ADVERTISEMENT

ವಿಶ್ಲೇಷಣೆ: ಬರಿದಾದ ಗೋಮಾಳ, ನೆರೆ-–ಬರ ಧಾರಾಳ!

ಕೇಶವ ಎಚ್.ಕೊರ್ಸೆ
Published 6 ಜನವರಿ 2022, 19:31 IST
Last Updated 6 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಣ್ಣ ರೈತರು ಹಾಗೂ ವನವಾಸಿಗರು ಮೇವಿನ ಕೊರತೆ ಎದುರಿಸುತ್ತಿರುವ ಸನ್ನಿವೇಶವು ಇದೀಗ ಬೇಸಿಗೆ ಬರುವ ಮುನ್ನವೇ ನಾಡಿನ ಬಹಳೆಡೆ ಸೃಷ್ಟಿಯಾಗುತ್ತಿದೆ. ಬೆಳೆದ ಹುಲ್ಲು ಇತ್ತೀಚಿನ ಅಕಾಲಿಕ ಮಳೆ ಹಾಗೂ ನೆರೆಯಿಂದಾಗಿ ಬಹುತೇಕ ನಾಶವಾಗಿ ಮಾರುಕಟ್ಟೆಯಲ್ಲೂ ಮೇವಿನ ಕೊರತೆ ತಲೆದೋರುತ್ತಿದೆ. ನೆರೆ- ಬರಗಳೇನೋ ಕಾಲಚಕ್ರದಲ್ಲಿ ಸಹಜವಾಗಿದ್ದವಾದರೂ ಮೇವಿನ ಕೊರತೆಯೆಂಬುದು ಇತ್ತೀಚಿನ ದಶಕಗಳ ವಿದ್ಯಮಾನವೇ ಸರಿ.

ಮೊದಲೆಲ್ಲ ದನಕರುಗಳಿಗೆ ಮೇಯಲೆಂದೇ ಮೀಸಲಿಟ್ಟ ಊರಿನ ಗೋಮಾಳದಲ್ಲಿ ಹುಲ್ಲು- ಸೊಪ್ಪುಗಳ ಕನಿಷ್ಠ ಮೇವಾದರೂ ಸಿಗುತ್ತಿತ್ತು. ಈಗ ಈ ಸಾಮೂಹಿಕ ಭೂಮಿಯೇ ಕಣ್ಮರೆಯಾಗುತ್ತಿರುವುದರಿಂದ, ಜಾನುವಾರು ಅವಲಂಬಿಸಿದ ಗ್ರಾಮೀಣ ಬದುಕೇ ಕುಸಿಯುತ್ತಿದೆ! ಹಳ್ಳಿಯೊಂದಕ್ಕೆ ಕಾಲಿಟ್ಟರೆ, ಮುಖ್ಯವಾಗಿ ಮೂರು ಬಗೆಯ ಭೂಮಿಗಳನ್ನು ಗುರುತಿಸಬಹುದು. ಒಂದೆಡೆ, ಖಾಸಗಿ ಮಾಲೀಕತ್ವದ ಗದ್ದೆ- ತೋಟಗಳಿರುವ ಕೃಷಿಜಮೀನು. ಇನ್ನೊಂದೆಡೆ, ಅರಣ್ಯ ಇಲಾಖೆ ವ್ಯಾಪ್ತಿಯ ಗುಡ್ಡ- ಕಣಿವೆಗಳ ಕಾಡು. ಆಹಾರ ಸುರಕ್ಷತೆ ಹಾಗೂ ಆರ್ಥಿಕತೆಯನ್ನು ಕೃಷಿಭೂಮಿ ಕಾಪಾಡಿಕೊಂಡರೆ, ನೆಲ- ಜಲ ಹಾಗೂ ಭವಿಷ್ಯದ ಪರಿಸರ ಸುರಕ್ಷತೆ ಕಾಯುವುದು ಈ ಜೀವವೈವಿಧ್ಯಭರಿತ ಅರಣ್ಯಗಳು.

ಇವೆರಡೂ ಅಲ್ಲದ, ಆದರೆ ಎಲ್ಲರೂ ಅವಲಂಬಿಸಿರುವ ಮೂರನೇ ಬಗೆಯದೇ ‘ಸಾಮೂಹಿಕ ಭೂಮಿ’. ಹಳ್ಳಿಗರಿಗೆಲ್ಲ ಸಮಾನ ಹಕ್ಕಿರುವ ಈ ಪ್ರದೇಶದಲ್ಲಿಯೇ ಕೆರೆ-ಹಳ್ಳಗಳಂಥ ಜಲಮೂಲಗಳು, ಗೋಮಾಳ, ಕುರುಚಲು ಕಾಡು ಎಲ್ಲವೂ ವ್ಯಾಪಿಸಿರುವುದು. ಮೇವಿನ ಹುಲ್ಲು, ಬೇಸಾಯಕ್ಕಾಗಿ ಸೊಪ್ಪು- ತರಗೆಲೆ, ಉರುವಲು, ಜೇನು, ಹಣ್ಣು- ಹಂಪಲುಗಳೆಲ್ಲ ದೊರಕುವುದೂ ಇಲ್ಲಿಯೇ. ಕಾಡಿನ ಮೇಲಿನ ಹಳ್ಳಿಗರ ಒತ್ತಡವನ್ನು ಕಡಿಮೆ ಮಾಡುವ ಹಾಗೂ ಕಾಡುಪ್ರಾಣಿಗಳು ಊರಿಗೆ ಬರದಂತೆ ನಿಯಂತ್ರಿಸುವ ಹಸಿರುಬೇಲಿಯಿದು. ನೆರೆ-ಬರಗಳು ಬಂದಾಗ ಆಗುವ ಆಘಾತದ ತೀವ್ರತೆ ತಗ್ಗಿಸಬಲ್ಲ ರಕ್ಷಣಾಪೊರೆ ಸಹ. ಇದೊಂದು ಅಮೂಲ್ಯವಾದ ಸಮುದಾಯ ಸಂಪತ್ತು (Common Pool Resources-CPR) ಎಂದು ಪರಿಸರ- ಅರ್ಥಶಾಸ್ತ್ರಜ್ಞರು ಗುರುತಿಸುವುದು ಈ ಎಲ್ಲ ಕಾರಣಗಳಿಗಾಗಿ.

ADVERTISEMENT

ರಾಜ್ಯದ ಸ್ಥಿತಿಗತಿ ಗಮನಿಸುವುದಾದರೆ, ಒಟ್ಟು ವಿಸ್ತಾರದ ಸುಮಾರು 191 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ, ಸುಮಾರು ಶೇ 65ರಷ್ಟು ಕೃಷಿ ಜಮೀನಿದೆ. ಸುಮಾರು ಶೇ 20ರಷ್ಟು ಪ್ರದೇಶ ಅರಣ್ಯ ಇಲಾಖೆಗೆ ಸೇರಿದ ಕಾಡು. ಇವು ಹಾಗೂ ಹಳ್ಳಿ- ನಗರಗಳ ವಸತಿ ಪ್ರದೇಶ ಹೊರತುಪಡಿಸಿ ಉಳಿಯುವ ಭೂಪ್ರದೇಶವೇ ಈ ಸಾಮೂಹಿಕ ಭೂಮಿ. ರಾಜ್ಯದ ಸುಮಾರು ಶೇ 8ರಷ್ಟು ಭೂಭಾಗದಲ್ಲಿ ಕಂದಾಯ ಇಲಾಖೆ ಮಾಲೀಕತ್ವದ ಈ ಬಗೆಯ ಭೂಮಿಯಿದೆ. ಮೇವಿಗೆಂದೇ ಮೀಸಲಿರಿಸಿದ ಸುಮಾರು 17.5 ಲಕ್ಷ ಹೆಕ್ಟೇರ್‌ ಗೋಮಾಳ ಭೂಮಿಯೂ ಒಳಗೊಂಡಂತೆ, ಒಟ್ಟು 25 ಲಕ್ಷ ಹೆಕ್ಟೇರ್‌ ಸರ್ಕಾರಿ ಕಂದಾಯ ಜಮೀನಿದೆ. ಆದರೆ, ಈಗಾಗಲೇ ಸುಮಾರು 5.6 ಲಕ್ಷ ಹೆಕ್ಟೇರ್‌ ಸಾಮೂಹಿಕ ಭೂಮಿ ಒತ್ತುವರಿ
ಯಾಗಿಬಿಟ್ಟಿದೆ!

ಎಲ್ಲೆಡೆಯೂ ಗೋಮಾಳಭೂಮಿ ಖಾಸಗಿ ಸ್ವತ್ತಾಗಿ ಪರಿವರ್ತಿತವಾಗುತ್ತಿದೆ. ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಗೋಚರ, ಜಾಡಿ, ಕುಮ್ಕಿ ಎಂದೆಲ್ಲ ಪಹಣಿಗಳಲ್ಲಿ ದಾಖಲಿಸಿ, ಸಮುದಾಯಗಳ ಉಪಯೋಗಕ್ಕಾಗಿಯೇ ಮೀಸಲಿಡುತ್ತಿದ್ದ ಸ್ವಾತಂತ್ರ್ಯೋತ್ತರ ಕಾಲದ ಕಲ್ಯಾಣರಾಜ್ಯ ತತ್ವಗಳು, ಇತ್ತೀಚಿನ ಸರ್ಕಾರಿ ನೀತಿ- ನಡಾವಳಿಯಲ್ಲಿ ಕಣ್ಮರೆಯಾಗುತ್ತಿರುವುದೇ ಇದಕ್ಕೆ ಕಾರಣವೆನ್ನಬೇಕು. ಈ ಸರ್ಕಾರಿ ಭೂಮಿ ಇರುವುದೇ ಸಾಮೂಹಿಕ ಹಿತದ ಬಳಕೆಗಾಗಿ. ರಸ್ತೆ, ಶಾಲೆ, ಆಸ್ಪತ್ರೆಯಂಥ ಉಪಯೋಗಕ್ಕೆ ಭೂಮಿ ಬೇಕೆಂದರೆ, ಸಾಮಾನ್ಯವಾಗಿ ‘ಸಿ’ ಮತ್ತು ‘ಡಿ’ ಎಂದು ವರ್ಗೀಕರಿಸಲಾದ, ಕೃಷಿಗೆ ಯೋಗ್ಯವಲ್ಲದ ಈ ಭೂಮಿಯನ್ನೇ ನೀಡುವುದು. ವಸತಿಹೀನರಿಗೆ ಮನೆ ಕಟ್ಟಲು ಅಥವಾ ಭೂರಹಿತರಿಗೆ ಉಳುಮೆ ಮಾಡಿ ಬದುಕು ಕಟ್ಟಿಕೊಳ್ಳಲು ಭೂಮಿ ನೀಡಬೇಕಾದದ್ದೂ ಈ ಪ್ರದೇಶದಿಂದಲೇ.

ಕೆರೆ ಅಚ್ಚುಕಟ್ಟು ಅಭಿವೃದ್ಧಿ, ನೀರಾವರಿ, ಸಾರ್ವಜನಿಕ ಸಂಸ್ಥೆಗಳು ಇತ್ಯಾದಿಗಳಿಗೆ ಗೋಮಾಳ ಭೂಮಿ ನೀಡುವ ಸಂದರ್ಭವೂ ಇರುತ್ತದೆ. ಈ ಬಗೆಯ ಸ್ಥಳೀಯ ಅಗತ್ಯಗಳನ್ನೆಲ್ಲ ವಾಸ್ತವ ನೆಲೆಗಟ್ಟಿನಲ್ಲಿ ಚಿಂತಿಸಿ, ನ್ಯಾಯಯುತವಾಗಿ ಭೂಮಂಜೂರಿ ಮಾಡುವ ವಿವೇಚನಾ ಅಧಿಕಾರವನ್ನು ಭೂಕಂದಾಯ ಕಾಯ್ದೆಯು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಕರ್ನಾಟಕ ಭೂಕಂದಾಯ ಕಾಯ್ದೆ (1966) ನಿಯಮ
ಗಳಲ್ಲಿನ ಈ ವಿವೇಚನಾ ಅಧಿಕಾರವನ್ನೇ ಅಧಿಕಾರ ರಾಜಕಾರಣವು ಇತ್ತೀಚಿನ ದಶಕಗಳಲ್ಲಿ ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿರುವುದು!

ಇದನ್ನು ಎರಡು ವಿಧಗಳಲ್ಲಿ ಕಾಣಬಹುದು. ಮೊದಲಿನದು, ಸಮೃದ್ಧ ಸಾಮೂಹಿಕ ಭೂಮಿಯನ್ನು ಉದ್ಯಮಗಳಿಗೆ ಗುತ್ತಿಗೆಯಲ್ಲಿ ಕೊಡುವ ಪರಿಪಾಟ. ವ್ಯಾಪಕ ಸಾರ್ವಜನಿಕ ವಿರೋಧದ ನಡುವೆಯೂ ಎಪ್ಪತ್ತರ ದಶಕದಿಂದಲೇ ಸಾಗಿಬಂದಿರುವ ಸರ್ಕಾರಿ ನೀತಿಯಿದು. ಇದರಿಂದಾಗಿ ಲಕ್ಷಾಂತರ ಹೆಕ್ಟೇರ್ ಗೋಮಾಳಭೂಮಿ ಈಗಾಗಲೇ ಗಣಿಗಾರಿಕೆ ಹಾಗೂ ಏಕಪ್ರಭೇದ ನೆಡುತೋಪುಗಳಿಗೆ ಬಲಿಯಾಗಿದೆ. ಎಂಬತ್ತರ ದಶಕದಲ್ಲಿ ಶಿವಮೊಗ್ಗ- ಹಾವೇರಿ ಜಿಲ್ಲೆಗಳ ಗೋಮಾಳಗಳಲ್ಲಿ ಬೆಳೆಸತೊಡಗಿದ ನೀಲಗಿರಿ ನೆಡುತೋಪು ವಿರೋಧಿಸಿ ರೂಪುಗೊಂಡ ವ್ಯಾಪಕ ಜನಾಂದೋಲನವನ್ನೂ ಶಿವರಾಮ ಕಾರಂತರಂಥವರು ಈ ಕುರಿತು ಸರ್ಕಾರವನ್ನು ಎಚ್ಚರಿಸಿದ್ದನ್ನೂ ಇಲ್ಲಿ ಉಲ್ಲೇಖಿಸಬೇಕು. ಇಷ್ಟಾಗ್ಯೂ, ರಾಜ್ಯದಾದ್ಯಂತ ಕಂದಾಯಭೂಮಿ ಕಾನುಗಳು, ಗೋಮಾಳ, ಚಿತ್ರದುರ್ಗ- ತುಮಕೂರು ಭಾಗದ ಕಾವಲ್ ಪ್ರದೇಶಗಳೆಲ್ಲ ಕೈಗಾರಿಕೀಕರಣದ ಹೆಸರಿನಲ್ಲಿ ಖಾಸಗಿ ತೆಕ್ಕೆಗೆ ಜಾರುತ್ತಲೇ ಇವೆ!

ಎರಡನೆಯದು, ಬಡವರ ಹೆಸರಿನಲ್ಲಿ ಬಲಾಢ್ಯರಿಂದ ಆಗುತ್ತಿರುವ ಭೂ ಒತ್ತುವರಿ. ಗೋಮಾಳದಂಥ ಸಮೃದ್ಧ ಸಮುದಾಯ ಭೂಮಿಗಳು ಖಾಸಗಿಯವರ ಕೈಸೇರುತ್ತಿವೆ. ಭೂಕಂದಾಯ ಕಾಯ್ದೆ (1964), ಪಟ್ಟಣ ಮತ್ತು ಹಳ್ಳಿಗಳ ಯೋಜನಾ ಕಾಯ್ದೆ (1961), ಭೂಸುಧಾರಣಾ ಕಾಯ್ದೆಯ (1961) ಕೆಲ ಅಂಶಗಳನ್ನೇ ತಿರುಚಿ, ಕಾನೂನು ಕಣ್ಣಿಗೆ ಮಣ್ಣೆರಚಿ ಈ ಕಾರ್ಯ ಸಾಧಿಸಲಾಗುತ್ತಿದೆ.

ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಕೊಡಗು, ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವೆಡೆ, ಗೋಮಾಳ, ಕಾನು, ಕಾವಲ್, ಕುಮ್ಕಿಯಂಥ ಪ್ರದೇಶಗಳನ್ನು ರಾತ್ರೋರಾತ್ರಿ ಆಕ್ರಮಿಸಿ, ನೂರಾರು ಎಕರೆಯಲ್ಲಿ ಶುಂಠಿ, ರಬ್ಬರ್, ಅಡಿಕೆ ಬೆಳೆಯುತ್ತಿರುವುದನ್ನು ಕಂದಾಯ ಇಲಾಖೆ ನೋಡುತ್ತಿಲ್ಲವೇಕೆ?

ಇತ್ತೀಚಿನ ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರವೇ ಹೇಳಿರುವಂತೆ, ಗೋಮಾಳವೂ ಸೇರಿದಂತೆ ಸುಮಾರು ಒಂದೂಮುಕ್ಕಾಲು ಲಕ್ಷ ಹೆಕ್ಟೇರ್‌ ಕಂದಾಯಭೂಮಿ ಒತ್ತುವರಿಯನ್ನು ಇನ್ನೂ ತೆರವುಗೊಳಿಸಬೇಕಾಗಿದೆ; ಹದಿನಾರು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿಯಿವೆ. ದಾಖಲೆಯೇ ಆಗದ ಒತ್ತುವರಿ ಪ್ರಕರಣಗಳು ಇನ್ನೆಷ್ಟೋ!

ಸಾಮೂಹಿಕ ಭೂಮಿ ನಾಶವು ಗ್ರಾಮಸ್ವಾಸ್ಥ್ಯವನ್ನು ಕಸಿಯುತ್ತಿದೆಯೆಂದು, ಕೇವಲ ಪರಿಸರಶಾಸ್ತ್ರಜ್ಞರು ಹಾಗೂ ಜನಪರ ಚಳವಳಿಗಳು ಹೇಳುತ್ತಿಲ್ಲ; ಸರ್ಕಾರವೇ ರಚಿಸಿದ್ದ ಎ.ಟಿ.ರಾಮಸ್ವಾಮಿ ಸದನ ಸಮಿತಿ ಮತ್ತು ಬಾಲಸುಬ್ರಮಣಿಯನ್‌ ನೇತೃತ್ವದ ತಜ್ಞ ಸಮಿತಿ ಕೂಡ ಇದನ್ನೇ ಹೇಳಿವೆ. ಕಾನೂನು ತಿರುಚಿ ಅಥವಾ ಸರ್ಕಾರಿ ದಾಖಲೆಗಳನ್ನೇ ತಿದ್ದಿ, ಗೋಮಾಳದಂಥ ಸಾಮೂಹಿಕ ಭೂಮಿಯನ್ನು ಖಾಸಗಿ ಜಮೀನನ್ನಾಗಿ ಪರಿವರ್ತಿಸುವ ಭೂಗಳ್ಳರ ಜಾಲವೇ ರೂಪುಗೊಂಡಿರುವುದನ್ನು ಅವು ಗುರುತಿಸಿವೆ.

ಗೋಮಾಳಗಳನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಹೈಕೋರ್ಟ್ ಸಹ ಹಲವು ಪ್ರಕರಣಗಳಲ್ಲಿ ಆದೇಶಿಸಿದೆ. ಹೀಗಿದ್ದೂ, ಹೊಸ ಅಕ್ರಮ- ಸಕ್ರಮ ಅರ್ಜಿಗಳಿಗೆ ಅವಕಾಶ ನೀಡುವುದು ಹಾಗೂ ಅರ್ಹರಲ್ಲದವರಿಗೆ ಗೋಮಾಳ ಮಂಜೂರು ಮಾಡುವುದಕ್ಕೆ ಸರ್ಕಾರ ಮುಂದಾಗಿರುವುದು ದುರಂತವಲ್ಲವೇ?

ಬದುಕು ಕಾಯುವ ಮೂಲಸೆಲೆಗಳಾದ ನದಿ- ಕೆರೆ, ಕಾನು- ಗೋಮಾಳಗಳಂಥ ‘ಹಸಿರು ಪುಪ್ಪಸ’ಗಳನ್ನು ಸಾರ್ವಜನಿಕ ವಲಯದಲ್ಲೇ ಇರಿಸಿಕೊಳ್ಳಬೇಕಾದ ಅಗತ್ಯವನ್ನು ತಜ್ಞರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಸಾಮೂಹಿಕ ಸಂಪತ್ತೆಲ್ಲ ಖಾಸಗಿ ಆಸ್ತಿಗಳಾಗತೊಡಗಿದರೆ, ನೈಸರ್ಗಿಕ ಸಂಪನ್ಮೂಲಗಳು ಧ್ವಂಸಗೊಂಡು ಗ್ರಾಮೀಣ ಆರ್ಥಿಕತೆ ಕುಸಿಯತೊಡಗುತ್ತದೆ. ಹಳ್ಳಿಗರ ಬದುಕು ಆಗ ಇನ್ನಷ್ಟು ಹಳಿ ತಪ್ಪುತ್ತದೆ.

ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾದರೂ ಸರ್ಕಾರವು ಗೋಮಾಳವನ್ನು ಉಳಿಸಬೇಕಲ್ಲವೇ?

ಕೇಶವ ಎಚ್. ಕೊರ್ಸೆ

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.