ADVERTISEMENT

ಸಂವಿಧಾನವೇ ಬೆಳಕು: ಭೇದವಿಲ್ಲ, ಸರ್ವರೂ ಸಮಾನ

ಜಯಸಿಂಹ ಆರ್.
Published 18 ಡಿಸೆಂಬರ್ 2025, 0:30 IST
Last Updated 18 ಡಿಸೆಂಬರ್ 2025, 0:30 IST
<div class="paragraphs"><p>ಸಂವಿಧಾನವೇ ಬೆಳಕು</p></div>

ಸಂವಿಧಾನವೇ ಬೆಳಕು

   
ದೇಶದ ಸಮಸ್ತ ನಾಗರಿಕರು ಸಮಾನರು ಎಂದು ಸಾರಿ ಹೇಳುವ ನಮ್ಮ ಹೆಮ್ಮೆಯ ಸಂವಿಧಾನವು, ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ಗಳನ್ನು ನೀಡಿದೆ. ಧರ್ಮ, ಜಾತಿ, ಲಿಂಗ, ಜನ್ಮಸ್ಥಳ, ಆರ್ಥಿಕ ಸ್ಥಿತಿ ಯಾವುದನ್ನೂ ಪರಿಗಣಿಸದೆ ಮೂಲಭೂತ ಹಕ್ಕುಗಳು ಎಲ್ಲರಿಗೂ ಅನ್ವಯವಾಗುತ್ತವೆ. ಪ್ರತಿ ನಾಗರಿಕರೂ ಸಂವಿಧಾನದ ಮುಂದೆ ಒಂದೇ ಎಂದು ಮೂಲಭೂತ ಹಕ್ಕುಗಳು ಪ್ರತಿಪಾದಿಸುತ್ತವೆ.

ಸಮಾನತೆ ಹಕ್ಕು:

ಸಮಾನತೆಯ ವಿವಿಧ ಸ್ವರೂಪ ಮತ್ತು ಅವುಗಳನ್ನು ಕಾಯ್ದುಕೊಳ್ಳಬೇಕಾದ ಬಗೆಯನ್ನು
ಸಂವಿಧಾನದ 14ರಿಂದ 18ನೇ ವಿಧಿಯವರೆಗೆ ವಿವರಿಸಲಾಗಿದೆ.

ADVERTISEMENT

ಕಾನೂನಿನ ಮುಂದೆ ಸಮಾನತೆ:

ದೇಶದ ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರು ಮತ್ತು ಕಾನೂನಿನ ರಕ್ಷಣೆ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂದು ಈ ಹಕ್ಕು ಪ್ರತಿಪಾದಿಸುತ್ತದೆ.

ತಾರತಮ್ಯ ನಿಷೇಧ:

ಧರ್ಮ, ಮೂಲವಂಶ, ಜಾತಿ, ಲಿಂಗ, ಭಾಷೆ, ಜನ್ಮಸ್ಥಳದ ಆಧಾರದಲ್ಲಿ ವ್ಯಕ್ತಿಯನ್ನು ತಾರತಮ್ಯಕ್ಕೆ ಗುರಿ ಮಾಡುವಂತಿಲ್ಲ ಎಂದು ಈ ಹಕ್ಕು ಪ್ರತಿಪಾದಿಸುತ್ತದೆ. ಇವುಗಳ ಆಧಾರದಲ್ಲಿ ಯಾವುದೇ ವ್ಯಕ್ತಿಗೆ ಹೋಟೆಲು, ಅಂಗಡಿ, ದೇವಾಲಯ, ಸಾರ್ವಜನಿಕ ಮನೋರಂಜನ ಸ್ಥಳಕ್ಕೆ ಪ್ರವೇಶ ನಿರಾಕರಿಸುವಂತಿಲ್ಲ. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಯಲ್ಲಿ ವಿಶೇಷ ಸವಲತ್ತು ಕಲ್ಪಿಸಬಹುದು ಎಂದು 15 (2ಬಿ, 3, 4, 5, 6)ನೇ ಉಪವಿಧಿಗಳಲ್ಲಿ ವಿವರಿಸಲಾಗಿದೆ.

ಸರ್ಕಾರಿ ನೇಮಕಾತಿಯಲ್ಲಿ ಸಮಾನ ಅವಕಾಶ:

ಸರ್ಕಾರದ ಯಾವುದೇ ನೇಮಕಾತಿಯಲ್ಲಿ ದೇಶದ ಎಲ್ಲ ನಾಗರಿಕರಿಗೂ ಸಮಾನ ಅವಕಾಶ ಇರಬೇಕು. ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗ ಗಳು, ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ, ಸರ್ಕಾರಿ ನೇಮಕಾತಿಯಲ್ಲಿ ವಿಶೇಷ ಸವಲತ್ತು ಕಲ್ಪಿಸಲು 16ನೇ ವಿಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅಸ್ಪೃಶ್ಯತೆಯ ನಿರ್ಮೂಲನೆಯನ್ನು 18ನೇ ವಿಧಿಯಲ್ಲಿ ವಿವರಿಸಲಾಗಿದೆ. ಯಾವುದೇ ರೂಪದ ಅಸ್ಪೃಶ್ಯತೆ ಆಚರಣೆಯನ್ನು ಈ ವಿಧಿಯು ನಿಷೇಧಿಸುತ್ತದೆ. ಜತೆಗೆ ಅಸ್ಪೃಶ್ಯತೆಯ ಆಚರಣೆಯು ದಂಡನೀಯ ಅಪರಾಧ ಎಂಬುದನ್ನೂ ಈ ವಿಧಿ ವಿವರಿಸುತ್ತದೆ.

ಸ್ವಾತಂತ್ರ್ಯದ ಹಕ್ಕು:

ಸಂವಿಧಾನ 19ನೇ ವಿಧಿಯಲ್ಲಿ ಸ್ವಾತಂತ್ರ್ಯದ ಹಕ್ಕುಗಳನ್ನು ವಿವರಿಸಲಾಗಿದೆ. ಯಾವುದೇ ವ್ಯಕ್ತಿಯು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ, ನಿರಾಯುಧರಾಗಿ ಸಭೆ ಸೇರುವ, ಸಂಘ–ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಅವುಗಳ ಮೂಲಕ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ, ದೇಶದ ಯಾವುದೇ ಭಾಗದಲ್ಲಿ ತನ್ನ ಇಚ್ಛೆಯ ಕುಲಕಸುಬು/ಕಸುಬು/ಉದ್ಯೋಗ/ವ್ಯವಹಾರ/ ವ್ಯಾಪಾರ ನಡೆಸುವ ಸ್ವಾತಂತ್ರ್ಯವನ್ನು ಈ ಹಕ್ಕು ನೀಡುತ್ತದೆ.

*ಜೀವಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು 21ನೇ ವಿಧಿಯು ನೀಡುತ್ತದೆ. ಈ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕಿದೆ. ಯಾವುದೇ ವ್ಯಕ್ತಿ, ಗುಂಪು, ಸಂಸ್ಥೆ, ಸರ್ಕಾರವು ದೇಶದ ನಾಗರಿಕರ ಜೀವಿಸುವ ಹಕ್ಕಿಗೆ ಧಕ್ಕೆ ತರುವಂತಿಲ್ಲ.

*ಉಚಿತ ಮತ್ತು ಕಡ್ಡಾಯ ಶಿಕ್ಷಣ: ದೇಶದ ಪ್ರತಿಯೊಂದು ಮಗುವಿಗೂ ಅದರ 6ನೇ ವಯಸ್ಸಿನಿಂದ 14ನೇ ವಯಸ್ಸಿನವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು ಎಂದು 21(ಎ) ವಿಧಿ ಹೇಳುತ್ತದೆ.

*ಕಾನೂನು ಬಾಹಿರ ಬಂಧನದಿಂದ ರಕ್ಷಣೆ: ಕಾರಣವನ್ನು ತಿಳಿಸದೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸದೆ ಯಾವುದೇ ವ್ಯಕ್ತಿಯನ್ನು 24 ಗಂಟೆಗಳಿಗಿಂತ ಹೆಚ್ಚು ಅವಧಿಗೆ ಬಂಧನದಲ್ಲಿ ಇರಿಸುವಂತಿಲ್ಲ.

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

ಪ್ರತಿ ನಾಗರಿಕರು ತಮ್ಮ ಇಷ್ಟದ ಧರ್ಮವನ್ನು ಅನುಸರಿಸುವ, ಅದರ ಆಚರಣೆಗಳಲ್ಲಿ
ಭಾಗಿಯಾಗುವ, ಆ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನದ 25ನೇ ವಿಧಿ ನೀಡುತ್ತದೆ. ವ್ಯಕ್ತಿಯು ತಾನು ಅನುಸರಿಸುತ್ತಿರುವ ಧರ್ಮಕ್ಕೆ ಸಂಬಂಧಿಸಿದ ಧರ್ಮಾರ್ಥ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿ ಸುವ, ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ, ಆ ಸಂಸ್ಥೆ ಮೂಲಕ ಚರ, ಸ್ಥಿರಾಸ್ತಿ ಹೊಂದುವ, ನಿರ್ವಹಣೆ ಮಾಡುವ ಹಕ್ಕನ್ನು 26ನೇ ವಿಧಿಯು ನೀಡುತ್ತದೆ.

ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು

ಅಲ್ಪಸಂಖ್ಯಾತರ ಹಕ್ಕುಗಳು:

ದೇಶದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರು ತಮ್ಮದೇ ವಿಭಿನ್ನ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ, ಅದನ್ನು ಅವರು ರಕ್ಷಿಸಿಕೊಳ್ಳಬಹುದಾಗಿದೆ. ಅದು ಸರ್ಕಾರದ ಹೊಣೆಗಾರಿಕೆಯೂ ಹೌದು. ಅಲ್ಪಸಂಖ್ಯಾತ ಸಮುದಾಯವು ತನ್ನದೇ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ, ಅದನ್ನು ನಡೆಸುವ ಹಕ್ಕನ್ನು 30ನೇ ವಿಧಿಯು ನೀಡುತ್ತದೆ.

ಸಾಂವಿಧಾನಿಕ ಪರಿಹಾರದ ಹಕ್ಕು:

ದೇಶದ ಯಾವುದೇ ನಾಗರಿಕರೂ ಯಾವುದೇ ವಿಚಾರದಲ್ಲಿ ಸಂವಿಧಾನಬದ್ಧ ಪರಿಹಾರ ಕೋರಿ ಅಧೀನ ನ್ಯಾಯಾಲಯಗಳು, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಮೊರೆ ಹೋಗುವ ಹಕ್ಕನ್ನು 32ನೇ ವಿಧಿಯು ನೀಡುತ್ತದೆ.

ಕರ್ತವ್ಯಗಳು

ದೇಶದ ಪ್ರತಿಯೊಬ್ಬ ನಾಗರಿಕರೂ ನಿರ್ವಹಿಸಲೇಬೇಕಾದ ಮೂಲಭೂತ ಕರ್ತವ್ಯಗಳನ್ನು ಸಂವಿಧಾನವು ವಿವರಿಸಿದೆ. ಇವುಗಳನ್ನು ನಿರ್ವಹಿಸದೇ ಇರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.

*ಸಂವಿಧಾನಕ್ಕೆ ಬದ್ಧವಾಗಿರಬೇಕು. ಅದರ ಆದರ್ಶ ಮತ್ತು ಸಂಸ್ಥೆಗಳನ್ನು ಗೌರವಿಸುವುದು

*ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು

*ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಬೇಕು ಹಾಗೂ ಸಂರಕ್ಷಿಸಬೇಕು

*ದೇಶವನ್ನು ರಕ್ಷಿಸುವುದು ಮತ್ತು ಕರೆಬಂದಾಗ ದೇಶದ ಸೇವೆಗೆ ಧಾವಿಸಬೇಕು

*ಧರ್ಮ, ಭಾಷೆ, ಪ್ರದೇಶ, ಜಾತಿ-ಪಂಗಡಗಳ ಭೇದಭಾವಗಳನ್ನು ಬಿಟ್ಟು, ದೇಶದ ಎಲ್ಲ ನಾಗರಿಕರಲ್ಲೂ ಸಾಮರಸ್ಯ ಮತ್ತು ಭ್ರಾತೃತ್ವ ಭಾವನೆಯನ್ನು ಬೆಳೆಸುವುದು. ಮಹಿಳೆಯರ ಗೌರವಕ್ಕೆ ಧಕ್ಕೆತರುವಂತಹ ಆಚರಣೆಗಳನ್ನು ಬಿಟ್ಟುಬಿಡಬೇಕು

*ನಮ್ಮ ಸಮ್ಮಿಶ್ರ ಮತ್ತು ವೈವಿಧ್ಯ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸಬೇಕು ಹಾಗೂ ಕಾಪಾಡಬೇಕು

*ದೇಶದ ನೈಸರ್ಗಿಕ ಸಂಪತ್ತಿನ ರಕ್ಷಣೆ ಮತ್ತು ಅಭಿವೃದ್ಧಿ. ವನ್ಯಜೀವಿಗಳಿಗೆ ಅನುಕಂಪ ತೋರಬೇಕು

*ವೈಜ್ಞಾನಿಕ, ಮಾನವೀಯತೆ, ಪ್ರಶ್ನಿಸುವ ಮತ್ತು ಸುಧಾರಣೆಯ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು

*ಹಿಂಸೆಯನ್ನು ತ್ಯಜಿಸಬೇಕು ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಬೇಕು

*ದೇಶವು ನಿರಂತರ ಸಾಧನೆಯ ಹಾದಿಯಲ್ಲಿರಲು ಮತ್ತು ಉನ್ನತ ಸಾಧನೆಗಳನ್ನು ಸಿದ್ಧಿಸಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.