ADVERTISEMENT

ವಿಶ್ಲೇಷಣೆ | ಹಲವು ಸಮಸ್ಯೆಗಳಿಗೆ ಪರಿಹಾರ ಎಂಎಸ್‌ಪಿ

ವೇಣುಗೋಪಾಲ್‌ ಟಿ.ಎಸ್‌.
Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
   

ರೈತರು ಎಂಎಸ್‌ಪಿ ಬಲವರ್ಧನೆಗೆ ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಕಾನೂನು ಖಾತರಿ ಬೇಕು ಎನ್ನುತ್ತಿದ್ದಾರೆ. ಎಂಎಸ್‌ಪಿ ಅನ್ನುವುದು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಕೊಳ್ಳುವುದಕ್ಕೆ ನೀಡುವ ಕನಿಷ್ಠ ಬೆಂಬಲ ಬೆಲೆ. ಇಷ್ಟಾದರೂ ಸಿಕ್ಕರೆ ರೈತರಿಗೆ ಮಾಡಿದ ಖರ್ಚಿನ ಜೊತೆಗೆ ಕೊಂಚ ಲಾಭ ದೊರೆತು ಕೃಷಿಯಲ್ಲೇ ಮುಂದುವರಿಯುವುದಕ್ಕೆ ಸಾಧ್ಯವಾಗಬಹುದು.

ಯಾರಿಗೂ ಇಲ್ಲದ ಎಂಎಸ್‌ಪಿ ಸೌಲಭ್ಯ ರೈತರಿಗೆ ಮಾತ್ರ ಯಾಕೆ? ಕೃಷಿಯಲ್ಲಿ ಅನಿಶ್ಚಿತತೆ ಹೆಚ್ಚು. ಎಷ್ಟು ಉತ್ಪಾದನೆಯಾಗುತ್ತದೆ ಅನ್ನುವುದು ಖಾತರಿಯಿಲ್ಲ. ಮಳೆ ಇಲ್ಲದೆ ಅಥವಾ ಅತಿ ಮಳೆಯಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಫಸಲು ನಾಶವಾಗಿಬಿಡಬಹುದು.

ಬೆಳೆದ ಬೆಳೆಗೆ ಎಷ್ಟು ಬೆಲೆ ಸಿಗಬಹುದು ಅನ್ನುವುದೂ ಖಚಿತವಿಲ್ಲ. ದಾಸ್ತಾನು ಹೆಚ್ಚಿ ಬೆಲೆ ಕುಸಿಯಬಹುದು. ದೊಡ್ಡ ವ್ಯಾಪಾರಿಗಳು, ಸರ್ಕಾರದ ನೀತಿಗಳು ಬೆಲೆಯನ್ನು ಮೇಲೆ ಕೆಳಗೆ ಮಾಡಿಬಿಡಬಹುದು. ಒಳ್ಳೆಯ ಬೆಲೆ ಸಿಕ್ಕಾಗ ಮಾರೋಣ ಎಂದುಕೊಂಡು ಕಾಯುವ ಸ್ಥಿತಿಯಲ್ಲಿ ಹೆಚ್ಚಿನವರು ಇರುವುದಿಲ್ಲ. ಸಾಲ ಮಾಡಿಕೊಂಡಿರುತ್ತಾರೆ. ದಾಸ್ತಾನು ಕೂಡಿಡುವುದಕ್ಕೆ ವ್ಯವಸ್ಥೆ ಇರುವುದಿಲ್ಲ. ಸಿಕ್ಕ ಬೆಲೆಗೆ ಮಾರಿಕೊಳ್ಳುತ್ತಾರೆ.

ADVERTISEMENT

ರೈತರು ಬೆಳೆಯುವ ಆಹಾರಧಾನ್ಯಗಳು ಎಷ್ಟು ಮುಖ್ಯವೆಂದರೆ, ಅವು ಇಲ್ಲದೆ ಜೀವನ ಸಾಗುವುದಿಲ್ಲ. ಅವುಗಳ ಬೆಲೆ ಏರುವುದಕ್ಕೆ ಸರ್ಕಾರ ಬಿಡುವುದಿಲ್ಲ. ಆದರೆ ರೈತರ ಖರ್ಚು ಮಾತ್ರ ಏರುತ್ತಲೇ ಇದೆ. ಹಾಗಾಗಿ, ರೈತರ ಜೀವನಮಟ್ಟದಲ್ಲಿ ಸುಧಾರಣೆಯಾಗುತ್ತಿಲ್ಲ. ನಮ್ಮಲ್ಲಿಯ ಶೇ 80ರಷ್ಟು ಕೃಷಿಕರು ಸಣ್ಣ ರೈತರು. ಕೃಷಿಕ ಕುಟುಂಬದ ತಿಂಗಳ ಆದಾಯ ಹೆಚ್ಚೆಂದರೆ ₹ 10,000. ಬಹುಪಾಲು ದೇಶಗಳಲ್ಲಿ ಇದೇ ಕಥೆ. ಅದರಿಂದಾಗಿಯೇ ಹೆಚ್ಚಿನ ದೇಶಗಳಲ್ಲಿ ಸರ್ಕಾರಗಳು ರೈತರಿಗೆ ಧಾರಾಳವಾಗಿ ಸಬ್ಸಿಡಿ ನೀಡುತ್ತವೆ. ಎಂತಹ ಸಂಕಷ್ಟದ ಸಮಯದಲ್ಲೂ ಅದನ್ನು ನಿಲ್ಲಿಸುವುದಿಲ್ಲ. ಭಾರತದಲ್ಲೇ ಇದು ಕಡಿಮೆ ಅನ್ನಬಹುದು.

ರೈತರ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಎಂ.ಎಸ್.ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ರಾಷ್ಟ್ರೀಯ ಕೃಷಿ ಆಯೋಗವು ಎಂಎಸ್‌ಪಿಗೆ ಶಿಫಾರಸು ಮಾಡಿತ್ತು. ಎಂಎಸ್‌ಪಿಯನ್ನು ನಿಗದಿಪಡಿಸುವುದಕ್ಕೆ ಸಮಗ್ರ ಉತ್ಪಾದನಾ ವೆಚ್ಚವನ್ನು (ಸಿ2) ಅಂದರೆ ಉಳುಮೆ, ಬಿತ್ತನೆ, ಬೀಜ, ಗೊಬ್ಬರದ ವೆಚ್ಚ, ಮನೆಯವರ ದುಡಿಮೆ ಜೊತೆಗೆ ಭೂಮಿಯ ಗೇಣಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ ಅದಕ್ಕೆ ಶೇಕಡ 50ರಷ್ಟನ್ನು ಸೇರಿಸಿ ಲೆಕ್ಕ ಹಾಕಬೇಕು ಅನ್ನುವುದು ಅದರ ಶಿಫಾರಸಾಗಿತ್ತು. ಆದರೆ ಸರ್ಕಾರವು ಬೆಲೆಯನ್ನು ನಿರ್ಧರಿಸುವಾಗ ಗೇಣಿಯನ್ನು ಬಿಟ್ಟುಬಿಡುತ್ತದೆ. ಆಗ ಎಂಎಸ್‌ಪಿ ಕಡಿಮೆಯಾಗಿಬಿಡುತ್ತದೆ. ಹಾಗಾಗಿಯೇ ರೈತರು ಸ್ವಾಮಿನಾಥನ್ ವರದಿಗೆ ಒತ್ತಾಯಿಸುತ್ತಿದ್ದಾರೆ.
ಜೊತೆಗೆ ಕಾನೂನಿನ ಖಾತರಿ ಬೇಕು ಎನ್ನುತ್ತಿದ್ದಾರೆ. ಕಾನೂನಿನ ಬಲ ಇದ್ದರೆ ಸರ್ಕಾರವನ್ನು ಒತ್ತಾಯಿಸ
ಬಹುದು, ಸರ್ಕಾರಕ್ಕೆ ಕಡ್ಡಾಯವೂ ಆಗುತ್ತದೆ ಅನ್ನುವುದು ಅವರ ಲೆಕ್ಕಾಚಾರ.

ಕೃಷಿಯು ಭಾರತದ ಆರ್ಥಿಕತೆಯ ಬೆನ್ನೆಲುಬು. ಅದು ಹೆಚ್ಚು ಜನರಿಗೆ ಉದ್ಯೋಗ ನೀಡುತ್ತದೆ. ದೇಶದ ಜಿಡಿಪಿಯಲ್ಲೂ ಅದರ ಪಾಲು ಗಣನೀಯವಾಗಿಯೇ ಇದೆ. ದೇಶದ ಆರ್ಥಿಕತೆಯಲ್ಲಿ ಪ್ರಗತಿಯಾಗಬೇಕಾದರೆ,
ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಬೇಕು. ರೈತರ ಬದುಕು ಸುಧಾರಿಸಬೇಕು. ಕೃಷಿ ಬೆಲೆಯಲ್ಲಿ ಸ್ಥಿರತೆ ಸಾಧ್ಯವಾಗಬೇಕು. ಬೆಲೆಯ ಸ್ಥಿರತೆಗೆ ಒಂದು ಸಾಧನವನ್ನಾಗಿಯೂ ಎಂಎಸ್‌ಪಿಯನ್ನು ಬಳಸಿಕೊಳ್ಳುವುದಕ್ಕೆ ಅವಕಾಶವಿದೆ.

ಇಲ್ಲಿ ಎರಡು ಸಾಧ್ಯತೆಗಳಿವೆ. ಮಾರುಕಟ್ಟೆಯ ಬೆಲೆಯು ಎಂಎಸ್‌ಪಿಗಿಂತ ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು. ಹೆಚ್ಚಿದ್ದಾಗ ಸರ್ಕಾರದ ನೆರವು ಬೇಕಾಗುವುದಿಲ್ಲ. ರೈತರು ಮಾರುಕಟ್ಟೆಯಲ್ಲಿ ಮಾರಿ
ಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಸರ್ಕಾರದ ಮಧ್ಯಪ್ರವೇಶ ಬೇಕಾಗುತ್ತದೆ. ಅವಶ್ಯಕತೆಗಿಂತ ಹೆಚ್ಚಿಗೆ ಬೆಳೆದಿದ್ದಾಗ ಹೀಗಾಗುತ್ತದೆ. ಆಗ ಎಂಎಸ್‌ಪಿ ದರದಲ್ಲಿ ರೈತರಿಂದ ಸರ್ಕಾರ ಕೊಳ್ಳಬೇಕಾಗುತ್ತದೆ. ರೈತರು ಬೆಳೆದುದೆಲ್ಲವನ್ನೂ ಸರ್ಕಾರ ಕೊಳ್ಳಬೇಕಾಗಿಲ್ಲ.

ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿಗಿರಬಹುದಾದ ದವಸಧಾನ್ಯ ಕೊಂಡರೆ ಸಾಕಾಗಬಹುದು. ಕೆಲವೊಮ್ಮೆ ಸ್ವಲ್ಪ ಹೆಚ್ಚು ಕೊಳ್ಳಬೇಕಾಗಬಹುದು. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ದಾಸ್ತಾನು ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಆಗ ಬೆಲೆಗಳು ಏರುತ್ತವೆ. ರೈತರು ಮಾರುಕಟ್ಟೆಯಲ್ಲಿ ಮಾರಿಕೊಳ್ಳುತ್ತಾರೆ. ಹೀಗೆ ಎಂಎಸ್‌ಪಿ ಬಳಸಿ ಕೃಷಿಯಲ್ಲಿ ಬೆಲೆ ಸ್ಥಿರತೆಯನ್ನು ಸಾಧಿಸಬಹುದು.

ಕೆಲವೇ ಜನ ಎಂಎಸ್‌ಪಿಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಗೋಧಿ ಮತ್ತು ಭತ್ತ ಬೆಳೆಯುವ ಕೆಲವು ರಾಜ್ಯಗಳಿಗೆ ಅನುಕೂಲವಾಗುತ್ತಿದೆ ಅನ್ನುವ ದೂರಿದೆ. ಹಾಗಾಗಲು ಕಾರಣಗಳಿವೆ. ಜನರಿಗೆ ಎಂಎಸ್‌ಪಿ ಕುರಿತು ಅರಿವಿನ ಕೊರತೆಯಿದೆ. ಸಂಗ್ರಹಣಾ ವ್ಯವಸ್ಥೆ ಸಮರ್ಪಕವಾಗಿಲ್ಲ. ಒಳ್ಳೆಯ ಬೆಂಬಲ ಬೆಲೆ ಸಿಗುತ್ತಿಲ್ಲ. ಎಂಎಸ್‌ಪಿಯನ್ನು ಇತರ ಬೆಳೆಗಳಿಗೂ ವಿಸ್ತರಿಸಿದರೆ ಹೆಚ್ಚಿನವರಿಗೆ ಈ ಸೌಲಭ್ಯ ಸಿಗುತ್ತದೆ. ಉಳಿದ ಬೆಳೆಗಳನ್ನು ಉತ್ತೇಜಿಸಿದಂತೆಯೂ ಆಗುತ್ತದೆ.

ರೈತ ಬೆಳೆದ ಬೆಳೆಗಳನ್ನೆಲ್ಲಾ ಸರ್ಕಾರ ಕೊಳ್ಳಬೇಕಾಗಿಲ್ಲ. ದೇಶದ ಹಿತದೃಷ್ಟಿಯಿಂದ ಕೆಲವನ್ನು ಉತ್ತೇಜಿಸಬೇಕಾಗುತ್ತದೆ. ಉದಾಹರಣೆಗೆ, ನಾವು ಶೇ 20ರಷ್ಟು ಬೇಳೆ ಕಾಳುಗಳನ್ನು, ಶೇಕಡ 70ಕ್ಕಿಂತ ಹೆಚ್ಚು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಎಣ್ಣೆಕಾಳುಗಳು, ಬೇಳೆಕಾಳುಗಳನ್ನು ನಮ್ಮಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಿದರೆ ಆಮದಿನ ಹೊರೆ ಕಡಿಮೆಯಾಗುತ್ತದೆ, ವಿದೇಶಿ ವಿನಿಮಯ ಉಳಿಯುತ್ತದೆ. ಅಷ್ಟೇ ಅಲ್ಲ ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಮತ್ತು ಅಕ್ಕಿಯನ್ನು ಬೆಳೆಯಲಾಗುತ್ತಿದೆ. ರೈತರು ಬೇರೆ ಬೆಳೆಗಳನ್ನು ಬೆಳೆದರೆ ಈ ಸಮಸ್ಯೆಯೂ ಪರಿಹಾರವಾಗುತ್ತದೆ. ಎಂಎಸ್‌ಪಿಯ ಮೂಲಕ ರೈತರಿಗೆ ಒಳ್ಳೆಯ ಬೆಲೆ ಹಾಗೂ ಬೆಳೆದದ್ದು ಮಾರಾಟವಾಗುವ ಖಾತರಿ ಸಿಕ್ಕರೆ ಇದು ಸಾಧ್ಯವಾಗುತ್ತದೆ.

ಎಂಎಸ್‌ಪಿಯಿಂದ ಇನ್ನೂ ಒಂದು ಅನುಕೂಲವಾಗುತ್ತಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಿರುವುದಕ್ಕೆ ಎಂಎಸ್‌ಪಿ ದೊರಕುತ್ತಿರುವುದೂ ಒಂದು ಕಾರಣ. ಅದರಿಂದಾಗಿ ನಮಗೆ ಆಹಾರ ಪದಾರ್ಥಗಳಲ್ಲಿ ಸ್ವಾವಲಂಬನೆ ಸಾಧ್ಯವಾಗಿದೆ. ಆಹಾರದ ಸುಭದ್ರತೆಗೆ ಸ್ವಾವಲಂಬನೆ ಅನಿವಾರ್ಯ. ಯಾವುದನ್ನು ಬೆಳೆಯಬೇಕು ಅನ್ನುವುದನ್ನು ಸಾಮಾಜಿಕ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ನಿರ್ಧರಿಸಬೇಕು. ಇಂತಹ ಪ್ರಮುಖ ನಿರ್ಧಾರವನ್ನು ಮಾರುಕಟ್ಟೆಗೆ ಬಿಡುವುದು ಸರಿಯಲ್ಲ. ಆದರೆ ಕಾರ್ಪೊರೇಟ್ ಜಗತ್ತು ಸರ್ಕಾರದ ಮಧ್ಯಪ್ರವೇಶವನ್ನು ವಿರೋಧಿಸುತ್ತದೆ. ಅದಕ್ಕಾಗಿಯೇ ಅದು ಸಬ್ಸಿಡಿಯಂತಹ ನೆರವನ್ನು ಒಪ್ಪುವುದಿಲ್ಲ. ಡಬ್ಲ್ಯುಟಿಒದಂತಹ ಜಾಗತಿಕ ಸಂಸ್ಥೆಗಳೂ ರೈತರಿಂದ ಆಹಾರ ಪದಾರ್ಥಗಳನ್ನು ಬೆಂಬಲ ಬೆಲೆ ನೀಡಿ ಕೊಳ್ಳುವುದಕ್ಕೆ ಮಿತಿ ವಿಧಿಸುತ್ತವೆ. ಸರ್ಕಾರ ಇವುಗಳ ಒತ್ತಾಯಕ್ಕೆ ಮಣಿದು ಎಂಎಸ್‌ಪಿಯನ್ನು ಹಿಂತೆಗೆದುಕೊಳ್ಳಬಹುದು ಎನ್ನುವ ಆತಂಕ ರೈತರಿಗಿದೆ. ಅದೇ ಕಾರಣಕ್ಕೆ ಕೆಲವು ರೈತ ಸಂಘಟನೆಗಳು ಡಬ್ಲ್ಯುಟಿಒದಿಂದ ಹೊರಬರುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ.

ರೈತರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಬೆಲೆಗಳು ಕುಸಿದು ರೈತರು ಸಂಕಟದಲ್ಲಿದ್ದಾಗ ಅವರ ನೆರವಿಗೆ ಬಾರದ ಸರ್ಕಾರ, ಬೆಲೆ ಸ್ವಲ್ಪ ಹೆಚ್ಚಿದ ಕೂಡಲೇ ರಫ್ತು ನಿಷೇಧಿಸಿತು. ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತು. ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದನ್ನು ಕಡಿಮೆ ಬೆಲೆಗೆ ಮಾರಿತು. ಬೆಲೆ ಇಳಿಸಲು ಸಕಲ ಪ್ರಯತ್ನವನ್ನೂ ಮಾಡಿತು. ಸಹಜವಾಗಿಯೇ ರೈತರಿಗೆ ಸರ್ಕಾರ ತಮ್ಮ ಹಿತವನ್ನು ಕಾಪಾಡುತ್ತದೆ ಎಂಬ ನಂಬಿಕೆಯಿಲ್ಲ. ರೈತರ ನೋವನ್ನು ಸರ್ಕಾರ ಕೇಳಿಸಿಕೊಳ್ಳಬೇಕು.

ಎಂಎಸ್‌ಪಿ ಯಾಕೆ ಅನ್ನುವುದು ಈಗ ಪ್ರಶ್ನೆಯಾಗಬಾರದು, ಹೇಗೆ ಅನ್ನುವುದಷ್ಟೇ ಪ್ರಶ್ನೆಯಾಗಬೇಕು. ಕೆಲವರ ಪ್ರಕಾರ, ಆಹಾರಧಾನ್ಯಗಳನ್ನು ರೈತರಿಂದ ಕೊಳ್ಳುವ ಬದಲು ಮಾರುಕಟ್ಟೆ ಬೆಲೆ ಹಾಗೂ ಎಂಎಸ್‌ಪಿ ನಡುವಿನ ವ್ಯತ್ಯಾಸವನ್ನು ನಗದಿನಲ್ಲಿ ರೈತರಿಗೆ ಕೊಡುವುದು ಒಳ್ಳೆಯದು. ಜೀನ್ ಡ್ರೀಜ್ ಹೇಳುವಂತೆ, ಸಲಹೆಯು ತಾರ್ಕಿಕವಾಗಿ ಸರಿಯಾಗಿಯೇ ಇರಬಹುದು. ಆದರೆ ವಾಸ್ತವದಲ್ಲಿ ಏನಾಗುತ್ತದೆ ಅನ್ನುವುದೂ ಮುಖ್ಯವಾಗುತ್ತದೆ. ಮಧ್ಯಪ್ರದೇಶದಲ್ಲಿ ಇದನ್ನು ನೋಡಿಯಾಗಿದೆ. ಮಾರುಕಟ್ಟೆ ಬೆಲೆ ಹಾಗೂ ಎಂಎಸ್‌ಪಿ ನಡುವಿನ ವ್ಯತ್ಯಾಸವನ್ನು ಹಿಗ್ಗಿಸಿ ವ್ಯಾಪಾರಿಗಳು ಲಾಭ ಮಾಡಿಕೊಂಡರು. ಹಾಗಾಗಿ, ಇದನ್ನು ಒಂದೇ ವರ್ಷದಲ್ಲಿ ನಿಲ್ಲಿಸಬೇಕಾಯಿತು. ನಗದು ರೂಪದಲ್ಲಿ ಪರಿಹಾರ ನೀಡುವುದು ಸರಳವಾದ, ಸುಲಭವಾದ ಕ್ರಮವಾಗಿ ಕಂಡರೂ ಸದ್ಯದ ಪರಿಸ್ಥಿತಿಯಲ್ಲಿ ಎಂಎಸ್‌ಪಿಯನ್ನು ಬಲಪಡಿಸುವುದು ಒಳ್ಳೆಯದು.

ರೈತರು, ಅವರ ಮಕ್ಕಳು ಚೆನ್ನಾಗಿರಬೇಕು ಅನ್ನುವುದರಲ್ಲಿ ಗ್ರಾಹಕರಾದ ನಮ್ಮ ಸ್ವಂತ ಹಿತಾಸಕ್ತಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.