ADVERTISEMENT

Explainer| ಮಹತ್ವ ಪಡೆದುಕೊಂಡಿದೆ ಭಾರತದ ಆ್ಯಂಟಿ - ಸ್ಯಾಟಲೈಟ್ ಕ್ಷಿಪಣಿ ಪರೀಕ್ಷೆ

ಗಿರೀಶ್ ಲಿಂಗಣ್ಣ
Published 10 ಡಿಸೆಂಬರ್ 2022, 11:34 IST
Last Updated 10 ಡಿಸೆಂಬರ್ 2022, 11:34 IST
   

ಆ್ಯಂಟಿ ಸ್ಯಾಟಲೈಟ್ ವೆಪನ್ (ಎಎಸ್ಎಟಿ) ಗಳು ಬಾಹ್ಯಾಕಾಶ ಆಯುಧಗಳಾಗಿದ್ದು, ಇವುಗಳನ್ನು ಮಿಲಿಟರಿ ಕಾರ್ಯತಂತ್ರದ ಉದ್ದೇಶದಿಂದ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ.

ಎಎಸ್ಎಟಿ ವ್ಯವಸ್ಥೆಯನ್ನು ಇನ್ನೂ ಯಾವ ಯುದ್ಧದಲ್ಲೂ ಬಳಸಲಾಗಿಲ್ಲ. ಆದರೆ, ಕೆಲವು ರಾಷ್ಟ್ರಗಳು ಈಗಾಗಲೇ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಅವರದೇ ಹಳೆಯ ಉಪಗ್ರಹಗಳನ್ನು ನಾಶಪಡಿಸಿ, ಎಎಸ್ಎಟಿ ಆಯುಧದ ಸಾಮರ್ಥ್ಯವನ್ನು ಪ್ರದರ್ಶಿಸಿವೆ.

ಇಲ್ಲಿಯ ತನಕ ಜಗತ್ತಿನಲ್ಲಿ ಕೇವಲ ನಾಲ್ಕು ರಾಷ್ಟ್ರಗಳು ಮಾತ್ರ ಈ ಸಾಮರ್ಥ್ಯವನ್ನು ಗಳಿಸಿವೆ. ಅವುಗಳೆಂದರೆ ಅಮೆರಿಕ, ರಷ್ಯಾ, ಚೀನಾ ಹಾಗೂ ಭಾರತ.

ADVERTISEMENT

ಎಎಸ್ಎಟಿ ಆಯುಧ ಯಾಕೆ ಜಗತ್ತಿನಲ್ಲಿ ಸುದ್ದಿಯಲ್ಲಿತ್ತು?

ಚೀನಾ 2007ರಲ್ಲಿ ಆ್ಯಂಟಿ ಸ್ಯಾಟಲೈಟ್ ಕ್ಷಿಪಣಿ ಪರೀಕ್ಷೆ ನಡೆಸುತ್ತಿದ್ದ ಹಾಗೆಯೇ ಭಾರತವೂ ಎಎಸ್ಎಟಿ ಯೋಜನೆಯನ್ನು ಆರಂಭಿಸಿತು. ಹಲವು ವರ್ಷಗಳ ಕಾರ್ಯ ಯೋಜನೆಯ ಬಳಿಕ, 2019ರ ಮಾರ್ಚ್ 27ರಂದು ಭಾರತ ಮೊದಲ ಎಎಸ್ಎಟಿ ಪರೀಕ್ಷೆಯನ್ನು ಕೈಗೆತ್ತಿಕೊಂಡಿತು. ಮಿಷನ್ ಶಕ್ತಿ ಎಂಬ ಕೋಡ್ ಹೆಸರು ಹೊಂದಿದ್ದ ಈ ಕಾರ್ಯಾಚರಣೆಯಲ್ಲಿ ಭಾರತ ಭೂಮಿಯ ಕೆಳ ಕಕ್ಷೆಯಲ್ಲಿದ್ದ (ಎಲ್ಇಓ) ಉಪಗ್ರಹವೊಂದನ್ನು ಯಶಸ್ವಿಯಾಗಿ ಧ್ವಂಸಗೊಳಿಸಿತು. ಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಿದ ತಂತ್ರಜ್ಞಾನವನ್ನು ಹೊಂದಿತ್ತು.

ಬಾಹ್ಯಾಕಾಶದಲ್ಲಿ ಅವಶೇಷಗಳು ಉಳಿಯಬಾರದು ಎಂಬ ಉದ್ದೇಶದಿಂದ, ಭಾರತ ಉಪಗ್ರಹ ನಾಶಪಡಿಸುವ ಪ್ರಥಮ ಪರೀಕ್ಷೆಯನ್ನು ಆಗಸದಲ್ಲಿ, ಭೂಮಿಯ ವಾತಾವರಣದ ಒಳಗೇ ಇರುವ ಕೆಳ ಕಕ್ಷೆಯಲ್ಲಿ ನಡೆಸಿತು. ಈ ಪರೀಕ್ಷೆಯು ಯಶಸ್ವಿಯಾಗಿ, ಬಾಹ್ಯಾಕಾಶದಲ್ಲಿ ಉಳಿದ ಉಪಗ್ರಹದ ಅವಶೇಷಗಳು ಕ್ರಮೇಣ ಭೂಮಿಗೆ ಬಿದ್ದವು.

ಇದರಿಂದ ಭಾರತಕ್ಕೆ ಏನು ಪ್ರಯೋಜನ?

ಒಂದು ಯುದ್ಧದ ಸಂದರ್ಭದಲ್ಲಿ, ಭಾರತ ಈ ಆಯುಧ ವ್ಯವಸ್ಥೆಯನ್ನು ಬಳಸಿಕೊಂಡು ಶತ್ರು ರಾಷ್ಟ್ರದ ಉಪಗ್ರಹಗಳನ್ನು ನಾಶಪಡಿಸಿ, ಅವುಗಳ ಮಿಲಿಟರಿ ಕಾರ್ಯಾಚರಣೆಯನ್ನು ದಿಕ್ಕುತಪ್ಪಿಸಿಬಿಡಬಲ್ಲದು. ಇಂತಹ ದಾಳಿಯ ಪರಿಣಾಮವಾಗಿ, ಆ ರಾಷ್ಟ್ರದ ರಿಕನಯಸೆನ್ಸ್, ಗಸ್ತು, ಸಂಕೇತ ಬುದ್ಧಿಮತ್ತೆ (ಸಿಗ್ನಲ್ಸ್ ಇಂಟಲಿಜೆನ್ಸ್), ಸಂವಹನ ಹಾಗೂ ನ್ಯಾವಿಗೇಶನ್ ವ್ಯವಸ್ಥೆಗಳೂ ಬಾಹ್ಯಾಕಾಶದಲ್ಲಿರುವ ಉಪಗ್ರಹದ ನಾಶದೊಡನೆ ಹಾಳಾಗಬಹುದು.

ವಿಚಕ್ಷಣಾ ಉಪಗ್ರಹಗಳಲ್ಲಿ ಇನ್‌ಫ್ರಾರೆಡ್ ದೂರದರ್ಶಕಗಳನ್ನು ಅಳವಡಿಸಲಾಗಿದ್ದು, ಅವುಗಳು ಭೂಮಿಯಾದ್ಯಂತ ಕ್ಷಿಪಣಿಯ ಉಡಾವಣೆಯಿಂದ ಉಂಟಾಗುವ ಉಷ್ಣತೆಯನ್ನು ಗುರುತಿಸಬಲ್ಲವು. ಇವುಗಳನ್ನು ಕ್ಷಿಪಣಿ ದಾಳಿಯ ಕುರಿತ ಎಚ್ಚರಿಕೆ ನೀಡಲು, ನೂರಾರು, ಸಾವಿರಾರು ಕಿಲೋಮೀಟರ್‌ಗಳ ದೂರದಿಂದಲೂ ಕ್ಷಿಪಣಿಗಳ ಗುರಿಯನ್ನು ಅಂದಾಜಿಸಲು ಬಳಸಬಹುದು.

ಸಿಗ್ನಲ್ಸ್ ಇಂಟಲಿಜೆನ್ಸ್ ಉಪಗ್ರಹಗಳು ಲೋ ಅರ್ತ್ ಆರ್ಬಿಟ್ (ಎಲ್ಇಓ) ಅಥವಾ ಅತ್ಯಂತ ಎತ್ತರದ ಕಕ್ಷೆಯಲ್ಲಿ (ಜಿಯೋ ಸಿಂಕ್ರೊನಸ್ ಆರ್ಬಿಟ್), ಒಂದೇ ಕಡೆ ನೆಲೆಯಾಗಿರುವಂತೆ ಕಾಣುವಂತಹ ಸ್ಥಾನದಲ್ಲಿ ಕಾರ್ಯಾಚರಿಸುತ್ತವೆ. ಬಹುತೇಕ ಮಿಲಿಟರಿ ಉಪಗ್ರಹಗಳು ಭೂಮಿಯ ಮೇಲ್ಮೈಯಿಂದ 2,000 ಕಿಲೋಮೀಟರ್ ಎತ್ತರದಲ್ಲಿ, ಲೋ ಅರ್ತ್ ಆರ್ಬಿಟ್‌ನಲ್ಲಿ ಸಂಚರಿಸುತ್ತವೆ. ಈ ಉಪಗ್ರಹಗಳಿಗೆ ಸೆಲ್ಯುಲರ್ ಫೋನ್‌ಗಳಿಂದ, ವಾಕಿಟಾಕಿಗಳಿಂದ, ಮೈಕ್ರೋವೇವ್ ಟ್ರಾನ್ಸ್ ಮಿಷನ್‌ನಿಂದ, ರೇಡಿಯೋಗಳಿಂದ, ರೇಡಾರ್‌ಗಳಿಂದ ಆಯ್ದ ಸಂವಹನವನ್ನು ಪಡೆಯುವ ಸಾಮರ್ಥ್ಯವಿದೆ. (ಹಾಗೆಂದ ಮಾತ್ರಕ್ಕೆ ಅವುಗಳು ಜಗತ್ತಿನ ಎಲ್ಲ ಸಂವಹನವನ್ನು ಪಡೆಯಲು ಸಾಧ್ಯವಿಲ್ಲ!)

ಸಂವಹನ ಉಪಗ್ರಹಗಳನ್ನು ಸೇನೆ ಸಮುದ್ರದಲ್ಲಿರುವ ನೌಕೆಗಳ ಜೊತೆ, ನೆಲದ ಮೇಲಿರುವ ಸೇನೆಯ ಜೊತೆ, ಹಾಗೂ ಸಣ್ಣ ಆ್ಯಂಟೆನಾ ಹೊಂದಿರುವ ಸಬ್‌ಮರೀನ್‌ಗಳ ಜೊತೆ ಸಂವಹನ ನಡೆಸಲು ಬಳಸಿಕೊಳ್ಳುತ್ತದೆ. ಅವುಗಳು ವಿಚಕ್ಷಣೆಯ ಚಿತ್ರಗಳನ್ನು ಭೂಮಿಯಲ್ಲಿರುವ ಕೇಂದ್ರಗಳಿಗೆ ಅಥವಾ ಕಾರ್ಯಾಚರಣೆಯಲ್ಲಿರುವ ಸೇನೆಗೆ ಕಳುಹಿಸುತ್ತವೆ.

ಇಂತಹ ಉಪಗ್ರಹಗಳನ್ನು ಎಎಸ್ಎಟಿ ಆಯುಧ ಬಳಸುವ ಮೂಲಕ ನಾಶಪಡಿಸುವುದು ಶತ್ರುಗಳಿಗೆ ಅಪಾರ ಹಾನಿ ಉಂಟುಮಾಡಬಲ್ಲದು.

ಈಗ ಭಾರತವೂ ಎಎಸ್ಎಟಿ ಸಾಮರ್ಥ್ಯವನ್ನು ಗಳಿಸಿರುವುದರಿಂದ, ಭಾರತವನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಭಾರತದೊಡನೆ ಏನಾದರೂ ಯುದ್ಧ ನಡೆದರೆ, ಶತ್ರು ರಾಷ್ಟ್ರ ಅಪಾರ ಹಾನಿ ಅನುಭವಿಸಬೇಕಾಗುತ್ತದೆ.

ಭಾರತದ ಬಾಹ್ಯಾಕಾಶ ಯೋಜನೆಗಳು ಭಾರತದ ರಕ್ಷಣೆ, ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳಿಗೆ ಬೆನ್ನೆಲುಬಾಗಿವೆ. ಪ್ರಸ್ತುತ ನಡೆಸಿರುವ ಯಶಸ್ವಿ ಪರೀಕ್ಷೆಯು ಭಾರತ ಇತರ ರಾಷ್ಟ್ರಗಳು ಅಭಿವೃದ್ಧಿ ಪಡಿಸುವ ನೂತನ ತಂತ್ರಜ್ಞಾನಗಳ ಅಪಾಯವನ್ನು ಎದುರಿಸಲು, ಹಾಗೂ ತನ್ನ ಆಸ್ತಿಗಳನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದೆ ಎಂದು ರೂಪಿಸಿದೆ.

ಯಾವುದಾದರೂ ರಾಷ್ಟ್ರ ಯುದ್ಧ ಸಂದರ್ಭದಲ್ಲಿ ಶತ್ರು ರಾಷ್ಟ್ರದ ಉಪಗ್ರಹವನ್ನು ನಾಶಪಡಿಸುವ ಮೂಲಕ ಆ ರಾಷ್ಟ್ರದ ಮಿಲಿಟರಿ ಕಾರ್ಯಾಚರಣೆಯನ್ನು ಹಾಳು ಮಾಡಬಹುದು ಎನ್ನಲಾಗುತ್ತದೆ. ಆದರೆ ಉಪಗ್ರಹವನ್ನು ನಾಶ ಮಾಡಲು ಸಾಧ್ಯವಿರುವ ರಾಷ್ಟ್ರ ಉಪಗ್ರಹ ನಾಶಪಡಿಸುವ ಮೂಲಕ ಶತ್ರುವಿನ ಆರ್ಥಿಕ ವ್ಯವಹಾರಗಳು, ದೂರವಾಣಿ ಸಂವಹನ, ಪವರ್ ಗ್ರಿಡ್ ಇತ್ಯಾದಿಗಳನ್ನೂ ನಾಶಪಡಿಸಬಲ್ಲದು.

ಭಾರತ ಹೀಗೆ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಎಎಸ್ಎಟಿ ಆಯುಧವನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದು ಅಂತರಾಷ್ಟ್ರೀಯ ವಲಯದಲ್ಲಿ ಹಾಗೂ ಬಾಹ್ಯಾಕಾಶ ಉದ್ಯಮ ತಜ್ಞರಲ್ಲಿ ಆಶ್ಚರ್ಯ, ಸಂಚಲನ ಮೂಡಿಸಿದೆ. ಈ ಪರೀಕ್ಷೆಯ ಬಳಿಕ, ಅಮೇರಿಕಾ, ರಷ್ಯಾ ಹಾಗೂ ಚೀನಾಗಳ ನಂತರ ಶತ್ರುವಿನ ಉಪಗ್ರಹವನ್ನು ನಾಶಪಡಿಸಬಲ್ಲ ಸಾಮರ್ಥ್ಯ ಹೊಂದಿರುವ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

ಲೇಖಕರು:ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.