದರ್ಥ. ಬೋಲೆ ಕಬೀರ್ ಕಬೀರರು ತಮ್ಮೆಲ್ಲ ರಚನೆಗಳಲ್ಲಿ ಕಹತ್ ಕಬೀರ್ ಸುನ್ ಸಾಧು ಅಂತಲೇ ಹೇಳುತ್ತ ಹೋಗುತ್ತಾರೆ. ಇವರಿಬ್ಬರ ಹೇಳ್ವಿಕೆಗಳನ್ನು ಹಿಂದೂಸ್ತಾನಿ ಸಂಗೀತದಲ್ಲಿ ಪ್ರಸ್ತುತ ಪಡಿಸಿದ ಕಾರ್ಯಕ್ರಮ ಇದು.
ಭಕ್ತಿ ಸಂಗೀತದಲ್ಲಿ ತಮ್ಮ ನಾದನಿಧಿಯಿಂದಲೇ ಕೇಳುಗರನ್ನು ಆವರಿಸುವ ಪಂಡಿತ ಜಯತೀರ್ಥ ಮೇವುಂಡಿ ಅವರು ಹಾಗೂ ಮಧ್ಯಪ್ರದೇಶದವರಾದರೂ ಕನ್ನಡದ ಬೇರುಗಳಿರುವ ಕುಮಾರ ಗಂಧರ್ವರ ಮೊಮ್ಮಗ ಭುವನೇಶ ಕೊಮಕಲಿ ಅವರೂ ತಮ್ಮ ಗಾನನಿಧಿಯಲ್ಲಿ ಕೇಳುಗರನ್ನು ಮೀಯಿಸಿದರು.
ಕಾರ್ಯಕ್ರಮದ ಉದ್ದಕ್ಕೂ ದೇವ ನೀನು, ಜೀವ ನಾನು ಎಂಬುದನ್ನು ಮನದುಂಬಿ ಒಪ್ಪಿಕೊಳ್ಳುವಂತಾದರೆ, ನಾನೂನು ದೇವಾಂಶವಲ್ಲವೆ? ಎಳ್ಳಿನ ಮೊನೆಯಲ್ಲಿಯೂ ಸೂಜಿಯ ಕೊನೆಯಲ್ಲಿಯೂ ಇರಬಹುದಾದ ದೇವರೇ ನನ್ನೊಳಗೂ ಇಲ್ಲವೇ ಎಂಬ ತರ್ಕವನ್ನೂ ಒಡಮೂಡಿಸುತ್ತಿತ್ತು.
ಕೆಲವೊಮ್ಮೆ ತುಕಾರಾಮರ ಭಕ್ತಿಮಾರ್ಗ ಸಶಕ್ತವಾಗಿ ಬೆಂಗಳೂರಿನ ಚೌಡಯ್ಯ ಸಭಾಂಗಣದಿಂದ ಚಂದ್ರಭಾಗಾ ನದಿತೀರಕ್ಕೆ ಕೊಂಡೊಯ್ದರೆ, ಕಬೀರರ ದೋಹೆ ಮತ್ತು ವಾಣಿಗಳು ನಮ್ಮದೇ ಮನದ ಕೊಳದಲ್ಲಿ ಪ್ರಶ್ನೆಗಳ ತರಂಗಗಳನ್ನು ಏಳಿಸುತ್ತಿದ್ದವು. ತನ್ನೊಳಗಿನ ಜಗತ್ತನ್ನೂ ತನ್ನ ಹೊರಗಿನ ಬ್ರಹ್ಮಾಂಡವನ್ನೂ ತಂಬೂರಿಯ ತಂತಿಗಳು ಸೇತುವೆಯ ಕಾರ್ಯನಿರ್ವಹಿಸುತ್ತಿದ್ದವು.
ಭಕ್ತಿಮಾರ್ಗದಲ್ಲಿ ವಿಠೋಬಾ ಕೃಷ್ಣವರ್ಣದ ವಿಠಲ ಮದನ ಕುಮಾರನಂತೆ ಕಂಗೊಳಿಸುತ್ತಾನೆ. ಕಬೀರರ ವಾಣಿಯಲ್ಲಿ ರಾಮ ಕಂಗೊಳಿಸುತ್ತಾನೆ. ಆದರೆ ಈ ರಾಮ ಯಾರು? ದಶರಥಸುತ ರಾಮನಲ್ಲ! ರಾಮನೆಂದರೆ ಓಲೈಸುವವನು, ಸಂತಸ ನೀಡುವವನು, ರಮಣನು, ಸ್ಥಾಯಿಯಾಗಿ ನಿಲ್ಲುವವನು. ಈ ರಾಮ ಕಬೀರನನ್ನು ಒಲಿಸಿಕೊಂಡಾತ. ಆ ರಾಮ ಅಲ್ಲಾಹು ಸಹ ಆಗಿರಬಹುದು, ನೀವು ಪ್ರಾರ್ಥಿಸುವ ಯಾವುದೇ ದೈವ ಆಗಿರಬಹುದು. ಕಬೀರರ ವಾಣಿಯಲ್ಲಿ ದೇವರು ಅಮೂರ್ತರು. ಆದರೆ ಸಜ್ಜನನಾಗಿ, ಸಾಧುವಾಗಿ ಬದುಕುತ್ತಲೇ ಜಗಮೆಚ್ಚುವಂತೆ ಬದುಕುವುದನ್ನು ಹೇಳುತ್ತ ಹೋದರು.
ಮೂರ್ತರೂಪದ ದೇವರನ್ನು ಆರಾಧಿಸುವ ತುಕಾರಾಮರು ಹೇಳುವುದೇನು? ತಮ್ಮಿಷ್ಟ ದೈವವನ್ನು ಕೊಂಡಾಡುತ್ತಲೇ, ದೇವರಿಗೆ ಶರಣಾಗಿ ಬದುಕಿನ ಸತ್ಯವನ್ನು ಅರಹುತ್ತಾರೆ. ನಶ್ವರ ಬದುಕಿನ ಸತ್ಯವನ್ನು ಹರವಿಡುತ್ತಾರೆ. ಅನುರಣಿಯಾ ಥೋಕಡಾ ಅಭಂಗವನ್ನು ಆರಂಭಿಸುವ ಮೊದಲೇ ಹಾಡು ಮತ್ತು ಕಬೀರ್ ವಾಣಿಯ ವಿಶ್ಲೇಷಣೆಗೆ ಬಂದಿದ್ದ ಧನಶ್ರೀ ಲೆಲೆ ಅವರ ನಿರೂಪಣೆ ಅರ್ಥವಿವರಣೆಯನ್ನು ಸರಳವಾಗಿಸುತ್ತಿತ್ತು. ಮರಾಠಿ ಮತ್ತು ಹಿಂದಿ ಮಿಶ್ರಣದ ಅವರ ನಿರೂಪಣೆ ನೆರೆದಿದ್ದ ಕನ್ನಡಿಗರಿಗೂ ಅರ್ಥವಾಗುವಂತಿತ್ತು. ಕಣ, ಅಣುವಿಗಿಂತಲೂ ಸಣ್ಣದಾದ ಕಣ ನೀನು ಆದರೂ ಆಕಾಶಕ್ಕಿಂತಲೂ ಅಗಾಧವೆಂಬ ಸಾಲಿನಿಂದ ಆರಂಭವಾಗುವ ಈ ಅಭಂಗ, ಯಾವುದೇ ಭಂಗವಿಲ್ಲದೆಯೇ ಕೊನೆಯ ಸಾಲಿಗೆ ಬಂದಾಗ, ಈ ಶರೀರ ಇರುವುದೇ ಉಪಕಾರಕ್ಕಾಗಿ ಎಂಬುದು ಅಹುದಹುದೆನುವಂತೆ ಮಾಡುತ್ತಿತ್ತು. ತುಕಾ ಮ್ಹಣೆ ಅತಾನ್ ಉರಳೊ ಉಪಕಾರಪುರ್ತಾ ಎಂಬ ಸಾಲು ಮೇವುಂಡಿ ಅವರ ಧ್ವನಿಯಲ್ಲಿ ಆತ್ಮಸೀಳುವಂತೆ ಬಂತು ತಾಕುತ್ತಿತ್ತು.
ಇಡೀ ಕಛೇರಿಯಲ್ಲಿ ತರ್ಕ ಮತ್ತು ಜಿಜ್ಞಾಸೆಯೊಂದಿಗೆ ಧನಶ್ರೀ ಲೆಲೆ ಅವರ ಸುಮಧುರ ಧ್ವನಿಯ ಮಾತು, ಕೇಳುಗರನ್ನು ಕಛೇರಿಯಿಂದಾಚೆ ಹೋಗದಂತೆ ಹಿಡಿದಿಡುತ್ತಿತ್ತು.
ಸಂತ ಕಬೀರ್ ಮತ್ತು ಸಂತ ತುಕಾರಾಮ್ ಇಬ್ಬರೂ ಈ ಬದುಕು ನಶ್ವರ. ದೇವರನ್ನು ಓಲೈಸುವುದೆಂದರೆ ಸೇವೆ ಮಾಡುವುದೇ ಆಗಿದೆ, ಇಲ್ಲಿಯದ್ದು ನಾಲ್ಕು ದಿನಗಳ ಜಾತ್ರೆ, ಉಳಿದಂತೆ ಅವನನ್ನು ಸೇರುವ ಯಾತ್ರೆ ಎಂದೇ ಹೇಳಿದರು. ಅಭಂಗದಲ್ಲಿ ವಧುವಿನ ಮಾತುಗಳು ಹಾಡಾಗಿವೆ. ಮರ್ತ್ಯಲೋಕವನ್ನು ಮಾಹೇರ್ ಎಂದೂ (ತವರು ಮನೆಯೆಂದೂ) ದೇವರನ್ನು ಸೇರಿ, ಒಂದಾಗುವುದೇ ಮದುವೆಯೆಂದೂ ಹೇಳುತ್ತಾರೆ.
ಈ ಮರ್ತ್ಯಲೋಕದಲ್ಲಿರುವ ಜೀವವು, ಸುರಲೋಕದ ದೇವನನ್ನು ಸೇರುವ ತವಕದಲ್ಲಿರುವ ಕುರಿತೇ ಹೇಳುತ್ತಾರೆ. ಹಾಗೆ ಹೇಳುವ ಹಾಡು ಮತ್ತು ಕಬೀರ್ ವಾಣಿ ಒಟ್ಟೊಟ್ಟಿಗೆ ಕೇಳಿದಾಗ ಸಾವನ್ನು ಹೀಗೂ ಸ್ವೀಕರಿಸಬಹುದು, ದೇವರೊಂದಿಗೆ ಮಿಲನಕ್ಕಾಗಿ ಹೊರಡಬಹುದು ಎಂದೆನಿಸುವಾಗ, ಈ ಕ್ಷಣಿಕ ಬದುಕು ಯಾವಾಗ ಬೇಕಾದರೂ ಮಗ್ಗಲು ಬದಲಿಸಬಹುದು ಎಂದೆನಿಸುತ್ತದೆ.
ಇದೇ ಅರ್ಥದ ಕಬೀರರ ಕೌನ್ ಠಗವಾ ನಗರಿಯಾ ಲೂಟಲ್ ಹೋ ಹಾಡನ್ನು ಭುವನೇಶ್ ಪ್ರಸ್ತುತ ಪಡಿಸಿದರು. ಕಬೀರರ ದೋಹೆಗಳ ಮೂಲ ಭಾಷೆ ಸಾಧುಕ್ಕಡಿ ಎಂದು ಕರೆಯಲಾಗುತ್ತದೆ. ಇದು ಹಿಂದಿ, ಅವಧ್, ಭೋಜಪುರಿ, ಮೈಥಿಲಿ ಮುಂತಾದ ಹಿಂದಿಯ ಇತರ ಅವತರಣಿಕೆಗಳ ಮಿಶ್ರಣವಾಗಿದೆ. ಇದಕ್ಕೆ ಪಂಚಮೇಲ್ ಖಿಚಡಿ ಎಂದೂ ಕರೆಯಲಾಗುತ್ತದೆ. ಅದೇ ಭಾಷೆಯಲ್ಲಿರುವ ಈ ಹಾಡು ವಧುವಿನ ತಲ್ಲಣವನ್ನೇ ಹೇಳುತ್ತದೆ. ಕೊನೆಯ ಸಾಲಿನಲ್ಲಿ ಈ ಜಗದಿಂದ ಎಲ್ಲ ಬಂಧಗಳಿಂದ ಮುಕ್ತವಾಗುವ ಬಗೆಯನ್ನು ಹೇಳಿದಾಗಲೇ ನರಮನುಷ್ಯರು ವಧುವಿನಂತೆಯೂ, ದೇವರು ವರನಂತೆಯೂ, ಸಾವು ಮಿಲನದಂತೆಯೂ ಕಂಡು ಬರುತ್ತದೆ.
ಕಾರ್ಯಕ್ರಮದ ಪರಿಕಲ್ಪನೆ ಮತ್ತು ಪ್ರಸ್ತುತಿಯನ್ನು ಹೇಳುತ್ತ ಪಂಚಮ್ ನಿಷಾದ್‌ನ ನಿರ್ದೇಶಕಿ ಶಶಿ ವ್ಯಾಸ್, ಇದು ಸತ್ಯಶೋಧದ ಯಾನ. ಕಬೀರ ಹಾಗೂ ತುಕಾರಾಮರನ್ನು ನಿಕಷಕ್ಕೆ ಒಡ್ಡಿದಂತೆ ಅವರ ಸಗುಣ ಮತ್ತು ನಿರ್ಗುಣ ತತ್ವವನ್ನು ಪ್ರೇಕ್ಷಕರ ಎದುರಿಗಿಡುತ್ತ ಹೋಗುವುದು. ಎರಡು ವಿಭಿನ್ನ ದಾರಿಗಳೂ ಗಂಗೆ ಮತ್ತು ಚಂದ್ರಭಾಗಾ ನದಿಗಳ ಹರವಿನಂತೆ. ಆದರೆ ಸೇರುವುದು ಮಾತ್ರ ಸಮುದ್ರವನ್ನೇ. ಎರಡೂ ತತ್ವಗಳು ಅಧ್ಯಾತ್ಮವನ್ನೇ ಹೇಳುತ್ತವೆ. ಸರಳವಾಗಿ, ಸುಂದರವಾಗಿ. ಬದುಕುವ ವಿಧಾನವನ್ನು ಹೇಳುತ್ತಲೇ ದೇವ ನಲುಮೆಯತ್ತ ಚಿತ್ತ ಹೊರಳಿಸುವಂತೆ ಮಾಡುತ್ತವೆ. ಈ ವಿಶಿಷ್ಟ ಪ್ರಯೋಗಕ್ಕೆ ಧನಶ್ರೀ ಲೆಲೆ ಅವರ ಅರ್ಥವಿಸ್ತಾರ ಜನರೊಳಗೆ ಒಂದು ಪ್ರಶ್ನೆ ಮಥಿಸುವಂತೆ ಮಾಡುತ್ತದೆ ಎಂದಿದ್ದು, ಕಾರ್ಯಕ್ರಮ ಕೊನೆಗೊಂಡಾಗ ಸತ್ಯವೆನಿಸಿತ್ತು
ಭಾರತದಾದ್ಯಂತ ಸಂಚರಿಸಲಿರುವ ಈ ತಂಡ ದೆಹಲಿ, ಮುಂಬೈ ಮುಗಿಸಿ ಬೆಂಗಳೂರಿನತ್ತ ಬಂದಿತ್ತು. ಮುಂದಿನ ಗಮ್ಯ ಪುಣೆ. ಆದರೆ ಬೆಂಗಳೂರಿಗೆ ಬಂದೂ ಕನ್ನಡದ ಹಾಡು ಹಾಡಲಿಕ್ರ ಹೆಂಗ ಎನ್ನುತ್ತಲೇ ಮೇವುಂಡಿ ಅವರು ರಾಯರನ್ನು ನೆನೆದರು. ಗುರು ರಾಘವೇಂದ್ರ ರಾಯರ ಭಜನೆ ಕನ್ನಡಿಗರ ಕರತಾಡನಗಳು ತುಂಗಭದ್ರೆಯ ಕಿನಾರೆಯವರೆಗೂ ಕೇಳಿಸುವಂತೆ ಅನುರಣಿಸಿದವು.
ಕಾರ್ಯಕ್ರಮ ಮುಗಿದಾಗ ಸಭಾಂಗಣವೇ ಎದ್ದುನಿಂತು ಕರತಾಡನ ಮಾಡಿ ಮೆಚ್ಚುಗೆ, ಗೌರವ ವ್ಯಕ್ತಪಡಿಸಿತು. ಜಯತೀರ್ಥ ಮೇವುಂಡಿ, ಭುವನೇಶ್ ಕೋಮಕಲಿ ಅವರ ಹಾಡುಗಾರಿಕೆ ಜೊತೆಗೆ ಮನ ಗೆದ್ದಿದ್ದು ಅವರ ಸಾಥಿದಾರರು. ತಬಲಾದಲ್ಲಿದ್ದ ಮಂದಾರ ಪುರಾಣಿಕ್ ಅವರು ಅಭಂಗ್‌ನ ಕೊನೆಯಲ್ಲಿ ವಿಠಲ ವಿಠಲ ನಾಮಸ್ಮರಣೆಯಾದಾಗಲಂತೂ ಪ್ರೇಕ್ಷಕರ ಮನಗೆದ್ದರು. ಜ್ಞಾನೇಶ್ವರ್ ಸೋನವಾಣೆ ಅವರ ಹಾರ್ಮೋನಿಯಂನಲ್ಲಿ ಕೀರ್ತನದ ಪದಗಳೇ ನುಡಿಯುತ್ತಿದ್ದವು. ಸುಖದ್ ಮುಂಡೆ ಅವರ ಪಖವಾಜ್ ಹಾಗೂ ಸುನಿಲ್ ಕುಮಾರ್ ಅವರ ಬಾಂಸುರಿ, ತಾಳವಾದ್ಯದಲ್ಲಿ ಸೂರ್ಯಕಾಂತ್ ಸರ್ವೆ ಎಲ್ಲರ ಗಮನ ಸೆಳೆದರು.
ಕಬೀರರು ಮತ್ತು ತುಕಾರಾಮರು ಕೇಳುಗರ ಮನಸಿನೊಳಗಿಳಿದು ಒಂದಾಗಿದ್ದರು. ಕನ್ನಡದ ಮನದೊಳಗು ಕಾಶಿಯ ಕಬೀರರು, ಮಹಾರಾಷ್ಟ್ರದ ತುಕಾರಾಮರು ಒಂದಾದ ಹಾಗೆ ಮೀರಾಬಾಯಿ ಭಜನ್‌ನಲ್ಲಿಯ ಕೃಷ್ಣ, ಅಕ್ಕಮಹಾದೇವಿಯ ಮಲ್ಲಿಕಾರ್ಜುನರೂ ಒಂದಾದರೆ....⇒
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.