
ಬಾಹ್ಯಾಕಾಶದ ಎತ್ತರದಿಂದ ಭಾರತದತ್ತ ಕೆಳಗೆ ನೋಡುವಾಗ, ಆಗಸವನ್ನು ಮೋಡ ಮುಸುಕಿರುವಾಗಲೂ ಸಹ ಎಲ್ಲವನ್ನೂ ಸ್ಪಷ್ಟವಾಗಿ ವೀಕ್ಷಿಸುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದನ್ನೇ ಭಾರತದ ನೂತನ ಉಪಗ್ರಹವಾದ ಜಿಐಸ್ಯಾಟ್-1ಎ (ಇಒಎಸ್-05 ಎಂದೂ ಕರೆಯಲಾಗುತ್ತದೆ) ಮಾಡಲಿದೆ. ಈ ಉಪಗ್ರಹ ನಾಲ್ಕೂವರೆ ವರ್ಷಗಳ ಹಿಂದೆ, ಅಂದರೆ 2021ರಲ್ಲಿ ಉಡಾವಣೆಯ ಸಂದರ್ಭದಲ್ಲಿ ಉಂಟಾದ ಸಮಸ್ಯೆಯ ಪರಿಣಾಮವಾಗಿ ಕಳೆದುಹೋದ ಜಿಐಸ್ಯಾಟ್-1 (ಇಒಎಸ್-03) ಉಪಗ್ರಹಕ್ಕೆ ಪರ್ಯಾಯ ಉಪಗ್ರಹವಾಗಿದೆ.
2.2 ಟನ್ ತೂಕದ ಈ ಉಪಗ್ರಹ ಭೂಸ್ಥಿರ ಕಕ್ಷೆಯಲ್ಲಿ ಇರಲಿದೆ. ಅಂದರೆ, ಇದು ಯಾವಾಗಲೂ ಭೂಮಿಯ ಒಂದೇ ಪ್ರದೇಶದ ಮೇಲೆ ಸ್ಥಿರವಾಗಿರಲಿದೆ. ಅಲ್ಲಿಂದ ಇದು ಭಾರತೀಯ ಉಪಖಂಡವನ್ನು ಬಹುತೇಕ ನೈಜ ಸಮಯದಲ್ಲಿ ವೀಕ್ಷಿಸುತ್ತಲೇ ಇರಲಿದೆ. ಭೂಮಿಯ ಕೆಳ ಕಕ್ಷೆಯಲ್ಲಿರುವ ಸಾಮಾನ್ಯ ಉಪಗ್ರಹಗಳು ಒಂದು ಪ್ರದೇಶದ ಮೇಲೆ ದಿನವೊಂದಕ್ಕೆ ಹಲವು ಬಾರಿ ಸಂಚರಿಸುತ್ತವೆ. ಆದರೆ, ಈ ಉಪಗ್ರಹ ಮಾತ್ರ ಆಗಸದಿಂದ ಸದಾ ನೋಡುತ್ತಲೇ ಇರುವ ಕಣ್ಣಿನಂತೆ ಕಾರ್ಯಾಚರಿಸಲಿದೆ.
ಇದನ್ನು ವಿಶೇಷವಾಗಿಸುವುದೇನು?: ಇದು ವಿಶೇಷ ಉಪಕರಣಗಳನ್ನು ಬಳಸಿ, ಮೋಡಗಳ ಮೂಲಕವೂ ಭೂಮಿಯ ವೀಕ್ಷಣೆ ನಡೆಸಬಲ್ಲದು. ಇದು ಕೇವಲ ಸಾಮಾನ್ಯ ಛಾಯಾಚಿತ್ರಗಳನ್ನು ಮಾತ್ರವೇ ಸೆರೆಹಿಡಿಯುವುದಿಲ್ಲ. ಬದಲಿಗೆ, ವರ್ಣಪಟಲದ ಎಲ್ಲ ಮಾಹಿತಿಗಳನ್ನು, ಅಂದರೆ, ಬಚ್ಚಿಟ್ಟ ಮಾಹಿತಿಗಳನ್ನೂ ಬಯಲುಗೊಳಿಸುವ ವಿವಿಧ ರೀತಿಯ ಬೆಳಕಿನ ಪ್ರತಿಫಲನಗಳನ್ನು ಪ್ರದರ್ಶಿಸುತ್ತದೆ. ರೈತರು ಈ ಮಾಹಿತಿಗಳನ್ನು ಬಳಸಿಕೊಂಡು, ಬೆಳೆಗಳ ಆರೋಗ್ಯ ಗಮನಿಸಿ, ಬೆಳೆಯ ಪ್ರಮಾಣವನ್ನು ಊಹಿಸಲು ಸಾಧ್ಯವಾಗುತ್ತದೆ. ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳ ವ್ಯಾಪ್ತಿಯನ್ನು ಗಮನಿಸುತ್ತಾ, ಅಕ್ರಮ ಅರಣ್ಯ ನಾಶವನ್ನು ತಡೆಯಲು ಸಾಧ್ಯವಾಗುತ್ತದೆ. ಇನ್ನು ಗಣಿಗಾರಿಕೆ ನಡೆಸುವವರು ಖನಿಜಗಳ ಸಂಗ್ರಹವನ್ನು ಗಮನಿಸಿದರೆ, ಹವಾಮಾನ ತಜ್ಞರು ಮೋಡಗಳನ್ನು ಉತ್ತಮವಾಗಿ ಅಧ್ಯಯನ ಮಾಡಲು, ಪರ್ವತಗಳ ಮೇಲಿನ ಮಂಜನ್ನು ಗಮನಿಸಲು, ಕರಗುತ್ತಿರುವ ಹಿಮನದಿಗಳನ್ನು ವೀಕ್ಷಿಸಲು, ಮತ್ತು ಸಮುದ್ರದಲ್ಲಿನ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಪ್ರವಾಹ ಅಥವಾ ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ, ಇದು ಕ್ಷಿಪ್ರ ಎಚ್ಚರಿಕೆ ಸಂದೇಶಗಳನ್ನು ನೀಡಿ, ಪರಿಹಾರ ತಂಡಗಳಿಗೆ ಏನಾಗುತ್ತಿದೆ ಎನ್ನುವುದನ್ನು ಗಮನಿಸಲು ನೆರವಾಗುತ್ತದೆ.
ಈ ಉಪಗ್ರಹ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ ಎಲ್ಲ ಪ್ರಮುಖ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಈಗ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣಿಸಲು ಸಜ್ಜಾಗಿದೆ. ಬಹುಶಃ ಇನ್ನೊಂದು ವಾರದಲ್ಲಿ ಉಪಗ್ರಹ ಶ್ರೀಹರಿಕೋಟಾಗೆ ಪ್ರಯಾಣ ಬೆಳೆಸಬಹುದು. ಇಸ್ರೊ ಮುಖ್ಯಸ್ಥರಾದ ವಿ. ನಾರಾಯಣನ್ ಅವರು ಉಪಗ್ರಹ ಈಗ ಅಂತಿಮ ಪರಿಶೀಲನೆಯಲ್ಲಿದೆ ಎಂದಿದ್ದಾರೆ. ಅವರ ಅನುಮೋದನೆ ಮತ್ತು ಹಸಿರು ನಿಶಾನೆಯ ನಂತರವಷ್ಟೇ ಅದು ಬಾಹ್ಯಾಕಾಶ ಕೇಂದ್ರಕ್ಕೆ ತೆರಳಬಹುದು.
ಈ ಬಾರಿಯಂತೂ ಉಡಾವಣೆಯ ವಿಚಾರದಲ್ಲಿ ಇಸ್ರೊ ಹೆಚ್ಚುವರಿ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಕೇವಲ ತಿಂಗಳ ಹಿಂದೆ, ಅಂದರೆ ಜನವರಿ 12, 2026ರಂದು, ಪಿಎಸ್ಎಲ್‌ವಿ ಸಿ62 ಯೋಜನೆ ಮೂರನೇ ಹಂತದಲ್ಲಿ ವೈಫಲ್ಯ ಅನುಭವಿಸಿದ್ದು, ಇಸ್ರೊದ ಮುಖ್ಯ ಉಪಗ್ರಹವಾದ ಇಒಎಸ್-ಎನ್1 (ಅನ್ವೇಷ) ಮತ್ತು ಇತರ 15 ಸಣ್ಣ ಉಪಗ್ರಹಗಳು ಕಳೆದುಹೋದವು. ಮೇ 2025ರ ಪಿಎಸ್ಎಲ್‌ವಿ ಸಿ61 ವೈಫಲ್ಯದ ಕೆಲ ತಿಂಗಳ ಬಳಿಕ ಈ ವೈಫಲ್ಯ ಎದುರಾಗಿತ್ತು. ಪಿಎಸ್ಎಲ್‌ವಿ ಸಿ61ರಲ್ಲಿ, ಮೂರನೇ ಹಂತ ನಿರೀಕ್ಷಿತ ರೀತಿಯಲ್ಲಿ ಕಾರ್ಯಾಚರಿಸದೆ, ಕಣ್ಗಾವಲು ಯೋಜನೆಗಳಿಗೆ ಅವಶ್ಯಕವಾದ ಇಒಎಸ್-09 (ಆರ್‌ಐಸ್ಯಾಟ್-1ಬಿ) ರೇಡಾರ್ ಇಮೇಜಿಂಗ್ ಉಪಗ್ರಹ ನಷ್ಟವಾಯಿತು. ಹೀಗೆ ಒಂದರ ಬೆನ್ನಿಗೆ ಒಂದರಂತೆ ಉಂಟಾದ ವೈಫಲ್ಯಗಳು ಇಸ್ರೊದ ಅತ್ಯಂತ ನಂಬಿಕಾರ್ಹ ರಾಕೆಟ್ ಆದ ಪಿಎಸ್ಎಲ್‌ವಿ ಮೇಲೆ ಅಗಾಧ ಒತ್ತಡ ಸೃಷ್ಟಿಸಿದ್ದು, ಅದರ ಗುಣಮಟ್ಟದ ಪರಿಶೀಲನೆಯ ಕುರಿತು ಗಂಭೀರ ಸವಾಲುಗಳನ್ನು ಮೂಡಿಸಿದೆ. ಇದು ಸಾಲದೆಂಬಂತೆ, 2021ರ ಜಿಎಸ್ಎಲ್‌ವಿ-ಎಫ್10 ವೈಫಲ್ಯವೂ ನೆನಪಾಗುತ್ತಿದ್ದು, ಅದರಲ್ಲಿ ಆಗಸ್ಟ್ 12ರ ಬೆಳಗ್ಗೆ 5:43ಕ್ಕೆ ಸಮರ್ಪಕವಾಗಿ ಉಡಾವಣೆಗೊಂಡರೂ, ಕ್ರಯೋಜನಿಕ್ ಅಪ್ಪರ್ ಸ್ಟೇಜ್ (ಸಿಯುಎಸ್ - ಅತ್ಯಂತ ತಣ್ಣಗಿನ ದ್ರವ ಜಲಜನಕ ಮತ್ತು ಆಮ್ಲಜನಕವನ್ನು ಬಳಸುವ ಇಂಜಿನ್) ಚಾಲ್ತಿಗೊಳ್ಳಲೇ ಇಲ್ಲ. ಈ ಮೂಲಕ ಯೋಜನೆ ವಿಫಲಗೊಂಡು, ಜಿಐಸ್ಯಾಟ್-1 ಉಪಗ್ರಹ ಶಾಶ್ವತವಾಗಿ ಕಳೆದುಹೋಯಿತು. ಅದಕ್ಕೂ ಮುನ್ನ, ಮಾರ್ಚ್ 2020ರಲ್ಲಿ ಅಂತಿಮ ಕ್ಷಣದಲ್ಲಿ, ಮತ್ತು 2021ರ ಆರಂಭದಲ್ಲಿ ಸಣ್ಣ ವಿದ್ಯುತ್ ಸಮಸ್ಯೆಯಿಂದಾಗಿ ಯೋಜನೆಯನ್ನು ಎರಡು ಬಾರಿ ಮುಂದೂಡಲಾಗಿತ್ತು.
ಇತ್ತೀಚಿನ ಈ ನಷ್ಟಗಳು ನಿಜಕ್ಕೂ ನೋವುಂಟುಮಾಡುವಂತವು. ಅದರಲ್ಲೂ ರಕ್ಷಣೆ, ವಿಜ್ಞಾನ ಕ್ಷೇತ್ರಗಳಿಗೆ, ಅಂತಾರಾಷ್ಟ್ರೀಯ ಸಹಯೋಗಗಳಿಗೆ ಇದರಿಂದ ನಷ್ಟವಾಗಿದೆ. ಆದ್ದರಿಂದಲೇ ಇಸ್ರೊ ಈಗ ಬಹಳ ಕಟ್ಟುನಿಟ್ಟಿನ ಪರಿಶೀಲನೆಗಳನ್ನು ನಡೆಸುತ್ತಿದ್ದು, ಯಾವುದೇ ತಪ್ಪಿಗೆ ಅವಕಾಶ ನೀಡದಂತೆ ಬಹಳಷ್ಟು ತನಿಖೆಗಳನ್ನು ಕೈಗೊಂಡು, ಜಿಎಸ್ಎಲ್‌ವಿ-ಎಫ್17 ಯೋಜನೆಯ ಯಶಸ್ಸು ಖಾತ್ರಿಪಡಿಸಲು ಪ್ರಯತ್ನಿಸುತ್ತಿದೆ.
ಸಂತೋಷದ ಸಮಾಚಾರವೆಂದರೆ, ಜಿಎಸ್ಎಲ್‌ವಿ ರಾಕೆಟ್ ಮತ್ತೊಮ್ಮೆ ಬಲವಾಗಿ ಮರಳಿದೆ. 2021ರ ವೈಫಲ್ಯದ ಬಳಿಕ, ಇದು ನಾಲ್ಕು ಯಶಸ್ವಿ ಯೋಜನೆಗಳ ಭಾಗವಾಗಿದೆ. ಇತ್ತೀಚೆಗೆ, ಅಂದರೆ ಜುಲೈ 30, 2025ರಂದು ಜಿಎಸ್ಎಲ್‌ವಿ-ಎಫ್16 ಯೋಜನೆ ನಾಸಾ - ಇಸ್ರೊ ನಿಸಾರ್ ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಒಯ್ದಿತ್ತು.
ಪ್ರಸ್ತುತ ಯೋಜನೆಗಾಗಿ ಇಸ್ರೊ ಪೈಲಟ್‌ಗಳಿಗೆ ಉಡಾವಣಾ ಪ್ರದೇಶದ ಕುರಿತ ಎಚ್ಚರಿಕೆ ನೀಡುವ ನೋಟಿಸ್ ಟು ಏರ್‌ಮೆನ್ (ನೋಟಾಮ್) ಬಿಡುಗಡೆಗೊಳಿಸಿದೆ. ಇದು ಜಿಐಸ್ಯಾಟ್-1ಎ ಉಪಗ್ರಹವನ್ನು ಒಯ್ಯುವ ಜಿಎಸ್ಎಲ್‌ವಿ-ಎಫ್17 ಯೋಜನೆಗಾಗಿ ಫೆಬ್ರವರಿ 20ರಿಂದ ಮಾರ್ಚ್ 5, 2026ರ ತನಕ ಚಾಲ್ತಿಯಲ್ಲಿರಲಿದೆ. ಈ ದಿನಾಂಕಗಳು ಬದಲಾವಣೆಯಾಗುವ ಸಾಧ್ಯತೆಗಳೂ ಇವೆ. ಯಾಕೆಂದರೆ, ಉಡಾವಣೆ ಹವಾಮಾನ ಪರಿಸ್ಥಿತಿಗಳು ಮತ್ತು ಕೊನೆ ಕ್ಷಣದ ಪರಿಶೀಲನೆಯ ಕಾರಣದಿಂದ ಬದಲಾಗುವ ಸಾಧ್ಯತೆಗಳಿವೆ.
ಈ ಉಡಾವಣೆ ಭಾರತಕ್ಕೆ ಸ್ವತಂತ್ರವಾಗಿ ತನ್ನ ಭೂಮಿ, ಹವಾಮಾನ, ಮತ್ತು ಸಂಪನ್ಮೂಲಗಳನ್ನು ಬಾಹ್ಯಾಕಾಶದಿಂದಲೇ ಗಮನಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇಸ್ರೊ ಹೇಗೆ ತನ್ನ ಹಿನ್ನಡೆಗಳಿಂದ ಪಾಠವನ್ನು ಕಲಿತಿದೆ, ಸಮಸ್ಯೆಗಳನ್ನು ಪರಿಹರಿಸಿಕೊಂಡಿದೆ, ಮತ್ತು ತನ್ನ ಗುರಿಯತ್ತ ದಿಟ್ಟವಾಗಿ ಸಾಗುತ್ತಿದೆ ಎನ್ನುವುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ. ಸದ್ಯದಲ್ಲೇ ನಾವು ಕೃಷಿ ಭೂಮಿಗಳಿಂದ ಪ್ರವಾಹಗಳ ತನಕ ಎಲ್ಲವನ್ನೂ ಸ್ಪಷ್ಟವಾಗಿ ಗಮನಿಸಲು ಸಾಧ್ಯವಾಗಲಿದ್ದು, ಬಾಹ್ಯಾಕಾಶದಲ್ಲಿರುವ ಹೈಟೆಕ್ ಕಣ್ಣು ಇದಕ್ಕೆ ನೆರವಾಗಲಿದೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.