ADVERTISEMENT

ವಿಶ್ಲೇಷಣೆ | ಬೆಂಕಿಯೊಡನೆ ಸರಸದ ‘ದೇಶ–ಕಾಲ’

ಸಬಿತಾ ಬನ್ನಾಡಿ
Published 23 ಜೂನ್ 2025, 0:02 IST
Last Updated 23 ಜೂನ್ 2025, 0:02 IST
   

ರಾಜಕೀಯ ಮಹತ್ವಾಕಾಂಕ್ಷೆ ಇರುವ ಧಾರ್ಮಿಕ ಮುಖಂಡನೊಬ್ಬನಿಗೆ, ತನ್ನ ಧರ್ಮದ ಅನಾಥನೊಬ್ಬನ ಹೆಣವನ್ನು ಬೇರೆ ಧರ್ಮದವರ ಸ್ಮಶಾನದಲ್ಲಿ ಹೂಳಲಾಗಿದೆ ಎನ್ನುವ ಸುದ್ದಿ ಮುಟ್ಟುತ್ತದೆ. ಹಲವು ಗೋಜಲುಗಳಲ್ಲಿ ಸಿಲುಕಿದ್ದ ಅವನಿಗೆ ಅದೊಂದು ಸುವರ್ಣಾವಕಾಶವೆನಿಸುತ್ತದೆ. ಇದನ್ನು ಧಾರ್ಮಿಕ ವಿಷಯವಾಗಿಸಿ, ತಾನು ಧರ್ಮ ರಕ್ಷಕನೆಂದು ಬಿಂಬಿಸಿಕೊಂಡು ಮೇಲೇರಬೇಕು ಎಂದು ಯೋಜನೆ ಹಾಕುತ್ತಾನೆ.

ಇಷ್ಟಾದರೂ, ಎದುರಿನ ಧರ್ಮದ ನಾಯಕ ತನ್ನ ಲೆಕ್ಕಾಚಾರದಂತೆ ಹೆಚ್ಚು ಗಲಾಟೆ ಮಾಡದ ಬಗ್ಗೆ ಇವನಿಗೆ ಬೇಸರ ಇದೆ! ಸುದ್ದಿ ಪ್ರಕಾರ ಸತ್ತವನು ಮಹಾನ್ ಕುಡುಕ, ಮೋಸಗಾರ. ಬದುಕಿದ್ದಾಗ ಬೆಲೆಯಿರಲಿಲ್ಲ. ಆದರೇನು? ಅವನ ಹೆಣಕ್ಕೆ ಬಹಳ ಬೆಲೆ! ಈಗ ಅವನ ಅವನ ಹೆಣ ಎತ್ತಿಸಿ ಖಬರಸ್ಥಾನದಲ್ಲಿ ಧಾರ್ಮಿಕ ಆಚರಣೆಯೊಂದಿಗೆ ಪುನಃ ಮಣ್ಣು ಮಾಡಿದರೆ ಆ ಅನಾಥನಿಗೂ, ಅವನು ಹುಟ್ಟಿದ ಧರ್ಮಕ್ಕೂ ನ್ಯಾಯ ದೊರೆತಂತೆ ಎಂದು ಎಲ್ಲರೂ ಭಾವಿಸುತ್ತಾರೆ. ನಾಯಕ ತಮ್ಮ ಕಷ್ಟ ಪರಿಹರಿಸದಿದ್ದರೂ ಪರವಾಗಿಲ್ಲ, ಧರ್ಮಕ್ಕಾಗಿ ಸೆಣಸುತ್ತಿದ್ದಾನಲ್ಲ ಎಂದು ಆದರಿಸುವ ಜನಬೆಂಬಲ ಹುಟ್ಟಿಕೊಂಡಿತು. ಹೀಗಿರುವಾಗ ಒಂದು ಹೆಣಕ್ಕೆ ಎಷ್ಟು ಹೆಣ ಬೀಳುತ್ತಿತ್ತೋ ಏನೋ.

ತಮಾಷೆಯೆಂದರೆ, ಸಮಾಧಿಯಿಂದ ಹೊರತೆಗೆದ ಕೊಳೆತು ನಾರುತ್ತಿದ್ದ ಹೆಣದ ಮೆರವಣಿಗೆ ಹೋಗುತ್ತಿರುವಾಗಲೇ ಓಣಿಯ ತುದಿಯಲ್ಲಿ ಒಂದು ದೃಶ್ಯ ಎಲ್ಲರನ್ನೂ ಚಕಿತಗೊಳಿಸುತ್ತದೆ. ಸತ್ತಿದ್ದ ಎಂದು ತಿಳಿದಿದ್ದ ಕುಡುಕ ಸತ್ತಿಲ್ಲ. ಕುಡಿದು ಮತ್ತನಾಗಿದ್ದ ಅವನು ಪ್ರತ್ಯಕ್ಷನಾಗಿ ಅಷ್ಟೇ ವೇಗದಲ್ಲಿ ಮರೆಯಾಗಿಬಿಟ್ಟ. ಕೊಳೆತ ಹೆಣ ಯಾರದ್ದೋ? ಸದ್ಯ, ಯಾರದ್ದೋ ರಾಜಕೀಯದಿಂದ ಇನ್ಯಾರದೋ ಒಂದಿಷ್ಟು ಹೆಣ ಬೀಳುವುದು ತಪ್ಪಿತು.

ADVERTISEMENT

ಇದು ಸಾಹಿತಿ ಬಾನು ಮುಷ್ತಾಕ್ ಅವರ ‘ಬೆಂಕಿ ಮಳೆ’ ಕತೆಯೊಳಗಿನ ಒಂದು ಆಯಾಮ. ಇಂತಹ ವ್ಯಂಗ್ಯಗಳು, ವೈರುಧ್ಯಗಳು ಅಂತರರಾಷ್ಟ್ರೀಯ ಮಟ್ಟದಲ್ಲೂ ನಡೆಯುತ್ತಿರುತ್ತವೆ. ತಮಗೆ ಬೇಕಾದಂತೆ ಕತೆ ಕಟ್ಟಿ ಜನರನ್ನು ನಂಬಿಸುವ, ಅನುಯಾಯಿಗಳನ್ನು ಸೃಷ್ಟಿಸುವ, ಯುದ್ಧದ ಹೆಸರಿನಲ್ಲಿ ಮಾರಣಹೋಮ ನಡೆಸುವ ದುರಂತಗಳು ಕಣ್ಮುಂದೆ ಇವೆ.

‘ಆಸ್ಪತ್ರೆಯೆಂದೂ ನೋಡದೇ ಇರಾನ್ ಬಾಂಬ್ ದಾಳಿ ನಡೆಸುತ್ತಿದೆ’ ಎಂದು ಇಸ್ರೇಲ್ ಹೇಳುತ್ತದೆ. ಗಾಜಾದಲ್ಲಿ ಹಗಲು ರಾತ್ರಿಯೆನ್ನದೆ ಶಾಲೆ, ಆಸ್ಪತ್ರೆ, ನಿರಾಶ್ರಿತರ ಟೆಂಟ್, ಮನೆಗಳ ಮೇಲೆ ಬಾಂಬ್‌ ದಾಳಿ ಮಾಡಿ ಹೆಂಗಸರು, ಮಕ್ಕಳೆಂಬ ಭೇದವಿಲ್ಲದೆ ನರಮೇಧ ಮಾಡುತ್ತಿರುವುದಲ್ಲದೆ, ಅವರಿಗೆ ಆಹಾರ, ಔಷಧವೂ ಸಿಗದಂತೆ ನಿರ್ಬಂಧ ಹೇರಿ ಕೊಲ್ಲುತ್ತಿರುವ ಇಸ್ರೇಲ್ ಯಾವ ಬಾಯಲ್ಲಿ ಈ ಮಾತು ಹೇಳುತ್ತಿದೆಯಪ್ಪಾ ಎಂದು ಆಶ್ಚರ್ಯ ಆಗುತ್ತದೆ. ಸ್ವತಃ ತಾನು ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದರೂ ಇರಾಕ್, ಇರಾನ್ ಮೊದಲಾದವು ಅದನ್ನು ಇರಿಸಿಕೊಂಡಿವೆ, ರೂಪಿಸುತ್ತಿವೆ ಎಂದು ಆರೋಪಿಸುತ್ತಾ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ದಾಳಿ ಮಾಡುತ್ತವೆ. ಸದಾ ಮಾನವ ಹಕ್ಕುಗಳ ಬಗ್ಗೆ ಮಾತಾಡುವ ಈ ದೇಶಗಳು ಪ್ಯಾಲೆಸ್ಟೀನ್ ಮಕ್ಕಳ ಸಾವಿಗೆ ಬಾಯಿಗೆ ಬೀಗ ಜಡಿದುಕೊಳ್ಳುತ್ತವೆ.

‘ಕದನ ವಿರಾಮಕ್ಕೆ ಒತ್ತಾಯಿಸುತ್ತೇವೆ’ ಎನ್ನುತ್ತಲೇ ಅಂದು ಬೈಡನ್, ಇಂದು ಟ್ರಂಪ್ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ಗೆ ಕಳಿಸಿಕೊಟ್ಟಿದ್ದಾರೆ. ‘ಭಯೋತ್ಪಾದನೆಯ ವಿರುದ್ಧ ನಾವಿದ್ದೇವೆ’ ಎನ್ನುವ ಅಮೆರಿಕ, ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನವನ್ನು ತನ್ನ ಗೆಳೆಯ ಎನ್ನುತ್ತದೆ ಹಾಗೂ ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡಲು ತುದಿಗಾಲಲ್ಲಿ ನಿಲ್ಲುತ್ತದೆ.

ಅಮೆರಿಕದ ಇಬ್ಬಗೆ ನೀತಿ ನೋಡಿಯೂ ಯುರೋಪ್‌ಯೇತರ ದೇಶಗಳಲ್ಲಿ ಒಮ್ಮತದ ನಿಲುವು ಮೂಡದಿರುವುದು ಅಚ್ಚರಿಯ ಸಂಗತಿ. ಹೀಗೆ ಒಮ್ಮತ ಮೂಡದಂತೆ ಮಾಡಲು ವಸಾಹತುಗೊಂಡ ಮನಸ್ಸುಗಳನ್ನು ಇವು ಪಳಗಿಸಿಬಿಟ್ಟಿವೆ. ಆ ಮೂಲಕ ತಮ್ಮ ಯಜಮಾನಿಕೆಯನ್ನು ಮತ್ತು ಆರ್ಥಿಕ ಹಿಡಿತವನ್ನು ನಿರಂತರಗೊಳಿಸಿಕೊಂಡಿವೆ. ತಾವು ಎಂದೆಂದಿಗೂ ಯಜಮಾನರಾಗಿರಬೇಕು ಮತ್ತು ಉಳಿದವರೆಲ್ಲ ತಮ್ಮ ಇಶಾರೆಗೆ ತಕ್ಕಂತೆ ಕುಣಿಯಬೇಕು; ಹಾಗೆ ಕುಣಿಯದವರನ್ನು ಸರ್ವನಾಶ ಮಾಡಬೇಕು ಎಂಬುದರ ಬಗೆಗೆ ಅವರಿಗೆ ಯಾವ ಅನುಮಾನವೂ ಇಲ್ಲ.

ಎರಡನೆಯ ಮಹಾಯುದ್ಧಕ್ಕೂ ಮೊದಲು ಸಾಮ್ರಾಜ್ಯಶಾಹಿ ಇತ್ತು, ಈಗ ಇರುವುದು ‘ಮಹಾ ಸಾಮ್ರಾಜ್ಯಶಾಹಿ’ ಎಂದು ಇತಿಹಾಸಕಾರ ಹಾಗೂ ಪತ್ರಕರ್ತ ವಿಜಯ ಪ್ರಸಾದ್ ಹೇಳುತ್ತಾರೆ.

ತಮ್ಮೊಳಗಿನ ಕೆಲವು ತಕರಾರುಗಳನ್ನು ಗೌಣಗೊಳಿಸಿಕೊಂಡು ‘ಜಿ 7’ ದೇಶಗಳು ಮಿಲಿಟರಿ, ಇಂಟೆಲಿಜೆನ್ಸ್ ಯೋಜನೆಗಳನ್ನು ಒಟ್ಟಾಗಿ ರೂಪಿಸಿಕೊಂಡು ಕೆಲಸ ಮಾಡುತ್ತಿವೆ. ‘ಗ್ಲೋಬಲ್ ನಾರ್ತ್’ ಎಂದು ಕರೆಸಿಕೊಳ್ಳುವ ಈ ದೇಶಗಳು ಜಾಗತಿಕ ಮಿಲಿಟರಿ ಖರ್ಚಿನಲ್ಲಿ ಶೇ 74ರಷ್ಟು ಪಾಲು ಹೊಂದಿವೆ. ಮೂಲತಃ ರೇಸಿಸ್ಟ್ ಆಗಿರುವುದೇ ಇವುಗಳೊಳಗಿನ ಬಾಂಧವ್ಯದ ಸೂತ್ರವಾಗಿದ್ದು, ಇವುಗಳು ಅಂತರರಾಷ್ಟ್ರೀಯವಾಗಿ ಮಾನವಕುಲವನ್ನು ವಿಭಜನೆ ಮಾಡಿವೆ ಎಂದು ವಿಜಯ್ ಹೇಳುತ್ತಾರೆ.

ಬಿಳಿ ಶ್ರೇಷ್ಠತೆಯನ್ನು ಈಗಲೂ ನಂಬಿರುವ ಈ ದೇಶಗಳು, ಜಾನ್ ಲಾಕ್ ತನ್ನ ‘ಟೂ ಟ್ರೀಟಿಸಸ್ ಆಫ್‌ ಗವರ್ನಮೆಂಟ್‌’ ಕೃತಿಯಲ್ಲಿ ಹೇಳುವ, ‘ದೇವರು ಮನುಷ್ಯರಿಗೆ ಪ್ರಕೃತಿಯನ್ನು ಅಭಿವೃದ್ಧಿಪಡಿಸಲು ನೀಡಿರುತ್ತಾನೆ. ಅಭಿವೃದ್ಧಿಪಡಿಸಿದವರಿಗೆ ಮಾತ್ರ ಅದರಲ್ಲಿ ಹಕ್ಕಿದೆ. ಮತ್ತು ಅಭಿವೃದ್ಧಿ ಮಾಡದವರನ್ನು ಅಲ್ಲಿಂದ ಕಿತ್ತುಹಾಕಿ ತಾವು ಅದನ್ನು ವಶಪಡಿಸಿಕೊಳ್ಳಬೇಕು’ ಎಂಬ ಮಾತನ್ನು ಅನುಸರಿಸುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮನ್ನು ಬಿಟ್ಟು ಉಳಿದವರೆಲ್ಲ ಅನಾಗರಿಕರು ಎನ್ನುತ್ತಾ, ಅವರ ಸ್ಥಳೀಯ ಜ್ಞಾನ ಹಾಗೂ ಜೀವನಕ್ರಮಗಳನ್ನು ಅಮಾನ್ಯಗೊಳಿಸುವ ತಂತ್ರವನ್ನು ಹೆಣೆಯುತ್ತಲೇ ಬಂದಿದ್ದಾರೆ.

ಪ್ಯಾಲೆಸ್ಟೀನ್ ಬಹಳ ಹಿಂದಿನಿಂದಲೂ ಶ್ರೀಮಂತ ಸಂಸ್ಕೃತಿ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಿತ್ತು. ಅದನ್ನು ಮರೆಮಾಚಿ, ಅದೊಂದು ರೆಫ್ಯುಜಿ ಕ್ಯಾಂಪ್ ಎಂಬಂತೆ ಲೋಕಕ್ಕೆ ಬಿಂಬಿಸಲಾಗಿದೆ. ಅಲ್ಲಿನ ಸುಂದರ ಬೀಚ್‌ ನಗರದಲ್ಲಿನ ಆರ್ಟ್‌ ಗ್ಯಾಲರಿಗಳನ್ನು ನಾಶ ಮಾಡಿರುವ ಇಸ್ರೇಲ್, ಈಗ ತನಗಾಗಿ ಮಲ್ಟಿನ್ಯಾಷನಲ್ ಹೋಟೆಲ್ ಚೈನ್, ರೆಸಾರ್ಟ್ ಮಾಡಲು ಬಯಸುತ್ತದೆ ಮತ್ತು ಅದನ್ನು ಅಭಿವೃದ್ಧಿ ಎಂದು ಟ್ರಂಪ್‌ ನಿರ್ಲಜ್ಜೆಯಿಂದ ಟ್ವೀಟ್ ಮಾಡುತ್ತಾರೆ. ಉಳಿದ ಎಲ್ಲರ ಸಂಸ್ಕೃತಿ ಮತ್ತು ಪ್ರತಿರೋಧವನ್ನು ತಮಗೆ ಒಡ್ಡಿದ ಸವಾಲು ಎಂದು ಭಾವಿಸುವ ಈ ‘ಗ್ಲೋಬಲ್ ನಾರ್ತ್’, ಇಸ್ರೇಲ್‌ ಅನ್ನು ಅರಬ್‌ ನಾಡಿನ ನಡುವೆ ಇರುವ ಬಿಳಿಯರ ಪಟ್ಟಣ ಎಂದು ಭಾವಿಸುವುದೇ ಅವರ ವಿಶೇಷ ಪ್ರೀತಿಗೆ ಕಾರಣ ಎಂದು ವಿಜಯ್‌ ಪ್ರಸಾದ್ ವಿಶ್ಲೇಷಿಸುತ್ತಾರೆ.

ಗಾಜಾದಲ್ಲಿ ಸೇವೆ ಸಲ್ಲಿಸಿರುವ ಅಮೆರಿಕದ ಡಾ.ಫಿರೋಜ್ ಸಿಧ್ವ ಅವರ ಅನುಭವದ ಮಾತುಗಳು ಹೀಗಿವೆ: ‘ಅವರ ಜೀವ ಉಳಿಸುವುದಕ್ಕೆ ಹೋರಾಡುವುದಕ್ಕಿಂತಲೂ ಮಿಗಿಲಾಗಿ ಅವರಿಗೊಂದು ತುಂಡು ಬ್ರೆಡ್ ಒದಗಿಸಬಹುದೇ ಎಂದು ನಾವು ಹೋರಾಡುತ್ತಿದ್ದೆವು. ಅವರು ಹಸಿದ ಹೊಟ್ಟೆಯಲ್ಲಿ ಸಾಯದಿರಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು. ನಮ್ಮವರನ್ನು ಕಳೆದುಕೊಂಡು ನಾವ್ಯಾಕೆ ಬದುಕಿದ್ದೇವೆ ಎಂದು ಪ್ರಶ್ನಿಸುವ ಐದಾರು ವರ್ಷದ ಮಕ್ಕಳು, ರಾತ್ರಿಯ ಬಾಂಬ್‌ ದಾಳಿಗೆ ತುತ್ತಾಗಿ ಸಾಯುವ ಮೊದಲು ಕೊನೆಯಪಕ್ಷ ಅರೆಹೊಟ್ಟೆಯನ್ನಾದರೂ ತುಂಬಿಸಿಕೊಂಡಿರಲಿ ಎಂದು ಒದ್ದಾಡುತ್ತಿದ್ದೆವು. ಡಾಕ್ಟರ್‌ಗಳಾಗಿ ಅಲ್ಲಿ ಸೇವೆ ಸಲ್ಲಿಸಲು ಹೋಗಿದ್ದೆವು. ಅಲ್ಲಿ ಜೀವರಕ್ಷಕ ಔಷಧ, ರಕ್ತ, ವಿದ್ಯುತ್‌, ಅತ್ಯಂತ ಪ್ರಾಥಮಿಕ ಸವಲತ್ತುಗಳು... ಜಗತ್ತಿನ ಅತಿ ಬಡ ದೇಶದಲ್ಲಿಯೂ ಸಿಗಬಹುದಾದ ಈ ಯಾವ ಸೌಲಭ್ಯಗಳೂ ಅಲ್ಲಿರಲಿಲ್ಲ’.

‘ಅಲ್ಲಿನ ವೈದ್ಯಕೀಯ ವ್ಯವಸ್ಥೆಯೇನೂ ಸೋತು ಕೈಚೆಲ್ಲಿರಲಿಲ್ಲ; ಅದನ್ನು ವ್ಯವಸ್ಥಿತವಾಗಿ ಒಡೆದು ಹಾಕಲಾಗಿತ್ತು. ಅಲ್ಲಿನ ಡಾಕ್ಟರ್‌ಗಳನ್ನು ಬಂಧಿಸಿ ಹಿಂಸಿಸಲಾಗುತ್ತಿತ್ತು. ಗೊತ್ತಿದ್ದೇ ಎಲ್ಲ ಅಂತರರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಲಾಗಿತ್ತು. ಆರು ತಿಂಗಳ ಹಸುಗೂಸಿನಿಂದ ಹಿಡಿದು ಹನ್ನೆರಡು ವರ್ಷಗಳೊಳಗಿನ ಹದಿನೆಂಟು ಸಾವಿರ ಮಕ್ಕಳನ್ನು ಕೆಲವೇ ತಿಂಗಳುಗಳ ಅಂತರದಲ್ಲಿ ಕೊಲ್ಲಲಾಗಿದೆ.  ಅವರ ಶಾಲೆ, ಆಸ್ಪತ್ರೆ, ಮನೆ, ಆಶ್ರಯತಾಣ ಎಲ್ಲದರ ಮೇಲೆ ಬಾಂಬ್ ದಾಳಿ ಆಗಿದೆ. ಆರು ವರ್ಷದ ಹುಡುಗಿ ಆ ಬೆಂಕಿ ಮಳೆಯಿಂದ ತಪ್ಪಿಸಿಕೊಂಡು ಓಡುವುದನ್ನು, ಒಂದೇ ಬೆಳಗಿನಲ್ಲಿ ಇನ್ನೂರಕ್ಕೂ ಹೆಚ್ಚು ಹೆಂಗಸರು, ಮಕ್ಕಳು ಮಾನಸಿಕ ಆಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ನುಗ್ಗುವುದನ್ನು ನೋಡಿಯೂ ನಾನು ಏನನ್ನೂ ನೋಡಿಲ್ಲ ಎಂದು ನಟಿಸಲಾರೆ...’ ಫಿರೋಜ್ ಅವರ ಈ ಮಾತುಗಳನ್ನು ಕೇಳುತ್ತಾ ಕೇಳುತ್ತಾ ವಿಶ್ವಸಂಸ್ಥೆಯ ಸಭೆಯೊಂದರ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಗೆ ದುಃಖ ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಯಾವ ದೇಶವಾದರೇನು? ಸತ್ತವರು ಯಾವ ಧರ್ಮದವರಾದರೇನು? ಪ್ರತ್ಯಕ್ಷ ನರಮೇಧಕ್ಕೆ ಯಾವ ಸಮರ್ಥನೆಯಾದರೂ ಇದೆಯೇ? 

ಪ್ಯಾಲೆಸ್ಟೀನ್‌ನಲ್ಲಿ ನಡೆಯುತ್ತಿರುವ ನರಮೇಧವನ್ನು ವಿರೋಧಿಸುವ ಭಾರತೀಯರನ್ನು ಉಗ್ರವಾಗಿ ಟೀಕಿಸುವ, ಟ್ರೋಲ್ ಮಾಡುವ ದೊಡ್ಡ ಪಡೆಯೊಂದು ಜನಸಾಮಾನ್ಯರಲ್ಲಿ ಇದೆ. ಪ್ಯಾಲೆಸ್ಟೀನ್ ನರಮೇಧದ ಬಗ್ಗೆ ಮಾತನಾಡಿದ ಕೂಡಲೇ ಅವರು, ಅಕ್ಟೋಬರ್ 23ರ ಹಮಾಸ್ ದಾಳಿಯನ್ನು ನೆನಪಿಸುತ್ತಾರೆ. ಹೀಗೆ ವಿತಂಡವಾದ ಮಾಡುವವರು, 1948ರಿಂದ ಪ್ಯಾಲೆಸ್ಟೀನ್ ಭೂಪ್ರದೇಶವನ್ನು ಇಸ್ರೇಲ್ ಒತ್ತುವರಿ ಮಾಡುತ್ತಿರುವುದು ಹಾಗೂ ಇಸ್ರೇಲ್ ದಾಳಿಗಳ ಪರಿಣಾಮವಾಗಿ 1980ರಲ್ಲಿ ಹಮಾಸ್‌ನಂತಹ ಉಗ್ರಗಾಮಿ ಸಂಘಟನೆಗಳು ಹುಟ್ಟಿದ್ದನ್ನು ಮರೆಯುತ್ತಾರೆ.

ಯಾಸೆರ್ ಅರಾಫತ್ ಎಂಬ ಶಾಂತಿದೂತ ನಾಯಕನ ಜನಪ್ರಿಯತೆಯ ವಿರುದ್ಧ ಇದೇ ಇಸ್ರೇಲ್, ಹಮಾಸ್‌ ಅನ್ನು ಬೆಂಬಲಿಸಿತು. ನಂತರ ಅದು ಪ್ರಬಲವಾಗಿ ಬೆಳೆದು 2005ರಲ್ಲಿ ಚುನಾವಣೆ ಗೆದ್ದಿತು. ಅಲ್ಲಿಂದ 2022ರ ತನಕ ಬಿಡದೆ ಇಸ್ರೇಲ್ ಪ್ಯಾಲೆಸ್ಟೀನ್ ಮೇಲೆ ದಾಳಿ ಮಾಡುತ್ತಲೇ ಬಂದಿದೆ. ಆದರೆ, 2023ರಲ್ಲಿ ಹಮಾಸ್ ಮಾಡಿದ ದಾಳಿಯನ್ನೇ ನೆಪವಾಗಿಸಿಕೊಂಡು ಇಸ್ರೇಲ್ ಈಗ ನರಮೇಧ ನಡೆಸುತ್ತಿದೆ. ಜಾಗತಿಕ ಬೆಂಬಲದಿಂದ ಕೊಬ್ಬಿ ಇರಾನ್ ಮೇಲೂ ದಾಳಿ ನಡೆಸಿದೆ. ಭವಿಷ್ಯ ಏನೋ ತಿಳಿದಿಲ್ಲ. ಆದರೆ ಸುಡುವುದು ಬೆಂಕಿಯ ಗುಣ. ಆ ಬೆಂಕಿ ಇಂದು ಇಸ್ರೇಲನ್ನೂ ಬಿಡುತ್ತಿಲ್ಲ.

ಯಾವುದೇ ಸಮಾಜ ಸಾಂಸ್ಕೃತಿಕ ಸಮಾಜವಾಗಿ, ಸಹಬಾಳ್ವೆ, ಸೌಹಾರ್ದದ ಸಮಾಜವಾಗಿ ರೂಪುಗೊಳ್ಳುವುದೊಂದೇ ಇವುಗಳಿಗೆಲ್ಲ ಪರಿಹಾರ. ಯಾವ ಸಮಾಜವೂ ಇಸ್ರೇಲ್‌ನಂತೆ ಮಿಲಿಟರಿ ಸಮಾಜ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.