ಅರವಿಂದ ಚೊಕ್ಕಾಡಿ
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಇತ್ತೀಚೆಗೆ ಒಂದು ಸುತ್ತೋಲೆ ಹೊರಡಿಸಿ, ದೇಶ ವಿಭಜನೆಯ ಭಯಾನಕತೆಯನ್ನು ಶಾಲಾ ಮಕ್ಕಳಿಗೆ ಮಾಡ್ಯೂಲ್‌ಗಳ ಮೂಲಕ ತಿಳಿಸಬೇಕು ಎಂದು ಸೂಚಿಸಿತು. ಈ ಯೋಜನೆಯನ್ನು ಜಾರಿ ಮಾಡುವಂತೆ ಶಾಲೆಗಳಿಗೆ ಆದೇಶವನ್ನು ಕಳಿಸಿದ ರಾಜ್ಯ ಯೋಜನಾ ನಿರ್ದೇಶಕರು, ನಂತರ ಆದೇಶ ಹಿಂಪಡೆದರು.
ಏಳು ಮತ್ತು ಹತ್ತನೇ ತರಗತಿಯಲ್ಲಿನ ಪಾಠಗಳಲ್ಲಿ ವಿಸ್ತೃತವಾಗಿ ದೇಶ ವಿಭಜನೆಯ ಇತಿಹಾಸವಿದೆ. ಏಳು ದಶಕಗಳಿಂದಲೂ ಇದನ್ನು ಬೋಧಿಸುತ್ತಿರುವಾಗ ವಿಶೇಷ ಕಾರ್ಯಕ್ರಮವಾಗಿ ವಿವರಿಸುವುದರ ಉದ್ದೇಶವೇನು? ದೇಶ ವಿಭಜನೆಯ ಇತಿಹಾಸದ ಒಂದು ಘಟನೆ. ಅದರ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಲು ಹೊರಟಾಗ ಪ್ಲಾಸಿ ಕದನ, ಪಾಣಿಪತ್ ಕದನದಿಂದ ತೊಡಗಿ ವೇದಕಾಲದ ಸಪ್ತ ಸಿಂಧೂ ಕದನದವರೆಗೂ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕಾಗುವುದಿಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮಕ್ಕಳ ಮಾನಸಿಕ ಸ್ಥಿತಿಗೆ ಗಾಸಿಯಾಗದ ಹಾಗೆ ಎಚ್ಚರ ವಹಿಸಿ ಪಾಠ ಬೋಧಿಸಬೇಕಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಭಯಾನಕವಾದದ್ದನ್ನೂ ಭೀಭತ್ಸ ಎನಿಸದಂತೆ ಹೇಳಬೇಕಾಗುತ್ತದೆ. ಅದರ ಉದ್ದೇಶ, ಮಕ್ಕಳ ಮಾನಸಿಕ ಬೆಳವಣಿಗೆಯ ಮಟ್ಟಕ್ಕೆ ಅಷ್ಟು ಭೀಭತ್ಸ ಆಗಿರುವುದನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ ಎನ್ನುವುದೇ ಹೊರತು ಸುಳ್ಳನ್ನು ಹೇಳಬೇಕು ಎನ್ನುವುದಲ್ಲ. ಅಂತಹದ್ದರಲ್ಲಿ ಎನ್‌ಸಿಇಆರ್‌ಟಿ ‘ಭಯಾನಕತೆಯ ಅರಿವು ಮೂಡಿಸುವುದು’ ಎಂಬ ಪರಿಕಲ್ಪನೆಯನ್ನು ಕೊಟ್ಟಿರುವುದು ಶೈಕ್ಷಣಿಕ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಸಮಂಜಸವಲ್ಲ. ಇದಿಷ್ಟು ಶೈಕ್ಷಣಿಕ ಸಂಗತಿಗಳಾದರೆ, ದೇಶ ವಿಭಜನೆಯನ್ನು ಬಹುತೇಕರು ಅರ್ಥ ಮಾಡಿಕೊಂಡಿರುವುದರಲ್ಲಿ ಸಾಕಷ್ಟು ದೋಷವಿದೆ.
ದೇಶ ವಿಭಜನೆ ಎಂದಾಕ್ಷಣ ಇಂದಿನ ಭಾರತದ ನಕಾಶೆ, ಪಾಕಿಸ್ತಾನದ ನಕಾಶೆ, ಬಾಂಗ್ಲಾದ ನಕಾಶೆಗಳೆಲ್ಲವೂ ಒಂದೇ ನಕಾಶೆಯಾಗಿತ್ತು, ಅದನ್ನು ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನವೆಂದು ವಿಭಜಿಸಲಾಯಿತು ಎಂಬರ್ಥದಲ್ಲಿ ಕಲ್ಪಿಸಿಕೊಳ್ಳಲಾಗುತ್ತದೆ. ವಾಸ್ತವದಲ್ಲದು ಹಾಗಿರಲಿಲ್ಲ.
ಇವತ್ತಿನ ಭಾರತ 1947ರ ಭಾರತ ಆಗಿರಲಿಲ್ಲ. ಆಗ ಬ್ರಿಟಿಷರ ಅಧೀನದಲ್ಲಿ 17 ಪ್ರಾಂತ್ಯಗಳಿದ್ದವು. ಯುನೈಟೆಡ್ ಪ್ರಾವಿನ್ಸಸ್, ಸಿಂಧ್, ಪಂಜಾಬ್, ಪಂತ್–ಪಿಪ್ಲೋಡ, ಒರಿಸ್ಸಾ, ವಾಯವ್ಯ ಗಡಿ ಪ್ರಾಂತ್ಯ, ಮದ್ರಾಸ್, ಡೆಲ್ಲಿ, ಕೊಡಗು, ಸೆಂಟ್ರಲ್ ಪ್ರಾವಿನ್ಸ್ ಮತ್ತು ಬಿರಾರ್, ಬೊಂಬಾಯಿ, ಬಿಹಾರ, ಬಂಗಾಳ, ಬಲೂಚಿಸ್ಥಾನ, ಅಸ್ಸಾಂ, ಅಂಡಮಾನ್ ನಿಕೋಬಾರ್, ಅಜ್ಮೀರ್–ಮೇರ್ವಾರ, ಇವೇ ಆ ಹದಿನೇಳು ಪ್ರಾಂತ್ಯಗಳು. 1947ರ ಭಾರತ ಸ್ವಾತಂತ್ರ್ಯ ಶಾಸನವು ಸ್ವಾತಂತ್ರ್ಯದ ಘೋಷಣೆ ಮಾಡಿದ್ದು ಮತ್ತು ಭಾರತ–ಪಾಕಿಸ್ತಾನವೆಂಬ ರಾಷ್ಟ್ರಗಳನ್ನು ಸೃಷ್ಟಿಸಿದ್ದು ಈ ಪ್ರಾಂತ್ಯಗಳಿಗೆ ಮಾತ್ರ. ಉದಾಹರಣೆಗೆ, ದಕ್ಷಿಣ ಕನ್ನಡ ಜಿಲ್ಲೆಗೆ 1947ರ ಸ್ವಾತಂತ್ರ್ಯದ ಶಾಸನದ ಪ್ರಕಾರ ಸ್ವಾತಂತ್ರ್ಯ ಬಂದಿತ್ತು. ಏಕೆಂದರೆ, ಅದು ಬ್ರಿಟಿಷರ ಮದ್ರಾಸ್ ಪ್ರಾಂತ್ಯದಲ್ಲಿತ್ತು. ಆದರೆ, ಸಕಲೇಶಪುರಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಏಕೆಂದರೆ, ಅದು ಬ್ರಿಟಿಷರ ಅಧೀನದಲ್ಲಿ ಇರಲಿಲ್ಲ. ತಮ್ಮ ಅಧಿಕಾರವೇ ಇಲ್ಲದ ಸ್ಥಳಕ್ಕೆ ಬ್ರಿಟಿಷರು ಸ್ವಾತಂತ್ರ್ಯ ಘೋಷಿಸಲು ಸಾಧ್ಯವಿರಲಿಲ್ಲ. ಸಕಲೇಶಪುರವು ಮೈಸೂರಿನ ಮಹಾರಾಜರ ಅಧೀನದಲ್ಲಿತ್ತು.
1947ರಲ್ಲಿ ಅಸ್ತಿತ್ವದಲ್ಲಿದ್ದ ಸುಮಾರು 565 ಮಹಾರಾಜರುಗಳ ರಾಜ್ಯಕ್ಕೂ ಬ್ರಿಟಿಷರಿಗೂ ಇದ್ದ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ಕಾರಣದಿಂದಾಗಿ ಕೊಂಚ ವ್ಯತ್ಯಾಸವಿದೆ ಎಂಬುದನ್ನು ಬಿಟ್ಟರೆ ಪ್ರಸ್ತುತ ರಾಜ್ಯ ಸರ್ಕಾರಕ್ಕೂ ಕೇಂದ್ರ ಸರ್ಕಾರಕ್ಕೂ ಇರುವ ಸಂಬಂಧಕ್ಕೂ, ಬ್ರಿಟಿಷರಿಗೂ ದೇಶೀಯ ರಾಜರುಗಳಿಗೂ ಇದ್ದ ಸಂಬಂಧಕ್ಕೂ ಹೋಲಿಕೆ ಇದೆ. ಪ್ರಸ್ತುತ ರಾಜ್ಯ ಸರ್ಕಾರಗಳು ಸ್ವತಂತ್ರ ಅಧಿಕಾರ ಹೊಂದಿವೆ. ಆದರೆ, ಪರಮಾಧಿಕಾರ ಇಲ್ಲ. ಪರಮಾಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ. 1947ರ ಕಾಲದಲ್ಲಿ ರಾಜರು ಸ್ವತಂತ್ರ ಅಧಿಕಾರವನ್ನೇ ಹೊಂದಿದ್ದರೂ, ಯುದ್ಧ ಘೋಷಿಸುವ– ಶಾಂತಿ ಒಪ್ಪಂದದ ಪರಮಾಧಿಕಾರ ಇದ್ದದ್ದು ಬ್ರಿಟಿಷ್ ಸರ್ಕಾರಕ್ಕೆ ಮಾತ್ರ. 1947ರ ಈ ಸ್ಥಿತಿಗೆ ಕಾರಣವಾಗಿರುವುದ್ದುದು ಸಹಾಯಕ ಸೈನ್ಯ ಪದ್ಧತಿ. ಇದನ್ನು ಸ್ವೀಕರಿಸಿದ ದೇಶೀಯ ರಾಜರುಗಳಿಗೆ ಯಾರೊಂದಿಗೂ ಯುದ್ಧ ಘೋಷಿಸುವ ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳುವ ಅಧಿಕಾರ ಇರಲಿಲ್ಲ. ಆದರೆ, ಆ ರಾಜರುಗಳ ರಕ್ಷಣೆ ಬ್ರಿಟಿಷರ ಜವಾಬ್ದಾರಿಯಾಗಿತ್ತು. ಇದೇ ನೀತಿ ಕಾಲಾನುಕ್ರಮದಲ್ಲಿ ಬ್ರಿಟಿಷರಿಗೆ ಕೆಲವು ವಿಷಯಗಳಲ್ಲಿ ತುಸು ಜಾಸ್ತಿ ಅಧಿಕಾರವಾಗಿ ವಿಸ್ತರಿಸಲ್ಪಟ್ಟು 1947ರವರೆಗೂ ಮುಂದುವರಿದಿತ್ತು.
1947ರ ಭಾರತ ಸ್ವಾತಂತ್ರ್ಯಶಾಸನ ಜಾರಿಯಾಗುವ ಕಾಲಕ್ಕೆ ಬ್ರಿಟಿಷರು ಸಾಮ್ರಾಟರಂತಿದ್ದರೆ, 565 ರಾಜರುಗಳು ಕಪ್ಪ ಕೊಡುವ ರಾಜರಂತಿದ್ದರು ಎಂದು ಭಾವಿಸಿಕೊಳ್ಳಬಹುದು. ಸ್ವಾತಂತ್ರ್ಯ ಶಾಸನವು ಜಾರಿಯಾದಾಕ್ಷಣ ಬ್ರಿಟಿಷ್ ಚಕ್ರವರ್ತಿ 6ನೇ ಜಾರ್ಜ್‌ಗೆ ಭಾರತದ ಮೇಲಿರುವ ಪರಮಾಧಿಕಾರವೂ ರದ್ದಾಗುತ್ತದೆ ಎನ್ನುವುದು ಶಾಸನದ ಒಂದು ನಿಯಮವಾಗಿತ್ತು. ಬ್ರಿಟಿಷರ ಅಧಿಕಾರವೇ ರದ್ದಾದಾಗ ಅವರೊಂದಿಗೆ 565 ರಾಜರು ಮಾಡಿಕೊಂಡ ಯಾವ ಒಪ್ಪಂದವೂ ಊರ್ಜಿತದಲ್ಲಿರುವುದಿಲ್ಲ. ಆಗ ಆ ರಾಜರುಗಳ ವ್ಯವಸ್ಥೆ ಏನು? ಅದಕ್ಕೂ 1947ರ ಸ್ವಾತಂತ್ರ್ಯ ಶಾಸನದಲ್ಲೇ ಬ್ರಿಟಿಷರು ವ್ಯವಸ್ಥೆ ಮಾಡಿದ್ದರು. 567 ರಾಜರುಗಳು ಬ್ರಿಟಿಷರು ಸ್ವತಂತ್ರಗೊಳಿಸಿದ ಅವರ ಅಧೀನದ ಪ್ರಾಂತ್ಯ ಆಡಳಿತದೊಂದಿಗೆ ವಿಲೀನಗೊಳ್ಳಬಹುದಿತ್ತು ಅಥವಾ ಸ್ವತಂತ್ರರಾಗಿ ಇರಬಹುದಾಗಿತ್ತು. ವಿಲೀನಗೊಳ್ಳಲೇಬೇಕು ಎನ್ನುವ ಷರತ್ತಿರಲಿಲ್ಲ. ಆಗ ದೇಶ ವಿಭಜನೆ ಆಗದೆ ಇದ್ದರೆ, ಈಗ ಪಾಕಿಸ್ತಾನವಾಗಿರುವ ಭಾಗದಲ್ಲಿದ್ದ ರಾಜರುಗಳು ಭಾರತದೊಂದಿಗೆ ವಿಲೀನ ಆಗುತ್ತಿದ್ದರು ಎಂದು ಊಹಿಸಲು ಬರುವುದಿಲ್ಲ. ಧರ್ಮದ ಆಧಾರದಲ್ಲಿ ವಿಭಜನೆಯಾದ ನಂತರವೂ ಕಾಶ್ಮೀರದ ಹರಿಸಿಂಗ್ ಅವರೇ ಭಾರತದೊಂದಿಗೆ ವಿಲೀನಗೊಳ್ಳಲು ಒಪ್ಪದೆ, ಸ್ವತಂತ್ರ ಪರಮಾಧಿಕಾರಿಯಾಗಿರುತ್ತೇನೆ ಎಂಬ ನಿರ್ಧಾರವನ್ನೇ ತೆಗೆದುಕೊಂಡಿದ್ದರು ಎಂದಮೇಲೆ, ಈಗಿನ ಪಾಕಿಸ್ತಾನದಲ್ಲಿದ್ದ ನವಾಬರುಗಳೆಲ್ಲ ಭಾರತದೊಂದಿಗೆ ವಿಲೀನಗೊಳ್ಳುವ ಸಾಧ್ಯತೆ ವಿರಳವಿತ್ತು.
1947ರಲ್ಲಿ ಪಾಂಡಿಚೇರಿ, ಕರೈಕಲ್, ಮಾಹೆ, ಯಾನಂ, ಚಂದ್ರನಗರಗಳು ಫ್ರೆಂಚರ ಅಧೀನದಲ್ಲೂ, ಗೋವಾ, ಡಾಮನ್, ಡಿಯು, ನಗರ ಹವೇಲಿ, ದಾದ್ರಾಗಳು ಪೋರ್ಚುಗೀಸರ ಅಧೀನದಲ್ಲೂ ಇದ್ದವು. ಫ್ರೆಂಚ್ ಮತ್ತು ಪೋರ್ಚುಗೀಸ್ ಪ್ರಾಂತ್ಯಗಳು ಆಯಾ ಸರ್ಕಾರಗಳ ಪರಮಾಧಿಕಾರವನ್ನೇ ಹೊಂದಿದ್ದು, ‘ನೀವು ಈ ರೀತಿ ಮಾಡಬಹುದು’ ಎಂದು ಸೂಚಿಸುವ ಅಧಿಕಾರವೂ ಬ್ರಿಟಿಷರಿಗೆ ಇರಲಿಲ್ಲ. ಪೋರ್ಚುಗೀಸರ ಪ್ರಾಂತ್ಯವನ್ನು ಯುದ್ಧದ ಮುಖಾಂತರ ಸ್ವತಂತ್ರಗೊಳಿಸಲಾಗಿತ್ತು. ಫ್ರೆಂಚರೊಂದಿಗೆ ಜನಮತ ಗಣನೆಯಾಗಿ ಅದು ಸ್ವತಂತ್ರವಾಯಿತು. ಇಷ್ಟಾದ ನಂತರ ‘ಭಾರತ’ ಎನ್ನುವ ಈಗಿನ ನಕಾಶೆ ರೂಪುಗೊಂಡಿದೆ. ಹಾಗಿರುವಾಗ ಈಗಿನ ಭಾರತದ ನಕಾಶೆ ಮತ್ತು ಪಾಕಿಸ್ತಾನ, ಬಾಂಗ್ಲಾ ದೇಶದ ನಕಾಶೆಗಳ ಗಡಿರೇಖೆಗಳನ್ನು ಕಲ್ಪಿಸಿಕೊಂಡು ದೇಶ ವಿಭಜನೆಯನ್ನು ಅರ್ಥ ಮಾಡಿಕೊಳ್ಳುವುದು ಸಮರ್ಪಕ ಗ್ರಹಿಕೆಯಾಗುವುದಿಲ್ಲ.
ಈಗ, 1947ರಲ್ಲಿ ಸಾಧ್ಯವಾಗಿರದ ದೇಶ ವಿಭಜನೆಯ ಕುರಿತ ಅನೇಕ ಒಳನೋಟಗಳ ಅಧ್ಯಯನ ನಡೆದಿದೆ. ಅಂತರರಾಷ್ಟ್ರೀಯ ತಂತ್ರಗಳನ್ನೂ ಅರ್ಥ ಮಾಡಿಸಿವೆ. ದೇಶ ವಿಭಜನೆಯಾಗದೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ವೈಸರಾಯ್ ವವೆಲ್ ಒಂದು ಪ್ರಸ್ತಾಪವನ್ನು ಗಾಂಧಿ, ನೆಹರೂ, ಪಟೇಲ್ ಮುಂದೆ ಇರಿಸಿದ್ದರು. ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ಬ್ರಿಟಿಷ್ ಪ್ರದೇಶಗಳನ್ನು ಮುಸ್ಲಿಂ ಲೀಗ್ ಕೈಗೂ, ಇತರ ಭಾಗಗಳ ಬ್ರಿಟಿಷ್ ಪ್ರಾಂತ್ಯಗಳನ್ನು ಕಾಂಗ್ರೆಸ್ ಕೈಗೂ ಕೊಟ್ಟು ಎಲ್ಲರಿಗಾಗಿ ಒಂದೇ ಸಂಸತ್ತನ್ನು ರೂಪಿಸಿ, ಮುಸ್ಲಿಂ ಲೀಗಿಗೆ ವಿಟೊ ಅಧಿಕಾರವನ್ನು ಕೊಡುವುದು ವವೆಲ್ ಯೋಜನೆಯಾಗಿತ್ತು. ಈ ಯೋಜನೆ ಜಾರಿಗೆ ಬಂದಿದ್ದರೆ ಸಂಸತ್ತಿನ ಸರ್ವಾನುಮತದ ನಿರ್ಣಯವನ್ನು ಮುಸ್ಲಿಂ ಲೀಗಿನ ಒಬ್ಬ ಸದಸ್ಯ ರದ್ದುಪಡಿಸಬಹುದಾಗಿತ್ತು. ಇದನ್ನು ಕೇಳಿ ಗಾಂಧಿ, ‘ನಮ್ಮ ವೈಸರಾಯರಿಗೆ ಒಬ್ಬ ಕಾನೂನು ಸಲಹೆದಾರನ ಅಗತ್ಯವಿದೆ. ಕಳಿಸಿಕೊಡಿ’ ಎಂದು ಬ್ರಿಟಿಷ್ ಪ್ರಧಾನಿಗೆ ಟೆಲಿಗ್ರಾಂ ಕಳಿಸಿದ್ದರು. ನೆಹರೂ ಇಂಗ್ಲೆಂಡಿಗೆ ಹೋಗಿ ಮೌಂಟ್ ಬ್ಯಾಟನ್ ಅವರನ್ನು ವೈಸರಾಯ್ ಆಗಿ ಹಾಕಿಸಿಕೊಂಡು ಬಂದಿದ್ದರು. ಅದೇ ಸಮಯಕ್ಕೆ ಲಂಡನ್‌ಗೆ ಹೋದ ಮಹಮದಾಲಿ ಜಿನ್ನಾ ಅಲ್ಲಿನ ವಿರೋಧ ಪಕ್ಷದ ನಾಯಕ ಚರ್ಚಿಲ್ ಅವರನ್ನು ಭೇಟಿಯಾಗಿದ್ದರು. ಚರ್ಚಿಲ್ ಜಿನ್ನಾ ಪರ ಇದ್ದರು. ಚರ್ಚಿಲ್ ಪ್ರಧಾನಿಯಾಗಿದ್ದಾಗ ವೈಸರಾಯ್ ವವೆಲ್‌ರೊಂದಿಗೆ ಭಾರತ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಗೋಪ್ಯ ಸಭೆ ನಡೆಸಿದ್ದರು. ಅದೇ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಟ್ರೂಮನ್ ಭಾರತ ಸ್ವಾತಂತ್ರ್ಯದ ಪ್ರಸ್ತಾಪ ಮಾಡಿದ್ದಾಗ ಚರ್ಚಿಲ್, ‘ನಮಗೆ ಅಭ್ಯಂತರವಿಲ್ಲ. ಆದರೆ, ಹಿಂದೂ– ಮುಸ್ಲಿಮರ ಸಮಸ್ಯೆಗಳಿದ್ದು ಅದಕ್ಕೆ ವಿಲೇವಾರಿ ಆಗಬೇಕು’ ಎಂದು ಉತ್ತರಿಸಿದ್ದರು. ದೇಶ ವಿಭಜನೆಯಾಗದಂತೆ ಚರ್ಚಿಸಲು ಸಿಮ್ಲಾ ಸಭೆ ನಡೆಯುವ ಹಿಂದಿನ ದಿವಸ ಬ್ರಿಟಿಷ್ ಅಧಿಕಾರಿಗಳು ಜಿನ್ನಾ ಬಳಿ, ‘ಎಷ್ಟು ಮಾತ್ರಕ್ಕೂ ಗಾಂಧಿಯವರ ಮಾತಿಗೆ ಒಪ್ಪಬೇಡಿ. ಪಾಕಿಸ್ತಾನವನ್ನು ಮಾಡಿಕೊಡುವ’ ಎಂದುದರ ಅಧ್ಯಯನ ವರದಿಗಳಿವೆ.
ನಿಜವಾಗಿ, ದೇಶ ವಿಭಜನೆ ಬ್ರಿಟಿಷರು ಮಾಡಿದ ಪರಿಸ್ಥಿತಿಯಾಗಿತ್ತು. ವಿಭಜನೆ ಯಾಕಾಯಿತು, ದೇಶೀಯ ರಾಜರು ವಿಲೀನಗೊಳ್ಳತಕ್ಕದ್ದು ಎಂದು ಶಾಸನ ಮಾಡಬಹುದಾಗಿದ್ದರೂ, ಅದನ್ನು ಮಾಡದೆ ದೇಶೀಯ ರಾಜರು ಸ್ವತಂತ್ರವಾಗಿ ಬೇಕಾದರೂ ಇರಬಹುದುದು ಎಂಬ ಷರತ್ತನ್ನು ಸ್ವಾತಂತ್ರ್ಯ ಶಾಸನದಲ್ಲಿ ಹಾಕಿದ್ದೇಕೆ ಎಂದೆಲ್ಲ ಅರ್ಥ ಮಾಡಿಕೊಳ್ಳದೆ ಔಪಚಾರಿಕ ಶಿಕ್ಷಣದೊಳಗೆಯೇ ದೇಶ ವಿಭಜನೆಯನ್ನು ಭಯಾನಕವಾಗಿ ಕಾಣಿಸುವುದು ಸಮಂಜಸ ಆಗಲಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.