ADVERTISEMENT

ಸರ್ಕಾರದ ವೈಫಲ್ಯಕ್ಕೆ ಮೀಸಲಾತಿ ಮದ್ದೇ?

ಸಂವಿಧಾನ ತಿದ್ದುಪಡಿಯು ಹೊಸ ವರ್ಗವೊಂದನ್ನು ಸೃಷ್ಟಿಸುತ್ತದೆ

ಕೆ.ವಿ.ಧನಂಜಯ
Published 11 ಜನವರಿ 2019, 20:20 IST
Last Updated 11 ಜನವರಿ 2019, 20:20 IST
   

ಸಂವಿಧಾನದ ನಿರ್ಮಾತೃಗಳಲ್ಲಿ ಯಾರೊಬ್ಬರೂ ಇಂಥದ್ದೊಂದು ದಿನ ಬರುತ್ತದೆ ಎಂಬ ಕನಸನ್ನೂ ಕಂಡಿರಲಿಕ್ಕಿಲ್ಲ. ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಸ್ವರೂಪದ ಮೀಸಲಾತಿಯೊಂದು ಬೇಕು ಎಂದು, ಸ್ವಾತಂತ್ರ್ಯ ಸಿಕ್ಕ 70 ವರ್ಷಗಳ ನಂತರ ನಮ್ಮ ಸಂಸತ್ತು ಬಯಸಿದೆ. ಅದಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಬಹಳ ಉತ್ಸಾಹದಿಂದ ಅನುಮೋದನೆ ನೀಡಿದೆ. ಆದರೆ, ಇದು ಸಂವಿಧಾನಬದ್ಧವೇ?

ಸಮಾಜದ ಹಲವು ಜಾತಿಗಳ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿದೆ ಎಂದು ಹಲವರು ತಪ್ಪಾಗಿ ಭಾವಿಸುತ್ತಾರೆ. ನಮ್ಮ ಸಂವಿಧಾನ ಜಾರಿಗೆ ಬಂದ ಹೊತ್ತಿನಲ್ಲಿ ವಿಶ್ವದ ಹಲವೆಡೆ ಯುದ್ಧಗಳು ನಡೆದಿದ್ದವು, ಹಲವೆಡೆ ಸರ್ಕಾರಗಳು ತಮ್ಮದೇ ಪ್ರಜೆಗಳನ್ನು ‘ಕೀಳು’ ಎಂದು ಘೋಷಿಸಿ ಅವರನ್ನು ಬಹಿರಂಗವಾಗಿ ಹತ್ಯೆ ಮಾಡಿದ್ದವು, ಹಿಂಸೆ ನೀಡಿದ್ದವು. ಆದರೆ, ನಮ್ಮ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿ ಪ್ರಧಾನವಾದ 14ನೇ ವಿಧಿಯು ‘ಕಾನೂನಿನ ಕಣ್ಣಿಗೆ, ಸರ್ಕಾರದ ಕಣ್ಣಿಗೆ ಎಲ್ಲ ಪ್ರಜೆಗಳೂ ಸಮಾನರು’ ಎಂದು ಘೋಷಿಸಿದೆ. ಹಾಗಾಗಿ, ಮೀಸಲಾತಿ ಎಂಬುದು ಸಮಾನತೆಯ ತತ್ವಕ್ಕೆ ವಿರುದ್ಧ. ಸಮಾನತೆಯ ತತ್ವಕ್ಕೆ ವಿನಾಯಿತಿಯಾಗಿ ಮೀಸಲಾತಿಗೆ ನಮ್ಮ ಸಂವಿಧಾನವೇ ಅವಕಾಶ ಕಲ್ಪಿಸಿದೆ. ಇಲ್ಲದಿದ್ದರೆ ಕೆಲವು ಬಗೆಯ ಮೀಸಲಾತಿಯನ್ನು ನಮ್ಮ ನ್ಯಾಯಾಲಯಗಳು ಅಸಿಂಧು ಎಂದು ಘೋಷಿಸಬಹುದು. ಹಾಗಾದರೆ, ಮೀಸಲಾತಿ ಬಗ್ಗೆ ಸಂವಿಧಾನ ಹೇಳಿರುವುದು ಏನು?

ಪರಿಶಿಷ್ಟ ಜಾತಿಗಳು (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳನ್ನು (ಎಸ್‌ಟಿ) ರಾಜ್ಯಗಳ ಮಟ್ಟದಲ್ಲಿ ಗುರುತಿಸುವ ಕೆಲಸವನ್ನು ರಾಷ್ಟ್ರಪತಿ ಮಾಡಬೇಕು ಎಂದು ಸಂವಿಧಾನ ಬಯಸಿತು. ಈ ಕೆಲಸ ಮಾಡುವಾಗ ರಾಜ್ಯಪಾಲರ ಜೊತೆ ಸಮಾಲೋಚನೆ ನಡೆಸಬೇಕಿತ್ತು. ಎಸ್‌ಸಿ, ಎಸ್‌ಟಿ ಪಟ್ಟಿಯನ್ನು ಒಮ್ಮೆ ಸಿದ್ಧಪಡಿಸಿದ ನಂತರ, ಅದನ್ನು ಬದಲಾಯಿಸುವ ಅಧಿಕಾರ ರಾಷ್ಟ್ರಪತಿಗೂ ಇಲ್ಲ. ಬದಲಾಯಿಸುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಸಂವಿಧಾನ ಜಾರಿಗೆ ಬಂದ ಆರು ತಿಂಗಳಲ್ಲಿ ರಾಷ್ಟ್ರಪತಿ ಎರಡು ಆದೇಶ ಹೊರಡಿಸಿ, ಎಸ್‌ಸಿ ಮತ್ತು ಎಸ್‌ಟಿ ಗುಂಪುಗಳನ್ನು ಗುರುತಿಸಿದರು.

ADVERTISEMENT

ಎಸ್‌ಸಿ ಹಾಗೂ ಎಸ್‌ಟಿಗಳಿಗೆ ಎಂತಹ ಮೀಸಲಾತಿಯನ್ನು ಸಂವಿಧಾನ ಬಯಸಿತ್ತು? ಮೊದಲನೆಯದು: ಒಟ್ಟು ಜನಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿಗಳ ಪ್ರಮಾಣಕ್ಕೆ ಅನುಗುಣವಾಗಿ ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಅವರಿಗೆ ಸೀಟುಗಳನ್ನು ಮೀಸಲಿಡಬೇಕಿತ್ತು. ಈ ಮೀಸಲಾತಿಯು ಆರಂಭದ ಹತ್ತು ವರ್ಷಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಈ ಮೀಸಲಾತಿಯ ಅವಧಿ ವಿಸ್ತರಿಸಲು ನಮ್ಮಲ್ಲಿ ಹತ್ತು ವರ್ಷಗಳಿಗೊಮ್ಮೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗುತ್ತಿದೆ.

ಎರಡನೆಯ ಬಗೆಯ ಮೀಸಲಾತಿಯು ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ್ದು. ಈ ಮೀಸಲಾತಿಯ ಅಡಿ ಸಂವಿಧಾನವು ಎಸ್‌ಸಿ ಹಾಗೂ ಎಸ್‌ಟಿ ವರ್ಗಗಳನ್ನು ಮಾತ್ರವಲ್ಲದೆ, ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರಜೆಗಳು’ ಎಂಬ ಇನ್ನೊಂದು ವರ್ಗವನ್ನು ಗುರುತಿಸುತ್ತದೆ. ಇದು ಒಂದು ‘ವರ್ಗ’ವಾಗಿ ಕಾಣುತ್ತದೆಯೇ ವಿನಾ ‘ಜಾತಿ’ಯಾಗಿ ಅಲ್ಲ.

ಸಂವಿಧಾನದ 15ನೇ ವಿಧಿಯ ಅನ್ವಯ ಸರ್ಕಾರವು ಜಾತಿಯ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ. ಚಂಪಕಂ ದೊರೈರಾಜನ್ ಮತ್ತು ಶ್ರೀನಿವಾಸನ್ ಎಂಬ ಇಬ್ಬರು ಬ್ರಾಹ್ಮಣ ವಿದ್ಯಾರ್ಥಿಗಳು ಬ್ರಾಹ್ಮಣೇತರ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ಪಡೆದಿದ್ದರೂ ಮದ್ರಾಸ್ ಸರ್ಕಾರದ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಅವರಿಗೆ ಸೀಟು ಸಿಗಲಿಲ್ಲ. ಈ ತಾರತಮ್ಯವನ್ನು ಅವರು ಪ್ರಶ್ನಿಸಿದರು. ಅವರ ನೆರವಿಗೆ ಬಂದ ಸುಪ್ರೀಂ ಕೋರ್ಟ್‌, ಹಿಂದೂಗಳಲ್ಲಿನ ನಾಲ್ಕು ವರ್ಗಗಳಿಗೆ ಹಾಗೂ ಕ್ರೈಸ್ತರು ಮತ್ತು ಮುಸ್ಲಿಮರಿಗೆ ಮೀಸಲಾತಿ ನೀಡುವ ಮದ್ರಾಸ್ ಸರ್ಕಾರದ ನೀತಿಯನ್ನು ಅಸಿಂಧುಗೊಳಿಸಿತು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ, ಎಸ್‌ಸಿ, ಎಸ್‌ಟಿಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲೂ ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿಯನ್ನು ಸಂಸತ್ತು ತೀರ್ಪು ಬಂದ ಎರಡೇ ತಿಂಗಳಲ್ಲಿ ತಂದಿತು. ಈ ಮೂಲಕ, ಸಂವಿಧಾನದಲ್ಲಿ ವಿವರಿಸಿರದ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು’ ಗುರುತಿಸುವ ಹಾಗೂ ಅವರಿಗೆ ಎರಡು ಬಗೆಯ ಮೀಸಲಾತಿಗಳನ್ನು ಕಲ್ಪಿಸುವ ಜವಾಬ್ದಾರಿ ಸರ್ಕಾರದ ಹೆಗಲೇರಿತು.

ಈ ನಡುವೆ 50ರ ದಶಕದ ಉತ್ತರಾರ್ಧದಲ್ಲಿ ನಮ್ಮ ಮೈಸೂರು ರಾಜ್ಯದ ಜಾತಿ ಸಮೀಕರಣದಲ್ಲಿ ತೀವ್ರ ಬದಲಾವಣೆಗಳು ಆಗುತ್ತಿದ್ದವು. 1958ರ ಜುಲೈನಲ್ಲಿ ಘೋಷಣೆಯೊಂದನ್ನು ಹೊರಡಿಸಿದ ಸರ್ಕಾರ, ಎಸ್‌ಸಿ, ಎಸ್‌ಟಿ ವರ್ಗದವರನ್ನು ಹೊರತುಪಡಿಸಿದರೆ, ಬ್ರಾಹ್ಮಣರನ್ನು ಹೊರತುಪಡಿಸಿದರೆ ಹಿಂದೂ ಸಮಾಜದ ಎಲ್ಲರೂ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು’ ಎಂದು ಹೇಳಿತು. ಇದರ ಅನ್ವಯ, ಸರ್ಕಾರದ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ಶೇಕಡ 75ರಷ್ಟು ಸೀಟುಗಳು ಮೀಸಲಾತಿ ವ್ಯಾಪ್ತಿಗೆ ಬಂದವು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಸುಪ್ರೀಂ ಕೋರ್ಟ್‌, ಇಂತಹ ಮೀಸಲಾತಿಯ ಪ್ರಮಾಣ ಶೇಕಡ 50ರಷ್ಟನ್ನು ಮೀರುವಂತಿಲ್ಲ ಎಂದು 1962ರಲ್ಲಿ ಎಚ್ಚರಿಕೆ ನೀಡಿತು.

ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆ ಗೊಂದಲ ಇದ್ದ ಅವಧಿಯಲ್ಲಿ 1979ರಲ್ಲಿ ಕೇಂದ್ರ ಸರ್ಕಾರ ಮಂಡಲ್ ಆಯೋಗ ರಚಿಸಿತು. ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಾತಿಯನ್ನು ಆಧಾರವಾಗಿ ಇರಿಸಿಕೊಂಡಿತು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನೂ ಪರಿಗಣಿಸಿತು. ಮಂಡಲ್ ಆಯೋಗದ ವರದಿಯ ಅನುಷ್ಠಾನಕ್ಕೆ ಸರ್ಕಾರ 1990–91ರಲ್ಲಿ ಎರಡು ಆದೇಶಗಳನ್ನು ಹೊರಡಿಸಿತು. ಇದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಬಹುಮತದ ತೀರ್ಪಿನಲ್ಲಿ (ಇಂದಿರಾ ಸಾಹ್ನಿ ಪ್ರಕರಣ) ‘ಒಟ್ಟಾರೆ ಮೀಸಲಾತಿಯು ಶೇಕಡ 50ರಷ್ಟನ್ನು ಮೀರಬಾರದು, ಬಡ್ತಿಯಲ್ಲಿ ಮೀಸಲಾತಿ ಇರಬಾರದು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಯಾರು ಹಿಂದುಳಿದಿದ್ದಾರೆ ಎಂಬುದನ್ನು ಅಳೆಯಲು ಆರ್ಥಿಕ ಹಿಂದುಳಿದಿರುವಿಕೆಯೊಂದೇ ಮಾನದಂಡ ಅಲ್ಲ’ ಎಂದು ಹೇಳಿತು. ಸಾಮಾಜಿಕ ಹಿಂದುಳಿದಿರುವಿಕೆಯು ಮುಖ್ಯ ಆಧಾರ ಆಗುತ್ತದೆ, ಆರ್ಥಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಗಳು ನಂತರದ ಸ್ಥಾನ ಪಡೆಯುತ್ತವೆ ಎಂದು ಕೋರ್ಟ್‌ ಹೇಳಿತು.

1995ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದ ಸಂಸತ್ತು, ಎಸ್‌ಸಿ ಮತ್ತು ಎಸ್‌ಟಿ ವರ್ಗದವರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಿತು. ಈ ಬಗೆಯ ಮೀಸಲಾತಿ ಕೂಡ ಶೇಕಡ 50ರ ಗಡಿಯನ್ನು ಮೀರುವಂತೆ ಇರಲಿಲ್ಲ. 2002ರಲ್ಲಿ ಮತ್ತೊಮ್ಮೆ ಸಂವಿಧಾನ ತಿದ್ದುಪಡಿ ತಂದ ಸಂಸತ್ತು, ಹಿಂದಿನ ವರ್ಷಗಳಲ್ಲಿ ಭರ್ತಿಯಾಗದೆ ಉಳಿದ ಸೀಟುಗಳಿಗೆ ನೇಮಕ ಮಾಡುವಾಗ ಶೇಕಡ 50ರ ಮಿತಿಯನ್ನು ಮೀರಬಹುದು ಎಂದು ಹೇಳಿತು. ಈಗಿನ ಹಂತದಲ್ಲಿ ಮೀಸಲಾತಿ ಎಂಬುದು ಸಂಪೂರ್ಣ ಗೋಜಲಾಗಿ ಪರಿವರ್ತನೆ ಕಂಡಿದೆ.

ಹೀಗಿದ್ದರೂ, ಇಂದಿರಾ ಸಾಹ್ನಿ ‍ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದು ನೆನಪಿದೆಯಲ್ಲ? ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಯಾರು ಎಂಬುದನ್ನು ತೀರ್ಮಾನಿಸಲು ಆರ್ಥಿಕ ಹಿಂದುಳಿದಿರುವಿಕೆಯೊಂದೇ ಆಧಾರ ಆಗುವುದಿಲ್ಲ. ಆದರೆ, ಈ ವಾರ ಸಂಸತ್ತು ಅನುಮೋದಿಸಿದ ತಿದ್ದುಪಡಿಯು ಸಂವಿಧಾನದ ಅಡಿ ಹೊಸ ಬಗೆಯ ಮೀಸಲಾತಿ ವರ್ಗವನ್ನು ಸೃಷ್ಟಿಸುತ್ತದೆ. ಈ ತಿದ್ದುಪಡಿಯನ್ನು ನ್ಯಾಯಾಲಯ ಎತ್ತಿಹಿಡಿಯುತ್ತದೆಯೇ? ಉತ್ತರ ಕಂಡುಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.

ನಮ್ಮ ಸರ್ಕಾರಗಳ ವೈಫಲ್ಯಗಳಿಂದಾಗಿ ಉಂಟಾಗುವ ಹಿಂದುಳಿದಿರುವಿಕೆಗೆ ಮೀಸಲಾತಿ ಮದ್ದು ಎಂಬುದನ್ನು ನಮ್ಮ ನ್ಯಾಯಾಂಗ ಒಪ್ಪುವುದಿಲ್ಲ ಎಂಬುದು ನನ್ನ ಅನಿಸಿಕೆ.

ಲೇಖಕ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.