ADVERTISEMENT

ವಿಶ್ಲೇಷಣೆ: ಕಾಣೆಯಾದವರ ಹುಡುಕುತ್ತ...

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 0:20 IST
Last Updated 22 ಆಗಸ್ಟ್ 2025, 0:20 IST
<div class="paragraphs"><p>ವಿಶ್ಲೇಷಣೆ: ಕಾಣೆಯಾದವರ ಹುಡುಕುತ್ತ...</p></div>

ವಿಶ್ಲೇಷಣೆ: ಕಾಣೆಯಾದವರ ಹುಡುಕುತ್ತ...

   

ಪ್ರತಿ ವ್ಯಕ್ತಿಯ ಕಣ್ಮರೆಯ ಹಿಂದೆಯೂ ಒಂದು ಕಥೆ ಹಾಗೂ ಕುಟುಂಬದ ದುಗುಡ ಇರುತ್ತದೆ. ಕಾಣೆ ಆದವರನ್ನು ಪತ್ತೆ ಮಾಡುವ ವಿಧಾನವೂ ಭಿನ್ನವಾಗಿರುತ್ತದೆ. ಕಣ್ಮರೆ ಪ್ರಸಂಗಗಳು, ಸಮಾಜದ ಚಲನೆ ಯಾವ ದಿಕ್ಕಿನಲ್ಲಿದೆ ಎನ್ನುವುದರ ಸಂಕೇತ ಆಗಿರುವಂತೆಯೇ, ಜನಸಾಮಾನ್ಯರ ಬದುಕಿನ ತವಕ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಒಳ್ಳೆಯ ಆಕರಗಳೂ ಹೌದು..

––––

ADVERTISEMENT

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ರಾಮನಗರ ಜಿಲ್ಲೆಯ ಹಳ್ಳಿಯೊಂದರ ಮಹಿಳೆಯೊಬ್ಬರು ತಾಯಿಯೊಂದಿಗೆ ಜಗಳವಾಡಿಕೊಂಡು, ತನ್ನ ಎರಡು ವರ್ಷ ಆರು ತಿಂಗಳ ಹೆಣ್ಣು ಮಗುವಿನೊಂದಿಗೆ ಬೆಟ್ಟಕ್ಕೆ ಬಂದರು. ಹೆಚ್ಚು ಬುದ್ಧಿವಂತಳಲ್ಲದ ಆಕೆಯಿಂದ ಮಗುವನ್ನು ಪಡೆದು ಭಿಕ್ಷೆ ಬೇಡಲು ಮತ್ತೊಬ್ಬ ಮಹಿಳೆ ಪ್ರಯತ್ನಿಸಿದ್ದಳು. ಅದಕ್ಕೆ ಮಗುವಿನ ತಾಯಿ ಒಪ್ಪಲಿಲ್ಲ. ಒಂದೆರಡು ದಿನ ತಾಯಿ–ಮಗುವಿನೊಂದಿಗೆ ಕಳೆದ ಆ ಚಾಲಾಕಿ ಮಹಿಳೆ, ಅವರನ್ನು ಮನವೊಲಿಸಿ ಚಾಮರಾಜನಗರಕ್ಕೆ ಕರೆತಂದಳು. ತಾಯಿಯನ್ನು ಬಸ್ ನಿಲ್ದಾಣದಲ್ಲಿ ಕೂರಿಸಿ, ಮಗುವಿನೊಂದಿಗೆ ಪರಾರಿಯಾದಳು. ಎಷ್ಟು ಹೊತ್ತಾದರೂ ಆಕೆ ಬಾರದ ಕಾರಣ, ಮಗುವನ್ನು ಕಳೆದುಕೊಂಡ ತಾಯಿಯು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು.

ಪೊಲೀಸರು ತನಿಖೆ ಪ್ರಾರಂಭಿಸಿದಾಗ, ಬಸ್ ನಿಲ್ದಾಣದಲ್ಲಿನ ಅಂಗಡಿಯೊಂದರಲ್ಲಿ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆ ಸಿ.ಸಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದಳು. ನಂತರದ ಪರಿಶೀಲನೆಯಲ್ಲಿ, ಆಕೆಯನ್ನು ರೈಲ್ವೆ ನಿಲ್ದಾಣದ ಬಳಿಗೆ ಬಿಟ್ಟಿರುವುದಾಗಿ ಹಾಗೂ ಆಕೆ ವಿಪರೀತ ಮದ್ಯಪಾನ ಮಾಡಿದ್ದುದಾಗಿ ಆಟೊ ಡ್ರೈವರ್‌ವೊಬ್ಬರು ತಿಳಿಸಿದರು. ಇಷ್ಟು ಹೊರತುಪಡಿಸಿದರೆ ಬೇರಾವುದೇ ಮಾಹಿತಿ ಇರಲಿಲ್ಲ. ಮಗುವನ್ನು ಕರೆದೊಯ್ದ ಮಹಿಳೆಯ ಹೆಸರು, ವಿಳಾಸ ಯಾವುದೂ ಇರಲಿಲ್ಲ. ಆಕೆ ಮೊಬೈಲ್ ಕೂಡ ಬಳಸುತ್ತಿರಲಿಲ್ಲ. ಕುಡಿತದ ಅಭ್ಯಾಸವಿರುವ ಆಕೆ, ಕುಡಿದ ಮತ್ತಿನಲ್ಲಿ ಮಗುವನ್ನು ಎಲ್ಲಾದರೂ ಬಿಟ್ಟು ಅದರ ಜೀವಕ್ಕೆ ತೊಂದರೆ ಆಗಬಹುದೆನ್ನುವ ಆತಂಕ ನಮ್ಮನ್ನು ಕಾಡುತ್ತಿತ್ತು.

ಮಗುವಿನ ಪತ್ತೆಗಾಗಿ ಮೂರು ತಂಡಗಳನ್ನು ರಚಿಸ ಲಾಯಿತು. ಆಕೆ ರೈಲ್ವೆ ನಿಲ್ದಾಣಕ್ಕೆ ಹೋದಾಗಿನಿಂದ ಹೊರಟ ರೈಲುಗಳ ಮಾಹಿತಿ ಪಡೆದು ಎಲ್ಲಾ ಕಡೆಯೂ ತಂಡ ತೆರಳಿ, ಸಿ.ಸಿ ಕ್ಯಾಮೆರಾದಿಂದ ಸಿಕ್ಕ ಫೋಟೊವನ್ನು ತೋರಿಸಿ ಪತ್ತೆಹಚ್ಚಲು ಪ್ರಯತ್ನಿಸ ಲಾಯಿತು. ಈ ವಿಚಾರಣೆಯಲ್ಲಿ ಆಕೆ ಮಂಡ್ಯ ನಗರದವಳು ಎಂಬ ಮಾಹಿತಿ ಗೊತ್ತಾಯಿತು. ಆದರೆ, ಅಲೆಮಾರಿಯಾದ ಆಕೆ ಎಲ್ಲಿರುತ್ತಾಳೆ, ಯಾವಾಗ ಬರುತ್ತಾಳೆಂಬ ಮಾಹಿತಿ ಯಾರಿಗೂ ಇರಲಿಲ್ಲ. ಸತತ ಪ್ರಯತ್ನದ ನಂತರ ನಾಲ್ಕನೇ ದಿನ ಮಗು ಹಾಗೂ ಆರೋಪಿಯನ್ನು ಪತ್ತೆ ಹಚ್ಚಿ, ಮಗುವನ್ನು ತಾಯಿ ಮಡಿಲಿಗೆ ಸೇರಿಸಲಾಯಿತು.

ಪ್ರೀತಿ, ಪ್ರೇಮ, ಸಂತೋಷ, ಸಹಬಾಳ್ವೆ, ಹೊಂದಾಣಿಕೆ ತುಂಬಿದ ಮನೆಯಲ್ಲಿ ಕುಟುಂಬದ ಸದಸ್ಯರೊಬ್ಬರು ನಾಪತ್ತೆಯಾಗುವುದು ಆಘಾತಕಾರಿ ಸಂಗತಿ. ಕಾಣೆಯಾದವರ ಪತ್ತೆ ಮಾಡಿ ಕೊಡಿ ಎಂದು ಕೋರಿ ಪೊಲೀಸ್ ಠಾಣೆಗೆ ಸಲ್ಲಿಸುವ ದೂರುಗಳು ತೀರಾ ಸಾಮಾನ್ಯ. ಸ್ವಇಚ್ಛೆಯಿಂದ ಮನೆಯಿಂದ ತೆರಳುವ ಪ್ರಕರಣಗಳೇ ಹೆಚ್ಚಾಗಿದ್ದರೂ, ಕೆಲವೊಮ್ಮೆ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಅಪಹರಣ ಮಾಡುವ ಪ್ರಕರಣಗಳು ದಾಖಲಾಗುತ್ತವೆ.

ಯಾವುದೇ ವ್ಯಕ್ತಿ ಕಾಣೆಯಾದ ಬಗ್ಗೆ ವರದಿಯನ್ನು ಪೊಲೀಸ್ ಠಾಣೆಗಳಲ್ಲಿ ಸ್ವೀಕರಿಸಿದಾಗ ಪೊಲೀಸರು, ‘ಮನುಷ್ಯ ಕಾಣೆ’ (ಮಿಸ್ಸಿಂಗ್) ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುತ್ತಾರೆ. ಕಾಣೆಯಾಗಿರುವುದು 18 ವರ್ಷ ಒಳಗಿನವರಾಗಿದ್ದರೆ, ಹೆಣ್ಣಾಗಲೀ ಗಂಡಾಗಲೀ, ಆ ಪ್ರಕರಣ ಕಡ್ಡಾಯವಾಗಿ ‘ಅಪಹರಣ’ ಕಲಂ ಅಡಿಯಲ್ಲಿ ದಾಖಲಾಗುತ್ತದೆ. ಕಾಣೆಯಾದವರ ಬಗೆಗೆ ಸಂಬಂಧಿಕರು, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಅಥವಾ ಸಾರ್ವಜನಿಕರು ಯಾರಾದರೂ ದೂರು ನೀಡಬಹುದಾಗಿರುತ್ತದೆ.

ಪ್ರತಿ ವ್ಯಕ್ತಿಯ ಸನ್ನಿವೇಶ, ಹಿನ್ನೆಲೆ, ಕಾರಣಗಳು ವಿಭಿನ್ನವಾಗಿಯೇ ಇರುವುದರಿಂದ, ಕಾಣೆಯಾದ ವ್ಯಕ್ತಿಯ ಸಂಪೂರ್ಣ ವಿವರಗಳು ಅವರನ್ನು ಪತ್ತೆ ಹಚ್ಚಲು ಅಗತ್ಯ. ಹಾಗಾಗಿಯೇ ಕಾಣೆಯಾದವರ ಬಗ್ಗೆ ದೂರು ನೀಡುವಾಗ ಲಭ್ಯವಿರುವ ಸಂಪೂರ್ಣ ವಿವರ ಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬೇಕು.

ಕಾಣೆಯಾಗುವುದಕ್ಕೆ ಸಾಮಾನ್ಯ ಹಾಗೂ ಮುಖ್ಯ ಕಾರಣಗಳಲ್ಲಿ ಪ್ರೇಮವೂ ಒಂದು. ಹದಿಹರೆಯದ ಪ್ರೇಮ ಪ್ರಕರಣಗಳಲ್ಲಿ ಕಾಣೆಯಾದವರು ಶೀಘ್ರವಾಗಿ ಪತ್ತೆಯಾಗುತ್ತಾರೆ. ಇವು ಪ್ರೇಮ ವಿವಾಹ ಅಥವಾ ಪೋಕ್ಸೊ ಪ್ರಕರಣಗಳಲ್ಲಿ ಕೊನೆಗೊಳ್ಳುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಅನ್ಯ ಜಾತಿಯ, ಅನ್ಯ ಕೋಮಿನ ಯುವಕ–ಯುವತಿಯರನ್ನು ಪ್ರೀತಿಸಿದ ಕಾರಣಕ್ಕಾಗಿ ಅಥವಾ ವಿವಾಹವಾದ ಕಾರಣಕ್ಕಾಗಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತವೆ. ಆ ಹತ್ಯೆಗಳನ್ನು ಕಾಣೆಯಾದ ಪ್ರಕರಣವೆಂದು ದಾಖಲಿಸಿ, ಮುಚ್ಚಿ ಹಾಕಲು ಪ್ರಯತ್ನಿಸುವುದುಂಟು. ಆದರೆ, ಪೊಲೀಸರು ನಡೆಸುವ ವಿವಿಧ ಆಯಾಮದ ತನಿಖೆಯಿಂದ ಅಪರಾಧ ಗುಟ್ಟಾಗಿ ಉಳಿಯದೇ ರಟ್ಟಾಗುತ್ತದೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ಕಾಣೆ ಯಾಗುತ್ತಿದ್ದವರಲ್ಲಿ ಈ ಮೊದಲು ಅವಿವಾಹಿತರೇ ಹೆಚ್ಚಿರುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಪ್ರಭಾವದಿಂದಾಗಿ ವಿವಾಹಿತರು, ಮಕ್ಕಳನ್ನು ಹೊಂದಿರುವವರು ಕಾಣೆಯಾಗುತ್ತಿರುವುದು ಹೆಚ್ಚುತ್ತಿದೆ; ಇದು ಮತ್ತೊಂದು ಸಾಮಾಜಿಕ ಸಮಸ್ಯೆಯಾಗಿ ರೂಪುಗೊಳ್ಳುತ್ತಿದೆ.

ಕಾಣೆಯಾಗುವುದಕ್ಕೆ ಮತ್ತೊಂದು ಪ್ರಮುಖ ಕಾರಣ ಆರ್ಥಿಕ ವಿಚಾರಗಳು. ಕೌಟುಂಬಿಕ ಆರ್ಥಿಕ ಕಲಹಗಳು, ಆಸ್ತಿ ವಿವಾದಗಳು ಮತ್ತು ಆರ್ಥಿಕ ಶಿಸ್ತಿಲ್ಲದೆ ಮಾಡಿಕೊಂಡ ವಿಪರೀತ ಸಾಲಗಳಿಂದಾಗಿ ಮನೆ ತೊರೆದು ಹೋಗುವುದು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಕಾಣೆಯಾಗುವುದರಿಂದ ಯಾರಿಗೆ ಆರ್ಥಿಕ ಹಾಗೂ ಆಸ್ತಿಯ ಲಾಭವಾಗುತ್ತದೆ ಎಂಬುದನ್ನು ತನಿಖೆಯಲ್ಲಿ ಗಮನಿಸಲಾಗುತ್ತದೆ. ಇಂಥ ಸಂದರ್ಭಗಳಲ್ಲಿ, ಕಾಣೆ ಪ್ರಕರಣವು ಕೊಲೆ ಯಲ್ಲಿ ಅಂತ್ಯವಾಗಿರುವ ಉದಾಹರಣೆಗಳು ಸಾಕಷ್ಟಿವೆ.

ಮಾನವ ಕಳ್ಳ ಸಾಗಾಣಿಕೆಯ ಆಯಾಮವು ಕಾಣೆಯಾದ ಪ್ರಕರಣಗಳಲ್ಲಿ ಮತ್ತೊಂದು ಪ್ರಮುಖ ಅಂಶ. ಕೆಲಸ ದೊರಕಿಸಿ ಕೊಡುವ, ನಟನೆಯ ಅವಕಾಶಗಳನ್ನು ಒದಗಿಸುವ, ವಿದೇಶಗಳಲ್ಲಿ ಉದ್ಯೋಗ ಒದಗಿಸುವ, ಇತ್ಯಾದಿ ಆಮಿಷಗಳನ್ನು ಒಡ್ಡಿ ವ್ಯಕ್ತಿಗಳನ್ನು ಹೊರ ರಾಜ್ಯ, ಹೊರ ದೇಶಗಳಿಗೆ ಸಾಗಾಣಿಕೆ ಮಾಡುವುದೇ ಮಾನವ ಕಳ್ಳ ಸಾಗಾಣಿಕೆ. ಇಂಥ ಪ್ರಕರಣಗಳಲ್ಲಿ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವುದು, ಪುರುಷರನ್ನು ಬಲವಂತದ ದುಡಿಮೆಗೆ ಹಚ್ಚುವುದು, ಮಕ್ಕಳನ್ನು ಭಿಕ್ಷಾಟನೆಗೆ ಇಲ್ಲವೇ ಕಾರ್ಖಾನೆಗಳ ಕೆಲಸಕ್ಕೆ ತೊಡಗಿಸುವುದು, ಅಂಗಾಂಗ ವ್ಯಾಪಾರಕ್ಕೆ, ಅಶ್ಲೀಲ ಫೋಟೊ ಮತ್ತು ವಿಡಿಯೊ ಚಿತ್ರೀಕರಣಕ್ಕೆ ಬಳಸಿ ಕೊಳ್ಳುವಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ದೂಡುವುದು ನಡೆಯುತ್ತದೆ. ಈ ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಕಾಣೆಯಾದವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗುತ್ತದೆ. ಮಹಿಳೆಯರು ಮತ್ತು ಹುಡುಗಿಯರ ಕಾಣೆ ಪ್ರಕರಣಗಳಲ್ಲಿ
ತನಿಖಾ ತಂಡದಲ್ಲಿ ಮಹಿಳಾ ಪೊಲೀಸರನ್ನು ಕಡ್ಡಾಯವಾಗಿ ನೇಮಿಸಲಾಗುತ್ತದೆ.

ಕಾಣೆಯಾದ ವ್ಯಕ್ತಿಯ ವಿವರ, ಚಹರೆ, ಕಾಣೆ ಯಾದಾಗ ಧರಿಸಿದ ಬಟ್ಟೆಗಳು, ವಿಶೇಷ ಗುರುತುಗಳು ಹಾಗೂ ಭಾವಚಿತ್ರದೊಂದಿಗೆ ‘ಲುಕ್‌ಔಟ್‌ ನೋಟಿಸ್‌’ ಅನ್ನು ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಿಗೆ ರವಾನಿಸಲಾಗುತ್ತದೆ. ಮಹಿಳೆಯರ ಹಾಗೂ ಅಪ್ರಾಪ್ತ ವಯಸ್ಕ ಮಕ್ಕಳ ಭಾವಚಿತ್ರವನ್ನು ಪ್ರಕಟಿಸುವಾಗ ಅವರ ತಂದೆ ತಾಯಿಯವರ ಅಥವಾ ಪೋಷಕರ ಲಿಖಿತ ಅನುಮತಿ ಪಡೆದುಕೊಳ್ಳಲಾಗುತ್ತದೆ.

ಮಕ್ಕಳು ಕಾಣೆಯಾದ ಪ್ರಕರಣಗಳಲ್ಲಿ ವಿವರಗಳನ್ನು ಭಾವಚಿತ್ರದೊಂದಿಗೆ www.trackthemissingchild.gov.in ಜಾಲತಾಣದಲ್ಲಿ ತಕ್ಷಣ ಪ್ರಕಟಿಸಲಾಗುತ್ತದೆ. ಮಕ್ಕಳ ರಕ್ಷಣೆಗಾಗಿ ಇರುವ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಾನವ ಕಳ್ಳಸಾಗಣೆ ವಿರೋಧಿ ಘಟಕ, ರಾಜ್ಯ ಅಪರಾಧ ದಾಖಲೆ ವಿಭಾಗ, ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ ಮಾಹಿತಿ ಕಳುಹಿಸಿಕೊಡ ಲಾಗುತ್ತದೆ. ಹಾಗೆಯೇ ಸಮಗ್ರ ಮಕ್ಕಳ ಯೋಜನೆ ಪೋರ್ಟಲ್‌ನಲ್ಲಿ ಕಾಣೆಯಾದ ಮಕ್ಕಳ ವಿವರವನ್ನು ‘ಫಾರ್ಮ್‌–ಎ’ನಲ್ಲಿ, ಪತ್ತೆಯಾದ ಮಕ್ಕಳ ವಿವರವನ್ನು ‘ಫಾರ್ಮ್‌–ಆರ್‌’ನಲ್ಲಿ ಭರ್ತಿ ಮಾಡುವುದು ಕಡ್ಡಾಯ ವಾಗಿದ್ದು, ದೇಶದಾದ್ಯಂತ ತಪ್ಪಿಸಿಕೊಂಡ ಮಕ್ಕಳ ಪತ್ತೆಗೆ ಇದು ಸಹಾಯ ಒದಗಿಸುತ್ತದೆ.

ವೃದ್ಧರ ಕಾಣೆ ಪ್ರಕರಣಗಳು ಮರೆವಿನ ಕಾಯಿಲೆ, ಕುಟುಂಬದವರ ಉದಾಸೀನ, ಮಾನಸಿಕ ಅಸ್ವಸ್ಥತೆ, ಆರೋಗ್ಯ ಸಮಸ್ಯೆಗಳ ಕಾರಣಗಳಿಂದ ಸಂಭವಿಸುತ್ತವೆ. ಆರೋಗ್ಯ ಸಮಸ್ಯೆಯಿಂದಾಗಿ ಕುಟುಂಬದವರಿಗೆ ಭಾರವಾಗಬಾರದೆಂದು ವೃದ್ಧರು ಎಲ್ಲಿಗಾದರೂ ಹೊರಟು ಹೋಗುವುದರಿಂದ ಹಿಡಿದು, ಕುಟುಂಬ ಸದಸ್ಯರು ವೃದ್ಧರ ಆರೈಕೆಯ ಜವಾಬ್ದಾರಿ ಹೊರಲಾರದೆ ಎಲ್ಲೋ ಗೊತ್ತಿಲ್ಲದ ಸ್ಥಳದಲ್ಲಿ ಬಿಟ್ಟು ಬಂದು ಕಾಣೆ ಪ್ರಕರಣಗಳನ್ನು ದಾಖಲಿಸುವುದೂ ಉಂಟು.

ಜೀವನದಲ್ಲಿ ವೈರಾಗ್ಯ ಹೊಂದಿಯೋ, ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡು ಸಿಕ್ಕಿ ಹಾಕಿಕೊಳ್ಳುವ ಭಯದಿಂದಲೋ ಕೆಲವರು ಕಾಣೆಯಾಗುವುದು ಕಂಡುಬರುತ್ತದೆ. ಕಾಣೆಯಾದವರನ್ನು ಹುಡುಕುವ ಪ್ರಕ್ರಿಯೆಯಲ್ಲಿ ತಂದೆ, ತಾಯಿ, ಪೋಷಕರು, ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು, ಸಹಪಾಠಿಗಳು, ನೆರೆಹೊರೆಯವರು ನೀಡುವ ಮಾಹಿತಿಯನ್ನು ಆಧರಿಸಿ ಕಾಣೆಯಾದ ಕಾರಣಗಳನ್ನು ಪಟ್ಟಿ ಮಾಡಿ ತನಿಖೆ ಮಾಡಲಾಗುತ್ತದೆ.

ತಂತ್ರಜ್ಞಾನದ ಕೊಡುಗೆ ಪತ್ತೆ ಕಾರ್ಯದಲ್ಲಿ ಅಪಾರವಾಗಿದೆ. ಸಿ.ಸಿ ಕ್ಯಾಮೆರಾ, ಸಾಮಾಜಿಕ ಮಾಧ್ಯಮ, ಮೊಬೈಲ್ ಫೋನ್‌ಗಳು, ಉಪಯುಕ್ತ ಮಾಹಿತಿ ಒದಗಿಸಿ ಶೀಘ್ರ ಪತ್ತೆ ಹಚ್ಚಲು ನೆರವಾಗುತ್ತಿವೆ. ಕಾಣೆಯಾದ ವ್ಯಕ್ತಿಗಳ ಪತ್ತೆ ಕಾರ್ಯದಲ್ಲಿ ಸರ್ಕಾರ ಹಾಗೂ ನ್ಯಾಯಾಲಯಗಳು ಅತೀವ ಕಾಳಜಿಯನ್ನು ವಹಿಸಿವೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಅತಿ ಮಹತ್ವ ನೀಡಿ ಈ ಪ್ರಕರಣಗಳನ್ನು ಬಗೆಹರಿಸು ತ್ತಿದೆ. ಅಧಿಕಾರಿಗಳ ಬದ್ಧತೆಯಿಂದ ಪತ್ತೆ ಕಾರ್ಯ ಪರಿಣಾಮಕಾರಿ ಆಗುತ್ತಿದ್ದು, ಕುಟುಂಬದಿಂದ ಬೇರೆಯಾದವರನ್ನು ಒಂದುಗೂಡಿಸುವ ಕಾರ್ಯವು ಯಶಸ್ವಿಯಾಗಿ ನಡೆಯುತ್ತಿದೆ.

(ಲೇಖಕಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ ಜಿಲ್ಲೆ) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.