ADVERTISEMENT

ವಿಶ್ಲೇಷಣೆ | ಹೊಳಪಿನ ಕಲೆ ಮತ್ತು ಕತ್ತಲೆ

ಹೊಳೆಯುವ ಕಲೆ; ಬಡತನದ ವಾಸ್ತವ

ಕ್ಯಾಪ್ಟನ್‍ ಗೋಪಿನಾಥ್‍
Published 17 ಫೆಬ್ರುವರಿ 2026, 22:30 IST
Last Updated 17 ಫೆಬ್ರುವರಿ 2026, 22:30 IST
.
.   

ಬಹುತೇಕ ಭಾರತೀಯರು ಅಸಂಗತವೂ, ಸಮಯದ ಹರಿವಿನಲ್ಲಿ ಉಂಟಾಗುವ ವ್ಯತ್ಯಯದ ನಡುವೆಯೂ ಸಹಬಾಳ್ವೆ ನಡೆಸುತ್ತಾರೆ. ಇಲ್ಲಿ ಅದ್ಭುತವಾದುದು ಇರುವಂತೆ ಅಸ್ಪಷ್ಟವಾದುದೂ ಇದೆ. ಪವಿತ್ರವೂ ಲಭ್ಯ, ಅಪವಿತ್ರವೂ ದೊರಕೀತು. ಬಲ್ಲಿದರು ಇರುವಂತೆ ಬಡವರೂ ಇಲ್ಲಿದ್ದಾರೆ. ಇತ್ತೀಚೆಗೆ ಬಾದಾಮಿ ಗುಹಾಂತರ ದೇವಾಲಯಗಳ ವಿಗ್ರಹಗಳು, ಪ್ರತಿಮೆಗಳನ್ನು ಕಂಡಾಗ, ಮೇಲಿನ ವೈರುಧ್ಯಗಳ ದರ್ಶನ ನನಗಾಯಿತು.  

ಎಲ್ಲಮ್ಮ ದೇವಿಯ ಜನಪದ ಗೀತೆಗಳ ಕಾರ್ಯಕ್ರಮವೊಂದಕ್ಕೆ ನನಗೆ ಆಹ್ವಾನವಿತ್ತು. ರೇಣುಕಾ ಎಲ್ಲಮ್ಮ ಎಂದೇ ಜನಪ್ರಿಯವಾದ ಈ ಶಕ್ತಿದೇವತೆಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿಯೂ ಪೂಜಿಸುತ್ತಾರೆ. ಸಮಾಜ ಕಡೆಗಣಿಸಿದ ವರ್ಗದವರ ರಕ್ಷಣೆಗೆ ಇರುವ ದೇವಿ ಇವಳು ಎಂದೇ ನಂಬಿಕೆ. ಫಲ ನೀಡುವ ದೇವಿ, ರೋಗ–ರುಜಿನಗಳ ನಿಯಂತ್ರಿಸಬಲ್ಲವಳು, ಗಂಡನಿಂದ ಲಿಂಗಭೇದಕ್ಕೆ ಒಳಗಾಗಿ, ಎದೆಗುಂದದೆ ದೈವಿಕ ಕೋಪಾವಿಷ್ಟೆಯಾದ ದೇವತೆ ಎಲ್ಲಮ್ಮ. ‘ಮಿಥ್‌’ಗಳ ಪ್ರಕಾರ ಎಲ್ಲಮ್ಮ ಲಿಂಗತ್ವ ಅಲ್ಪಸಂಖ್ಯಾತರೊಟ್ಟಿಗೆ ಬೆಸೆದುಕೊಂಡವಳು. ಗ್ರಾಮೀಣ ಜನರ ನಡುವಲ್ಲಿಯೇ ಆಕೆಯ ಅಸ್ತಿತ್ವ ಇದೆ. ಅನೇಕರು ಆಕೆಯನ್ನು ‘ಮಹಿಳೆಯರ ಇಷ್ಟ ದೇವತೆ’ ಎಂದೇ ಭಾವಿಸುತ್ತಾರೆ. ಬಾಯಿಂದ ಬಾಯಿಗೆ ಹರಿದುಬಂದ ಹಾಡುಗಳು, ಲಾವಣಿಗಳು, ನೃತ್ಯ ನಾಟಕಗಳು, ಜಾತ್ರೆಗಳು, ಅನೂಚಾನವಾಗಿ ನಡೆಸಿಕೊಂಡು ಬಂದ ಆಚರಣೆಗಳಲ್ಲಿ ಎಲ್ಲಮ್ಮ ಶತಮಾನಗಳಿಂದ ಜೀವಿಸುತ್ತಾ ಬಂದಿದ್ದಾಳೆ.  

ನಿವೃತ್ತ ಐಎಎಸ್ ಅಧಿಕಾರಿಯ ಪುತ್ರಿ ಶಿಲ್ಪಾ ಮುಡುಬಿ ಜನಪದ ಲಾವಣಿಗಳನ್ನು ಪ್ರಸ್ತುತಪಡಿಸಿದರು. ಶಿಲ್ಪಾ ಹಾಗೂ ಅವರ ಪತಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ತೊರೆದು, ಕಲಬುರಗಿಯಲ್ಲಿ ನೆಲಸಿದ್ದಾರೆ. ಶ್ರೀಮಂತವಾದ ಜನಪದ ಕಲೆಗಳನ್ನು ಸಂರಕ್ಷಿಸುವ ಉದ್ದೇಶದಿಂದಲೇ ಅವರು ಸಣ್ಣ ಸಮುದಾಯವೊಂದನ್ನು ಕಟ್ಟಿದ್ದಾರೆ. ಗದಗ ಜಿಲ್ಲೆಯ ಸೂಡಿಯಲ್ಲಿನ ಮೆಟ್ಟಿಲುಗಳ ಬಾವಿಯನ್ನು ಈಗ ಸಂರಕ್ಷಿಸಲಾಗಿದ್ದು, ಅದಕ್ಕೆ ಡೆಕ್ಕನ್ ದತ್ತಿ ಸಂಸ್ಥೆ ​ಹಣಕಾಸಿನ ನೆರವು ನೀಡಿತ್ತು. 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಅದ್ಭುತವಾದ ಸ್ಮಾರಕ ಮೆಟ್ಟಿಲುಗಳ ಬಾವಿಯನ್ನು, ಅಂತರ್ಜಲ ನಿರ್ವಹಣೆ ವ್ಯವಸ್ಥೆಗಳ ‘ಮಾಸ್ಟರ್​ಪೀಸ್’ ಎನ್ನಲಡ್ಡಿ ಇಲ್ಲ. 

ADVERTISEMENT

ಶಿಲ್ಪಾ ಅವರ ಮೇಲುಲಿ ಹಾಗೂ ಧ್ವನಿಯ ಗುಣಮಟ್ಟವು ಮಾಧುರ್ಯದ ಜೊತೆಗೆ ಎಲ್ಲಮ್ಮನ ಬಗ್ಗೆ ಇರುವ ಸಾಹಿತ್ಯದ ಸಾರ–ಸತ್ವವನ್ನು ನಮ್ಮೆದೆಗೆ ನಾಟುವಂತೆ ಮಾಡಿತು. ಅವರ ಕೈಯಲ್ಲಿದ್ದ ಏಕತಾರಿನಾದ, ಅಲೆಮಾರಿಗಳು ಎಂದೋ ಹೊಮ್ಮಿಸಿದ್ದ ಸಂಗೀತವನ್ನು ನವನೀತವಾಗಿಸಿತ್ತು. ಲಾವಣಿಯೊಂದು
ಎಲ್ಲಮ್ಮನ ಹುಟ್ಟು–ಬದುಕಿನ ಮೇಲೆ ಬೆಳಕು ಚೆಲ್ಲುವಾಗ, ಕಷ್ಟ–ಕಾರ್ಪಣ್ಯಗಳ ಹಾದಿಯಲ್ಲಿ ಹೃದಯಹೀನ ಪತಿ ಜಮದಗ್ನಿ ಒಡ್ಡಿದ ಸವಾಲುಗಳಿಗೆ ಅವಳು ಎದೆಗೊಡುತ್ತಾ ಬಂದ ಕಥನಗಳು ತೆರೆದುಕೊಂಡವು. ಹೊಡೆತ ತಿಂದು ಬಿದ್ದ ನಂತರ ಮತ್ತೆ ಮತ್ತೆ ಎಲ್ಲಮ್ಮ ಮೇಲೆದ್ದು ನಿಲ್ಲುವ ಸಾಹಸಗಾಥೆಯು ನಮ್ಮ ಹೃದಯದ ಕಂಪನವನ್ನು ತೀವ್ರಗೊಳಿಸುತ್ತದೆ. ಮಹಾಭಾರತದ ಕಥನಗಳಿಗೆ ಹೊರತಾದ ಹೂರಣವನ್ನು ಈ ಜನಪದ ಗಾಥೆಯು ಅರುಹಿತು.

ಕ್ರಿ.ಶ. 6ರಿಂದ 8ನೇ ಶತಮಾನದವರೆಗೆ ಚಾಲುಕ್ಯರು ಆಳಿದ ನಾಡು ಸಮೃದ್ಧವಾಗಿತ್ತು. 2ನೇ ಪುಲಿಕೇಶಿ ರಾಜನಾಗಿದ್ದ ಕಾಲದಲ್ಲಿ ದಕ್ಷಿಣದಲ್ಲಿ ಕಾವೇರಿ ಜಲಾನಯನ ಪ್ರದೇಶದವರೆಗೆ, ನರ್ಮದಾ ನದಿಯತನಕ ಹಾಗೂ ಗುಜರಾತ್‌ನ ಕೆಲವು ಭಾಗಗಳವರೆಗೆ ಸಾಮ್ರಾಜ್ಯ ವಿಸ್ತರಣೆಗೊಂಡಿತ್ತು. ಬಾದಾಮಿಯಲ್ಲಿ ಬಂಡೆಗಳನ್ನು ಕೊರೆದು ದೇವಸ್ಥಾನಗಳನ್ನು ನಿರ್ಮಿಸಿದ್ದು ಚಾಲುಕ್ಯರ ಸಾಮ್ರಾಜ್ಯದ ಮೊದಲ ಅವಧಿಯಲ್ಲಿ. ದಕ್ಷಿಣ ದೇವಸ್ಥಾನ ಶಿಲ್ಪಕಲೆಗಳ ತಾಯಿ ಎಂದೇ ಅದನ್ನು ಬಣ್ಣಿಸುತ್ತಾರೆ. ಆ ನಂತರ ಕಟ್ಟಿದ್ದು ಪಟ್ಟದಕಲ್ಲು (ಯುನೆಸ್ಕೊ ವಿಶ್ವ ಪರಂಪರೆಯ ತಾಣ. ಐಹೊಳೆಯಲ್ಲಿನ ಅಡಿಪಾಯವೇ ಇಲ್ಲದೆ ನಿರ್ಮಿತವಾದ ಸ್ವತಂತ್ರ ದೇಗುಲಗಳು ಕೂಡ ಆಮೇಲೆ ತಲೆ ಎತ್ತಿದವು. ಇವೆಲ್ಲವೂ ದಕ್ಷಿಣ ಭಾರತದ ಹಿಂದೂ ದೇಗುಲಗಳ ಶಿಲ್ಪಕಲೆಗೆ ಪ್ರೇರಣೆ ನೀಡಿದವು. ಬಾದಾಮಿ ಹಾಗೂ ಪಟ್ಟದಕಲ್ಲು ಪರ್ಯಾಯ ರಾಜಧಾನಿಗಳಾಗಿದ್ದವು).

1500 ವರ್ಷಗಳ ಹಿಂದೆ, ಬಂಡೆಗಳನ್ನು ಕಟೆದು ನಿರ್ಮಿಸಲಾದ ಈ ದೇವಸ್ಥಾನಗಳಲ್ಲಿನ ಕೆತ್ತನೆಗಳು ಗಮನಸೆಳೆಯುತ್ತವೆ. ಎಲ್ಲ ಕೆತ್ತನೆಗಳು ಚಿತ್ತಾಪಹಾರಿ. ಯಾವ ಸುತ್ತಿಗೆ, ಯಾವ ಉಳಿ, ಯಾವ ಅಪೂರ್ವ ಕಲ್ಪನೆಯು ಶಿಲೆಯಲ್ಲಿ ಅಂತಹ ಕಲೆ ಮೂಡಿಸಿತೊ? 

ಬಾದಾಮಿ, ಪಟ್ಟದಕಲ್ಲು, ಐಹೊಳೆಯ ದೇಗುಲಗಳನ್ನು, ಅಲ್ಲಿನ ಶಿಲ್ಪಕಲೆಯನ್ನು ನೋಡಿ ‘ಅಬ್ಬಾ’ ಎನ್ನುವ ಉದ್ಗಾರ ಹೊರಡಿಸಿ, ನಾವು ಹೊರಬಂದಾಗ ಆದ ಅನುಭವವೇ ಬೇರೆ. ಸಣ್ಣ ಸಣ್ಣ ಓಣಿಗಳಲ್ಲಿ ಸಗಣಿ ತೊಪ್ಪೆಗಳ ಮೇಲೆ ಕಾಲಿಡದಂತೆ ಎಚ್ಚರ ವಹಿಸುತ್ತ ಅಡಿ ಇಟ್ಟೆವು. ತೆರೆದ ಚರಂಡಿಗಳಿಗೆ ಗುಡಿಸಲುಗಳಿಂದ ಕೊಚ್ಚೆ ನೀರು ರಸ್ತೆ ಸೀಳಿಕೊಂಡೇ ಸರಾಗ ಹರಿದು ಬರುತ್ತಿತ್ತು. ಶಿಥಿಲಗೊಂಡ ಮನೆಗಳನ್ನು ಅಲ್ಲಲ್ಲಿ ಕೆಡವಿದ್ದರು. ಅವುಗಳ ಸಿಮೆಂಟ್  ಪಳೆಯುಳಿಕೆ ಕಂಬಗಳ ಒಳಭಾಗದಲ್ಲಿ ಬೀಡಾಡಿ ದನಗಳಿದ್ದವು. ಕೈಮಗ್ಗಗಳಲ್ಲಿ ನೂಲುವ ಶಬ್ದವೂ ಕಿವಿಯ ಮೇಲೆ ಬಿತ್ತು. ನಮ್ಮ ಗೈಡ್ ಒಂದು ಮನೆಯೊಳಗೆ ಕರೆದೊಯ್ದರು. ಅವರು ಲಾಗಾಯ್ತಿನಿಂದ ಇಳಕಲ್ ಸೀರೆಯನ್ನು ನೇಯುತ್ತಾ ಬಂದವರು. ಹತ್ತಿ ಹಾಗೂ ಶುದ್ಧ ರೇಷ್ಮೆಯ ಹದವರಿತ ಮಿಶ್ರಣದ ಸೀರೆಗಳು ಅವು. ನೇಯ್ಗೆಯಲ್ಲಿನ ಸಂಕೀರ್ಣತೆ, ಸಹಜವಾದ ಬಣ್ಣಗಳನ್ನು ಬಳಸುವ ವಿಧಾನ, ಬಣ್ಣಗಳನ್ನು ಹದವರಿತಂತೆ ಬೆರೆಸುವ ಕ್ರಮ... ಎಲ್ಲವೂ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿವೆ.

ಕೈಮಗ್ಗದಲ್ಲಿ ಕರಚಳಕ ತೋರುತ್ತಾ ಕಾರ್ಯಮಗ್ನರಾಗಿದ್ದ ಒಬ್ಬಾಕೆಯು ಕಿಟಕಿಯಾಚೆ ಇದ್ದ ನಮ್ಮತ್ತ ನೋಟ ಬೀರಿದರು. ಸೀರೆ ನೇಯಲು ಎಷ್ಟು ದಿನ ಬೇಕು ಎಂದು ಕೇಳಿದರೆ, ಹತ್ತಿ ಸೀರೆಗೆ ಏಳು ದಿನ ಎಂಬ ಉತ್ತರ ಬಂತು. ತುಸು ದೂರದಲ್ಲೇ ಇದ್ದ ಅಂಗಡಿಯಲ್ಲಿ ಒಂದು ಸೀರೆಗೆ ₹3,000 ದರವಿತ್ತು. ಅದನ್ನು ಮಾರುತ್ತಿದ್ದ ಮಹಿಳೆ ಪಾಲಿಯೆಸ್ಟರ್ ಸೀರೆ ಉಟ್ಟಿದ್ದರು. ನೈಲಾನ್ ನೂಲುಗಳೂ ದೊಡ್ಡ ಯಂತ್ರಗಳಿಂದ ಹೊಮ್ಮುತ್ತಿದ್ದವು. ಕಾಲಾಂತರದಲ್ಲಿ ಅದೂ ಅನಿವಾರ್ಯವೇ ಎಂದುಕೊಂಡೆ. 

ಶಾಲೆಯಿಂದ ಅದೇ ತಾನೇ ಬಂದ ಆಕೆಯ ಸಣಕಲು ಮಗಳು ಬಡತನದ ಸ್ಥಿತಿಗೆ ಕನ್ನಡಿ ಹಿಡಿದಳು. ಹೀಗಿದ್ದರೂ ಮಹಿಳೆಯ ಕುಶಲ ಕಲೆಯಲ್ಲಿ ಲೋಪವಿಲ್ಲ. ನಮ್ಮದೇ ಗೂಡೊಳಗೆ ಸೇರಿಕೊಂಡ ನಗರ ನಾಗರಿಕರಾದ ನಾವು ಇಂಟರ್ನೆಟ್, ಎ.ಐ ಮಂತ್ರ ಜಪಿಸುತ್ತಿದ್ದೇವೆ. ಥಾಮಸ್ ಗ್ರೇ ಇದನ್ನೇ ‘Let not Ambition mock their useful toil’ ಎಂದು ಹೇಳಿರುವುದು. ಬಡತನಕ್ಕೂ, ವೃತ್ತಿಪರತೆ–ಬದ್ಧತೆಗೂ ಸಂಬಂಧ ಕಲ್ಪಿಸಬಾರದು ಎಂಬರ್ಥದ ಕಿವಿಮಾತಿದು. 

ಮನೆಯಿಂದ ಹೊರಗೆ ಬಂದಮೇಲೆ ಒಬ್ಬ ಮಹಿಳೆ ಬಟ್ಟೆ ಒಗೆಯುತ್ತಾ ಇದ್ದರು. ದಿನಕ್ಕೆ ಎಷ್ಟು ಗಂಟೆ ನೀರು ಬರುತ್ತದೆ ಎಂಬ ನಮ್ಮ ಪ್ರಶ್ನೆಗೆ ಸಿಕ್ಕ ಉತ್ತರ: ‘ಐದು ದಿನಕ್ಕೊಮ್ಮೆ ಎರಡು ಗಂಟೆ ಮಾತ್ರ.’ ಬಾದಾಮಿ, ಐಹೊಳೆ, ಪಟ್ಟದಕಲ್ಲು ಈ ಸ್ಥಳಗಳಲ್ಲಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ಪ್ರಮುಖವಾಗಿ ಹರಿಯು
ತ್ತವೆ. ಅವೆಲ್ಲವೂ ಸೇರುವ ಸ್ಥಳದಲ್ಲಿ ಭವ್ಯವಾದ ಆಲಮಟ್ಟಿ ಅಣೆಕಟ್ಟು ಕಟ್ಟಲಾಗಿದೆ. ಎಲ್ಲೆಡೆಯೂ ನೀರು ಕಂಡರೂ ಬಳಸಲು ಹನಿ ಸಿಗುವುದಿಲ್ಲ! ನನಗೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಮಾತು ನೆನಪಾಯಿತು. ಅವರು ಬೇಲೂರಿಗೆ ಭೇಟಿ ನೀಡಿ, ಕಲಾಸ್ವಾದ ಮಾಡಿದ ನಂತರ ಹೀಗಂದಿದ್ದರು: ‘ಓ ದೇವರೇ, ದಯಾಮಯನೂ ಶಕ್ತಿಶಾಲಿಯೂ ಆದ ನೀನು ಇಂತಹ ಭವ್ಯ ದೇವಸ್ಥಾನವನ್ನು ಕೊಟ್ಟಿರುವೆ. ಕಲೆ, ಸಂಸ್ಕೃತಿಯ ಉಚ್ಛ್ರಾಯ ಸ್ಥಿತಿಗೆ ದೊಡ್ಡ ಕೊಡುಗೆ ಇತ್ತಿರುವೆ. ಆದರೀಗ ಬಡತನದ ಕೂಪಕ್ಕೆ ನಮ್ಮನ್ನು ಯಾಕೆ ದೂಡಿರುವೆ?’ 

ಅಂದು ರಾತ್ರಿಯ ಮಾತುಕತೆಯಲ್ಲಿ ನಮ್ಮೊಂದಿಗೆ ಕಲಾ ಇತಿಹಾಸಕಾರ ಹಾಗೂ ಪ್ರೊಫೆಸರ್, 80 ವಯಸ್ಸು ದಾಟಿದ ಹೆಲೆನ್ ಫಿಲನ್ ಇದ್ದರು. ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಭಾರತಕ್ಕೆ ಗ್ರೀಕ್‌ ದೇಶದ ರಾಯಭಾರಿಯಾಗಿ ಕೆಲಸ ಮಾಡಿದ್ದವರು ಆಕೆಯ ಪತಿ ಸ್ಟೀಫನ್ ಬ್ಲೋಚ್ ಸ್ಯಾಲೋಜ್. ಅವರು ಡೆಕ್ಕನ್ ಪರಂಪರೆ ದತ್ತಿ ಸಂಸ್ಥೆ ಸ್ಥಾಪಿಸಿದರು. ಹೈದರಾಬಾದ್‌ನ ರಾಜಶ್ರೀ ಕೂಡ ನಮ್ಮೊಡನೆ ಇದ್ದರು. ಅವರು ಡೆಕ್ಕನ್ ಸಂಸ್ಥೆಯೊಟ್ಟಿಗೆ ಮೆಟ್ಟಿಲುಬಾವಿಗಳ ಪುನರುಜ್ಜೀವನ ಕಾರ್ಯದಲ್ಲಿ ಆಸ್ಥೆಯಿಂದ ತೊಡಗಿಕೊಂಡಿದ್ದರು.

ಬಾದಾಮಿಯಲ್ಲಿ ವಿದೇಶದಿಂದ ಬಂದ ಮೂವರೋ ನಾಲ್ವರೋ ಅಷ್ಟೇ ಯಾಕೆ ಇದ್ದಾರೆ ಎಂಬ ಪ್ರಶ್ನೆಯನ್ನು ಅಲ್ಲಿದ್ದ ಯಾರೋ ಕೇಳಿದರು. ಥಾಯ್ಲೆಂಡ್‌, ಬಾಲಿ, ಮಾರಿಷಸ್, ಮಾಲ್ದೀವ್ಸ್‌, ಸಿಂಗಪುರಕ್ಕೆ ಹೆಚ್ಚಿನ ಮಂದಿ ಪ್ರವಾಸ ಹೋಗುತ್ತಾರಲ್ಲವೇ ಎಂಬ ಉಪಪ್ರಶ್ನೆಯನ್ನೂ ಅವರು ಹಾಕಿದರು. ಅದಕ್ಕೆ ಹೆಲೆನ್ ಹೀಗಂದರು: ‘ನಾನು ಪ್ರತಿವರ್ಷ ಐದಾರು ಸಲ ಇಲ್ಲಿಗೆ ಬರುತ್ತೇನೆ. ನನ್ನ ಮಗನಿಗೆ ಭಾರತ ಇಷ್ಟ. ಅವನೂ ಪ್ರತಿವರ್ಷ ಬರುತ್ತಾನೆ. ಅವನಿಗೆ ತನ್ನ ಸ್ನೇಹಿತರನ್ನೂ ಕರೆತರಲು ಇಷ್ಟ. ಆದರೆ, ಅವರೆಲ್ಲ ಭಾರತ ಕೊಳಕಾಗಿದೆ ಎನ್ನುತ್ತಾರೆ. ಅದರಲ್ಲೂ ಸತ್ಯವಿದೆ.’ 

ದೇವಸ್ಥಾನಗಳನ್ನು ನೋಡಿದ ಮೇಲೆ ನಾವೂ ಚೋಳ ರಾಜರಂತೆ ಮತ್ತೆ ಪುಟಿದೇಳಬಹುದು ಎಂಬ ಉತ್ಸಾಹ ಮೂಡುತ್ತದೆ. ಶಿಥಿಲಗೊಂಡ ಹಳ್ಳಿಗಳು ಹಾಗೂ ಎದ್ದುಕಾಣುವ ಬಡತನ ಬೇಸರ ಮೂಡಿಸುತ್ತದಾದರೂ, ಅಲ್ಲಿ ದಣಿವಿಲ್ಲದೆ ಕೆಲಸ ಮಾಡುವ ಕುಶಲಮತಿ ಪುರುಷರು–ಮಹಿಳೆಯರನ್ನು ಕಂಡಾಗ ಸ್ಫೂರ್ತಿಯ ಚಿಲುಮೆಯೊಂದು ಮನದಲ್ಲಿ ಮೂಡಿತು. 

.

ಭರವಸೆಯೇ ಬದುಕಿಗೆ ಇಂಧನ. ಫ್ಲಯ್ದೊರ್ ದಾಸ್ಸೋವ್‌ಸ್ಕಿ ಹೇಳಿರುವಂತೆ– ‘ಭರವಸೆ ಕಳೆದುಕೊಂಡು ಬದುಕುವುದೆಂದರೆ, ಜೀವಿಸುವುದನ್ನೇ ಬಿಟ್ಟಂತೆ.’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.