
ಇಂಡಿಯಾದ ಉತ್ತರದ ಸೀಮೆಯಲ್ಲಿ ದಿಗ್ವಿಜಯಂಗೈದು ‘ದಕ್ಷಿಣಾಪಥೇಶ್ವರ’ ಎಂಬ ಬಿರುದಾವಳಿಗಳನ್ನು ಕೊರಳಿಗೆ ಅಂಟಿಸಿಕೊಳ್ಳಲು ತಾಲೀಮು ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿಜಯಾಶ್ವದ ಕೈ ಕಾಲು ಕಟ್ಟಿ ಹಾಕಿದ್ದು ಕರ್ನಾಟಕ.
ಕಾಂಗ್ರೆಸ್ ಮುಕ್ತ ಭಾರತವೆಂಬ ಮೋದಿ ಬಿತ್ತಿದ್ದ ಕನಸಿಗೆ ಭಾರವಾದ ಕಲ್ಲೇಟು ಕೊಟ್ಟ ಜೆಡಿಎಸ್–ಕಾಂಗ್ರೆಸ್ ನೇತಾರರು, ಉತ್ತರ ದಿಕ್ಕಿನ ರಾಜ್ಯಗಳಲ್ಲಿ ಮರು ಗೆಲುವಿನ ಬಿಜೆಪಿ ಹಂಬಲಕ್ಕೆ ಸೋಲಿನ ದಿಕ್ಸೂಚಿ ನೀಡಿದರು. ವಿಜಯಲಕ್ಷ್ಮಿಯೇ ಬಲಗಾಲು ಮುರಿದುಕೊಂಡು ‘ಕಮಲ’ ಪದತಲದಲ್ಲಿ ಬಿದ್ದಿದ್ದಾಳೆ ಎಂದು ನಂಬಿಕೊಂಡು ಹಿಡಿಯುವರಿಲ್ಲವೆಂಬ ಅಹಂನಿಂದ ಓಡುತ್ತಿದ್ದ ಮೋದಿ–ಶಾ ಜೋಡೆತ್ತುಗಳು ಕಾಲಿಗೆ ಕುಂಟೆ ಕಟ್ಟಿದಂತೆ ಮುಗ್ಗರಿಸತೊಡಗಿದರು. ಅಂತಹ ಎಡರುಗಳನ್ನು ‘ಚಾಣಕ್ಯ’ರ ಮುಂದಿಟ್ಟು ಅಡ್ಡಗಟ್ಟುವ ಕಾಯಕ ಈ ವರ್ಷ ಕರ್ನಾಟಕದಿಂದಲೇ ಶುರುವಾಗಿದ್ದು ಪ್ರಮುಖ ವಿದ್ಯಮಾನ.
ಮತ್ತೆ ಅಧಿಕಾರ ಹಿಡಿದೇ ತೀರುವೆ ಎಂಬ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಉಮೇದು, ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ–ಮೋದಿ ಜನಪ್ರಿಯತೆಯ ಅಬ್ಬರ, ಲಿಂಗಾಯತ ಮತಗಳ ಏಕಸ್ವಾಮ್ಯಗಳೇ ವರವಾಗಿ ಕಮಲ ಅರಳಲಿದೆ ಎಂಬ ಬಿಜೆಪಿ ನಾಯಕ ಯಡಿಯೂರಪ್ಪ ಅವರ ಅಪೇಕ್ಷೆಗಳು ಕೈಗೂಡಲಿಲ್ಲ. 11 ವರ್ಷ ಅಧಿಕಾರವಿಲ್ಲದೇ ವನವಾಸ ಅನುಭವಿಸಿ ನಿತ್ರಾಣವಾಗಿದ್ದ ಜೆಡಿಎಸ್‌ಗೆ ಬಯಸದೆಯೂ ‘ಅದೃಷ್ಟ ಲಕ್ಷ್ಮಿ’ ಒಲಿದು ಬಂದಳು.
2017 ಮುಗಿದು 2018ಕ್ಕೆ ರಾಜ್ಯ ಪುಟ್ಟ ಹೆಜ್ಜೆ ಇಡುತ್ತಿದ್ದಂತೆ ನಾಡಿನ ಭವಿಷ್ಯವನ್ನು ಬರೆಯುವ ಚುನಾವಣೆಯ ಪ್ರಖರತೆ ಏರ ತೊಡಗಿತ್ತು. ದಿವಂಗತ ದೇವರಾಜ ಅರಸು ಬಳಿಕ ಐದು ವರ್ಷ ಪೂರ್ಣಾವಧಿ ಅಧಿಕಾರ ನಡೆಸಿದ ‘ಹೆಮ್ಮೆ’ಯಲ್ಲಿದ್ದ ಸಿದ್ದರಾಮಯ್ಯ ಚಿಮ್ಮುವ ಉತ್ಸಾಹದಲ್ಲಿದ್ದರು.
ಯಡಿಯೂರಪ್ಪ ಬಿಜೆಪಿ ಸೇರಿದಂದಿನಿಂದಲೂ ಅಪಸ್ವರಗಳನ್ನೇ ಹೆಗಲಿಗೇರಿಸಿಕೊಂಡು ಬಂದಿದ್ದ ಬಿಜೆಪಿ ಚುನಾವಣೆ ಹೊತ್ತಿಗೆ ಹೊಸ ಕಸುವು ತುಂಬಿಕೊಂಡಿತ್ತು. ಮಿಷನ್–150 ಗುರಿ ಹಾಕಿಕೊಟ್ಟಿದ್ದ ಅಮಿತ್ ಶಾ, ತಮ್ಮ ಪಡೆಯನ್ನು ಸರಿಯಾಗಿಯೇ ಸಜ್ಜುಗೊಳಿಸಿದ್ದರು.
‘ಇದೇ ಕೊನೆಯ ಯತ್ನ. ಈಗಲೂ ಅಧಿಕಾರಕ್ಕೆ ಬರದೇ ಇದ್ದರೆ ರಾಜಕೀಯ ಒಗ್ಗುವುದಿಲ್ಲ; ಸಿನಿಮಾ ಉದ್ಯಮವೇ ಸಾಕು’ ಎಂಬ ಭಾವನೆ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿತ್ತು. 85ರ ಏರು ಪ್ರಾಯದಲ್ಲೂ ಮಗನನ್ನು ಮತ್ತೆ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸುವೆ ಎಂಬ ಛಲ ಎಚ್.ಡಿ. ದೇವೇಗೌಡರಲ್ಲಿ ತುಂಬಿತ್ತು.
ಫಲಿತಾಂಶ ಬಂದಾಗ ಬಿಜೆಪಿ 104, ಕಾಂಗ್ರೆಸ್ 79, ಜೆಡಿಎಸ್–38, ಬಿಎಸ್‌ಪಿ–1 ಹಾಗೂ ಪಕ್ಷೇತರರು 2 ಸ್ಥಾನ ಗಳಿಸಿದ್ದರು. ಸಂಖ್ಯಾತ್ಮಕವಾಗಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ ಅಧಿಕಾರ ಹಿಡಿಯಲು ಬೇಕಾದ ಸರಳ ಸಂಖ್ಯೆ 113 ದಕ್ಕಿರಲಿಲ್ಲ. ಫಲಿತಾಂಶ ಪ್ರಕಟವಾಗುವ ಮುನ್ನವೇ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರಬಹುದೆಂದು ಅಂದಾಜಿಸಿದ್ದ ಕಾಂಗ್ರೆಸ್ ನಾಯಕರು ಅಖಾಡಕ್ಕೆ ಧುಮುಕಿದರು. ಬಿಜೆಪಿ ನಾಯಕರು ಜೆಡಿಎಸ್‌ಗೆ ಗಾಳ ಹಾಕುವ ಮುನ್ನವೇ ಒಂದು ಹೆಜ್ಜೆ ಮುಂದೆ ಇದ್ದ ಕಾಂಗ್ರೆಸ್ ನಾಯಕರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್‌ಗೆ ಬೇಷರತ್ ಬೆಂಬಲ ಎಂದು ಘೋಷಿಸಿದರು.
ಅಷ್ಟರಲ್ಲೇ ಎಚ್ಚೆತ್ತ ಬಿಜೆಪಿ ನಾಯಕರು, ರಾಜಭವನದ ಪ್ರಭಾವ ಬಳಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದರು. ಸರಳ ಬಹುಮತ ಇಲ್ಲದೇ ಪ್ರಮಾಣ ವಚನ ಸ್ವೀಕರಿಸಿದ್ದು, ವಿಶ್ವಾಸ ಮತ ಸಾಬೀತುಪಡಿಸಲು 15 ದಿನ ಗಡುವು ಕೊಟ್ಟಿದ್ದನ್ನು ಕಾಂಗ್ರೆಸ್ ನಾಯಕರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರು. ವಿಶ್ವಾಸ ಸಾಬೀತಿಗೆ ಕೋರ್ಟ್ ಗಡುವು ವಿಧಿಸಿತು. ವಿಶ್ವಾಸ ಮತ ಸಾಬೀತುಪಡಿಸುವುದು ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.
ಇದಾಗುತ್ತಿದ್ದಂತೆ ಕುಮಾರ ಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು.ಈ ಯಾವ ಬೆಳವಣಿಗೆಯಲ್ಲೂ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಐದು ವರ್ಷ ಅಧಿಕಾರ ಪೂರ್ಣಗೊಳಿಸಿದ ಸಿದ್ದರಾಮಯ್ಯನವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ‘ಕುಮಾರಸ್ವಾಮಿ ಅವರಪ್ಪನಾಣೆಗೆ ಮುಖ್ಯಮಂತ್ರಿಯಾಗುವುದಿಲ್ಲ’ ಎಂದು ಚುನಾವಣೆ ಪ್ರಚಾರದುದ್ದಕ್ಕೂ ಹರಿಹಾಯ್ದುಕೊಂಡೇ ಬಂದಿದ್ದ ಸಿದ್ದರಾಮಯ್ಯನವರ ಸ್ಥಿತಿ ಹೇಗಾಯಿತು ಎಂದರೆ, ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಕಾಂಗ್ರೆಸ್ ಭೇಷರತ್ ಬೆಂಬಲ ನೀಡಲಿದೆ’ ಎಂದು ಅವರೇ ಮಾಧ್ಯಮಗಳ ಎದುರು ಘೋಷಿಸುವ ಸ್ಥಿತಿ ಒದಗಿತು.
ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಿಜೆಪಿ ವಿರೋಧಿ ಮಹಾ ಮೈತ್ರಿಕೂಟಕ್ಕೆ ವೇದಿಕೆಯಾಯಿತು. ಆದರೆ, ಆ ದಿನದ ವೇದಿಕೆಯಲ್ಲಿ ಸಿದ್ದರಾಮಯ್ಯ ಇರಲಿಲ್ಲ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಸಂಪುಟ ವಿಸ್ತರಣೆಯ ಅಸಮಾಧಾನ ಸ್ಫೋಟವಾಯಿತು. ಬಿಜೆಪಿ ಹಲವು ಬಾರಿ ಆಪರೇಷನ್ ಕಮಲದ ಯತ್ನ ನಡೆಸಿ ವಿಫಲವಾಯಿತು. ವಿರೋಧ ಪಕ್ಷದ ಸ್ಥಾನ ಸದ್ಯಕ್ಕೆ ಕಾಯಂ ಎಂಬ ಸ್ಥಿತಿಗೆ ಆ ಪಕ್ಷದ ನಾಯಕರು ತಲುಪಿದರು.
ಸರ್ಕಾರದ ಅನೇಕ ಸಂಕಷ್ಟ ಸಂದರ್ಭದಲ್ಲಿ ರಾಜಕಾರಣದಿಂದ ದೂರ ಉಳಿದ ಸಿದ್ದರಾಮಯ್ಯ, ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಲೇ ಬಂದರು. ಅಲ್ಲದೇ, ಹೊಸ ಬಜೆಟ್ ಮಂಡನೆ ಬೇಡ, ಜೆಡಿಎಸ್‌ಗೆ ಬೆಂಬಲ ನೀಡಿದ್ದೇ ತಪ್ಪಾಯಿತು ಎಂದು ಹೇಳಿಕೆ ನೀಡಿ ಮೈತ್ರಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದರು. ಅವರ ಅಸಹನೆಗೆ ಮೈತ್ರಿಸರ್ಕಾರ ತತ್ತರಿಸಿತು.
ಬದಲಾದ ವಿದ್ಯಮಾನ: ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಗ ಬೀಳಲಿದೆ, ಈಗ ಬೀಳಲಿದೆ ಎಂಬ ಸ್ಥಿತಿಯಲ್ಲಿ ಮುಂದುವರಿಯುತ್ತಲೇ ಇದೆ. ಅತೃಪ್ತರು ಬಿಜೆಪಿಗೆ ಹೋಗಲಿದ್ದಾರೆ...
ಸರ್ಕಾರ ಪತನವಾಗಲಿದೆ ಎಂಬ ಮಾತುಗಳು ತಿಂಗಳಿಗೊಮ್ಮೆಯಾದರೂ ರಾಜಕೀಯ ಪಡಸಾಲೆಯಲ್ಲಿ ಹರಿದಾಡಿದ್ದಿದೆ. ಸಚಿವ ಸಂಪುಟ ಸೇರಲು ಉತ್ಸುಕರಾಗಿದ್ದ ಅನೇಕರು, ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಕಡೆ ನಡೆಯುವ ಇರಾದೆ ವ್ಯಕ್ತಪಡಿಸಿದ್ದು ಏಳು ತಿಂಗಳಿನಲ್ಲಿ ಅನೇಕ ಬಾರಿ ನಡೆದಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ಲೋಕಸಭೆಯ ಮೂರು, ವಿಧಾನಸಭೆಯ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮೈತ್ರಿ ಸರ್ಕಾರಕ್ಕೆ ಕಂಟಕ ಎಂಬ ಮಾತುಗಳೂ ಹರಿದಾಡಿದವು. ಆದರೆ, ಇದ್ದುದನ್ನು ಉಳಿಸಿಕೊಳ್ಳಲುಬಿಜೆಪಿಗೆ ಆಗಲಿಲ್ಲ. ಕಾಂಗ್ರೆಸ್–ಜೆಡಿಎಸ್ ಮುನ್ನಡೆ ಸಾಧಿಸಿದವು. ಅದರ ಬೆನ್ನಲ್ಲೇ ಉತ್ತರದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕಹಿ ಉಂಡಿತು. ಕಾಂಗ್ರೆಸ್ ಬಲಿಯಿತು.
ಮೈತ್ರಿ ಸರ್ಕಾರಕ್ಕೆ ಹೊಸ ಉತ್ಸಾಹ ಕೊಟ್ಟ ಫಲಿತಾಂಶವು, ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸದ್ಯಕ್ಕೆ ಗಟ್ಟಿ ವಿಶ್ವಾಸವನ್ನು ಎರಡೂ ಪಕ್ಷಗಳ ನಾಯಕರಲ್ಲಿ ಮೂಡಿಸಿತು.
ಅದೇ ಹೊತ್ತಿನಲ್ಲಿ ಸಿದ್ದರಾಮಯ್ಯ ಮತ್ತೆ ಮೇಲುಗೈ ಸಾಧಿಸಿದರು. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ವೀಕ್ಷಕರಂತೆ ಕುಳಿತಿದ್ದ ಸಿದ್ದರಾಮಯ್ಯ, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಡ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರದ ವೇಳೆ ವೇದಿಕೆಯ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು. ಇದು ಬದಲಾದ ವಿದ್ಯಮಾನಕ್ಕೆ ಸಾಕ್ಷಿ.
ಅದರ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟ ವಿಸ್ತರಣೆ–ಪುನಾರಚನೆಯೆಂಬ ಎರಡಲಗಿನ ಕತ್ತಿಯ ಮೇಲಿನ ನಡಿಗೆಯನ್ನು ಕಾಂಗ್ರೆಸ್ ನಾಯಕರು ಶುರು ಮಾಡಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಮೊದಲ ಸಂಪುಟ ವಿಸ್ತರಣೆ ವೇಳೆ ಬಾದಾಮಿಗೆ ಹೋಗಿ ಕುಳಿತಿದ್ದ ಸಿದ್ದರಾಮಯ್ಯ, ಇಲ್ಲಿಯ ಆಟವನ್ನು ನೋಡುತ್ತಿದ್ದರು. ಆದರೆ, ಈ ಬಾರಿ ಸಂಪುಟ ವಿಸ್ತರಣೆ ಮಾಡಲು, ತಮ್ಮ ಹಿತೈಷಿಗಳಿಗೆ ಆಯಕಟ್ಟಿನ ಹುದ್ದೆ ಕೊಡಿಸಲು ಶ್ರಮ ಪಟ್ಟಿರುವ ಅವರು ಗೊಂದಲ ಪರಿಹಾರದ ಹೊಣೆ ಹೊತ್ತುಕೊಂಡರು. ಕಾಂಗ್ರೆಸ್‌ನ ಬಲಿಷ್ಠರನ್ನು ಎದುರು ಹಾಕಿಕೊಂಡಿರುವ ಸಿದ್ದರಾಮಯ್ಯ ಎದುರು ಹಿರಿಯರ ವಿರೋಧ, ಅತೃಪ್ತರನ್ನು ಸಂಭಾಳಿಸುವುದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಸವಾಲುಗಳು ಇವೆ. ಇದು ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕಲಹಕ್ಕೆ ನಾಂದಿ ಹಾಡಿದೆ.
ಸಂಪುಟ ವಿಸ್ತರಣೆಯಿಂದ ಉಂಟಾಗಿರುವ ಗೊಂದಲವನ್ನು ಬಳಸಿಕೊಳ್ಳಲು ಬಿಜೆಪಿ ಕೂಡ ಅಣಿಯಾಗಿದೆ. ಕಟ್ಟಕಡೆಯ ಅವಕಾಶವನ್ನು ಬಿಟ್ಟರೆ ಲೋಕಸಭೆ ಚುನಾವಣೆ ಮುಗಿಯುವರೆಗೂ ಸರ್ಕಾರ ಕೆಡವಲಾಗದು ಎಂದರಿತ ಯಡಿಯೂರಪ್ಪ ದಾಳ ಉರುಳಿಸಿದ್ದಾರೆ. ವರ್ಷದ ಕೊನೆಯಲ್ಲಿ ರಾಜಕೀಯ ಕಣ ರಂಗೇರುತಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.