ಪ್ರಾತಿನಿಧಿಕ ಚಿತ್ರ
ಬೌದ್ಧಿಕ ಸ್ವಾತಂತ್ರ್ಯದ ಮೇಲೆ ವಿಶ್ವದ ಅನೇಕ ಭಾಗಗಳಲ್ಲಿ ಹಲ್ಲೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸ್ವಾಯತ್ತತೆಯನ್ನು ಹತ್ತಿಕ್ಕಲಾಗುತ್ತಿದೆ. ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರತಿಭಟನೆಯ ಅವಕಾಶಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆದಿವೆ. ಇದರಿಂದಾಗಿ ವಿವಿಗಳು ಬೌದ್ಧಿಕ ದಾರಿದ್ರ್ಯದೊಂದಿಗೆ ಭ್ರಷ್ಟಾಚಾರವನ್ನೂ ಮೈಗೂಡಿಸಿಕೊಂಡಿವೆ.
‘ಮಾನ್ಯ ನ್ಯಾಯಾಧೀಶರೇ, ಅಗೋ ಅಲ್ಲಿ ಕಟಕಟೆಯಲ್ಲಿ ಇದ್ದಾನಲ್ಲ, ಆತನ ಹೆಸರು ಆಂಟೋನಿಯೊ ಗ್ರಾಮ್ಸಿ. ಅವನು ಬಹಳ ಅಪಾಯಕಾರಿ. ಏಕೆಂದರೆ, ಅವನು ಪ್ರಭುತ್ವದ ಇಚ್ಛೆಗೆ ವಿರುದ್ಧವಾಗಿ ‘ಯೋಚಿಸುತ್ತಾನೆ’ ಮತ್ತು ತನ್ನ ಯೋಚನೆಗಳ ಮೂಲಕ ಪ್ರಭುತ್ವದ ಕಾರ್ಯಸೂಚಿಯನ್ನು ವಿಮರ್ಶಿಸುತ್ತಾನೆ. ಆ ಕಾರಣದಿಂದಾಗಿ, ಕನಿಷ್ಠ ಮುಂದಿನ ಇಪ್ಪತ್ತು ವರ್ಷಗಳ ಕಾಲ ಆತನ ಮೆದುಳು ಕಾರ್ಯ ನಿರ್ವಹಿಸುವುದನ್ನು ನಾವು ನಿಲ್ಲಿಸಬೇಕಿದೆ. ಮಹನೀಯರಾದ ತಾವು ಆತನಿಗೆ ಅಂತಹ ಶಿಕ್ಷೆಯನ್ನು ವಿಧಿಸಬೇಕು. ಇದು ನನ್ನ ವಿನಂತಿ’.
ಮೇಲಿನ ಚಾರಿತ್ರಿಕ ಸಂಭಾಷಣೆ, ಇಟಲಿಯ ಚಿಂತಕ ಆಂಟೋನಿಯೊ ಗ್ರಾಮ್ಸಿಯನ್ನು ಅಲ್ಲಿನ ಸರ್ವಾಧಿಕಾರಿ ಮುಸಲೊನಿಯು ನ್ಯಾಯಾಲಯ ವಿಚಾರಣೆಗೆ ಒಳಪಡಿಸಿದ ಸಂದರ್ಭದ್ದು;ಸರ್ವಾಧಿಕಾರಿಗಳ ಚರಿತ್ರೆಯ ಭಾಗವಾಗಿ ಗಮನಿಸಬಹುದಾದುದು. ಸಾಂಪ್ರದಾಯಿಕ ಮಾರ್ಕ್ಸ್‌ವಾದಿ ಚಿಂತನೆಗಳನ್ನು ವಿಮರ್ಶಿಸುವ ಮೂಲಕ ಜನಪರ ಚಿಂತನೆಗಳನ್ನು ಹೊಸ ಮಾದರಿಯಲ್ಲಿ ಮಂಡಿಸಿದ ಗ್ರಾಮ್ಸಿ, ಸರ್ವಾಧಿಕಾರದ ಮನಃಸ್ಥಿತಿಗೆ ವಿರೋಧಿಯಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.ವಿಚಾರಣೆಯ ಕೊನೆಯಲ್ಲಿ ನ್ಯಾಯಾಧೀಶರು ಗ್ರಾಮ್ಸಿಗೆ 20 ವರ್ಷಕ್ಕೂ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಿದರು. ಆದರೆ, ಅಷ್ಟು ವರ್ಷಗಳ ಶಿಕ್ಷೆ ಅನುಭವಿಸಲು ಗ್ರಾಮ್ಸಿ ಜೀವಂತವಾಗಿರಲಿಲ್ಲ.ಏಳೆಂಟು ವರ್ಷಗಳ ಶಿಕ್ಷೆ ಮುಗಿಯುವಷ್ಟರಲ್ಲಿ,ಅನಾರೋಗ್ಯದಿಂದಾಗಿ ಜೈಲಿನಲ್ಲಿಯೇ ಮರಣ ಹೊಂದಿದ. ಆದರೆ, ನ್ಯಾಯವಾದಿ ಬಯಸಿದಂತೆ ಜೈಲಿನಲ್ಲಿದ್ದ ಅವಧಿಯಲ್ಲಿ ಆತನ ಮೆದುಳು ನಿಷ್ಕ್ರಿಯ ವಾಗಿರಲಿಲ್ಲ. ಆ ಸೃಜನಶೀಲ ಮನಸ್ಸು, ಸುಮಾರು ಮೂರು ಸಾವಿರ ಪುಟಗಳಷ್ಟು ಸಾಹಿತ್ಯವನ್ನು ಜೈಲಿನಲ್ಲಿದ್ದಾಗ ಸೃಷ್ಟಿಸಿತು. ಆ ಸಾಹಿತ್ಯವೇ ‘ಪ್ರಿಸನ್ ನೋಟ್‌ಬುಕ್’ ಎಂಬ ಹೆಸರಿನಲ್ಲಿ ಪ್ರಕಟಗೊಂಡು ಪ್ರಖ್ಯಾತಗೊಂಡಿದೆ. ಗ್ರಾಮ್ಸಿ ತನ್ನ ಪುಸ್ತಕದಲ್ಲಿ ಮಂಡಿಸಿದ ‘ಸಾಂಸ್ಕೃತಿಕ ಯಾಜಮಾನ್ಯ ಸಿದ್ಧಾಂತ’ ಜಗತ್ತಿನ ಬೌದ್ಧಿಕ ಚಿಂತನೆಯ ದಿಕ್ಕನ್ನೇ ಪ್ರಭಾವಿಸಿತು; ಮುಂದೆ, ಎಡ್ವರ್ಡ್ ಸೈದ್ ಬರೆದ ‘ಓರಿಯಂಟಲಿಸಂ’ ಎನ್ನುವ ಮಹತ್ವದ ಕೃತಿಗೆ ಪ್ರೇರಣೆಯಾಯಿತು.
ಈ ಚಾರಿತ್ರಿಕ ಘಟನೆಯ ಉದಾಹರಣೆಯನ್ನು ವಿಶ್ವದ ವಿವಿಧ ಭಾಗಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಬೌದ್ಧಿಕ ಸ್ವಾತಂತ್ರ್ಯದ ಮೇಲಿನ ಪ್ರಭುತ್ವದ ದಾಳಿಗಳ ಭಾಗವಾಗಿ ನೋಡಬೇಕಿದೆ. ಜಗತ್ತಿನ ಚರಿತ್ರೆಯಲ್ಲಿ ಬೌದ್ಧಿಕ ಸ್ವಾತಂತ್ರ್ಯದ ಮೇಲಿನ ಪ್ರಭುತ್ವದ ದಾಳಿಗೆ ಸಾಕಷ್ಟು ಉದಾಹರಣೆಗಳೂ ಇವೆ ಮತ್ತು ಈ ವಿದ್ಯಮಾನ ಭಾರತಕ್ಕೆ ಸೀಮಿತವಾದ ಸಂಗತಿಯಲ್ಲ ಎನ್ನುವುದನ್ನೂ ನಾವು ಗಮನಿಸಬೇಕಿದೆ.
ಬೌದ್ಧಿಕ ಸ್ವಾತಂತ್ರ್ಯದ ಮೇಲಿನ ಅಸಹನೆ ಹಾಗೂ ದಾಳಿ ಜಾಗತಿಕವಾಗಿ ಹೆಚ್ಚುತ್ತಿರುವ ದಿನಗಳಿವು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ನಂತರ ಅಲ್ಲಿನ ವಿಶ್ವ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಮುಕ್ತ ಪ್ರತಿಭಟನೆಗೆ ಇದ್ದ ಎಲ್ಲ ಅವಕಾಶಗಳೂ ಮೊಟಕುಗೊಂಡಿವೆ. ಹೊಸ ನಿಯಮಗಳ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಅಭಿಪ್ರಾಯಗಳ ಮೇಲೆ ಸರ್ಕಾರ ನಿರ್ಬಂಧ ಹೇರುತ್ತಿರುವುದು ವಿಶ್ವವಿದ್ಯಾಲಯಗಳ ಚೈತನ್ಯವನ್ನು ಗಾಸಿಗೊಳಿಸುವಪ್ರಯತ್ನವಾಗಿದೆ.
ಸೆಂಟ್ರಲ್ ಯೂರೋಪಿಯನ್ ಯೂನಿವರ್ಸಿಟಿಯು ಯೂರೋಪ್‌ನ ಪ್ರಮುಖಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಅಂತರಶಿಸ್ತೀಯ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಇಡೀ ಯೂರೋಪ್‌ನಲ್ಲಿಯೇ ಪ್ರಸಿದ್ಧಿ ಪಡೆದಿತ್ತು. ಈ ಮೊದಲು ಇದರ ಮುಖ್ಯ ಕ್ಯಾಂಪಸ್ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿತ್ತು. ಆದರೆ, ಅಮೆರಿಕದ ಮಾನ್ಯತೆ ಪಡೆದ ಕಾರ್ಯಕ್ರಮಗಳನ್ನು ಮುಂದುವರಿಸುವುದಕ್ಕೆ ಹಂಗೇರಿ ಸರ್ಕಾರ ಅವಕಾಶ ನಿರಾಕರಿಸಿತು. ಹಾಗಾಗಿ, ವಿಶ್ವವಿದ್ಯಾಲಯವು ತನ್ನ ಬಹುತೇಕ ಕಾರ್ಯಾಚರಣೆಗಳನ್ನು ಆಸ್ಟ್ರಿಯಾ ರಾಜಧಾನಿ ವಿಯೆನ್ನಾಕ್ಕೆ ಸ್ಥಳಾಂತರಿಸಿದೆ. ಈ ಘಟನೆಯೂ ಶೈಕ್ಷಣಿಕ ಕ್ಷೇತ್ರದ ಸ್ವಾಯತ್ತತೆಯನ್ನು ಪ್ರಭುತ್ವ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವೇ ಆಗಿದೆ. ಶೈಕ್ಷಣಿಕ ಕ್ಷೇತ್ರದ ಬಗೆಗಿನ ದಮನಕಾರಿ ನಡವಳಿಕೆಯು ಟರ್ಕಿಯಲ್ಲೂ ಕಾಣಿಸಿಕೊಂಡಿದೆ. 2016ರ ದಂಗೆ ಪ್ರಯತ್ನದ ನಂತರ ಶೈಕ್ಷಣಿಕ ಕ್ಷೇತ್ರದ ಮೇಲೆ ವ್ಯಾಪಕವಾದ ದಮನ ನೀತಿಯನ್ನು ಟರ್ಕಿಯಲ್ಲಿ ಅನುಸರಿಸಲಾಗುತ್ತಿದೆ. ಟರ್ಕಿಶ್ ಇಸ್ಲಾಮಿಕ್ ಚಳವಳಿಯಾದ ‘ಗುಲೆನ್ ಚಳವಳಿ’ಯನ್ನು ಬೆಂಬಲಿಸುತ್ತಿವೆ ಎಂದು ಆರೋಪಿಸಿ ಹಲವು ವಿಶ್ವ ವಿದ್ಯಾಲಯಗಳನ್ನು ಮುಚ್ಚಲಾಗಿದೆ.
ಜಾಗತಿಕವಾಗಿ ನಡೆಯುತ್ತಿರುವ ಈ ಎಲ್ಲಾ ವಿದ್ಯಮಾನಗಳು ಶೈಕ್ಷಣಿಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿಗಳಾಗಿವೆ. ಆರೋಗ್ಯಕರ ಸಮಾಜಕ್ಕೆ ಶಿಕ್ಷಣ ಕ್ಷೇತ್ರದ ಸ್ವಾಯತ್ತತೆ ಅಗತ್ಯ ಎಂದು ನಂಬಿದವರ ಕಳವಳಕ್ಕೆ ಆ ದಾಳಿಗಳು ಕಾರಣವಾಗಿವೆ. ಶೈಕ್ಷಣಿಕ ಕ್ಷೇತ್ರದ ಮೇಲಿನ ದಮನಕಾರಿ ನೀತಿ, ಶಿಕ್ಷಣ ಸಂಸ್ಥೆಗಳ ಮೇಲೆ ಆಳುವ ವರ್ಗ ತನ್ನ ಪ್ರಾಬಲ್ಯ ಸ್ಥಾಪಿಸುವ ನವ ಉದಾರವಾದಿ ರಾಜಕೀಯ ನೀತಿಗಳ ಹುನ್ನಾರದ ಭಾಗ ಎನ್ನುವ ವಿಶ್ಲೇಷಣೆಗಳನ್ನು ಜಗತ್ತಿನ ಹಲವು ಶೈಕ್ಷಣಿಕ ತಜ್ಞರು ಮುಂದಿಡುತ್ತಿದ್ದಾರೆ.
ಭಾರತದಲ್ಲಿನ ಬೌದ್ಧಿಕ ಸ್ವಾತಂತ್ರ್ಯದ ಮೇಲಿನ ದಾಳಿಗೆ ಸುದೀರ್ಘ ಇತಿಹಾಸವೇ ಇದೆ. ಮುಖ್ಯವಾಗಿ, 1960ರ ದಶಕದ ನಂತರ, ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಮೊಟಕು ಗೊಳಿಸುವ ಪ್ರಕ್ರಿಯೆಗಳನ್ನು ಪ್ರಭುತ್ವ ಆರಂಭಿಸಿತು. ಈ ವಿದ್ಯಮಾನ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇನ್ನೂ ತೀವ್ರವಾದ ಸ್ಥಿತಿಗೆ ತಲುಪಿತು.
ವಿಶ್ವವಿದ್ಯಾಲಯಗಳ ಆಡಳಿತವನ್ನು ಸರಿದಾರಿಗೆ ತರುವ ಹೆಸರಿನಲ್ಲಿ ಕುಲಪತಿಗಳ ಆಯ್ಕೆಯನ್ನು ಸರ್ಕಾರಿ ವ್ಯವಸ್ಥೆಯ ತೆಕ್ಕೆಗೆ ತೆಗೆದುಕೊಳ್ಳಲಾಯಿತು. ವಿಶ್ವವಿದ್ಯಾಲಯಗಳ ಸಿಬ್ಬಂದಿ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪಗಳು ವ್ಯಾಪಕವಾಗಿ ನಡೆದವು. ಬಹಳ ಮುಖ್ಯವಾಗಿ, ವಿಶ್ವವಿದ್ಯಾಲಯದ ಬೌದ್ಧಿಕ ಸ್ವಾತಂತ್ರ್ಯದ ಜೀವಾಳವಾಗಿದ್ದ ವಿದ್ಯಾರ್ಥಿ ಚುನಾವಣೆ ಗಳನ್ನೇ ರದ್ದುಗೊಳಿಸುವ ಮೂಲಕ ಬೌದ್ಧಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೊಡ್ಡ ದಾಳಿಯನ್ನೇ ನಡೆಸಲಾಯಿತು.
ಈಗ ಪರಿಸ್ಥಿತಿ ಇನ್ನೂ ವಿಪರೀತಕ್ಕೆ ಹೋಗಿದೆ. ವಿಚಾರ ಸಂಕಿರಣಗಳನ್ನು ಮೇಲ್ವಿಚಾರಣೆ ಮಾಡುವ, ಶೈಕ್ಷಣಿಕ ಸಂಶೋಧನೆಗಳನ್ನು ಪರಿಶೀಲಿಸುವ ಅಥವಾ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯ ಗಳಿಗಾಗಿ ಅವರನ್ನು ಶಿಕ್ಷಿಸುವ ಮತ್ತು ಅಮಾನತು ಗೊಳಿಸುವ, ಬಂಧಿಸುವ ಪ್ರಕರಣಗಳು ಪ್ರಸ್ತುತ ವ್ಯಾಪಕವಾಗಿ ನಡೆಯುತ್ತಿವೆ. ತುರ್ತು ಪರಿಸ್ಥಿತಿ ಕಾಲದಲ್ಲಿಯೂ ಬೌದ್ಧಿಕ ಸ್ವಾತಂತ್ರ್ಯದ ಮೇಲೆ ಇಷ್ಟು ತೀವ್ರ ಹಾಗೂ ವ್ಯಾಪಕ ದಾಳಿ ನಡೆದಿರಲಿಲ್ಲ ಎನ್ನುವ ಅಂಶವನ್ನು ನಮ್ಮ ನಡುವಿನ ರಾಜಕೀಯ ಶಾಸ್ತ್ರಜ್ಞೆ ಜೊಯಾ ಹಸನ್ ಗುರ್ತಿಸಿದ್ದಾರೆ. ವಿಶ್ವವಿದ್ಯಾಲಯ ಗಳ ಆವರಣಗಳಲ್ಲಿ ವಾಕ್ ಸ್ವಾತಂತ್ರ್ಯ ಹಾಗೂ ಡಿಜಿಟಲ್ ಹಕ್ಕುಗಳನ್ನು ವಿರೋಧಿಸಿ ಬೆದರಿಕೆಗಳು ಹೆಚ್ಚಾಗುತ್ತಿರುವ ದಿನಗಳಿವು. ಇಂಥ ಬೆದರಿಕೆಗಳ ಜೊತೆ ಜೊತೆಗೆ, ಸ್ವತಂತ್ರವಾಗಿ ಅಭಿಪ್ರಾಯವ್ಯಕ್ತಪಡಿಸುವ ಚಿಂತಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವ ಬೆಳವಣಿಗೆ ವಿಪರೀತವಾಗಿದ್ದು, ಅದು ಬೌದ್ಧಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಜನಪರ ರಾಜಕೀಯ ಚಿಂತನೆಗಳ ಉಗಮ ಸ್ಥಾನ ಹಾಗೂ ಸಂವಾದಗಳ ಗಂಗೋತ್ರಿ ಆಗಬೇಕಾಗಿದ್ದ ವಿಶ್ವವಿದ್ಯಾಲಯಗಳು ಬೌದ್ಧಿಕ ದಾರಿದ್ರ್ಯದಿಂದ ಬಳಲುವುದರ ಜೊತೆಗೆ ಭ್ರಷ್ಟಾಚಾರದ ಪ್ರಯೋಗಶಾಲೆಗಳೂ ಆಗಿವೆ.
ಸಮಾಜದಲ್ಲಿನ ವೈಚಾರಿಕತೆಯ ಮಟ್ಟ ಕ್ಷೀಣಿಸು ತ್ತಿರುವುದಕ್ಕೂ ವಿಶ್ವವಿದ್ಯಾಲಯಗಳ ಜಡತೆಗೂ ಸಂಬಂಧವಿದೆ. ಕೆಲವು ವಿಶ್ವವಿದ್ಯಾಲಯಗಳು ರಾಜಕೀಯ ಸಂಘಟನೆಗಳ ಹಿಡಿತಕ್ಕೆ ಸಿಕ್ಕಿದ್ದು, ಸುಧಾರಿಸಲು ಅಸಾಧ್ಯ ಎನ್ನುವ ಮಟ್ಟಿಗೆ ಕೊಳೆತು ನಾರುತ್ತಿವೆ. ಹಿಂದೆ ಪ್ರಭುತ್ವವು ಶಿಕ್ಷಕರಿಗೆ ನೀವು ‘ಏನನ್ನು ಕಲಿಸಬೇಕು’ ಎನ್ನುವುದನ್ನು ನಿರ್ದೇಶಿಸು ತ್ತಿತ್ತು. ಆದರೆ, ಇಂದು ‘ಏನನ್ನು ಕಲಿಸಬೇಕು’ ಎಂದು ಮಾತ್ರ ನಿರ್ದೇಶಿಸುತ್ತಿಲ್ಲ, ‘ಹೇಗೆ ಕಲಿಸಬೇಕು’ ಎನ್ನುವುದನ್ನು ನಿರ್ದೇಶಿಸುವ ಸ್ಥಿತಿಗೆ ಬದಲಾಗಿದೆ ಹಾಗೂ ಪಠ್ಯಗಳಲ್ಲಿ ಸಂಕುಚಿತ ಮನೋಭಾವ ತುಂಬುತ್ತಿದೆ.
ಉದಾಹರಣೆಗೆ, ‘ಪ್ರಜಾಪ್ರಭುತ್ವವನ್ನು ಕಲಿಸುವುದೇ ಆದರೆ ಪ್ರಾಚೀನ ಭಾರತದಲ್ಲಿನಪ್ರಜಾಪ್ರಭುತ್ವವನ್ನು ಕಲಿಸಿ’ ಎಂಬ ಕೇಂದ್ರೀಕೃತ ಮಾದರಿ ಪಠ್ಯಗಳನ್ನು ಸೂಚಿಸಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎನ್ನುವ ಪ್ರತಿರೋಧದ ಧ್ವನಿಗಳು ಕ್ಷೀಣವಾಗಿವೆ. ಇಂದಿನ ಪ್ರಭುತ್ವಗಳು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ನಿರ್ದಿಷ್ಟವಾಗಿ ಕಲಿಸುವುದನ್ನು ನಿರ್ಬಂಧಿಸುತ್ತಿವೆ ಎನ್ನುವ ಅಭಿಪ್ರಾಯಗಳಿವೆ. ಹಾಗೆಂದು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಆರೋಗ್ಯಕರ ವಾತಾವರಣವಿದೆ ಎಂದು ಹೇಳಲಾಗದು. ಪ್ರಭುತ್ವದೊಂದಿಗೆ ತೊಂದರೆಗೆ ಸಿಲುಕುವುದನ್ನು ಬಯಸದ ಖಾಸಗಿ ವಿಶ್ವವಿದ್ಯಾಲಯಗಳು ಸ್ವಯಂ ಸೆನ್ಸಾರ್ ನೀತಿಗಳನ್ನು ಸ್ವಯಂ ಪ್ರೇರಣೆಯಿಂದಲೇ ಅಳವಡಿಸಿಕೊಳ್ಳುತ್ತಿವೆ.
ಬೌದ್ಧಿಕ ಸ್ವಾತಂತ್ರ್ಯದ ಚರಿತ್ರೆ ನೋಡುವುದಾದರೆ, ಜೀವಪರವಾಗಿ ಯೋಚಿಸುವ ಚಿಂತಕರಿಗೆ ಎಲ್ಲ ಕಾಲದಲ್ಲೂ ವಿರೋಧ ಇದ್ದೇ ಇತ್ತು. ಉದಾಹರಣೆಗೆ, ಬುದ್ಧನ ಕಾಲದಲ್ಲೂ ಆತನ ತತ್ವಗಳನ್ನು ವಿರೋಧಿಸುವವರು ಸಾಕಷ್ಟು ಮಂದಿಯಿದ್ದರು. ಬಸವಣ್ಣನ ಸಮಯದಲ್ಲೂ ಅವರ ವಿಚಾರಗಳನ್ನು ಒಪ್ಪದವರಿದ್ದರು. ಅಂಬೇಡ್ಕರ್ ಅವರ ಚಿಂತನೆಗಳಿಗೂ ಪ್ರಬಲ ಪ್ರತಿರೋಧವಿತ್ತು; ಈಗಿನ ಸಂವಿಧಾನ ಕಾಲದಲ್ಲಿಯೂ ಸಂವಿಧಾನ ತತ್ವಗಳನ್ನು ವಿರೋಧಿಸುವವರು ಸಾಕಷ್ಟು ಮಂದಿಯಿದ್ದಾರೆ.
ಆದರೆ, ಚರಿತ್ರೆಯಲ್ಲಿ ಕೊನೆಗೂ ಗೆಲುವು ಸಾಧಿಸಿರುವುದು, ಉಳಿದಿರುವುದು ಮತ್ತು ಮುಂದುವರಿಯುತ್ತಿರುವುದು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸಂವಿಧಾನದ ತತ್ವಗಳು ಮಾತ್ರ. ಈ ಜೀವಪರ ತತ್ವಗಳ ವಿರೋಧಿಗಳು ಕಣ್ಮರೆಯಾಗಿಹೋಗಿದ್ದಾರೆ.
ಬೌದ್ಧಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ವರ್ತಮಾನದಲ್ಲಿ ಕಾಣಿಸುತ್ತಿರುವ ಅಸಹನೆ ಹಾಗೂ ವೈಚಾರಿಕತೆಯನ್ನು ಹತ್ತಿಕ್ಕಲು ನಡೆಯುತ್ತಿರುವ ದಾಳಿಗಿಂತಲೂ ತೀವ್ರವಾದ ಬೆದರಿಕೆಗಳನ್ನು ಎದುರಿಸಿದ, ಬೆದರಿಕೆಗಳ ನಡುವೆಯೂ ಸತ್ಯ ಹೇಳಲಿಕ್ಕೆ ಹಿಂಜರಿಯದ ಸಾಕ್ರೆಟೀಸ್, ಗೆಲಿಲಿಯೊ, ಆಂಟೋನಿಯೊ ಗ್ರಾಮ್ಸಿ, ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಪರಂಪರೆಯ ಜೊತೆ ಜೊತೆಗೆ ಪ್ರಸ್ತುತ ಬಂಧನದಲ್ಲಿರುವ ಅಶೋಕ ವಿಶ್ವವಿದ್ಯಾಲಯದ ಪ್ರೊ. ಅಲಿ ಖಾನ್ ಮಹಮೂದಾಬಾದ್ ಅವರನ್ನೂ ನಾವು ನೆನಪಿಸಿಕೊಳ್ಳಬೇಕು. ಈ ನೆನಪು, ಬೌದ್ಧಿಕ ಹಾಗೂ ಶೈಕ್ಷಣಿಕ ಸ್ವಾಯತ್ತತೆಯ ಮಹತ್ವವನ್ನು ತಿಳಿಸುವುದರ ಜೊತೆಗೆ, ಅದನ್ನು ರಕ್ಷಿಸಿಕೊಳ್ಳಬೇಕಾದ ಜರೂರನ್ನು ನಮಗೆ ಮನವರಿಕೆ ಮಾಡಿಕೊಡುವಂತಹದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.