ಮನಮೋಹನ ಸಿಂಗ್
ಅತ್ಯಂತ ಸಜ್ಜನರೂ ಆರ್ಥಿಕ ತಜ್ಞರೂ ಮಾಜಿ ಪ್ರಧಾನಮಂತ್ರಿಯೂ ಆಗಿದ್ದ ಮನಮೋಹನ ಸಿಂಗ್ ಅವರ ನಿಧನದಿಂದಾಗಿ ದೇಶದ ಆರ್ಥಿಕ ಮತ್ತು ರಾಜಕೀಯ ಲೋಕದಲ್ಲಿ ಒಂದು ಅಧ್ಯಾಯದ ಅಂತ್ಯವಾಗಿದೆಯೆಂದು ಹೇಳಬಹುದು. ಇಂದಿಗೆ ಲ್ಯಾಟರಲ್ ಎಂಟ್ರಿ ಎಂದು ಹೇಳುವ – ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಪಾಸು ಮಾಡದೇ ಆದರೂ ವೃತ್ತಿಪರ ಪರಿಣತರಾಗಿ ಸರ್ಕಾರದ ಸೇವೆ ಮಾಡಿದ್ದ ರಾಕೇಶ್ ಮೋಹನ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಬಿಮಲ್ ಜಲಾನ್‌ರಂತಹ, ಅನೇಕ ಆರ್ಥಿಕ ತಜ್ಞರಲ್ಲಿ ಮನಮೋಹನ ಸಿಂಗ್ ಪ್ರಮುಖರಾಗಿ ನಿಲ್ಲುತ್ತಾರೆ. ಪಾಕಿಸ್ತಾನದ ಒಂದು ಹಳ್ಳಿಯಲ್ಲಿ ಹುಟ್ಟಿ, ಸ್ವಾತಂತ್ರ್ಯದ ಸಮಯಕ್ಕೆ ಭಾರತಕ್ಕೆ ವಲಸೆ ಬಂದು, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್ ಎರಡೂ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಕೈಗೂಂಡು ಗೆದ್ದ ಅಪರೂಪದ ಬುದ್ಧಿಜೀವಿಗಳಲ್ಲಿ ಮನಮೋಹನ ಸಿಂಗ್ ಒಬ್ಬರಾಗಿ ನಿಲ್ಲುತ್ತಾರೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮೊದಲಿಗೆ ಕೆಲಸ ಹಿಡಿದರೂ ನಂತರ ಆರ್ಥಿಕ ತಜ್ಞರಾಗಿ ಸರ್ಕಾರದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಮನಮೋಹನ ಸಿಂಗ್ ಎಲ್ಲ ಸ್ತರಗಳಲ್ಲೂ ನಮ್ಮ ದೇಶದ ಆರ್ಥಿಕ ನೀತಿಯನ್ನು ನಿರ್ವಹಿಸುವ, ರೂಪಿಸುವ ಕೆಲಸವನ್ನು ಮಾಡಿದ್ದರು. ಸರಳ ಜೀವಿಯೂ, ಪ್ರಾಮಾಣಿಕರೂ ಆಗಿದ್ದ ಅವರನ್ನು ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಯುಜಿಸಿಯ ಅಧ್ಯಕ್ಷರಾಗಿ, ದೇಶದ ವಿತ್ತ ಮಂತ್ರಿಗಳು, ಕಡೆಗೆ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಅವರು ಕೆಲಸ ಮಾಡಿದ್ದಾರೆ.
ಮನಮೋಹನ ಸಿಂಗ್ ಅವರ ಹೆಗ್ಗಳಿಕೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಮೂಲಭೂತವಾಗಿ ಸುಧಾರಣೆಯತ್ತ ಒಯ್ಯುವುದರಲ್ಲಿ ಇತ್ತು. 1991ರ ಅವರ ಆಯವ್ಯಯ ಪತ್ರದ ಮಂಡನೆ ನಮ್ಮ ದೇಶದ ಆರ್ಥಿಕ ದಿಕ್ಕನ್ನು ಮೂಲಭೂತವಾಗಿ ಬದಲಾಯಿಸಿ ತೀವ್ರಗತಿಯ ಬೆಳವಣಿಗೆಯತ್ತ ಒಯ್ದಿತ್ತು. ಆಗ್ಗೆ ಇದ್ದ ಆರ್ಥಿಕ ಬಿಕ್ಕಟ್ಟನ್ನು ಸಶಕ್ತವಾಗಿ ಅವರು ನಿಭಾಯಿಸಿದರು. ಮೊದಲಿಗೆ ದೇಶದ ಪಾವತಿಯ ಸ್ಥಿತಿ ಗಂಭೀರವಾಗಿದ್ದು – ನಾವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆಯಲು ಅಗತ್ಯವಾದ ಸಂಪನ್ಮೂಲ ಇಲ್ಲದ ಸಮಯದಲ್ಲಿ ದೇಶದ ಬಂಗಾರವನ್ನು ಅಡ ಇಟ್ಟು ವಿತ್ತವ್ಯವಸ್ಥೆಯನ್ನು ನಿಭಾಯಿಸಿದರು. ನಂತರದ ವರ್ಷಗಳಲ್ಲಿ ಆ ಬಂಗಾರವನ್ನು ಬಿಡಿಸಿಕೊಂಡದ್ದಲ್ಲದೇ, ನಮ್ಮ ದೇಶವು ಇನ್ನೂ ಹೆಚ್ಚಿನ ಬಂಗಾರವನ್ನು ಕೊಂಡು ತನ್ನ ನಿಕ್ಷೇಪಕ್ಕೆ ಸೇರಿಸಿದ್ದನ್ನು ಹೆಚ್ಚು ಕೊಂಡಾಡಿದ್ದನ್ನು ನಾವು ಕಂಡಿಲ್ಲ.
ಅಮೆರಿಕದ ಜೊತೆ ಅತ್ಯಂತ ಮಧುರ ಸಂಬಂಧ ಮನಮೋಹನ ಸಿಂಗ್ ಪ್ರಧಾನಿ ಆಗಿದ್ದ ಕಾಲದಲ್ಲೇ ಇತ್ತೆನ್ನಬಹುದು. ಜಾರ್ಜ್ ಬುಷ್ ಅವರಿಗೆ ಮನಮೋಹನ ಸಿಂಗ್ ಅವರ ಬಗ್ಗೆ ತೀವ್ರ ಗೌರವವೂ ವ್ಯಕ್ತಿಗತವಾಗಿ ಅಭಿಮಾನವೂ ಇತ್ತೆನ್ನಲಾಗಿದೆ. ಹೀಗಾಗಿಯೇ ಜಾರ್ಜ್ ಬುಷ್ ಅವರ ವ್ಯಕ್ತಿಗತ ಆಸಕ್ತಿಯಿಂದಾಗಿ ಪರಮಾಣು ಶಕ್ತಿಯ ಒಪ್ಪಂದವನ್ನು ನಾವು ಸಾಧಿಸಲು ಸಾಧ್ಯವಾಯಿತು. ಸಾಮಾನ್ಯವಾಗಿ ಪಕ್ಷ ಮತ್ತು ರಾಜಕೀಯ ಒತ್ತಡಗಳಿಗೆ ಮಣಿದು – ತುಸು ದುರ್ಬಲ – ಎನ್ನಿಸುವಂತೆ ಕಾಣುತ್ತಿದ್ದ ಪ್ರಧಾನಿ ಈ ಒಪ್ಪಂದ ಕೈಗೂಡಲು ತಮ್ಮ ಕುರ್ಚಿಯನ್ನೇ ಪಣಕ್ಕಿಟ್ಟರು ಎನ್ನಬಹುದು. ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಡಾ ವೈ.ವಿ ರೆಡ್ಡಿಯವರನ್ನ ಪತ್ರಕರ್ತರು ಒಮ್ಮೆ ಪ್ರಶ್ನಿಸಿದ್ದರು – ‘ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಉಂಟಾದಾಗಲೆಲ್ಲಾ ನೀವು ರಾಜೀನಾಮೆ ಮಾತಾಡುತ್ತಿದ್ದೀರಾ?’ ಅದಕ್ಕೆ ರೆಡ್ಡಿಯವರು ಹೇಳಿದ್ದು ಈ ಮಾತು ‘ಇಲ್ಲ, ಸಾಮಾನ್ಯವಾಗಿ ನಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿ ತಿಳಿಸಬೇಕು. ನಂತರ ಸರ್ಕಾರದ ಅಭಿಪ್ರಾಯ ಬದಲಾಗದಿದ್ದರೆ ಮಣಿಯಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಸರ್ಕಾರದ ಅಭಿಪ್ರಾಯವನ್ನು ಜಾರಿಮಾಡುವುದು ಪಾಪವೆಂದು ಅನ್ನಿಸಿದಾಗ ಈ ರೀತಿಯ ಕ್ರಮ ಕೈಗೊಳ್ಳಬೇಕು’ ಎಂದಿದ್ದರು. ಪರಮಾಣು ಒಪ್ಪಂದದ ಸಂದರ್ಭದಲ್ಲಿ ಮನಮೋಹನ ಸಿಂಗ್ ಅವರ ನಿಲುವು ಈ ರೀತಿಯಾಗಿ ದೇಶಕ್ಕೆ ಅತ್ಯಂತ ಅವಶ್ಯವಾದ ಶಕ್ತಿ ಮೂಲವನ್ನು ಪಡೆಯುವಲ್ಲಿ ರಾಜಕೀಯ ಅಧಿಕಾರವನ್ನೂ ಮೀರಿ ನಿಲ್ಲಬೇಕೆನ್ನುವದನ್ನು ತೋರಿಸಿದ್ದರು.
ಶೇಕಡಾ 8ಕ್ಕೂ ಮೀರಿ ದೇಶದ ಆರ್ಥಿಕ ಪ್ರಗತಿಯ ಗತಿಯನ್ನು ಒಂದು ದಶಕದ ಕಾಲ ಸಾಧಿಸಿದವರು ಮನಮೋಹನ ಸಿಂಗ್. ಆದರೆ ಆ ಬಗ್ಗೆ ಯಾವುದೇ ಬಾಜಾ ಬಜಂತ್ರಿಗಳಿರಲಿಲ್ಲ. ಸರಳವಾಗಿ ಮೌನವಾಗಿ ತಮ್ಮ ಸಾಧನೆಗಳನ್ನು ಕೆಲಸ ಮಾಡಿ ತೋರುವುದನ್ನೇ ಅವರು ನಂಬಿದ್ದರು.
ಅವರ ಪ್ರಖರ ಪ್ರಾಮಾಣಿಕತೆಗೆ ಎರಡು ಉದಾಹರಣೆಗಳು. ಒಮ್ಮೆ ಒಂದು ಸಭೆಯ ನಂತರ ಎಲ್ಲರೂ ತಮ್ಮ ಮನೆಗಳಿಗೆ ಹೋಗುತ್ತಿದ್ದಾಗ ಸಿಂಗ್ ಅವರ ಬಳಿ ಬಂದ ಅಧಿಕಾರಿಯೊಬ್ಬರು ‘ನಾನು ನಿಮ್ಮ ಜೊತೆ ಬರಬಹುದೇ... ನಿಮ್ಮನ್ನು ಬಿಟ್ಟನಂತರ ನಿಮ್ಮ ಗಾಡಿ ನನ್ನನ್ನು ಡ್ರಾಪ್ ಮಾಡಬಹುದು, ಇಫ್ ಯು ಡೋಂಟ್ ಮೈಂಡ್’ ಎಂದು ಕೇಳಿದರಂತೆ. ಅದಕ್ಕೆ ಸಿಂಗ್, ‘ಇದು ನನ್ನ ಅಫೀಶಿಯಲ್ ಗಾಡಿ. ಇಫ್ ಯು ಡೋಂಟ್ ಮೈಂಡ್ ನನ್ನ ಮನೆಯ ಬಳಿ ಇಳಿದು ಬೇರೆ ಗಾಡಿ ಮಾಡಿಕೊಂಡು ಹೋಗಬಹುದೇ?’ ಎಂದು ಉತ್ತರಿಸಿದ್ದರಂತೆ. ಇದು ಎಲ್ಲೋ ಓದಿರುವ ಮಾತು.
ಆದರೆ, ನನಗೆ ವೈಯಕ್ತಿಕವಾಗಿ ಆದ ಅನುಭವ ಹೀಗಿದೆ. ಆಣಂದದ ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟಿನ ಆಡಳಿತ ಮಂಡಳಿಯಲ್ಲಿ ನಾನಿದ್ದೆ. ಆ ಸಂಸ್ಥೆಗೆ ಸರ್ಕಾರದ ಬೊಕ್ಕಸದಿಂದ ದೇಣಿಗೆಗಾಗಿ ನಾವು ಪ್ರಯತ್ನಿಸುತ್ತಿದ್ದೆವು. ಪ್ರಣಬ್ ದಾ ಆಯವ್ಯಯ ಪತ್ರವನ್ನು ಮಂಡಿಸುವ ಮುನ್ನ ಅದರಲ್ಲಿ ಒಂದು ಸಾಲು ವಿದ್ಯಾ ಸಂಸ್ಥೆಗಳಿಗೆ ಕೊಡುವ ದೇಣಿಗೆಯ ಮಾತು ಬರೆಸಬಹುದು ಎನ್ನುವುದು ನಮ್ಮ ಆಲೋಚನೆ. ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾ ನಾನು ಮನಮೋಹನ ಸಿಂಗ್ ಅವರ ಮಗಳಿಗೆ ಒಂದು ಈ ಮೇಲ್ ಕಳಿಸಿದೆ. ಅದೇ ಸಂಸ್ಥೆಯಲ್ಲಿ ಓದಿದ್ದ, ನನಗಿಂತ ಎರಡು ವರ್ಷ ಜೂನಿಯರ್ ಆಗಿದ್ದ ಆಕೆ ತಂದೆಗೆ ಒಂದು ಮಾತು ಹೇಳಬಹುದು ಎನ್ನುವುದು ನನ್ನ ಇರಾದೆಯಾಗಿತ್ತು. ಆದರೆ ಆಕೆಯ ಪ್ರತಿಕ್ರಿಯೆ ಭಿನ್ನವಾಗಿತ್ತು ‘ನೀನು ಕೇಳುತ್ತಿರುವುದರಲ್ಲಿನ ಉದ್ದೇಶದಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ನಾವು ಯಾರೂ ತಂದೆಯವರನ್ನು ಯಾವುದೇ ರೀತಿಯ ಸೌಲಭ್ಯವನ್ನು ಕೇಳುವುದಿಲ್ಲ ಎನ್ನುವುದು ನಮ್ಮ ಸಂಸಾರದಲ್ಲಿ ಪಾಲಿಸುತ್ತಿರುವ ನಿಯಮ. ಸಾರಿ. ನೀನು ನಿನ್ನ ಪ್ರಯತ್ನಗಳನ್ನು ಮುಂದುವರಿಸು. ಹೆಚ್ಚೆಂದರೆ ನಾನು ಒಂದು ಈ ಮೇಲ್ ವಿಳಾಸ ಕೊಡುತ್ತೇನೆ. ಅದನ್ನು ಅವರ ಆಪ್ತಕಾರ್ಯದರ್ಶಿಗಳು ಸ್ವತಃ ನೋಡುತ್ತಾರೆ. ಅಲ್ಲಿಗೆ ಪತ್ರ ಬರೆದು ಪ್ರಯತ್ನಿಸು. ನಾನು ಮಾಡಬಹುದಾದ ಸಹಾಯ ಇಷ್ಟೇ’ ಎಂದು ಹೇಳಿದ್ದಳು.
ಸಜ್ಜನಿಕೆ ರಾಜಕೀಯದಿಂದ ದೂರವಾಗುತ್ತಿರುವ ಈ ಸಮಯಕ್ಕೆ ಇಂಥ ಸಜ್ಜನರೂ ನಮ್ಮ ನಾಯಕರಾಗಿದ್ದರು. ಯಾವುದೇ ಅಬ್ಬರವಿಲ್ಲದೇ ದೇಶ ಸೇವೆಯನ್ನು ಮಾಡಿದರು ಎನ್ನುವುದನ್ನು ನೆನಪು ಮಾಡಿಕೊಳ್ಳೋಣ. ಅವರಂತಹ ಬುದ್ಧಿಜೀವಿಗಳು ಮತ್ತು ಪ್ರಾಮಾಣಿಕರು ನಮ್ಮ ದೇಶದ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲಿ ಎಂದು ಹಾರೈಸುತ್ತಾ ಅವರಿಗೆ ಸಂತೋಷದಿಂದಲೇ ವಿದಾಯ ಹೇಳೋಣ. ಅವರು ನಮ್ಮೆಲ್ಲರ ಜೀವನವನ್ನು ಹಸನು ಮಾಡಿದರು, ನಮಗೆ ಖುಷಿಯನ್ನು ಹಂಚಿದರು ಎನ್ನುವುದನ್ನು ಮರೆಯದಿರೋಣ.
ಲೇಖಕ: ಅರ್ಥಶಾಸ್ತ್ರಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.