ಮಲೆನಾಡಿನಲ್ಲಿ ಹಳ್ಳ ಹಿಡಿಯುತ್ತಿದೆ ಜಲ ಜೀವನ್ ಮಿಷನ್ ಯೋಜನೆಯ ಆಶಯ
ಮಧ್ಯ ಪಶ್ಚಿಮಘಟ್ಟದಲ್ಲೊಂದು ಊರಿನ ಹೆಸರು ಹೊಸಳ್ಳಿ. ಅದೆಷ್ಟೋ ವರ್ಷಗಳಿಂದ ಆ ಊರಿನ ಬಹಳಷ್ಟು ಕುಟುಂಬಗಳಿಗೆ ಅಬ್ಬಿ (ಕಿರುತೊರೆ) ನೀರೇ ಆಧಾರ. ವರ್ಷದ 365 ದಿನವೂ ಸದಾ ಧುಮ್ಮಿಕ್ಕುವ ಅಬ್ಬಿ ನೀರನ್ನು ಬಳಸಿಕೊಂಡೇ ಆ ಊರಿನ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಇದೇ ನೀರು ಬಳಕೆಯಾಗುತ್ತದೆ.
ಅದೇ ಗುಡ್ಡಗಳ ಸಾಲಿನಲ್ಲಿಯೇ ಬರುವ ಮತ್ತೊಂದು ಊರು ಹಿರೇಮನೆ. ಇಲ್ಲೂ ಹಲವು ಮನೆಗಳ ಹಿಂದಿನ ಗುಡ್ಡದಿಂದ ನೀರು ಒಸರುತ್ತದೆ. ಗುಡ್ಡದ ಬುಡದಲ್ಲೊಂದು ಚಿಕ್ಕ ಹೊಂಡ ಮಾಡಿಕೊಂಡಿದ್ದಾರೆ. ಸ್ಫಟಿಕದಷ್ಟು ಶುಭ್ರವಾದ ಖನಿಜಯುಕ್ತ ನೀರೇ ಅವರಿಗೆ ಜೀವನಾಧಾರ.
ಹೀಗೆ ಲಾಗಾಯ್ತಿನಿಂದ ನೀರಿನಾಶ್ರಯದಲ್ಲೇ ಮನುಕುಲ ವಿಕಾಸವಾಯಿತು. ನದಿ ತೀರದಲ್ಲೇ ನಾಗರಿಕತೆ ಬೆಳೆಯಿತು. ಏಷ್ಯಾದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿದ ಜಿಲ್ಲೆಯೆಂದು ಶಿವಮೊಗ್ಗ ಖ್ಯಾತಿ ಪಡೆದಿತ್ತು. ಅದೇ ಪಕ್ಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ಅತಿ ವಿರಳ. ಇದಕ್ಕೂ ಭೌಗೋಳಿಕ ರಚನೆಯೇ ಕಾರಣ. ಉತ್ತರ ಕನ್ನಡ ಜಿಲ್ಲೆ ಹೆಚ್ಚು ಗುಡ್ಡಗಳನ್ನು ಹೊಂದಿದೆ.
1980ರ ದಶಕದಲ್ಲಿ ಮಲೆನಾಡಿಗೆ ಅಕೇಶಿಯಾ ಎಂಬ ವಿದೇಶಿ ರಕ್ಕಸ ಬೆಳೆಯನ್ನು ಅರಣ್ಯ ಇಲಾಖೆಯೇ ತಂದುಹಾಕಿತು. ಗುಡ್ಡದಲ್ಲಿ ಬೆಳೆದ ನೈಸರ್ಗಿಕ ಅರಣ್ಯವನ್ನು, ಕುರುಚಲು ಕಾಡುಗಳನ್ನು, ಹುಲ್ಲುಗಾವಲುಗಳನ್ನು ಅಕೇಶಿಯಾ ಬಲಿ ತೆಗೆದುಕೊಂಡಿತು. ಶರಾವತಿ ನದಿ ಹುಟ್ಟುವ ಅಂಬುತೀರ್ಥದ ಗುಡ್ಡಗಳಲ್ಲಿ ಅಕೇಶಿಯಾವನ್ನು ನೆಡಲು ಅದೇ ಊರಿನವರು ವಿರೋಧ ಮಾಡಿದ ಕಾರಣಕ್ಕೆ ಶರಾವತಿ ನದಿ ಈಗಲೂ ಹರಿಯುತ್ತಿದ್ದಾಳೆ.
ಸಾಗರ ತಾಲ್ಲೂಕಿನ ಚಿಪ್ಪಳಿ– ಲಿಂಗದಹಳ್ಳಿ ಗ್ರಾಮದಲ್ಲಿ ಜೆಸಿಬಿ ಯಂತ್ರ ಬಂದು ಮನೆಯೊಂದರ ಮುಂದಿನ ರಸ್ತೆ ಮತ್ತು ಚರಂಡಿಯ ನಡುವಿನ ಜಾಗದಲ್ಲಿ ತೋಡನ್ನು ತೋಡಲು ಪ್ರಾರಂಭಿಸಿತು. ರಾಷ್ಟ್ರೀಯ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾರ್ಯ ಅದಾಗಿತ್ತು. ಈ ಯೋಜನೆಯ ಉದ್ದೇಶ ಏನೆಂದರೆ, ಭಾರತದ ಎಲ್ಲಾ ಹಳ್ಳಿಗಾಡುಗಳಲ್ಲಿ ವಾಸಿಸುವ ಕುಟುಂಬಗಳಿಗೆ ಕುಡಿಯಲು ಬೇಕಾದಷ್ಟು ಶುದ್ಧ ನೀರನ್ನು ಒದಗಿಸುವುದು. ಉದ್ದೇಶ ಒಳ್ಳೆಯದೇ. ಆದರೆ, ಇದರ ಅನುಷ್ಠಾನ ಹೇಗಾಗಬೇಕು? ಮನೆ ಮನೆಗೆ ನಲ್ಲಿ ಅಳವಡಿಸುವುದರಿಂದ ನೀರಿನ ಅಭಾವದಿಂದ ಬಳಲುವವರಿಗೆ ಇದು ವರವಾದೀತು. ನೀರಿನ ವಿಷಯ
ದಲ್ಲಿ ನೈಸರ್ಗಿಕವಾಗಿ ಸ್ವಾವಲಂಬಿಗಳಾದವರಿಗೆ ಈ ಯೋಜನೆಯ ಪ್ರಯೋಜನವೇನು? ಅಥವಾ ಸರ್ಕಾರ ನೀಡುವ ನಲ್ಲಿ ನೀರಿನ ಅಗತ್ಯ ಅವರಿಗೆ ಇದೆಯೇ?
ಆ ಮನೆಯವರು ನೀರಿನ ವಿಷಯದಲ್ಲಿ ಸ್ವಾವಲಂಬನೆ ಹೊಂದಿದ್ದಾರೆ. ಜೆಜೆಎಂ ಯೋಜನೆಯ ನೀರಿನ ಅಗತ್ಯ ಅವರಿಗೆ ಇಲ್ಲ. ನಲ್ಲಿ ಅಳವಡಿಸಲು ಬಂದವರಿಗೆ ಇದನ್ನೇ ಹೇಳಲಾಯಿತು. ‘ಇಲ್ಲಾ ಸಾರ್, ಪ್ರತಿಯೊಬ್ಬರ ಮನೆಗೂ ನಲ್ಲಿ ನೀರು ಕೊಡುವ ಯೋಜನೆಯಿದು. ದಯವಿಟ್ಟು ಅಡ್ಡಿ ಮಾಡಬೇಡಿ. ನಲ್ಲಿ ಸಂಪರ್ಕವನ್ನು ಪಡೆದುಕೊಳ್ಳಿ’ ಎಂಬ ಸಲಹೆ ಮತ್ತು ಒತ್ತಾಯ ಗುತ್ತಿಗೆದಾರನಿಂದ ಬಂತು. ‘ನೀರು ಬಹಳ ಅಮೂಲ್ಯವಾದುದು, ಅದನ್ನು ಅಗತ್ಯ ಇರುವವರಿಗೆ ನೀಡುವುದು ನಿಮ್ಮ ಹೊಣೆ. ಯಾರಿಗೋ ಸೇರಬೇಕಾದ ನೀರನ್ನು ನಾವು ಬಳಸಲು ತಯಾರಿಲ್ಲ’ ಎಂದು ಆ ಮನೆಯವರು ಖಡಕ್ಕಾಗಿ ಹೇಳಿದರು. ಅಂತೂ ಗುತ್ತಿಗೆದಾರ ಗೊಣಗುತ್ತಾ ಸಂಪರ್ಕ ನೀಡದೇ ಮುಂದೆ ಹೋದ. ಅಕ್ಕಪಕ್ಕದ ಮನೆಯವರು ಬಂದು, ಸರ್ಕಾರ ನೀಡುವ ಪ್ರಯೋಜನವನ್ನು ಪಡೆದುಕೊಳ್ಳಿ ಎಂಬ ಪುಕ್ಕಟೆ ಸಲಹೆಯನ್ನು ಮನೆಯವರಿಗೆ ನೀಡಿದರು.
ಆ ಇಡೀ ಗ್ರಾಮದಲ್ಲಿ ಲಾಗಾಯ್ತಿನಿಂದ ವಾಸವಿರುವ ವರಿಗೆ ನಲ್ಲಿ ನೀರಿನ ಸಂಪರ್ಕದ ಅಗತ್ಯವಿಲ್ಲ. ಅವರಿಗೆ ಪಾರಂಪರಿಕ ಕೃಷಿ ಜಮೀನಿದೆ. ಕುಡಿಯುವ ನೀರಿಗೆ ಮನೆಯಲ್ಲಿ ಬಾವಿ ಇದೆ. ಕೃಷಿ ಮತ್ತು ತೋಟಗಾರಿಕೆಗಾಗಿ ತೋಟದಲ್ಲಿ ಬಾವಿ ಇದೆ. ಬಾವಿಗೆ ನೀರುಣಿಸುವ ಕೆರೆಗಳಿವೆ. ಆದರೂ, ಹಲವರು ಈ ಯೋಜನೆಯ ಫಲವನ್ನು ಪಡೆಯಲು ಮುಂದಾಗಿದ್ದಾರೆ. ಕೊಳವೆಬಾವಿ ತಂತ್ರಜ್ಞಾನದ ಆವಿಷ್ಕಾರಕ್ಕೂ ಮೊದಲು ಸಾಮಾನ್ಯವಾಗಿ ಜನ ತಮ್ಮ ದೈನಂದಿನ ನೀರಿನ ಅವಲಂಬನೆಗೆ ತೆರೆದ ಬಾವಿ
ಯನ್ನು ಕಂಡುಕೊಂಡಿದ್ದರು. ಮೇಲ್ಮಟ್ಟದ ಅಂತರ್ಜಲ ಸುಲಭವಾಗಿ ಬಾವಿಗಳ ಮೂಲಕ ಲಭ್ಯವಾಗುತ್ತಿತ್ತು.
ಮಲೆನಾಡಿನಲ್ಲಿ ಜೆಜೆಎಂ ಯೋಜನೆಯ ನೀರು ಹೇಗೆಲ್ಲಾ ಬಳಕೆಯಾಗುತ್ತದೆ ಎಂದರೆ, ಕುಡಿಯಲು ಹೊರತುಪಡಿಸಿ, ಉಳಿದೆಲ್ಲಾ ಕೆಲಸಗಳಿಗೆ ಬಳಸಲಾಗುತ್ತಿದೆ. ಒಂದು ಮಹತ್ವಾಕಾಂಕ್ಷಿ ಯೋಜನೆಯ ಆಶಯ ಹೇಗೆ ಹಳ್ಳ ಹಿಡಿಯುತ್ತಿದೆ ಎಂಬುದನ್ನು ಕಾಣಬೇಕಾದರೆ ನೀವು ಮಲೆನಾಡಿಗೆ ಬರಬೇಕು. ರಸ್ತೆಯಲ್ಲಿ ದೂಳು ಏಳುತ್ತಿದೆ ಎಂದು, ಮನೆಯ ಮುಂದಿನ ಕೈತೋಟಕ್ಕೆಂದು ಜೆಜೆಎಂ ನೀರು ಬಳಕೆಯಾಗುತ್ತಿರುವುದನ್ನು ಬಹಳ ನೋವಿನಿಂದ ಉಲ್ಲೇಖಿಸಬೇಕಿದೆ.
ಜೆಜೆಎಂ 2019ರಲ್ಲಿ ಪ್ರಾರಂಭವಾದ ಯೋಜನೆ. ಕೇಂದ್ರ ಸರ್ಕಾರದ ಶೇ 50ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದ ಶೇ 50ರಷ್ಟು ಅನುದಾನ ಈ ಯೋಜನೆಗೆ ಬಳಕೆ ಆಗುತ್ತಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ
ಶೇ 100ರಷ್ಟು ಅನುದಾನವನ್ನು ಕೇಂದ್ರವೇ ನೀಡುತ್ತದೆ, ಹಿಮಾಲಯ ವ್ಯಾಪ್ತಿಯ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈ ಅನುಪಾತ 90:10ರಷ್ಟಿದೆ. ಈ ಯೋಜನೆಯ ಆಶಯದಂತೆ, ಭಾರತದ ಎಲ್ಲಾ ಹಳ್ಳಿಗಳ ಪ್ರತಿ ಮನೆಗೂ 2024ರಲ್ಲೇ ನಲ್ಲಿ ಸಂಪರ್ಕ ಲಭಿಸಬೇಕಾಗಿತ್ತು. ಆದರೆ, ನೀರಿನ ಅಲಭ್ಯತೆ ಮತ್ತು ಭ್ರಷ್ಟಾಚಾರದ ಕಾರಣಕ್ಕೆ ನಿಗದಿತ ಸಮಯದಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. 2024ರ ಆಗಸ್ಟ್ ಹೊತ್ತಿಗೆ ಸುಮಾರು 15 ಕೋಟಿ ಕುಟುಂಬಗಳಿಗೆ ಜೆಜೆಎಂ ಯೋಜನೆಯಡಿ ನಲ್ಲಿ ಸಂಪರ್ಕ ಲಭಿಸಿದೆ ಎಂದು
ಅಂಕಿ-ಅಂಶಗಳು ತಿಳಿಸುತ್ತವೆ.
ಜೆಜೆಎಂ ಯೋಜನೆಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರವಾಗಿದೆ ಎಂದು ಛತ್ತೀಸಗಢ ವಿಧಾನಸಭೆ
ಯಲ್ಲಿ ಆಳುವ ಪಕ್ಷವೇ ಹೋದ ತಿಂಗಳು ತಕರಾರು ಎತ್ತಿತು. ಪಕ್ಷದ ಶಾಸಕ ಅಜಯ್ ಚಂದ್ರಾಕರ್ ಈ ತಕರಾರು ಎತ್ತಿದಾಗ, ಅಲ್ಲಿನ ಲೋಕೋಪಯೋಗಿ ಸಚಿವ ಅರುಣ್ ಸಾವೋ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದರು. 2024ರ ನವೆಂಬರ್‌ನಲ್ಲಿ ರಾಜಸ್ಥಾನದ ಒಬ್ಬ ಪ್ರಮುಖ ರಾಜಕಾರಣಿ ಹಾಗೂ ಇನ್ನಿತರ 22 ಮಂದಿಯ ಮೇಲೆ ಜೆಜೆಎಂನಡಿ ಭ್ರಷ್ಟಾಚಾರ ಎಸಗಿದ ಆರೋಪ ಕೇಳಿ ಬಂತು. ಜೆಜೆಎಂ ಅನುಷ್ಠಾನಗೊಳಿಸುವ ಗುತ್ತಿಗೆದಾರ ರೊಂದಿಗೆ ಶಾಮೀಲಾಗಿ ಹಣ ಲಪಟಾಯಿಸಿದ ದೂರು ಕೇಳಿಬಂದಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವರನ್ನು ಬಂಧಿಸಿತು. ಅಸ್ಸಾಂ ರಾಜ್ಯದಲ್ಲೂ ಜೆಜೆಎಂ ಯೋಜನೆಯಡಿ ನಡೆದ ಭ್ರಷ್ಟಾಚಾರದ ಕುರಿತು ದೊಡ್ಡ ಮಟ್ಟದ ಕೋಲಾಹಲ ಉಂಟಾಯಿತು.
₹ 360 ಲಕ್ಷ ಕೋಟಿ ಅಂದಾಜು ವೆಚ್ಚದ ಜೆಜೆಎಂ ಯೋಜನೆಗೆ ಹಣವನ್ನು ಹೊಂದಿಸಲು ಸರ್ಕಾರ ಪರದಾಡುತ್ತಿದೆ. ಆದರೆ, ಮೂಲಗಳ ಪ್ರಕಾರ, ನೀರಿನ ಲಭ್ಯತೆ ಇಲ್ಲದಲ್ಲಿಯೂ ಯೋಜನೆ ಅನುಷ್ಠಾನವಾಗುತ್ತಿದೆ. ಈ ಹಿಂದೆ ಗ್ರಾಮ ಪಂಚಾಯಿತಿಗಳು ಕೊಳವೆಬಾವಿಗಳ ಮೂಲಕ ನಲ್ಲಿ ಸಂಪರ್ಕವನ್ನು ಅನೇಕ ಊರುಗಳಲ್ಲಿ ನೀಡಿದ್ದವು. ನೀರಿನ ಆ ಸಂಪರ್ಕವೇ ಹಲವೆಡೆ ಜೆಜೆಎಂ ಯೋಜನೆಗೂ ಬಳಕೆಯಾಗಿದೆ; ಪೈಪುಗಳು ಮಾತ್ರ ಬದಲಾಗಿವೆ. ಹಲವು ಪ್ರದೇಶಗಳಲ್ಲಿ ಕೊಳವೆಬಾವಿಗಳೇ ನೀರಿನ ಮೂಲವಾಗಿವೆ. ಕೊಳವೆಬಾವಿಗಳು ಬತ್ತಿಹೋದಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲಾಗಿಲ್ಲ.
ಪೈಪುಗಳ ಮೂಲಕ ಮನೆ ಮನೆಗೆ ನೀರನ್ನು ಪೂರೈಸುವುದು ಬಹಳ ದೊಡ್ಡ ಸವಾಲು. ಬೆಂಗಳೂರಿನಲ್ಲಿ ಸೋರಿಕೆಯ ಪ್ರಮಾಣ ಶೇ 29ರಷ್ಟು ಇದೆ ಎಂದು ಬೆಂಗಳೂರು ಜಲಮಂಡಳಿಯೇ ಹೇಳಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಗ್ರಾಮೀಣ ಭಾಗದಲ್ಲಿ ನೀರು ದುರುಪಯೋಗ ಆಗದಂತೆ ಮತ್ತು ಸೋರಿಕೆಯಾಗದಂತೆ ನೋಡಿಕೊಳ್ಳುವುದು ಕಷ್ಟಸಾಧ್ಯ ಎನ್ನುವುದು ಜೆಜೆಎಂ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆಲವು ಅಧಿಕಾರಿಗಳ ಅಳಲು.
ಜೀವಜಲವಾದ ನೀರನ್ನು ಸೃಷ್ಟಿ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಆದರೆ, ರಾಷ್ಟ್ರೀಯ ಸಂಪತ್ತಾದ ನೀರನ್ನು ಸದ್ಬಳಕೆ ಮಾಡುವ ಮೂಲಕ ಅದು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಸಾಧ್ಯ. ಇದಕ್ಕೆ ಸ್ಥಳೀಯ ಜಲಮೂಲಗಳನ್ನು ರಕ್ಷಿಸುವುದು ಹಾಗೂ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡುವುದು ಈ ಹೊತ್ತಿನ ತುರ್ತು. ಈ ಕ್ರಮಕ್ಕೆ ಸರ್ಕಾರಗಳು ಮುಂದಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.